ಶತಕ ಬಾರಿಸಿದ ನಿಮ್ಮಲ್ಲಿಗೆ ಕನ್ನಡ ಕೂಟ
Team Udayavani, Apr 10, 2021, 5:49 PM IST
ಉತ್ತರ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1973ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಾಂಸ್ಕೃತಿಕ ಸಂಘವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವಲ್ಲಿ ಯಶಸ್ಸು ಕಂಡಿದೆ.
ಕನ್ನಡ ಕೂಟದ ಸದಸ್ಯರೆಲ್ಲ ಒಂದಾಗಿ ಸೇರಿ ಸಂಭ್ರಮದಿಂದ ಸಂಕ್ರಾಂತಿ, ಯುಗಾದಿ, ಬೇಸಗೆಯ ಆಟ, ಗಣಪತಿಯ ಹಬ್ಬ ಹಾಗೂ ದೀಪಾವಳಿ ಹಬ್ಬಗಳನ್ನು ಆಚರಿಸುತ್ತಿದ್ದರು. ಆದರೆ ಕೋವಿಡ್ ಮಹಾಮಾರಿಯಿಂದ ಎಲ್ಲ ಕಾರ್ಯಕ್ರಮಗಳು ರದ್ದಾಗಿ ಎಲ್ಲರೂ ಮನೆಯಲ್ಲಿ ನೆಲೆಸುವ ಹಾಗಾಯಿತು.
ಕತ್ತಲಲ್ಲಿ ಬೆಳ್ಳಿ ಮಿಂಚು ಅನ್ನುವ ಹಾಗೆ ತಂತ್ರಜ್ಞಾನದ ಸಹಾಯದಿಂದ ಸದಸ್ಯರ ಮನೆಗೆ ಕಾರ್ಯಕ್ರಮಗಳನ್ನು ಒದಗಿಸಲು ಮುಂದಾಯಿತು. ಈ ಚಿಂತನೆಯ ಫಲಶ್ರುತಿಯೇ “ನಿಮ್ಮಲ್ಲಿಗೆ ಕನ್ನಡಕೂಟ’ ಹೊಸ ಬ್ಯಾನರ್ ಅಡಿಯಲ್ಲಿ ಫೇಸ್‌ಬುಕ್ ಲೈವ್ ಕಾರ್ಯಕ್ರಮ ಆರಂಭವಾಗಿ ಒಂದು ವರ್ಷ ಪೂರ್ಣಗೊಳಿಸಿದ್ದು ಮಾತ್ರವಲ್ಲ ಕಾರ್ಯಕ್ರಮ ಶತಕ ಬಾರಿಸಿತು.
ಅಧ್ಯಕ್ಷೆ ಧಾರಿಣಿ ದೀಕ್ಷಿತ್ ಅವರ ಮುಂದಾಳತ್ವದಲ್ಲಿ, ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮವು ಕಳೆದ ಒಂದು ವರ್ಷದಿಂದ ಪ್ರತೀ ಮಂಗಳವಾರ ಮತ್ತು ಗುರುವಾರ ಫೇಸ್‌ಬುಕ್ ಮೂಲಕ ನೇರ ಪ್ರಸಾರವಾಗುತ್ತಿದ್ದು, ಕರ್ನಾಟಕ ಮತ್ತು ಸ್ಥಳೀಯ ಕಲಾವಿದರು ಬಹಳ ವಿಭಿನ್ನವಾದ ಹಾಗೂ ವಿಶೇಷವಾದ ವಿಷಯಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ನೀಡಿದರು.
2020ರ ಮಾ. 19ರಲ್ಲಿ ಕನ್ನಡ ಕೂಟದ ನಿರ್ದೇಶಕರಾದ ಉಮೇಶ್ ಸತ್ಯನಾರಾಯಣ ಅವರಿಂದ “ಮನೆಯಿಂದ ಕೆಲಸ’ ಎಂಬ ವಿಷಯ ಕುರಿತು ಮೊದಲ ಕಾರ್ಯಕ್ರಮ ಪ್ರಾರಂಭವಾಗಿತ್ತು.
ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮ ಸರಣಿಯ ರೂವಾರಿಗಳಾದ ಗುರುಪ್ರಸಾದ್ ರಾವ್, ಗೋಪಾಲ್, ಶ್ರೀನಾಥ್ ಮತ್ತು ಸತ್ಯಪ್ರಸಾದ್ ಅವರ ನಿರಂತರ ಪರಿಶ್ರಮ ಮತ್ತು ಸಂಘದ ಇತರ ಪದಾಧಿಕಾರಿಗಳಾದ ಅನಂತ ಪ್ರಸಾದ್, ಅನುರಾಧ ಮೇಲುಕೋಟೆ, ಪುಷ್ಪ ಗೌಡರ್, ಶೈಲ ಚಲನ್, ಶೈಲಾ ರಾವ್ ಅವರ ಸಹಕಾರದಿಂದ ಒಂದು ವರ್ಷ ಕಾಲ ನಿರಂತರವಾಗಿ ಈ ಕಾರ್ಯಕ್ರಮ ಮೂಡಿಬಂತು.
ಶತಕದ ಸಂಭ್ರಮದಲ್ಲಿ ಅತಿಥಿಗಳಾಗಿ ಪ್ರಸಿದ್ಧ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಭಾಗವಹಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಶತಕದ ಸಂಭ್ರಮಕ್ಕೆ ಶುಭ ಹಾರೈಸಿದರು. ಭಾಗವಹಿಸಿದ ಸ್ಥಳೀಯ ಹಾಗೂ ಭಾರತೀಯ ಕಲಾವಿದರು ತಮ್ಮ ಶುಭ ಸಂದೇಶಗಳನ್ನು ವೀಡಿಯೋ ಮೂಲಕ ಕಳುಹಿಸಿಕೊಟ್ಟಿದ್ದರು. 61 ವಾರದ ಕಾರ್ಯಕ್ರಮಗಳು, 39 ವಿಶೇಷ ಕಾರ್ಯಕ್ರಮಗಳಿದ್ದು, ಇದರಲ್ಲಿ 37 ಕಾರ್ಯಕ್ರಮಗಳನ್ನು ಕನ್ನಡ ಕೂಟದ ಸದಸ್ಯರೇ ನಡೆಸಿಕೊಟ್ಟರು. 49 ವಿಭಿನ್ನ ಕಾರ್ಯಕ್ರಮಗಳನ್ನು ಕರ್ನಾಟಕದ ಕಲಾವಿದರು, 14 ಕಾರ್ಯಕ್ರಮಗಳನ್ನು ಉತ್ತರ ಅಮೆರಿಕದ ಕಲಾವಿದರು ನಡೆಸಿಕೊಟ್ಟರು.
ಪಕ್ಷಿನೋಟ :
ನಿಮ್ಮಲ್ಲಿಗೆ ಕನ್ನಡ ಕೂಟ ಆಯೋಜಿಸಿದ್ದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ವೈದ್ಯಕೀಯ ಸಲಹೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಯೋಗ, ಧ್ಯಾನ, ಆಯುರ್ವೇದ ಸಲಹೆಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ನಮ್ಮ ಕನ್ನಡ ಕೂಟದ ವೈದ್ಯರು ನಡೆಸಿಕೊಟ್ಟರು.
ಶಾಸ್ತ್ರೀಯ ಸಂಗೀತ, ಹಿಂದುಸ್ಥಾನಿ ಸಂಗೀತ, ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ಸಂಪ್ರದಾಯದ ಹಾಡುಗಳು, ಜಾನಪದ ಹಾಡುಗಳು, ಸಂಗೀತ, ನಾಟಕ ಮತ್ತು ನೃತ್ಯ ಕಾರ್ಯಕ್ರಮಗಳು ಸದಸ್ಯರ ಮೆಚ್ಚುಗೆ ಗಳಿಸಿತು. ಇದಲ್ಲದೆ ಕಾನೂನು ಸಲಹೆ, ವಿವಿಧ ವೀಸಾ ವಿವರಣೆ, ಆಸ್ತಿ ಕಾನೂನು ಮತ್ತು ನಿವೃತ್ತ ಜೀವನದ ಯೋಜನೆಗಳು, ಹೀಗೆ ಹಲವಾರು ಸಲಹೆಗಳನ್ನು ಸದಸ್ಯರಿಗೆ ತಲುಪಿಸಲಾಯಿತು. ಗಣೇಶನ ಹಬ್ಬವನ್ನು ಎಲ್ಲ ಸದಸ್ಯರು ಜೂಮ್ ಮೂಲಕ ಶಾಸಿŒಗಳ ಮುಖೇನ ಆಚರಿಸಿದರು. ದೀಪಾವಳಿ ಹಬ್ಬದ ದಿನದಂದು ಸದಸ್ಯರಿಗೆ ಸಿಹಿ ಹಂಚಲಾಯಿತು ಮತ್ತು ಸಂಸ್ಥೆಯ ವಾರ್ಷಿಕ ಪತ್ರಿಕೆಯನ್ನು ವಿತರಿಸಲಾಯಿತು. ನವರಾತ್ರಿಯ ಗೊಂಬೆ ಹಬ್ಬವನ್ನು ಸದಸ್ಯರು ಜೂಮ್ ಮೂಲಕ ತಮ್ಮ ಮನೆಯಲ್ಲಿ ಇಡುವ ಗೊಂಬೆಗಳ ಪರಿಚಯ ಮತ್ತು ಸಂಪ್ರದಾಯ ಕುರಿತು ಪ್ರೇಕ್ಷಕರಿಗೆ ತಿಳಿಸಿಕೊಟ್ಟರು.
ಜನಪ್ರಿಯ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕನ್ನಡದ ಸುಪ್ರಸಿದ್ಧ ಕವಿ ಡಾಕ್ಟರ್ ನಿಸಾರ್ ಅಹ್ಮದ್ ಅವರಿಗೆ ಸದಸ್ಯರು ಹಾಡಿನ ನಮನ ಸಲ್ಲಿಸಿದರು.
ಗಂಗಾವತಿ ಪ್ರಾಣೇಶ್ ಮತ್ತು ಸುಧಾ ಬರಗೂರು ಅವರ ಹಾಸ್ಯವು ಮನೋರಂಜನೆ ನೀಡಿದವು. ಪ್ರಸಿದ್ಧ ಚಲನಚಿತ್ರ ನಟರಾದ ಶ್ರೀನಾಥ್ ಅವರು ನಡೆಸಿಕೊಟ್ಟ ಆದರ್ಶ ದಂಪತಿ ಕಾರ್ಯಕ್ರಮವು ಎಲ್ಲ ಸದಸ್ಯರ ಪ್ರಶಂಸೆಗೆ ಪಾತ್ರವಾಯಿತು.
ಕನ್ನಡ ಚಲನಚಿತ್ರದ ಹೆಸರಾಂತ ಕಲಾವಿದರಾದ ಅಪರ್ಣಾ, ವೀಣಾ ಮತ್ತು ಸುಂದರ ದಂಪತಿ, ಜಯಂತ್ ಕಾಯ್ಕಿಣಿ, ಮತ್ತು ಟಿ.ಎಸ್. ನಾಗಾಭರಣ ಅವರೊಂದಿಗೆ ಸಂಭಾಷಣೆ ಬಹಳ ಮುದತಂದಿತು. ಹೀಗೆಯೇ ಎಲ್ಲರ ಸಹಕಾರ, ಪ್ರೋತ್ಸಾಹದಿಂದ ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮವು ಶತಕ ಬಾರಿಸಿದೆ.
-ಅನುರಾಧ ಮೇಲುಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.