“ಕಲ್ಯಾಣ’ ಆಗಲಿ ಕರ್ನಾಟಕ
Team Udayavani, Sep 17, 2019, 5:35 AM IST
ಈಗ ಹೈದ್ರಾಬಾದ್ ಕರ್ನಾಟಕ ಭಾಗ ಕಲ್ಯಾಣ ಕರ್ನಾಟಕವಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈ ಭಾಗಕ್ಕೆ ದೊಡ್ಡ ಇತಿಹಾಸವಿದೆ. ದೇಶಕ್ಕೆ 1947, ಆ.15ರಂದು ಸ್ವಾತಂತ್ರ್ಯ ದೊರಕಿದ್ದರೂ ಈ ಆರು ಜಿಲ್ಲೆಗಳು ಹೈದ್ರಾಬಾದ್ ನಿಜಾಮನಿಂದ ವಿಮೋಚನೆ ಹೊಂದಲು ಒಂದು ವರ್ಷ ಒಂದು ತಿಂಗಳು ಎರಡು
ದಿನ ಕಾಯಬೇಕಾಯಿತು(1948, ಸೆ.17 ). ಇದಕ್ಕಾಗಿ ಐತಿಹಾಸಿಕ ವಿಮೋಚನಾ ಚಳವಳಿಯೇ ನಡೆಯಿತು. ಇತಿಹಾಸದ ಜತೆಗೆ ಕಲ್ಯಾಣದ ಇಣುಕು ನೋಟ ಇಲ್ಲಿದೆ.
ರಾಷ್ಟ್ರಧ್ವಜ ಹಾರಿಸಿದರೆ ರಾಜದ್ರೋಹ!
1947, ಆ.15ರಂದು ಭಾರತ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿದ ದಿನ. ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ದೆಹಲಿಯಲ್ಲಿ ಬ್ರಿಟಿಷ್ ಧ್ವಜ ಕೆಳಗಿಸಿ ದೇಶದ ತ್ರಿವರ್ಣ ಧ್ವಜ ಹಾರಿಸಿದರು. ಆದರೆ ಹೈದ್ರಾಬಾದ್ ಹಾಗೂ ಹೈದ್ರಾಬಾದ್ ಪ್ರಾಂತದ ಜನತೆ ಅಂಧಕಾರದಲ್ಲಿ ತೊಳಲುತ್ತಲೇ ಇದ್ದರು. ಸ್ವಾತಂತ್ರ್ಯದ ಗಾಳಿ ಈ ಭಾಗದಲ್ಲಿ ಬೀಸದಂತೆ ಹೈದ್ರಾಬಾದ್‌ನ ನಿಜಾಮನ ಆಡ ಳಿ ತ ಕಟ್ಟೆಚ್ಚರ ವಹಿಸಿತು. ಭಾರತದ ಧ್ವಜಾರೋಹಣದ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿತ್ತು. ರಾಷ್ಟ್ರಧ್ವಜ ಹಾರಿಸಿದರೆ ಅದು ರಾಜದ್ರೋಹ ಆಗುತ್ತಿತ್ತು. ಇದೇ ವೇಳೆ ಹೈದ್ರಾಬಾದ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಜವಾಹರಲಾಲ ನೆಹರು ಅವರೇ ಸ್ವಾತಂತ್ರ್ಯ ಹೋರಾಟಗಾರ ಸ್ವಾಮಿ ರಮಾನಂದ ತೀರ್ಥ ಅವರಿಗೆ ತ್ರಿವರ್ಣ ಧ್ವಜ ನೀಡಿದ್ದರು. ಆದರೆ ಆ.14ರ ಮಧ್ಯರಾತ್ರಿಯೇ ಸ್ವಾಮೀಜಿ ಅವರನ್ನು ಬಂಧಿಸಿ ಕಾರಾಗೃಹದಲ್ಲಿರಿಸಲಾಯಿತು. ಇದರ ನಡುವೆ ಕೆಲವರು ಹೈದ್ರಾಬಾದ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದರು. ಇದೇ ಚಳವಳಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ಚಳವಳಿಗೆ ನಾಂದಿ ಹಾಡಿತು.
ಹೋರಾಟ ರೂಪುಗೊಂಡಿದ್ದು ಹೇಗೆ?
ಹೈದ್ರಾಬಾದ್ ನಿಜಾಮ, ಹೈದ್ರಾಬಾದ್‌ನ ಸಾರ್ವಭೌಮ ತಾನೆಂದು ಘೋಷಿಸಿಕೊಂಡ. ಯಾವುದೇ ಸಂದರ್ಭ ಬಂದ ರೂ ಭಾರತದ ಒಕ್ಕೂಟದಲ್ಲಿ ಸೇರಲು ಸಾಧ್ಯವಿಲ್ಲ ಎಂದು ಸಾರಿದ. ನೆಹರು ನಿಜಾಮನ ಆಡಳಿತದ ವಿರುದ್ಧ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗೆಯೇ ನಿಜಾಮನ ನಿಲುವು ಬದಲಾಗಲಿಲ್ಲ. ನಂತರ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ವಿಮೋಚನಾ ಚಳವಳಿ ಪ್ರಬಲವಾಗಿ ರೂಪುಗೊಂಡಿತು. ಹೈದ್ರಾಬಾದ್ ನಿಜಾಮನ ವಿರುದ್ಧ ಸಿಡಿದೇಳಲಾಯಿತು. ಸರ್ದಾರ್ ಶರಣಗೌಡ ಇನಾಂದಾರ, ಚೆನ್ನಬಸಪ್ಪ ಕುಳಗೇರಿ, ಹಕೀಕತರಾವ ಚಿಟಗುಪ್ಪಕರ್, ರಾಮಚಂದ್ರಪ್ಪ ವೀರಪ್ಪ, ಜಗನ್ನಾಥ ಚಂಡ್ರಕಿ ಮುಂತಾದವರ ಹೋರಾಟ ಪಡೆಯೇ ರೂಪುಗೊಂಡಿತು. ಪರಿಣಾಮ ಕಲಬುರಗಿ, ಬೀದರ್, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಹೋರಾಟ ಶುರುವಾಯಿತು. ಇದಕ್ಕಾಗಿ ಅನೇಕ ಹೋರಾಟಗಳು ನಡೆದವಲ್ಲದೇ, ಅಪಾರ ಸಾವು-ನೋವುಗಳೂ ಸಂಭವಿಸಿದವು.
ಹೊಸಕಿ ಹಾಕಿದ ಪಟೇಲ್
ನೆಹರು ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಭಾಯಿ ಪಟೇಲ್ ಭಾರ ತಕ್ಕೆ ಸೇರು ವಂತೆ ಸಾಕಷ್ಟು ಎಚ್ಚರಿಕೆಗಳನ್ನು ಕೊಟ್ಟರೂ ನಿಜಾಮ ಎಚ್ಚೆತ್ತುಕೊಳ್ಳಲಿಲ್ಲ. ನಿಜಾಮನ ರಜಾಕಾರರ ಪಡೆ ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸಲು ಹಿಂದೆ ಮುಂದೆ ನೋಡಲಿಲ್ಲ. ಕೊನೆಗೆ 1948, ಸೆ.13ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಸೂಚನೆ ಮೇರೆಗೆ ಭಾರತದ ರಕ್ಷಣಾ ಪಡೆಗಳು ಹೈದ್ರಾಬಾದ್‌ನತ್ತ ಧಾವಿಸಿದವು. ಭಾರತ ಸೇನೆ ಹೈದ್ರಾಬಾದ್ ಪ್ರಾಂತವನ್ನು ಪ್ರವೇಶಿಸಿದಾಗ ಲೇ ಅಲ್ಲಿನ ಆಡಳಿತ ಶರಣಾಯಿತು, ಹೈದ್ರಾಬಾದ್ ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿಸಿಕೊಂಡಿತು. ಅಟ್ಟಹಾಸದಿಂದ ಮೆರೆಯುತ್ತಿದ್ದ ನಿಜಾಮನ ಆಡಳಿತ ಕೊನೆಗಾಣಿಸಲು ನಾಲ್ಕು ದಿನಗಳು ಸಾಕಾದವು. ಕೊನೆಗೆ 1948, ಸೆ.17ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನೆಗೊಂಡು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು.
“ಕಲ್ಯಾಣ’ ಪದ ಹುಟ್ಟಿದ್ದು ಹೇಗೆ?
ಕಲ್ಯಾಣ ಎಂಬ ಹೆಸರು ಬಂದಿರುವುದರ ಹಿಂದೆ ಒಂದು ಸ್ವಾರಸ್ಯವಿದೆ. ಕಲ್ಯಾಣಿ ಎನ್ನುವುದರಿಂದ ಕಲ್ಯಾಣ ಶಬ್ದ ಬಳಕೆಗೆ ಬಂತು ಎನ್ನಲಾಗಿದೆ. ಕಲ್ಯಾಣಿ ಎಂದರೆ ದೇವಸ್ಥಾನದ ಎದುರಿನ ಕೆರೆ. ಬಸವಾದಿ ಶರಣರು ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಈಗಿನ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತಿಪುರಾಂತ ಕೆರೆಯಿದೆ. ಇದರಿಂದಾಗಿಯೇ ಕಲ್ಯಾಣಿ ಹಾಗೂ ಕರೆಯುವ ರೂಢಿಯಾಗಿ ಕಲ್ಯಾಣ ಎಂಬುದಾಗಿ ಚಾಲ್ತಿಗೆ ಬಂದು ತದನಂತರ ಬಸವಕಲ್ಯಾಣವಾಯಿತು ಎಂಬುದು ಇತಿಹಾಸ.
“ಕಲ್ಯಾಣ’ಕ್ಕೆ ಏನಾಗಬೇಕು?
ಹೈದ್ರಾಬಾದ್-ಕರ್ನಾಟಕ ಈಗ ಕಲ್ಯಾಣ ಕರ್ನಾಟಕ ಎಂದು ನಾಮಕರಣಗೊಂಡಿದೆ. ಆದರೆ ನಿಜವಾಗಿ ಯಾವ ಕಾರ್ಯಗಳಾದರೆ ಕಲ್ಯಾಣಕ್ಕೆ ಅರ್ಥ ಬರುತ್ತದೆ ಎಂಬ ನಿಟ್ಟಿನಲ್ಲಿ ಅವಲೋಕನ ನಡೆದಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ, ಕೈಗಾರಿಕೆಗಳ ಬೆಳವಣಿಗೆ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಯಾಗಬೇಕು ಎಂದು ಪ್ರಮುಖವಾಗಿ ಉಲ್ಲೇಖೀಸಿದ್ದರೂ ರಾಜಕೀಯ ಇಚ್ಛಾಶಕ್ತಿಯೂ ಬದಲಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೈಕೋರ್ಟ್ ಪೀಠಗಳೇ ವಿಕೇಂದ್ರೀಕರಣ ವಿಭಾಗಕ್ಕೆ ಬಂದು ನ್ಯಾಯದಾನ ಮಾಡುತ್ತಿರುವಾಗ ಆಡಳಿತದಲ್ಲೂ ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ಜಾರಿಗೆ ಬರುವುದು ಅಗತ್ಯ. ಹೈಕ ಹಿಂದುಳಿದ ಪ್ರದೇಶ ಎಂಬ ಕಾರಣಕ್ಕೆ 371ಜೆ ವಿಧಿ ಜಾರಿಗೆ ಬಂದಿದೆ. ಆದರೆ ಇದರಡಿ ಅಸ್ತಿತ್ವಕ್ಕೆ ಬಂದಿರುವ ಹಿಂದಿನ ಹೈಕ ಪ್ರದೇಶಾಭಿವೃದ್ಧಿ ಮಂಡಳಿ(ಎಚ್‌ಕೆಆರ್‌ಡಿಬಿ) ಈಗಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಸ್ವಾಯತ್ತತೆ ನೀಡಬೇಕಾಗಿದೆ. ಹೀಗಾದರೆ ಎಲ್ಲ ಕಾರ್ಯಕ್ಕೂ ಬೆಂಗಳೂರಿನಲ್ಲಿರುವ ಅಧಿಕಾರಿಗಳನ್ನೇ ಅವಲಂಬಿಸುವುದು ತಪ್ಪುತ್ತದೆ.
“ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ’ ರೀತಿ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ’ಗೂ ಸಚಿವರು-ಶಾಸಕರನ್ನು ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ಮಾಡದೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಮುಖ್ಯಸ್ಥರನ್ನಾಗಿ ರಾಜ್ಯದ ಎಲ್ಲ 52 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ಮಾಡಬೇಕು. ಈಗಿನದು ನೋಡಿದರೆ ಮಂಡಳಿ ಶಾಸಕರ ಕೂಟ ಎನ್ನುವಂತಾಗಿದೆ. ಬೇಕಿದ್ದರೆ ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರನ್ನು ಸಲಹಾ ಮಂಡಳಿ ಸದಸ್ಯರನ್ನಾಗಿ ಮಾಡಲಿ. ಹೀಗಾದಲ್ಲಿ ಕೆಕೆಆರ್‌ಡಿಬಿ ಅಭಿವೃದ್ಧಿ ಕಾರ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಆರು ಜಿಲ್ಲೆಗಳ ನಡುವೆ ಅಭಿವೃದ್ಧಿ ಸೇರಿದಂತೆ ಇತರ ಯಾವುದೇ ಕ್ಷೇತ್ರದಲ್ಲಿ ಸಮನ್ವಯತೆ ಇಲ್ಲ. ಹೀಗಾಗಿ ಈ ಹಿಂದೆ ಪ್ರೊ|ನಂಜುಂಡಪ್ಪ ನೇತೃತ್ವದಲ್ಲಿ ರಚನೆಯಾದ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯಂತೆ ಈಗ ಹೊಸದಾಗಿ ತಜ್ಞರ ಸಮಿತಿ ರಚನೆ ಮಾಡಿ ಸಮಗ್ರವಾದ ವರದಿ ರೂಪಿಸಿ ಅದರ ಪ್ರಕಾರ ಅಭಿವೃದ್ಧಿ ಕೈಗೊಂಡಲ್ಲಿ “ಕಲ್ಯಾಣ ಕರ್ನಾಟಕ’ವಾಗುವ ನಿಟ್ಟಿನಲ್ಲಿ ಸಾಗಬಹುದು.
ರಾಜ್ಯದ 6.40 ಕೋಟಿ ಜನಸಂಖ್ಯೆ ಪೈಕಿ ಕಲ್ಯಾಣ ಕರ್ನಾಟಕದಲ್ಲಿ 1.20 ಕೋಟಿ ಜನರಿದ್ದಾರೆ ಎಂದು ಅಂದಾಜು. ಅಂದರೆ ಶೇ.22ರಷ್ಟು ಜನಸಂಖ್ಯೆ ಇಲ್ಲಿದೆ. ಇದೇ ಆಧಾರದಡಿ ರಾಜ್ಯದ ಒಟ್ಟಾರೆ ಬಜೆಟ್‌ನ ಎರಡು ಲಕ್ಷ ಕೋಟಿಯಲ್ಲೂ ಈ ಭಾಗಕ್ಕೆ ಶೇಕಡಾವಾರು ಆದ್ಯತೆ ನೀಡಬೇಕು. ನೀಡಿದ ಹಣ ಸಂಪೂರ್ಣ ಬಳಕೆಯಾಗುವಂತಾಗಲು ಉನ್ನತ ಮಟ್ಟದ ನಿಗಾ ಸಮಿತಿ ರಚನೆಯಾಗಬೇಕು.
ಕಲಬುರಗಿ ಪ್ರಾದೇಶಿಕ ಆಯುಕ್ತರ ಹುದ್ದೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಆಡಳಿತಾತ್ಮಕ ಬದಲಾವಣೆ ತಂದಲ್ಲಿ ಮಾತ್ರ ನಿಜವಾದ “ಕಲ್ಯಾಣ ಕರ್ನಾಟಕ’ ಆಗಲಿದೆ. ಇಲ್ಲದಿದ್ದರೆ ಹೆಸರಿನಲ್ಲಷ್ಟೇ ಉಳಿಯುತ್ತದೆ.
ಮರುನಾಮಕರಣದ ಸುತ್ತ…
ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕ ಎಂಬುದು ಗುಲಾಮಗಿರಿಯ ಹೆಸರುಗಳಾಗಿವೆ ಎಂದು ಖ್ಯಾತ ಸಂಶೋಧಕ ಚಿದಾನಂದಮೂರ್ತಿ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ನಡೆಯಲಿ ಎಂದಿದ್ದರು. ಇದರ ಪರಿಣಾಮವೇ ಕಲ್ಯಾಣ ಕರ್ನಾಟಕ ಬೇಡಿಕೆ ಅಸ್ತಿತ್ವಕ್ಕೆ ಬಂತು. ಇದರ ನಡುವೆ ಹಾಲಿ ಸಿಎಂ ಯಡಿಯೂರಪ್ಪ ಬಹುತೇಕ ಸಭೆ-ಸಮಾರಂಭಗಳಲ್ಲಿ ಈ ಭಾಗ ಹಿಂದುಳಿದಿರುವ ಬಗ್ಗೆ ಟೀಕಿಸುತ್ತಾ “ಕಲ್ಯಾಣ ಕರ್ನಾಟಕ’ ನಾಮಕರಣಕ್ಕೆ ಬದ್ಧ ಎಂದು ಸಾರಿದ್ದರು. 2010ರಲ್ಲಿ ಕಲಬುರಗಿಯಲ್ಲಿ ಐತಿಹಾಸಿಕ ಎನ್ನುವಂತೆ ನಡೆದ “ಕಲಬುರಗಿ ಕಂಪು’ ಕಾರ್ಯಕ್ರಮದಲ್ಲೂ “ಕಲ್ಯಾಣ ಕರ್ನಾಟಕ’ ವಿಷಯ ಮುಂಚೂಣಿಗೆ ಬಂತು.
ಎರಡು ವರ್ಷಗಳ ಹಿಂದೆಯಂತೂ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ “ಕಲ್ಯಾಣ ಕರ್ನಾಟಕ’ ಉದ್ಘೋಷಣೆ ಅಂಗವಾಗಿ “ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆ’ ನಡೆದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ “ಕಲ್ಯಾಣ ಕರ್ನಾಟಕ’ ಎಂಬುದಾಗಿ ಒಕ್ಕೊರಲಿನಿಂದ ಘೋಷಣೆ ಮಾಡಲಾಯಿತು. ಆಗ ಕೇಂದ್ರದಲ್ಲಿ ವಾರ್ತಾ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರೆ, ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಕಲ್ಯಾಣ ಕರ್ನಾಟಕ ಕುರಿತು ಭಾಷಣ ಮಾಡಿದ್ದರು. ಅನಂತರ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಅವರು ಕಳೆದ ಬೆಳಗಾವಿ ಅಧಿವೇಶನದ ಸಂದರ್ಭ ಈ ಭಾಗದ ಎಲ್ಲ 41 ಶಾಸಕರಿಂದ ಸಹಿ ಮಾಡಿಸಿಕೊಂಡು ನಿಯೋಗದ ಮೂಲಕ ಆಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮರು ನಾಮಕರಣಕ್ಕೆ ಒತ್ತಾಯಿಸಿದ್ದರು. ಈಗ ಸಿಎಂ ಯಡಿಯೂರಪ್ಪ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ನಾಮಕರಣ ಮಾಡಿದ್ದಾರೆ.
– ಹಣಮಂತರಾವ ಭೈರಾಮಡಗಿ, ಕಲಬುರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.