ಸಾಹಿತ್ಯದ ಓದಿನಿಂದ ಮಕ್ಕಳ ಬೌದ್ಧಿಕ ವಿಕಾಸ
Team Udayavani, Nov 11, 2022, 6:25 AM IST
ಮಕ್ಕಳ ಕುರಿತಾಗಿ ಅಥವಾ ಮಕ್ಕಳಿಗಾಗಿಯೇ ರಚಿಸಿದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯ ಎಂದು ವಾಖ್ಯಾನಿಸಲಾಗಿದೆ. ವಿಸ್ತರಿಸಿ ಹೇಳುವುದಾದರೆ ಮಕ್ಕಳ ಸಾಹಿತ್ಯವು ಪ್ರಮುಖವಾಗಿ ಕಥೆ, ಕಾದಂಬರಿ, ಪದ್ಯ, ಜಾನಪದ, ವಿಜ್ಞಾನ ಮುಂತಾದ ಪ್ರಕಾರಗಳಿಂದ ರಚಿಸಲ್ಪಟ್ಟಿದ್ದು, ಮಕ್ಕಳ ಮನೋರಂಜನೆಗಾಗಿ ಮಾತ್ರವಲ್ಲದೆ ಅವರ ಬೌದ್ಧಿಕ ವಿಕಾಸಕ್ಕಾಗಿ ಮತ್ತು ಭಾಷಾ ಬೆಳವಣಿಗೆಗಾಗಿಯೇ ಇರುವ ಸಾಹಿತ್ಯವೆನ್ನಬಹುದು.
ಮಕ್ಕಳು ಸಾಹಿತ್ಯ ಪಠ್ಯಗಳನ್ನು ಶಾಲಾ ಚಟುವಟಿಕೆಯ ಭಾಗವಾಗಿ ಓದುವುದು ತಮ್ಮ ವೈಯಕ್ತಿಕ ಓದಿಗಿಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಶಾಲೆಯಲ್ಲಿ ಸಾಹಿತ್ಯದ ಓದುವಿಕೆ ಮಗುವಿನ ಮಾನಸಿಕ ಬೆಳವಣಿಗೆ, ಸ್ವ ಅನುಭವ ಹಾಗೂ ಭಾಷಾ ಪ್ರೌಢಿಮೆಯನ್ನು ವಿಸ್ತರಿಸಲು ಸಹಾಯಕವಾಗುತ್ತದಲ್ಲದೇ ಮಗುವಿನ ಕಲ್ಪನಾ ಶಕ್ತಿ ಮತ್ತು ಕಲ್ಪನಾ ಲೋಕವನ್ನು ವಿಸ್ತರಿಸಿಕೊಳ್ಳಲು ಸಹಕಾರಿ.
ಓದಿನ ಚಟುವಟಿಕೆ ಅವರ ದೈಹಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳ ಸಾಹಿತ್ಯದ ಕಥಾವಸ್ತು, ಪ್ರಕಾರ ಮತ್ತು ಭಾಷೆ ಮಕ್ಕಳಿಗೆ ಇಷ್ಟವಾಗುವಂತಿರಬೇಕು. ಅಂದರೆ ಕೃತಿಯಲ್ಲಿನ ಥೀಮ್‌ಗಳು, ಸಂಬಂಧಗಳು ಹಾಗೂ ಅದರಲ್ಲಿನ ಭಾಷೆ ಅತ್ಯಂತ ಕ್ಲಿಷ್ಟಕರವಾಗಿದ್ದರೆ ಆ ಕೃತಿಯು ಮಕ್ಕಳ ಸಾಹಿತ್ಯ ಕೃತಿಯೆನಿಸಿಕೊಳ್ಳಲು ಯೋಗ್ಯವೆನಿಸಲಾರದು.
ಮಕ್ಕಳ ಸಾಹಿತ್ಯ ಕೃತಿಗೆ ಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ -ನೈತಿಕ ಪಾಠ. ಕೃತಿಯು ಸಮಾಜದಲ್ಲಿ ಹುದುಗಿರುವ ನೈತಿಕತೆ ಮತ್ತು ಮೌಲ್ಯಗಳನ್ನು ಹುಡುಕಲು ಮಕ್ಕಳನ್ನು ಪ್ರೇರೇಪಿಸುವಂತಿರ ಬೇಕು. ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕಥಾವಸ್ತು ಪ್ರಮುಖವೆನಿಸುತ್ತದೆ. ವಿಶೇಷವಾಗಿ ಒಂದು ದೇಶ ಮತ್ತು ಕಾಲ ವನ್ನೂ ಒಳಗೊಂಡಿರುತ್ತದೆ ಅಥವಾ ದೇಶೀಯವಾಗಿರು ತ್ತದೆ. ವಸ್ತು ಅಥವಾ ವಿಷಯಗಳ ಆಧಾರಿತ ಕೃತಿಗಳೂ ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಸೇರ್ಪಡೆಯಾಗಿವೆ.
ಅರ್ಥಶಾಸ್ತ್ರ ಮತ್ತು ಗಣಿತ ಮುಂತಾದ ವಿಷಯಗಳನ್ನೊಳಗೊಂಡ ಕೃತಿಗಳು ಅವುಗಳದೇ ಆದ ವಸ್ತುಗಳನ್ನೊಳಗೊಂಡ ಕಾರಣ ಹಾಗೂ ಅಲ್ಲಿ ರಂಜನೆ, ಕಲ್ಪನೆ, ಭಾಷಾ ಚಮತ್ಕಾರಗಳಿಗೆ ಆಸ್ಪದ ಇಲ್ಲದಿರುವು ದರಿಂದ ಅವುಗಳು ಸಾಂಪ್ರದಾಯಿಕ ಸಾಹಿತ್ಯ ಪರಿಧಿಗೆ ಒಳಪಡುವುದಿಲ್ಲ. ಇನ್ನು ಮಕ್ಕಳ ಸಾಹಿತ್ಯ ರಚನೆಯಲ್ಲಿ ಭಾಷಾ ಬಳಕೆ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.
ಮಕ್ಕಳ ಸಾಹಿತ್ಯದ ಕುರಿತು ಚರ್ಚಿಸುವಾಗ ಮಕ್ಕಳ ವಯೋಮಾನದ ಮಿತಿ/ಶ್ರೇಣಿಯನ್ನು 6ರಿಂದ 18 ವರ್ಷದವರಿಗೆಂದೂ ಅಥವಾ 10ನೇ ತರಗತಿ ಹೈಸ್ಕೂಲ್ ಶಿಕ್ಷಣದವರೆಗೆ ಎಂದೂ ಸಾಮಾನ್ಯವಾಗಿ ನಿರ್ಧರಿಸಲಾಗುತ್ತದೆ. ಮಕ್ಕಳ ಕುರಿತಾಗಿ ಬರೆಯುವುದಕ್ಕಾಗಿ ಸಿಗುವ ಕಚ್ಚಾವಸ್ತುಗಳು ಅಪರಿಮಿತವಾದವು. ಅವೆಂದರೆ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು, ಪ್ರಾಣಿ-ಪಕ್ಷಿಗಳು, ಗಿಡ-ಮರ-ಹೂ-ಬಳ್ಳಿ, ಆಟಿಕೆಗಳು, ವಿಚಿತ್ರ-ವಿಶೇಷವಾದ ಸನ್ನಿವೇಶಗಳು ಮತ್ತು ವ್ಯಕ್ತಿಗಳು ಇತ್ಯಾದಿ.
ಮಕ್ಕಳು ತಮ್ಮ 4ರಿಂದ 10ನೇ ವಯೋಮಿತಿಯಲ್ಲಿರುವಾಗ ತಮಗೆ ಪರಿಚಿತವಾಗಿರುವ ವಿಷಯಗಳನ್ನು ಒಳಗೊಂಡ ಸಾಹಿತ್ಯವನ್ನು ಮಾತ್ರ ಇಷ್ಟಪಡುತ್ತಾರೆ; 10ನೇ ವಯೋಮಾನವನ್ನು ದಾಟಿದ ಅನಂತರ ಹೊಸ ವಿಷಯ ಅಥವಾ ಸಂಗತಿಗಳಿಗೆ ಆಕರ್ಷಿತವಾಗುತ್ತಾರೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಅರ್ಥಾತ್ 10ನೇ ವಯೋಮಾನವನ್ನು ದಾಟಿದ ಅನಂತರ ಮಕ್ಕಳ ಮನಸ್ಸು ನವ-ನವೀನ, ಮತ್ತು ಕುತೂಹಲಕಾರಿ ಸಂಗತಿಗಳಿಗೆ ತೆರೆದುಕೊಳ್ಳುತ್ತದೆ.
ಸಣ್ಣ ಕಥೆಗಳು: ಸಣ್ಣ ಕಥೆಗಳನ್ನು ಸಂಕ್ಷಿಪ್ತವಾಗಿಯೂ ಸರಳವಾಗಿಯೂ ಹೇಳಬೇಕಾಗಿದ್ದರಿಂದ, ಕಥೆಗಾರನು ಕಥೆಯನ್ನು ಅನೇಕ ಅಂಶಗಳೊಂದಿಗೆ ಸೀಮಿತಗೊಳಿಸುತ್ತಾನೆ. ಕಥೆಯಲ್ಲಿ ಬರುವ ಪಾತ್ರಗಳ, ಸಂಖ್ಯೆ ವ್ಯಾಪ್ತಿ ಮತ್ತು ಪ್ರಯೋಗಗಳು ಕೆಲವು ಮಿತಿಗಳಿಗೆ ಒಳಪಡುತ್ತವೆ. ಆದರೆ ಕಥೆ ಮಾತ್ರ ಅತ್ಯಾಕರ್ಷಕವಾಗಿ ಹೊರಹೊಮ್ಮಿ ಮತ್ತೆ ಮತ್ತೆ ಓದಬೇಕೆನಿಸುವಂತಿರುತ್ತದೆ.
ಜಾನಪದ ಕಥೆಗಳು: ಜಾನಪದ ಕಥೆಗಳು ಮೌಖೀಕ ರೂಪದಲ್ಲಿ ಹಲವಾರು ಹಿಂದಿನ ತಲೆಮಾರುಗಳ ಜಾನಪದರಿಂದ ಇಂದಿನ ಪೀಳಿಗೆಗೆ ಹರಿದು ಬಂದ ಒಂದು ಸಾಹಿತ್ಯ ಪ್ರಕಾರ ಎನ್ನಬಹುದು. ಮಕ್ಕಳು ಮನೆಯಲ್ಲಿ ತಮ್ಮ ಹೆತ್ತವರಿಂದಲೂ ಶಾಲೆಯಲ್ಲಿ ತಮ್ಮ ಶಿಕ್ಷಕರು ಅಥವಾ ಸಹಪಾಠಿಗಳಿಂದಲೂ ಜಾನಪದ ಕಥೆಗಳನ್ನು ಕೇಳಿ ಆನಂದಿಸಿರುತ್ತಾರೆ. ಒಮ್ಮೆ ಜಾನಪದ ಕಥೆಗಳಲ್ಲಿನ ಸೊಗಡು/ ಸವಿಯನ್ನು ಅನುಭವಿಸಿದ ಮಕ್ಕಳು ಮುಂದೆ ತಾವೇ ಜಾನಪದ ಕಥೆಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಓದುವ ಹವ್ಯಾಸ ಬೆಳೆದಂತೆ ಚಿಕ್ಕ-ಚಿಕ್ಕ ಕಥಾವಸ್ತು ಮತ್ತು ಸರಳವಾದ ಭಾಷೆಯನ್ನೊಳಗೊಂಡ ಪುಸ್ತಕಗಳನ್ನು ಓದಿ ಮುಂದೆ ಭಾಷಾ ಸಂಕೀರ್ಣತೆ ಮತ್ತು ವಿಷಯ ಪ್ರೌಢಿಮೆಯನ್ನೊಳಗೊಂಡ ಪುಸ್ತಕಗಳ ಕಡೆಗೆ ಮಕ್ಕಳು ಸಹಜವಾಗಿ ಆಕರ್ಷಿತರಾಗುತ್ತಾರೆ.
ಪುರಾಣ ಕಥೆಗಳು: ಪುರಾಣ ಕಥೆಗಳು ಕಾಲ್ಪನಿಕವಾಗಿರುತ್ತವೆ. ಈ ಅಸಹಜ ಕಥೆಗಳು ಪುರಾತನ ಕಾಲದಿಂದಲೂ ಇಂದಿನವರೆಗೆ ಪ್ರಚಲಿತದಲ್ಲಿವೆ. ಇವುಗಳು ಪ್ರಕೃತಿಗೆ ಸಂಬಂಧಿಸಿದ ಅಲ್ಲದೇ ಅಮಾನುಷ ಶಕ್ತಿಗಳ ಕುರಿತಾದ ಕಥಾವಸ್ತುಗಳನ್ನು ಹೊಂದಿದ್ದು ಮಕ್ಕಳ ಮನಸ್ಸನ್ನು ರಂಜಿಸುತ್ತದೆ. ಈ ಕಥೆಗಳಲ್ಲಿ ವಾಸ್ತವಿಕತೆಯಿಲ್ಲದಿದ್ದರೂ ಮಕ್ಕಳು ತಮ್ಮ ಕಲ್ಪನಾಲೋಕವನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ಇಂತಹ ಕಥೆಗಳಿಂದ ಪ್ರೇರೇಪಿತರಾಗಿ ಮಕ್ಕಳು ಕಾಡು-ಮೇಡು, ಹಳ್ಳಿ-ಕೊಳ್ಳ, ನದಿ-ಸಮುದ್ರ ತೀರ, ಬೆಟ್ಟಗುಡ್ಡಗಳನ್ನು ಅರಸಿ ಏನಾದರು ಹೊಸದನ್ನು ಕಾಣುವ ಸಾಹಸಕ್ಕೆ ಕೂಡ ಕೈ ಹಾಕುತ್ತಾರೆ. ಇದು ಅವರಲ್ಲಿ ಧೈರ್ಯ, ನಾಯಕ ಗುಣ ಮತ್ತು ಸಂಚಾರ ಮನೋಭಾವವನ್ನು ಇಮ್ಮಡಿಗೊಳಿಸುತ್ತವೆ.
ಕಾದಂಬರಿಗಳು: ಕಾದಂಬರಿಗಳು ಸುದೀರ್ಘ ಕಥೆಗಳನ್ನು ಒಳಗೊಂಡಿದ್ದು ಸಾಮಾಜಿಕ, ಐತಿಹಾಸಿಕ, ಕಾಲ್ಪನಿಕ, ವ್ಯಕ್ತಿಗಳನ್ನು ಮತ್ತು ಸನ್ನಿವೇಶಗಳನ್ನು ಒಳಗೊಂಡಿರುತ್ತವೆ. ಕಾದಂಬರಿಗಳು ರಚನೆಯಲ್ಲಿ ಕ್ಲಿಷ್ಟತೆ ಮತ್ತು ಸಂಕೀರ್ಣತೆಯನ್ನು ಹೊಂದಿರುತ್ತವೆ. ಅಲ್ಲದೆ ಕಥೆಯನ್ನು ಹೇಳುವ ವಿಶಿಷ್ಟ ತಂತ್ರಗಾರಿಕೆ, ಸಾಹಿತ್ಯಿಕ ಭಾಷೆ, ಸನ್ನಿವೇಶಗಳು,ಭೌಗೋಳಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಪರಿಸ್ಥಿತಿಗಳನ್ನು ಕೂಡಿರುತ್ತವೆ. ಸೈದ್ಧಾಂತಿಕ ವಿರೋಧಾಭಾಸ, ಆಕಸ್ಮಿಕ ತಿರುವುಗಳು ಇಲ್ಲಿ ಮುಖ್ಯವಾದದ್ದು.
ಮಕ್ಕಳಿಗೆ ಕಾದಂಬರಿಗಳನ್ನು ಓದುವ ಕ್ರಮವನ್ನು ಶಾಲೆಯಲ್ಲಿಯೇ ಕಲಿಸುವುದರಿಂದ ಅವರು ಸ್ವತಂತ್ರವಾಗಿ ಕಾದಂಬರಿಗಳನ್ನು ಅರ್ಥಪೂರ್ಣವಾಗಿ ಓದುವುದರೊಂದಿಗೆ ಕಥೆಯನ್ನು ವಿಶ್ಲೇಷಿಸುವ ಹಂತಕ್ಕೂ ತಲುಪುತ್ತಾರೆ.
- ಸಾಹಿತ್ಯಿಕ ಭಾಷೆ: ಭಾಷೆಯನ್ನು ಕಾದಂಬರಿಯ ಒಂದು ಕಚ್ಚಾವಸ್ತು ಎನ್ನಲಾಗುತ್ತದೆ. ಕಾದಂಬರಿ ರಚನೆಯಲ್ಲಿ ಲೇಖಕನು ಬಳಸುವ ಭಾಷಾ ಶೈಲಿ, ಶಬ್ದಗಳ ಆಯ್ಕೆ ಮತ್ತು ವಾಕ್ಯರಚನೆ ಕಥೆಯ ಯಶಸ್ಸಿಗೆ ಒಂದು ಪ್ರಮುಖ ಅಂಶವಾಗುತ್ತದೆ.
- ಕಥಾ ವಸ್ತು ಮತ್ತು ಅದರ ಮೌಲ್ಯ: ಕಾದಂಬರಿಯ ಯಶಸ್ಸಿಗೆ ಕೇವಲ ಪಾತ್ರಗಳು, ಸನ್ನಿವೇಶ ಮತ್ತು ಭಾಷಾಶೈಲಿ ಮಾತ್ರವೇ ಮುಖ್ಯವಾಗುವುದಿಲ್ಲ. ಕಥಾ ವಸ್ತು ಮತ್ತು ಅದರ ಗುಣಮಟ್ಟ ಎಲ್ಲ ಅಂಶಗಳಿಗಿಂತಲೂ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಉದಾ: ತ್ಯಾಗ, ಸಾಹಸ, ಪ್ರೇಮ, ರಾಷ್ಟ್ರೀಯತೆ ಮುಂತಾದ ಅಂಶಗಳನ್ನು ಕಥಾವಸ್ತುಗಳು ಎನ್ನಬಹುದು. ಕಾದಂಬರಿಕಾರನು ಈ ವಸ್ತುಗಳನ್ನು ಆಧರಿಸಿಯೇ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾನೆ. ಮಕ್ಕಳ ಸಾಹಿತ್ಯದ ಕುರಿತು ಹೇಳುವುದಾದರೆ ಆ ಕಥೆಗಳು ಸರಳತೆಯನ್ನು ಮೈಗೂಡಿಸಿಕೊಂಡಿರುತ್ತವೆ. ಅಲ್ಲದೇ ಭಾಷಾ ಕ್ಲಿಷ್ಟತೆಯು ಮಕ್ಕಳು ಕೃತಿಯೊಂದಿಗಿನ ಸಂವಹನಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಲೇಖಕನ ಆದ್ಯ ಕರ್ತವ್ಯ.
ಸಾಹಿತ್ಯದ ಓದು ಮಕ್ಕಳನ್ನು ಸಂತೋಷಗೊಳಿಸುತ್ತದೆಯಲ್ಲದೆ, ಕಲ್ಪನೆಗಳನ್ನು ಉನ್ನತೀಕರಣಗೊಳಿಸುವ, ಬದುಕಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಹೀಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಸಾಂಸ್ಕೃತಿಕ ವಾತಾವರಣದಲ್ಲಿನ ಅನೇಕ ಸವಾಲುಗಳನ್ನು ಎದುರಿಸುವ ಮತ್ತು ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳುವ ಶಕ್ತಿಯನ್ನು ತಮಗೆ ಅರಿವಿಲÉದಂತೆಯೆ ಬೆಳೆಸಿಕೊಳ್ಳುತ್ತಾರೆ. ಅದ್ದರಿಂದ ಮಕ್ಕಳು ಸಾಹಿತ್ಯ ಕೃತಿಗಳನ್ನು ಹೆಚ್ಚಾಗಿ ಓದುವಂತೆ ಪ್ರೇರೇಪಿಸುವುದು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತ.
-ಡಾ| ಜಿ.ಎಂ. ತುಂಗೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.