Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
ಕಳೆದ 50 ವರ್ಷಗಳಲ್ಲಿ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡಕ್ಕೆ ಆದ್ಯತೆ
Team Udayavani, Nov 15, 2024, 11:29 AM IST
ಕಳೆದ 50 ವರ್ಷಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಬಹುಬಗೆಯಲ್ಲಿ ಬಳಕೆಯಾಗಿದೆ. ಆದರೂ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಅದಕ್ಕೆ ಅಗ್ರ ಪ್ರಾಶಸ್ತ್ಯ ದೊರಕಿಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಏಕೆ ಸಾಧ್ಯವಾಗುತ್ತಿಲ್ಲ? ಅಂಥ ಸಂದರ್ಭದಲ್ಲಿ ಎದುರಾಗುವ ಸವಾಲುಗಳೇನು? ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳೇನು? ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದೇ ಹೋದರೆ ಆಗುವ ಅಡ್ಡಪರಿಣಾಮಗಳು ಏನು?
ತಾಯ್ನುಡಿಯಾಗಿ ಬಂದಿರುವ ಭಾಷೆಯೊಂದನ್ನು ಆ ಭಾಷಿಕ ಪರಿಸರದಲ್ಲಿಯೇ ಹುಟ್ಟಿ ಬೆಳೆಯುತ್ತಿರುವ ಮಗುವಿಗೆ ಔಪಚಾರಿಕ ನೆಲೆಯಲ್ಲಿ ಪಾಠಮಾಡುವುದರ ಔಚಿತ್ಯವೇನು ಎಂಬ ಪ್ರಶ್ನೆಗೆ, ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಶಿಕ್ಷಣದ ಸ್ವರೂಪ ಮತ್ತು ಶಿಕ್ಷಣದ ಹರಹು ಕಾಲಕಾಲಕ್ಕೆ ಬದಲಾಗುತ್ತ ಸಾಗುವುದಷ್ಟೆ. ಕಲಿಕೆಯ ಉಳಿದ ವಿಷಯಗಳಂತಲ್ಲದೆ ಭಾಷೆಯ ಶಿಕ್ಷಣವು ಕೆಲವು ವಿಶೇಷ ಸವಾಲುಗಳನ್ನು ಎದುರಿಸುತ್ತದೆ. ಭಾಷಾ ಶಿಕ್ಷಣವು ಮಾಹಿತಿ ಸಂಕ್ರಮಣವನ್ನು ಕೇಂದ್ರವಾಗಿ ಇಟ್ಟುಕೊಳ್ಳಬೇಕೆ, ಭಾಷೆಯ ತಾಂತ್ರಿಕತೆ ಅಥವಾ ವ್ಯಾಕರಣವು ಕೇಂದ್ರದಲ್ಲಿರಬೇಕೆ ಅಥವಾ ಭಾಷಿಕ ಸಂಸ್ಕೃತಿಯನ್ನು ಮಗುವಿಗೆ ತಲುಪಿಸುವಂಥ ಗುರಿಗಳನ್ನು ಹೊಂದಿರಬೇಕೆ ಎಂಬುದು ಆ ಸವಾಲುಗಳಲ್ಲಿ ಕೆಲವು.
ಬ್ರಿಟಿಷ್ ಶಿಕ್ಷಣ ಶುರುವಾಗುವುದಕ್ಕಿಂತ ಮೊದಲು ಬಂಗಾಲ ಮತ್ತು ಮದ್ರಾಸ್ ಪ್ರಾಂತಗಳಲ್ಲಿ ಚಾಲ್ತಿಯಲ್ಲಿದ್ದ ಶಿಕ್ಷಣ ವ್ಯವಸ್ಥೆಯ ಕುರಿತು ಧರ್ಮಪಾಲರು ತಮ್ಮ “ದಿ ಬ್ಯೂಟಿಫುಲ್ ಟ್ರೀ’ ಕೃತಿಯಲ್ಲಿ ಹಲವು ವಿವರಗಳನ್ನು ಕೊಡುತ್ತಾರೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪಾಠಮಾಡುತ್ತಿದ್ದ ಕುರಿತಾಗಿ ಈ ಕೃತಿ ಏನೂ ಹೇಳದಿದ್ದರೂ ಆಯಾಯ ಪ್ರದೇಶಗಳಲ್ಲಿ ಶಿಕ್ಷಣದ ಮಾಧ್ಯಮ ಭಾಷೆಯಂತೂ ಅಲ್ಲಲ್ಲಿನ ಪ್ರಾದೇಶಿಕ ಭಾಷೆಯೇ ಆಗಿದ್ದಿತು ಅನ್ನುವುದನ್ನು ಖಚಿತವಾಗಿ ಹೇಳುತ್ತದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕನ್ನಡ ಕಲಿಕೆ
ಮುಂದೆ ಸ್ವಾತಂತ್ರ್ಯೋತ್ತರದಲ್ಲಿ, ಭಾಷೆಯ ನೆಲೆಯಲ್ಲಿ ರಾಜ್ಯಗಳ ರಚನೆಯಾದಾಗಿನಿಂದಲೂ ಶಾಲಾಶಿಕ್ಷಣದಲ್ಲಿ ಕನ್ನಡದ ಇರವು ಮತ್ತು ಬೆಳವಣಿಗೆಗಳ ಕುರಿತು ಚಿಂತನೆಗಳಾಗಿವೆ. ಕನ್ನಡ ಭಾಷಾಶಿಕ್ಷಣದ ಕುರಿತು ಸರಕಾರದ ಸ್ತರದಿಂದ ಒತ್ತಾಸೆ ಹೆಚ್ಚಲಿಕ್ಕಾಗಿ 1960 ರಿಂದ ಸಂಘಟಿತ ಚಳವಳಿಗಳೇ ನಡೆದಿವೆ. ಅದರ ಪರಿಣಾಮವೆಂಬಂತೆ ಪ್ರಾಥಮಿಕ ಸ್ತರದ ಸರಕಾರೀ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯಸ್ಥಾನ ದೊರಕಿದ್ದು ಸುಳ್ಳಲ್ಲ. ಎಷ್ಟರಮಟ್ಟಿಗೆ ಎಂದರೆ ಗ್ರಾಮೀಣ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳನ್ನು ಕನ್ನಡ ಶಾಲೆ ಎಂದೇ ಕರೆಯುವ ರೂಢಿ ತೀರಾ ಇತ್ತೀಚಿನವರೆಗೂ ಉಳಿದುಬಂದಿತ್ತು. ಮುಂದೆ 1968 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸಿ ಕರ್ನಾಟಕವೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿತು. ಇದೇನೂ ಕನ್ನಡ ಕಲಿಕೆಗೆ ಮಾರಕವಾಗಿರಲಿಲ್ಲ, ಆದರೆ ದಕ್ಷಿಣದ ಮಕ್ಕಳಾದ ನಮಗೆ ಹೆಚ್ಚು ಭಾಷೆಯನ್ನು ಕಲಿಯುವ ಒತ್ತಡವೊಂದು ತಲೆದೋರಿತು.
ಆದರೆ ಕಾಲ ಹಾಗೇ ಉಳಿಯಲಿಲ್ಲ ನೋಡಿ! ಜಾಗತೀಕರಣಕ್ಕೆ ತೆರೆದು ಕೊಂಡ ಹೊತ್ತಿನಲ್ಲಿ “ಎಲ್ಲವನ್ನೂ ಜಾಗತಿಕ ಅಗತ್ಯಗಳಿಗೆ ತಕ್ಕಂತೆ’ ರೂಪಿಸಿಕೊಳ್ಳುವ ಹುಮ್ಮಸ್ಸು ಎಲ್ಲ ರಂಗದಲ್ಲೂ ತೋರಿದ್ದು ಸುಳ್ಳಲ್ಲ. ಅದಕ್ಕೆ ನಮ್ಮ ಶಿಕ್ಷಣ ಕ್ಷೇತ್ರ ಮತ್ತು ಪೋಷಕರು ತಮ್ಮ ಮಕ್ಕಳ ಕುರಿತಾಗಿ ಹೊರುತ್ತಿದ್ದ ಶೈಕ್ಷಣಿಕ ಆಶೋತ್ತರಗಳು ಹೊರತಾಗಿಲ್ಲ. ಅದುವರೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಹೆಚ್ಚಿನ ಆತಂಕವಿಲ್ಲದೆ ಉಳಿದುಬಂದಿದ್ದ ಕನ್ನಡಕ್ಕೆ ಈ ಹೊಸ ಬೆಳವಣಿಗೆ ಉಸಿರುಗಟ್ಟಿಸಿತು. ಪೋಷಕರ ಆಗ್ರಹಗಳು ಕನ್ನಡೇತರ ಭಾಷೆಗಳ ಕುರಿತಾಗಿ ಇದ್ದವು.
ಪೆಟ್ಟು ಕೊಟ್ಟ ಖಾಸಗಿ, ಇಂಗ್ಲಿಷ್ ಶಾಲೆಗಳು
21ನೇ ಶತಮಾನದ ಆರಂಭದಲ್ಲಂತೂ ಕಾಲವು ಇಂಗ್ಲಿಷ್ ಶಿಕ್ಷಣದ ಪರವಾಗಿ ಬೆಳೆಯಿತು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾಸಂಸ್ಥೆಗಳ ಸಂಖ್ಯೆಯೂ ಹೆಚ್ಚಿತು. ಪರಿಣಾಮವಾಗಿ ನಗರಗಳಷ್ಟೇ ಅಲ್ಲದೆ ಕರ್ನಾಟಕದ ಹಳ್ಳಿಗಳಲ್ಲೂ ಖಾಸಗಿ-ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬಹುಸಂಖ್ಯೆಯಲ್ಲಿ ತಲೆಯೆತ್ತಿದವು. ಸರಕಾರಿ ಕನ್ನಡ ಶಾಲೆಗಳಿಗೆ ಹೋಲಿಸಿದರೆ ಈ ಖಾಸಗಿ ಇಂಗ್ಲಿಷ್ ಶಾಲೆಗಳ ಥಳುಕು, ಅನುಕೂಲತೆಗಳು ಮತ್ತು ಅದಕ್ಕಂಟಿಕೊಂಡಿರುವ ಸಾಮಾಜಿಕ ಮನ್ನಣೆ- ದೊಡ್ಡದು ಎಂಬುದು ಕಳೆದ ಒಂದೂವರೆ ದಶಕದಲ್ಲಿ ನಿಚ್ಚಳವಾಗಿ ಕಾಣುತ್ತಿದೆ. ಮೊದಲೇ ಕಡಿಮೆ ಸಂಖ್ಯೆಯ ಮಕ್ಕಳಿದ್ದ ಹಳ್ಳಿಯ ಸರಕಾರಿ ಕನ್ನಡ ಶಾಲೆಗಳು ತಮ್ಮ ವಿದ್ಯಾರ್ಥಿ ಸಂಖ್ಯೆಯನ್ನು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಬಿಟ್ಟು ಕೊಡುವ ಪರಿಸ್ಥಿತಿ ಬಂದಿದ್ದರಿಂದ ಓದುವ ಮಕ್ಕಳಿಲ್ಲದೆ ಕನ್ನಡಶಾಲೆಗಳು ಮುಚ್ಚಿಹೋಗ ತೊಡಗಿದುವು. ಈ ಮುಚ್ಚುವ ಪ್ರಕ್ರಿಯೆಯನ್ನು ಸರಕಾರವು “ಸರಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ’ ಎಂದು ಮಾಯಕದ ಪದಗಳಲ್ಲಿ ವಿವರಿಸುತ್ತದೆ.
ಕಡ್ಡಾಯ ಕನ್ನಡ ಕಲಿಕೆಯ ಕಾಯಿದೆ
ಈ ನಡುವೆ ಕನ್ನಡ ಶಾಲೆಗಳ ಉಳಿವು, ಕನ್ನಡದ ಕಲಿಕೆಯ ಉಳಿವು ಎಂಬ ಕೂಗು ಜೋರಾಗಿದ್ದರ ಪರಿಣಾಮವಾಗಿ ಸಿಬಿಎಸ್‌ಇ ಮತ್ತು ಇಸಿಎಸ್‌ಇ ಶಾಲೆಗಳನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ 2017 (ಕನ್ನಡಭಾಷಾ ಕಲಿಕೆಯ ಕಾಯಿದೆ 2015 ರ ಅನ್ವಯ) ರಲ್ಲಿ ಕನ್ನಡ ಭಾಷಿಕ ವಿಷಯವನ್ನು ಕಡ್ಡಾಯಗೊಳಿಸಲಾಯಿತು. ಇದರನ್ವಯ ಎಲ್ಲ ಶಾಲೆಗಳಲ್ಲಿ ಮೊದಲನೆಯ ಅಥವಾ ಎರಡನೆಯ ಭಾಷೆಯಾಗಿ ಕನ್ನಡದ ಕಲಿಕೆ ಅನಿವಾರ್ಯವಾಯಿತು. ಆದರೆ ಹಲವಾರು ಗೋಜಲುಗಳು ಎದುರಾದ ಹಿನ್ನೆಲೆಯಲ್ಲಿ ಈ ಕಾಯಿದೆಯಲ್ಲಿಯೂ ಮುಂದೆ ಬದಲಾವಣೆಗಳನ್ನು ತರಲಾಗಿದೆ. ಉದಾಹರಣೆಗೆ 2024ರ ತಿದ್ದುಪಡಿಯ ಅನ್ವಯ ಐದನೇ ತರಗತಿ ಯವರೆಗೆ ಕನ್ನಡವನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಕಲಿಸಬಹುದಾಗಿದೆ.
ಕನ್ನಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಡ್ಡಾಯ ಕನ್ನಡ ಕಲಿಕೆಯು ಸ್ವಾಗತಾರ್ಹ ನೀತಿಯೇನೋ ಹೌದು. ಆದರೆ ಇದನ್ನು ಕಾರ್ಯಗತಗೊಳಿಸುವಲ್ಲಿ ಹಲವಾರು ವಾಸ್ತವಿಕ ಸಮಸ್ಯೆಗಳಿವೆ. ಉದಾಹರಣೆಗೆ, 6 ಅಥವಾ 7ನೇ ತರಗತಿಗೆ ಕರ್ನಾಟಕದ ಹೊರಗಿನಿಂದ ಬಂದು ಸೇರ್ಪಡೆಯಾಗುವ ವಿದ್ಯಾರ್ಥಿಯು ಕನ್ನಡವನ್ನು ಎರಡನೆಯ ಭಾಷೆಯಾಗಿ ಆಯ್ದುಕೊಳ್ಳಬೇಕೋ ಅಥವಾ ಮೂರನೆಯ ಭಾಷೆಯಾಗಿಯೋ? ಪ್ರಥಮ ದ್ವಿತೀಯ, ಮತ್ತು ತೃತೀಯ ಭಾಷೆಗಳ ಸ್ತರಗಳಲ್ಲಿ ವ್ಯತ್ಯಾಸವಿದೆ ಮತ್ತು ಈ ವ್ಯತ್ಯಾಸವು ವಿದ್ಯಾರ್ಥಿಯ ಒಟ್ಟಾರೆ ಸಾಧನೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಯಾವುದೇ ಕಾಯ್ದೆಯ ಜಾರಿಯ ಕುರಿತಾಗಿ ಸರಕಾರಗಳು ಸಮಗ್ರವಾದ ಮಾರ್ಗದರ್ಶಿಸೂತ್ರಗಳನ್ನು ಹೊಂದಿರಬೇಕಾಗುತ್ತದೆ.
ಬದಲಾದದ್ದು ಏನು ಮತ್ತು ಎಷ್ಟು ?
ಇದು ಕಳೆದ 50 ವರ್ಷಗಳಲ್ಲಿ ಕನ್ನಡ ನಾಡಿನ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವು ಹಾದುಬಂದುದರ ಸ್ಥೂಲ ಚಿತ್ರಣ. ಇವತ್ತಿಗೆ ನಿಂತು ಸಿಂಹಾವ ಲೋಕನಗೈಯುವಾಗ, ನವೋದಯ ಕಾವ್ಯಪರಂಪರೆಯಂಥ ಕ್ಲಾಸಿಕಲ್ ಏಜ್ ಅನ್ನು ಸೃಷ್ಟಿಸಿದ್ದು ಈ ನಾಡಿನ ಕನ್ನಡ ಶಿಕ್ಷಣವೇ ಎಂಬುದನ್ನು ನಂಬಲು ಕಷ್ಟವಾಗುವ ಪರಿಸ್ಥಿತಿ ಇದೆ. ಕಾರಣವಿಷ್ಟೆ, ಬಲು ಕಷ್ಟದಲ್ಲಿ ಇವತ್ತು ಲಭ್ಯವಾಗುತ್ತಿರುವ ಪ್ರಾಥಮಿಕ ಕನ್ನಡ ಶಿಕ್ಷಣವು ಕನ್ನಡದ ಮಕ್ಕಳಲ್ಲಿ ಕನ್ನಡತನವನ್ನು, ಕನ್ನಡ ಓದು ಮತ್ತು ಬರವಣಿಗೆಯ ಪರಂಪರೆಯನ್ನು ರೂಪಿಸುವಲ್ಲಿ ಎಳ್ಳಷ್ಟೂ ಆಸಕ್ತವಾಗಿಲ್ಲ ಎನ್ನುವುದು. ಒಬ್ಬ ಸ್ವಯಂ ಸ್ಫೂರ್ತನಾದ ಶಿಕ್ಷಕ ಮಾತ್ರವೇ ವಿದ್ಯಾರ್ಥಿಗಳನ್ನು ಪ್ರಭಾವಿಸಬಲ್ಲ, ಸ್ಫೂರ್ತಿಗೊಳಿಸಬಲ್ಲ. ಆದರೆ ಆಡಳಿತ, ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯ ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರು ಸ್ಫೂರ್ತಿಗೊಳ್ಳುವ ಸಾಧ್ಯತೆಗಳೇ ಕ್ಷೀಣವಾಗಿವೆ.
ಪರಿಸ್ಥಿತಿ ಹೀಗಿರುವಾಗ, ಭಾವಸಂಕ್ರಮಣದಲ್ಲಿ ಯಶಸ್ವಿಯಾಗಬೇಕಾದ ಮಾತೃಭಾಷಾ ಶಿಕ್ಷಣವು ಬರಿಯ ಪಾಠ, ಪರೀಕ್ಷೆ ಮತ್ತು ಅಂಕಗಳಿಗೆ ಸೀಮಿತವಾಗುತ್ತಿದೆ. ಪರಿಣಾಮವೆಂಬಂತೆ ಕನ್ನಡ ಸುದ್ದಿ ಮಾಧ್ಯಮ, ಸಂವಹನ ಮತ್ತು ಸಂಭಾಷಣೆಗಳಿರುವ ಮನೋರಂಜನೆಯ ಉದ್ಯಮ, ಅನುವಾದ ಹಾಗೂ ಇನ್ನಿತರ ವೃತ್ತಿಪರ ಕ್ಷೇತ್ರಗಳಲ್ಲಿ ಸರಿಯಾದ ಕನ್ನಡವನ್ನು ಬಳಸುವ ಕೌಶಲವಿರುವ ಯುವಜನತೆಯ ಕೊರತೆ ಕಾಡುತ್ತಿದೆ.
ಆಗಬೇಕಾದ್ದೇನು?
1. ಮೊದಲು ಶಿಕ್ಷಕವರ್ಗದಲ್ಲಿ ಕನ್ನಡದ ಬಳಕೆಯ ಕುರಿತು ಆಸಕ್ತಿ ಮೂಡಿಸುವುದು. ಅದಕ್ಕೆ ಪೂರಕವಾದ ತರಬೇತಿ ಮತ್ತು ಕಾರ್ಯಕ್ಷೇತ್ರದ ವಾತಾವರಣವನ್ನು ಸರಕಾರವು ನಿರಂತರವಾಗಿ ಒದಗಿಸುವ ಕೆಲಸವನ್ನು ಮಾಡಬೇಕು
2. ಕರ್ನಾಟಕದಲ್ಲಿ ಕನ್ನಡದ ಕಲಿಕೆಯು ಬಿಟ್ಟು ಹೋಗದಂತೆ ಮಾಡಲು ಕಡ್ಡಾಯ ಕನ್ನಡ ಕಲಿಕೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವುದು. ಅಂದರೆ ನೀತಿಯು ಎಲ್ಲ ಹಂತದಲ್ಲಿಯೂ ದೋಷಮುಕ್ತವಾಗಿರುವಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು.
3. ಭಾಷಾಶಿಕ್ಷಣವನ್ನು ಉಳಿದ ವಿಷಯಗಳ ಶಿಕ್ಷಣಕ್ಕಿಂತ ಭಿನ್ನವಾಗಿ ಪರಿಭಾವಿಸುವುದು ಮತ್ತು ರೂಪಿಸುವುದು. ಹೆಚ್ಚಿನ ಮಹತ್ವ ನೀಡುವುದು.
4. ರಾಷ್ಟ್ರ ಮತ್ತು ನಾಗರಿಕತೆಯನ್ನು ಉಳಿಸಿಕೊಳ್ಳುವಲ್ಲಿ ತಾಂತ್ರಿಕ, ವೈದ್ಯಕೀಯ ಶಿಕ್ಷಣದಷ್ಟೇ ಭಾಷಾಶಿಕ್ಷಣ ಮತ್ತು ಮಾನವಿಕ ಅಧ್ಯಯನಗಳು ಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೂ, ಪಾಲಕರಿಗೂ ಮನದಟ್ಟು ಮಾಡಿಸುವುದು.
5 ಭಾಷಾಪಠ್ಯವಸ್ತುವು ರಾಜಕೀಯ ಮತ್ತು ಮತೀಯ ಹಿತಾಸಕ್ತಿಗಳ ಆಟದ ಕಣವಾಗದಂತೆ ಪಠ್ಯಪುಸ್ತಕ ಸಮಿತಿಯು ಎಚ್ಚರ ವಹಿಸಬೇಕು.
-ಡಾ| ನವೀನ ಭಟ್ಟ,
ಸಹಾಯಕ ಪ್ರಾಧ್ಯಾಪಕರು,
ಚಾಣಕ್ಯ ವಿವಿ., ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UKP; ಕೃಷ್ಣೆಯ ಮೌನ ರೋದನ: ಇನ್ನೂ ಕೈಗೂಡದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ
PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?
Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
ಇಂದು ದತ್ತ ಜಯಂತಿ: ಸರ್ವದೇವತಾ ಸ್ವರೂಪಿ, ವಿಶ್ವಗುರು ಶ್ರೀದತ್ತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.