ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು
Team Udayavani, Nov 29, 2021, 5:11 AM IST
ಈಗಿನ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಸುತ್ತಮುತ್ತ ಲಭಿಸಿದ ಅಶೋಕನ ಕಾಲದ ಮೂರು ಶಾಸನಗಳು ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. ಈ ಶಾಸನಗಳನ್ನು ಉಲ್ಲೇಖಿಸದೆ ಕನ್ನಡ ಭಾಷೆಯ ಚರಿತ್ರೆಯು ಪೂರ್ಣವಾಗುವುದಿಲ್ಲ. ಇಲ್ಲಿನ ಬ್ರಹ್ಮಗಿರಿ ಶಾಸನದಲ್ಲಿ ಕಂಡು ಬರುವ “ಇಸಿಲ’ ಶಬ್ದವು ಕನ್ನಡದ ಮೊದಲ ಶಬ್ದ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಇದು ಕನ್ನಡ ಭಾಷಾ ಚರಿತ್ರೆಯ ದೃಷ್ಟಿಯಿಂದ ಶಾಸನದ ಮಹತ್ವವಾದರೆ, ಭಾರತದ ಶಿಲ್ಪಿಗಳ ಇತಿಹಾಸದ ದೃಷ್ಟಿಯಿಂದಲೂ ಈ ಶಾಸನಕ್ಕೆ ಮಹತ್ವ ಇದೆ. ಷ. ಶೆಟ್ಟರ್ ಹಾಗೂ ಸದ್ಯೋಜಾತ ಭಟ್ ಅವರು ನಡೆಸಿದ ಸಂಶೋಧನೆಗಳು ಇದನ್ನು ಪುಷ್ಟೀಕರಿಸುತ್ತಿವೆ. ಈ ಶಾಸನದಲ್ಲಿ ಶಿಲ್ಪಿಯ ಹೆಸರಿನ ಉಲ್ಲೇಖವಿದೆ. ಆತನ ಹೆಸರು ಚಪಡ (ಈತನು ಆಯುರ್ವೇದ ಸಂಹಿತೆಯ ಚರಕನ ಅಜ್ಜ ಎಂಬ ಅನುಮಾನವೂ ಇದೆ). “ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ.
ಷ. ಶೆಟ್ಟರ್ ತಿಳಿಸುವಂತೆ ದಕ್ಷಿಣ ಹಾಗೂ ಪೂರ್ವ ಏಷ್ಯಾದ ಇತಿಹಾಸದಲ್ಲಿ ರಾಜಮನೆತನದ ಸೇವೆಯಲ್ಲಿದ್ದ ಮೊದಲ ಶಿಲ್ಪಿ ಕರ್ನಾಟಕದಲ್ಲಿ ಇದ್ದು ಚಪಡನೆಂಬ ಶಿಲ್ಪಿಯು ಕೆತ್ತಿದ ಮೂರು ಶಾಸನಗಳ ಮೂಲಕ ಭಾರತದ ಶಿಲ್ಪಿಗಳ ಲಿಖೀತ ಚರಿತ್ರೆ ಆರಂಭವಾಗುತ್ತದೆ. ಸದ್ಯೋಜಾತರು ಭಾರತದ ಅಕ್ಷರ ಇತಿಹಾಸದ ಮೊದಲ ಸಾದೃಶ್ಯ ಇದಾಗಿರುವುದರಿಂದ, ಇದನ್ನು ಬರೆದವನು ಮತ್ತು ಬರೆಸಿದ ಸ್ಥಳಗಳು ಲಿಪಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಲಿಪಿಕಾರರ ಇತಿಹಾಸದ ಪ್ರಾರಂಭಕ್ಕೆ ನಾಂದಿ ಹಾಡಿದ ನಾಡೇ ಕನ್ನಡನಾಡು ಎನ್ನಬಹುದು ಎನ್ನುತ್ತಾರೆ. ಹಾಗಾಗಿ ಶಾಸನಗಳಿರುವ ಸ್ಥಳಗಳಾದ ಕನ್ನಡನಾಡಿನ ಬ್ರಹ್ಮಗಿರಿ ಮತ್ತು ಸುತ್ತಲಿನ ಪ್ರದೇಶಗಳಿಗೆ ಭಾರತದ ಶಾಸನಗಳ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಈ ಮೂಲಕ ಈ ಶಾಸನಗಳು ಕನ್ನಡನಾಡಿನ ಗೌರವವನ್ನು ಹೆಚ್ಚಿಸಿವೆ.
ತಕ್ಷಶಿಲೆಯ ಶಿಲ್ಪಿ: ಈಗಿನ ಕರ್ನಾಟಕದ ಅಶೋಕನ ಶಾಸನದಲ್ಲಿ ಶಿಲ್ಪಿಯಾದ ಚಪಡನ ಹೆಸರಿದ್ದರೂ ಈತನು ಮೂಲತಃ ಈ ಭಾಗದವನಲ್ಲ. ಕರ್ನಾಟಕ ಭಾಗಕ್ಕೆ ವಾಯವ್ಯ ಭಾರತದ ಅಂದರೆ ಗಾಂಧಾರದಿಂದ ವಲಸೆ ಬಂದವನು. ಈಗ ಅಫ್ಘಾನಿಸ್ಥಾನದಲ್ಲಿರುವ ಗಾಂಧಾರವು ಮೌರ್ಯರ ಅವಧಿಯಲ್ಲಿ ಅವರ ಆಡಳಿತಕ್ಕೊಳಪಟ್ಟಿತ್ತು. ಅಶೋಕನ ಆಳ್ವಿಕೆಯ ಆರಂಭದಲ್ಲಿ ಈತನು ಈಗಿನ ಕರ್ನಾಟಕಕ್ಕೆ ಬಂದಿರಬೇಕು. ಗಾಂಧಾರ ಭಾಗದಲ್ಲಿ ತಕ್ಷಶಿಲೆ ಎಂಬ ಪ್ರಸಿದ್ಧ ವಿದ್ಯಾಕೇಂದ್ರ ಇತ್ತು. ಅಲ್ಲಿ ಶಿಲ್ಪ ಶಾಸ್ತ್ರವೂ ಜ್ಞಾನದ ಒಂದು ಶಾಖೆಯಾಗಿತ್ತು. ಇದಕ್ಕಾಗಿಯೇ ವಿಶೇಷ ತರಬೇತಿ ನೀಡಲಾಗಿತ್ತು. ಚಪಡನು ತಕ್ಷಶಿಲೆಯ ವಿದ್ಯಾರ್ಥಿ. ಗಾಂಧಾರದ ಭಾಗದಲ್ಲಿ ಪ್ರಚಲಿತವಿದ್ದ ಲಿಪಿ ಖರೋಷ್ಠಿ. ಚಪಡನು ಖರೋಷ್ಠಿ ಲಿಪಿಯಲ್ಲಿ ಪರಿಣತ. ಇದರೊಂದಿಗೆ ಬ್ರಾಹ್ಮಿà ಲಿಪಿ, ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಲ್ಲೂ ಈತನಿಗೆ ಹಿಡಿತವಿತ್ತು.
ಗಾಂಧಾರದಿಂದ ಮಗಧದತ್ತ: ಚಪಡನು ಗಾಂಧಾರ ದಿಂದ ಮಗಧ ಅಂದರೆ ಈಗಿನ ಬಿಹಾರದತ್ತ ಬಂದ ಹಿನ್ನೆಲೆಯ ಬಗ್ಗೆ ವಿವಿಧ ಅಭಿಪ್ರಾಯಗಳಿವೆ. ಇಲ್ಲಿಯೇ ಈತನಿಗೆ ಅಶೋಕನ ಸಂಪರ್ಕವಾಯಿತು. ಮುಂದೆ ಅಶೋಕನೇ ಈಗಿನ ಕರ್ನಾಟಕದ ಬ್ರಹ್ಮಗಿರಿ, ಸಿದ್ದಾಪುರದತ್ತ ಕಳುಹಿಸಿದನು. ಷ.ಶೆಟ್ಟರ್ ತಿಳಿಸುವಂತೆ ಖರೋಷ್ಠಿ ಲಿಪಿಯು ಒಂದು ವಿಶೇಷ ಭಾಷೆಗೆ ಸೀಮಿತವಾಗಿರಲಿಲ್ಲ. ಹಾಗಾಗಿ ಗಾಂಧಾರ ಭಾಗದ ಖರೋಷ್ಠಿ ಲಿಪಿಯ ಶಿಲ್ಪಿಗಳು ಚಲನಶೀಲರಾಗಿದ್ದರು. ಧೈರ್ಯವಂತರಾದ ಇವರು ಆ ಭಾಗದಿಂದ ಕ್ರಮೇಣ ವಲಸೆ ಬಂದರು. ಈ ಬಗ್ಗೆ ಸದ್ಯೋಜಾತ ಭಟ್ಟರು ಕೆಲವು ಕಾರಣಗಳನ್ನೂ ನೀಡುತ್ತಾರೆ.
ಚಪಡನು ಆಗ ಯುವ ಶಿಲ್ಪಿ. ತಕ್ಷಶಿಲೆಯಲ್ಲಿ ಶಿಲ್ಪ ಶಾಸ್ತ್ರವನ್ನು ಅಧ್ಯಯನ ಮಾಡಿದನು. ಈತನು ಜ್ಞಾನದಾಹಿ. ಈ ಕ್ಷೇತ್ರದಲ್ಲಿ ಇನ್ನಷ್ಟು ಜ್ಞಾನ ಸಂಪಾದಿಸುವ ಬಯಕೆ. ಈ ಬಯಕೆಯಿಂದ ಜ್ಞಾನವನ್ನು ಅರಸಿಕೊಂಡು ನಾಲಂದಾಕ್ಕೆ ಬಂದನು. ಈತನು ಬರುವ ಕಾಲದಲ್ಲಿ ನಾಲಂದಾದಲ್ಲಿ ಬೌದ್ಧ ಮತ ಪ್ರಚಾರವು ತಾರಕಕ್ಕೇರಿತ್ತು. ಕಲೆ ಹಾಗೂ ಸಾಹಿತ್ಯಕ್ಕೆ ಚಪಡನು ನಿರೀಕ್ಷಿಸಿದಷ್ಟು ಪ್ರೋತ್ಸಾಹಗಳಿರಲಿಲ್ಲ. ಈ ವಾತಾವರಣವು ಆತನಲ್ಲಿ ನಿರಾಶೆ ಮೂಡಿಸಿತು. ಆಗ ಈತನ ಪ್ರತಿಭೆಯನ್ನು ಗುರುತಿಸಿದವನು ಅಶೋಕ ಮತ್ತು ಅಶೋಕನ ಆಸ್ಥಾನದ ಅಧಿಕಾರಿಗಳು. ಅಶೋಕನು ಆಗಲೇ ರಾಜಾಜ್ಞೆ ಹಾಗೂ ಬೌದ್ಧ ಧರ್ಮದ ಸಂದೇಶಗಳನ್ನು ಬಂಡೆಗಳ ಮೇಲೆ ಕೆತ್ತಿಸುವ ಕೆಲಸದಲ್ಲಿ ನಿರತನಾಗಿದ್ದನು. ಚಪಡನಂಥ ಶಿಲ್ಪಿಯ ಆವಶ್ಯಕತೆ ಅಶೋಕನಿಗಿತ್ತು. ಚಪಡನ ಪ್ರತಿಭೆಯನ್ನು ಅಶೋಕನು ಬಳಸಿಕೊಂಡನು. ಈಗಿನ ಕರ್ನಾಟಕ ಭಾಗದಲ್ಲಿ ಬಂದು ಬ್ರಹ್ಮಗಿರಿಯ ಸುತ್ತ ಮೂರು ಶಾಸನಗಳನ್ನು ಅಶೋಕನ ಅಪ್ಪಣೆಯಂತೆ ಈತನೇ ಕೆತ್ತಿದನು. ಹಾಗಾಗಿ ಲಿಖೀತ ಪರಂಪರೆಯಲ್ಲಿ ಭಾರತದಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನ ಲಭಿಸುವಂತಾಯಿತು.
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
ಶಾಸನಗಳಲ್ಲಿ ಶಿಲ್ಪಿಯ ಉಲ್ಲೇಖ: ಶಾಸನ ಸಿದ್ಧಪಡಿ ಸುವಲ್ಲಿ ಲೇಖಕ, ಲಿಪಿಕಾರ, ಕಂಡರಣೆಗಾರರ ಪಾತ್ರ ಮಹತ್ವವಾದುದು. ಲಿಪಿಕಾರ ಶಾಸನದಲ್ಲಿ ಸಾಲುಗಳನ್ನು ಬರೆದರೆ, ಕಂಡರಣೆಗಾರ ಆ ಸಾಲುಗಳನ್ನು ತನ್ನ ಕೌಶಲದಿಂದ ಕೆತ್ತುತ್ತಾನೆ. ಹೆಚ್ಚಾಗಿ ಕಂಡರಣೆಗಾರನು ಅನಕ್ಷರಸ್ಥ. ಹಾಗಾಗಿ ಲಿಪಿಕಾರ ಏನನ್ನು ಬರೆಯುತ್ತಾನೋ ಅದನ್ನು ಕೆತ್ತುವುದಷ್ಟೇ ಈತನ ಕೆಲಸ. ಆದರೆ ಚಪಡನು ಈ ಕ್ಷೇತ್ರದಲ್ಲಿ ಪ್ರತಿಭಾವಂತನು. ಆತನು ಲಿಪಿಕಾರನೂ ಹೌದು, ಕಂಡರಣೆಗಾರನೂ ಹೌದು. ಸಾಮಾನ್ಯವಾಗಿ ಶಾಸನಗಳಲ್ಲಿ ಅರಸನಿಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಶಿಲ್ಪಿಗೆ ಕೊಡುತ್ತಿರಲಿಲ್ಲ. ಶಿಲ್ಪಿಗಳ ಹೆಸರು ಅಜ್ಞಾತವಾಗಿಯೇ ಉಳಿದ ಪ್ರಕರಣಗಳೇ ಅಧಿಕ. ಆದರೆ ಬ್ರಹ್ಮಗಿರಿಯ ಶಾಸನದಲ್ಲಿ ಚಪಡನ ಹೆಸರು ಉಲ್ಲೇಖವಾಗಿರುವುದು ಈ ದೃಷ್ಟಿಯಿಂದ ಕುತೂಹಲಕ್ಕೆ ಎಡೆ ಮಾಡಿದೆ.
ಈತನಿಗೆ ಮಾತ್ರ ಈ ವಿಶಿಷ್ಟವಾದ ಗೌರವ ಅಂದಿನ ಅರಸರಿಂದ ಲಭಿಸಿರಬಹುದೇ?. ಈ ಬಗ್ಗೆ ಸದ್ಯೋಜಾತರು ಕೊಡುವ ಅಭಿಪ್ರಾಯಗಳಲ್ಲಿ ಗಮನಾರ್ಹ. ಅವರು ತಿಳಿಸುವಂತೆ ಅಶೋಕನು ಯಾವುದೇ ಶಾಸನದಲ್ಲಿ ತನ್ನ ಮತ್ತು ಮಕ್ಕಳ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನೂ ಕೆತ್ತಕೂಡದೆಂದು ಕಟ್ಟಾಜ್ಞೆ ಮಾಡಿದ್ದನು. ಈ ಆಜ್ಞೆಯಿಂದ ಚಪಡನೂ ಹೊರತಾಗಿಲ್ಲ. ಆದರೆ ಚಪಡನು ಕರ್ನಾಟಕದ ಬ್ರಹ್ಮಗಿರಿಗೆ ಬರುವ ಕಾಲದಲ್ಲಿ ಅಶೋಕನಿಗೆ ವಯಸ್ಸಾಗಿತ್ತು. ಆತನು ತನ್ನ ಇಳಿವಯಸ್ಸಿನಲ್ಲಿ ದೂರದ ಮಗಧದಿಂದ ಕರ್ನಾಟಕಕ್ಕೆ ಬರುವ ಸಾಧ್ಯತೆಗಳು ಕಡಿಮೆ ಎಂಬ ಧೈರ್ಯ ಚಪಡನಿಗಿತ್ತು. ಇದರೊಂದಿಗೆ ತನ್ನ ಹೆಸರನ್ನು ಕೆತ್ತಲೇಬೇಕೆಂಬ ತುಡಿತ ಅವನಲ್ಲಿ ಬಲವಾಯಿತು. ಇದರ ಪರಿಣಾಮವಾಗಿ ಅಂದಿನವರೆಗೆ ಅಡಗಿಸಿಟ್ಟಿದ್ದ ತನ್ನ ಬಯಕೆಯನ್ನು ನಿಯಂತ್ರಿಸಲು ಆತನಿಗೂ ಅಸಾಧ್ಯವಾಯಿತು. ಹಾಗಾಗಿ ಧೈರ್ಯದಿಂದ ಅಶೋಕನ ಆಜ್ಞೆಯನ್ನು ಮೀರಿ ತನ್ನ ಹೆಸರನ್ನು ಕೆತ್ತಿಯೇ ಬಿಟ್ಟನು. “ಚಪಡೇನ ಲಿಖೀತೇ ಲಿಪಿಕರೇಣ’ ಎಂಬ ಸಾಲು ಆತನ ಒಳಮನಸ್ಸಿನ ತುಡಿತದ ಪರಿಣಾಮವಾಗಿ ಮೂಡಿಬಂದಿತು. ಈ ಸಾಲಿನಲ್ಲಿ ಮೊದಲ ಎರಡು ಪದಗಳು ಬ್ರಾಹ್ಮಿ ಲಿಪಿಯಲ್ಲಿದ್ದರೆ; ಕೊನೆಯ ಪದವು ಖರೋಷ್ಠಿ ಲಿಪಿಯಲ್ಲಿದೆ ಎಂದು ಶಾಸನ ಸಂಶೋಧಕರು ಗುರುತಿಸಿದ್ದಾರೆ. ಈ ಮೂಲಕ ಕರ್ನಾಟಕವು ಲಿಪಿಕಾರರ ಚರಿತ್ರೆಯಲ್ಲಿ ವಿಶೇಷ ಸ್ಥಾನವನ್ನು ಪಡೆಯುವಂತಾಯಿತು.
ನಾಡು ನುಡಿಗೆ ಸೇವೆ ಸಲ್ಲಿಸಿದ ಅನೇಕ ಸಾಧಕರು ಅಜ್ಞಾತರಾಗಿಯೇ ಉಳಿದಿದ್ದಾರೆ. ಅವರ ಕುರಿತು ಹೆಚ್ಚಿನ ಅಧ್ಯಯನಗಳಾಗಬೇಕು. ಅಂಥವರೆಲ್ಲರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೂ ಕೂಡ. ಶಿಲ್ಪಿಗಳ ಇತಿಹಾಸದಲ್ಲಿ ಕರ್ನಾಟಕವು ರಾಷ್ಟ್ರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವನು ಅರಸ ಅಶೋಕ. ಇದರೊಂದಿಗೆ ಈತನ ಕಾಲದಲ್ಲಿದ್ದ ಶಿಲ್ಪಿ ಚಪಡ ಮತ್ತು ಈತನು ಕೆತ್ತಿದ ಬ್ರಹ್ಮಗಿರಿಯ ಶಾಸನ. ಈ ಶಾಸನವು ಕನ್ನಡ ಭಾಷೆಯ ಮೊದಲ ಶಬ್ದದ ಬಗ್ಗೆ ಬೆಳಕು ಚೆಲ್ಲುವುದರೊಂದಿಗೆ ಶಿಲ್ಪಿಗಳ ಇತಿಹಾಸಕ್ಕೂ ನಾಂದಿ ಹಾಡಿದೆ. ಈ ದೃಷ್ಟಿಯಿಂದ ಕರ್ನಾಟಕದ ಬ್ರಹ್ಮಗಿರಿ ಶಾಸನವು ವಿಶೇಷ ಮಹತ್ವ ಪಡೆಯುವುದರೊಂದಿಗೆ ಕನ್ನಡನಾಡಿನ ಕೀರ್ತಿಯನ್ನೂ ಹೆಚ್ಚಿಸಿತು.
– ಡಾ| ಶ್ರೀಕಾಂತ್ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.