ಕಡಲ ಜತೆ ಸರಸಾಟ ಸಲ್ಲದು
Team Udayavani, Dec 13, 2024, 6:15 AM IST
ಮೂರು ದಿನಗಳ ಹಿಂದೆ ಮುರುಡೇಶ್ವರದ ಕಡಲ ತಡಿಯಲ್ಲಿ ಕೋಲಾರದ ಮುಳಬಾಗಿಲಿನಿಂದ ಬಂದ ವಸತಿ ಶಾಲೆಯೊಂದರ ನಾಲ್ಕು ಮಂದಿ ವಿದ್ಯಾರ್ಥಿನಿಯರು ನೀರಿನ ಸೆಳೆತಕ್ಕೆ ಸಿಕ್ಕಿ ಜಲಸಮಾಧಿಯಾದರು.
ಕರ್ನಾಟಕದಲ್ಲಿ ಮೊದಲು ಸೂರ್ಯೋದಯವಾಗುವ ಮುಳಬಾಗಿಲಿಗೂ ಕೊನೆಗೆ ಸೂರ್ಯಾಸ್ತ ಕಾಣುವ ಕರಾವಳಿಗೂ ಎಲ್ಲಿಯ ಸಂಬಂಧ. ಆದರೆ ಅಲ್ಲಿಂದ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಕಡಲಿನ ಅಲೆಗಳಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರ್ದೈವವೇ ಸರಿ. ಒಂದೇ ಶಾಲೆಯ ನಾಲ್ಕು ಮಂದಿ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದು ರಾಜ್ಯದ ಪಾಲಿಗೆ ಕರಾಳದಿನವೇ ಹೌದು. ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳು ಹೀಗೆ ಕಾಲನೊಂದಿಗೆ ಪಯಣ ಬೆಳೆಸಿದರೆ, ಅವರಿಗೆ ಕೈತುತ್ತು ಕೊಟ್ಟು, ಉಣಿಸಿ, ಉಡಿಸಿ ಬೆಳೆಸಿದ ಜೀವಗಳಿಗೆ ಏನಾಗಬೇಡ. ಹಾಗಾದರೆ ಸಮುದ್ರದಲ್ಲಿ ನಡೆಯುವ ಇಂತಹ ದುರ್ಘಟನೆಗಳಿಗೆ ಕಾರಣ ಏನು? ಇದಕ್ಕೆ ಹೊಣೆ ಯಾರು? ಎನ್ನುವುದನ್ನು ನೋಡೋಣ.
ಸಾಮಾನ್ಯವಾಗಿ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ನೀಡುವ ಅನುಮತಿ ಪತ್ರದಲ್ಲಿ ಸಮುದ್ರ, ಜಲಪಾತ, ನದಿಗಳಂತಹ ಅಪಾಯಕಾರಿ ಜಾಗಗಳಿಗೆ ಹೋಗಬಾರದೆಂದು ಉಲ್ಲೇಖಿಸಿರುತ್ತಾರೆ. ಆದರೂ ಪ್ರವಾಸದ ಮಧ್ಯೆ ಸಿಗುವ ಇಂತಹ ಸುಂದರ ಸ್ಥಳಗಳಿಗೆ ಒಮ್ಮೆ ಹೋಗಿ ನೋಡೋಣವೆಂದು ಕೆಲವರು ಬಯಸುತ್ತಾರೆ. ಆದರೆ ಅಪಾಯದ ಅರಿವಿಲ್ಲದೆ ಎಚ್ಚರ ತಪ್ಪಿದರೆ ಆಗಬಾರದ್ದು ಆಗಿ ಹೋಗುವುದಂತು ಸತ್ಯ.
ಕಡಲಿನ ವಿಶೇಷವೆಂದರೆ ಅದು ಈಗ ಇದ್ದ ಹಾಗೆ ಮತ್ತೂಮ್ಮೆ ಇರಲಾರದು. ಬೀಸುವ ಗಾಳಿ, ಬಿಸಿಲಿನ ತಾಪ, ಸೂರ್ಯನ ಆಕರ್ಷಣೆ, ಚಂದ್ರ ಮತ್ತು ಭೂಮಿಯು ಅಗಾಧವಾದ ಕಡಲ ಜಲರಾಶಿಯ ಮೇಲೆ ಪ್ರಭಾವ ಬೀರುತ್ತಿರುತ್ತದೆ. ಈ ಕಾರಣಕ್ಕಾಗಿ ಸಮುದ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಹೊರಗಿನ ಜಿಲ್ಲೆಗಳಿಂದ ಅಥವಾ ರಾಜ್ಯಗಳಿಂದ ಕರಾವಳಿಗೆ ಬಂದವರು ಸಮುದ್ರ ಕಂಡ ಕೂಡಲೇ ಹತ್ತಿರ ಹೋಗಲು ಬಯಸುತ್ತಾರೆ. ಅನಂತರ ಮೊಣಕಾಲಿನವರೆಗೂ ನೀರು ಬರುವವರೆಗೆ ಆಟ ಆಡುತ್ತಾರೆ. ಏನೂ ಅಪಾಯವಾಗಲಿಲ್ಲ ಎಂಬ ಧೈರ್ಯದಲ್ಲಿ ಇನ್ನಷ್ಟು ಆಳಕ್ಕೆ ಇಳಿಯುತ್ತಾರೆ. ಆಗ ಒಮ್ಮೆಲೇ ಬರುವ ಅಲೆಯ ರಭಸಕ್ಕೆ ಕೊಚ್ಚಿ ಹೋಗುತ್ತಾರೆ. ಎದೆ ಮಟ್ಟಕ್ಕೆ ನೀರಿದ್ದು, ಒಮ್ಮೆ ನೆಲದಿಂದ ಕಾಲು ತಪ್ಪಿದರೆ ಸಾಕು, ದೇಹ ಸಮತೋಲನ ಕಳೆದುಕೊಳ್ಳುತ್ತದೆ. ಆಗ ಸುಲಭವಾಗಿ ನೀರಿನಲ್ಲಿ ಮುಳುಗುತ್ತಾರೆ. ಬಂಡೆಗಳಿರುವಲ್ಲಿ ಅಲೆಗಳ ರಭಸ ಹೆಚ್ಚು. ಎಷ್ಟೋ ಕಡೆ ಬಂಡೆಗಳಿಗೆ ತಲೆ ಬಡಿದು ಸತ್ತವರೂ ಇದ್ದಾರೆ. ತಮ್ಮೂರಿನಲ್ಲಿ ನಿಂತ ನೀರಿನ ಕೆರೆಯಲ್ಲೋ, ಈಜುಕೊಳದಲ್ಲೋ ಒಂದೆರಡು ಮಾರು ಈಜಿದ ಅನುಭವವನ್ನು, ಸಾಹಸದ ರೀತಿಯಲ್ಲಿ ಕಡಲಿನಲ್ಲಿ ತೋರಿಸಲು ಮುಂದಾಗುತ್ತಾರೆ. ಕೆರೆ, ಈಜುಕೊಳಗಳಲ್ಲಿ ಈಜಿ ಸುಸ್ತಾದರೆ ದಡಕ್ಕೆ ಹೋಗಬಹುದು. ಆದರೆ ಸಮುದ್ರದ ನೀರು ನಿಂತ ನೀರಲ್ಲ. ಮೇಲಿನಿಂದ ನೋಡುವಾಗ ಶಾಂತವಾಗಿ ಕಂಡರೂ ಒಳಗೊಳಗೆ ನೀರಿನ ಪ್ರವಾಹ ಇರುತ್ತದೆ. ಅದು ಯಾವ ದಿಕ್ಕಿಗೆ ಕೊಂಡೊಯ್ಯಬಹುದು ಎಂದು ಊಹಿಸುವುದೇ ಕಷ್ಟ. ಕಡಲ ತಡಿಯಲ್ಲಿ ವಾಸವಾಗಿರುವವರಿಗೂ ಒಮ್ಮೊಮ್ಮೆ ಸಮುದ್ರದ ಲೆಕ್ಕಾಚಾರ ಅರ್ಥವಾಗುವುದಿಲ್ಲ. ಈಜುವಾಗ ತಾನು ದಡ ಮುಟ್ಟಲಾರೆನೆಂದು ಒಮ್ಮೆ ಧೈರ್ಯ ಕಳೆದುಕೊಂಡರೆ ಎಂತಹ ಈಜುಗಾರನಾದರೂ ದಡ ಸೇರುವುದು ಕಷ್ಟ. ಹಾಗಿರುವಾಗ ಸಮುದ್ರವನ್ನು ಮೊದಲ ಬಾರಿ ನೋಡುವವರು ದಡ ಸೇರುವರಾ?
ಕೆಲವು ಬಾರಿ ಗುಂಪಿನಲ್ಲಿ ಪ್ರವಾಸಕ್ಕೆ ಬಂದಾಗ ಒಬ್ಬರಿಗೊಬ್ಬರು ನೀಡುವ ಪ್ರೋತ್ಸಾಹ ಈಜಲು ಉತ್ತೇಜಿಸುತ್ತದೆ. ಈ ಉತ್ತೇಜನ ಮಾನಸಿಕ ಹುಮ್ಮಸ್ಸು ನೀಡಬಹುದೇ ವಿನಾ ದೈಹಿಕ ಕಸುವನ್ನು ನೀಡಲಾರದು. ಸ್ನೇಹಿತ/ ಸ್ನೇಹಿತೆಯರ ಎದುರು ತಾನು ಈಜು ಪ್ರದರ್ಶಿಸುತ್ತೇನೆಂದು ಹೊರಟರೆ ಸಮುದ್ರ ನುಂಗಿ ಬಿಡುತ್ತದೆ. ನವೆಂಬರ್ ಮತ್ತು ಡಿಸೆಂಬರ್ ಶಾಲಾ ಪ್ರವಾಸದ ತಿಂಗಳು. ಸಮುದ್ರ ನೋಡಬೇಕೆಂಬ ಹಂಬಲ ಸಹಜವೇ. ಆದರೆ ದಡದಲ್ಲಿದ್ದು ಸಮುದ್ರ ನೋಡಿದರೆ ಪ್ರವಾಸ ಅತ್ಯಂತ ಯಶಸ್ವಿಯಾಗುತ್ತದೆ. ಕೆಲವು ಸ್ಥಳಗಳಲ್ಲಿ ಇರುವ ಸೂಚನಾ ಫಲಕಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಎಚ್ಚರಿಕೆಯಿಂದ ಓದಬೇಕು. ಜೀವ ರಕ್ಷಕ ದಳದವರು ನೀಡುವ ಎಚ್ಚರಿಕೆಗಳನ್ನು ಸರಿಯಾಗಿ ಪಾಲಿಸಬೇಕು. ಶಿಕ್ಷಕರಂತೂ ಮೈಯೆಲ್ಲ ಕಣ್ಣಾಗಿರಬೇಕು. ಏಕೆಂದರೆ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಡಲಿನ ಕುರಿತಾಗಿ, ಅಪಾಯದ ಕುರಿತಾಗಿ ಅಷ್ಟಾಗಿ ಅರಿವು ಇರುವುದಿಲ್ಲ. ಮೇಲಾಗಿ ಹೆತ್ತವರು ಶಿಕ್ಷಕರ ಮೇಲೆ ಎಲ್ಲ ಭಾರ ಹಾಕಿ ಮಕ್ಕಳನ್ನು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಕಳುಹಿಸಿಕೊಡುತ್ತಾರೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ದುಬಾರಿ ಬೆಲೆ ತೆರಬೇಕಾದ ಪ್ರಮೇಯ ಬರಬಹುದು.
ಸಾಮಾನ್ಯವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಶಿಕ್ಷಕರು ಪೂರ್ಣ ಪ್ರಮಾಣದ ಜವಾಬ್ದಾರಿ ಹೊರುತ್ತಾರೆ. ಒಮ್ಮೊಮ್ಮೆ ಒಬ್ಬಿಬ್ಬರು ಮಾಡುವ ನಿರ್ಲಕ್ಷ್ಯದಿಂದಾಗಿ ಎಲ್ಲ ಶಿಕ್ಷಕರ ಕಡೆ ಬೆರಳು ತೋರಿಸುವಂತಾಗುತ್ತದೆ. ಕೆಲವೊಂದು ಬಾರಿ ವಿದ್ಯಾರ್ಥಿಗಳೂ ಸಹ ಅಪಾಯದ ಸೂಚನೆ ಉಲ್ಲಂ ಸುತ್ತಾರೆ. ದುರಂತವಾದಾಗ ಇದರ ಹೊಣೆಯನ್ನು ಶಿಕ್ಷಕರ ಮೇಲೆಯೇ ಹೊರಿಸುತ್ತಾರೆ.
ಒಟ್ಟಾರೆಯಾಗಿ ಪ್ರವಾಸ ಎನ್ನುವುದು ಬದುಕಿನಲ್ಲಿ ಪಡೆಯಬಹುದಾದ ಒಂದು ಆನಂದಾನುಭೂತಿ. ಇಂತಹ ಘಟನೆಗಳು ನಡೆದಾಗ ಶಿಕ್ಷಕರು, ಹೆತ್ತವರು, ಮಕ್ಕಳ ಆತ್ಮಸ್ಥೈರ್ಯ ಕುಗ್ಗಿಸು ವುದಂತೂ ಸುಳ್ಳಲ್ಲ. ಎಚ್ಚರಿಕೆ ಯೊಂದೇ ನಮ್ಮನ್ನು, ನಮ್ಮ ಪ್ರಾಣ ವನ್ನು ಕಾಪಾಡಬಲ್ಲದು.
– ನಾಗರಾಜ ಖಾರ್ವಿ, ಕಂಚುಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
National Youth Day: ಯುವ ಪೀಳಿಗೆಯ ಮಾರ್ಗದರ್ಶಿ ಸ್ವಾಮಿ ವಿವೇಕಾನಂದ
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.