ಮತ್ತೆ ಹಾರಲಿವೆ ಜೆಟ್ ಏರ್‌ವೇಸ್ ವಿಮಾನಗಳು!
Team Udayavani, Oct 28, 2021, 6:00 AM IST
2019ರಲ್ಲಿ ದಿವಾಳಿಯಾಗಿ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದ ಜೆಟ್ ಏರ್‌ವೇಸ್ ಕಂಪೆನಿಯ ವಿಮಾನಗಳು ಮತ್ತೆ ಆಗಸದಲ್ಲಿ ಹಾರಾಟ ನಡೆಸಲು ಸಿದ್ಧತೆಗಳು ನಡೆದಿವೆ. ಜೆಟ್ ಏರ್‌ವೇಸ್‌ನ ಹೊಸ ಆಡಳಿತವು 2022ರ ಮೊದಲ ತ್ತೈಮಾಸಿಕದಲ್ಲಿ ದೇಶೀಯ ವಿಮಾನಯಾನ ಹಾಗೂ 3 ಅಥವಾ 4ನೇ ತ್ತೈಮಾಸಿಕದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪ್ರಾರಂಭಿಸುವ ಮುನ್ಸೂಚನೆಯನ್ನು ನೀಡಿದೆ.
ಭಾರೀ ನಷ್ಟದಲ್ಲಿ ಸಿಲುಕಿ ದಿವಾಳಿಯಾಗಿದ್ದ ನರೇಶ್ ಗೋಯಲ್ ಒಡೆತನದ ಜೆಟ್ ಏರ್‌ವೇಸ್ ಕಂಪೆನಿಯನ್ನು 1,375 ಕೋಟಿ ರೂ. ಪರಿಹಾರ ನೀಡಿ ಖರೀದಿಸಲು ಜಲನ್- ಕ್ಯಾಲ್ರಾಕ್ ಒಕ್ಕೂಟವು ಯೋಜನೆಯನ್ನು ಸಲ್ಲಿಸಿದ್ದು, ಇದನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅನುಮೋದಿಸಿದೆ. ಹೀಗಾಗಿ ಕಂಪೆನಿಯ ವಿಮಾನಗಳ ಹಾರಾಟ ಪುನರಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಹಲವು ಸಿದ್ಧತೆಗಳನ್ನು ನಡೆಸಬೇಕಿರುವುದರಿಂದ 2022ರ ಜನವರಿ- ಮಾರ್ಚ್ ನಡುವೆ ಕಂಪೆನಿಯ ಮೊದಲ ವಿಮಾನ ಹೊಸದಿಲ್ಲಿ- ಮುಂಬಯಿ ನಡುವೆ ಹಾರಾಟ ನಡೆಸಲಿದೆ.
ಜೆಟ್ ಏರ್‌ವೇಸ್ ಮುಚ್ಚಿದ್ದು ಯಾಕೆ?
ಒಟ್ಟು 120 ವಿಮಾನಗಳನ್ನು ಹೊಂದಿದ್ದ ಜೆಟ್ ಏರ್‌ವೇಸ್ “ದ ಜಾಯ್ ಆಫ್ ಫ್ಲೈಯಿಂಗ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ವಿಮಾಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಕಂಪೆನಿಯು ದಿನಕ್ಕೆ 650 ವಿಮಾನಗಳನ್ನು ನಿಯಂತ್ರಿಸುತ್ತಿತ್ತು. ಆದರೆ 2019ರ ವೇಳೆಗೆ ಕೇವಲ 16 ವಿಮಾನಗಳು ಅದರ ಒಡೆತನದಲ್ಲಿದ್ದು, 5,535.75 ಕೋ.ರೂ. ಭಾರೀ ನಷ್ಟದಲ್ಲಿತ್ತು. ವಿಪರೀತ ಸಾಲದ ಹೊರೆಯ ಪರಿಣಾಮ, 2019ರ ಎಪ್ರಿಲ್ 17ರಂದು ಕಂಪೆನಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು.
ಜಲನ್- ಕ್ಯಾಲ್ರಾಕ್ ಒಕ್ಕೂಟ ಎಂದರೇನು?
ಮೂಲತಃ ರಾಂಚಿಯವರಾದ ಮುರಾರಿ ಲಾಲ್ ಜಲನ್ ಅವರ ತಂದೆ ಪೇಪರ್ ವ್ಯಾಪಾರಿಯಾಗಿದ್ದರು. 1988ರಲ್ಲಿ ಕ್ಯೂಎಸ್‌ಎಸ್ ಹೆಸರಿನ ಫೋಟೋ ಕಲರ್ ಲ್ಯಾಬ್ ತೆರೆದರು. ಅನಂತರ ಬಿಐಟಿ ಮೆಸ್ರಾದಲ್ಲಿ ಕೆಮರಾ ತಯಾರಿಕ ಘಟಕವನ್ನು ಸ್ಥಾಪಿಸಿದರು. ಅನಂತರದ ದಿನಗಳಲ್ಲಿ ತಮ್ಮ ವ್ಯವಹಾರವನ್ನು ಯುಎಇಗೆ ವಿಸ್ತರಿಸಿದ ಜಲನ್ ಪ್ರಸ್ತುತ ಯುಎಇ ಮತ್ತು ಉಜ್ಬೇಕಿಸ್ಥಾನದಲ್ಲಿ ಎಂಜೆ ಡೆವಲಪರ್ಸ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಇದರೊಂದಿಗೆ ಅವರು ಗಣಿಗಾರಿಕೆ, ವ್ಯಾಪಾರ, ಡೈರಿ, ಪ್ರವಾಸೋದ್ಯಮ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಅವರು ಅಮೆರಿಕ, ರಷ್ಯಾ, ಉಜ್ಬೇಕಿಸ್ಥಾನ ಸೇರಿದಂತೆ ಅನೇಕ ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಕ್ಯಾಲ್ರಾಕ್ ಯುಕೆ ಮೂಲದ ಹೂಡಿಕೆ ತಂಡ. ಕಳೆದ ಎರಡು ದಶಕಗಳಿಂದ ಹೂಡಿಕೆ ವ್ಯವಹಾರಗಳನ್ನು ನಡೆಸುತ್ತಿದೆ. ಇದರ ಅಧ್ಯಕ್ಷರು ಮೂಲತಃ ಜರ್ಮನಿಯವರಾದ ಫ್ಲೋರಿಯಲ್ ಫ್ರೆಚ್. ಜಲನ್ ಮತ್ತು ಕ್ಯಾಲ್ರಾಕ್ ಮುಂದಾಳತ್ವದ ವ್ಯಾಪಾರ ಕೂಟವೇ ಜಲನ್-ಕ್ಯಾಲ್ರಾಕ್ ಒಕ್ಕೂಟ.
ಇದನ್ನೂ ಓದಿ:ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ
ಹೊಸ ಆಡಳಿತದ ಮುಂದಿದೆ ಹಲವು ಸವಾಲುಗಳು
ಜೆಟ್ ಏರ್‌ವೇಸ್ ಇದೀಗ ಹೊಸ ಆಡಳಿತಕ್ಕೆ ಒಳಪಟ್ಟಿದ್ದರೂ ಸದ್ಯ ಕಂಪೆನಿ ಯಾವುದೇ ಸ್ವಂತ ವಿಮಾನ ಹೊಂದಿಲ್ಲ. ಮುಂದಿನ ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ನಿರ್ವಹಿಸಲು ಯೋಜನೆ ರೂಪಿಸಲಾಗುತ್ತದೆ. 2022ರ ಪ್ರಾರಂಭದಲ್ಲಿ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಅನಂತರ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಿಸಿಲು ಕಂಪೆನಿ ಚಿಂತನೆ ನಡೆಸುತ್ತಿದೆ. ಕಂಪೆನಿಗಳಿಂದ ವಿಮಾನಗಳನ್ನು ಲೀಸ್‌ಗೆ ಪಡೆದು ದೇಶೀಯ ವಿಮಾನ ಯಾನ ಆರಂಭಿಸಲು ನಿರ್ಧರಿಸಲಾಗಿದ್ದು ಈ ಸಂಬಂಧ ವಿಮಾನ ಕಂಪೆನಿಗಳೊಂದಿಗೆ ಮಾತುಕುತೆ ನಡೆದಿದೆ. ಕೆಲವೊಂದು ಕಂಪೆನಿಗಳು ವಿಮಾನಗಳನ್ನು ಲೀಸ್‌ಗೆ ನೀಡಲು ಆಸಕ್ತಿ ತೋರಿವೆ ಎಂದು ಜೆಟ್ ಏರ್‌ವೇಸ್ ನ ಹಂಗಾಮಿ ಸಿಇಒ ಕ್ಯಾ| ಸುಧೀರ್ ಗೌರ್ ತಿಳಿಸಿದರು. ಕಂಪೆನಿಯ ಮುಂದಿರುವ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಸ್ಲಾಟ್ ಮತ್ತು ಪಾರ್ಕಿಂಗ್ ಸ್ಥಳ. ಈ ಬಗ್ಗೆಯೂ ಕಂಪೆನಿ ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದೆ.
ಮಾಜಿ ಉದ್ಯೋಗಿಗಳಿಂದ ವಿರೋಧ
ಜೆಟ್ ಏರ್‌ವೇಸ್‌ನ ಹೊಸ ಆಡಳಿತವು ಮಾನವ ಸಂಪನ್ಮೂಲ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಪೈಲಟ್‌ಗಳು, ಕ್ಯಾಬಿನ್ ಸಿಬಂದಿ, ನೆಟ್‌ವರ್ಕ್ ಯೋಜಕರು ವಿಮಾನಗಳ ಕಾರ್ಯಾಚರಣೆಗೆ ಅತ್ಯಗತ್ಯವಾಗಿದೆ. ಈವರೆಗೆ ಕಂಪೆನಿಯು 150ಕ್ಕೂ ಹೆಚ್ಚು ಖಾಯಂ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ನೇಮಕಕ್ಕೆ ಕಂಪೆನಿ ಯೋಜನೆ ರೂಪಿಸಿದೆ. ಏತನ್ಮಧ್ಯೆ ಜೆಟ್ ಏರ್‌ವೇಸ್ ನ ಮಾಜಿ ಉದ್ಯೋಗಿಗಳು ಕಂಪೆನಿಯು ಕಂಪೆನಿಯ ಆಡಳಿತವನ್ನು ಜಲನ್-ಕ್ಯಾಲ್ರಾಕ್ ಒಕ್ಕೂಟಕ್ಕೆ ನೀಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದು ಇದನ್ನು ಮಂಡಳಿ ಸ್ವೀಕರಿಸಿ ಈ ಸಂಬಂಧ ಒಕ್ಕೂಟದ ಅಭಿಪ್ರಾಯವನ್ನು ಕೋರಿದೆ.
2019ರಲ್ಲಿ ಜೆಟ್ ಏರ್‌ವೇಸ್ ಕಾರ್ಯಾಚರಣೆ ನಿಲ್ಲಿಸಿದ ಸಂದರ್ಭದಲ್ಲಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಉದ್ಯೋಗಿಗಳಿಗೆ 3 ರಿಂದ 85 ಲಕ್ಷ ರೂ.ಗಳವರೆಗೆ ಬಾಕಿ ಉಳಿಸಿಕೊಂಡಿತ್ತು. ಆದರೆ ಜಲನ್-ಕ್ಯಾಲ್ರಾಕ್ ಒಕ್ಕೂಟವು ಪ್ರತೀ ಉದ್ಯೋಗಿಗೆ 23 ಸಾವಿರ ರೂ. ನೀಡಲು ಮುಂದಾಗಿದ್ದು ಇದನ್ನು ಬಹುತೇಕ ಮಾಜಿ ಉದ್ಯೋಗಿಗಳು ತಿರಸ್ಕರಿಸಿದ್ದಾರೆ. ಒಟ್ಟಾರೆ ಕಂಪೆನಿಯಿಂದ ಉದ್ಯೋಗಿಗಳಿಗೆ 1,265 ಕೋಟಿ ರೂ. ಬಾಕಿ ಇದ್ದು, ಇದಕ್ಕಾಗಿ ಒಕ್ಕೂಟ ಕೇವಲ 52 ಕೋಟಿ ರೂ. ನೀಡಲು ತೀರ್ಮಾನಿಸಿದೆ. ಇಷ್ಟು ಮಾತ್ರವಲ್ಲದೆ ಕಂಪೆನಿಗೆ ಈ ಹಿಂದೆ ಸಾಲ ನೀಡಿದ ಪಂಜಾಬ್ ನ್ಯಾಶನಲ್ ಬ್ಯಾಂಕ್, ಕೂಡ ಒಕ್ಕೂಟದ ವಿರುದ್ಧ ನ್ಯಾಯಮಂಡಳಿಯ ಮೊರೆ ಹೋಗಿದೆ.
2019ರಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಿದ ಅನಂತರ ಜೆಟ್ ಏರ್‌ವೇಸ್ ನ ಕೆಲವೊಂದು ಪ್ರಮುಖ ಸ್ಲಾಟ್‌ಗಳನ್ನು ಇತರ ಕಂಪೆನಿಗಳಿಗೆ ನೀಡಲಾಗಿದೆ. ಇದೀಗ ಮತ್ತೆ ಈ ಸ್ಲಾಟ್‌ಗಳನ್ನು ಪಡೆದುಕೊಳ್ಳುವುದು ಕಂಪೆನಿಗೆ ಕಷ್ಟಸಾಧ್ಯ ವಾಗಲಿದೆ. ಕೊರೊನಾ ವಿಮಾನಯಾನ ವಲಯದ ಮೇಲೂ ಪರಿಣಾಮ ಬೀರಿರುವುದರಿಂದ ಇದರಲ್ಲಿ ಕೆಲವು ಸ್ಲಾಟ್‌ಗಳನ್ನು ಜಲನ್-ಕ್ಯಾಲ್ರಾಕ್ ಒಕ್ಕೂಟ ಪಡೆದುಕೊಳ್ಳಲು ಸಾಧ್ಯವಿದೆ.
ಆಕಾಶದಿಂದ ಭೂಮಿಗಿಳಿದ ಜೆಟ್
1993 ಬೋರ್ಡಿಂಗ್ 737 ಮತ್ತು ಬೋರ್ಡಿಂಗ್ 300ರ ಹಾರಾಟದ ಮೂಲಕ ಜೆಟ್ ಏರ್‌ವೇಸ್ ಕಂಪೆನಿಯ ವಿಮಾನಯಾನ ಸೇವೆಗೆ ಚಾಲನೆ.
2006 ಏರ್ ಸಹಾರಾವನ್ನು 50 ಕೋಟಿ ರೂ. ಗೆ ಖರೀದಿಸಿ ಕಂಪೆನಿಯಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭ.
2012 ದೇಶೀಯ ಶೇರು ಮಾರುಕಟ್ಟೆಯಲ್ಲಿ ಜೆಟ್ ಏರ್‌ವೇಸ್ ಅನ್ನುಹಿಂದಿಕ್ಕಿದ ಇಂಡಿಗೋ ಕಂಪೆನಿ.
2013 ಎತಿಹದ್‌ನಿಂದ ಜೆಟ್ ಏರ್‌ವೇಸ್‌ನ ಶೇ.24ರಷ್ಟು ಶೇರುಗಳ ಖರೀದಿ, ನರೇಶ್ ಗೋಯಲ್ ಬಳಿ ಶೇ.51ರಷ್ಟು ಶೇರುಗಳ ಉಳಿಕೆ.
2018 ಜನವರಿ- ಮಾರ್ಚ್ ತ್ತೈಮಾಸಿಕ ಅವಧಿಯಲ್ಲಿ ಹಿಂದಿನ 12 ತ್ತೈಮಾಸಿಕಗಳಲ್ಲಿಯೇ ಮೊದಲ ಬಾರಿಗೆ ಕಂಪೆನಿಗೆ ಭಾರೀ ನಷ್ಟ.
2018 ವೇಳೆಗೆ ಕಂಪೆನಿ ಯಿಂದ ಉದ್ಯೋಗಿ ಗಳ ಸಂಬಳದಲ್ಲಿ ಶೇ. 25ರಷ್ಟು ಕಡಿತಗೊಳಿಸುವ ಘೋಷಣೆ.
2018 ದೇಶಿಯ ವಿಮಾನ ಯಾನದ ವೇಳೆ ಯಾನಿಗಳಿಗೆ ನೀಡುತ್ತಿದ್ದ ಉಚಿತ ಆಹಾರ ಪೂರೈಕೆ ಸ್ಥಗಿತ.
2019 ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಕಂತನ್ನು ಕಟ್ಟುವಲ್ಲಿ ಕಂಪೆನಿ ವಿಫಲ.
2019 ನರೇಶ್ ಗೋಯಲ್ ಕಂಪೆನಿಯ ಅಧ್ಯಕ್ಷ ಹುದ್ದೆ ಮತ್ತು ಬೋರ್ಡ್‌ಗೆ ರಾಜೀನಾಮೆ.
2019ರ ಎಪ್ರಿಲ್ 17ರಂದು ರಾತ್ರಿ 10ಕ್ಕೆ ಅಮೃತಸರದಿಂದ ಮುಂಬಯಿಗೆ ಜೆಟ್‌ನ ಕೊನೆಯ ವಿಮಾನದ ಸಂಚಾರ.ಜೆಟ್ ಕಂಪೆನಿ ಮುಚ್ಚಲು ಮುಖ್ಯ ಕಾರಣ
2006ರಲ್ಲಿ ದುಬಾರಿ ಮೊತ್ತವನ್ನು ಪಾವತಿಸಿ ಏರ್ ಸಹಾರಾ ಖರೀದಿ ಮಾಡಿದ ಜೆಟ್ ಏರ್‌ವೇಸ್ ಅನಂತರ ಇದರಿಂದ ನಷ್ಟ ಅನುಭವಿಸಿತ್ತು.
ಇಂಡಿಗೋ ಕಂಪೆನಿಯು ಕಡಿಮೆ ದರದಲ್ಲಿ ಟಿಕೆಟ್ ವಿತರಣೆ ಮಾಡಿ ಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತಿದ್ದರೂ ಜೆಟ್ ಏರ್‌ವೇಸ್ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಜೆಟ್ ಏರ್‌ವೇಸ್ ಹೂಡಿಕೆದಾರರನ್ನು ಸೆಳೆಯುವಲ್ಲಿಯೂ ವಿಫಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.