ಕಾಶ್ಮೀರವೀಗ ನಿಜವಾಗಿಯೂ ಭಾರತದ ಮುಕುಟಮಣಿ!
Team Udayavani, Aug 6, 2019, 3:02 AM IST
ಇನ್ನು ಮುಂದೆ ಕಾಶ್ಮೀರಕ್ಕೆ ಭೇಟಿ ನೀಡುವವರಿಗೆ ಮುರಿದ ಮನೆಗಳ, ಒಡೆದ ಗುಡಿಗಳ, ಕಳೆದುಹೋಗಿರುವ ಸಂಸ್ಕೃತಿಯ ಅವಶೇಷಗಳ ದರ್ಶನವಾಗದಿದ್ದರೆ ಸಾಕು. ಜೀರ್ಣಿಸಿಕೊಳ್ಳಲು ನಿಜವಾಗಿಯೂ ಕಷ್ಟವಾಗುತ್ತೆ.
ಸಾಧ್ಯವಿಲ್ಲ! ಕಾಶ್ಮೀರದ ಐತಿಹಾಸಿಕ, ಸಾಂಸ್ಕೃತಿಕ, ರಾಜನೈತಿಕ ಹಾಗೂ ಕಾನೂ ನಾತ್ಮಕ ಹಿನ್ನೆಲೆಯ ಕಿಂಚಿತ್ತಾದರೂ ಅರಿವಿರುವವರು ಈ ಹೊತ್ತು ಭಾವುಕರಾಗದಿರಲು ಸಾಧ್ಯವಿಲ್ಲ! ಅದಾವುದೂ ಇರದಿದ್ದರೂ ಸಂಭ್ರಮಿಸಲು ಭಾರತೀಯನೆಂಬ ನೆಪಕ್ಕಿಂತ ಹೆಚ್ಚಿನದು ಬೇಕಾಗಿಯೂ ಇಲ್ಲ! ಕಡೆಗೂ ಅನುಚ್ಛೇದ 370 ಎಂಬ ಬ್ರಹ್ಮರಾಕ್ಷಸನ ಶಿರಚ್ಛೇದವಾಗಿದೆ. ಅದರೊಡನೆಯೇ 35ಎ ಎಂಬ ಅದರ ವಿಷಪೂರಿತ ಕೋರೆಹಲ್ಲೂ ಕಳಚಿಬಿದ್ದು ಭಾರತೀಯರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಕಾಶ್ಮೀರೀ ಹಿಂದೂಗಳಲ್ಲಿ (ಕಾಶ್ಮೀರೀ ಪಂಡಿತರು ಎಂದು ಬಾರಿಬಾರಿಗೂ ನುಡಿದು, ದೌರ್ಜನ್ಯ ನಡೆದದ್ದು ಬ್ರಾಹ್ಮಣ ಪಂಗಡದಮೇಲೆ ಎಂಬ ಭಾವನೆ ಬರುವಂತೆ ಮಾಡಿ ಸಮಸ್ಯೆಯನ್ನು ಕ್ಷುಲ್ಲಕಗೊಳಿಸಲೆತ್ನಿಸಿದ್ದು ಬೇರೆಯೇ ಸ್ತರದ ರಾಜಕರಣ. ಇರಲಿ, ಅದರ ಚರ್ಚೆಯೀಗ ಬೇಡ).
29 ವರ್ಷಗಳ ಹಿಂದೆ ಮಸೀದಿಗಳ ಧ್ವನಿವರ್ಧಕಗಳ ಆರ್ಭಟಕ್ಕೆ, ಮೌಲ್ವಿಗಳ ಮತಾಂಧತೆಯ ಕ್ರೌರ್ಯಕ್ಕೆ, ನಂಬಿಕೆಯ ಮುಸ್ಲಿಂ ಸಹೋದರರೇ ನಡೆಸಿದ ರಕ್ತಪಾತ, ಅತ್ಯಾಚಾರಗಳಿಗೆ ಬಲಿಯಾಗಿ, ಅಂಜಿ, ರಾತ್ರೋರಾತ್ರಿ ತಮ್ಮ ಮನೆಗಳನ್ನು ತೊರೆದು ಹೊರಟವರು ಇಂದು ಭಾವುಕರಾಗಿ ಕಣ್ಣೀರುಗರೆಯುತ್ತಿದ್ದಾರೆ. ನಿರುಮ್ಮಳತೆಯಿಂದ ಮೂಕರಾಗಿದ್ದಾರೆ. ಸಮಸ್ಯೆಗೆ ಪರಿಹಾರ ಇಷ್ಟು ಸುಲಭದಲ್ಲಿ ದೊರೆತೀತೆಂದು ಬಹುಶಃ ಅವರೂ ನಿರೀಕ್ಷಿಸಿರಲಿಕ್ಕಿಲ್ಲ. ರಾಷ್ಟ್ರೀಯ ವಾಹಿನಿಗಳ ಲೆಕ್ಕವಿಲ್ಲದಷ್ಟು ಚರ್ಚೆಗಳಲ್ಲಿ ಎಲ್ಲರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ನಿರಂತರ ಹರಿಹಾಯುತ್ತಿದ್ದವರೇ. ಅವರ ಆಕ್ರೋಶ ಅರ್ಥವಾಗುವಂಥದ್ದೇ. ಹಾಗೆ ನೋಡಿದರೆ, ಪರಿಹರಿಸಲು ಎಪ್ಪತ್ತೆರಡು ವರ್ಷಗಳು ಬೇಕಾಗುವಂಥ ಕ್ಲಿಷ್ಟ ಸಮಸ್ಯೆ ಇದಾಗಿರಲೇ ಇಲ್ಲ. ಕೊರತೆಯಿದ್ದದ್ದು ಇಚ್ಛಾಶಕ್ತಿಯದ್ದು.
ನೇತಾರನಿಗೆ ಒಂದೋ, ಸ್ವತಃ ಬುದ್ಧಿಯಿರಬೇಕು. ಇಲ್ಲವೇ ಬುದ್ಧಿವಂತರ ಸಲಹೆಗಳನ್ನು ಪಾಲಿಸುವ ವಿವೇಕವಾದರೂ ಬೇಕು. ದೇಶದ ಹಿತಕ್ಕೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳುವ ದಾಡ್ಯìವಿರದ ನೆಹರೂ ಮಾಡಿದ ಅತಿದೊಡ್ಡ ಅವಿವೇಕ, ಕಾಶ್ಮೀರದ ಹೊಣೆ ವಹಿಸಿಕೊಂಡದ್ದು. ನಂತರ ಅದರ ಉಸ್ತುವಾರಿಯನ್ನು ಯಾವ ವಿಧದಲ್ಲೂ ಸೂಕ್ತರಲ್ಲದ ಗೋಪಾಲಸ್ವಾಮಿ ಅಯ್ಯಂಗಾರರಿಗೆ ಹಸ್ತಾಂತರಿಸಿದ್ದು. ಕಾಶ್ಮೀರವೆಂದರೆ ಅವರೆಣಿಸಿದ್ದಷ್ಟು ಸುಲಭವೇ? ಗೋನಂದ, ಅವನ ನಂತರ ಆಗಿಹೋದ 43 ರಾಜರು. ಹೂಣ, ಕಾರ್ಕೋಟ, ಉಪ್ತಳ, ಗುಪ್ತ, ಲೋಹರ, ದುಲಾಚ, ರಿಂಚನ, ಶಹಮೀರ್, ಸಯ್ಯದ್, ದರ್, ಚಕ್, ಮುಘಲ್, ಅಫ್ಫನ್ ಹಾಗೂ ಸಿಖ್ಖರು ಆಳಿದ ಭೂಮಿ.
ನಂತರ ಬಂದ ಲಜ್ಜೆಗೇಡಿ ಸೆಕ್ಯುಲರ್ ರಾಜಕಾರಣಿಗಳು ಹರಿಸಿದ ನೆತ್ತರಿನಲ್ಲಿ ನೆನೆದ ಭೂಮಿ. ಕಲ್ಹಣನ “ರಾಜತರಂಗಿಣಿ’ಯೊಂದೇ ಸಾಕು ಅದರ ಹಣೆಬರಹದ ವಿವರ ತಿಳಿಯಲು. ದುರದೃಷ್ಟ, ಕಾಶ್ಮೀರದ ಇತಿಹಾಸ ಯಾವ ಪಠ್ಯಗಳಲ್ಲೂ ಇಲ್ಲ. ಕಾರ್ಕೋಟ ವಂಶದ ವೀರಾಗ್ರಣಿ ಲಲಿತಾದಿತ್ಯ ಅರಬ್ಬರನ್ನು ಬಗ್ಗುಬಡಿದ ಮೈನವಿರೇಳಿಸುವ ಕಥೆ ಬಾಬರ್, ಅಕºರರ ಕಲ್ಪಿತ, ಉತ್ಪ್ರೇಕ್ಷಿತ ಮಹಾಗಾಥೆಗಳ ನಡುವೆ ಎಂದೋ ಸಮಾಧಿ ಸೇರಿದೆ. ಇರಲಿ, ಕಾಶ್ಮೀರದ ಇತರ ಆಯಾಮಗಳನ್ನು ಬದಿಗಿಟ್ಟು ಸ್ವಾತಂತ್ರೊತ್ತರ ಭಾರತದಲ್ಲಿ ಜರುಗಿದ ಎರಡು ಪ್ರಮುಖ ಘಟನೆಗಳನ್ನು ಅವಲೋಕಿಸೋಣ.
ಘಟನೆ 1: 24 ಆಗಸ್ಟ್ 1947-ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಗವರ್ನರ್ ಜನರಲ್ ಮೊಹಮ್ಮದ್ ಅಲಿ ಜಿನ್ನಾ ವಿಶ್ರಾಂತಿ ಪಡೆಯಲೆಂದು ಕಾಶ್ಮೀರಕ್ಕೆ ತೆರಳಲು ನಿರ್ಧರಿಸುತ್ತಾರೆ. ಆ ವೇಳೆಗಾಗಲೇ ಭಾರತ- ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳೆಂದು ಘೋಷಿತವಾಗಿದ್ದರೂ ಜಮ್ಮು-ಕಾಶ್ಮೀರದ ರಾಜಸಂಸ್ಥಾನ ಯಾವೊಂದು ರಾಷ್ಟ್ರದೊಂದಿಗೂ ವಿಲೀನಗೊಂಡಿರುವುದಿಲ್ಲ. ಕಾಶ್ಮೀರ ಮುಸ್ಲಿಂ ಬಾಹುಳ್ಯ ಪ್ರದೇಶವಾದ್ದರಿಂದ ಎಂದಿದ್ದರೂ ಅದು ತಮಗೇ ಸೇರುವುದೆಂಬ ಲೆಕ್ಕಾಚಾರ ಜಿನ್ನಾರದು. ಹಾಗಾಗಿ, ತಮ್ಮ ಬ್ರಿಟಿಷ್ ಕಾರ್ಯದರ್ಶಿ ಕರ್ನಲ್ ವಿಲಿಯಮ್ ಬರ್ನಿಯವರನ್ನು ಕರೆದು, ತಮಗೆ ಎರಡು ವಾರ ಕಾಶ್ಮೀರದಲ್ಲಿ ಉಳಿಯುವ ವ್ಯವಸ್ಥೆ ಮಾಡಿ ಎಂದು ಆದೇಶ ನೀಡುತ್ತಾರೆ. ಐದು ದಿನಗಳ ನಂತರ ಹಿಂತಿರುಗಿದ ಬರ್ನಿ ನೀಡುವುದು,
“ಕಾಶ್ಮೀರದ ರಾಜ ಹರಿಸಿಂಗ್ ನಿಮ್ಮನ್ನು ಅಲ್ಲಿಗೆ ಪ್ರವಾಸಿಯಾಗಿಯೂ ಕಾಲಿಡಲು ಬಿಡುವುದಿಲ್ಲ ಎಂದಿದ್ದಾರೆ.’ ಎಂಬ ಆಘಾತಕಾರಿ ಉತ್ತರವನ್ನು! ಕೆರಳಿದ ಜಿನ್ನಾ, ಮುಂದಿನ ನಲವತ್ತೆಂಟು ಗಂಟೆಗಳ ಅವಧಿಯಲ್ಲಿ ಭಾರತಕ್ಕೆ ಗೂಢಚರರನ್ನು ಅಟ್ಟುವುದಲ್ಲದೆ, ಕಾಶ್ಮೀರದ ರಾಜ ಹರಿಸಿಂಗ್ ತಮ್ಮ ಸಂಸ್ಥಾನವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸದಿದ್ದರೆ ತಾವು ಮುಂದೆ ಕೈಗೊಳ್ಳಬೇಕಾದ ಕ್ರಮದ ರೂಪುರೇಷೆಗಳನ್ನು ತಯಾರಿಸುತ್ತಾರೆ. ಅದರ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವವರು ಪಾಕಿಸ್ತಾನದ ಅಂದಿನ ಪ್ರಧಾನಿ ಲಿಯಾಕತ್ ಅಲಿ ಖಾನ್. ಪರಿಣಾಮವೇ ಮುಜೈಫ#ರಾಬಾದಿನ ಮೇಲೆ ಪಠಾಣರು ಅಕ್ಟೋಬರ್ 22ರಂದು ನಡೆಸುವ ಬರ್ಬರದಾಳಿ. ಗಾಬರಿಯಾದ ಹರಿಸಿಂಗ್ ಭಾರತದ ನೆರವು ಯಾಚಿಸಿ ಅಕ್ಟೋಬರ್ 26ರಂದು ಭಾರತದೊಂದಿಗಿನ ವಿಲೀನ ಪತ್ರಕ್ಕೆ ಸಹಿ ಹಾಕುತ್ತಾರೆ. ಕಾನೂನು ಬದ್ಧವಾಗಿ ಜಮ್ಮು-ಕಾಶ್ಮೀರ(ಹಾಗೂ ಲಡಾಖ್)ಭಾರತದೊಂದಿಗೆ ಸೇರ್ಪಡೆಯಾದದ್ದು ಅಂದು.
ಇತ್ತ ಭಾರತದಲ್ಲಿ -ಪಾಕಿಸ್ತಾನದ ದಾಳಿಯನ್ನು ಹಿಮ್ಮೆಟ್ಟಿಸುವುದು ಅಸಾಧ್ಯವಲ್ಲ ಎಂಬುದನ್ನು ತಿಳಿದಿದ್ದ ನಮ್ಮ ಸೈನಿಕರು ಆ ಯತ್ನದಲ್ಲಿ ಹಂತಹಂತವಾಗಿ ಯಶ ಕಾಣತೊಡಗಿದ್ದರು. ಅಷ್ಟರಲ್ಲಿ, ಅಂದರೆ 1948ರ ಜನವರಿ 1ರಂದು ನೆಹರೂ ಮೌಂಟ್‌ಬ್ಯಾಟನ್‌ರ ಸಲಹೆ ಯಂತೆ ಈ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದು ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶ ಮಾಡಿಕೊಟ್ಟರು. ಅದೂ ಸಾಲದೆಂಬಂತೆ, 1949ರ ಜನವರಿ 1ರಂದು ಕದನವಿರಾಮವನ್ನೂ ಘೋಷಿಸಿ ಬಿಟ್ಟರು. ಪರಿಣಾಮವೇ ಇಂದಿನ ಪಾಕ್ ಆಕ್ರಮಿತ ಕಾಶ್ಮೀರ. ಅಂದು ನಮ್ಮ ಸೈನಿಕರನ್ನು ತಡೆಯದಿದ್ದರೆ ನೀಲಂ ಕಣಿವೆಯಲ್ಲಿರುವ ಶಾರದಾಪೀಠ (ಶ್ರೀನಗರದಿಂದ ಸುಮಾರು 130 ಕಿಮಿ ದೂರವಿದೆ)ಇಂದು ನಮ್ಮ ಸುಪರ್ದಿಯಲ್ಲೇ ಇರುತಿತ್ತು.
ಘಟನೆ 2: 1949- ಸಂವಿಧಾನದ ಕರಡು ಪ್ರತಿಯನ್ನು ಅಂತಿಮಗೊಳಿಸುವುದರಲ್ಲಿ ನಿರತವಾಗಿತ್ತು ಕಾಂಗ್ರೆಸ್ ಕಾರ್ಯಕಾರಿಣಿ. ಆ ವೇಳೆಗಾಗಲೇ ಗೋಪಾಲಸ್ವಾಮಿ ಅಯ್ಯಂಗಾರರಿಗೆ ಜಮ್ಮು-ಕಾಶ್ಮೀರದ ಉಸ್ತುವಾರಿ ದೊರೆತಿತ್ತು. ಗೋಪಾಲಸ್ವಾಮಿಯವರ ಬೆನ್ನುಬಿದ್ದ ಶೇಖ್ ಅಬ್ದುಲ್ಲಾ, ಅನುಚ್ಛೇದ 370ರ ಕರಡು ತಯಾರಿಸಿ ಅವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅದು ಸಂವಿಧಾನದಲ್ಲಿ ಸೇರ್ಪಡೆಗೊಳ್ಳಲು ಕಾಂಗ್ರೆಸ್ಸಿನ ಕಾರ್ಯಕಾರಿಣಿಯಲ್ಲಿ ಮಂಡನೆಯಾಗಿ ಅಂಗೀಕೃತಗೊಳ್ಳಬೇಕಿತ್ತು. ಗೋಪಾಲಸ್ವಾಮಿ ಈ ನಿಬಂಧನೆಯ ಪ್ರಸ್ತಾಪ ಮಾಡುತ್ತಿದ್ದಂತೆ ಸಂಸತ್ತಿನಲ್ಲಿ ಕೋಲಾಹಲ. ಆ ಹೊತ್ತು ನೆಹರೂ ಎಂದಿನಂತೆ ಸೂಟುಬೂಟು ಧರಿಸಿ ವಿದೇಶ ಪ್ರವಾಸದಲ್ಲಿದ್ದರು. ಗತ್ಯಂತರವಿರದೆ ಸರ್ದಾರರ ನೆರವು ಯಾಚಿಸಿದರು ಗೋಪಾಲಸ್ವಾಮಿ.
ಕಾರ್ಯಕಾರಿಣಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ಸರ್ದಾರ್ ಪಟೇ ಲರು, ತಮ್ಮ ಆಪ್ತ ಕಾರ್ಯದರ್ಶಿ ವಿ. ಶಂಕರ್ ಅಸಮಾಧಾನಗೊಂಡದ್ದಕ್ಕೆ ಏನೆಂದು ಹೇಳಿ ಸಂತೈಸಿದರು ಗೊತ್ತೇ? “ಶೇಖ್ ಅಬ್ದುಲ್ಲಾ ಹಾಗೂ ಗೋಪಾಲಸ್ವಾಮಿ, ಇಬ್ಬರಲ್ಲಿ ಯಾರೂ ಶಾಶ್ವತವಲ್ಲ. ಭಾರತದ ಭವಿಷ್ಯ ನಿಂತಿರುವುದು ಸರ್ಕಾರದ ಶಕ್ತಿ, ಸಾಮರ್ಥ್ಯಗಳ ಮೇಲೆ. ಅದರಲ್ಲೇ ನಮಗೆ ನಂಬಿಕೆಯಿಲ್ಲದೆ ಹೋದರೆ ನಾವು ಒಂದು ದೇಶವಾಗಿ ಅಸ್ತಿತ್ವದಲ್ಲಿರಲು ಅರ್ಹರಲ್ಲ!’ ಮೊದಲ ಘಟನೆ ಜರುಗಿದಾಗಲೇ ತಿರುಗೇಟು ನೀಡಿದ್ದರೆ ಎರಡನೆಯದಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ಅಂದು ನೆಹರೂ ಅಂತಾರಾಷ್ಟ್ರೀಯ ಸಮುದಾಯದ ಕದ ತಟ್ಟಿದ್ದರಿಂದಲೇ ಇಂದೂ ಅಮೆರಿಕ ಹೆಜ್ಜೆಹೆಜ್ಜೆಗೂ ಮೂಗು ತೂರಿಸಲು ಸಜ್ಜಾಗಿ ನಿಂತಿರುವುದು. ನಾಳೆಯ ಊಟ ಹೇಗೆಂಬ ದಿಗಿಲಿನಲ್ಲಿರುವ ಪಾಕಿಸ್ತಾನ ಗತಿಗೆಟ್ಟಿದ್ದರೂ ಕಾಶ್ಮೀರದ ಗಾಯವನ್ನು ಆಗಾಗ ಕೆರೆದು ಸಂತಸ ಪಡುತ್ತಿತ್ತು.
ನಮ್ಮ ನಡುವಿನ ಕಲಹ, ನಾವು ಇತ್ಯರ್ಥ ಗೊಳಿಸಿಕೊಳ್ಳುತ್ತೇವೆಂದು ಹೇಳುವ ಎಂಟೆದೆಯಿದ್ದ ಪಟೇಲರು ಈ ದೇಶದ ಮೊದಲ ಪ್ರಧಾನಿಯಾಗದ್ದು ದುರ್ದೈವ. ನೆಹರೂರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿಗೆ ಮುಜುಗರ ತರಿಸಬಾರದೆಂಬ ಏಕೈಕ ಉದ್ದೇಶದಿಂದ ಕರಡು ಅಂಗೀಕಾರವಾಗುವಲ್ಲಿ ಸಹಕರಿಸಿದ ಪಟೇಲರಿಗಿದ್ದ ನೈತಿಕ ಪ್ರಜ್ಞೆ ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಒಟ್ಟಾರೆ, ಕಾಶ್ಮೀರದ ವಿಷಯದಲ್ಲಿ ಪ್ರಾತಃಸ್ಮರಣೀಯರು ನಾಲ್ವರು. ಸರ್ದಾರ್ ಪಟೇಲರು, ಅನುಚ್ಛೇದ 370ರ ವಿರುದ್ಧ ಹೋರಾಡುತ್ತಲೇ ಕಾಶ್ಮೀರದಲ್ಲಿ ಜೀವತೆತ್ತ ಶ್ಯಾಮಪ್ರಸಾದ್ ಮುಖರ್ಜಿ, 1990ರ ಆ ಕರಾಳ ಅವಧಿಯಲ್ಲಿ ಹಿಂದೂಗಳನ್ನು ರಕ್ಷಿಸಲು ತಮ್ಮ ಶಕ್ತಿಮೀರಿ ಯತ್ನಿಸಿದ ಅಂದಿನ ರಾಜ್ಯಪಾಲ ಜಗಮೋಹನ್ ಮಲ್ಹೋತ್ರಾ ಹಾಗೂ ಪಟೇಲರು ಜನಿಸಿದ ಪುಣ್ಯಭೂಮಿಯ ಮತ್ತೋರ್ವ ಪುತ್ರ ನರೇಂದ್ರ ದಾಮೋದರ ದಾಸ್ ಮೋದಿ.
ಅನುಚ್ಛೇದ 370ಕ್ಕೆ ಕೈಹಾಕಿದರೆ ಆಕಾಶವೇ ಕಳಚಿಬೀಳುತ್ತೆ ಎಂದು ಬೊಬ್ಬೆ ಹಾಕುತ್ತಿದ್ದ ರಾಜಕೀಯ ಧುರೀಣರಿಗೆ ಗೃಹಬಂಧನ. ಪ್ರತ್ಯೇಕತಾವಾದಿಗಳಿಗೆ ತಿಹಾರ್ ಜೈಲಿನ ದಿಗ್ಬಂಧನ. ಕಲ್ಲೆಸೆಯುತ್ತಿದ್ದವರನ್ನು ಅಲ್ಲಲ್ಲೇ ಕೈಕಟ್ಟಿ ಕೂಡಿಸಿರುವ ಇದು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಜರುಗಿರುವ ಪವಾಡವಲ್ಲ. ಒಂದೂವರೆ ವರ್ಷಗಳಿಗೂ ಹೆಚ್ಚಿನ ಅತಿ ಎಚ್ಚರಿಕೆಯ ಕಾರ್ಯಾಚರಣೆಯ ಪ್ರತಿಫಲ. ಒಂದು ಪ್ರಮುಖ ಸಂಗತಿ. ಕಾಶ್ಮೀರದ ಯಾವ ಮುಸ್ಲಿಂ ಪ್ರಜೆಯೂ ಕಂಗಾಲಾಗಿಲ್ಲ. ಅವರಿಗೆ ಈ ಅನುಚ್ಛೇದದ ಕುರಿತು ವಿಶೇಷ ಆಸ್ಥೆ ಎಂದೂ ಇರಲಿಲ್ಲ. ನಾನು ಕಾಶ್ಮೀರದಲ್ಲಿ ಹೆಚ್ಚು ಒಡನಾಡಿದ್ದು ಮುಸ್ಲಿಮರೊಂದಿಗೇ. ವಿದ್ಯಾವಂತರ ಧೋರಣೆ ನಮ್ಮ ನಗರದ ಯುವಕರಿಗಿಂತ ಭಿನ್ನವಲ್ಲ. ಪ್ರಳಯವಂತೂ ಖಂಡಿತ ಆಗುವುದಿಲ್ಲ.
ಇನ್ನು ಮುಂದೆ ಕಾಶ್ಮೀರಕ್ಕೆ ಭೇಟಿ ನೀಡುವವರಿಗೆ ಮುರಿದ ಮನೆಗಳ, ಒಡೆದ ಗುಡಿಗಳ, ಕಳೆದುಹೋಗಿರುವ ಸಂಸ್ಕೃತಿಯ ಅವಶೇಷಗಳ ದರ್ಶನವಾಗದಿದ್ದರೆ ಸಾಕು. ಜೀರ್ಣಿಸಿಕೊಳ್ಳಲು ನಿಜವಾಗಿಯೂ ಕಷ್ಟವಾಗುತ್ತೆ. ನಾವು ಒಂದು ದೇಶವಾಗಿ ಅಸ್ತಿತ್ವದಲ್ಲಿರಲು ಅರ್ಹರು ಎಂಬುದನ್ನು ನಿರೂಪಿಸಿದೆ ಮೋದಿ ಸರ್ಕಾರ. ನೆನಪಿರಲಿ, ಇಡೀ ವಿಶ್ವದಲ್ಲಿ, ಶತಮಾನಗಳಿಂದ ಅವ್ಯಾಹತವಾಗಿ ಕ್ರೈಸ್ತ ಹಾಗೂ ಮುಸ್ಲಿಮರ ದಾಳಿಗಳಿಗೆ ಒಳಗಾಗಿದ್ದರೂ ಸಂಸ್ಕೃತಿ, ನಾಗರಿಕತೆಗಳನ್ನು ಉಳಿಸಿಕೊಂಡಿರುವುದು ನಮ್ಮದೊಂದೇ ರಾಷ್ಟ್ರ. ಸನಾತನ ಧರ್ಮೀಯರು ಎಂದು ಹೆಮ್ಮೆಪಡಲು ಹೀಗೊಂದು ಅವಕಾಶ ದೊರೆತಿರುವುದು ಪುಣ್ಯವೇ ಸರಿ. ಕಾಶ್ಮೀರ ನಿಜವಾಗಿಯೂ ಭಾರತದ ಮುಕುಟಮಣಿಯಾಗಿರುವ ಈ ಹೊತ್ತಿನಲ್ಲಿ “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂಬ ಶ್ರೀಕೃಷ್ಣನ ಉಕ್ತಿ ಸ್ಮರಣೆಗೆ ಬರುತ್ತಿದೆ!
(ಕಾಶ್ಮೀರವನ್ನು ಕುರಿತ “ಕಶೀರ’ ಕಾದಂಬರಿಯ ಲೇಖಕಿ)
* ಸಹನಾ ವಿಜಯಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.