Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
ಅಂತರ್ಜಾಲದಲ್ಲಿ ಈಗ ಕನ್ನಡದ ಮಾಹಿತಿ ಅಗಾಧವಾಗಿ ಲಭ್ಯ ; ಆದರೂ ಎಐ ಸೇರಿ ಹೊಸ ತಂತ್ರಾಂಶಗಳಲ್ಲಿ ಸಾಗಬೇಕಾದ ದಾರಿ ಬಹುದೂರ
Team Udayavani, Nov 21, 2024, 7:45 AM IST
ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೆಚ್ಚೆಚ್ಚು ಕನ್ನಡದ ಕಂಟೆಂಟ್ ಸೃಷ್ಟಿಯಾಗಬೇಕು. ತಂತ್ರಜ್ಞಾನದ ವಿಷಯಗಳಿಗೆ ಪದಗಳನ್ನು ಕಟ್ಟಬೇಕು, ಕನ್ನಡದಲ್ಲಿ ಆ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಸಂಪನ್ಮೂಲ ತಯಾರಿಸಬೇಕು. ತಂತ್ರಜ್ಞಾನ ಬೆಳೆಯುತ್ತಿರುವ ವೇಗದಲ್ಲಿ ನಾವು ಕನ್ನಡವನ್ನು ಹೊಸ ತಂತ್ರಜ್ಞಾನಕ್ಕೆ ಸಮರ್ಥವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪದಗಳನ್ನು ಕಟ್ಟುವುದು ಹಾಗೂ ಸಂಪನ್ಮೂಲ ತಯಾರಿಗಳ ಜತೆಗೆ ಅದರ ಬಳಕೆಯೂ ಅಷ್ಟೇ ಮುಖ್ಯ.
ಕನ್ನಡದ ಮೊದಲ ಶಾಸನ ಯಾವುದು? ಕನ್ನಡದ ಮೊದಲ ಕೃತಿ ಯಾವುದು? ಕನ್ನಡದ ಮೊದಲ ದಿನಪತ್ರಿಕೆ ಯಾವುದು? ಎಂಬಂಥ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆದರೆ ಕನ್ನಡ ಅಕ್ಷರಗಳಲ್ಲಿ ಮೂಡಿಬಂದ ಮೊದಲ ವೆಬ್‌ಸೈಟ್ ಯಾವುದೆಂದು ಯಾರಾದರೂ ಕೇಳಿದರೆ ಯೋಚನೆ ಮಾಡ್ತೀವಿ, ಅಲ್ವಾ? ಕನ್ನಡ ಅಕ್ಷರಗಳಲ್ಲಿ ಮೂಡಿಬಂದ ಮೊದಲ ವೆಬ್‌ಸೈಟ್ ಯಾವುದೆಂದು ಗೂಗಲ್‌ನಲ್ಲೇ ಹುಡುಕಿದರೆ ಡಾ| ಯು. ಬಿ ಪವನಜ ಅವರ Vishvakannada.com ಕೂಡ ಒಂದು ಎಂದು ಉತ್ತರಿಸುತ್ತದೆ ವಿನಾ ನಿರ್ದಿಷ್ಟವಾಗಿ ಇದೇ ವೆಬ್‌ಸೈಟ್ ಎಂದು ಹೇಳುವುದಿಲ್ಲ. ವಿಶ್ವಕನ್ನಡ ಡಾಟ್ ಕಾಂ ಹುಟ್ಟಿದ್ದು 2003ರಲ್ಲಿ. ಕನ್ನಡದ ವಿಕಿಪೀಡಿಯ ಹುಟ್ಟಿದ್ದು ಕೂಡ ಇದೇ ವರ್ಷದಲ್ಲಿ. ಈ ವೆಬ್‌ಸೈಟ್‌ನ ಮತ್ತೂಂದು ಹೆಗ್ಗಳಿಕೆಯೆಂದರೆ ಇದು ಕನ್ನಡದ ಮೊಟ್ಟಮೊದಲ ಅಂತರ್ಜಾಲ ಪತ್ರಿಕೆ ಕೂಡ.
ಇಡೀ ಅಂತರ್ಜಾಲ ಇಂಗ್ಲಿಷಿನಲ್ಲೇ ತುಂಬಿರುವ ಕಾಲದಲ್ಲಿ ಬೇರೆ ಭಾಷೆಗಳ ವೆಬ್‌ಸೈಟ್ ಕಟ್ಟುವುದು ಸವಾಲಿನ ಕೆಲಸವಾಗಿತ್ತು. ಕನ್ನಡ ಭಾಷೆಯಲ್ಲಿ ವೆಬ್‌ಸೈಟ್ ಕಟ್ಟುವ ಕಂಪ್ಯೂಟರಷ್ಟೇ ಅಲ್ಲದೇ ಅದನ್ನು ತೆರೆಯುವ ಕಂಪ್ಯೂಟರಿನಲ್ಲೂ ಕನ್ನಡ ಫಾಂಟ್ ತಂತ್ರಾಂಶದ ಅಗತ್ಯವಿತ್ತು. ಇದಕ್ಕೆ ಪರಿಹಾರವಾಗಿ ಬಂದದ್ದೇ “ಡೈನಮಿಕ್ ಫಾಂಟ್’. ಹೀಗೆಂದರೇನೆಂದು ಗಾಬರಿ ಪಡ ಬೇಕಿಲ್ಲ. ಉದಾಹರಣೆಗೆ ವಿಶ್ವಕನ್ನಡ.ಕಾಂ ಅನ್ನೇ ತೆಗೆದುಕೊಳ್ಳೋಣ. ಪವನಜರವರು ಈ ವೆಬ್‌ಸೈಟ್‌ನಲ್ಲಿ ತುಂಗಾ (Tunga) ಫಾಂಟ್ ಬಳಸಿ ಪುಟ ರಚಿಸಿದ್ದಾರೆ ಎಂದುಕೊಳ್ಳಿ. ನಾನು ವಿಶ್ವ ಕನ್ನಡ ಜಾಲತಾಣದ ಈ ಪುಟವನ್ನು ನನ್ನ ಕಂಪ್ಯೂಟರಿನಲ್ಲಿ ತೆರೆಯಲು ಮುಂದಾಗುತ್ತೇನೆ. ನನ್ನ ಕಂಪ್ಯೂಟರಿನಲ್ಲಿ ತುಂಗಾ ಫಾಂಟ್ ಇಲ್ಲ, ಮತ್ತಾವುದೋ ಫಾಂಟ್ ಇದೆ. ಆ ಫಾಂಟ್ ಇಲ್ಲ ಎಂದು ತಿಳಿದು ಕಂಪ್ಯೂಟರಿನಲ್ಲಿ ಲಭ್ಯವಿರುವ ಫಾಂಟ್‌ನಲ್ಲಿ ಪುಟವನ್ನು ತೆರೆಯುತ್ತದೆ. ಬ್ರೌಸರ್‌ನ ಈ ತಂತ್ರಾಂಶವನ್ನು “ಡೈನಮಿಕ್ ಫಾಂಟ್’ ಎಂದು ಕರೆಯಲಾಗುತ್ತದೆ. ಡೈನಮಿಕ್ ಫಾಂಟ್‌ಗಳ ಬಳಕೆಯು ವೆಬ್‌ಸೈಟ್‌ನಲ್ಲಿ ಕನ್ನಡ ಅಕ್ಷರಗಳನ್ನು ವೀಕ್ಷಿಸಲು ವೆಬ್‌ಸೈಟ್-ನಿರ್ದಿಷ್ಟ ಫಾಂಟ್‌ಗಳನ್ನು ಡೌನ್‌ಲೋಡ್ ಮಾಡಬೇಕಾದ ಬಳಕೆದಾರರ ಸಮಸ್ಯೆಯನ್ನು ಬಗೆಹರಿಸಿತು. ಭಾರತೀಯ ಭಾಷೆಗಳಲ್ಲಿ ಮೊದಲು ಡೈನಮಿಕ್ ಫಾಂಟ್ ಬಳಸಿದ ವೆಬ್‌ಸೈಟ್ ಅಂದರೆ ಅದು ಇದೇ ವಿಶ್ವಕನ್ನಡ ಡಾಟ್ ಕಾಂ.
ಸಾಮಾಜಿಕ ಜಾಲತಾಣಕ್ಕೆ ಯುವಜನರ ಲಗ್ಗೆ
ಅಂತರ್ಜಾಲ ಕನ್ನಡಕ್ಕೆ ತೆರೆದುಕೊಂಡ ಹಾಗೆಯೇ ಹೆಚ್ಚೆಚ್ಚು ಯುವಜನರು ಇತ್ತ ಕಡೆ ಬರತೊಡಗಿದರು. ವಿಕಿಪೀಡಿಯಾ ಕನ್ನಡದಲ್ಲಿ ಆರಂಭಗೊಂಡ ಅನಂತರ ಹಲವು ಕನ್ನಡದ ನಿಯತಕಾಲಿಕೆಗಳೂ ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರತೊಡಗಿದವು. ಗೂಗಲ್ ಬ್ಲಾಗರ್ blogspot.com ಬಂದನಂತರ ಕನ್ನಡಿಗರು ಬ್ಲಾಗ್ ಬರೆಯಲಾರಂಭಿಸಿದರು. ಬ್ಲಾಗ್ ಬರಹ ಹವ್ಯಾಸವಾಗಿ ಬೆಳೆಯಿತು.wordpress.com, quora.com, medium.com ವೆಬ್‌ಸೈಟ್‌ಗಳು ಬ್ಲಾಗಿಂಗ್‌ಗೆ ಬಾಗಿಲು ತೆರೆದವು. ಕೋರ, ವರ್ಡ್‌ಪ್ರಸ್ ವೆಬ್‌ಸೈಟ್‌ಗಳು ವಿಕಿಪೀಡಿಯಾದಂತೆ ಕನ್ನಡದ್ದೇ ಸಬ್ -ಡೊಮೈನ್ ಆರಂಭಿಸಿವೆ. ಫೇಸ್‌ಬುಕ್ ಮತ್ತು ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ಕನ್ನಡದಲ್ಲಿ ಪೋಸ್ಟ್ ಬರೆಯುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚಿದೆ. ಕನ್ನಡ ನುಡಿ, ಇತಿಹಾಸ, ಅಡುಗೆ, ಪ್ರವಾಸಿ ತಾಣಗಳು, ಕ್ರೀಡೆಗೆ ಸಂಬಂಧಿತ ವಿಷಯಗಳನ್ನು ಹಂಚಿಕೊಳ್ಳುವ ಹಾಗೂ ಚರ್ಚಿಸುವ ಅನೇಕ ಗುಂಪುಗಳು ಹುಟ್ಟಿಕೊಂಡಿವೆ. ಸಾಹಿತ್ಯಾಸಕ್ತರು ಬರಹಗಳನ್ನು ಹಂಚಿಕೊಳ್ಳಲು ಫೇಸ್‌ಬುಕ್‌ಗೆ ಲಗ್ಗೆ ಇಟ್ಟಿದ್ದಾರೆ. ಎಕ್ಸ್ (ಟ್ವಿಟರ್) ಸ್ಪೇಸ್‌ಗಳ ಮೂಲಕ ಸಮಾನಮನಸ್ಕರು ಒಟ್ಟುಗೂಡಿ ಚರ್ಚೆ ನಡೆಸುತ್ತಾರೆ. ಇನ್‌ಸ್ಟಾಗ್ರಾಮ್ ಹಾಗೂ ಯುಟ್ಯೂಬ್‌ನಲ್ಲಿ ಸುದ್ದಿ, ಸಂದರ್ಶನಗಳು, ಟ್ಯುಟೋರಿಯಲ್‌ಗಳು, ಅಡುಗೆ, ಪ್ರವಾಸ, ಗ್ಯಾಜೆಟ್ ಸಂಬಂಧಿತ ವಿಷಯಗಳ ಹಲವು ಕನ್ನಡದ ಚಾನೆಲ್‌ಗಳು ಲಕ್ಷಾಂತರ ಚಂದಾದಾರರನ್ನು ಹೊಂದಿವೆ. ಚುಟುಕು-ವೀಡಿಯೋಗಳು(reels) Instagramನ ವಿಶೇಷ. ಅದರಲ್ಲೂ ಯುಟ್ಯೂಬ್ ಬಂದ ಬಳಿಕವಂತೂ ಕನ್ನಡ ಭಾಷೆ ಅಂತರ್ಜಾಲದಲ್ಲಿ ಹೊಸ ಮಜಲಿಗೆ ತೆರೆದುಕೊಂಡಿತು. ಕನ್ನಡದ ಯುವಜನರು ಪ್ರವಾಸದ ಕುರಿತು ಯುಟ್ಯೂಬ್ ಚಾನೆಲ್ ಆರಂಭಿಸಿದರು. ತಂತ್ರಜ್ಞಾನ, ಆಟೋಮೊಬೈಲ್ ಮಾಹಿತಿಗಳು ಕನ್ನಡ ದಲ್ಲೇ ಸಿಗಲಾರಂಭಿಸಿತು. ಅಷ್ಟೇ ಅಲ್ಲ, ಕನ್ನಡದ ಸಂಗೀತ, ಸಾಹಿತ್ಯಗಳಿಗೆ ಯುಟ್ಯೂಬ್‌ಗಳಲ್ಲಿ ಅವಕಾಶಗಳು ಹೆಚ್ಚು ಹೆಚ್ಚು ತೆರೆದುಕೊಂಡಿತು. ಜನರು ಯಾವುದೋ ತಮಾಷೆಯ ಸಂಭಾಷಣೆಗೆ ನಟಿಸಿ ವೀಡಿಯೋ ಹಂಚಿಕೊಳ್ಳುತ್ತಾರೆ. ಹೈಸ್ಕೂಲು, ಕಾಲೇಜಿನ ಯುವಪೀಳಿಗೆಯು ಹೆಚ್ಚು ತೊಡಗಿಕೊಂಡಿರುವ ಸಾಮಾಜಿಕ ಜಾಲತಾಣವೆಂದರೆ ಅದು ಇನ್‌ಸ್ಟಾಗ್ರಾಮ್.
ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಂಡು ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆಗುರುತುಗಳನ್ನು ಹೆಚ್ಚಿಸುವುದು, ವಿಷಯಗಳನ್ನು ಹಂಚಿಕೊಂಡು ಮತ್ತೂಬ್ಬರ ಕಲಿಕೆಗೆ ನೆರವಾಗುವುದು, ಹೊಸಬಗೆಯ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ಸೃಜನಶೀಲರಾಗಿ ಬೆಳೆಯುವುದೆಲ್ಲವೂ ಸಾಮಾಜಿಕ ತಾಣಗಳ ಬಳಕೆಯ ಧನಾತ್ಮಕ ಅಂಶಗಳು. ಬಾಧಕಗಳೂ ದೊಡ್ಡ ಪ್ರಮಾಣದಲ್ಲೇ ಇವೆ.
ಲಿಪ್ಯಂತರಣದ ಸ್ವಾರಸ್ಯ-ಸವಾಲು
ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವಲ್ಲಿ ಮೊದಮೊದಲು ಸಮಸ್ಯೆಗಳಿದ್ದವು, ಈಗ ಸಾಕಷ್ಟು ಸುಧಾರಣೆಯಾಗಿದೆ. ಕೆ. ಪಿ. ರಾವ್‌ಅವರು ಇಂಗ್ಲಿಷಿನ QWERTY ಕೀಲಿಮಣೆಯನ್ನು ಕನ್ನಡದ ಅಗತ್ಯಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಿ, ಕನ್ನಡ ಕೀಲಿಮಣೆ ತಂತ್ರಾಂಶದ ಹುಟ್ಟಿಗೆ ದಾರಿತೋರಿದರು. ವಿವಿಧ ಆ್ಯಪ್ಲಿಕೇಶನ್‌ಗಳಲ್ಲಿ ಬಳಕೆಯಾಗುವ ಸಾಮರ್ಥ್ಯ ಕನ್ನಡಕ್ಕೆ ದೊರೆಯಬೇಕೆನ್ನುವ ದೃಷ್ಟಿಯಿಂದ CDAC (Centre for Development of Advanced Computing) ಅವರು ಸಿದ್ಧಪಡಿಸಿದ್ದ ಐಐಖಇಐ ಲ್ಯಾಂಗ್ವೇಜ್-ಕೋಡನ್ನು ಬಳಸಿ ಕನ್ನಡ ತಂತ್ರಾಂಶ ಸಿದ್ಧಪಡಿಸಲು ನಿರ್ಧರಿಸಲಾಯಿತು. ಆದರೆ ಇದರಿಂದ ಲಿಪ್ಯಂತರಣಕ್ಕೆ ಅಡ್ಡಿಯಾಯಿತು. ಲಿಪ್ಯಂತರಣ ಎಂದರೆ ಹೆಚ್ಚಿನದೇನೂ ಅಲ್ಲ. ಒಂದು ಭಾಷೆಯ ಪಠ್ಯವನ್ನು ಇನ್ನೊಂದು ಭಾಷೆಯ ಲಿಪಿಗೆ ಪರಿವರ್ತಿಸುವುದು. ಉದಾಹರಣೆಗೆ, ನಾವು ಕನ್ನಡದ ಪದಗಳನ್ನು ಟೈಪ್ ಮಾಡಲು ಲ್ಯಾಟಿನ್ ಲಿಪಿ(a, b, c)ಯನ್ನು ಬಳಸುವುದು. ನಾವು ನಮಸ್ಕಾರ ಎನ್ನುವುದನ್ನು namaskara ಎಂದು ಲ್ಯಾಟಿನ್ ಲಿಪಿಯಲ್ಲಿ ಟೈಪ್ ಮಾಡಿದಾಗ ಅದು ಕನ್ನಡದ ನಮಸ್ಕಾರಕ್ಕೆ ಪರಿವರ್ತನೆಯಾಗುತ್ತದೆ. 2001ರಲ್ಲಿ ಗಣಕ ಪರಿಷತ್ Kannada Script Code of Language Processing ಎಂಬ ಗ್ಲಿಫ್-ಕೋಡನ್ನು ಲಿಪ್ಯಂತರಣಕ್ಕೆ ಅಡ್ಡಿಯಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಯಾರಿಸಿತು.
ಇದು ಕನ್ನಡ ತಂತ್ರಾಂಶ ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲು. ಗಣಕ ಪರಿಷತ್ 2001ರಲ್ಲಿ ನುಡಿ (Nudi) ತಂತ್ರಾಂಶವನ್ನು ಸಿದ್ಧಪಡಿಸಿತು. ಶೇಷಾದ್ರಿವಾಸು ಚಂದ್ರಶೇಖರ್ ಎನ್ನುವವರು ಬರಹ (Baraha) ತಂತ್ರಾಂಶವನ್ನು 1998ರಲ್ಲಿ ತಯಾರಿಸಿದರು. ನುಡಿ ಮತ್ತು ಬರಹ ತಂತ್ರಾಂಶಗಳು ಬಂದ ಬಳಿಕ ಕಂಪ್ಯೂಟರಿನಲ್ಲಿ ಕನ್ನಡ ಬರೆಯುವುದು ಸರಳವಾಯಿತು. ಇದರಿಂದ ಅಂತರ್ಜಾಲದಲ್ಲಿ ಹಾಗೂ ಇತರ ತಂತ್ರಾಂಶಗಳಲ್ಲಿ ಕನ್ನಡ ಬಳಕೆ ಹೆಚ್ಚಾಯಿತು. ಯುನಿಕೋಡ್ (Unicode) ಬಂದು, ಕನ್ನಡವು ಯುನಿಕೋಡ್ ಅಕ್ಷರಗಳಲ್ಲಿ ಸ್ಟ್ಯಾಂಡರ್ಡೆಸೇಶನ್ ಆದ ಅನಂತರ ಯುನಿಕೋಡ್ ಅನ್ನು ಹೊಂದಿರುವ ಯಾವುದೇ ಆ್ಯಪ್ಲಿಕೇಶನ್ನಿನಲ್ಲಿ ಕನ್ನಡ ಬಳಸಬಹುದಾಗಿದೆ.
ಭಾಷಾಶುದ್ಧತೆಯ ಸವಾಲುಗಳು
ಇದಿಷ್ಟು ತಾಂತ್ರಿಕತೆಯ ಸವಾಲುಗಳಾದರೆ, ಅಂತರ್ಜಾಲದಲ್ಲಿನ ಭಾಷಾಶುದ್ಧತೆಯ ಸವಾಲುಗಳು ಬೇರೆ ಬಗೆಯವು. ಶುದ್ಧಕನ್ನಡ ಎಂಬುದು ಇಲ್ಲ, ಇರುವುದು ಕನ್ನಡ ಮಾತ್ರ. ಆಡುನುಡಿಗೂ ಗ್ರಾಂಥಿಕ ಕನ್ನಡಕ್ಕೂ ಇರುವ ವ್ಯತ್ಯಾಸಗಳಿಂದ ಶುದ್ಧಕನ್ನಡದಂತಹ ಗೋಜಲುಗಳು ಉಂಟಾಗುತ್ತವೆ. ಗೂಗಲ್ ಟ್ರಾನ್ಸ್‌ಲೇಟ್‌ನಂಥ ಅನುವಾದದ ತಂತ್ರಾಂಶಗಳಿಗೆ ಸಾಕಷ್ಟು ವೈವಿಧ್ಯತೆಯ ದತ್ತಾಂಶವನ್ನು ಒದಗಿಸದಿದ್ದರೆ, ಈ ತಂತ್ರಾಂಶಗಳು ಎಡವಟ್ಟುಗಳುನ್ನುಂಟು ಮಾಡುತ್ತವೆ. ಆಡುಮಾತಿಗೆ ಹತ್ತಿರವಿರುವ, ಸರಳವಾಗಿ ಅರ್ಥವಾಗುವಂತೆ ವಾಕ್ಯಗಳಲ್ಲಿ ಅನುವಾದಿಸುವ ಸಾಮರ್ಥ್ಯ ಈ ತಂತ್ರಾಂಶಗಳಲ್ಲಿ ಇನ್ನೂ ಹೆಚ್ಚಬೇಕಿದೆ. ಅಂತೆಯೇ, ಮೆಟಾ, ಜಿಪಿಟಿಯಂತಹ ಕೃತಕ-ಬುದ್ಧಿಮತ್ತೆಯ ತಂತ್ರಾಂಶಗಳಲ್ಲಿಯೂ ಕನ್ನಡದ ಸಾಮರ್ಥ್ಯವನ್ನು ಸಾಕಷ್ಟು ಬೆಳೆಸಬೇಕಿದೆ.
ಕನ್ನಡ ಭಾಷೆಯಲ್ಲಿ ಅಂತರ್ಜಾಲದಲ್ಲಿ ಹೆಚ್ಚೆಚ್ಚು ಬರೆಯಬೇಕು. ವೀಡಿಯೋಗಳನ್ನು ಹರಿಯಬಿಡಬೇಕು. ಈ ಮೂಲಕ ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆಗುರುತುಗಳನ್ನು ಮೂಡಿಸಲು ಹೆಚ್ಚೆಚ್ಚು ಕನ್ನಡದ ಕಂಟೆಂಟ್ ಸೃಷ್ಟಿಯಾಗಬೇಕು. ತಂತ್ರಜ್ಞಾನದ ವಿಷಯಗಳಿಗೆ ಆನ್‌ಲೈನ್ ಪದಗಳನ್ನು ಕಟ್ಟಬೇಕು, ಆ ವಿಷಯಗಳನ್ನು ಕನ್ನಡದಲ್ಲಿ ಕಟ್ಟಬೇಕು. ಕನ್ನಡದಲ್ಲಿ ಆ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಸಂಪನ್ಮೂಲ (ಬ್ಲಾಗ್ ಪೋಸ್ಟ್ ವೀಡಿಯೋ) ತಯಾರಿಸಬೇಕು. ತಂತ್ರಜ್ಞಾನ ಬೆಳೆಯುತ್ತಿರುವ ವೇಗದಲ್ಲಿ ನಾವು ಕನ್ನಡವನ್ನು ಹೊಸ ತಂತ್ರಜ್ಞಾನಕ್ಕೆ ಸಮರ್ಥವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪದಗಳನ್ನು ಕಟ್ಟುವುದು ಹಾಗೂ ಸಂಪನ್ಮೂಲ ತಯಾರಿಗಳ ಜತೆಗೆ ಅದರ ಬಳಕೆಯೂ ಅಷ್ಟೇ ಮುಖ್ಯ. ಕನ್ನಡದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನೂ ಬಳಸಬೇಕು. ಇದೆಲ್ಲವೂ ನಾವು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಮಾಡಬಹುದಾದ ಕೆಲಸಗಳಾಗಿವೆ.
ಆಗಬೇಕಾದ್ದೇನು?
1.ಯಾವ ವಿಷಯವಾದರೂ ಸರಿ, ಹೆಚ್ಚೆಚ್ಚು ಕನ್ನಡದ ಕಂಟೆಂಟ್ ಅನ್ನು ಅಂತರ್ಜಾಲದಲ್ಲಿ ಕಟ್ಟಬೇಕು
2.ಹೆಚ್ಚೆಚ್ಚು ಕನ್ನಡದ ಕಂಟೆಂಟ್ ಬಳಸಬೇಕು. ಓದುವುದು, ನೋಡುವುದು, ಕೇಳುವುದು.
ಎಲ್ಲ ಬಗೆಯ ಸೇವೆಗಳನ್ನು ಕನ್ನಡದಲ್ಲೇ ಕೇಳಿ ಪಡೆಯಬೇಕು. ಈ ನಿಟ್ಟಿನಲ್ಲಿ ಜಾಗೃತಿಯಾಗಬೇಕು
3.ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಅದರ ಅರಿವನ್ನು ಕನ್ನಡದಲ್ಲಿ ಕಟ್ಟಬೇಕು ಮತ್ತು ಅದರ ಬಳಕೆಯನ್ನು ಕನ್ನಡದಲ್ಲಿ ಸಾಧ್ಯವಾಗಿಸಬೇಕು. ಉದಾಹರಣೆಗೆ ಕೃತಕ-ಬುದ್ಧಿಮತ್ತೆ (AI)
4.ಸಾಧ್ಯವಾದಷ್ಟು ನಮ್ಮ ಸುತ್ತಮುತ್ತಲ ಕನ್ನಡ ಪರಿಸರವನ್ನು ಉಳಿಸೋಣ, ಗಟ್ಟಿಗೊಳಿಸೋಣ.
5ಸಾಮಾಜಿಕ ಜಾಲತಾಣಗಳಲ್ಲಿ ತಾಳ್ಮೆ ಮತ್ತು ಸಂವೇದನೆಯಿಂದ ಇರೋಣ. ಸಾಮಾಜಿಕ ಜಾಲ ತಾಣಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳೋಣ
-ಶ್ರುತಿ ಮರುಳಪ್ಪ
ಸಾಫ್ಟ್ ವೇರ್ ತಂತ್ರಜ್ಞೆ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.