ಮುಹಿಲನ್‌ ಎಂಬ ಧೀರನ ಕಥನ

ಕಾರ್ಗಿಲ್ ವಿಜಯ

Team Udayavani, Jul 25, 2019, 5:00 AM IST

q-41

ಕಾರ್ಗಿಲ್‌ ಯುದ್ಧ ವಿಜಯಕ್ಕೀಗ 20ನೆಯ ಸಂಭ್ರಮೋತ್ಸವ. ನೂರಾರು ಸೈನಿಕರ ಶೌರ್ಯದ ಫ‌ಲವಾಗಿ ಅಂದು ಪಾಕ್‌ ವಶಪಡಿಸಿಕೊಂಡಿದ್ದ ವ್ಯೂಹಾತ್ಮಕ ಪ್ರದೇಶಗಳೆಲ್ಲ ನಮಗೆ ಮರುವಶವಾದವು. ಈ ಹೋರಾಟದಲ್ಲಿ ನಮ್ಮ ನೂರಾರು ಸೈನಿಕರು ಪ್ರಾಣತ್ಯಾಗ ಮಾಡಿದರು… ನಿಸ್ಸಂಶಯವಾಗಿಯೂ ಕಾರ್ಗಿಲ್‌ ಯುದ್ಧ ಭಾರತದ ಸೈನ್ಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ್ದಕ್ಕೆ, ಪಾಕಿಸ್ತಾನದ ಉದ್ಧಟತನದ ಸದ್ದಡಗಿಸಿದ್ದಕ್ಕೆ ಚಿರ ಸ್ಮರಣೀಯವಾಗಿ ಇರಲಿದೆ…

971ರಯುದ್ಧದಲ್ಲಿ ಭಾರತದೆದುರು ಹೀನಾಯ ಸೋಲನುಭವಿಸಿ, ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡು, 93,000 ಪಾಕಿ ಸೈನಿಕರು ಭಾರತೀಯ ಸೈನ್ಯಕ್ಕೆ ಶರಣಾಗತರಾಗಿ ಅವಮಾನಿತಗೊಂಡದ್ದು ಪಾಕ್‌ನ ಪ್ರತಿಯೊಬ್ಬ ಪ್ರಜೆ, ಸೈನಿಕನಿಗೂ ಇಂದಿಗೂ ಸಹ ಸಹಿಸಲಾರದ ತೇಜೋವಧೆಯ ವಿಷಯ.

ಸೇಡಿನ ಮನೋಭಾವ ಎಷ್ಟು ಆಳವಾಗಿ ಅಲ್ಲಿನ ಜನಮನಗಳಲ್ಲಿ ಬೇರೂರಿದೆ ಎಂದರೆ, ಭಾರತಕ್ಕೆ ಕಿರಿಕಿರಿ ಮಾಡಲು ಸಣ್ಣ ಅವಕಾಶ ಸಿಕ್ಕರೂ ಸಾಕು ಬೆನ್ನೆತ್ತಿ ಹೋಗಿಬಿಡುತ್ತಾರೆ. ಅಂಥದೊಂದು ಅವಕಾಶ ಪಾಕಿಸ್ತಾನಕ್ಕೆ ಸಿಕ್ಕಿದ್ದು ಸಿಯಾಚಿನ್‌ ನೀರ್ಗಲ್ಲ ಪ್ರದೇಶದಲ್ಲಿ. ಅಸ್ಪಷ್ಟ ಗಡಿ ನಿಯಂತ್ರಣ ರೇಖೆಯ ಗೊಂದಲವನ್ನೇ ದಾಳವಾಗಿಟ್ಟುಕೊಂಡು ಪಾಕಿಸ್ತಾನ ಸಿಯಾಚಿನ್‌ ನೀರ್ಗಲ್ಲಿಗೆ ಹಿಂಬಾಗಿಲಿನಿಂದ ಪದೇಪದೇ ಲಗ್ಗೆ ಹಾಕುವ ಕುತಂತ್ರ ಸಫ‌ಲವಾಗಲಿಲ್ಲ, ಆಗುವುದೂ ಇಲ್ಲ.

1984ರಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಶನ್‌ ಮೇಘದೂತ’ ಕಾರ್ಯಾಚರಣೆಯಲ್ಲಿ ಸಿಯಾಚಿನ್‌ ಶಿಖರದಿಂದ ಪಾಕಿಸ್ತಾನದ ಸೈನ್ಯವನ್ನು ಕೆಳಗೆ ತಳ್ಳಲಾಯಿತು. ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ 2500 ಚ. ಕಿಮೀಗಳಷ್ಟು ಭೂಮಿಯನ್ನು ಮರು ವಶಪಡಿಸಿಕೊಳ್ಳಲಾಯಿತು. ಈ ಅವಮಾನ ಪಾಕಿಸ್ತಾನದ ಸೈನ್ಯಾಧಿಕಾರಿಗಳ ಮನಸ್ಸಿನಲ್ಲಿ ಹೊಗೆಯಾಡುತ್ತಲೇ ಇತ್ತು. ಭಾರತೀಯ ಸೈನ್ಯದ ಮೇಲೆ ಸೇಡುತೀ ರಿಸಿಕೊಳ್ಳುವ ಅವಕಾಶಕ್ಕೆ ಹೊಂಚುಹಾಕಿಕೊಂಡು ಕೂತಿತ್ತು. 1987 ರಲ್ಲಿ ಮತ್ತೂಮ್ಮೆ ಸಿಯಾಚಿನ್‌ ಮೇಲೆ ಪಾಕಿಸ್ತಾನದ ದಾಳಿಯ ಯತ್ನವನ್ನು ಭಾರತೀಯ ಸೇನೆ ನಿಷ್ಕ್ರಿಯ ಗೊಳಿಸಿತು. ರೊಚ್ಚಿಗೆದ್ದ ಪಾಕಿಸ್ತಾನ, ಬ್ರಿಗೇಡ್‌ ಜನರಲ್ ಮುಷರಫ್ ನೇತೃತ್ವದಲ್ಲಿ ಮಗದೊಮ್ಮೆ 1989ರಲ್ಲಿ ದಾಳಿ ಪ್ರಯತ್ನ ನಡೆಸಿ ಹೀನಾಯ ಸೋಲುಂಡು ಓಡಿಹೋಯಿತು.

1999ರಲ್ಲಿ ಯಾವಾಗ ಜನರಲ್ ಮುಷರಫ್ ಪಾಕ್‌ ಸೇನೆಯ ಮುಖ್ಯಸ್ಥ ರಾದರೋ ಅಂದಿನಿಂದಲೇ ಸಿಯಾಚಿನ್‌ ಸೋಲಿನ ಸೇಡುತೀರಿಸಿಕೊಳ್ಳುವ ಷಡ್ಯಂತ್ರ ರಚನೆ ಪ್ರಾರಂಭವಾಗಿಬಿಟ್ಟಿತು…

ರಾಷ್ಟ್ರೀಯ ಹೆದ್ದಾರಿ ನಂಬರ್‌ 1ಡಿ, ಶ್ರೀನಗರದಿಂದ ಲೇಹ್‌ ಲಡಾಖೀನ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ. ಇದರ ಮುಖಾಂತರವೇ ಸಿಯಾಚಿನ್‌ ನೀರ್ಗಲ್ಲಿಗೆ ಸೈನಿಕರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ಈ ಹೆದ್ದಾರಿ ಕಾರ್ಗಿಲ್ ಎನ್ನುವ ಪಟ್ಟಣದ ಮುಖಾಂತರ ಹಾದುಹೋಗುತ್ತದೆ. ಕಾರ್ಗಿಲ್ ಗಡಿನಿಯಂತ್ರಣ ರೇಖೆಯಿಂದ ಕೆಲವೇ ಕಿಮೀಗಳಷ್ಟು ದೂರವಿದೆ. ಸಿಂಧೂನದಿಯ ಉಪನದಿ ಸುರು ನದಿಯ ತಟದಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು 9000 ಅಡಿಗಳಷ್ಟು ಎತ್ತರದಲ್ಲಿದೆ. ಕಾರ್ಗಿಲ್ ಪಟ್ಟಣದಿಂದ ದ್ರಾಸ್‌ ಪಟ್ಟಣಕ್ಕೆ ಇರುವ ದೂರ ಸುಮಾರು 65 ಕಿಮೀಗಳಷ್ಟು. ಕಿರಿದಾದ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಕಡಿದಾದ ಪರ್ವತ ಶಿಖರ ಶ್ರೇಣಿಗಳಿವೆ. ಕೆಲವು ಕಡೆ ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿಯಷ್ಟು ಎತ್ತರದವರೆಗೂ ಇದೆ. ಈ ಶಿಖರಗಳ ಮೇಲೆ ಭಾರತೀಯ ಸೈನ್ಯದ ಕೆಲವು ಕಾವಲು ಪೋಸ್ಟುಗಳಿವೆ. ಚಳಿಗಾಲದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಾವಲು ಸೈನಿಕರು ಸ್ವಲ್ಪ ಕೆಳಗಿರುವ ಪೋಸ್ಟುಗಳಿಗೆ ಇಳಿದು ಬರುತ್ತಾರೆ. ಅತ್ತಕಡೆ ಪಾಕಿಸ್ತಾನವೂ ಹಾಗೇ ಮಾಡುತ್ತದೆ. ಇದೊಂದು ಅಲಿಖೀತ ಒಪ್ಪಂದ ಎರಡೂ ದೇಶಗಳ ನಡುವೆ. ಪುನಃ ಮೇ ತಿಂಗಳಿನಷ್ಟೊತ್ತಿಗೆ ಮೇಲೇರಿ ಬಂದು ತಮ್ಮ ತಮ್ಮ ಪೋಸ್ಟುಗಳನ್ನು ನಿಭಾಯಿಸುತ್ತಾರೆ.

ಆ ಸಮಯಕ್ಕೆಂದೇ ಹೊಂಚುಹಾಕಿಕೊಂಡು ಕುಳಿತಿದ್ದರು ಜನರಲ್ ಮುಷರಫ್!

ಆ ಸಮಯದಲ್ಲಿ ಪಾಕಿಸ್ತಾನದ ಸೈನ್ಯವನ್ನು ಕಾಶ್ಮೀರದ ಭಯೋ ತ್ಪಾದಕರ ವೇಷದಲ್ಲಿ ಶಿಖರಗಳಿಗೆ ಕಳುಹಿಸಿ ಅಲ್ಲಿಂದ ಹೆದ್ದಾರಿಯ ಮೇಲೆ ದಾಳಿ ನಡೆಸಿ ಲಡಾಖೀನ ಪ್ರದೇಶ, ಅದರಲ್ಲೂ ಸಿಯಾಚಿನ್‌ ನೀರ್ಗಲ್ಲು ಶಿಖರಕ್ಕೆ ಕಾಶ್ಮೀರದೊಂದಿಗೆ ಸಂಪರ್ಕ ಕಡಿದು ಹಾಕಿ, ಪುನಃ ಸಿಯಾಚಿನ್‌ ಮೇಲೆ ಅಧಿಪತ್ಯ ಸಾಧಿಸುವ ವ್ಯೂಹದ ರಚನೆಯನ್ನು ಮಾಡುತ್ತದೆ ಪಾಕ್‌. ಸೈನಿಕರನ್ನು ಹುರಿದುಂಬಿಸಿ, ಅವರಿಗೆ ಬೇಕಾದ ಶಸ್ತ್ರಾಸ್ತ್ರ, ತಿಂಗಳಾನುಗಟ್ಟಲೆ ಸಾಕಾಗುವಷ್ಟು ಆಹಾರ ಸರಬರಾಜು ಮಾಡುವ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗುತ್ತದೆ. ಚಳಿಗಾಲದ ಕೊರೆ ಯುವ ಚಳಿ ಮತ್ತು ಹಿಮಪಾತದ ನಡುವೆ ಈ ಪ್ರಕ್ರಿಯೆ ನಡೆದು ಹೋಗುತ್ತದೆ. ಈ ವಿಷಯ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್‌ ಷರೀಫ್ಗೂ ಗೊತ್ತಿರುವುದಿಲ್ಲ! ಇದರ ಸುಳಿವು ಭಾರತೀಯ ಸೈನ್ಯಕ್ಕೆ ಸಿಕ್ಕಿದ್ದೂ ತಡವಾಗಿ. ಅಷ್ಟೊತ್ತಿಗಾಗಲೇ ಟೈಗರ್‌ ಹಿಲ್, ಬಟಾಲಿಕ್‌, ದ್ರಾಸ್‌ ಮತ್ತು ಟೋಲೋಲಿಂಗ್‌ ಸೇರಿದಂತೆ ಹಲವಾರು ಶಿಖರಗಳ ಮೇಲೆ ಪಾಕಿಸ್ತಾನದ ಸೈನಿಕರು ಭದ‌್ರವಾಗಿ ತಳವೂರಿಬಿಟ್ಟಿರುತ್ತಾರೆ. ಭಾರತದ ಸೈನ್ಯಕ್ಕೆ ಇಂತಹದೊಂದು ಗುಪ್ತಮಾಹಿತಿಯ ವೈಫ‌ಲ್ಯದ ಬಗ್ಗೆ ಕಾರ್ಗಿಲ್ ಕದನಾನಂತರ ಹಲವಾರು ಹಂತದ ವಿಚಾರಣೆಗಳಾಗಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯೂ ನಡೆದು ಹೋಗುತ್ತದೆ. ಆ ಬಗ್ಗೆ ಆಮೇಲೆ ವಿಚಾರಿಸಿದರಾಯಿತು.

ಕಡಿದಾದ ದಾರಿಯಲ್ಲಿ..

‘ಆಪರೇಶನ್‌ ವಿಜಯ್’ ಕಾರ್ಯಾಚರಣೆಯ ಮುಖಾಂತರ ಪಾಕಿಸ್ತಾನದ ಅತಿಕ್ರಮಣಕಾರರನ್ನು ಹೊಡೆದೋಡಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಭಾರತೀಯ ಭೂಸೇನೆಯ ಸಂಕಷ್ಟವೇನೆಂದರೆ, ಎತ್ತರದ ಶಿಖರಗಳಲ್ಲಿ ಭದ್ರವಾಗಿ ಬೀಡುಬಿಟ್ಟಿದ್ದ ಪಾಕಿಸ್ತಾನದ ಸೈನಿಕರ ಕಣ್ಣಿಗೆ ಬೀಳದಂತೆ ಕಡಿದಾದ ಶಿಖರಗಳನ್ನು ಹತ್ತುವುದು. ಅತಿಕ್ರಮಣ ಮಾಡಿದ ಪಾಕಿಸ್ತಾನದ ಸೈನಿಕರು ತಮ್ಮ ಸುತ್ತಲೂ ನೆಲಬಾಂಬುಗಳನ್ನು ಹೂತು ಹಾಕಿದ್ದರು, ಹಾಗಾಗಿ ಅವರ ಕಣ್ಣುತಪ್ಪಿಸಿ ಹತ್ತುವ ಪ್ರಯತ್ನ ಮಾಡಿದರೂ ಮೊದಲು ನೆಲಬಾಂಬುಗಳನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಮಾಡಬೇಕಿತ್ತು, ಹಗಲು ಸಮಯದಲ್ಲೇ ನಡೆಯಬೇಕಿತ್ತು. ಪಾಕ್‌ ಸೈನ್ಯ ಭಾರತೀಯ ವಾಯುಸೇನೆಯ ಪ್ರತಿ ದಾಳಿಯನ್ನು ನಿರೀಕ್ಷಿಸಿದ್ದರಿಂದ ವಿಮಾನ ನಿಗ್ರಹ ಮಿಸೈಲುಗಳಿಂದಲೂ ಸಜ್ಜಾಗಿ ಬಂದಿತ್ತು. ಭೂಸೇನೆಯ ಕಾರ್ಯಾಚರಣೆ ಪ್ರಾರಂಭಕ್ಕೂ ಮುಂಚೆ ವಾಯುಪ್ರಹಾರದ ಕಾರ್ಯಾಚರಣೆ ನಡೆಯಲೇಬೇಕು ಎನ್ನುವ ಅನಿವಾರ್ಯತೆ. ಆಗ ಪ್ರಾರಂಭವಾಯಿತು ವಾಯುಸೇನೆಯ ಕಾರ್ಯಾಚರಣೆ ‘ಆಪರೇಶನ್‌ ಸಫೇದ್‌ ಸಾಗರ್‌’!

ಮರೆಯಲಾಗದ ಯೋಧ ಮುಹಿಲನ್‌
ಬೆಳಗಾವಿಯ ಫ್ಲೈಟ್ ಲೆಫ್ಟಿನೆಂಟ್ ಸುಬ್ರಹ್ಮಣ್ಯ ಮುಹಿಲನ್‌ ಬಾಲ್ಯದಿಂದಲೇ ಏರ್‌ಫೋರ್ಸಿನಲ್ಲಿ ಪೈಲಟ್ ಆಗಬೇಕೆಂಬ ಕನಸು ಕಾಣುತ್ತಲೇ ಬೆಳೆದವರು. ಪದವಿ ಮುಗಿಸಿದವರೇ ವಾಯುಸೇನೆಯ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ನಂತರ ವಾಯುಸೇನೆಯ ತರಬೇತಿಯನ್ನೂ ಪೂರ್ಣಗೊಳಿಸಿ ವಾಯುಸೇನೆಯ ಹೆಲಿಕಾಪ್ಟರ್‌ ತಂಡಕ್ಕೆ ಸೇರ್ಪಡೆಯಾದರು. ಸೌಮ್ಯ ಸ್ವಭಾವದ ಈ ಉತ್ಸಾಹೀ ತರುಣ ಹೆಲಿಕಾಪ್ಟರ್‌ ಗನ್ನುಗಳಿಂದ ಫೈರ್‌ ಮಾಡುವುದರಲ್ಲಿ ಎತ್ತಿದ ಕೈ, ಸತತ ಎರಡು ಬಾರಿ ಈ ಸ್ಪರ್ಧೆಗಳಲ್ಲಿ ಪದಕಗಳಿಸಿದ್ದರು. ಶಾರ್ಪ್‌ ಶೂಟರ್‌ ಎನ್ನುವ ಬಿರುದು ಸಹಾ ಗಳಿಸಿದ್ದರು. ಮಾರ್ಚ್‌ 1999. ಮುಹಿಲ್ರಿಗೆ ಹರಿಯಾಣದ ಸರ್ಸಾವ ವಾಯುನೆಲೆಯ 152 ಹೆಲಿಕಾಪ್ಟರ್‌ ಯುನಿಟ್ಟಿಗೆ ವರ್ಗ ವಾಯಿತು. ಕೆಲವೇ ತಿಂಗಳಲ್ಲಿ ಕಾರ್ಗಿಲ್ ಮೇಲೆ ಯುದ್ಧದ ಕಾರ್ಮೋಡಗಳು ದಟ್ಟೈಸುತ್ತಿದ್ದಂತೆ ಇವರ ಯುನಿಟ್ಟಿಗೆ ಶ್ರೀನಗರಕ್ಕೆ ಹೊರಡಲು ಆದೇಶ ಬಂತು. ಎಲ್ಲಾ ಪೈಲಟ್ಟುಗಳು, ಸಹಾಯಕ ಸಿಬ್ಬಂದಿ ತಮ್ಮ ಕುಟುಂಬದ ಸದಸ್ಯರನ್ನು ಸರ್ಸಾವಾದಲ್ಲೇ ಬಿಟ್ಟು ಶ್ರೀನಗರಕ್ಕೆ ಹೊರಟರು.

26 ಮೇ 1999 ಕಾರ್ಗಿಲ್ಲಿನಲ್ಲಿ ಭಾರತೀಯ ವಾಯುಸೇನೆಯ ಕಾರ್ಯಾಚರಣೆ ಪ್ರಾರಂಭ ವಾಯ್ತು. ಸುತ್ತಲಿನ ಪರ್ವತ ಶಿಖರಗಳನ್ನೇರಿ ಕುಳಿತಿದ್ದ ಪಾಕಿಸ್ತಾನಿ ಸೈನಿಕರ ಬಳಿ ಸ್ಟಿಂಗರ್‌ ಎನ್ನುವ ವಿಮಾನ ನಿಗ್ರಹ ಮಿಸೈಲುಗಳು ಇವೆ ಎನ್ನುವ ವಿಷಯ ತಿಳಿದು ಬಂತು. 27 ಮೇ 1999. ಫ್ಲೈಯಿಂಗ್‌ ಆಫಿಸರ್‌ ನಚಿಕೇತರ Might 27 ವಿಮಾನ ಇಂಜಿನ್‌ ತೊಂದರೆಯಿಂದಾಗಿ ಪ್ಯಾರಾಚೂಟಿನ ಸಹಾಯದಿಂದ ವಿಮಾನದಿಂದ ಹೊರಬಂದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಯುದ್ಧ ಕೈದಿಯಾದರು. ಅವರನ್ನೇ ಹುಡುಕಲು ಹೊರಟ ಅಜಯ್‌ ಅಹುಜಾರವರ Might 21 ವಿಮಾನವನ್ನು ಪಾಕಿಸ್ತಾನಿ ಸೈನಿಕರು ಮಿಸೈಲ್ ಪ್ರಹಾರ ಮಾಡಿ ಹೊಡೆದುರುಳಿಸಿದರು.

28 ಮೇ 1999, 152 ಹೆಲಿಕಾಪ್ಟರ್‌ ತಂಡಕ್ಕೆ ನಾಲ್ಕು Mi 17 ಹೆಲಿಕಾಪ್ಟರುಗಳೊಂದಿಗೆ, ದ್ರಾಸ್‌ ಶಿಖರದ ಮೇಲಿದ್ದ ಪಾಕಿಸ್ತಾನದ ಸೈನಿಕರ ಶಿಬಿರಗಳ ಮೇಲೆ ದಾಳಿಮಾಡುವ ಆದೇಶ ಕೊಡಲಾಯಿತು. ಹಿಂದಿನ ದಿನದ ಆಘಾತಕಾರಿ ಸುದ್ದಿಗಳನ್ನು ತಿಳಿದ ಈ ತಂಡ ಮಿಸೈಲುಗಳನ್ನು ದಾರಿತಪ್ಪಿಸುವ ‘ಫ್ಲೇರ್‌’ಗಳನ್ನು ಉಪಯೋಗಿಸಿ ದಾಳಿ ತೀರ್ಮಾನಿಸುತ್ತದೆ. ನಾಲ್ಕು ಹೆಲಿ ಕಾಪ್ಟರುಗಳ ತಾಂತ್ರಿಕ ಪರಿಶೀಲನೆ ನಡೆಸುವಾಗ ಒಂದು ಹೆಲಿಕಾಪ್ಟರಿನಲ್ಲಿ ಈ ಫ್ಲೇರ್‌ ವಿತರಿ ಸುವ ಯಂತ್ರ ಸಮಂಜಸವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಯುತ್ತದೆ. ತಂಡದ ಮುಖಂಡ ವಿಂಗ್‌ ಕಮಾಂಡರ್‌ ಸಿನ್ಹಾರವರು ಇಂದಿಗೆ 3 ಹೆಲಿಕಾಪ್ಟರುಗಳ ದಾಳಿ ಮಾತ್ರ ಮಾಡುವುದು ಎಂದು ನಿರ್ಧರಿಸಿ, ಮುಹಿಲನ್‌ರಿಗೆ ‘ನೀವು ಬರುವುದು ಬೇಡ’ ಎನ್ನುತ್ತಾರೆ. ಇದಕ್ಕೆ ಮಹಿಲನ್‌ ಒಪ್ಪುವುದೇ ಇಲ್ಲ, ‘ನೀವು ನನಗೆ ಕವರ್‌ ಕೊಡಿ ನಾನು ಮಧ್ಯದಲ್ಲಿರುತ್ತೇನೆ’ ಎನ್ನುತ್ತಾರೆ ಮುಹಿಲನ್‌.

ಶಾರ್ಪ್‌ಶೂಟರ್‌ ಎಂದು ಹೆಸರುವಾಸಿ ಯಾಗಿರುವ ಮುಹಿಲನ್‌ ದಾಳಿಯಲ್ಲಿಮುಖ್ಯ ಪಾತ್ರವಹಿಸುತ್ತಾರೆ ಎನ್ನುವುದು ಅರಿತಿದ್ದ ನಾಯಕ ಅರೆ ಮನಸ್ಸಿಂದಲೇ ಒಪ್ಪುತ್ತಾರೆ.

ನಾಲ್ಕೂ ಹೆಲಿಕಾಪ್ಟರುಗಳು ಒಂದರ ಹಿಂದೆ ಒಂದರಂತೆ ಗಗನಕ್ಕೇರುತ್ತವೆ. ಕೆಲವೇ ನಿಮಿಷಗಳಲ್ಲಿ ದ್ರಾಸ್‌ ಶಿಖರದ ಸಮೀಪ ಬಂದು ತಲುಪುತ್ತಾರೆ. ಶಿಖರದ ಮೇಲೆ ಇನ್ನೂ ಮಂಜು ಕವಿದ ವಾತಾವರಣ, ಹಾಗಾಗಿ ಹೆಲಿಕಾಪ್ಟರುಗಳು ಇನ್ನೊಂದು ಸ್ವಲ್ಪ ಕೆಳಗೆ ಇಳಿಯಬೇಕಾದ ಅನಿವಾರ್ಯತೆ.

ವಿಂಗ್‌ ಕಮಾಂಡರ್‌ ಸಿನ್ಹಾ ದಾಳಿ ಪ್ರಾರಂಭಿಸುತ್ತಾರೆ. ಅದೇ ಸಮಯಕ್ಕೆ ಪಾಕ್‌ ಸೈನಿಕರು ಮಿಸೈಲುಗಳನ್ನು ಫೈರ್‌ ಮಾಡಲು ಪ್ರಾರಂಭಿಸುತ್ತಾರೆ, ಆದರೆ ಫ್ಲೇರುಗಳಿಂದಾಗಿ ಮಿಸೈಲು ಹೆಲಿಕಾಪ್ಟರುಗಳ ಹತ್ತಿರ ಬರದೆ ಫ್ಲೇರುಗಳ ಬೆನ್ನೆತ್ತಿ ಹೋಗುತ್ತವೆ. ಈಗ 3ನೇ ಹೆಲಿಕಾಪ್ಟರಿನ, ಅಂದರೆ ಮುಹಿಲನ್‌ ದಾಳಿಯ ಸರದಿ. ಅವರು ಗುಂಡಿನ ಮಳೆಗರೆದು, ಪಾಕಿ ಶಿಬಿರಗಳನ್ನು ಛಿದ್ರಗೊಳಿಸಿದ ದೃಶ್ಯ ಕಾಣಿಸುತ್ತಲೇ, ತಿರುಗಿ ಇನ್ನೊಮ್ಮೆ ದಾಳಿಗೆ ಬರುತ್ತಾರೆ. ಅಷ್ಟೊತ್ತಿಗೆ ಪಾಕಿ ಸೈನಿಕರು ಜೀವ ಉಳಿಸಿಕೊಳ್ಳಲು ಇದ್ದ ಬದ್ದ ಮಿಸೈಲುಗಳನ್ನೆಲ್ಲಾ ಫೈರ್‌ ಮಾಡಿಬಿಡುತ್ತಾರೆ. ಅದರಲ್ಲೊಂದು ಮಿಸೈಲು ಸೀದಾ ಮುಹಿಲನ್‌ಹೆಲಿಕಾಪ್ಟರಿಗೆ ಬಂದು ಸ್ಫೋಟಿಸುತ್ತದೆ. ಮುಹಿಲನ್‌ರ ಹೆಲಿಕಾಪ್ಟರಿನ ಹಿಂಬಾಗ ಛಿದ್ರವಾಗುತ್ತದೆ. ಅದೇ ಅವಸ್ಥೆಯಲ್ಲಿ ಹೆಲಿಕಾಪ್ಟ ರನ್ನು ಕಣಿವೆಯ ಕಡೆ ತಿರಿಗಿಸುತ್ತಾರೆ. ಆದರೆ ಸಮಯ ಮಿಂಚಿತ್ತು ಹೆಲಿಕಾಪ್ಟರಿನಲ್ಲಿದ್ದ ನಾಲ್ಕೂ ಜನ ಹತರಾಗುತ್ತಾರೆ! ಶ್ರೀನಗರದಿಂದ ಹೊರಟ ನಾಲ್ಕು ಹೆಲಿಕಾಪ್ಟರುಗಳಲ್ಲಿ 3 ಮಾತ್ರ ಭಾರವಾದ ಹೃದಯದಿಂದ ಮರಳಿ ಬರುತ್ತವೆ.

ಹೆಲಿಕಾಪ್ಟರಿನಲ್ಲಿ ನ್ಯೂನತೆ ಇದೆ ಎಂದು ತಿಳಿದಿದ್ದರೂ ಅದನ್ನು ಲೆಕ್ಕಿಸದೆ ಹೋರಾಡಿದ ಮುಹಿಲನ್‌ರ ಸಾಹಸ ಅಭಿಮಾನದ ಅಲೆಯನ್ನೇ ಎಬ್ಬಿಸುತ್ತದೆ. ಸಾವಿಗೇ ಸವಾಲೊಡ್ಡಿ ಸೆಣಸಿದ ಈ ವೀರನಿಗೆ ಭಾರತ ಸರ್ಕಾರ ‘ವಾಯು ಸೇನಾ ಪದಕ’ ದಿಂದ ಗೌರವಿಸುತ್ತದೆ.

ಯುದ್ಧದಲ್ಲಿ ಏನಾಯಿತು
ಭಾರತೀಯ ಭೂ ಸೇನ್‌ ಕಾರ್ಗಿಲ್ ಯುದ್ಧಕ್ಕೆ ಆಪರೇಷನ್‌ ವಿಜಯ್‌ ಎಂದು ಕರೆದರೆ, ನಮ್ಮ ವಾಯುಸೇನೆಯು ಇದನ್ನು ಆಪರೇಷನ್‌ ಸಫೇದ್‌ ಸಾಗರ್‌ ಎಂದು ಕರೆದಿತ್ತು.

2. ಕಾರ್ಗಿಲ್ ಯುದ್ಧ 60-75 ದಿನಗಳವರೆಗೆ -10ಗಿಂತ ಕಡಿಮೆ ತಾಪಮಾನವಿದ್ದ ಪ್ರದೇಶದಲ್ಲಿ ನಡೆಯಿತು.

3 .ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್‌ ಎಫ್-ಎಚ್. ಫಿರಂಗಿ ಬಂದೂಕುಗಳ ಬಳಕೆಗೂ ಸಾಕ್ಷಿಯಾಯಿತು. ಆದಾಗ್ಯೂ, ಭಾರತಕ್ಕೆ ಜಿಪಿಎಸ್‌ ಸಹಾಯ ಮಾಡಲು ಅಮೆರಿಕಾ ನಿರಾಕರಿಸಿತಾದರೂ, ಇಸ್ರೇಲ್ ನಮಗೆ ಶಸ್ತ್ರಾಸ್ತ್ರಗಳನ್ನು ಮತ್ತು ತನ್ನ ಮಾನವರಹಿತ ಡ್ರೋನ್‌ಗಳ ಮೂಲಕ ಮಾಹಿತಿಯನ್ನು ರವಾನಿಸಿತು. ಈ ಯುದ್ಧ ಇಸ್ರೇಲ್ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಹೆಚ್ಚಿಸಿದ್ದು ಸುಳ್ಳಲ್ಲ.

4. ಕಾರ್ಗಿಲ್ ಯುದ್ಧಾ ನಂತರ, ಎರಡು ಅನೂಹ್ಯ ರಾಜಕೀಯ ವಿದ್ಯಮಾನಗಳು ಘಟಿಸಿದವು. ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಕ್ಟೋಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದಿತು. ಇನ್ನೊಂದೆಡೆ ಪಾಕಿಸ್ತಾನಕ್ಕೆ ಸೋಲಿನ ಕಹಿ ಅರಗಿಸಿಕೊಳ್ಳಲಾಗಲಿಲ್ಲ. ಜನರಲ್ ಪರ್ವೇಜ್‌ ಮುಷರ್ರಫ್ ಪ್ರಧಾನಿ ನವಾಜ್‌ ಷರೀಫ್ ವಿರುದ್ಧ ಸೇನಾ ದಂಗೆ ನಡೆಸಿ ಅಧಿಕಾರಕ್ಕೇರಿದರು!

5. ಕಾರ್ಗಿಲ್ ಯುದ್ಧದಲ್ಲಿ ಭಾರತದ 527 ಧೀರ ಯೋಧರು ಪ್ರಾಣತ್ಯಾಗ ಮಾಡಿದರೆ, 1363 ಸೈನಿಕರು ಗಾಯಗೊಂಡರು.

ಪ್ರಪಂಚವೇನಂತು?
ಭಾರತ ಪಾಕ್‌ನ ವಿರುದ್ಧ ಯುದ್ಧದಲ್ಲಿ ತಿರುಗಿಬಿದ್ದ ತಕ್ಷಣ, ಜುಲೈ 4 ರಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ರನ್ನು ಭೇಟಿ ಮಾಡಿ ಅವರ ಬೆಂಬಲ ಪಡೆಯಲು ಅಮೆರಿಕಕ್ಕೆ ಓಡಿದರು. ಆದರೆ ಕ್ಲಿಂಟನ್‌ ಷರೀಫ್ಗೆ ‘ಅತಿಕ್ರಮಣಕೋರರು ಮತ್ತು ಪಾಕ್‌ ಸೇನೆಯನ್ನು ಕಾರ್ಗಿಲ್ನಿಂದ ಹಿಂದಕ್ಕೆ ಕರೆಸಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು. ಕ್ಲಿಂಟನ್‌ ತಮ್ಮ ಆತ್ಮಕಥೆಯಲ್ಲಿ ಈ ಘಟನೆಯ ಕುರಿತು ಬರೆದುಕೊಂಡಿದ್ದಾರೆ. ಅತ್ತ ಭಾರತದ ಪ್ರಧಾನಿ ಲಾಹೋರ್‌ಗೆ ತೆರಳಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪ್ರಯತ್ನಿಸುತ್ತಿದ್ದರೆ, ಇತ್ತ ನವಾಜ್‌ ನಡೆ ನಿಜಕ್ಕೂ ಸಿಟ್ಟು-ಗೊಂದಲ ತರಿಸುವಂತಿತ್ತು ಎಂದು ಬರೆದಿದ್ದಾರೆ ಕ್ಲಿಂಟನ್‌. ಜಿ8 ಮತ್ತು ಐರೋಪ್ಯ ರಾಷ್ಟ್ರಗಳೆಲ್ಲ ಪಾಕಿಸ್ತಾನವನ್ನು ಖಂಡಿಸಿ, ಭಾರತಕ್ಕೆ ಬೆಂಬಸಿದವು. ಚೀನಾ ಕೂಡ, ಸೇನೆಯನ್ನು ಹಿಂಪಡೆದು ಶಾಂತಿ ಸ್ಥಾಪನೆಯತ್ತ ಹೆಜ್ಜೆ ಹಾಕುವಂತೆ ಪಾಕ್‌ಗೆ ಎಚ್ಚರಿಸಿತು.

ಪಾಕ್‌ ಅತಿಕ್ರಮಣವನ್ನು ಮೊದಲು ಕಂಡ ಕುರಿಗಾಹಿ
ಕಾರ್ಗಿಲ್ ಸೆಕ್ಟರ್‌ನಲ್ಲಿ ಪಾಕ್‌ ಸೇನೆ ನುಸುಳಿದ ಸುದ್ದಿಯನ್ನು ಮೊದಲು ವರದಿ ಮಾಡಿದ್ದು ತಶಿ ನಂಗ್ಯಾಲ್ ಎಂಬ ಸ್ಥಳೀಯ ಕುರಿಗಾಹಿ. 56 ವರ್ಷದ ತಶಿ ಈಗ ಕಾರ್ಗಿಲ್ನಿಂದ 60 ಕಿ.ಮಿ. ದೂರವಿರುವ ಹಳ್ಳಿಯೊಂದರಲ್ಲಿ ವಾಸಿಸುತ್ತಾರೆ. ಮೇ-3, 1999ರಂದು ಪಾಕಿಸ್ತಾನಿ ನುಸುಳುಕೋರರನ್ನು ತಾವು ನೋಡಿದ ಘಟನೆಯನ್ನು ಅವರು ನೆನಪಿಸಿಕೊಳ್ಳುವುದು ಹೀಗೆ: ” ಅಂದು ಮುಂಜಾವು ನಾನು ಕೆಲವು ಗೆಳೆಯರೊಂದಿಗೆ ಸೇರಿ, ಕಳೆದುಹೋಗಿದ್ದ ನನ್ನ ಯಾಕ್‌(ಟಿಬೆಟ್ ಕಾಡು ಎತ್ತು) ಅನ್ನು ಹುಡುಕಿಕೊಂಡು ಹೊರಟೆ. ಬೈನಾಕ್ಯುಲರ್‌ ಮೂಲಕ ಹುಡುಕುತ್ತಿದ್ದಾಗ‌, ದೂರದ ಶಿಖರದಲ್ಲಿ ಕೆಲವರು ಬಂಕರ್‌ ನಿರ್ಮಿಸಲು ನೆಲ ತೋಡುತ್ತಿದ್ದದ್ದು ಕಾಣಿಸಿತು. ಅದರಲ್ಲಿ ಕೆಲವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಪಠಾಣರ ವೇಶದಲ್ಲಿದ್ದ ಅವರನ್ನು ನೋಡಿದಾಕ್ಷಣ ಅವರು ಆ ಬದಿಯಿಂದ ಬಂದವರೆಂದು ನನಗೆ ಗೊತ್ತಾಗಿಬಿಟ್ಟಿತು. ಓಡೋಡುತ್ತಾ ಬಂದು ಭಾರತೀಯ ಸೇನೆಗೆ ಸುದ್ದಿ ಮುಟ್ಟಿಸಿದೆವು. ನಿಜ ಹೇಳುತ್ತೇನೆ, ನಂತರ ಪರಿಸ್ಥಿತಿ ಇಷ್ಟು ವಿಷಮಿಸುತ್ತದೆ ಎಂದು ನಾನಂತೂ ಊಹಿಸಿರಲಿಲ್ಲ. ಬಹುಶಃ ಅಂದು ನಾನು ಅವರನ್ನು ನೋಡದೇ ಹೋಗಿರುತ್ತಿದ್ದರೆ ಏನಾಗುತ್ತಿತ್ತೋ ಏನೋ. ಮೊದಲೆಲ್ಲ ನನ್ನ ಕೆಲಸದ ಬಗ್ಗೆ ನನಗೆ ಕೀಳರಿಮೆ ಇತ್ತು. ಆದರೆ ದೇವರು ನನ್ನನ್ನು ಕುರಿಗಾಹಿಯಾಗಿಸಿದ್ದು, ದೇಶ ಸೇವೆಗೆ ಎಂದು ನನಗೆ ಈಗ ಅನ್ನಿಸುತ್ತಿದೆ”

ಸಾವು ನೋವು
ಭಾರತದ ಪ್ರಕಾರ: 527 ಭಾರತೀಯ ಸೈನಿಕರು ಹುತಾತ್ಮ, 1363 ಗಾಯಗೊಂಡವರು.
ಪರ್ವೇಜ್‌ ಮುಷರಫ್ ಪ್ರಕಾರ: 1600 ಭಾರತೀಯ ಸೈನಿಕರು ಸಾವು.
ಪಾಕ್‌ ಸೇನೆಯ ಪ್ರಕಾರ: 453 ಪಾಕ್‌ ಸೈನಿಕರ ಸಾವು
ಪರ್ವೇಜ್‌ ಮುಷರ್ರಫ್ ಪ್ರಕಾರ: 357 ಪಾಕ್‌ ಸೈನಿಕರ ಸಾವು
ನವಾಜ್‌ ಷರೀಫ್ ಪ್ರಕಾರ: 2700-4000 ಪಾಕ್‌ ಸೈನಿಕರ ಸಾವು
ಭಾರತದ ಪ್ರಕಾರ: 737-1200 ಪಾಕ್‌ ಸೈನಿಕರ ಸಾವು (ಇದರಲ್ಲಿ 249 ದೇಹಗಳು ಭಾರತದಲ್ಲೇ ಪತ್ತೆಯಾದವು. ಅವುಗಳಲ್ಲಿ 244 ದೇಹಗಳನ್ನು ಭಾರತವೇ ಹೂಳಿತು.)

ಹೀಗಿತ್ತು ಯುದ್ಧ

ಮೇ 3 ಬಟಾಲಿಕ್‌ ಪರ್ವತಗಳ ನಡುವೆ ಪಾಕಿಸ್ತಾನಿ ಅತಿಕ್ರಮಣದ ಬಗ್ಗೆ ಕುರಿಗಾಹಿ ಹುಡುಗರಿಗೆ ತಿಳಿಯಿತು. ಅವರು ಸೇನೆಗೆ ಸುದ್ದಿ ಮುಟ್ಟಿಸಿದರು.

ಮೇ 5 ಸೌರಭ್‌ ಕಾಲಿಯಾ ನೇತೃತ್ವದ 6 ಜನರ ತಂಡವನ್ನು ಕಳುಹಿಸಿದ ಸೇನೆ. ಪಾಕ್‌ ವಶಕ್ಕೆ ಸಿಲುಕಿದ ಕಾಲಿಯಾ ಮತ್ತು ತಂಡ.

ಮೇ 7 ಮೊದಲ ಗುಂಡಿನ ಚಕಮಕಿ. ಕಾರ್ಗಿಲ್ ಗುಡ್ಡಗಳನ್ನು ಹತ್ತಿದ ಭಾರತೀಯ ಸೈನಿಕರತ್ತ ಪಾಕಿಸ್ತಾನದ ದಾಳಿ

ಮೇ 11 ಆಪರೇಷನ್‌ ವಿಜಯ್‌ ಆರಂಭ

ಮೇ 26 ಭಾರತೀಯ ವಾಯುಪಡೆಯ ಆಪರೇಷನ್‌ ಸಫೇದ್‌ ಸಾಗರ್‌ ಆರಂಭ

ಮೇ 27 ಎರಡು ಭಾರತೀಯ ಮಿಗ್‌ ವಿಮಾನಗಳು ಪಾಕಿಗಳ ಸ್ಟಿಂಗರ್‌ ದಾಳಿಗೆ ಬಲಿ

ಮೇ 31 ಪಾಕಿಸ್ತಾನಿ ನಿರ್ಮಿತ ಬಂಕರ್‌ಗಳ ಮೇಲೆ ಮಿರಾಜ್‌ 2000 ಯುದ್ಧ ವಿಮಾನಗಳಿಂದ ದಾಳಿ

ಜೂ.1 ಕಾರ್ಗಿಲ್ ಬಳಿಯ ಬಟಾಲಿಕ್‌ ಪರ್ವತಗಳ ಮೇಲೆ ನೆಲೆಯೂರಿದ್ದ ಪಾಕಿಗಳತ್ತ ಭಾರತೀಯ ಸೈನ್ಯದ ಮೊದಲ ಪ್ರಹಾರ.

ಜೂ. 4 ಬಟಾಲಿಕ್‌ ಪ್ರದೇಶದ ಒಂಬತ್ತು ಸ್ಥಾನಗಳಿಂದ ಅತಿಕ್ರಮಣಕಾರರ ಉಚ್ಚಾಟನೆ

ಜೂ. 6 ಭಾರತೀಯ ನೌಕಾಪಡೆ ಅರಬಿ ಸಮುದ್ರದಲ್ಲಿ ಯುದ್ಧ ಸನ್ನದ್ಧ

ಜೂ.11 ಜನರಲ್ ಮುಷರ್ರಫ್ ಭೂ ಸೇನಾ ಮುಖ್ಯಸ್ಥ ಮೊಹಮ್ಮದ್‌ ಅಜೀಜ್‌ ನಡುವೆ ದೂರವಾಣಿ ಸಂವಾದದ ಟೇಪ್‌ ಬಿಡುಗಡೆ. ಮುಜಾಹಿದೀನ್‌ ಮಾರುವೇಷದ ಅತಿಕ್ರಮಣದ ಹಿಂದಿನ ಪಾಕಿಸ್ತಾನಿ ಸೈನ್ಯದ ಒಳಸಂಚು ಬಯಲು.

ಜೂ.14 ಯುದ್ಧ ವಿರಾಮಕ್ಕೆ ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ ಆಗ್ರಹ. ಪ್ರಧಾನಿ ವಾಜಪೇಯಿ ನಕಾರ. ಭಾರತೀಯ ನೆಲೆಗಳಿಂದ ಅತಿಕ್ರಮಣಕಾರಿಗಳು ತೊಲಗುವವರೆಗೆ ಯುದ್ಧವಿರಾಮ ಅಸಂಭವ ಎಂಬ ದೃಢ ನಿರ್ಧಾರ.

ಜೂ.26 ಅಮೆರಿಕದ ಕಮಾಂಡರ್‌ ಇನ್‌ ಚೀಫ್ ಜನರಲ್ ಆ್ಯಂಟನಿ ಜಿನ್ನಿ ಮತ್ತು ವಿದೇಶಾಂಗ ಸಹಾಯಕ ಸಚಿವ ಗಿಬ್ಸನ್‌ ದೆಹಲಿ ಭೇಟಿ. ಕಾರ್ಗಿಲ್ ಬಗ್ಗೆ ಮಾತುಕತೆ.

ಜೂ.27 ಪಾಕ್‌ ಪ್ರಧಾನಿ ನವಾಜ್‌ ಷ‌ರೀಫ್ ವಿಶೇಷ ಪ್ರತಿನಿಧಿ ನಿಯಾಜ್‌ ನ್ಯಾಕ್‌ ರಹಸ್ಯ ಮಾತುಕತೆಗೆ ದೆಹಲಿ ಭೇಟಿ

ಜೂ.29 ಪಾಯಿಂಟ್ 4700 ಮತ್ತು ಬ್ಲ್ಯಾಕ್‌ ರಾಕ್‌ ಹೈಟ್ಗಳು ಭಾರತದ ವಶಕ್ಕೆ ವಾಪಸ್ಸು.

ಜು. 3 ಭಾರತೀಯ ಸೇನೆಗೆ ಮಹತ್ವದ ವಿಜಯ. ವಿಕ್ರಂ ಬಾತ್ರಾ ಪರಾಕ್ರಮದಿಂದ ಟೈಗರ್‌ ಹಿಲ್ ಮೇಲೆ ತ್ರಿವರ್ಣ ಧ್ವಜಾರೋಹಣ.

ಜು.5 ಅಮೆರಿಕಾಗೆ ಹಾರಿದ ನವಾಜ್‌. ಭಾರತದ ನೆಲದಿಂದ ಅತಿಕ್ರಮಣಕಾರಿಗಳನ್ನು ಮರಳಿಸಲು ಒಪ್ಪಿಗೆ. ಮರಳಿ ಹೋಗಲು ಒಪ್ಪದ ಉಗ್ರವಾದಿಗಳು!

ಜು. 11 ತೀವ್ರಗೊಂಡ ಭಾರತದ ದಾಳಿ, ಎಲ್ಲಾ ಶಿಬಿರಗಳಿಂದ ಪಾಕಿಸ್ತಾನಿ ಪಡೆಗಳ ಪಲಾಯನ.

ಜು.17 ಮಶ್‌ಕೋ, ದ್ರಾಸ್‌, ಬಟಾಲಿಕ್‌ ಗುಡ್ಡಗಳ ಕೆಲವು ಜಾಗಗಳನ್ನು ಬಿಟ್ಟರೆ, ಭಾರತೀಯ ಪ್ರದೇಶಗಳೆಲ್ಲ ಶತ್ರು ಮುಕ್ತ

ಜು. 26 ಎಲ್ಲ ನೆಲೆಗಳು ಮರಳಿ ಭಾರತದ ವಶಕ್ಕೆ, ಭಾರತೀಯ ಸೈನ್ಯದ ವಿಜಯ ಘೋಷಣೆ. ಭಾರತೀಯ ಸೈನ್ಯಕ್ಕೆ ದೊರೆತ ಪಾಕಿಸ್ತಾನಿ ಸೈನಿಕರ ಶವಗಳು 249. ಪಾಕಿಸ್ತಾನ ಸ್ವೀಕರಿಸಿದ್ದು ಮೂರನ್ನು ಮಾತ್ರ. ಉಳಿದವುಗಳಿಗೆ ಭಾರತದಲ್ಲೇ ಶವಸಂಸ್ಕಾರ.

ವಿಂಗ್‌ ಕಮಾಂಡರ್‌ ಸುದರ್ಶನ

 

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.