ಗ್ರಾಮೀಣ ಪುನರುಜ್ಜೀವನದ ಕನಸುಗಾರ – ಕೆ.ಎಂ. ಉಡುಪ
Team Udayavani, Apr 24, 2022, 6:05 AM IST
ದೇಶ ಬಲಿಷ್ಠವಾಗಬೇಕಾದರೆ ಹಳ್ಳಿಗಳು ಬಲಿಷ್ಠ ವಾಗಬೇಕು, ಗ್ರಾಮಗಳ ಸಶಕ್ತೀಕರಣವಾಗಬೇಕು ಎಂದು ಮಹಾತ್ಮಾ ಗಾಂಧೀಜಿ ಪ್ರತಿಪಾದಿಸುತ್ತ ಬಂದಿದ್ದರು. ಇದು ಟಿ.ಎ. ಪೈಯವರ ಕನಸು ಕೂಡಾ ಆಗಿತ್ತು. ಈ ಕನಸನ್ನು ನನಸು ಮಾಡುವುದೇ ತನ್ನ ಜೀವಿತದ ಗುರಿ ಎಂದು ಹೇಳುತ್ತಿದ್ದ ಕೆ.ಎಂ.ಉಡುಪರು, ಟಿ.ಎ. ಪೈಯವರ ಪ್ರತಿಯೊಂದು ಆದೇಶದ ಅಕ್ಷರಶಃ ಅನುಷ್ಠಾನಕ್ಕೆ ಕಟಿಬದ್ಧರಾಗಿದ್ದರು.
ಭಾರತದ ಬ್ಯಾಂಕಿಂಗ್ ಇತಿಹಾಸ ಕಂಡ ಅತೀ ದೊಡ್ಡ ಕನಸುಗಾರರಲ್ಲಿ ಟಿ.ಎ.ಪೈ ಒಬ್ಬರು. ಯೋಗ್ಯರನ್ನೂ ಕ್ರಿಯಾಶೀಲರನ್ನೂ ತಕ್ಕ ಕಾಲದಲ್ಲಿ ಗುರುತಿಸಿ ತಮ್ಮ ಕನಸಿನ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಿಬಿಡುವ ಅವರ ಚಾಣಾ ಕ್ಷತನ ಇವತ್ತೊಂದು ದಂತಕಥೆ. ಆ ದಂತಕಥೆಯ ಬಹುಶ್ರುತ ಅಧ್ಯಾಯದಂತಿರುವ ಕೆ.ಎಂ.ಉಡುಪರ ಮುಖಾಂತರ ಟಿ.ಎ.ಪೈಗಳು ಭಾರತೀಯ ಬ್ಯಾಂಕಿಂಗಿಗೆ ಹೇಳಿಕೊಟ್ಟದ್ದು ಕೃಷಿಗೂ ಸಾಲ ಕೊಡಬಹುದು ಎನ್ನುವುದನ್ನು ಮಾತ್ರವಲ್ಲ; ಪರಿವೀಕ್ಷಿತ ಕೃಷಿ ಅಭಿವೃದ್ಧಿ’ ಎಂಬ ಉದಾತ್ತ ಚಿಂತನೆಯನ್ನು ಕೂಡ. ಕೃಷಿಕರಿಗೆ ಸಾಲ ಕೊಟ್ಟರೆ ಸಾಲದು, ಅವರಿಗೆ ಪರ್ಯಾಯ ಕೃಷಿ ಪದ್ಧತಿಗಳ, ಕೃಷಿಗೆ ಪೂರಕವಾದ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಕೊಡಬೇಕು ಎನ್ನುವುದನ್ನು ಉಡುಪರು ಅರ್ಥೈಸಿಕೊಂಡಿದ್ದರು.
1965ರಲ್ಲಿ ಮಂಗಳೂರಿನ ಪ್ಯಾಡಿ ಬ್ರಿàಡಿಂಗ್ ಸೆಂಟರಿನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಕೃಷಿ ಪದವೀಧರ ಉಡುಪರನ್ನು ಟಿ.ಎ.ಪೈಗಳು ಸಿಂಡಿಕೇಟ್ ಬ್ಯಾಂಕ್‌ಗೆ ಕರೆತಂದಾಗ ವಾಸ್ತವ ವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ಸಿಂಡಿಕೇಟ್ ಬ್ಯಾಂಕ್ ಉಡುಪರ ಮಾರ್ಗದರ್ಶನದಲ್ಲಿ ರೈತರ ಹೊಲಗಳಲ್ಲಿ ಕ್ಷೇತ್ರ ತರಬೇತಿಗಳನ್ನು ನಡೆಸುವ ಪರಿಕಲ್ಪನೆ ಆರಂಭಿಸಿತ್ತು. 1965ರಷ್ಟು ಹಿಂದೆಯೇ ಉಡುಪರು ಕೃಷಿಯಲ್ಲಿ ಯಾಂತ್ರೀ ಕರಣದ ಅಗತ್ಯವನ್ನು ಒತ್ತಿ ಹೇಳಿದ್ದರು. ಉಡುಪರ ಮಾರ್ಗದರ್ಶನದಲ್ಲಿಯೇ ಕೃಷಿ ವಿಚಾರ ವೇದಿಕೆಗಳು ಆರಂಭವಾಗಿದ್ದವು. ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಮಾಲೋಚನೆ ಯಂತಹ ಉಡುಪರ ಪರಿಕಲ್ಪನೆಗೆ ಸಿಂಡಿಕೇಟ್ ಬ್ಯಾಂಕ್ ವೇದಿಕೆಯನ್ನು ಒದಗಿಸಿತ್ತು. “ಕೃಷಿ ಚಿಕಿತ್ಸಾಲಯ’, “ಸಿಂಡಿಕೇಟ್ ಕೃಷಿ ಪ್ರತಿಷ್ಠಾನ’ಗಳು ಕೂಡ ಉಡುಪರ ಪರಿಕಲ್ಪನೆಗಳೇ.
ಫೋರ್ಡ್ ಫೌಂಡೇಶನ್‌ನ ನೆರವಿನಿಂದ ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟಿಗೆ ಬಂದ ಅನುದಾನದ ಬಳಕೆಗಾಗಿ “ಗ್ರಾಮ ವಿಕಾಸ ಕೇಂದ್ರ’ ಸ್ಥಾಪಿಸಿ, ಆ ಮೂಲಕ 51 ಗ್ರಾಮಗಳ 15,000 ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಯ ಯೋಜನೆಯು ಪೈಗಳ ದೂರದೃಷ್ಟಿ ಮತ್ತು ಉಡುಪರ ವಿಚಕ್ಷಣಮತಿಯ ಸಂಕೇತದಂತಿದೆ. ಉಡುಪರು ಬ್ಯಾಂಕ್ ಉದ್ಯೋಗದ ನಿವೃತ್ತಿಯ ಅನಂತರವೂ ತಮ್ಮ ಕೊನೆಗಾಲದ ತನಕವೂ ಭಾರತೀಯ ವಿಕಾಸ್ ಟ್ರಸ್ಟಿನ ಮೂಲಕ ಗ್ರಾಮ ಸಶಕ್ತೀಕರಣದ ಕನಸನ್ನು ನನಸಾಗಿಸಲು ಶ್ರಮಿಸಿದರು. ಉಡುಪರ ವ್ಯಕ್ತಿತ್ವದ ಮಹತ್ವ ವೆಂದರೆ ಬದುಕಿನ ಯಾವುದೇ ಯಶಸ್ಸು ಅವರಿಗೆ ಅಹಂಕಾರವನ್ನು ತಂದುಕೊಡಲಿಲ್ಲ. ಪ್ರತಿಯೊಂದು ಘಟನೆಯನ್ನು ಅವರು ನೆನಪು ಮಾಡಿಕೊಳ್ಳುವುದು ವಿಶಿಷ್ಟವಾದ Sense of Fulfilment ನಿಂದ. ಸಾರ್ಥಕತೆಯ ಸಂತೃಪ್ತಿಯಿಂದ.
ಕೆ.ಎಂ.ಉಡುಪರು ರೂಪುಕೊಟ್ಟು ಕಲ್ಪಿಸಿದ ಸಿಂಡಿಕೇಟ್ ಸ್ವಯಂ ಉದ್ಯೋಗ ಯೋಜನೆ’ಯನ್ನೂ ದಶಕದ ಅನಂತರ ದೇಶವೇ ನಕಲು ಮಾಡಿತು. ಬ್ಯಾಂಕ್‌ನ ಕೃಷಿ ಅಧಿಕಾರಿಗಳು ಗ್ರಾಮೀಣ ಗ್ರಾಹಕರಿಗೆ ಸ್ವಯಂ ಉದ್ಯೋಗ ಮತ್ತು ಬ್ಯಾಂಕ್ ಆರ್ಥಿಕ ನೆರವಿನ ಕುರಿತು ಮಾಹಿತಿ, ಮಾರ್ಗ ದರ್ಶನ ನೀಡಿ ಸ್ವಯಂ ಉದ್ಯೋಗ ಕ್ಕೆ ಒತ್ತುಕೊಡುವ ಈ ಯೋಜನೆ 1970ರಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿ, ಮುಂದೆ ಬ್ಯಾಂಕ್‌ನ ಅಧಿಕೃತ ಕಾರ್ಯಕ್ರಮವಾಗಿ, ದಶಕದ ಕೊನೆಯಲ್ಲಿ ದೇಶದ ಯೋಜನೆಯೇ ಆಗಿಬಿಟ್ಟಿತು. ಇದರೊಂದಿಗೆ ಸ್ವಯಂ ಉದ್ಯೋಗ ಕ್ಕೆ ಹಣಕಾಸಿನ ನೆರವಿನೊಂದಿಗೆ ಯೋಗ್ಯ ತರಬೇತಿಯ ಅಗತ್ಯಕ್ಕಾಗಿ ಉಡುಪರು ಬರೆದ ನೀಲನಕ್ಷೆಯ ಭಾಗವಾಗಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗ ದರ್ಶನದಲ್ಲಿ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ “ರುಡ್‌ಸೆಟ್’ ಸಂಸ್ಥೆ ಸಾಕಾರಗೊಂಡಿತು.
1972ರಲ್ಲಿ ಕೊಳೆಯುವ ಜೈವಿಕ ವಸ್ತುವಿನಿಂದ ಉತ್ಪನ್ನವಾಗುವ ಮಿಥೇನ್ ಅನಿಲವನ್ನು ಅಡು ಗೆಯ ಗ್ಯಾಸ್ ಆಗಿ ಬಳಸುವ ಯೋಜನೆ ಮತ್ತದಕ್ಕೆ ಬ್ಯಾಂಕ್ ಆರ್ಥಿಕ ನೆರವಿನ ಯೋಚನೆಗಳ ಕುರಿತು ಕೆ. ಕೆ. ಪೈಯವರ ನಿರ್ದೇಶನದ ಮೇರೆಗೆ ಉಡುಪರು ತಯಾರಿಸಿದ “ಬಯೋಗ್ಯಾಸ್ ಯೋಜನೆ’ಗೆ ರಿಸರ್ವ್ ಬ್ಯಾಂಕ್‌ನ ಅನುಮತಿ ಸಿಗದೇ ಹೋದಾಗ ಉಡುಪರು ಟಿ.ಎ. ಪೈಯವರ ಮೂಲಕ ಅದನ್ನು ಅನುಷ್ಠಾನಕ್ಕೆ ತಂದರು. ಉಡುಪರ ಪರಿಕಲ್ಪನೆಯ ಆಧಾರದ ಮೇಲೇ 1980ರಲ್ಲಿ ರಾಷ್ಟ್ರಮಟ್ಟದ ಬಯೋಗ್ಯಾಸ್ ಪ್ರಾಜೆಕ್ಟ್ ಅಸ್ತಿತ್ವಕ್ಕೆ ಬಂತು.
1992-94ರ ಅವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾಗ ಉಡು ಪರು ಅಥಣಿ ತಾಲೂಕಿನ ಪುಟ್ಟ ಹಳ್ಳಿ ಮೋಳೆಯ ಒಣಭೂಮಿಗೆ 9-10 ಕಿ.ಮೀ. ದೂರದ ಕೃಷ್ಣಾ ನದಿಯಿಂದ ನೀರು ತಂದು, ಒಂದೂ ಬೆಳೆ ಬೆಳೆಯಲಾಗದ ಭೂಮಿಯಲ್ಲಿ 2-3 ಬೆಳೆ ಬೆಳೆಯಲು ಸಾಧ್ಯವಾಗುವ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದರು.
ತಮ್ಮ ಅಧಿಕಾರಾವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಸೋಲಾರ್ ಘಟಕಗಳಿಗೆ ಸಾಲಕೊಟ್ಟ ಪ್ರಪಂಚದ ಮೊದಲ ಬ್ಯಾಂಕ್ ಎಂದೂ ಖ್ಯಾತವಾಯಿತು. ಉಡುಪರ ದೂರದೃಷ್ಟಿಗೆ ಇನ್ನೊಂದು ಉದಾಹರಣೆ 2007 -08ರಲ್ಲಿ ಆಶಾ ಕಾರ್ಯಕರ್ತೆಯರಿಗೆ ಭಾರತೀಯ ವಿಕಾಸ್ ಟ್ರಸ್ಟ್‌ನ ಮೂಲಕ ಏರ್ಪಡಿಸಿದ ಸರಣಿ ತರಬೇತಿ ಕಾರ್ಯಕ್ರಮಗಳು. ಮುಂದೊಂದು ದಿನ ಆಶಾ ಕಾರ್ಯಕರ್ತೆಯರು ಸಮಾಜದ ಮುಂಚೂಣಿಯಲ್ಲಿ ನಿಂತು ಮಾಡಬಹುದಾದ ಕೆಲಸಗಳ ಬಗ್ಗೆ ಉಡುಪರು ಚರ್ಚಿಸುತ್ತಿದ್ದರು. ಹನ್ನೆರಡು ವರ್ಷಗಳ ಅನಂತರ ಕೋವಿಡ್-19ರ ಸಂದರ್ಭದಲ್ಲಿ ಉಡುಪರ “ಶಕುನ’ದಂತಹ ಮಾತುಗಳು ಸತ್ಯವಾಗಿಬಿಟ್ಟವು.
ಮೂರು ವರ್ಷಗಳ ಹಿಂದೆ ಅಂದರೆ 2019ರ ಜುಲೈ 27ರಂದು ಉಡುಪರು ಕೀರ್ತಿಶೇಷರಾದರು.”ಸಾರ್ವಜನಿಕರ ನೆನಪು ಅಲ್ಪಕಾಲೀನ’ ಎಂಬ ಮಾತಿದೆ. ಸಾಮಾಜಿಕ ಮಹತ್ವದ ಉಡುಪರ ಕಾರ್ಯ ಹಾಗೆ ಜನರ ಮರೆವಿಗೆ ಜಾರಬಾರದು. ಹಾಗೆಂದೇ ಉಡುಪರ ಜೀವನಾದರ್ಶಗಳನ್ನು ಚಿರಸ್ಥಾಯಿಯಾಗಿ ಉಳಿಸಲು ಉಡುಪರ ಮಕ್ಕಳು ಕೆ.ಎಂ. ಉಡುಪರ ಸಂಸ್ಮರಣಾರ್ಥವಾಗಿ ಟ್ರಸ್ಟ್ ಒಂದನ್ನು ರಚಿಸಿದ್ದು, ಪ್ರತೀ ವರ್ಷ ಆದರ್ಶಪ್ರಾಯವಾದ ಕೆಲಸ ಮಾಡುತ್ತಿರುವ ಒಂದು ಗ್ರಾಮ ಪಂಚಾಯತ್ ಅನ್ನು ಗುರುತಿಸಿ ಒಂದು ಲಕ್ಷ ರೂಪಾಯಿಯ ಗೌರವ ಪುರಸ್ಕಾರ ಮತ್ತು ಪ್ರಶಸ್ತಿಯನ್ನು ನೀಡುವ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಪ್ರಸಕ್ತ ವರ್ಷ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾ. ಪಂ. ಈ ಪುರಸ್ಕಾರಕ್ಕೆ ಆಯ್ಕೆ ಯಾಗಿದ್ದು, ಎಪ್ರಿಲ್ 24 ರಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರಗಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.
-ಬೆಳಗೋಡು ರಮೇಶ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.