ಬಿತ್ತಿದ ಬೆಳೆಯೂ ರೈತರ ಕೈಸೇರುವುದು ಅಸಾಧ್ಯ
Team Udayavani, Jul 17, 2023, 7:44 AM IST
ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಆತಂಕ ಸೃಷ್ಟಿಯಾಗಿದೆ. ಬಿತ್ತನೆ ಕಾರ್ಯ ಕುಂಠಿತವಾಗಿ ರೈತರು ಕಂಗಾಲಾಗಿದ್ದಾರೆ. ತೇವಾಂಶದ ಕೊರತೆಯಿಂದ ಬಿತ್ತಿದ ಬೆಳೆಯೂ ಕೈ ಸೇರುವುದು ಅಸಾಧ್ಯ ಎಂಬ ಸ್ಥಿತಿ ಇದೆ. ಹಲವೆಡೆ ಮಳೆ ಇಲ್ಲದೆ ಬಿತ್ತನೆ ಆರಂಭವಾಗಿಲ್ಲ.
ಬೆಳಗಾವಿಯಲ್ಲಿ ಬರದ ಆತಂಕ
ಬೆಳಗಾವಿ: ಬಿತ್ತನೆ ಕಾರ್ಯ ಕುಂಠಿತಗೊಂಡ ಬೆನ್ನಲ್ಲೇ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಸರಕಾರದ ಮೇಲೆ ಒತ್ತಡ ಹೆಚ್ಚಿದೆ. ಮುಂಗಾರು ಪೂರ್ವ ಅವಧಿಯಾಗಿರುವ ಮಾರ್ಚ್ 1ರಿಂದ ಮೇ 31ರ ವರೆಗೆ ವಾಡಿಕೆಯಂತೆ 93 ಮಿಮೀ ಮಳೆಯಾಗಬೇಕಿತ್ತು. ಆದರೆ 86 ಮಿಮೀ ಮಳೆಯಾಗಿದೆ. ಆದರೆ ಮುಂಗಾರು ಹಂಗಾಮಿನಲ್ಲಿ ಉಂಟಾದ ಮಳೆ ವೈಫಲ್ಯ ಮುಂದಿನ ಭೀಕರ ಪರಿಸ್ಥಿತಿಯ ಸುಳಿವು ನೀಡಿದೆ. ಜೂನ್ 1ರಿಂದ ಜುಲೈ 15ರ ವರೆಗೆ ವಾಡಿಕೆಯಂತೆ 235 ಮಿಮೀ ಮಳೆಯಾಗಬೇಕು. ಆದರೆ ಕೇವಲ 118 ಮಿಮೀ ಮಳೆಯಾಗಿದ್ದು, ಶೇ. 50 ಮಳೆ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಶೇ.68 ಮಳೆ ಕೊರತೆಯಾಗಿದ್ದರೆ ಜುಲೈ ತಿಂಗಳಲ್ಲಿ ಇದುವರೆಗೆ ಶೇ. 20ರಷ್ಟು ಮಳೆ ಕಡಿಮೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಗೂ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಈ ಅವಧಿಗೆ ಜಿಲ್ಲೆಯಲ್ಲಿ ಶೇ. 85ರಿಂದ 90 ಬಿತ್ತನೆಯಾಗಬೇಕು. ಆದರೆ ಇದುವರೆಗೆ ಶೇ. 62ರಷ್ಟು ಮಾತ್ರ ಬಿತ್ತನೆಯಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಬರ!
ಚಿತ್ರದುರ್ಗ: ಬರದ ನಾಡು ಎಂಬ ಹಣೆಪಟ್ಟಿ ಹೊಂದಿರುವ ಜಿಲ್ಲೆಯಲ್ಲಿ ಈ ಬಾರಿ ಸಕಾಲಕ್ಕೆ ಮಳೆಯಾಗದ್ದರಿಂದ ಬಿತ್ತನೆ ಕುಂಠಿತವಾಗಿದೆ. 2023ರ ಜನವರಿಯಿಂದ ಜುಲೈ 14ರ ವರೆಗೆ 177 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ವರೆಗೆ 154.2 ಮಿಮೀ ಮಳೆಯಾಗಿದ್ದು, ಶೇ.13 ಕೊರತೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 2,98,150 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಜು. 14ರ ವರೆಗೆ 86,103 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 1,47,707 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಸದ್ಯ ಶೇ. 28.88ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲೇ ಅತಿ ಹೆಚ್ಚು ಅಂದರೆ 2.98 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮುಂಗಾರು ಮಳೆ ನಂಬಿಕೊಂಡೇ ಇಲ್ಲಿನ ರೈತರು ಕೃಷಿ ಮಾಡುತ್ತಾರೆ. ಈ ಬಾರಿ ಈಗಾಗಲೇ ಎರಡು ತಿಂಗಳು ವಿಳಂಬವಾಗಿದ್ದು, ಉಳಿದ 1 ತಿಂಗಳಲ್ಲಿ ಈ ಗುರಿ ತಲುಪುವುದು ಕಷ್ಟ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮಲೆನಾಡಲ್ಲೇ ಶೇ.48 ಮಳೆ ಕೊರತೆ
ಶಿವಮೊಗ್ಗ: ಮುಂಗಾರು ಅವ ಧಿ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ವಾಡಿಕೆಯಷ್ಟು ಮಳೆಯಾಗಿಲ್ಲ. ಜೂನ್ 1ರಿಂದ ಜುಲೈ 14ರ ವರೆಗೆ 790 ಮಿಮೀ ಮಳೆಯಾಗಬೇಕಿದ್ದು, 407 ಮಿಮೀ ಮಳೆಯಾಗಿದೆ. ಶೇ.48ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಬಿತ್ತನೆಗೆ ಸಮಸ್ಯೆ ಇಲ್ಲದಿದ್ದರೂ ಭತ್ತ ಸಸಿಮಡಿ ಬಿಡಲು ತೊಂದರೆಯಾಗಿದೆ. ಬಂದರೆ ಆರಿದ್ರಾ ಹೋದರೆ ದರಿದ್ರ ಎಂಬಂತೆ ಈ ಬಾರಿ ಜಿಲ್ಲೆಯಲ್ಲಿ ಆರಿದ್ರಾ ಮಳೆ ಸಂಪೂರ್ಣ ಕೈ ಕೊಟ್ಟಿದೆ. ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಬಿತ್ತನೆಗೆ ಹಿನ್ನಡೆಯಾಗಿದೆ. ಜುಲೈ ಕೊನೆವರೆಗೂ ಬಿತ್ತನೆಗೆ ಅವಕಾಶವಿದ್ದು, ಇನ್ನೊಂದು ವಾರದಲ್ಲಿ ನಿಗದಿತ ಗುರಿ ತಲುಪುವ ಸಾಧ್ಯತೆ ಇದೆ. ಮಳೆಯಾಶ್ರಿತ ಭತ್ತ ಬಿತ್ತನೆಗೆ ಹಿನ್ನಡೆಯಾಗಿದ್ದು, ಮಲೆನಾಡು ಭಾಗದ ರೈತರು ಚಿಂತೆಗೀಡಾಗಿದ್ದಾರೆ. ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ಭತ್ತದ ಸಸಿ ಮಡಿಗೆ ನೀರು ಸಾಕಾಗದೆ ಮಳೆಗಾಗಿ ಕಾಯುತ್ತಿದ್ದಾರೆ.
ಬಾರದ ಮಳೆ; ಆಗದ ಬಿತ್ತನೆ
ಬಳ್ಳಾರಿ: ಜಿಲ್ಲೆಯಲ್ಲಿ ಈವರೆಗೆ 164.2 ಮಿಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ ಈ ವರ್ಷ ಕೇವಲ ಅಂದಾಜು 110.1 ಮಿಮೀ ಮಳೆ ಮಾತ್ರ ಆಗಿದೆ. ಸಂಡೂರು ತಾಲೂಕಿನಲ್ಲಿ ಸ್ವಲ್ಪ ಮಳೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಮಾತ್ರ ಮೆಕ್ಕೆಜೋಳ, ಜೋಳ ಬಿತ್ತನೆಯಾಗಿದೆ. ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕುಗಳಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಎಲ್ಲಿಯೂ ಸಮರ್ಪಕವಾಗಿ ಮಳೆ ಆಗಿಲ್ಲ. ತುಂಗಭದ್ರಾ ಜಲಾಶಯಕ್ಕೂ ನೀರು ಹರಿದು ಬರದೆ ಕಾಲುವೆಗಳಿಗೂ ನೀರು ಬಿಟ್ಟಿಲ್ಲ. ಪರಿಣಾಮ ಈ ಭಾಗದ ರೈತರು, ಭತ್ತದ ಸಸಿಮಡಿ, ನರ್ಸರಿಗಳಲ್ಲಿ ಮೆಣಸಿನಕಾಯಿ ಸಸಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಹತ್ತಿ ಬಿತ್ತನೆಗೆ ರೈತರು ಸಮರ್ಪಕ ಮಳೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಕೃಷಿ ಅಧಿ ಕಾರಿಗಳು ತಿಳಿಸಿದ್ದಾರೆ.
ಬಾರದ ಮಳೆ; ಆಗದ ಮುಂಗಾರು ಬಿತ್ತನೆ
ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಗೊಟ್ಟಿದ್ದರಿಂದ, ಬಿತ್ತನೆ ಕಾರ್ಯ ನಡೆದಿಲ್ಲ. ಹೀಗಾಗಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬ ಆಗ್ರಹ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ತಾಲೂಕುಗಳಿದ್ದು, ಜುಲೈ 15ರೊಳಗಾಗಿ ಒಟ್ಟು 191 ಎಂಎಂ ಮಳೆ ಆಗಬೇಕಿತ್ತು. ಈ ವರೆಗೆ 154 ಎಂಎಂ ಮಳೆಯಾಗಿರುವ ಕುರಿತು ದಾಖಲಿಸಲಾಗಿದೆಯಾದರೂ ಭೂಮಿ ತೇವಾಂಶ ಹೆಚ್ಚಿಸಿ, ಬಿತ್ತನೆ ಮಾಡುವಂತಹ ಮಳೆಯಾಗಿಲ್ಲ. ಹೀಗಾಗಿ ನಿರೀಕ್ಷಿತ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ 58,607 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ 39,639 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಅದು ಕಬ್ಬು, ಹತ್ತಿ, ಮೆಕ್ಕೆಜೋಳ ಮಾತ್ರ ಬಿತ್ತನೆ ಮಾಡಿದ್ದು, ಕೈಗೆ ಬರುವ ನಿರೀಕ್ಷೆ ಇಲ್ಲ ಎನ್ನಲಾಗಿದೆ.
ಉತ್ತರ ಕನ್ನಡದಲ್ಲಿ ಮಳೆ ಕೊರತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್‌ನಿಂದ ಜುಲೈ ತನಕ 1265 ಮಿಮೀ ವಾಡಿಕೆ ಮಳೆ ಆಗುತ್ತಿತ್ತು. ಈ ಸಲ 931 ಮಿಮೀ ಮಳೆ ಬಿದ್ದಿದೆ. 334 ಮಿಮೀ ಮಳೆ ಕೊರತೆಯಾಗಿದೆ. ಕರಾವಳಿಯಲ್ಲಿ ಭತ್ತ ನಾಟಿ ವಿಳಂಬವಾದರೆ, ಘಟ್ಟದ ತಾಲೂಕಿನಲ್ಲಿ ಬಿತ್ತನೆ ವಿಳಂಬವಾಗಿದೆ. ಜುಲೈನಲ್ಲಿ ಬಿದ್ದ ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಮುಂಡಗೋಡ, ದಾಂಡೇಲಿ, ಹಳಿಯಾಳದಲ್ಲಿ ಬಿತ್ತನೆ ಉತ್ತಮವಾಗಿದೆ. ಕರಾವಳಿ ತಾಲೂಕುಗಳ ಪೈಕಿ ಭಟ್ಕಳ, ಕುಮಟಾದಲ್ಲಿ, ಸ್ವಲ್ಪ ಮಟ್ಟಿಗೆ ಹೊನ್ನಾವರದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 66316.0 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಪೈಕಿ, 39969.0 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ. 60.27ರಷ್ಟು ಬಿತ್ತನೆ ಪೂರ್ಣವಾಗಿದೆ. ಕರಾವಳಿಯಲ್ಲಿ, ಹೊನ್ನಾವರ, ಅಂಕೋಲಾ, ಕಾರವಾರದಲ್ಲಿ ಭತ್ತ ನಾಟಿ ಆರಂಭವಾಗಬೇಕಿದೆ. ಜೋಯಿಡಾದಲ್ಲಿ ಸಹ ಇನ್ನೂ 15 ದಿನ ಬಳಿಕ ಭತ್ತ ನಾಟಿ ಆರಂಭವಾಗಲಿದೆ.
ಹಾವೇರಿಯಲ್ಲಿ ಶೇ.80.16 ಹೆಕ್ಟೇರ್‌ನಲ್ಲಿ ಬಿತ್ತನೆ
ಹಾವೇರಿ: ಜೂನ್ ತಿಂಗಳ ಅಂತ್ಯದಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಮುಂದಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಶೇ.80.16ರಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿಯೇ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆಗೆ ಹಿನ್ನಡೆಯಾಗಿತ್ತು. ಜೂನ್ ತಿಂಗಳಲ್ಲಿ 119 ಮಿಮೀ ವಾಡಿಕೆ ಮಳೆ ಬದ ಲು ಕೇವಲ 48 ಮಿಮೀ ಮಳೆ ಆಗಿದ್ದು, ಶೇ.59ರಷ್ಟು ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು. ಜುಲೈ ಆರಂಭದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜುಲೈ ತಿಂಗಳಲ್ಲಿ 74 ಮಿಮೀ ವಾಡಿಕೆ ಮಳೆ ಆಗಬೇಕಿದ್ದು, ಈಗಾಗಲೇ 66 ಮಿಮೀ (ಜು.14ರ ವರೆಗೆ) ಮಳೆಯಾಗಿದೆ. ಜಿಲ್ಲಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್ನದಾತರು ಅಲ್ಪಮಟ್ಟಿಗೆ ನಿರಾಳರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ರೈತರು ಜಮೀನುಗಳತ್ತ ಮುಖ ಮಾಡಿದ್ದು, ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವು ಭಾಗಗಳಲ್ಲಿ ಮೊದಲ ಬಾರಿಗೆ ಬಿತ್ತಿದ್ದ ಬೆಳೆ ನಾಶಪಡಿಸಿ ಎರಡನೇ ಬಾರಿಗೆ ಬಿತ್ತನೆ ಮಾಡುತ್ತಿದ್ದಾರೆ.
ಮಳೆ ಕೊರತೆ ಬಿತ್ತನೆಗೆ ರೈತರ ಹಿಂದೇಟು
ಗದಗ: ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಜಿಲ್ಲೆಯಲ್ಲಿ 2023ರ ಜನವರಿಯಿಂದ ಜುಲೈ 14ರ ವರೆಗೆ ಒಟ್ಟು 220 ಮಿ.ಮೀ. ವಾಡಿಕೆ ಮಳೆಯಲ್ಲಿ ಕೇವಲ 141 ಮಿ.ಮೀ. ಮಳೆಯಾಗಿದ್ದು, ಶೇ. 36ರಷ್ಟು ಮಳೆ ಕೊರತೆ ಉಂಟಾಗಿದೆ. ಮುಂಗಾರು ಪೂರ್ವ 104 ಮಿ.ಮೀ. ವಾಡಿಕೆ ಮಳೆ ಪೈಕಿ 64 ಮಿ.ಮೀ. ಮಳೆಯಾಗಿದ್ದು, ಶೇ. 38ರಷ್ಟು ಮಳೆ ಕೊರತೆಯಾಗಿದೆ. ಜತೆಗೆ ಮುಂಗಾರು ಅವಧಿಯಲ್ಲಿ 114 ಮಿ.ಮೀ. ವಾಡಿಕೆ ಮಳೆ ಪೈಕಿ ಕೇವಲ 77 ಮಿ.ಮೀ. ಮಳೆಯಾಗಿದ್ದು, ಶೇ. 33ರಷ್ಟು ಕೊರತೆ ಉಂಟಾಗಿದೆ. ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಸರು, ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ತೇವಾಂಶದ ಕೊರತೆಯಿಂದ ಬಿತ್ತಿದ ಬೆಳೆಯೂ ರೈತರ ಕೈಸೇರುವುದು ಅಸಾಧ್ಯ ಎಂಬ ಸ್ಥಿತಿ ಇದೆ. ಜಿಲ್ಲೆಯ ಹಲವೆಡೆ ಮಳೆ ಇಲ್ಲದೆ ರೈತರು ಬಿತ್ತನೆಗೆ ಮುಂದಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.