ಪಾಕ್ ಎದೆ ನಡುಗಿಸಿದ ಎಂಟೆದೆ ಕಲಿಗಳ ಯಶೋಗಾಥೆ
Team Udayavani, Jul 26, 2019, 5:00 AM IST
ಕಾರ್ಗಿಲ್ ಯುದ್ಧ ದಲ್ಲಿ ಭಾರ ತವು ವಿಜಯ ಸಾಧಿಸಿ 20 ವರ್ಷಗಳಾದವು. ಈ ಗೆಲುವಿನ ಸಂಭ್ರಮೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಅಂದು ಭಾರತಾಂಬೆಯ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ಸಾವಿರಾರು ಯೋಧರಿಂದಾಗಿಯೇ ಇಂದು ನಾವೆಲ್ಲರೂ ನೆಮ್ಮದಿಯಾಗಿದ್ದೇವೆ. ನಮ್ಮ ಸುಂದರ ನಾಳೆಗಳಿಗಾಗಿ ಅಂದು ಜೀವತ್ಯಾಗ ಮಾಡಿದವರೆಷ್ಟೋ ಅಂಗಾಂಗಗಳನ್ನು ಕಳೆದುಕೊಂಡವರೆಷ್ಟೋ… ಜೀವದ ಹಂಗು ತೊರೆದು ದೇಶ ರಕ್ಷಣೆಗೆ ಎದೆಯುಬ್ಬಿಸಿ ನಿಂತ ಧೀರ ಯೋಧರ ಅನುಭವ ಕಥನಗಳು ಇಲ್ಲಿವೆ…
ಬ್ರೇಕ್‌ಫಾಸ್ಟ್ ಮಾಡುವಾಗಲೇ ಸಿಡಿಯಿತು ಬಾಂಬ್
ಅದು ಬೆಳಗ್ಗಿನ ಹೊತ್ತು, ನಾವೆಲ್ಲ ಬ್ರೇಕ್‌ಫಾಸ್ಟ್ ಮಾಡುವ ಸಿದ್ಧತೆ ಯಲ್ಲಿದ್ದೆವು. ನಾವಿದ್ದ ಸ್ಥಳದಲ್ಲೇ ಭೀಕರ
ವಾದ ಮೋಟಾರ್ ಬಾಂಬ್ ಸಿಡಿದಿತ್ತು. ನಮ್ಮ ಮೇಜರ್ ನೇಗಿ ಅವರು ಕೂದ ಲೆಳೆ ಅಂತರದಲ್ಲಿ ಪಾರಾಗಿದ್ದರು. ಆ ಕ್ಷಣವನ್ನು ನೆನೆವಾಗ ಈಗಲೂ ಮೈ ಜುಮ್ಮೆನ್ನುತ್ತದೆ. ಇದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಬಂಟ್ವಾಳ ಮೂಲದ ದಯಾನಂದ ಬಿ.ಎಸ್. ಅವರ ಅನುಭವ.
ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಅವರಿದ್ದ ತಂಡ ದರಾಸ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ಬಿ.ಸಿ.ರೋಡ್ ಸಮೀಪದ ಪೂಂಜರ ಕೋಡಿಯ ದಯಾ ನಂದ 1998- 2000ದ ಮಧ್ಯೆ 2 ವರ್ಷ ಲೇಹ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದು, ಯುದ್ಧದ ಸಂದರ್ಭ ಸೇನೆಯ ಬಿಎಂಪಿ ಯಲ್ಲಿ ಕಾರ್ಯ ನಿರ್ವಹಿಸಿದ್ದರು. ಲೇಹ್‌ನಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ವೇಳೆ ಒಂದೆಡೆ ಉಸಿ ರಾಟಕ್ಕೆ ಆಕ್ಸಿಜನ್ ಕೊರತೆ, ಮತ್ತೂಂದೆಡೆ ಮೈನಸ್ 30 ಡಿಗ್ರಿ ಕೊರೆವ ಚಳಿಯನ್ನು ಇಂದು ನೆನೆವಾಗಲೇ ಮೈ ಜುಮ್ಮೆನ್ನುತ್ತದೆ ಎನ್ನುತ್ತಾರೆ ದಯಾನಂದ್.
ತಂಗಿ ಮದುವೆ ಸಂಭ್ರಮದಲ್ಲಿ ಇರುವಾಗಲೇ ಯುದ್ಧಕ್ಕೆ ಕರೆ
ಕುಂದಾಪುರದ ಬಸ್ರೂರಿನ ವಿಲಾಸಕೇರಿಯ ಗಣಪತಿ ಖಾರ್ವಿಗೆ ಕಾರ್ಗಿಲ್ ಯುದ್ಧದ ಕರೆ ಬಂದದ್ದು ತಂಗಿಯ ಮದುವೆಯ ಸಂಭ್ರಮದಲ್ಲಿರು ವಾಗ. ನನ್ನ ತಂಗಿ ಮದುವೆಗೆಂದು ಊರಿಗೆ ಬಂದಿದ್ದೆ. ಮದುವೆ ಮುಗಿದ ಬೆನ್ನಿಗೇ ಕಾರ್ಗಿಲ್ ಯುದ್ಧ ಘೋಷಣೆಯಾಯಿತು. ಸನ್ನದ್ಧರಾಗಿ ಎನ್ನುವ ಕರೆ ಸೇನೆಯ ಮೇಲಾಧಿಕಾರಿಗಳಿಂದ ಬಂತು ಎಂದು ಯುದ್ಧದ ಅನುಭವ ಬಿಚ್ಚುತ್ತಾರೆ ಗಣಪತಿ.
ಕೃಷ್ಣ ಖಾರ್ವಿ – ಮಂಜಿ ಖಾರ್ವಿ ದಂಪತಿಯ ಪುತ್ರರಾದ ಗಣಪತಿ ಖಾರ್ವಿಯವರು ಬಿಎಸ್‌ಎಫ್‌ನ 171 ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿ ಕಳೆದ ವರ್ಷವಷ್ಟೇ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ನಮ್ಮನ್ನು ಕಾರ್ಗಿಲ್‌ನ ಕೆಳಗಿರುವ ಸೈನಿಕ್ ಕುಂಡ್‌ನಲ್ಲಿ ನಿಯೋಜಿಸಿದ್ದರು. ಅದು ಎತ್ತರದಲ್ಲಿದ್ದ ನೇರವಾದ ಗುಡ್ಡವಾಗಿದ್ದರಿಂದ ಮೇಲೆ ಹತ್ತುವಾಗ ನನ್ನ ಕಾಲಿಗೆ ಗಾಯವಾಗಿತ್ತು. ಸಂಜೆ 6 ಗಂಟೆ ನಂತರ ಬೆಂಕಿ ಹಾಕುವಂತಿರಲಿಲ್ಲ. ಊಟಕ್ಕೆ ಸಮಸ್ಯೆಯಾಗುತ್ತಿತ್ತು ಎಂದು ಆ ದಿನಗಳ ಅನುಭವಗಳನ್ನು ಮೆಲುಕು ಹಾಕುತ್ತಾರೆ ಗಣಪತಿ.
ಪರಾಕ್ರಮಕ್ಕೆ ಮೂರು ಪ್ರಶಸ್ತಿ ಗಳಿಸಿದ ಗುರುಪ್ರಸಾದ್ ರೈ
1999, ಮೇ ಒಂದನೇ ವಾರದಲ್ಲಿ ಕಾಶ್ಮೀರ ತಲುಪಿದೆವು. ಅದಾಗಲೇ ಪ್ರತಿ ಪೋಸ್ಟ್‌ನಿಂದಲು ಪೈರಿಂಗ್ ಆರಂಭ ವಾಗಿತ್ತು. ನಮಗೆ ಅಗತ್ಯ ಯುದ್ಧ ಸಾಮಾಗ್ರಿ ಕೊಂಡುಹೋಗಿ ತುಂಬಿಸುವ ಜವಾಬ್ದಾರಿ ನೀಡಲಾಗಿತ್ತು.
ನಾವು ಸಂಚರಿಸುವ ವಾಹನ ಮಾರ್ಗ ಕೂಡ ಪಾಕಿಸ್ಥಾನದ ಗುರಿಯಾಗಿತ್ತು. ನಮ್ಮ ಒಂದು ವಾಹನ ಬಾಂಬ್ ದಾಳಿಗೆ ಭಸ್ಮವಾಗಿತ್ತು. ಹಲವು ಸೈನಿಕರು ಹುತಾತ್ಮರಾಗಿದ್ದರು. ತ್ವರಿತವಾಗಿ ಮದ್ದುಗುಂಡು, ಆಹಾರವನ್ನು ಸೈನಿಕರ ಕ್ಯಾಂಪ್‌ಗೆ ಸಾಗಿಸುವುದು ನಮ್ಮ ಕೆಲಸವಾಗಿತ್ತು. ನನಗೆ ಆಪರೇಷನ್ ರಕ್ಷಕ್, ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ್ ಎಂಬ ಮೂರು ಗೌರವ ದೊರೆಯಿತು.ಇದು ಗುರುಪ್ರಸಾದ್ ರೈಯವರ ಅನುಭವ ಕಥನ. ಕಾರ್ಗಿಲ್ ಯುದ್ಧದ ಸಂದರ್ಭ ಅವರಿಗೆ ಬರೀ 21 ವರ್ಷ.
ರಷ್ಯನ್ ಗನ್ ಟ್ಯಾಂಕರ್ ಚಲಾವಣೆ
ಕಾರ್ಕಳ ತಾಲೂಕಿನ ಜಯ ಮೂಲ್ಯ ಸೇನೆಗೆ ಸೇರಿ 13 ವರ್ಷಗಳಾಗಿದ್ದವು. ಗಡಿ ಪ್ರದೇಶದಿಂದ 600 ಕಿ.ಮೀ. ದೂರದ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಸೇವೆ ಸಲ್ಲಿ ಸುತ್ತಿದ್ದರು. ಅವರ ಅನುಭವವನ್ನು ಕೇಳಿ: ಅಂದು ಸೇನಾ ಅಧಿಕಾರಿಯೊಬ್ಬರಿಂದ ಯುದ್ಧದಲ್ಲಿ ಭಾಗವಹಿಸುವಂತೆ ಆದೇಶ ಬಂತು. ಅದರಂತೆ ರಾಜಸ್ಥಾನದ ರಾಯ ಸಿಂಗ್ ನಗರದ ಕಡೆ ಪ್ರಯಾಣ ಹೊರಟೆವು.
ಯಾವ ಸಮಯದಲ್ಲೂ ಬಿಲ್ವಡ್‌ನ ಮೂಲಕ ಶತ್ರುಗಳು ನುಸುಳಬಹುದು ಎನ್ನುವ ಸೂಚನೆಯಿತ್ತು. ಅಂತೆಯೇ ದಿನ ಪೂರ್ತಿ ಶತ್ರುಗಳ ಸಂಹಾರಕ್ಕೆ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಸಿದ್ಧರಾಗಿದ್ದೆವು. ಆ ಸಂದರ್ಭ ನಾನು 1.33 ಎಂ.ಎಂ. ಬಂದೂಕುಗಳನ್ನು ತುಂಬಿಕೊಂಡ ರಷ್ಯನ್ ಗನ್ ಟ್ಯಾಂಕರ್ ವ್ಯಾನ್ ಚಾಲಕನಾಗಿ ಕಾರ್ಯನಿರ್ವ ಹಿಸುತ್ತಿದ್ದೆ.
ಯುದ್ಧ ಪ್ರಾರಂಭ ವಾಗಬೇಕು ನಾವೇ ಮೊದಲು ಗುಂಡು ಹಾರಿಸಬೇಕು ಎನ್ನುವ ಆಸೆ ಸಹ ನಮ್ಮ ತಂಡ
ದಲ್ಲಿ ಇತ್ತು. ಆದರೆ ಅಷ್ಟು ಹೊತ್ತಿಗಾಗಲೇ ಸ್ಕೈ ಫೈರ್ ಆಯಿತು. ಭಾರತ ಆಗ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿತ್ತು. ಯುದ್ಧವು ನಿಂತು ಹೋಗಿತ್ತು ಎಂದು ಆ ಕಾಲವನ್ನು ನೆನಪಿಸಿಕೊಳ್ಳುತ್ತಾರೆ ಜಯ ಮೂಲ್ಯರು. ಪ್ರಸ್ತುತ ಅವರು ಕಾರ್ಕಳದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಗುಂಡೇಟು ತಿಂದು ಬದುಕಿ ಬಂದ ಲ್ಯಾನ್ಸಿ
“1999ರ ಮೇ ತಿಂಗಳು. ನಮಗೆ ಗೊತ್ತಿತ್ತು ಯುದ್ಧ ಆಗಿಯೇ ಆಗ್ತದೆ ಅಂತ. ಅದಕ್ಕೆ ನಾವೆಲ್ಲರೂ ತಯಾ ರಾಗಿದ್ದೆವು. ನಾನಾಗ 110-4 ಮೀಡಿಯಂ ರೆಜಿಮೆಂಟ್‌ನ 30 ಆರ್ ಆರ್‌ನಲ್ಲಿ ಸಿಪಾಯಿ ಯಾಗಿದ್ದೆ. ಹದಿನೈದು ಮಂದಿ ಜತೆಗಿದ್ದರು. ಮೈನಸ್ 48 ಡಿಗ್ರಿ ವಾತಾ ವರಣ. ಸಿಕ್ಕಿದರೂ ಊಟ ಮಾಡುವ ಮನೋಸ್ಥಿತಿ ನಮ್ಮ ದಾಗಿರಲಿಲ್ಲ.ಯುದ್ಧದಲ್ಲಿ ಬದುಕು ತ್ತೇವಾ ಸಾಯುತ್ತೇವಾ ಎಂದು ಗೊತ್ತಿಲ್ಲದ ಹೊತ್ತು’ ಎಂದು ಆ ದಿನಗಳ ಚಿತ್ರಣ ನೀಡಿದರು ಲ್ಯಾನ್ಸಿ.
1999ರ ಜೂನ್ 14ರಂದು ವೈರಿ ಪಡೆ ಹಾರಿಸಿದ ಗುಂಡು ನನ್ನ ಎದೆಯ ಎಡಭಾಗಕ್ಕೆ ಬಿತ್ತು.ಹೊಟ್ಟೆಯ ಭಾಗಕ್ಕೆ 4 ಗುಂಡು ಬಿದ್ದದ್ದು ಗೊತ್ತು. ಆಮೇಲೇನಾಯಿತೋ. 7 ದಿನ ಕೋಮಾದಲ್ಲಿದ್ದೆ. ನನ್ನನ್ನು ಶ್ರೀನಗರದ ಸೈನಿಕ ಆಸ್ಪತ್ರೆಗೆ ದಾಖಲಿಸಿದ್ದರು. ತಿಂಗಳ ಬಳಿಕ ಚಂಡೀ ಗಢದ ಕಮಾಂಡೋ ಹಾಸ್ಪಿಟಲ್‌ಗೆ, ಅಲ್ಲಿಂದ ಪಂಜಾಬಿನ ಅಂಬಾಲಾ ಆಸ್ಪತ್ರೆಗೆ ಸೇರಿಸಿದರು. ಮುಂದೆ ತಿಂಗಳ ರಜೆ ಮೇಲೆ ಊರಿಗೆ ಬಂದೆ. ನನ್ನ ಅಮ್ಮನನ್ನು ನೋಡಿದ್ದು ಆಗಲೇ. ನಾಸಿಕ್‌ನಲ್ಲಿ ತರ ಬೇತಿ. ಮುಂದೆ ಅಮೃತ್‌ಸರ, ಸಿಲಿಗುರಿ, ಕೊಯಂ ಬತ್ತೂರ್, ಕಾರ್ಗಿಲ್, ಪಂಜಾಬ್, ಅಸ್ಸಾಂ, ಗುಜರಾತ್ ಇಲ್ಲೆಲ್ಲ ಒಟ್ಟು 17 ವರ್ಷಗಳ ಸೇವಾನುಭವದೊಂದಿಗೆ 2009ರ ಮಾರ್ಚ್ 31ಕ್ಕೆ ನಿವೃತ್ತಿಯಾಗಿದ್ದಾರೆ.
ಮೆಡಿಕಲ್ ಕೋರ್ಸ್‌ನಲ್ಲಿ ಸೇವೆ ಸಲ್ಲಿಸಿದ ಉಮಾನಾಥ
ಕಾರ್ಗಿಲ್ ಯುದ್ಧಭೂಮಿಯಲ್ಲಿ ಒಂದೂವರೆ ವರ್ಷ ಇದ್ದೆ. ಆಗ ನಾನಿದ್ದದ್ದು ಆರ್ಮಿ ಮೆಡಿಕಲ್ ಕೋರ್ಸ್‌ನಲ್ಲಿ. ಅಲ್ಲಿ ಯೋಧರ ಆರೋಗ್ಯಕ್ಕೆ ತುರ್ತು ಸ್ಪಂದಿಸುವ ಜವಾಬ್ದಾರಿ ನನ್ನದಾಗಿತ್ತು. ಗಾಯಗೊಂಡ ಯೋಧರಿಗೆ ಪ್ರಥಮ ಚಿಕಿತ್ಸೆ ನೀಡುವುದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಬೇರೆ ಕಡೆ ಸ್ಥಳಾಂತರಿಸುವುದು ನಮ್ಮ ಕೆಲಸ. ಕಾರ್ಗಿಲ್ ಯುದ್ಧ ಸಂದರ್ಭ ದಿನವೊಂದಕ್ಕೆ ಸುಮಾರು 200ರಿಂದ 300 ಮಂದಿ ಸೇನಾಸ್ಪತ್ರೆಗೆ ದಾಖಲಾಗುತ್ತಿದ್ದರು. ಫೈರಿಂಗ್ ಸಂದರ್ಭ ಗಂಭೀರ ಗಾಯಗೊಂಡ ಯೋಧರನ್ನು ಕಂಡಿದ್ದೇನೆ. ಆಗ ನಮ್ಮೆಲ್ಲರ ಮನಸ್ಸಿನಲ್ಲೂ ಇದ್ದದ್ದು ಒಂದೇ ಭಾವ ಎಲ್ಲಕ್ಕಿಂತ ದೇಶ ಮುಖ್ಯ.
ಸೋನ್‌ಮಾರ್ಗ ಬಳಿ ನಡೆದ ಗುಂಡಿನ ದಾಳಿಯಲ್ಲಿ ಹಲವು ಮಂದಿ ಯೋಧರು ಹುತಾತ್ಮರಾದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಹಲವರಿಗೆ ಗಂಭೀರ ಗಾಯಗಳಾಗಿದ್ದವು. ಕಾರ್ಗಿಲ್ ಕದನ ಆರಂಭಗೊಂಡ ಬಳಿಕ ಸುಮಾರು 11 ತಿಂಗಳು ಮನೆಗೆ ಬರುವುದು ಬಿಡಿ, ಸಂಪರ್ಕ ಕೂಡ
ಇರಲಿಲ್ಲ.
ಹಿರಿಯರ ಸಮಯ ಪ್ರಜ್ಞೆಯಿಂದ ಬದುಕಿದ ಹೀರೊ
ಮಧ್ಯಾಹ್ನ 12ರಿಂದ 1 ಗಂಟೆಯ ಹೊತ್ತು. ಊಟ ಮುಗಿಸಿದ ಬಳಿಕ ವಿಶ್ರಾಂತಿಗೆಂದು ಕುಳಿತು ಕೊಂಡಿದ್ದೆವು. ಹಗಲು ಹೊತ್ತಿನಲ್ಲಿ ಫೈರಿಂಗ್ ಆಗಲಿಕ್ಕಿಲ್ಲ ಎಂದು ಅಂದು ಕೊಂಡಿದ್ದೆವು. ಗನ್ ಏರಿಯಾ ಅದಾ ಗಿತ್ತು. ರಾತ್ರಿ ಎಲ್ಲ ಫೈರಿಂಗ್ ನಡೆಯು ತ್ತಿದ್ದ ಕಾರಣ ನಮಗೂ ಆ ಸಮಯದಲ್ಲಿ ನಿದ್ದೆ ಆವರಿಸಿತು. ಆ ಸಮಯದಲ್ಲೇ ಫೈರಿಂಗ್ ಸದ್ದು ಕೇಳಿಸತೊಡಗಿತು. ಇದು ಕನಸು ಎಂದು ಅಂದುಕೊಂಡಿದ್ದೆ.
ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಯಾರೋ ಎಳೆದು ಕೊಂಡು ಹೋಗುವಂತೆ ಅನ್ನಿಸತೊಡಗಿತು. ಹಿರಿಯ ಅಧಿಕಾರಿಯೊಬ್ಬರು ನನ್ನನ್ನು ಎತ್ತಿಕೊಂಡು ಹೋಗಿ ಬಂಕರ್ ಒಳಗೆ ಹಾಕಿದ್ದರು. ಆ ಸಂದರ್ಭದಲ್ಲಿ ಪೂರ್ತಿ ಫೈರಿಂಗ್ ಆಗುತ್ತಿತ್ತು. ನೋಡುನೋಡುತ್ತಿದ್ದಂತೆ ನಾನು ಮಲಗಿದ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಅನಂತರ ನನಗೆ ಹಿರಿಯ ಅಧಿಕಾರಿಗಳು ಘಟನೆಯ ಮಾಹಿತಿ ನೀಡಿದರು. ಆ ಕೆಲವು ಸೆಕೆಂಡುಗಳ ಅಂತರದಲ್ಲಿ ನಾನು ಪಾರಾಗಿದ್ದೆ. ಹಿರಿಯ ಅಧಿಕಾರಿಗಳ ಸಮಯ ಪ್ರಜ್ಞೆ ನನ್ನನ್ನು ಬದುಕುಳಿಸಿತು. ಕಾರ್ಗಿಲ್ ಯುದ್ದ ಮುಗಿಯುವ ವರೆಗೂ ನಾವು ಅಲ್ಲಿದ್ದೆವು. ರಾತ್ರಿ ಹೊತ್ತು ಕೂಡ ನಿದ್ದೆ ಎಂದಿರಲಿಲ್ಲ. ಸ್ವಲ್ಪ ನಿದ್ದೆ ಆವರಿಸುವಾಗಲೇ ಫೈರಿಂಗ್‌ಗಳಾಗುತ್ತಿದ್ದವು ಎನ್ನುತ್ತಾರೆ ನಾ| ರಾಜೇಶ್ ಎಂ.ಕೆ. ಮೂಡುಬಿದಿರೆಯ ಒಂಟಿಕಟ್ಟೆಯ ನಿವಾಸಿಯಾದ ಇವರು 1996ರಲ್ಲಿ ನೇಮಕಗೊಂಡು ಬೆಟಾಲಿಕ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 16 ವರ್ಷ ಇವರು ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಮೊದಲ ಬ್ಯಾಚ್‌ನ ಗನ್‌ಮ್ಯಾನ್
ಯುದ್ಧ ಆರಂಭಕ್ಕೂ ಮುನ್ನ ಆಕ್ರ ಮಿತ ಪ್ರದೇಶಕ್ಕೆ ಬಂಕರ್‌ನಲ್ಲಿ ಕುಳಿತ ಉಗ್ರರ ಸದೆಬಡಿಯಲು 15 ಭಾರ
ತೀಯ ಸೈನಿಕರ ತಂಡ ದಾಳಿ ನಡೆಸಿತ್ತು. ಕಣ್ಣೆದುರೇ ಜತೆಗಾರರನ್ನು ಕಳೆದು ಕೊಂಡು, ಮೊಣಕಾಲಿಗೆ ಎರಗಿದ ಗುಂಡೇಟಿಗೆ ಜಗ್ಗದೆ ಕೆಚ್ಚೆದೆ ತೋರಿದ ವೀರ ಬೆಳ್ತಂಗಡಿಯ ಮೊಗ್ರು ಗ್ರಾಮದ ದಂಬೆತ್ತಿಮಾರು ನಿವಾಸಿ ಚಂದಪ್ಪ ಡಿ.ಎಸ್. ಯುದ್ಧ ಆರಂಭಕ್ಕೂ ಮುನ್ನ ಆಕ್ರಮಣಕಾರರನ್ನು ತಡೆಯಲು ಕಾಶ್ಮೀರದ ಡೋಡಾ ಎಂಬಲ್ಲಿ 1988ರಲ್ಲಿ ಮೊದಲ ಬ್ಯಾಚ್‌ನಲ್ಲಿ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದವರು ಚಂದಪ್ಪ. ಹೊಗೆ ಮೇಲೆದ್ದರೆ ಆಕ್ರಮಿತರ ಗುಂಡು ಎದೆ ಸೀಳುವುದು ನಿಶ್ಚಿತವಾದ್ದರಿಂದ ಮಂಜುಗಡ್ಡೆ ತಿಂದು ಜೀವನ ಸಾಗಿಸಿದ ದಿನಗಳು. ಮದ್ರಾಸ್ ರೆಜಿಮೆಂಟ್‌ನಲ್ಲಿ 10 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿ, 25 ಆರ್‌ಆರ್ ಸ್ಪೆಷಲ್ ವಿಂಗ್‌ನಲ್ಲಿ 3 ವರ್ಷ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಅಂಗವಿಕಲ ಎಂಬ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿದ್ದಾರೆ.
ಹೆಲಿಪ್ಯಾಡ್ ಸುರಕ್ಷತೆಯ ಕರ್ತವ್ಯ
ಎಂ. ಸಂಜೀವ ಗೌಡ ಉಬರಡ್ಕ ಗ್ರಾಮದ ಮದುವೆಗದ್ದೆ ನಿವಾಸಿ. ಪ್ರಸ್ತುತ ಕುಕ್ಕುಜಡ್ಕ ಸಮೀಪದ ಬೊಳ್ಳೂರಿನಲ್ಲಿ ವಾಸವಾಗಿ ದ್ದಾರೆ. 1982ರಿಂದ 1999ರ ತನಕ ಮದ್ರಾಸ್ ಎಂಜಿನಿಯರ್ ಗ್ರೂಪ್‌ನಲ್ಲಿ ಜನರಲ್ ಡ್ನೂಟಿ ನಿರ್ವ ಹಿಸಿದ್ದೆ. ಕಾರ್ಗಿಲ್ ಕದನದ ಸಂದರ್ಭ ಹೆಲಿಪ್ಯಾಡ್ ನಿರ್ವಹಣೆ ನಮ್ಮ ಹೊಣೆಯಾಗಿತ್ತು. ಕಾಪ್ಟರ್‌ಗಳು ಹೆಲಿಪ್ಯಾಡ್‌ನಲ್ಲಿ ಇಳಿಯುವ ಮೊದಲು ಅದಕ್ಕೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಪ್ರಥಮ ಆದ್ಯತೆ ಆಗಿತ್ತು.
ಒಂದು ವರ್ಷ 6 ತಿಂಗಳ ಕಾಲ ಅಲ್ಲಿದ್ದೆ. ಸಿಯಾಚಿನ್‌ನಲ್ಲಿ ಇರುವ ವೇಳೆಯಂತೂ ಹಿಮದ ಗಡ್ಡೆಯನ್ನು ನೀರನ್ನಾಗಿಸಿ ಬಳಸಬೇಕಾದ ಸ್ಥಿತಿ ಇತ್ತು. ಅಲ್ಲಿ ಅಕ್ಟೋಬರ್‌ನಿಂದ ಫೆಬ್ರವರಿ ತನಕ ರೂಟ್ ಬ್ಲಾಕ್ ಇರುವ ಸಂದರ್ಭ ನಮ್ಮ ಪಯಣವಂತೂ ಕಷ್ಟಕರ ಎಂದು ಅನುಭವವನ್ನು ವಿವರಿಸುತ್ತಾರೆ .
ಕೊಡಗಿನ ಇಬ್ಬರು ಯೋಧರು ಹುತಾತ್ಮ
ಕಾರ್ಗಿಲ್ ಯುದ್ಧದಲ್ಲಿ ವೀರರ ನಾಡು ಕೊಡಗಿನ ವೀರ ಸೈನಿಕರು ಕೂಡ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ. ಕೆಚ್ಚೆದೆಯ ಹೋರಾಟದ ಮೂಲಕ ವಿಜಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನೇಕರು ಭೀಕರ ಹೋರಾಟದಲ್ಲಿ ಸೆಣಸಾಡಿದ್ದರು.ಇಬ್ಬರು ವೀರಯೋಧರು ಹುತಾತ್ಮರಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಪೆಮ್ಮಂಡ ಡಿ. ಕಾವೇರಪ್ಪ ಹಾಗೂ ಸೋಮವಾರಪೇಟೆ ತಾಲೂಕಿನ ಕಿರಂಗಂದೂರಿನ ಮರಾಠ ಲೈಟ್ ಇನೆ#ಂಟ್ರಿಯ ಎಸ್.ಕೆ.ಮೇದಪ್ಪ ಅವರು ಹುತಾತ್ಮರಾದವರು.
ಆರ್ಮಿಯಲ್ಲಿ ವೆಹಿಕಲ್ ಮೆಕ್ಯಾನಿಕ್
ಸುಳ್ಯದ ಕುಂದಳದ ತೇಜಕುಮಾರ್ ಕುಂದಳ ನಿವೃತ್ತಿ ಬಳಿಕ ಕಬಕ ಗ್ರಾಮದ ಮುರ ಕಲ್ಲೇಗ ಬಳಿ ವಾಸಿಸುತ್ತಿದ್ದಾರೆ. ಅವರ ಅನುಭವ ಕಥನ ಹೀಗಿದೆ: ನಾನು ಆರ್ಮಿಯಲ್ಲಿ ವೆಹಿಕಲ್ ಮೆಕ್ಯಾನಿಕ್ ಆಗಿ ಸೇವೆಗೆ ಸೇರಿದ್ದೆ. ಕಾರ್ಗಿಲ್ ಕದನ ಸಂದರ್ಭ ಕೆಲವರನ್ನು ಯುದ್ದ ಸ್ಥಳಕ್ಕೆ ಬಿಟ್ಟು ಬರಲು ವಾಹನದಲ್ಲಿ ತೆರಳಿದ್ದೆ. ಆದರೆ ಅಲ್ಲಿ ಬಾಂಬ್ ನ್ಪೋಟಿಸಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ನನಗೆ ಹಿಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಅಲ್ಲೇ 1 ತಿಂಗಳ ಕಾಲ ಉಳಿದುಕೊಂಡು ಸೇವೆ ಸಲ್ಲಿಸಿದೆ. ಯುದ್ಧ ಪ್ರದೇಶದಲ್ಲಿ ಕಾರ್ಯನಿರ್ವಹಣೆ ಆಹಾರ ಜನರನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿತ್ತು. ಯಾವುದೇ ಸಂದರ್ಭ ವಾಹನ ಹಾಳಾಗಬಹುದು. ಆಗ ವಿರೋಧಿಗಳಿಂದ ಆಕ್ರಮಣ ಆಗುವ ಅಪಾಯ ಇತ್ತು. ಆ ವೇಳೆ ರಿಪೇರಿ, ಜತೆಗೆ ವಾಹನದಲ್ಲಿರುವ ರಕ್ಷಣೆ ಎರಡೂ ಜವಾಬ್ದಾರಿ ನಮ್ಮ ಮೇಲಿತ್ತು. ಈ ಸನ್ನಿವೇಶ ವನ್ನು ನಿಭಾಯಿಸಿದ್ದೇನೆ ಎಂದು ಹೆಮ್ಮೆ ಯಿಂದ ಹೇಳುತ್ತಾರೆ ತೇಜಕುಮಾರ್ ಕುಂದಳ.
ಕಾರ್ಗಿಲ್ ಸನಿಹದಲ್ಲೇ ಕೆಲಸ ಮಾಡಿದ್ದ ಕ|ಭಂಡಾರಿ
ಕಾರ್ಗಿಲ್ ಆಸುಪಾಸಿನಲ್ಲೇ ಕೆಲಸ ಮಾಡಿ ಅನುಭವ ಹೊಂದಿರುವ ಕ| ನಿಟ್ಟೆಗುತ್ತು ಶರತ್ ಭಂಡಾರಿ ಅವರು ಅಲ್ಲಿನ ಸೇವಾನುಭವನ್ನು ಹಂಚಿಕೊಂಡಿದ್ದಾರೆ. 1965-66ರಲ್ಲಿ ಕ್ಯಾಪ್ಟನ್ ಆಗಿದ್ದ ಶರತ್ ಭಂಡಾರಿ ಸೇವೆ ನಿಮಿತ್ತ ಲೇಹ್ ಜಿಲ್ಲೆಯಲ್ಲಿದ್ದರು. ಚಳಿಗಾಲದಲ್ಲಿ ಮೈನಸ್ 48 ರಿಂದ 52 ಡಿಗ್ರಿ ತನಕ ಅಲ್ಲಿನ ವಾತಾವರಣ ಇರುತ್ತದೆ. ಅತ್ಯಂತ ದುರ್ಗಮ ಸ್ಥಳವಾಗಿದ್ದ ಆ ಪ್ರದೇಶದಲ್ಲಿ ಪೆಟ್ರೋಲ್, ಆಹಾರ ವಸ್ತು, ಯುದ್ಧ ಸಾಮಾಗ್ರಿ ಎಲ್ಲವನ್ನೂ ನೆಲದಡಿಯಲ್ಲೇ ಕೊಂಡೊಯ್ಯಬೇಕಿತ್ತು. ಎಣ್ಣೆ, ಪೆಟ್ರೋಲ್ ಮುಂತಾದವು ಗಟ್ಟಿಯಾಗದಂತೆ ಒಂದು ರೀತಿಯ ಮದ್ದನ್ನೂ ಅದಕ್ಕೆ ಹಾಕಬೇಕಾದ ಅನಿವಾರ್ಯತೆ ಇತ್ತು. ಅಂತಹ ಸ್ಥಳದಲ್ಲಿ ಕೆಲಸ ಮಾಡಿರುವುದು ಒಂದು ರೋಚಕ ಅನುಭವವೇ ಸರಿ ಎನ್ನುತ್ತಾರೆ ಕ|ಭಂಡಾರಿ.
ಕಾರ್ಗಿಲ್ ದಿನವಾರು ವಿವರ
ಮೇ 3 ಕಾರ್ಗಿಲ್‌ನಲ್ಲಿ ಪಾಕ್ ಸೈನಿಕರ ನುಸುಳುವಿಕೆ ಸ್ಥಳೀಯ ಕುರಿ ಕಾಯುವವರಿಂದ ಪತ್ತೆ
ಮೇ 5 ಭಾರತೀಯ ಸೇನೆಯ ತುಕಡಿ
ರವಾನೆ. ಐದು ಮಂದಿ ಭಾರತೀಯ ಸೈನಿಕರನ್ನು ಹಿಡಿದು ಪಾಕ್ ಸೈನಿಕರಿಂದ ಹಿಂಸೆ.
ಮೇ 9 ಪಾಕ್ ಸೇನೆಯಿಂದ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ. ಭಾರತೀಯ ಶಸ್ತ್ರಾಗಾರಕ್ಕೆ ಹಾನಿ
ಮೇ 10 ದ್ರಾಸ್, ಕಕ್ಸರ್ ಹಾಗೂ ಮುಶೊ ಪ್ರದೇಶಗಳಲ್ಲಿ ಪಾಕ್ ಸೈನಿಕರ ನುಸುಳುವಿಕೆ ಪತ್ತೆ.
ಮೇ 10 ಮಧ್ಯ ರಾತ್ರಿ – ಕಾಶ್ಮೀರ ಕಣಿವೆಯಿಂದ ಕಾರ್ಗಿಲ್ ಪ್ರದೇಶಕ್ಕೆ ಭಾರತೀಯ ಸೇನೆಯ ತುಕಡಿಗಳ ರವಾನೆ.
ಮೇ 26 ಭಾರತೀಯ ವಾಯು ಸೇನೆಯಿಂದ ನುಸುಳು ಕೋರರ ಮೇಲೆ ದಾಳಿ
ಮೇ 27 ಭಾರತೀಯ ವಾಯು ಸೇನೆಯ ಮಿಗ್ 21 , ಮಿಗ್ 27ಗೆ ಹಾನಿ. ಪಾಕ್ ಸೇನೆಯಿಂದ ಲೆ| ಜನರಲ್ ನಚಿಕೇತರ ಬಂಧನ.
ಮೇ 28 ಪಾಕ್ ಸೇನೆಯಿಂದ ಭಾರತೀಯ ವಾಯು ಸೇನೆಯ ಎಂಐ 17 ನಾಶ, ನಾಲ್ಕು ಮಂದಿ ವಾಯು ಸೇನಾ ಸಿಬಂದಿ ಹತ.
ಜೂ.01 ದಾಳಿ ತೀವ್ರಗೊಳಿಸಿದ
ಪಾಕ್. ಎನ್‌ಎಚ್1 (ರಾ. ಹೆ.) ರ ಮೇಲೆ ಬಾಂಬ್ ದಾಳಿ.
ಜೂ. 5 ದಾಳಿ ಸಂಬಂಧ ಪಾಕ್ ಸೈನಿಕರ ಪಾತ್ರ ಕುರಿತು ಭಾರತೀಯ ಸೇನೆ ಯಿಂದ ದಾಖಲೆ ಬಿಡುಗಡೆ.
ಜೂ. 6 ಭಾರತೀಯ ಸೇನೆಯಿಂದ ಕಾರ್ಗಿಲ್ ಗಡಿಯಲ್ಲಿ ಪ್ರತಿ ದಾಳಿ.
ಜೂ. 9 ಬಟಾಲಿಕ್‌ನ 2 ಪ್ರಮುಖ ಪ್ರದೇಶ ಗಳ ಮೇಲೆ ಹಿಡಿತ ಸಾಧಿಸಿದ ಭಾರತೀಯ ಸೇನೆ.
ಜೂ. 11 ಜನರಲ್ ಪರ್ವೇಜ್ ಮುಷರ್ರಫ್ ಮತ್ತು ಲೆ.ಜ. ಅಜೀಜ್ ಖಾನ್ ನಡುವಿನ ಮಾತುಕತೆಯನ್ನು ಬಿಡುಗಡೆ ಮಾಡುವ ಮೂಲಕ ಪಾಕ್ ಪಾತ್ರವನ್ನು ಮತ್ತೂಮ್ಮೆ ಒತ್ತಿ ಹೇಳಿದ ಭಾರತೀಯ ಸೇನೆ.
ಜೂ. 13 ದ್ರಾಸ್ ಪ್ರದೇಶದಲ್ಲಿ ಭಾರತೀಯ ಸೈನಿಕರಿಗೆ ಅದ್ಭುತ ಯಶಸ್ಸು.
ಜೂ. 15 ಕಾರ್ಗಿಲ್‌ನಿಂದ ವಾಪಸು ಸರಿಯು ವಂತೆ ಮುಷಫ್ರಿಗೆ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಸೂಚನೆ.
ಜೂ. 9 ಟೈಗರ್ ಹಿಲ್ ಬಳಿಯ ಪಾಯಿಂಟ್ 5060, 5100 ಪ್ರದೇಶವನ್ನು ವಶ ಪಡಿಸಿಕೊಂಡ ಭಾರತೀಯ ಸೇನೆ.
ಜುಲೈ 2 ಕಾರ್ಗಿಲ್ ಗಡಿ ಬಳಿ ಭಾರತೀಯ ಸೇನೆಯಿಂದ ಬಹು ವಿಧ ದಾಳಿ.
ಜುಲೈ 4 ಸತತ ಹನ್ನೊಂದು ಗಂಟೆಯ ಹೋರಾಟ.ಟೈಗರ್ ಹಿಲ್ ಭಾರತದ ವಶ .
ಜುಲೈ 5 ದ್ರಾಸ್‌ನೂ° ವಶಕ್ಕೆ ತೆಗೆದುಕೊಂಡ ಭಾರತೀಯ ಸೇನೆ. ಕ್ಲಿಂಟನ್ ಜತೆಗಿನ ಭೇಟಿ ಬಳಿಕ ಪಾಕ್ ಸೇನೆ ವಾಪಸು ಪಡೆಯುವುದಾಗಿ ಮುಷರ್ರಫ್ ಘೋಷಣೆ.
ಜುಲೈ 7 ಬಟಾಲಿಕ್ ಪ್ರದೇಶವನ್ನೂ ವಶಪಡಿಸಿಕೊಂಡ ಭಾರತೀಯ ಸೇನೆ.
ಜುಲೈ 11 ಪಾಕ್ ಸೇನೆ ಹಿಂದೆಗೆತ ಆರಂಭ. ಬಟಾಲಿಕ್ ನ ಪ್ರಮುಖ ಪ್ರದೇಶಗಳೂ ಭಾರತೀಯ ಸೇನೆಯ ವಶಕ್ಕೆ.
ಜುಲೈ 14 ಪ್ರಧಾನಿ ವಾಜಪೇಯಿ ಅವರಿಂದ ಆಪರೇಷನ್ ವಿಜಯ ಯಶ ಘೋಷಣೆ.
ಜುಲೈ 26 ಕಾರ್ಗಿಲ್ ಸಂಘರ್ಷಕ್ಕೆ ಕೊನೆ. ಪಾಕ್ ಸೇನೆ ವಾಪಸಾತಿ ಪ್ರಕಟಿಸಿದ ಭಾರತೀಯ ಸೇನೆ.
ಬರಹ:
ಕಿರಣ್‌ಪ್ರಸಾದ್ ಕುಂಡಡ್ಕ, ಕಿರಣ್ ಸರಪಾಡಿ, ಚೈತ್ರೇಶ್ ಇಳಂತಿಲ, ರಾಜೇಶ್ ಪಟ್ಟೆ, ಧನಂಜಯ ಮೂಡುಬಿದಿರೆ, ತೃಪ್ತಿ ಕುಮ್ರಗೋಡು, ಪುನೀತ್ ಸಾಲ್ಯಾನ್, ಪ್ರಶಾಂತ್ ಪಾದೆ, ಧನ್ಯಾ ಬಾಳೆಕಜೆ,
ಲಕ್ಷ್ಮೀಶ್ ಮಡಿಕೇರಿ, ಕಾರ್ತಿಕ್ ಅಮೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.