ಕಾಲಮಿತಿ ಯಕ್ಷಗಾನಕ್ಕೆ ಇದು ಸಕಾಲ ; ಬದಲಾವಣೆ ಸಂಬಂಧ ಚರ್ಚೆಗಳು ಆರಂಭ
ಪ್ರದರ್ಶನದ ಸಂಬಂಧ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ
Team Udayavani, Oct 17, 2022, 6:30 AM IST
ಕಳೆದೆರಡು ವರ್ಷಗಳಿಂದ ಕರಾವಳಿಯ ಗಂಡುಕಲೆಯಾದ ಯಕ್ಷಗಾನ ಪ್ರದರ್ಶನದ ವೇಳೆಯಲ್ಲಿ ಬದಲಾವಣೆ ಸಂಬಂಧ ಚರ್ಚೆಗಳು ಆರಂಭಗೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿತ್ತು. ಪ್ರದರ್ಶನದ ಆರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿದ್ದರಾದರೂ ಮಧ್ಯರಾತ್ರಿಯಾಗುತ್ತಿದ್ದಂತೆಯೇ ಈ ಸಂಖ್ಯೆ ಕಡಿಮೆಯಾಗುತ್ತಿತ್ತು. ಆಟದ ಕೊನೆಯಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಷ್ಟೇ ಪ್ರೇಕ್ಷಕರಿರುತ್ತಿದ್ದರು. ಇಂಥ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿದಾಗ ಯಕ್ಷಗಾನ ಮೇಳಗಳು ಸಂದಿಗ್ಧತೆಯಲ್ಲಿ ಸಿಲುಕಿದವು. ಒಂದರ್ಥದಲ್ಲಿ ಕೊರೊನಾ ತಂದೊಡ್ಡಿದ ಸವಾಲು ಯಕ್ಷಗಾನ ಮೇಳಗಳು ಮತ್ತು ಕಲಾವಿದರಿಗೆ ಹೊಸ ಸಾಧ್ಯತೆಯೊಂದನ್ನು ತೆರೆದಿಟ್ಟಿತು. ಅದಕ್ಕೆ ತಕ್ಕಂತೆ ಕೆಲವೊಂದು ಮೇಳಗಳು ಕಾಲಮಿತಿ ಪ್ರದರ್ಶನಕ್ಕೆ ನಾಂದಿ ಹಾಡಿದ್ದೇ ಅಲ್ಲದೆ ಅದರಲ್ಲಿ ಯಶಸ್ಸನ್ನೂ ಕಂಡವು. ಈಗ ಇತರ ಮೇಳಗಳೂ ಇದೇ ಹಾದಿ ಹಿಡಿಯಲು ಮುಂದಾಗಿದ್ದರೆ ಮತ್ತೆ ಕೆಲವು ಹರಕೆ ಮೇಳಗಳು ಈ ಹಿಂದಿನಂತೆಯೇ ರಾತ್ರಿಯಿಡೀ ಪ್ರದರ್ಶನ ನೀಡಲು ಸಜ್ಜಾಗುತ್ತಿವೆ. ಕಾಲಮಿತಿ ಯಕ್ಷಗಾನ ಪ್ರದರ್ಶನದ ಸಂಬಂಧ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿರುವ ನಡುವೆಯೇ ಪ್ರಸಕ್ತ ಸಾಲಿನ ತಿರುಗಾಟಕ್ಕೆ ಮೇಳಗಳು ಅಣಿಯಾಗುತ್ತಿವೆ. ಕಾಲಮಿತಿ ಪ್ರದರ್ಶನದ ಪ್ರಯೋಜನಗಳ ಬಗೆಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಕರಾವಳಿಗರ ಆರಾಧನಾ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆ ಕೂಡ ಹೌದು. ಕಾಲದಿಂದ ಕಾಲಕ್ಕೆ ಹಲವಷ್ಟು ಬದಲಾವಣೆಗಳನ್ನು ಕಾಣುತ್ತಲೇ ಸಾಗಿ ಬಂದಿದೆ. ಆರಂಭದಲ್ಲಿ ಪೌರಾಣಿಕ ಕಥಾನಕಗಳ ಯಕ್ಷಗಾನ, ದಶಕಗಳು ಉರುಳಿದಂತೆ ಸಾಮಾಜಿಕ ಕಥೆಗಳು, ಅನಂತರ ಕಾಲ್ಪನಿಕ ಕಥೆಗಳು ಕೂಡ ರಂಗಸ್ಥಳದಲ್ಲಿ ಪ್ರದರ್ಶನ ಕಂಡವು. ಇವೆಲ್ಲವನ್ನೂ ಕಾಲಘಟ್ಟದ ಬದಲಾವಣೆಗಳಂತೆ ವಿಭಾಗಿಸಬಹುದು. ಆದರೆ ಇತ್ತೀಚಿನ ಯಕ್ಷಗಾನವನ್ನು ಬಹುಮುಖ್ಯವಾಗಿ ಎರಡು ವಿಭಾಗ ಮಾಡಬಹುದು. ಕೊರೊನಾ ಪೂರ್ವ ಯಕ್ಷಗಾನ ಮತ್ತು ಕೊರೊನೋತ್ತರ ಯಕ್ಷಗಾನ.
ಕೊರೊನಾ ಬಂದ ಅನಂತರ ಯಕ್ಷಗಾನದಲ್ಲಿ ಹಲವಷ್ಟು ಬದಲಾವಣೆಗಳಾಗಿವೆ. ಯಕ್ಷಗಾನವೆಂದರೆ ರಾತ್ರಿಗೆ ಆರಂಭ ಎನ್ನುತ್ತಿದ್ದ ಹರಕೆ ಮೇಳಗಳು ಕೂಡ ಮಧ್ಯಾಹ್ನವೇ ಯಕ್ಷಗಾನ ಶುರು ಮಾಡುವ ಸಂದರ್ಭ ಬಂದಿತ್ತು. ಪ್ರೇಕ್ಷಕರು ಇಲ್ಲದೇ ಪ್ರದರ್ಶನ ಆರಂಭಿಸಲೇಬೇಕಾದ ಅನಿವಾರ್ಯ ಬಂದಾಗ ಫೇಸ್‌ಬುಕ್ ಮತ್ತು ಯುಟ್ಯೂಬ್ ಲೈವ್ ಮೂಲಕ ಯಕ್ಷಗಾನ ಪ್ರದರ್ಶನಗಳು ನಡೆದಿವೆ. ನೇರಪ್ರಸಾರದ ಮೂಲಕ ಆನ್‌ಲೈನ್ ಪ್ರೇಕ್ಷಕರಿಗೆ ಯಕ್ಷಗಾನ ಉಣಬಡಿಸುವ ಕಾರ್ಯವೂ ಆಗಿದೆ. ಒಮ್ಮೆ ಮೇಳ ಹೊರಟ ಮೇಲೆ ಮೇ ತನಕ ನಿರಂತರವಾಗಿ ಪ್ರದರ್ಶನಗಳು ನಡೆಯುವ ಸಂಪ್ರದಾಯ ಅರ್ಧಕ್ಕೆ ನಿಂತಿತು. ಒಂದು ದಿನವೂ ಆಟ ಇಲ್ಲದೆ ಇರುತ್ತಿದ್ದ ಮೇಳಗಳು, ಗಣಪತಿ ಪೂಜೆಯಷ್ಟೇ ಮಾಡಿ ಆಟ ನಿಲ್ಲಿಸಬೇಕಾಯಿತು. 10 ಜನರಷ್ಟೇ ಸೇರಿ ಮುಕ್ತಾಯದ ಯಕ್ಷಗಾನ ಸೇವೆ ಮಾಡಬೇಕಾಯಿತು.
ಕೊರೊನಾದಿಂದ ಅನೇಕ ಕಲಾವಿದರಿಗೆ ಸಂಕಷ್ಟ ಆಗಿತ್ತು. ಆದರೂ ಕೊರೊನಾದಿಂದ ಯಕ್ಷಗಾನಕ್ಕೆ ಆದ ಧನಾತ್ಮಕ ಅಂಶವೆಂದರೆ ಪ್ರೇಕ್ಷಕ ವರ್ಗದ ಸಂಚಲನ. ಆಟ ಆರಂಭವಾಗುತ್ತಿದ್ದ ವೇಳೆ ಅಂದರೆ ಸಂಜೆ 6 ಅಥವಾ 7 ಗಂಟೆಗೆ ಪ್ರೇಕ್ಷಕ ವರ್ಗದ ತುಂಬು ಉಪಸ್ಥಿತಿ ಇರುತ್ತಿತ್ತು. ಅಂದರೆ ಎಲ್ಲ ಆಟದಲ್ಲೂ ಕನಿಷ್ಠ 800 ಪ್ರೇಕ್ಷಕರು ಇದ್ದಿದ್ದರು. ರಾತ್ರಿ ಸುಮಾರು 12ಗಂಟೆಗೆ ಆಟ ಮುಗಿಯುವ ತನಕ ಅಷ್ಟೇ ಸಂಖ್ಯೆಯ ಪ್ರೇಕ್ಷಕರು ಇರುತ್ತಿದ್ದರು. ಸ್ಥೂಲವಾಗಿ ಆಲೋಚಿಸಿ ನೋಡಿದರೆ ಅವರು ಯಾರೂ ಕೂಡ ಹೊಸ ಪ್ರೇಕ್ಷಕರಾಗಿರಲಿಲ್ಲ. ಎಲ್ಲರೂ ಯಕ್ಷಗಾನಾಸಕ್ತರು ಮತ್ತು ಹಿಂದೆ ಆಟ ನೋಡಿದವರೇ ಆಗಿದ್ದರು. ಅವರೆಲ್ಲರೂ ಮತ್ತೆ ಯಕ್ಷಗಾನದತ್ತ ಮುಖ ಮಾಡಲು, ಅಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಯಕ್ಷಗಾನದತ್ತ ಆಕರ್ಷಿತರಾಗಲು ಪ್ರಧಾನ ಕಾರಣ ರಾತ್ರಿಯ ಸುಖ ನಿದ್ರೆಗೆ ಭಂಗ ಇಲ್ಲ ಎಂಬುದು.
ಈ ವರ್ಷದ ನವೆಂಬರ್‌ನಲ್ಲಿ ಸಂಕ್ರಮಣ ಮುಗಿಯುತ್ತಿದ್ದಂತೆ ಯಕ್ಷಗಾನ ಮೇಳಗಳು ಗೆಜ್ಜೆ ಕಟ್ಟಿಕೊಳ್ಳುತ್ತವೆ. ಮೇ ಕೊನೆಯ ತನಕ ವ್ಯಾವಸಾಯಿಕ ಮೇಳಗಳು ತಿರುಗಾಟ ಮುಂದುವರಿಸುತ್ತವೆ. ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಯಕ್ಷಗಾನವು ಬದಲಾವಣೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಬದಲಾವಣೆಗೆ ಈಗಾಗಲೇ ಕೆಲವು ಮೇಳಗಳು ಒಗ್ಗಿಕೊಂಡು ಕಾಲಮಿತಿ ಪ್ರದರ್ಶನ ಆರಂಭಿಸಿವೆ. ಹಾಗೆಯೇ ಎಲ್ಲ ಮೇಳಗಳು ಕೂಡ ಕಾಲಮಿತಿಗೆ ಒಳಪಡುವುದು ಪ್ರಸಕ್ತ ಕಾಲಕ್ಕೆ ಹೆಚ್ಚು ಒಳಿತು. ಸಂಜೆ ಗಂಟೆ 7ರಿಂದ ಆರಂಭಿಸಿ ರಾತ್ರಿ ಗಂಟೆ 2ರ ತನಕ ಆಟ ಮಾಡಬಹುದು. ಹೀಗೆ ಬರೋಬ್ಬರಿ 7 ಗಂಟೆ ಆಟ ಮಾಡಿದರೆ ಪ್ರಸಂಗಕ್ಕೂ ಕತ್ತರಿ ಬೀಳುವುದಿಲ್ಲ. ಕನಿಷ್ಠ 5 ಗಂಟೆ ಆಟ ಮಾಡಿದರೂ 2 ಪ್ರಸಂಗ ಪ್ರದರ್ಶನಕ್ಕೆ ಧಾರಾಳ ಸಾಕು. ಮರುದಿನ ಎಂಥದ್ದೇ ಕೆಲಸ ಇದ್ದರೂ ಪ್ರೇಕ್ಷಕರು ಹಾಜರಿರುತ್ತಾರೆ. ಯಾಕೆಂದರೆ ನಿದ್ರೆ ಭಂಗ ಇಲ್ಲ.
ಬೆಳಕಿನ ಸೇವೆ ಇಡೀ ರಾತ್ರಿ ಬೇಕು ಎಂಬ ಕೆಲವರ ವಾದವನ್ನೂ ಅಲ್ಲಗೆಳೆಯುವಂತಿಲ್ಲ. ಆದರೆ ಆಗಿನ ಕರಾವಳಿಯ ಕೃಷಿಕರಿಗೆ ಯಕ್ಷಗಾನ ಒಂದೇ ಮನೋರಂಜನೆ ಆಗಿತ್ತು. ರಾತ್ರಿ ನಿದ್ರೆ ಬಿಟ್ಟು ಆಟ ನೋಡಿ ಮರುದಿನ ನಿದ್ರೆ ಮಾಡುವಷ್ಟು ಪುರಸೊತ್ತು ಕೂಡ ಇದ್ದಿತ್ತು. ಆದರೆ ಈಗಿನ ಓಡುವ ಜಗತ್ತಿನ ಪ್ರೇಕ್ಷಕ ಪ್ರಭುಗಳಿಗೆ ಇಡೀ ರಾತ್ರಿ ನಿದ್ರೆ ಬಿಡುವುದು ಕಷ್ಟ. “ಕಾಲಮಿತಿಯಾದರೆ ಕಲಾವಿದರಿಗೆ ಕತ್ತರಿ’ ಎಂಬ ಮಾತು ಕೂಡ ಸುಳ್ಳು. ಹರಕೆ ಮೇಳಗಳ ಆಟದ ವೀಳ್ಯದಲ್ಲಿ ಯಾವ ಕಡಿಮೆಯೂ ಇಲ್ಲ. ಹಾಗಾಗಿ ಎಲ್ಲ ಕಲಾವಿದರನ್ನು ಉಳಿಸಿಕೊಂಡೇ ಕಾಲಮಿತಿ ಪ್ರದರ್ಶನ ನಡೆಯಲಿ. ಇನ್ನು ಡೇರೆ ಮೇಳಗಳು ಇಡೀ ರಾತ್ರಿ ಆಟಕ್ಕೆ ಈ ವರ್ಷ ಸಂಘಟಕರ ಕೊರತೆ ಅನುಭವಿಸುವ ಸಾಧ್ಯತೆ ಇದೆ. ಆಟ ಮುಗಿದು ಮಧ್ಯರಾತ್ರಿ ಎಲ್ಲಿಗೆ ಹೋಗುವುದು ಎಂಬುದು ಇನ್ನು ಕೆಲವರ ವಾದ. ಈಗ ಬಹುತೇಕ ಎಲ್ಲರಲ್ಲೂ ಒಂದಲ್ಲ ಒಂದು ವಾಹನ ಇದೆ. ಈ ಹಿಂದಿನಂತೆ ಚೆಂಡೆ ಸದ್ದು ಕೇಳಿಕೊಂಡೇ ಹತ್ತಾರು ಕಿ.ಮೀ. ದೂರ ಆಟಕ್ಕೆ ಹೋಗುವ ಪ್ರೇಕ್ಷಕ ವರ್ಗ ಇಲ್ಲ. ಇದ್ದರೂ ಅವರಲ್ಲಿ ವಾಹನ ಇದೆ.
ಯಕ್ಷಗಾನ ಕಲಾವಿದರಿಗೆ ಈ ತನಕ ಒಂದು ತೊಡಕು ಇತ್ತು. ಅವರು ತಮ್ಮ ಜೀವನಕ್ಕಾಗಿ ಯಕ್ಷಗಾನವನ್ನೇ ಅವಲಂಬಿಸಬೇಕಿತ್ತು ಮತ್ತು ಯಕ್ಷಗಾನ ಕೇವಲ 6 ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಈ ರೀತಿ ಕಾಲಮಿತಿಗೆ ಒಳಪಟ್ಟರೆ ಯಕ್ಷಗಾನದ ಜತೆಗೆ ಉಪ ವೃತ್ತಿಯನ್ನು ಕೂಡ ಅನಾಯಾಸವಾಗಿ ಮಾಡಬಹುದು. ಅದಲ್ಲದೆ ಹಗಲು ನಿದ್ರಿಸಿ, ರಾತ್ರಿ ದುಡಿಯುವ ಯಕ್ಷಗಾನ ಕಲಾವಿದರ ಬದುಕು ಪ್ರಕೃತಿಗೆ ವಿರುದ್ಧವಾದುದು. ವೈಜ್ಞಾನಿಕವಾಗಿ ಇದು ಆರೋಗ್ಯಕ್ಕೂ ಹಾನಿಕರ. ಹಾಗಾಗಿ ಕಾಲಮಿತಿಗೆ ಒಳಪಡುವುದು ಯಕ್ಷಗಾನ ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮ.
ಈಗಾಗಲೇ ಇಡೀ ರಾತ್ರಿ ಯಕ್ಷಗಾನ ಆಡುತ್ತಿರುವ ಮೇಳಗಳಲ್ಲಿ, ರಾತ್ರಿ ಗಂಟೆ 12ರ ಅನಂತರ ಪ್ರೇಕ್ಷಕರು ಇಲ್ಲ. ಚಾ-ತಿಂಡಿ ಬರುತ್ತಲೇ ಜಾಗ ಖಾಲಿ ಮಾಡುತ್ತಾರೆ. ಪ್ರೇಕ್ಷಕರಿಲ್ಲದೆ ಆಟ ಮಾಡುವುದರಿಂದ ಕಲಾವಿದರ ಬೆಳವಣಿಗೆ ಸಾಧ್ಯವೇ? ಈಗಾಗಲೇ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುತ್ತಿರುವ ಮೇಳಗಳಿಗೆ ಭರ್ತಿ ಪ್ರೇಕ್ಷಕರಿ¨ªಾರೆ. ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇಲ್ಲ, ಅವರಿಗಿರುವುದು ಸಮಯದ ಅಭಾವ. ಕಾಲಮಿತಿ ಯಕ್ಷಗಾನ ಎನ್ನುವುದು ಕಲಾವಿದರಿಗೂ ಹಿತ, ಪ್ರೇಕ್ಷಕರಿಗೂ ಹಿತ. ಆದುದರಿಂದ ಇದುವೇ ಕಾಲಮಿತಿ ಯಕ್ಷಗಾನಕ್ಕೆ ಸಕಾಲ.
ನಾಗರಾಜ್ ಶೆಟ್ಟಿ ನೈಕಂಬ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.