ಹೆಣ್ಣಿಗೆ ಸಮಾನ ಹಕ್ಕಷ್ಟೇ ಅಲ್ಲ, ಸಮಾನ ಶಿಕ್ಷೆಯೂ ಬೇಕಲ್ಲವೇ?
Team Udayavani, Aug 11, 2019, 5:09 AM IST
ಗಂಡಸೂ ಕೂಡ ತನ್ನ ಸಂಸಾರ ಮುರಿದು ಬಿದ್ದಿದ್ದರಿಂದ ತೀವ್ರವಾಗಿ ನೊಂದಿರುತ್ತಾನೆ ಎನ್ನುವುದನ್ನೇಕೆ ನಾವು ನಂಬುವುದಿಲ್ಲ? ನಾವು ವರದಕ್ಷಿಣೆಯನ್ನು ಅಕ್ರಮಗೊಳಿಸಿದ್ದೇವೆ, ಆದರೆ ಇದೇ ವೇಳೆಯಲ್ಲೇ ವಿಚ್ಛೇದನದ ಸಮಯದಲ್ಲಿ ಗಂಡಸಿನ ಮನೆಯವರಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಈ ವಿಷಯದಲ್ಲಿ ಯಾವ ರಕ್ಷಣೆಯೂ ಇಲ್ಲ.
ಈಗಿನ ಕಾಲದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ-ಬಳಕೆಯಲ್ಲಿರುವ ಪದವೆಂದರೆ ‘ಸಮಾನತೆ’. ಪ್ರತಿಯೊಬ್ಬರೂ ಸಮಾನ ಹಕ್ಕುಗಳಿಗಾಗಿ, ಸಮಾನ ಅವಕಾಶಗಳಿಗಾಗಿ, ಸಮಾನ ಕಾನೂನುಗಳಿಗಾಗಿ, ಸಮಾನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಅದೇಕೋ ‘ಸಮಾನ ಜವಾಬ್ದಾರಿ’ಯ ವಿಷಯ ಬಂದಾಗ ಮಾತ್ರ ಉತ್ಸಾಹ ಕಳೆದುಕೊಂಡುಬಿಡುತ್ತಾರೆ. ಸಮಾನತೆಯಲ್ಲಿ ವಿವಿಧ ಹಂತಗಳು ಇರುವುದಿಲ್ಲ. ಒಂದೋ ನೀವು ಸಮಾನರು ಇಲ್ಲವೇ ಅಸಮಾನರು-ಅಷ್ಟೇ. ಅಂದರೆ ನೀವು ಸಮಾನತೆಯನ್ನು ಬಯಸುತ್ತೀರಿ, ಇಲ್ಲವೆಂದರೆ ಇಲ್ಲ. ಸಮಾನ ಸಂಬಂಧವನ್ನು ಬಯಸುತ್ತೀರಿ, ಇಲ್ಲವೆಂದರೆ ಇಲ್ಲ.
ಆದರೂ ನಾನೊಂದು ವಿಷಯವನ್ನು ಗಮನಿಸಿದ್ದೇನೆ. ಮಹಿಳೆಯರು ಸಮಾನ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿರುವುದಿಲ್ಲ ಮತ್ತು ತಮಗೆ ಬೇಕಾದಾಗೆಲ್ಲ, ಅನುಕೂಲಕ್ಕೆ ತಕ್ಕಂತೆ ಹಠಾತ್ತನೆ ‘ಸಂಪ್ರದಾಯ’ ಅಥವಾ ‘ಮಹಿಳೆ’ ಎಂಬ ಕಾರ್ಡ್ ಬಳಸಿಬಿಡುತ್ತಾರೆ.
ಉದಾಹರಣೆಗೆ, ಅನೇಕ ಯುವತಿಯರು ಡೇಟಿಂಗ್ ಮಾಡುತ್ತಾರೆ. ಅವರು ತಮ್ಮ ಸಂಬಂಧದಲ್ಲಿ ಸಮಾನತೆಯನ್ನು ಬಯಸುತ್ತಾರೆ. ಆದರೆ ಊಟದ ಬಿಲ್ ಪಾವತಿ ಮಾಡಬೇಕಾದ ಸಮಯ ಬಂದಾಗ ಮಾತ್ರ ತಮ್ಮ ಜವಾಬ್ದಾರಿಯಿಂದ ದೂರ ಸರಿದುಬಿಡುತ್ತಾರೆ.
ನಾನು ಅನೇಕ ಮಹಿಳೆಯರನ್ನು ಕಂಡು-ಕೇಳಿದ್ದೇನೆ. ಅವರೆಲ್ಲ ಉದ್ಯೋಗಸ್ಥರಾಗಿದ್ದು, ತಮ್ಮ ಕೆಲಸವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಆದರೆ ಮನೆ ಖರ್ಚನ್ನೆಲ್ಲ ಗಂಡನೇ ನೋಡಿಕೊಳ್ಳಬೇಕೆಂದು ಬಯಸುತ್ತಾರೆ. ವಿವಾಹ ವಿಚ್ಛೇದನದ ಸಮಯದಲ್ಲಿ ಮಹಿಳೆಯು ಮಗುವಿನ ವಿಷಯದಲ್ಲಿ ಅದರ ತಂದೆಯಿಂದ ಸಮಾನ ಅಥವಾ ಪೂರ್ಣ ಬೆಂಬಲ ಬಯಸುತ್ತಾಳೆ. ಆದರೆ ಆ ವ್ಯಕ್ತಿಗೆ ವಿಚ್ಛೇದನದ ನಂತರ ಮಗುವಿನ ಜತೆ ಪೂರ್ಣವಾಗಿ ಒಡನಾಡುವ ಹಕ್ಕಿನಿಂದ ವಂಚಿತಗೊಳಿಸುತ್ತಾಳೆ.
ಸತ್ಯವೇನೆಂದರೆ, ಮಹಿಳೆಯರು ತಮ್ಮ ಮನಸ್ಸಿಗೆ ಬಂದ ಸಮಯದಲ್ಲಿ ಸಬಲೀಕರಣದ ಕಾರ್ಡನ್ನೋ, ಮಹಿಳಾ ಕಾರ್ಡನ್ನೋ ಅಥವಾ ಸಂತ್ರಸ್ತೆಯ ಕಾರ್ಡನ್ನೋ ಬಳಸಬಲ್ಲರು. ಗಂಡಸಿನ ಮೇಲೆ ಅತ್ಯಾಚಾರದ ಹುಸಿ ಆರೋಪವನ್ನು ಹೊರಿಸಬಲ್ಲರು, ಅದೇ ಸಮಯದಲ್ಲೇ ಸಂತ್ರಸ್ತ ಮಹಿಳೆಯ ಪಾತ್ರವನ್ನೂ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು!
ಸಮಸ್ಯೆಯೇನೆಂದರೆ, ಪರಿಸ್ಥಿತಿ ಹೇಗೆಯೇ ಇರಲಿ, ‘ವಿಚ್ಛೇದನದ ಸಮಯದಲ್ಲಿ ಯಾವಾಗಲೂ ಮಹಿಳೆಗೇ ಅನ್ಯಾಯವಾಗುತ್ತದೆ, ಆಕೆಗೇ ಹೆಚ್ಚು ನೋವಾಗುತ್ತದೆ’ ಎಂಬ ಭಾವನೆ ಸಮಾಜದಲ್ಲಿ ಅಧಿಕವಿದೆ.
ಆದರೆ ಗಂಡಸೂ ಕೂಡ ತನ್ನ ಸಂಸಾರ ಮುರಿದುಬಿದ್ದದ್ದರಿಂದ ತೀವ್ರವಾಗಿ ನೊಂದಿರುತ್ತಾನೆ ಎನ್ನುವುದನ್ನೇಕೆ ನಾವು ನಂಬುವುದಿಲ್ಲ? ಸ್ತ್ರೀಧನದ ಹೆಸರಲ್ಲಿ ನಾವು, ಹೆಣ್ಣು ತರುವ ಎಲ್ಲಾ ಹಣವನ್ನೂ ರಕ್ಷಿಸಿ ಇಡುತ್ತೇವೆ. ಆದರೆ ಗಂಡಸರಿಗೆ ಪುರುಷಧನದ ಹಕ್ಕನ್ನು ಸಮಾಜ ನಿರಾಕರಿಸಿಬಿಡುತ್ತದೆ. ನಾವು ವರದಕ್ಷಿಣೆಯನ್ನು ಅಕ್ರಮಗೊಳಿಸಿದ್ದೇವೆ, ಆದರೆ ಇದೇ ವೇಳೆಯಲ್ಲೇ ವಿಚ್ಛೇದನದ ಸಮಯದಲ್ಲಿ ಗಂಡಸಿನ ಮನೆಯವರಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಈ ವಿಷಯದಲ್ಲಿ ಯಾವ ರಕ್ಷಣೆಯೂ ಇಲ್ಲ.
ಇಂದಿನ ‘ಸಬಲೀಕರಣಗೊಂಡ’ ಮಹಿಳೆಯರೂ ಕೂಡ ಸಂತ್ರಸ್ತರ ಪಾತ್ರವನ್ನು, ಅಬಲೆಯ ಪಾತ್ರವನ್ನು ನಿರ್ವಹಿಸಿಬಿಡುತ್ತಾರೆ. ನನ್ನ ಈ ಲೇಖನ ಅನೇಕ ಮಹಿಳೆಯರಿಗೆ ಇರಿಸುಮುರಿಸು ಉಂಟುಮಾಡಬಹುದು, ಏಕೆಂದರೆ ‘ನಿಜವಾಗಲೂ ಸಮಾನರಾಗುವ’ ವಿಷಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇಲ್ಲಿ ಜ್ವಲಂತ ಪ್ರಶ್ನೆಯೆಂದರೆ ‘ನಿಜಕ್ಕೂ ಮಹಿಳೆಯರು ಸಮಾನತೆಯನ್ನು ಅಪ್ಪಿಕೊಳ್ಳಲು ಸಿದ್ಧರಿದ್ದಾರಾ? ಎನ್ನುವುದು. ಮಹಿಳೆಯರಿಗೆ ‘ಅನುಕೂಲಕರವಾಗಿದೆ’ ಎಂಬ ಕಾರಣಕ್ಕಾಗಿ ಇನ್ನೆಷ್ಟು ವರ್ಷ ಗಂಡಸರು ಈ ‘ಸಬ್ಜೆಕ್ಟಿವ್ ಸಮಾನತೆಯ’ ಭಾರವನ್ನು ಹೊರಬೇಕು?
ಮಹಿಳಾ ಸಬಲೀಕರಣವೆಂದರೆ ಪುರುಷ ಪ್ರಾಧಾನ್ಯತೆಯ ವಿರುದ್ಧದ ಸೇಡಲ್ಲ!
ದೌರ್ಭಾಗ್ಯದ ವಾಸ್ತವವೇನೆಂದರೆ, ಭಾರತದ ಮಹಿಳೆಯರು ಪಿತೃಪ್ರಧಾನ ಸಮಾಜಕ್ಕೆ ಒಳಪಟ್ಟಿದ್ದರು ಮತ್ತು ಅವರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದರು ಎನ್ನುವುದು. ಆಗೆಲ್ಲ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು, ವರದಕ್ಷಿಣೆ ಕಿರುಕುಳ, ಸತಿ, ದೌರ್ಜನ್ಯ, ಅತ್ಯಾಚಾರ ಮರ್ಯಾದೆಗೇಡು ಹತ್ಯೆ, ಹೆಣ್ಣುಭ್ರೂಣ ಹತ್ಯೆ ಸೇರಿದಂತೆ ಇನ್ನೂ ಅನೇಕಾನೇಕ ಘೋರ ಕ್ರೌರ್ಯಗಳನ್ನು ಎಸಗಲಾಯಿತು.
ಈ ಗಾಯಕ್ಕೆ ಉಪ್ಪು ಸವರುವಂತೆ, ನಮ್ಮ ಪೊಲೀಸ್ ವ್ಯವಸ್ಥೆಯಲ್ಲೂ ಜಡತ್ವ ಆವರಿಸಿತ್ತು, ಅತ್ತ ನ್ಯಾಯಾಂಗವೂ ಅಧಿಕ ಹೊರೆಯಿಂದಾಗಿ ಜಡಗಟ್ಟಿದ್ದು ದುರಂತ. ಮಹಿಳಾ ಪರ ಹೋರಾಟಗಾರರ ನಿರಂತರ ಹೋರಾಟಗಳ ಫಲವಾಗಿ ಸತಿ ಮತ್ತು ವರದಕ್ಷಿಣೆಯಂಥ ಪೀಡೆಗಳನ್ನು ನಿರ್ಮೂಲನೆ ಮಾಡಲಾಯಿತು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಲಾಯಿತು. ಅತ್ಯಾಚಾರದಂಥ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಕೂಡಲೇ ಪತ್ತೆಹಚ್ಚಿ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ತ್ವರಿತವಾಗಿ ಶಿಕ್ಷೆಯಾಗುವಂಥ ವ್ಯವಸ್ಥೆಯನ್ನು ತರುವಂತಾಗಿದ್ದೂ ಕೂಡ ಇಂಥ ಹೋರಾಟಗಳ ಫಲ.
ನಾನು ಮೊದಲಿನಿಂದಲೂ ಮಹಿಳಾವಾದಿಯೆಂದು ಗುರುತಿಸಿಕೊಂಡವಳು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದೇನೆ, ಅನೇಕ ಚರ್ಚೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದಾಗ್ಯೂ ಮಹಿಳೆಯರು ಸ್ವಇಚ್ಛೆಯಿಂದಲೋ, ಮನೆಯವರ-ಗೆಳೆಯರ- ವಕೀಲರ ಮಾತು ಕೇಳಿಕೊಂಡೋ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನೋಡಿದಾಗ ನಿಜಕ್ಕೂ ಬೇಸರವಾಗುತ್ತದೆ. ಮದುವೆಯಾಗಿ ಒಂದು ವರ್ಷದಲ್ಲಿ ಸಂಸಾರದಲ್ಲಿ ಬಿರುಕು ಮೂಡುವಂಥ ಕೆಲಸ ಮಾಡಿ, ಆಮೇಲೆ ತಾವೇ ವಿಚ್ಛೇದನಕ್ಕೆ ಅರ್ಜಿ ಹಾಕಿ, ಗಂಡನಿಂದ ಭಾರೀ ಪ್ರಮಾಣದ ಹಣವನ್ನು ಪರಿಹಾರವಾಗಿ ಪಡೆದ 7-8 ಪ್ರಕರಣಗಳನ್ನು ನಾನು ಬಲ್ಲೆ.
ಆದರೆ ಇದೆಲ್ಲಕ್ಕಿಂತ ದುರಂತವೆಂದರೆ, ಯಾವ ಕಾನೂನುಗಳು ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಒದಗಿಸಲು, ಸಾಂತ್ವನ ನೀಡಲು ರಚನೆಯಾಗಿವೆಯೊ,ೕ ಆ ಕಾನೂನುಗಳನ್ನು ಇಂದು ವೈಯಕ್ತಿಕ ಲಾಭಕ್ಕಾಗಿ, ದ್ವೇಷಕ್ಕಾಗಿ ಮತ್ತು ಸುಲಿಗೆಯ ಉದ್ದೇಶದಿಂದ ದುರ್ಬಳಕೆಯಾಗುತ್ತಿವೆೆ. ಈ ರೀತಿ ಮಹಿಳಾ ಪರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಅಧಿಕವಾಗುತ್ತಿದೆ.
ಈ ವಿಚಾರದಲ್ಲಿ ಕೆಲವರು ಒಂದು ಅಸಂಬದ್ಧ ವಾದವನ್ನು ಎದುರಿಡುತ್ತಾರೆ. ‘ಕೆಲವೇ ಕೆಲವು ಮಹಿಳೆಯರು ಕಾನೂನು ದುರ್ಬಳಕೆ ಮಾಡಿಕೊಂಡರೆ ಏನಾಯ್ತು? ಶತಮಾನಗಳಿಂದ ಪುರುಷರು ಮಹಿಳೆಯರನ್ನು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪೀಡಿಸಿಲ್ಲವೇ?’ ಎಂಬ ವಾದವಿದು. ಅಯ್ಯೋ! ಸೀರಿಯಸ್ಲಿ? ಹೀಗೆ ವಾದಿಸುವವರು ಒಂದು ಮಾತನ್ನು ಅರ್ಥಮಾಡಿಕೊÛಬೇಕು. ಮಹಿಳಾ ವಿಮೋಚನೆಯೆನ್ನುವುದು ಪುರುಷರ ಮೇಲಿನ ಪ್ರತೀಕಾರವಲ್ಲ.
ಮಹಿಳಾ ಪರ ಆಗುವುದು ಎಂದರೆ, ಪುರುಷ ವಿರೋಧಿ ಆಗುವುದು ಎಂದರ್ಥವಲ್ಲ. ಹಿಂದಿನ ಅನೇಕಾನೇಕ ತಲೆಮಾರುಗಳಲ್ಲಿ ಗಂಡಸರು ತಪ್ಪು ಮಾಡಿದರೆಂದ ಕಾರಣಕ್ಕೆ, ಈಗಿನ ಗಂಡಸರಿಗೆ ತೊಂದರೆ ಆಗಬಾರದು. ಒಬ್ಬೇ ಒಬ್ಬ ಅಮಾಯಕ ಗಂಡಸೂ ಕೂಡ ನರಳುವಂತಾಗಬಾರದು. ಒಬ್ಬರನ್ನು ಸಬಲೀಕರಣಗೊಳಿಸುವುದಕ್ಕಾಗಿ, ಇನ್ನೊಬ್ಬರನ್ನು ದುರ್ಬಲಗೊಳಿಸುವ ಅಗತ್ಯವಿಲ್ಲ. ಎಲ್ಲಾ ಗಂಡಸರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ತರವಲ್ಲ.
ಚಿಕ್ಕ ವಯಸ್ಸಿನಿಂದಲೂ ಗಂಡು ಮಕ್ಕಳಿಗೆ, ತಮ್ಮ ಆಂತರಿಕ ಬೇಗುದಿಗಳನ್ನು ಪ್ರಕಟಿಸುವುದಕ್ಕೆ, ಅಳುವುದಕ್ಕೆ ಕುಟುಂಬಗಳು ಅನುಮತಿ ನೀಡುವುದಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಈ ಲೈಸೆನ್ಸ್ ಸಿಕ್ಕುಬಿಡುತ್ತದೆ. ಸತ್ಯವೇನೆಂದರೆ, ಮಹಿಳೆಯರಷ್ಟೇ ಗಂಡಸರೂ ಕೂಡ ಮಾನವೀಯರು.
‘ಗಂಡಸಿಗೆ ಪಾಠ ಕಲಿಸುತ್ತೇನೆ’ ಎನ್ನುತ್ತಾ ಕಾನೂನು ಮತ್ತು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಖಂಡಿತ ಮಹಿಳಾ ಸಬಲೀಕರಣವಲ್ಲ. ನೀವು ಗಂಡಸನ್ನು ನೋಡಿ ಶಿಳ್ಳೆ ಹೊಡೆಯುವುದನ್ನು ಸಬಲೀಕರಣ ಎಂದು ಭಾವಿಸುತ್ತಾ, ಗಂಡಸು ಶಿಳ್ಳೆ ಹೊಡೆದಾಗ ಪೊಲೀಸರಿಗೆ ಕರೆ ಮಾಡುವುದನ್ನು ಏನನ್ನಬೇಕು?
ಹಿಂದೆ ಏನಾಯಿತು ಎನ್ನುವುದೆಲ್ಲ ಈಗ ಅನವಶ್ಯಕ. ಆದದ್ದಕ್ಕೆಲ್ಲ ಸೇಡು ತೀರಿಸಿಕೊಳ್ಳುತ್ತೇವೆ ಎನ್ನುವುದೂ ಕೂಡ. ನಮಗೆ ಸಮಾನ ಹಕ್ಕು ಬೇಕು, ಆದರೆ ಸಮಾನ ಶಿಕ್ಷೆ ಬೇಡ ಎನ್ನುವುದು ಯಾವ ತರ್ಕ? ಮಹಿಳೆಯರು ಮತ್ತು ಪುರುಷರು ಸಮಾಜದಲ್ಲಿ ಮತ್ತು ಮನೆಗಳಲ್ಲಿ ಒಡನಾಡಿಯಾಗಿ ಇರುವವರು. ಇಬ್ಬರ ನಡುವೆಯೂ ಘನತೆ ಮತ್ತು ಗೌರವ ಮನೆ ಮಾಡಬೇಕು ಎಂದರೆ ಅಧಿಕಾರದಲ್ಲಿ ಸಮತೋಲನ ಬರಬೇಕು ಮತ್ತು ಕಾನೂನಿನ ದುರ್ಬಳಕೆ ಆಗಬಾರದು. ಗಂಡು-ಹೆಣ್ಣನ್ನು ಸಮಾನವಾಗಿ ಕಾಣುವ ಕಾನೂನುಗಳು ಬರಲಿ, ಸಮಾನ ಹಕ್ಕಷ್ಟೇ ಅಲ್ಲ, ಸಮಾನ ಶಿಕ್ಷೆಯೂ ಬರಲಿ. #MENTOO
(ಕೃಪೆ: ಟೈಮ್ಸ್ ಆಫ್ ಇಂಡಿಯಾ)
•ಪೂಜಾ ಬೇಡಿ, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.