ದುಡ್ಡು ಕಳಕೊಂಡರೂ, ಕನ್ನಡವೇ ಉಸಿರು!
Team Udayavani, Jan 12, 2020, 6:15 AM IST
ಕನ್ನಡದ ಹೆಸರಿನಲ್ಲಿ ದುಡ್ಡು ಮಾಡಿಕೊಂಡವರು ಎಷ್ಟೋ ಮಂದಿಯಿದ್ದಾರೆ. ಆದರೆ, ಚಿದಾನಂದಮೂರ್ತಿ ಅವರು ಕನ್ನಡದ ಹೋರಾಟಕ್ಕಾಗಿ ಹಣ ಕಳಕೊಂಡಿದ್ದೇ ಹೆಚ್ಚು. ಆದರೂ, ಅವರ ಉಸಿರು ಕನ್ನಡವೇ ಆಗಿತ್ತು…
ಚಿಮೂ ಅವರು ನನಗೆ 1974-75ರಲ್ಲಿ ಪರಿಚಯ ಆಗಿದ್ದು. ಆಗಲೇ ಅವರು ಖ್ಯಾತ ಸಂಶೋಧಕರಾಗಿದ್ದರು; ದೊಡ್ಡ ಗೌರವ ಹೊಂದಿದ್ದರು. ಶಂಭಾ ಜೋಷಿ ಅವರ ಅಭಿನಂದನಾ ಗ್ರಂಥಕ್ಕೆ ಸಂಪಾದಕರಾಗಿದ್ದರು. ಅಧ್ಯಯನಕ್ಕಾಗಿ 1978-79ರಲ್ಲಿ ಅಮೆರಿಕಕ್ಕೆ ಹೋಗಿ, ವಾಪಸ್ ಬಂದಿದ್ದರು. ನಗರದ ರೆಕ್ಸ್ ಥಿಯೇಟರ್‌ಗೆ ಇಂಗ್ಲಿಷ್ ಸಿನಿಮಾ ನೋಡಲು ಹೋಗಿ ನಾಲ್ಕು ಟಿಕೆಟ್ ಕೊಡಿ ಎಂದು ಕನ್ನಡದಲ್ಲೇ ಕೇಳಿದರು. ಕೌಂಟರ್‌ನಲ್ಲಿದ್ದಾತ ಇಂಗ್ಲಿಷ್‌ನಲ್ಲಿ ಮಾತನಾಡಲು ಒತ್ತಾಯಿಸಿದ. ಆದರೆ, ಚಿಮೂ ಅವರು ಮತ್ತೆ ಕನ್ನಡದಲ್ಲೇ ಕೇಳಿದರು. ಆಗ ಮಾತಿಗೆ ಮಾತು ಬೆಳೆಯಿತು. ಥಿಯೇಟರ್ ಮ್ಯಾನೇಜರ್ ಬಂದ, “ಇಂಗ್ಲಿಷ್‌ನಲ್ಲಿ ಕೇಳದಿದ್ದರೆ ಥಿಯೇಟರ್ ಆವರಣದಿಂದ ಹೊರಗೆ ಹಾಕಿಸುತ್ತೇನೆ’ ಎಂದು ಅಬ್ಬರಿಸಿದ. ಸುತ್ತಲೂ ಇದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಆದರೆ, ಈ ಘಟನೆಯಿಂದ ನೋವು ಅನುಭವಿಸಿದ ಚಿಮೂ ಅವರು ಆಗಲೇ ರಾಜ್ಯಾದ್ಯಂತ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟರು.
ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ಕೊಡದ ಥಿಯೇಟರ್ ಸಿಬ್ಬಂದಿಯ ವರ್ತನೆ ಖಂಡಿಸಿ, ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ಸಹ ನಡೆಸಿದರು. ಅಲ್ಲಿಂದ ನನ್ನ ಅವರ ಪರಿಚಯ ಮತ್ತಷ್ಟು ಹತ್ತಿರವಾಯಿತು.
ಚಿ. ಶ್ರೀನಿವಾಸರಾಜು ಅವರ ಜತೆ ಸೇರಿ ಕನ್ನಡ ಉಳಿಸಿ ಕ್ರಿಯಾ ಸಮಿತಿ ಮಾಡಿ ರಾಜ್ಯೋತ್ಸವ ದಿನ ಕರಪತ್ರ ಹಂಚಿದರು. ಹಿರಿಯರಾದ ಅವರೇ ಬೀದಿಗಿಳಿದಾಗ ನಾವೂ ಅವರ ಜತೆ ಹೋದೆವು 1980ರಲ್ಲಿ. ಗೋಕಾಕ್ ಆಯೋಗ ರಚನೆ ಸಂದರ್ಭದಲ್ಲಿ ಸಂಸ್ಕೃತ ಹಿನ್ನೆಲೆ ಹೊಂದಿರುವವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಿದ್ದಕ್ಕೆ ಪ್ರತಿಭಟಿಸಿದರು. ಒತ್ತಡ ಹೇರಿ ಕನ್ನಡದವರನ್ನು ಸೇರಿಸಿದರು.
ಗೋಕಾಕ್ ವರದಿ ಬಿಡುಗಡೆಗೆ ಒತ್ತಾಯಿಸಿ ಜಿ. ನಾರಾಯಣ ಅವರೂ ಸೇರಿದಂತೆ ಸಾಕಷ್ಟು ಹೋರಾಟಗಾರರು, ಸಾಹಿತಿಗಳನ್ನು ಸೇರಿಸಿಕೊಂಡು ಬೇರೆ ಬೇರೆ ಕಡೆ ರಾಜ್ಯ ಮಟ್ಟದ ಸಮಾವೇಶ ಮಾಡಿದರು.
ಆಗ ಪ್ರತಿ ಬುಧವಾರ ಸಭೆ ನಡೆಸುತ್ತಿದ್ದೆವು. ಸರ್ಪಭೂಷಣ ಮಠ, ನ್ಯಾಷನಲ್ ಕಾಲೇಜು, ಲಂಕೇಶ್ ಪತ್ರಿಕೆ ಕಚೇರಿಯಲ್ಲಿ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಕನ್ನಡ ಉಳಿಸುವ, ಕನ್ನಡಿಗರಿಗೆ ಎಲ್ಲ ವಲಯದಲ್ಲಿ ಮೀಸಲಾತಿ, ಕನ್ನಡಿಗರಿಗೆ ಆದ್ಯತೆ ವಿಚಾರವಾಗಿಯೇ ಚರ್ಚೆ ನಡೆಯುತ್ತಿತ್ತು. ಆ ಹೋರಾಟವೇ ಚಿಮೂ ಅವರನ್ನು ಬಹುಎತ್ತರಕ್ಕೆ ಕೊಂಡೊಯ್ಯಿತು.
ಗೋಕಾಕ್ ಚಳವಳಿ ಸಂದರ್ಭದಲ್ಲಿ “ಕನ್ನಡಿಗರ ಬೇಡಿಕೆ’ ಎಂದು ಪದ ಪ್ರಯೋಗ ಆದಾಗ “ನಾವು ಬೇಡುತ್ತಿಲ್ಲ, ನಮ್ಮ ಹಕ್ಕು ಕೇಳುತ್ತಿದ್ದೇವೆ’ ಎಂದು ಹಕ್ಕೊತ್ತಾಯ ಎಂದು ಪದ ಕೊಟ್ಟರು. ಅಲ್ಲಿಂದ ಹಕ್ಕೋತ್ತಾಯ ಹೋರಾಟ ಆರಂಭವಾಯಿತು. ಅದಾದ ನಂತರ ಮಹಿಷಿ ವರದಿ, ಕನ್ನಡ ದೂರದರ್ಶನ, ಕ್ಯಾಥೋಲಿಕ್ ಕ್ರೈಸ್ತರಿಗೆ ಕನ್ನಡದಲ್ಲಿ ಪ್ರಾರ್ಥನೆ, ಹಿಂದಿ ಹೇರಿಕೆ ನಿಲ್ಲಿಸಲು ಒತ್ತಾಯ ಸೇರಿ ಹಲವಾರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. 47 ಕನ್ನಡ ಗುಡಿಸಲು ಹಾಕಿ ಪ್ರತಿಭಟನೆ ಮಾಡಿ ಗಮನಸೆಳೆದಿದ್ದರು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಸ್ಪಂದಿಸಿದರು.
ನನ್ನ ಅವರ ಸಂಬಂಧ ತುಂಬಾ ನಿಕಟವಾದುದು. ಅವರಿಲ್ಲದೆ ನಾನಿಲ್ಲ, ನಾನಿಲ್ಲದೆ ಅವರಿಲ್ಲ ಎಂಬಂತಿತ್ತು. ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿ, ಕುವೆಂಪು ಆದಿಯಾಗಿ ಎಲ್ಲರನ್ನೂ ಸೇರಿಸಿಕೊಂಡು ಹೋರಾಟ ಮಾಡಿದ್ದರು. ಕನ್ನಡ ಕುರಿತು ಸಂಶೋಧನೆಗಾಗಿ ನೆರೆ ರಾಜ್ಯಗಳಿಗೆ ಹೋಗಿದ್ದೂ ಉಂಟು. ವಾರದಲ್ಲಿ ಒಮ್ಮೆ ಪ್ರತಿ ಇಲಾಖೆಗೆ ಹೋಗಿ ಹತ್ತು ಜನರನ್ನು ಕರೆದುಕೊಂಡು ಹೋಗುತ್ತಿದ್ದರು. ಕನ್ನಡ ನಾಮಫಲಕ ಕಡ್ಡಾಯವಾಗಿದ್ದು ಆಗಲೇ. 1989 ರಲ್ಲಿ ದಾತಾರ್ ಮುಖ್ಯಕಾರ್ಯದರ್ಶಿಯಾಗಿದ್ದರು. ಆಗ ಹೋರಾಟದ ಫಲವಾಗಿ ಕನ್ನಡ ನಾಮಫಲಕ ಕಡ್ಡಾಯವಾಯಿತು.
ಹಂಪಿಗಾಗಿ ಹೋರಾಟ ಅವರ ಮತ್ತೂಂದು ಹೆಗ್ಗುರುತು. ಹಂಪಿ ಪಾವಿತ್ರ್ಯತೆ ಉಳಿಸಿ, ಪ್ರವಾಸಿ ಕೇಂದ್ರದ ಜತೆ ಸಂಸ್ಕೃತಿ ಪರಂಪರೆ ಉಳಿಸಲು ಹೋರಾಟ ಮಾಡಿದ್ದರು.
“1987ರಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುತ್ತೇನೆ, ಆಗದಿದ್ದರೆ ನನ್ನ ತಲೆ ದಂಡವಾಗಲಿ’ ಎಂದು ಹಂಪಿಯಲ್ಲಿ ದೇವರ ಮುಂದೆ ಪ್ರಮಾಣ ಮಾಡಿದ್ದರು. “1998ರಲ್ಲಿ ಕನ್ನಡಿಗರನ್ನು ಜಾಗೃತಗೊಳಿಸಲು ನನಗೆ ಸಾಧ್ಯವಾಗಲಿಲ್ಲ’ ಎಂದು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದರು. ಅದು ಪ್ರವಾಹ ಇದ್ದ ಸಂದರ್ಭ ಅದೃಷ್ಟಕ್ಕೆ ಬೆಸ್ತರು ಅವರನ್ನು ಕಾಪಾಡಿದರು.
ಕನ್ನಡದ ಬಗ್ಗೆ ನಾನೂ ಸೇರಿದಂತೆ ಸಾವಿರಾರು ಹೋರಾಟಗಾರರಿಗೆ ಅವರೇ ಸ್ಫೂರ್ತಿ. ನಾನು ಪುಸ್ತಕ ಬರೆಯುತ್ತಿದ್ದೇನೆ ಎಂದರೆ ಅವರೇ ಕಾರಣ. ಕನ್ನಡದ ಕೆಲಸಕ್ಕೆ ಸದಾ ಮುಂದು ಎನ್ನುತ್ತಿದ್ದ ಚಿದಾನಂದ ಮೂರ್ತಿಯವರು ಸ್ವಂತ ಹಣ ಕೊಟ್ಟಿದ್ದಾರೆ. “ಕನ್ನಡ ಗೆಳೆಯರ ಬಳಗಕ್ಕೆ ಕಾರ್ಯಕ್ರಮ ಮಾಡಲು ಹಣವಿಲ್ಲ, ನಿಲ್ಲಿಸಿಬಿಡುತ್ತೀನಿ’ ಎಂದಾಗ 30 ಸಾವಿರ ರೂ. ಕೊಟ್ಟಿದ್ದರು. ನೃಪತುಂಗ ಪ್ರಶಸ್ತಿಯ ರೂಪದಲ್ಲಿ 7 ಲಕ್ಷ ರೂ. ಬಂದಾಗ ಅವರ ಊರಿನ ಸರ್ಕಾರಿ ಶಾಲೆಗೆ 6 ಲಕ್ಷ ರೂ., 1 ಲಕ್ಷ ರೂ. ಕತ್ತರಿಗುಪ್ಪೆ ಶಾಲೆಗೆ ಕೊಟ್ಟಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಚಿಕ್ಕ ಮನೆಯನ್ನೂ ಕಟ್ಟಿಸಿಕೊಟ್ಟಿದ್ದರು.
ಚಿದಾನಂದಮೂರ್ತಿ ಅಪ್ಪಟ ಕನ್ನಡ ಪ್ರತಿಪಾದಕ. ಕನ್ನಡ ಸಂಶೋಧನಾ ಕ್ಷೇತ್ರದ ನಕ್ಷತ್ರ. ಅವರ ಅಗಲಿಕೆ ನಾನೂ ಸೇರಿದಂತೆ ಸಾವಿರಾರು ಹೋರಾಟಗಾರರಿಗೆ ಅತೀವ ನಷ್ಟ.
ರಾ.ನಂ. ಚಂದ್ರಶೇಖರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.