ಬೈಡೆನ್ ಬಂದರೆ ಭಾರತಕ್ಕೇನಿದೆ?
Team Udayavani, Jan 20, 2021, 7:20 AM IST
ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಮುಂದಿನ ಹೆಜ್ಜೆಗಳ ಬಗ್ಗೆ ಜಗತ್ತು ತೀವ್ರ ಕುತೂಹಲ ತಾಳಿದೆ. ಭಾರತವೂ ಸಹ ಬೈಡೆನ್ ಸರಕಾರದ ವಿದೇಶಾಂಗ ನೀತಿ ಹೇಗಿರಬಹುದು ಎನ್ನುವುದನ್ನು ಲೆಕ್ಕಾಚಾರ ಹಾಕುತ್ತಿದೆ. ಟ್ರಂಪ್ ಅವಧಿಯಲ್ಲಿ ಭಾರತದೆಡೆಗಿನ ಅಮೆರಿಕದ ನೀತಿಗಳು ಹೇಗಿದ್ದವು, ಬೈಡೆನ್ ಅವಧಿಯಲ್ಲಿ ಹೇಗಿರಬಹುದು? ಇಲ್ಲಿದೆ ಮಾಹಿತಿ….
ರಕ್ಷಣ ಕ್ಷೇತ್ರದಲ್ಲಿ ಯಥಾಸ್ಥಿತಿ? :
ಟ್ರಂಪ್ ಅವಧಿಯಲ್ಲಿ ಅಮೆರಿಕ ಭಾರತದೊಂದಿಗೆ ಮೂರು ಪ್ರಮುಖ ರಕ್ಷಣ ಒಪ್ಪಂದಗಳನ್ನು ಮಾಡಿಕೊಂಡಿದೆ. ಮೋದಿಯವರು ಅಮೆರಿಕಕ್ಕೆ ಹೋಗಿ “ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಟ್ರಂಪ್ ಭಾರತಕ್ಕೆ ಬಂದಾಗ ಮೋದಿ ಸರಕಾರ ಅದ್ದೂರಿ “ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಿದ್ದನ್ನು ಪರಿಗಣಿಸಿದಾಗ, ಈ ರೀತಿಯ ಮೈತ್ರಿ ಮೋದಿ-ಬೈಡೆನ್ ನಡುವೆ ಇರಲಾರದು ಎನ್ನಲಾಗುತ್ತಿದೆ. ಆದರೂ ಭಾರತದೆಡೆಗಿನ ವಿದೇಶಾಂಗ ನೀತಿಯಲ್ಲಿ ಹುಬ್ಬೇರಿಸುವಂಥ ಬದಲಾವಣೆಗಳೇನೂ ಬೈಡೆನ್ ಅವಧಿಯಲ್ಲಿ ಆಗುವುದಿಲ್ಲ ಎನ್ನುತ್ತಾರೆ ಪರಿಣತರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನದ ಮಿಲಿಟರಿ ಶಕ್ತಿ ಅಮೆರಿಕಕ್ಕೆ ಯಾವಾಗಲೂ ತಲೆನೋವಾಗಿಯೇ ಇರಲಿದೆ. ಆ ಭಾಗದಲ್ಲಿ ಚೀನ ಓಟಕ್ಕೆ ಅಡ್ಡಗಾಲು ಹಾಕಬೇಕೆಂದರೆ ಭಾರತ ಮುಖ್ಯ ಎನ್ನುವುದು ರಿಪಬ್ಲಿಕನ್ನರಿಗಷ್ಟೇ ಅಲ್ಲ, ಡೆಮಾಕ್ರಾಟ್‌ಗಳಿಗೂ ಚೆನ್ನಾಗಿಯೇ ತಿಳಿದಿದೆ. ಇನ್ನು ಅಮೆರಿಕ, ಜಪಾನ್, ಆಸ್ಟ್ರೇಲಿಯ ಹಾಗೂ ಭಾರತದ ನಡುವೆ ರಚನೆಯಾಗಿರುವ “ಕ್ವಾಡ್’ ಸಮೂಹವೂ ಅಮೆರಿಕದ ಪಾಲಿಗೆ ಬಹುಮುಖ್ಯವಾಗಲಿದೆ. ಈ ಕಾರಣಕ್ಕಾಗಿಯೇ, ಬೈಡೆನ್ ಸಹ ಕ್ವಾಡ್‌ನ ಅಗತ್ಯವನ್ನು ಒಪ್ಪಿಕೊಂಡು, ಬೆಂಬಲಿಸಿದ್ದರು. ಈಗಲೂ ಅವರು ತಮ್ಮ ನೀತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ವ್ಯಾಪಾರ ಒಪ್ಪಂದಗಳಲ್ಲಿ ಸುಧಾರಣೆ? :
ಕಳೆದ 20 ವರ್ಷಗಳಿಂದ ನಿರಂತರವಾಗಿ ಭಾರತವು ಟ್ರೇಡ್ ಸರ್‌ಪ್ಲಸ್ ವಹಿವಾಟು ನಡೆಸುತ್ತಿರುವ ಜಗತ್ತಿನ ದೊಡ್ಡ ರಾಷ್ಟ್ರಗಳಲ್ಲಿ ಅಮೆರಿಕ ಕೂಡ ಒಂದು. ಸರಳವಾಗಿ ಹೇಳಬೇಕೆಂದರೆ, ನಾವು ಅಮೆರಿಕದಿಂದ ಆಮದು ಮಾಡಿಕೊಳ್ಳುವುದಕ್ಕಿಂತ, ರಫ್ತು ಮಾಡುವ ಪ್ರಮಾಣ ಅಧಿಕವಿದೆ! 2019-20ರಲ್ಲಿ ಭಾರತ 53 ಶತಕೋಟಿ ಡಾಲರ್ ಪ್ರಮಾಣದ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದರೆ, ಆಮದು ಮಾಡಿಕೊಂಡದ್ದು 35.7 ಶತಕೋಟಿ ಡಾಲರ್‌ಗಳಷ್ಟು ವಸ್ತುಗಳನ್ನು. ಆದರೂ ಟ್ರಂಪ್ ಅವಧಿಯಲ್ಲಿ ವ್ಯಾಪಾರ-ವಹಿವಾಟು ಪ್ರಕ್ರಿಯೆ ಕಗ್ಗಂಟಿನಿಂದಲೇ ಕೂಡಿತ್ತು. ಮೂಲತಃ ಬ್ಯುಸಿನೆಸ್‌ಮೆನ್ ಆಗಿರುವ ಟ್ರಂಪ್ ತಮ್ಮ ಅವಧಿಯಲ್ಲಿ ಅಮೆರಿಕಕ್ಕೆ ಹಿತವಾದ, ಆದರೆ ಭಾರತಕ್ಕೆ ಇರಿಸುಮುರಿಸು ಉಂಟುಮಾಡುವಂಥ ರಫ್ತು ನೀತಿಗಳನ್ನು ಜಾರಿಗೆ ತಂದರು. ಇದಕ್ಕೆ ಪ್ರತಿಯಾಗಿ ಭಾರತವೂ ಹಲವಾರು ವಸ್ತುಗಳ ವಹಿವಾಟಿನ ಮೇಲೆ ಅಮೆರಿಕಕ್ಕೆ ಹೆಚ್ಚಿನ ಸುಂಕ ವಿಧಿಸಿ ಪ್ರತ್ಯುತ್ತರ ನೀಡಿತ್ತು. ಹಾರ್ಲಿ ಡೇವಿಡ್‌ಸನ್‌ವಾಹನಗಳ ಮೇಲೆ ಭಾರತ ವಿಧಿಸುವ ತೆರಿಗೆಯಿಂದ ಮುನಿಸಿಕೊಂಡಿದ್ದ ಟ್ರಂಪ್, ಭಾರತವನ್ನು “ಸುಂಕದ ರಾಜ’ ಎಂದು ಮೂದಲಿಸಿದ್ದರು. ಬೈಡೆನ್ ಅವಧಿಯಲ್ಲಿ ಎರಡೂ ರಾಷ್ಟ್ರಗಳ ವ್ಯವಹಾರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟುಗಳು ಶಮನವಾಗುವ ನಿರೀಕ್ಷೆಯಿದೆ.
ಉದ್ಯೋಗಿಗಳಿಗೆ ಖುಷಿ? :
ಟ್ರಂಪ್ ಎಚ್1-ಬಿ ಸೇರಿದಂತೆ ವಿವಿಧ ಉದ್ಯೋಗ ವೀಸಾಗಳ ಮೇಲೆ ನಿಷೇಧ ಹೇರಿದ್ದರಿಂದಾಗಿ ಭಾರತೀಯ ಮೂಲದ ಉದ್ಯೋಗಿಗಳು ಅತಂತ್ರ ಎದುರಿಸುತ್ತಾ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಟ್ರಂಪ್ ಆಡಳಿತ ಎಚ್-1ಬಿ ವೀಸಾದಾರರ ಕನಿಷ್ಠ ವೇತನ ಮಿತಿ ಹೆಚ್ಚಿಸಿ ಅಮೆರಿಕನ್ ಕಂಪೆನಿಗಳು ಹೊರಗಿನವರನ್ನು ನೇಮಕ ಮಾಡಲು ಹಿಂದೇಟು ಹಾಕುವಂಥ ತಂತ್ರ ರೂಪಿಸಿದ್ದಾರೆ. ಆದರೆ ಬೈಡೆನ್ ತಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಚ್1-ಬಿ ವೀಸಾ ಮೇಲಿನ ನಿರ್ಬಂಧ ಹಿಂಪಡೆಯುವ ಭರವಸೆ ನೀಡಿದ್ದು, ಭಾರತೀಯ ಮೂಲದ ಉದ್ಯೋಗಿಗಳಿಗೆ, ಕಂಪೆನಿಗಳಿಗೆ ಆಶಾದಾಯಕ ಬೆಳವಣಿಗೆಯೇ ಸರಿ.
ಎಫ್ಡಿಐ ನೀತಿ ಹೇಗಿರಲಿದೆ? :
ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಬಂಡವಾಳ ಹೂಡುತ್ತಿರುವ (ಎಫ್ಡಿಐ) ರಾಷ್ಟ್ರಗಳಲ್ಲಿ ಅಮೆರಿಕ ಐದನೇ ಸ್ಥಾನದಲ್ಲಿದೆ. ಟ್ರಂಪ್‌ರ ಅವಧಿಯಲ್ಲಿ ವಿದೇಶಿ ಹೂಡಿಕೆಯ ಪ್ರಮಾಣ ಕಡಿಮೆಯೇ ಇತ್ತು. ಒಬಾಮಾ ಸಮಯದಲ್ಲಿದ್ದಂತೆಯೇ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವಲ್ಲಿ ಬೈಡೆನ್‌ಗೆ ಹೆಚ್ಚಿನ ಆಸಕ್ತಿಯಿದೆ ಎನ್ನಲಾಗುತ್ತಿದೆ.
ಪಾಕ್-ಚೀನದೊಂದಿಗೆ ಹೇಗಿರಲಿದೆ ಬೈಡೆನ್ ಸಂಬಂಧ :
ಟ್ರಂಪ್ ಅಧಿಕಾರಾವಧಿಯಲ್ಲಿ ಅಮೆರಿಕ ಪಾಕಿಸ್ಥಾನಕ್ಕೆ ಸೊಪ್ಪು ಹಾಕಿರಲಿಲ್ಲ, ಇನ್ನು ಚೀನದ ಮೇಲಂತೂ ವ್ಯೂಹಾತ್ಮಕ ಹಾಗೂ ವ್ಯಾಪಾರ ಸಮರ ನಡೆಸುವ ಮೂಲಕ ಪರೋಕ್ಷವಾಗಿ ಭಾರತಕ್ಕೆ ನಿರಾಳರಾಗುವಂತೆ ಮಾಡಿದ್ದರು. ಇನ್ನೊಂದೆಡೆ ಡೆಮಾಕ್ರಟಿಕ್ ಪಕ್ಷವು ಪಾಕ್ ಪರ ಲಾಬಿಗಳಿಂದಲೇ ತುಂಬಿದೆ ಎನ್ನುವ ಆರೋಪ ಎದುರಿಸುತ್ತಾ ಬಂದಿದೆ. ಬೈಡೆನ್ ಸರಕಾರ
ಮತ್ತೆ ಪಾಕ್‌ನೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನಿಸುವ, ಇನ್ನು ಚೀನದೊಂದಿಗಿನ ಬಿಕ್ಕಟ್ಟನ್ನೂ ಶಮನಗೊಳಿಸಲು ಮುಂದಾಗುವ ಸಾಧ್ಯತೆ ಇದೆ ಎನ್ನುವುದು ಟೀಕಾಕಾರರ ಅನುಮಾನ. ಆದರೆ ಒಸಾಮಾ ವಿಚಾರದಲ್ಲಿ ಪಾಕಿಸ್ಥಾನ ಮಾಡಿದ ವಿಶ್ವಾಸದ್ರೋಹವನ್ನು ಡೆಮಾಕ್ರಟಿಕ್ ಪಕ್ಷ ಮರೆತಿಲ್ಲ, ಹೀಗಾಗಿ ಅದು ಮೊದಲಿನಂತೆ ಪಾಕ್ ಅನ್ನು ನಂಬುವುದಿಲ್ಲ ಎನ್ನುವುದು ಒಂದು ವರ್ಗದ ವಾದ. ಇನ್ನೊಂದೆಡೆ, ಜಾಗತಿಕ ಸೂಪರ್ ಪವರ್ ಆಗಲು ಶತಾಯಗತಾಯ ಪ್ರಯತ್ನಿಸುತ್ತಿರುವ ಚೀನದ ವಿಷಯದಲ್ಲೂ ಬೈಡೆನ್ ಮೃದುವಾಗಿರಲಾರರು ಎನ್ನುತ್ತದೆ ಈ ವರ್ಗ.
ಇರಾನ್ ಜತೆಗಿನ ಅಮೆರಿಕ ಸಂಬಂಧ ಭಾರತಕ್ಕೂ ಮುಖ್ಯ :
ಟ್ರಂಪ್ ಆಡಳಿತ ಇರಾನ್‌ನ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದು, ಆ ರಾಷ್ಟ್ರದೊಂದಿಗೆ ವಹಿವಾಟನ್ನು ನಿಲ್ಲಿಸಬೇಕು ಎಂದು ಭಾರತದ ಮೇಲೆ ಒತ್ತಡ ಹಾಕುತ್ತಲೇ ಬಂದಿತ್ತು. ಇದರಿಂದಾಗಿ ಇರಾನ್‌ನ ಅಗ್ಗದ ತೈಲ ಸಂಪನ್ಮೂಲವನ್ನು ನೆಚ್ಚಿಕೊಂಡಿದ್ದ ಭಾರತಕ್ಕೆ ಬಹಳ ತೊಂದರೆಯಾಯಿತು. ಈಗ ಬೈಡೆನ್ ಸರಕಾರ ಇರಾನ್ ಮೇಲಿನ ನಿರ್ಬಂಧವನ್ನು ತೆಗೆದುಹಾಕುವ ನಿರೀಕ್ಷೆಯಿದ್ದು, ಇದರಿಂದ ಭಾರತಕ್ಕೆ ಖಂಡಿತ ಲಾಭವಾಗಲಿದೆ. ಆದರೆ ಇರಾನ್ ಬಂಧಮುಕ್ತವಾದಂತೆಲ್ಲ, ಮಧ್ಯಪ್ರಾಚ್ಯದಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನುವುದು ಇಸ್ರೇಲ್ ಸೇರಿದಂತೆ ಅನೇಕ ರಾಷ್ಟ್ರಗಳ ಕಳವಳಕ್ಕೆಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.