ಶತಮಾನದ ಸಾಹಿತ್ಯ ಪರಿಷತ್ತು ಬದಲಾಗುವುದು ಎಂದು?
Team Udayavani, Apr 9, 2021, 6:40 AM IST
ಪ್ರಾಚೀನ ಭಾಷೆಯ ಹಿರಿಮೆಯುಳ್ಳ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸುವವರ ಆಯ್ಕೆಗಾಗಿ ಚುನಾವಣೆ ಸನ್ನಿಹಿತವಾಗಿದೆ. 105 ವರ್ಷಗಳ ಸುದೀರ್ಘವಾದ ಇತಿಹಾಸ ಹೊಂದಿರುವ ಈ ಸಂಸ್ಥೆಯ ಮಹತ್ವವನ್ನು ಎತ್ತಿ ಹಿಡಿದು ಭವಿಷ್ಯತ್ತಿನಲ್ಲಿ ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಾದ ದೊಡ್ಡ ಹೊಣೆ ಗಾರಿಕೆ ಕೂಡ ಹೊಸ ಪದಾಧಿಕಾರಿಗಳ ಮೇಲೆ ಇರಲಿದೆ.
ಶತಮಾನದ ಹಿಂದೆ ಆರಂಭವಾದ ಪರಿಷತ್ತಿನ ಆಸೆ, ಆಶೋತ್ತರಗಳು, ಉದ್ದೇಶಗಳು ಮತ್ತು ಕಾರ್ಯ ವಿಧಾನ ಗಳ ಮುಂದುವರಿಕೆ ಜತೆಗೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ರೂಪರೇಖೆ, ಕಾರ್ಯಚಟುವಟಿಕೆಗಳು ಮಾರ್ಪಾಟು ಆಗಬೇಕಾದ ಅನಿ ವಾರ್ಯ ಕೂಡ ಸೃಷ್ಟಿ ಆಗಿದೆ.
ಏಕೆಂದರೆ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದಾಗ ಇದ್ದ ಜನಸಂಖ್ಯೆ, ಕನ್ನಡಿಗರು ಮತ್ತು ಅನ್ಯ ಭಾಷಿಗರ ಸಂಖ್ಯಾಬಲಕ್ಕೂ ಜತೆಗೆ ಈಗಿನ ಸಂದರ್ಭಕ್ಕೂ ಅಜಗಜಾಂತರವಿದೆ. ಸನ್ನಿವೇಶಕ್ಕೆ ತಕ್ಕಂತೆ ಕನ್ನಡ ಕಾಯಕವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ನಿತ್ಯೋತ್ಸವ ಆಗಬೇಕಾದ ಆವಶ್ಯಕತೆ, ಶತಮಾನದ ಹಿಂದಿನ ಪರಿಷತ್ತು ಹುಟ್ಟಿಕೊಂಡ ರೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಕನ್ನಡಿಗರ ಪ್ರಾತಿನಿಧಕ ಸಂಸ್ಥೆ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತು ಚಿಗುರೊಡೆದ ರೀತಿ ಮತ್ತು ಸಾಗಿಬಂದ ದಾರಿ ಕುತೂಹಲಕಾರಿ ಆಗಿದೆ. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡಿಗರನ್ನು, ಕನ್ನಡ ಭಾಷೆ ಮತ್ತು ಈ ನೆಲದ ಸಂಸ್ಕೃತಿಯನ್ನು ಒಂದುಗೂಡಿಸುವ ಹಿನ್ನೆಲೆಯಲ್ಲಿ ಜನ್ಮತಳೆದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ. ಇದರ ಜತೆಗೆ ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ರೂಪಿತ ವಾದ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹರಿದುಹೋಗಿದ್ದ ಪ್ರಾಂತ್ಯಗಳು :
ಈ ಹಿಂದೆ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳು ಹರಿದು ಹಂಚಿಹೋಗಿದ್ದವು.ಅವೆಲ್ಲವೂ ಬೇರೆ ಬೇರೆ ಆಡಳಿತಕ್ಕೆ ಸೇರ್ಪಡೆ ಯಾಗಿದ್ದವು.ಬೊಂಬಾಯಿ, ಮದರಾಸು, ಮೈಸೂರು, ಹೈದರಾ ಬಾದ್ ಸಂಸ್ಥಾನಗಳಿಗೆ ಕನ್ನಡ ಭಾಷೆಯನ್ನು ಮಾತನಾಡುವ ಹಲವು ಪ್ರದೇಶಗಳು ಸೇರ್ಪಡೆಗೊಂಡಿದ್ದವು. ವಿಶೇಷ ಅಂದರೆ ಈಗಿನ ಕೊಡಗು ಕೂಡ ಒಂದು ಪ್ರತ್ಯೇಕ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷ್ ಆಡಳಿ ತಕ್ಕೆ ಸೇರಿದ್ದ ಮದರಾಸು, ಬೊಂಬಾಯಿ, ಪ್ರಾಂತ್ಯಗ ಳಲ್ಲಿ ದ್ವೀಪಗಳಂತೆ ಈಗಿನ ಸೊಂಡೂರು, ಸವಣೂರು, ರಾಮದುರ್ಗ ಸೇರಿದಂತೆ ಇನ್ನೂ ಅನೇಕ ಸಂಸ್ಥಾನಗಳು ಸೇರಿ ಕೊಂಡಿದ್ದವು. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರು ಕೂಡ ಒಂದೊಂದು ಪ್ರಾಂತ್ಯಗಳಿಗೆ ಚದುರಿ ಹೋಗಿದ್ದರು. ಜತೆಗೆ ಭಿನ್ನ-ಭಿನ್ನ ಆಡಳಿತ ಘಟಕದ ಹಿಡಿತದಲ್ಲಿದ್ದರು. ಈ ಕಾರಣದಿಂದಾಗಿಯೇ ಕನ್ನಡಿಗರು ಆಡುತ್ತಿದ್ದ ಭಾಷೆಯ ಮೇಲೆ ಅನ್ಯ ಭಾಷಿಗರ ಮತ್ತು ಭಾಷೆಯ ಪ್ರಭಾವವಿತ್ತು. ಅವರು ಮಾತ ನಾಡು ಶೈಲಿಯಲ್ಲೂ ಕೂಡ ಬಹಳಷ್ಟು ವ್ಯತ್ಯಾಸವಿತ್ತು. ಈ ಎಲ್ಲ ಕಾರಣ ಗಳಿಂದಾಗಿಯೇ ಆಯಾ ಭಾಗದಲ್ಲಿ ನೆಲೆಸಿದ್ದ ಕನ್ನಡಿಗರು ಅಪರಿಚಿತ ರಂತೆ ವ್ಯವಹರಿಸುವ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಬೇರೆ ಬೇರೆ ಪ್ರಾಂತ್ಯಗಳಿಗೆ ಒಳಪಟ್ಟಿದ್ದ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿ ಸಂರಕ್ಷಣೆ ಮತ್ತು ಅಭಿವೃದ್ದಿಯ ಆವಶ್ಯಕತೆಯನ್ನು ಮನಗಂಡರು. ಆಗಲೇ ಮೈಸೂರಿನಲ್ಲಿ ಕನ್ನಡಿಗರನ್ನು ಒಂದಾಗಿಸು ಕನಸು ಚಿಗುರೊಡೆಯಿತು.
ಮೈಸೂರು ಒಡೆಯರ್ ಕಲ್ಪನೆ :
ಮೈಸೂರು ಸಂಸ್ಥಾನದ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಬಗ್ಗೆ ಯೋಜನೆ ರೂಪಿಸಿದರು. ಈ ಕಾರ್ಯದ ಸಲಹೆ ಸೂಚನೆಗಳನ್ನು ನೀಡಲು ಅವರು ಮೈಸೂರು ಸಂಪದಭ್ಯುದಯ ಸಮಾಜ (ಮೈಸೂರು ಎಕನಾಮಿಕ್ ಕಾನ್ಫರೆನ್ಸ್) ರಚಿಸಿದ್ದರು. ವಿದ್ಯಾ ವಿಷಯಗಳಿಗಾಗಿ ಯೋಜನೆಗಳನ್ನು ರೂಪಿಸುವ ಕಾರ್ಯವನ್ನು ಎಚ್.ನಂಜುಂಡಯ್ಯ ವಹಿಸಿದರು. ಮುಂದಿನ ದಿನಗಳಲ್ಲಿ “ವಿದ್ಯಾ ವಿಷಯಕ ಮಂಡಳಿ’ ಸ್ಥಾಪನೆಯಾಯಿತು. 1914ರಲ್ಲಿ ಈ ಮಂಡಳಿಯು ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿಯೇ ಸ್ವತಂತ್ರ ಅಧಿಕಾರವುಳ್ಳ ಪರಿಷತ್ತು ಇರಬೇಕು ಮತ್ತು ಸರಕಾರ ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂಬ ಶಿಫಾರಸನ್ನು ಸರಕಾರಕ್ಕೆ ಮಾಡಿತು. ಅಅನಂತರ 1915ರ ಮೇ ತಿಂಗಳ 6ರಂದು ಅಪರಾಹ್ನ 3ಕ್ಕೆ ಬೆಂಗಳೂರಿನ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಮೊದಲ ಸಮ್ಮೇಳನ ನಡೆ ಯಿತು.ಧಾರವಾಡ, ಬಿಜಾಪುರ,ಕಾರವಾರ, ಬೊಂಬಾಯಿ, ಮದರಾಸು, ಬಳ್ಳಾರಿ, ದಕ್ಷಿಣ ಕನ್ನಡ ಭಾಗದ ಅನೇಕ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜತೆಗೆ ವಿವಿಧ ಪತ್ರಿಕೆಗಳ ಸಂಪಾದಕರು ಕೂಡ ಇದ್ದರು.1915ರಲ್ಲಿ ಕಸಾಪದ ಮೊದಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಚ್.ವಿ. ನಂಜುಂಡಯ್ಯ ಅವರು 1960ರ ವರೆಗೆ ಕಾರ್ಯ ನಿರ್ವಹಿಸಿದರು. ಅಲ್ಲಿಂದ ಈಗಿನ ಅಧ್ಯಕ್ಷ ಮನು ಬಳಿಗಾರ್ ವರೆಗೂ ಸುಮಾರು 25 ಮಂದಿ ಅಧ್ಯಕ್ಷರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಂಡಿದೆ. ಮೈಸೂರು ಮಹಾರಾಜರ ಆಶ್ರಯದ ಅಅನಂತರ ರಾಜ್ಯ ಸರಕಾರದ ಆಶ್ರಯ ಪಡೆದು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆದು ನಿಂತಿದೆ.
ಮತದಾರರ ಸಂಖ್ಯೆ ದ್ವಿಗುಣ :
ವರ್ಷದಿಂದ ವರ್ಷಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ದ್ವಿಗುಣವಾಗುತ್ತಿದೆ. 2016ರಲ್ಲಿ 1,89,355 ಇದ್ದ ಮತದಾರರ ಸಂಖ್ಯೆ 2021ರ ಹೊತ್ತಿಗೆ 3,10,520ಕ್ಕೆ ಬಂದು ತಲುಪಿದೆ. ಸದ್ಯ ಚುನಾವಣಧಿಕಾರಿಗಳು ನೀಡಿರುವ ಅಂಕಿ- ಅಂಶದಂತೆ 3,10,520 ಮಂದಿ ಮತದಾರರಿದ್ದಾರೆ. ಇದರಲ್ಲಿ 33 ಪೋಷಕರು, 22 ದಾತೃಗಳು,138 ಆಜೀವ ಅಂಗ ಸಂಸ್ಥೆಗಳು ಸದಸ್ಯ ಮತದಾರರಿದ್ದಾರೆ. ಆ ಪೈಕಿ ರಾಜ್ಯದಲ್ಲಿ 3,05,643 ಸದಸ್ಯರು ನೆಲೆಸಿದ್ದಾರೆ. ಆಂಧ್ರಪ್ರದೇಶದಲ್ಲಿ 2289, ಮಹಾರಾಷ್ಟ್ರದಲ್ಲಿ 458, ಕೇರಳ 526 ಮತ್ತು ಗೋವಾದಲ್ಲಿ 433 ಸದಸ್ಯರಿದ್ದಾರೆ. ಹಾಗೆಯೇ ಹೊರ ರಾಜ್ಯದಲ್ಲಿ 82 ಮತ್ತು ಹೊರ ದೇಶದಲ್ಲಿ 23 ಸದಸ್ಯರಿದ್ದಾರೆ.$
ಚುನಾವಣೆಗೆ ನಿಲ್ಲಲು ಅರ್ಹರಲ್ಲ :
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಲ್ಲಲು ಹಲವು ರೀತಿಯ ನಿಬಂಧನೆಗಳಿವೆ. ಪರಿಷತ್ತಿನಲ್ಲಿ ಬಾಕಿ ಉಳಿಸಿಕೊಂಡಿ ರುವವರು ಹಾಗೂ ಕೋರ್ಟಿನಿಂದ ಶಿಕ್ಷೆಗೆ ಒಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೆಯೇ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಕನ್ನಡ ಬಲ್ಲವರಾಗಿರಬೇಕು. ಚುನಾವಣ ತಾರೀಖೀಗೆ 10 ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಅಲ್ಲದೆ ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಸೇವೆ ಮಾಡಿರಬೇಕು. ಒಂದು ಸಾರಿ ಅಧ್ಯಕ್ಷರಾಗಿ ಚುನಾಯಿತರಾದವರು ಮುಂದಿನ ಅವಧಿ ಕಳೆದ ಅನಂತರ ಸ್ಪರ್ಧಿಸಲು ಮಾತ್ರ ಅವಕಾಶ. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಕೋಶಾಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಬೆಂಗಳೂರಿನಲ್ಲೇ ವಾಸಿಸಬೇಕು. ಒಂದು ವರ್ಷಕ್ಕೆ ಮೀರಿ ಅಧ್ಯಕ್ಷರು ಗೈರು ಹಾಜರಾದರೆ ಆ ಸ್ಥಾನ ತೆರವಾಗಿದೆ ಎಂದೇ ಪರಿಗಣಿಸಲಾಗುವುದು ಎಂಬುವುದ ಕೂಡ ಕಸಾಪ ಬೈಲಾದಲ್ಲಿ ಸೇರಿದೆ.
ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿಗಳು :
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಘಟಾನು ಘಟಿಗಳು ಅಲಂಕರಿಸಿದ್ದಾರೆ. ಕನ್ನಡಪರ ಹೋರಾಟಗಾರರು ಪರಿಷತ್ತನ್ನು ಆಳಿದ್ದಾರೆ. ರಾಜ ಸೇವಾಧುರೀಣ ಸರ್.ಎಂ. ಕಾಂತರಾಜ ಅರಸ್, ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್, ಒಂಟಿಮುರಿಯ ಶ್ರೀಮಂತ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್, ಜಸ್ಟೀಸ್ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ ಸೇರಿದಂತೆ ಹಲವು ಧೀಮಂತರು ಕಸಾಪ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.
ಇವರ ಜತೆಗೆ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿ ತಿರುಮಲೆ ತಾತಾಚಾರ್ಯ ಶರ್ಮ, ರೆವರೆಂಡ್ ಉತ್ತಂಗಿ ಚೆನ್ನಪ್ಪ, ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಮೂರ್ತಿರಾವ್,ಬಿ. ಶಿವಮೂರ್ತಿ ಶಾಸ್ತ್ರಿ, ಪ್ರೊ| ಜಿ. ವೆಂಕಟಸುಬ್ಬಯ್ಯ, ಡಾ| ಹಂಪ ನಾಗರಾಜಯ್ಯ, ಪ್ರೊ| ಎಸ್.ಜಿ. ಸಿದ್ದಲಿಂಗಯ್ಯ, ಗೊ.ರು. ಚನ್ನಬಸಪ್ಪ, ಡಾ| ಸಾ.ಶಿ. ಮರುಳಯ್ಯ, ಎನ್. ಬಸವರಾಧ್ಯ, ಚಂದ್ರಶೇಖರ ಪಾಟೀಲ, ಡಾ| ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಜಿ. ನಾರಾಯಣ್, ಎಚ್.ಬಿ. ಜ್ವಾಲನಯ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿ, ಡಾ| ಮನು ಬಳಿಗಾರ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬೈಲಾ ತಿದ್ದುಪಡಿ :
ಸಾಹಿತ್ಯ ಕ್ಷೇತ್ರದ ಸಾಧಕರು ಮತ್ತು ಕನ್ನಡಪರ ಹೋರಾಟ ಗಾರರು ಮತ್ತು ಸರಕಾರಿ ಸೇವೆಯಿಂದ ನಿವೃತ್ತಿ ಪಡೆದವರು ಪರಿಷತ್ತಿನನ್ನು ಆಳಿದ್ದಾರೆ. ಪುಂಡಲೀಕ ಹಾಲಂಬಿ ಅವರವರೆಗೂ ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಪರಿಷತ್ತಿನ ಚುನಾವಣೆಗೆ ಹಾಲಿ ಅಧ್ಯಕ್ಷ ಮನು ಬಳಿಗಾರ್ ಅವರು ಹೊಸ ಬದಲಾವಣೆಗೆ ನಾಂದಿ ಹಾಡಿದರು. ಹಲವು ವಿರೋಧಗಳ ನಡುವೆಯೂ ಉಡುಪಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿ ತಂದು ಆಡಳಿತ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಿ ದರು. ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಸಹಕಾರ ಕ್ಷೇತ್ರದ ಧುರೀಣರು, ಸರಕಾರಿ ಅಧಿಕಾರಿಗಳು ಈ ಬಾರಿಯ ಸ್ಪರ್ಧಾ ಅಖಾಡದಲ್ಲಿದ್ದಾರೆ. ವಿಶೇಷ ಅಂದರೆ 105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ವಿಜಯಪುರ ಮೂಲದ ಲೇಖಕಿ ಡಾ| ಸರಸ್ವತಿ ಚಿಮ್ಮಲಗಿ ಅವರು ಕೂಡ ಹೋರಾಟದ ಕಣದಲ್ಲಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ, ಕಾವೇರಿ ನದಿ ವಿಚಾರದಲ್ಲಿ ಆಗಾಗ್ಗೆ ತಮಿಳುನಾಡಿ ನೊಂದಿಗೆ ಮುನಿಸು, ಕನ್ನಡ ಶಾಲೆಗಳ ಕಣ್ಮರೆ, ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಪ್ರಭಾವ ಇಂತಹ ಸಮಯದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ದಕ್ಷ ಆಡಳಿತಗಾರರ ಆವಶ್ಯಕತೆಯಿದೆ. ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವ ಅಗತ್ಯವಿದೆ. ಈ ಚುನಾವಣೆ ದಕ್ಷ ಆಡಳಿತಗಾರರಿಗೆ ದಾರಿ ಆಗಲಿ, ಭಾಷೆ ಬೆಳಗುವ ಕಟ್ಟಾಳು ಬರಲಿ ಎಂಬುದು ಕನ್ನಡಿಗರ ಆಶಯ.
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.