ಪಕೋಡ ಮಾರುವುದು ಸ್ಪರ್ಧಾತ್ಮಕ ಉದ್ಯೋಗವೇ?
Team Udayavani, Feb 9, 2018, 6:31 AM IST
ನಮ್ಮ ಪ್ರಧಾನಿಗಳು ಪಕೋಡ ಮಾರುವುದೂ ಒಂದು ಉದ್ಯೋಗ ಎಂದು ಹೇಳಬಾರದು, ಸ್ಯಾಮ್ ಪಿತ್ರೋಡಾ ಆಗಿ ಎಂದು ಹೇಳಬೇಕು. ಕೈಗಾರಿಕೀಕರಣ, ಡಿಜಿಟಲೀಕರಣ, ಹೊಸ ಸಂಶೋಧನೆಗಳು, ನಮ್ಮ ಪ್ರಾಕೃತಿಕ ಸಂಪನ್ಮೂಲಗಳ ಅತ್ಯುತ್ಯಮ ಬಳಕೆಯ ಶೋಧನೆ…ಈ ಕ್ಷೇತ್ರಗಳಲ್ಲಿ ನಮ್ಮ ಯುವಪೀಳಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು ಎಂಬ ಹಂಬಲವನ್ನು ಪ್ರಧಾನಿಗಳು ವ್ಯಕ್ತಪಡಿಸಬೇಕು. ಅದು ಬಿಟ್ಟು ಪ್ರಧಾನಿಗಳೇ ಪಕೋಡ ಮಾರಿ, ರಸ್ತೆ ಬದಿ ಸ್ವೆಟರ್ ಮಾರಿ, ಶೂ ಮಾರಿ, ಅವೂ ಉದ್ಯೋಗ ಎಂದರೆ ಏನರ್ಥ?
ದಿನಾಂಕ 7-2-18ರ ಉದಯವಾಣಿ ಅಭಿಮತ ಪುಟದಲ್ಲಿ ಪ್ರಕಟವಾದ ಮಾಳವಿಕಾ ಅವಿನಾಶ್ ಅವರ ಪಕೋಡ ಮಾರುವುದು ಭಿಕ್ಷಾಟನೆಯೇ? ಎಂಬ ಲೇಖನಕ್ಕೆ ಪ್ರತಿಕ್ರಿಯೆ ಯಿದು. ಮಾಳವಿಕ ಅವರು ಪಕೋಡ ಮಾರುವುದು ಭಿûಾಟನೆ ಯಲ್ಲ, ಅದೂ ಒಂದು ಉದ್ಯೋಗ ಎಂದು ಮಾನ್ಯ ಪ್ರಧಾನಿ ಯವರ ಹೇಳಿಕೆಯನ್ನು ಸಾಮರ್‌ಸೆಟ್ ಮಾಮ್‌ನ ಕತೆ, ದೀನದಯಾಳ್ ಉಪಾಧ್ಯಾಯರ ಚತುರ್ವಿಧ ಪುರುಷಾರ್ಥಗಳ ಬಣ್ಣನೆ, ಕಾಯಕ ಸಂಸ್ಕೃತಿಯ ಪ್ರತಿಪಾದನೆ ಮೊದಲಾದ ಹಲವು ಚರ್ವಿತ ಚರ್ವಣ ವಿಷಯ, ಸಂಗತಿಗಳ ಮೂಲಕ ಸಮರ್ಥಿಸಿ ಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಆತ್ಮಜ್ಞಾನ, ಜೀವನ್ಮುಕ್ತಿಯ ಲೇಪ ಹಚ್ಚುತ್ತಾ ಕಳ್ಳತನ, ಸುಲಿಗೆ ಮಾಡದೆ ಸಂಪಾದನೆ ಮಾಡುವುದಾದರೆ ಯಾವ ಮಾರ್ಗವಾದರೂ ತಪ್ಪಿಲ್ಲ, ಕೂಲಿ ಯನ್ನಾದರೂ ಮಾಡಬಹುದು, ಆದರೆ ಯಾರ ಮುಂದೂ ಕೈ ಒಡ್ಡದಿರುವುದು ಸಾರ್ವತ್ರಿಕ, ಸರ್ವಕಾಲೀನ, ಸನಾತನ ಸತ್ಯ ಎನ್ನುತ್ತಾರೆ. ಮಾಳವಿಕಾ ಅವರು ವಾಸ್ತವ ಸತ್ಯ, ಬದುಕಿನ ಬವಣೆ, ಜೀವನದ ಘನತೆಯನ್ನು ಮರೆತು ಒಂದು ಪಕ್ಷದ ವಕ್ತಾರ
ರಾಗಿ, ಮೋದಿಯವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿದ್ದಾರೆ. ಜಾನ್ ಮೇನಾರ್ಡ್ ಕೀನ್ಸ್ ನಿರುದ್ಯೋಗ ಸ್ಥಿತಿಗೆ ಎರಡು ಕಾರಣಗಳನ್ನು ಕೊಡುತ್ತಾರೆ. ಒಂದು: ಬಂಡವಾಳಶಾಹಿ ಪ್ರಭುತ್ವ, ಮತ್ತೂಂದು: ನಮ್ಮ ಮಧ್ಯೆ ಇರುವ ತೀವ್ರ ಅಸಮಾನತೆ. ಇವೆರಡಕ್ಕೂ ಒಂದು ಅನೂಹ್ಯ ಸಂಬಂಧವಿದೆ. ಜಾತಿ ಧರ್ಮ ಗಳಲ್ಲಿರುವಂತೆ ಈ ಬದುಕಿನ ಸ್ತರಗಳಲ್ಲೂ ತಾರತಮ್ಯವಿದೆ, ದೊಡ್ಡ ಕಂದಕವಿದೆ. ಬಹಳಷ್ಟು ಜನ ನಮ್ಮಲ್ಲಿ ಬಂಡವಾಳಶಾಹಿ
ಗಳಾಗಿ ರುವುದರಿಂದ ಅಥವಾ ಅಂತಹ ಧೋರಣೆ ಹೊಂದಿರು ವುದರಿಂದ ಸಾಮಾನ್ಯ ಜನರು ತಮ್ಮ ಬದುಕಿಗಾಗಿ ಕೂಲಿಗಳಾಗಿ ಕೆಲಸ ಮಾಡುತ್ತಾರೆ. ಮೇನಾರ್ಡ್ ಹೇಳುತ್ತಾರೆ: we want to put unemployed labour to work-not digging holes, but in socially productive ways’.. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಉದ್ಯೋಗದ ವ್ಯಾಖ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಾತಾಡ ಬೇಕಾಗುತ್ತದೆ. ಉದ್ಯೋಗ ಎನ್ನುವುದು ಒಬ್ಬ ವ್ಯಕ್ತಿಯ, ತನ್ಮೂಲಕ ಒಂದು ಕುಟುಂಬಕ್ಕೆ ಭದ್ರತೆ ನೀಡಬೇಕು. ಅದು ಅವನಲ್ಲಿನ ಆತ್ಮವಿಶ್ವಾಸದ ಮತ್ತು ತೃಪ್ತಿಯ ಮಟ್ಟವನ್ನು ಹೆಚ್ಚಿಸಬೇಕು. ಅವನ ಮಾನವ ಸಂಪನ್ಮೂಲವನ್ನು ಒಂದು ಮೌಲ್ಯಯುತ ಸರಕನ್ನಾಗಿ ಪರಿವರ್ತಿಸುವ ಕೌಶಲ ಹೊಂದಿರಬೇಕು. ಅದಕ್ಕೆ ಪ್ರತಿಫಲ ವಾಗಿ ಅವನಿಗೆ ಹಣ ಮತ್ತು ಜೀವನ ತೃಪ್ತಿ ನೀಡುವಂತಿರಬೇಕು. ಅವನಿಗೆ ಕೊಳ್ಳುವ ಚೈತನ್ಯ ಮತ್ತು ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಆರ್ಥಿಕ ಶಕ್ತಿ ನೀಡಬೇಕು, ಹಾಗೇ ಅವನ ಜೀವನಮಟ್ಟ ಸುಧಾರಿಸಬೇಕು. ಇನ್ನು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನೋಡುವುದಾದರೆ ಇಂತಹ ವ್ಯಕ್ತಿಗತ ಉದ್ಯೋಗ ಗಳ ಉತ್ಪಾದನೆಯ ಒಟ್ಟು ಮೊತ್ತ ಆರ್ಥಿಕ ಅಭಿವೃದ್ಧಿಗೆ ಪೂರಕ ವಾಗಿರಬೇಕು. ಅಂತಹ ಉದ್ಯೋಗಗಳು ಸಾಮಾಜಿಕ ಅಭಿವೃದ್ಧಿಗೆ ಕಾರ್ಯಸೂಚಿ ರೂಪಿಸುವಂತಿರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಉದ್ಯೋಗ ಎನ್ನುವುದು ವ್ಯವಸ್ಥೆಯಲ್ಲಿನ ಭ್ರಷ್ಟತೆ, ಅಸಮಾನತೆ ಮತ್ತು ಅರಾಜಕತೆಯನ್ನು ತೊಡೆದು ಹಾಕುವಂತಿರಬೇಕು. (ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗಿಗಳೇ ಸೈನಿಕರ ಮೇಲೆ ಕಲ್ಲು ಎಸೆಯುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ) ಉದ್ಯೋಗ ಬಡತನ ನಿರ್ಮೂಲನೆ ಮಾಡುವಂತಿರಬೇಕು. ಅದರಲ್ಲಿ ಅವನ ಆತ್ಮಗೌರವ, ಸ್ವಾವಲಂಬನೆ ಜೊತೆಗೆ ಸಮಾಜಮುಖೀ ಉತ್ಪಾದಕತೆಯ ಕೊಡುಗೆಯೂ ಇರಬೇಕು. ಈ ದೇಶದ ಬಡಮಕ್ಕಳನ್ನು ನಿಮಗೆ ಸ್ಫೂರ್ತಿ ಯಾರು ಎಂದು ಕೇಳಿದರೆ ಅವರು ಅಬ್ದುಲ್ ಕಲಾಂ ಎನ್ನುತ್ತಾರೆ. ಅದೇ ಶ್ರೀಮಂತರ ಮಕ್ಕಳು ಕ್ರಿಕೆಟ್ ಕಲಿಗಳ, ಸಿನಿಮಾ ತಾರೆಯರ ಮತ್ತು ರಾಜಕೀಯ ವ್ಯಕ್ತಿಗಳ ಹೆಸರು ಹೇಳುತ್ತಾರೆ. ಇದು ನಾವು ನಮ್ಮ ಉದ್ಯೋಗಗಳ ಬಗ್ಗೆ ನಮ್ಮ ಯುವಪೀಳಿಗೆಯಲ್ಲಿ ಮೂಡಿಸಿರುವ ತರತಮ ನೀತಿಗೊಂದು ಸ್ಪಷ್ಟ ಉದಾಹರಣೆ.
ಈ ಯಾವ ನಿಟ್ಟಿನಲ್ಲಿ ಪಕೋಡ ಮಾರುವುದು ಒಂದು ಸ್ಪರ್ಧಾತ್ಮಕ ಉದ್ಯೋಗ ಎಂದು ಪರಿಗಣಿಸಬೇಕು? ಪಕೋಡ ಮಾರುವುದರಿಂದ ಮೇಲೆ ಹೇಳಿದ ಯಾವ ಉದ್ಯೋಗದ ಆಶಯ ಈಡೇರಿದೆ? ಬೀದಿ ಬದಿ ಪಕೋಡಾ ಮಾರುವ
ಎಷ್ಟು ಜನ ರಸ್ತೆ ಬದಿ ಹೈವೇನಲ್ಲಿ ಹೈಫೈ ಹೋಟೆಲ್ ಕಟ್ಟಿದ್ದಾರೆ? ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಕಟ್ಟುವವರು ಅವರನ್ನು ಅಲ್ಲಿಂದ ಒಧ್ದೋಡಿಸಿ ಬೀದಿ ಪಾಲು ಮಾಡಿದ ನೂರಾರು ಉದಾಹರಣೆಗಳಿವೆ. ಮಾಳವಿಕಾ ಅವರು ಚರ್ಚ್ ಗಂಟೆ ಹೊಡೆಯುತ್ತಿದ್ದವನೊಬ್ಬ ಸೂಪರ್ ಮಾರ್ಕೆಟ್ ಸಂಕೀರ್ಣದ ಒಡೆಯನಾದ ಒಂದು ದೃಷ್ಟಾಂತ ಬಣ್ಣಿಸಿದ್ದಾರೆ. ಕೃಷ್ಣ ನಾಯರ್ 60 ವರ್ಷದ ನಂತರ ಹೋಟೆಲ್ ಉದ್ಯಮ ಪ್ರಾರಂಭಿಸಿ ಲೀಲಾ ಗ್ರೂಪ್ ಆಫ್ ಹೋಟೆಲ್ಸ್ ಕಟ್ಟಿದರು. ಅಲ್ಲಿ ತನಕ ಅವರು ಪಕೋಡ ಮಾರುತ್ತಿ ದ್ದರಾ? ಅದಕ್ಕೂ ಮೀರಿದ್ದೆಂದರೆ ಹೋಟೆಲ್‌ನ ಒಬ್ಬ ಸಾಮಾನ್ಯ ಕೆಲಸಗಾರನಾಗಿದ್ದ ಎಂ.ಎಸ್.ಒಬೆರಾಯ್ ಒಬೆರಾಯ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ನಾಗಿದ್ದು. ಅಂದರೆ ವ್ಯವಸ್ಥೆಯ ಒಳಗಿದ್ದು ಕೊಂಡೇ ಹೆಚ್ಚು ಅಭಿವೃದ್ಧಿ ಹೊಂದುವುದೇ ಒಂದು ಆದರ್ಶದ ಕಲ್ಪನೆ. ನಾಲ್ಕನೇ ದರ್ಜೆ ಕೆಲಸಗಾರರಾಗಿ ಬ್ಯಾಂಕ್ ಸೇರಿದ ಎಷ್ಟೋ ಜನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಅದೇ ಬ್ಯಾಂಕ್‌ನಲ್ಲಿ ಅಧಿಕಾರಿಗಳಾಗಿ
ದ್ದಾರೆ. ಅವರು ಈಚೆ ಬಂದು ರಸ್ತೆ ಬದಿ ಪಕೋಡ ಮಾರುತ್ತ ಕೂರಬೇಕಿತ್ತಾ? ಸರಕಾರ ಪಿಯು ಉಪನ್ಯಾಸಕರು ಕಡ್ಡಾಯ ವಾಗಿ ಬಿಎಡ್ ಪದವಿ ಪಡೆದುಕೊಳ್ಳ ಬೇಕು ಎಂದು ನಿಬಂಧನೆ ವಿಧಿಸಿತು. ಆಗ ಸೇವೆಯಲ್ಲಿದ್ದ ಉಪನ್ಯಾಸಕರು ಹೆಚ್ಚುವರಿ ಯಾಗಿ ಬಿಎಡ್ ಪದವಿ ಗಳಿಸಿ ತಮ್ಮ ಉದ್ಯೋಗದ ಸ್ಥಿರತೆಗೆ ಮುಂದಾದರು. ಅವರು ಸೇವೆ ಬಿಟ್ಟು ಪಕೋಡ ಮಾರಲು ಬರಬೇಕಿತ್ತೇ? ಆದರ್ಶ ಎನ್ನುವುದು ಒಂದು ಸಾಮಾನ್ಯ ಹಂತದಿಂದ ಉಚ್ಛಾ†ಯ ಸ್ಥಿತಿಗೆ ಕೊಂಡೊಯ್ಯುವ ಧನಾತ್ಮಕ ಕಲ್ಪನೆ ಎನಿಸಬೇಕಲ್ಲವೇ? ಹಾಗೆಂದು ಪಕೋಡ ಮಾರುವುದು ಒಂದು ಉದ್ಯೋಗ ಅಲ್ಲವೇ ಅಲ್ಲ ಎಂದೇನೂ ಅಲ್ಲ. ಅದರೆ ಪಕೋಡ ಮಾರುವು ದನ್ನು ಬಹಳಷ್ಟು ಮಂದಿ ಅನಿವಾರ್ಯವಾಗಿ ತಮ್ಮ ಜೀವ ನೋಪಾಯ ಎಂದು ಪರಿಗಣಿಸಿರುತ್ತಾರೆ. ಪಕೋಡ ಮಾರು ವುದು ಒಂದೇ ಅಲ್ಲ, ರಸ್ತೆ ಬದಿ ಪಾನಿಪೂರಿ ಮಾರುವುದು, ಗಾಡಿಗಳಲ್ಲಿ ತರಕಾರಿ ಮಾರುವುದು, ನಮ್ಮ ಕಿತ್ತ ಚಪ್ಪಲಿ ರಿಪೇರಿ ಮಾಡಿಕೊಡುವವರು, ನಮ್ಮ ಶೂಗೆ ಪಾಲೀಶ್ ಹಾಕಿಕೊಡು ವವರು, ನಮ್ಮ ಬಟ್ಟೆ ಹೊಲೆದು ಕೊಡುವವರು, ನಮ್ಮ ಕೇಶವಿನ್ಯಾಸ ಮಾಡುವವರು, ಹೀಗೆ ಲಕ್ಷಾಂತರ ಜನ ನಮ್ಮ ದೇಶದ ಶ್ರೀಮಂತರ, ರಾಜಕೀಯ ಪುಡಾರಿಗಳ ಸೇವೆ ಮಾಡುವವರು ಮಾಡುವುದೆಲ್ಲಾ ಉದ್ಯೋ ಗವೇ! ಅದೆಲ್ಲಾ ಅವರು ಆರಿಸಿಕೊಂಡು ತೃಪ್ತಿ, ಧನ್ಯತೆಯಿಂದ ಮಾಡುತ್ತಿರುವ ಉದ್ಯೋಗವಲ್ಲ. ಅನಿವಾರ್ಯವಾಗಿ ಬದುಕಿನ ಬಂಡಿ ಓಡಿಸಲು ಮಾಡುತ್ತಿರುವ ಉದ್ಯೋಗ. ಇಂತಹ ಕಾಯಕ ನಿಷ್ಠರಿಗೆ ನಾವು ಶಿರಬಾಗಿ ಕೈ ಮುಗಿಯಬೇಕು. ಇಂತಹ ಕಾಯಕದ ಕಲ್ಪನೆ ಮತ್ತು ಶ್ರೇಷ್ಠತೆ ಯನ್ನು ನಮ್ಮ ಬಸವಾದಿ ಶರಣರೇ ಎಂದೋ ಹೇಳಿಕೊಟ್ಟಿದ್ದಾರೆ. ಅದನ್ನು ಮೋದಿಯವ ರಾಗಲೀ, ಮಾಳವಿಕ ಅವರಾಗಲಿ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. “ಪಕೋಡ ಮಾರುವವನು ನಾಳೆ ಹೋಟೆಲ್ ಮಾಲೀಕ ನಾಗಿಬಿಟ್ಟರೆ ಉದ್ಯೋಗ ಸೃಷ್ಟಿ ಯಾಗುವುದಿಲ್ಲವೆಂದು ಮನ್ರೇಗಾ ಅಡಿ ಕೈ ಒಡ್ಡುವುದಿಲ್ಲ, ನಿಮ್ಮ ಬಿಟ್ಟಿ ಭಾಗ್ಯಗಳಿಗಾಗಿ ಕಾದು ಕೂರುವುದಿಲ್ಲ, ನೀವು ಮಹಾತ್ಮಾ ಗಾಂಧಿ ವಂಶಸ್ಥರೆಂದು ಮೋಸ ಹೋಗುವುದಿಲ್ಲ. ಅಜ್ಞಾನಿ ಯಾಗುಳಿದು ನಿಮಗೆ ವೋಟೊತ್ತುವು ದಿಲ್ಲ’ ಎಂದಿದ್ದಾರೆ. ಇದು ತೀರಾ ಉತ್ಪ್ರೇಕ್ಷಿತ ರಾಜಕೀಯ ಪ್ರೇರಿತ ಹೇಳಿಕೆ. ಪಕೋಡ ಮಾರುವವರೆಲ್ಲಾ ಹೋಟೆಲ್ ಮಾಲೀಕರಾ ಗಲು ಸಾಧ್ಯವಿಲ್ಲ. ಪಕೋಡ ಮಾಡುವ ಸ್ಟೌವ್, ಬಾಣಲಿಯ ಮುಂದೆ ಬುದ್ಧ ನಿಗಾದಂತೆ ದಿವ್ಯ ಸಾಕ್ಷಾತ್ಕಾರವಾಗಿ, ಅವರು ಪ್ರಜಾnವಂತರಾಗಿ ಕರ್ನಾಟಕದ ತಮ್ಮ ಆಳ್ವಿಕೆಯ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾ ಚಾರದಲ್ಲಿ ಮುಳುಗೆದ್ದ ಬಿಜೆಪಿಗೆ ಓಟು ಹಾಕುತ್ತಾರೆ ಎನ್ನುವುದಂತೂ ತೀರಾ ಹುಚ್ಚು ಭ್ರಮೆ!
ಪಕೋಡ ಮಾರುವವರ್ಯಾರೂ ತಮ್ಮ ಮಕ್ಕಳು ಪಕೋಡಾ ಹಾಕುತ್ತಲೇ ಇರಲಿ ಎಂದು ಆಶಿಸುವುದಿಲ್ಲ, ಈ ದೇಶದಲ್ಲಿ ರೈತರು ಮತ್ತು ಈ ರೀತಿ ಪಕೋಡ ಹಾಕುವ, ಮಾರುವ ಅಸಂಘಟಿತ ವಲಯದ ಯಾವ ಉದ್ಯೋಗಿಯೂ ತನ್ನ ಮಕ್ಕಳಿಗೆ ಇದೇ ಉದ್ಯೋಗ ಮಾಡಿ ಎಂದು ಹೇಳುವುದಿಲ್ಲ. ಯಾಕೆಂದರೆ ಇಂದು ಶರಣರ ಕಾಲದ ಅಂತಹ ವೃತ್ತಿಗೌರವ ಉಳಿದಿಲ್ಲ.
ಅವೆಲ್ಲಾ ಭದ್ರತೆ, ಘನತೆ ಇಲ್ಲದ ಉದ್ಯೋಗ ಅಲ್ಲ ಎಂದು ಅವರಿಗೇ ಅನಿಸಿಬಿಟ್ಟಿದೆ. ಅದಕ್ಕೆ ಕಾರಣ ಈ ದೇಶದ ರಾಜಕಾರಣ. ಬರೀ ಕಾಂಗ್ರೆಸ್‌ನ ಬೈಯ್ಯುವುದರಿಂದ ಪ್ರಯೋಜನವಿಲ್ಲ. ಕರ್ನಾಟಕವನ್ನು ಆಳಿದ ಬಿಜೆಪಿ ಈ ನಾಡಿಗೆ ಯಾವ ಕೊಡುಗೆ ಕೊಟ್ಟಿತು ಎಂಬುದು ಎಲ್ಲರಿಗೂ ಗೊತ್ತು! ರಾಜಕಾರಣವನ್ನೇ ಒಂದು ಉದ್ಯೋಗ ಎಂದು ಮಾಡಿಕೊಂಡವರು ಬೇರೆಯವರು ಪಕೋಡ ಮಾರಲಿ ಎಂದು ಆಶಿಸುವುದಕ್ಕಿಂತ ಹೆಚ್ಚು ಎತ್ತರಕ್ಕೆ ಉದಾತ್ತವಾಗಿ ಚಿಂತಿಸಲಾರರು.
ಕೈಗಾರಿಕಾ ಕ್ರಾಂತಿಯ ನಂತರ ಯೂರೋಪಿನಲ್ಲಿ ಮಾಂಸ ಮತ್ತಿತರ ಆಹಾರ ಸಾಮಾಗ್ರಿಗಳ ಮಾರಾಟ ಒಂದು ಉದ್ಯೋಗ ಎಂದು ಪರಿಗಣಿಸುವುದು ಕಡಿಮೆ ಆಗುತ್ತಾ ಹೋಯಿತು. ನಮ್ಮಲ್ಲಿ ಖಂಡಿತವಾಗಿ ಪಕೋಡ ಮಾರುವುದೂ ಉದ್ಯೋಗವೇ! ನಮ್ಮ ಪ್ರಧಾನಿ ಚಾಯ್‌ವಾಲೇನೇ ಇರಬಹುದು. ಅದನ್ನೂ ಅವರು ಇಷ್ಟ ಪಟ್ಟು ಮಾಡಿರಲಿಕ್ಕಿಲ್ಲ, ಅನಿವಾರ್ಯವಾಗಿ ಮಾಡಿರಬಹುದು. ಹಾಗೆಂದು ಚಾ ಮಾರುವುದನ್ನೇ ಉದ್ಯೋಗ ಮಾಡಿಕೊಳ್ಳಿ ಎಂದು ಹೇಳಬಹುದಾ? ಚಾ ಮಾರಿದರೆ ಪ್ರಧಾನಿಯಾಗಬಹುದು ಎನ್ನಲಾಗುತ್ತದಾ? ಅದೊಂದು ಎಕ್ಸೆಪ್ಶನ್ ಅಷ್ಟೇ! ಆದರೆ ಡಿಜಿಟಲ್ ಭಾರತ ಮಾಡಲು ಹೊರಟಿರುವ ನಮ್ಮ ಪ್ರಧಾನಿಗಳು ಅವರ ಆಶೋತ್ತರ, ಘನತೆಯ ದೃಷ್ಟಿಯಿಂದ ಪಕೋಡ ಮಾರುವುದೂ ಒಂದು ಉದ್ಯೋಗ ಎಂದು ಹೇಳಬಾರದು, ಸ್ಯಾಮ್ ಪಿತ್ರೋಡಾ ಆಗಿ ಎಂದು ಹೇಳಬೇಕು. ಕೈಗಾರಿಕೀಕರಣ, ಡಿಜಿಟಲೀಕರಣ, ಹೊಸ ಸಂಶೋಧನೆಗಳು, ನಮ್ಮ ಪ್ರಾಕೃತಿಕ ಸಂಪನ್ಮೂಲಗಳ ಅತ್ಯುತ್ಯಮ ಬಳಕೆಯ ಶೋಧನೆ ಈ ಕ್ಷೇತ್ರಗಳಲ್ಲಿ ನಮ್ಮ ಯುವಪೀಳಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು ಎಂಬ ಹಂಬಲವನ್ನು ಪ್ರಧಾನಿಗಳು ವ್ಯಕ್ತಪಡಿಸಬೇಕು. ಅದು ಬಿಟ್ಟು ಪ್ರಧಾನಿಗಳೇ ಪಕೋಡ ಮಾರಿ, ಟಿಬೆಟ್ ಜನರಂತೆ ರಸ್ತೆಬದಿ ಸ್ವೆಟರ್ ಮಾರಿ, ಶೂ ಮಾರಿ, ಅವೂ ಉದ್ಯೋಗ ಎಂದರೆ ಏನರ್ಥ? ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಸ್ಮಾರ್ಟ್ ಅಪ್ ಇಂಡಿಯಾ ಅಂದರೆ ಅದು ಇಂಡಿಯಾದಲ್ಲಿ ಪಕೋಡ ಮಾಡುವುದು, ಪಕೋಡ ಎಕ್ಸ್‌ಪೋರ್ಟ್ ಮಾಡಿ ಜಾಗತಿಕ ಮಟ್ಟದಲ್ಲಿ ಪಕೋಡ ಉತ್ಪಾದನೆಯಲ್ಲಿ ಭಾರತ ತಲೆ ಎತ್ತಿ ನಿಲ್ಲು ವಂತೆ ಮಾಡುವುದು, ಮತ್ತು ಪಕೋಡ ಮಾಡುವ ಕೌಶಲಕ್ಕೆ ಪ್ರಶಸ್ತಿ, ಅನುದಾನ ಕೊಡುವುದು ಎಂದಾ? ಲಕ್ಷಾಂತರ ಯುವ ಕರು ಹಾಗಿದ್ದರೆ ಪಕೋಡ ಮಾರುವುದನ್ನೇ ಉದ್ಯೋಗ ಮಾಡಿ ಕೊಳ್ಳಬೇಕಾ? ನಾವು ನಮ್ಮ ಮಕ್ಕಳಿಗೆ ಹೇಳಲಾಗದ್ದನ್ನ, ಮಾಡಲಾ ಗದ್ದನ್ನ ಬೇರೆಯರಿಗೆ ಇದೂ ಉದ್ಯೋಗ ನೀವು ಮಾಡಿ ಎಂದು ಹೇಳಬಾರದು. ನಮ್ಮ ಮಕ್ಕಳಿಗೆ ನೀನು ಪಕೋಡ ಮಾರು,
ಮುಂದೆ ಸ್ಟಾರ್ ಹೋಟೆಲ್ ಮಾಲೀಕನಾಗುವೆ ಎಂದು ಹೇಳುವ ಎದೆಗಾರಿಕೆ, ಕಾಯಕ ನಿಷ್ಠೆ ನಮಗಿದೆಯಾ? ಇಷ್ಟಕ್ಕೂ ಮೀರಿ ಹೇಳುವುದಾದರೆ ಬಿಜೆಪಿಯಲ್ಲೇ ಎಷ್ಟೋ ಜನ ರಾಜಕೀಯ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡದ, ಮಾಡಲು ಬಾರದ (ನಿರು)ಉದ್ಯೋಗಿಗಳಿರಬಹುದು. ಅವರೇ ಬೇಕಾದರೆ ಪಕೋಡ ಮಾರಿ 10 ವರ್ಷದಲ್ಲಿ ಹೋಟೆಲ್ ಓನರ್ ಆಗುವುದನ್ನು ಸವಾಲಾಗಿ ಸ್ವೀಕರಿಸಬಹುದು.
ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.