ಸಾಹಿತ್ಯ ನಿಧಿ ಮುದ್ದಣ ಅಜರಾಮರ
Team Udayavani, Jan 24, 2021, 6:40 AM IST
ಬರಹಗಾರನಿಗೆ ತನ್ನ ಕೃತಿ ಶಾಶ್ವತ ಸಾಹಿತ್ಯವಾಗಬೇಕು ಎನ್ನುವ ಕಲ್ಪನೆ ಇರುತ್ತದೆ. ಆದರೆ ಯಾವುದೇ ಕಲ್ಪನೆ ಇರದೇ ಕೃತಿಗಳನ್ನು ರಚಿಸಿ ಅವು ನನ್ನವಲ್ಲ ಎಂದು ಹೇಳಿಕೊಂಡು ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ಅರ್ಪಿಸಿದ ನಂದಳಿಕೆ ಲಕ್ಷ್ಮೀನಾರಾಯಣ ಉರುಫ್ ಮುದ್ದಣ ಕನ್ನಡದ ಜನಮಾನಸದಲ್ಲಿ ಎಂದೆಂದಿಗೂ ಅಮರ.
ಉಡುಪಿ ಜಿಲ್ಲೆಯ ನಂದಳಿಕೆಯಲ್ಲಿ ಜನಿಸಿದ 1870ರ ಜನವರಿ 24ರಂದು ಲಕ್ಷ್ಮೀನಾರಾಯಣ (ಲಕ್ಷ್ಮೀನಾರಣಪ್ಪ), “ಮುದ್ದಣ’ ಎಂಬ ಕಾವ್ಯಾಂಕಿತದಲ್ಲಿ ಕೃತಿಗಳನ್ನು ರಚಿಸಿ ಹೊಸಗನ್ನಡದ ಮುಂಗೋಳಿ ಎಂದೇ ಪ್ರಸಿದ್ಧನಾದನು. ಉದರಂಭರಣಕ್ಕಾಗಿ ಓದನ್ನು ತುಂಡರಿಸಿ ದೈಹಿಕ ಶಿಕ್ಷಣ ವ್ಯಾಸಂಗಕ್ಕಾಗಿ ಮದರಾಸಿಗೆ ಹೋಗಿದ್ದ ಲಕ್ಷ್ಮೀನಾರಾಯಣ ಅಲ್ಲಿನ ಜನರ ಒಡನಾಟದಿಂದ ತಮಿಳು, ತೆಲುಗು ಮತ್ತು ಮಲೆಯಾಳ ಭಾಷೆಗಳನ್ನು ಕಲಿತ. ಇದರ ಪ್ರಭಾವದಿಂದ “ಚಕ್ರಧಾರಿ’ ಎನ್ನುವ ಕಾವ್ಯನಾಮದಿಂದ ಆಗ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ “ಸುವಾಸಿನಿ’ ಮಾಸ ಪತ್ರಿಕೆಗೆ ಜೋ ಜೋ ಎನ್ನುವ ಲೇಖನ ಬರೆದ. ಇದು ಅವನ ಮೊದಲ ಸಾಹಿತ್ಯ ಕೃತಿ. ಲಕ್ಷ್ಮೀನಾರಾಯಣನಿಗೆ ಆಗ ಮುಖ್ಯವಾಗಿದ್ದುದು ತಾನೊಂದು ಉದ್ಯೋಗಕ್ಕೆ ಸೇರಿ ಮನೆಗೆ ನೆರವಾಗುವುದು. ಮದರಾಸಿನಿಂದ ಹಿಂದಿರುಗಿದ ಲಕ್ಷ್ಮೀನಾರಾಯಣ 1889ರಲ್ಲಿ ಉಡುಪಿಯ ಬೋರ್ಡ್ ಶಾಲೆಯಲ್ಲಿ ಹತ್ತು ರೂಪಾಯಿ ಸಂಬಳಕ್ಕೆ ಕುಸ್ತಿ ಮಾಸ್ತರನಾಗಿ ಕೆಲಸಕ್ಕೆ ಸೇರಿದ. ಹೆಚ್ಚು ಸಮಯ ಸಿಗುತ್ತಿದ್ದುದರಿಂದ ಅಲ್ಲಿಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಮಳಲಿ ಸುಬ್ಬರಾಯರನ್ನು ತನ್ನ ಮಾನಸಿಕ ಗುರುಗಳೆಂದು ಒಪ್ಪಿ ಅವರಿಂದ ಸಂಸ್ಕೃತ ಭಾಷೆಯನ್ನು ಕಲಿತುಕೊಂಡನು. ಲಕ್ಷ್ಮೀನಾರಾಯಣನಲ್ಲಿ ಇದ್ದ ಕಲಿಕೆಯ ಆಸಕ್ತಿಯನ್ನು ಕಂಡ ಸುಬ್ಬರಾಯರು ತಮ್ಮಲ್ಲಿದ್ದ ಗ್ರಂಥಗಳನ್ನೂ ತಾವು ರಚಿಸಿದ ಗ್ರಂಥಗಳನ್ನೂ ಅವನಿಗೆ ಕೊಟ್ಟರು. ಹೀಗಾಗಿ ಲಕ್ಷ್ಮೀನಾರಾಯಣನ ಓದು ವಿಸ್ತಾರವಾಯಿತು. ಇದರ ಪ್ರಭಾವ ದಿಂದಾಗಿ ಲಕ್ಷ್ಮೀನಾರಾಯಣ ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಬರೆದನು.
ಪ್ರತೀ ದಿನ ಸಂಜೆ ಸುಬ್ಬರಾಯರು ಸಂಸ್ಕೃತದಲ್ಲಿದ್ದ ಅದ್ಭುತ ರಾಮಾಯಣ ಗ್ರಂಥವನ್ನು ಓದಿ ಹೇಳುತ್ತಿದ್ದರು. ಅವುಗಳನ್ನು ಲಕ್ಷ್ಮೀನಾರಾಯಣ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಕುಂದಾಪುರಕ್ಕೆ ವರ್ಗವಾದಾಗ ಲಕ್ಷ್ಮೀನಾರಾಯಣ ಕಿಟಲ್ ಶಬ್ದಕೋಶದ ಸಹಾಯದಿಂದ ಶಬ್ದಮಣಿದರ್ಪಣ, ಹಳೆಗನ್ನಡ ವ್ಯಾಕರಣ ಮುಂತಾದ ಗ್ರಂಥಗಳನ್ನು ಓದಿ ಪಾರಂಗತನಾದ ಮೇಲೆ ಮತ್ತೆ ಉಡುಪಿಯ ಮಿಷನ್ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇರಿಕೊಂಡನು. ತಾನು ಟಿಪ್ಪಣಿ ಮಾಡಿಕೊಂಡಿದ್ದ ವಿಷಯಗಳನ್ನೆಲ್ಲ ಸಂಗ್ರಹಿಸಿ ಅದ್ಭುತ ರಾಮಾಯಣ ಎನ್ನುವ ಗ್ರಂಥ ರಚಿಸಿದ. “ಮೈಸೂರಿನಲ್ಲಿ ರಾಮಾನುಜಯ್ಯಂಗಾರರೂ ಎಸ್.ಜಿ.ನರಸಿಂಹಾಚಾರ್ಯರೂ ಸೇರಿ ಕನ್ನಡ ಕಾವ್ಯ ಮಂಜರಿ ಎನ್ನುವ ಪುಸ್ತಕಮಾಲೆ ನಡೆಸುತ್ತಿದ್ದಾರೆ. ಅಲ್ಲಿಗೆ ನಿಮ್ಮ ಗ್ರಂಥ ಕಳುಹಿಸಿ’ ಎಂದು ಸುಬ್ಬರಾಯರು ಸಲಹೆ ನೀಡಿದರು. ಆದರೆ ಲಕ್ಷ್ಮೀನಾರಾಯಣ ತಾನು ಹೆಚ್ಚು ಓದಿಲ್ಲದವನು, ತಾನು ಇದನ್ನು ಬರೆದೆನೆಂದು ಹೇಳಿಕೊಂಡರೆ, ಇದನ್ನು ನಾನು ಯಾವುದರಿಂದಲೋ ನಕಲು ಮಾಡಿದ್ದೇನೆ ಎಂದು ಅವರಿಗೆ ಅನುಮಾನ ಬರಬಹುದು ಎನ್ನುವ ಕೀಳರಿಮೆಯಿಂದ ಓಲೆಗರಿಯಲ್ಲಿ ದೊರೆತ ಪ್ರಾಚೀನ ಕೃತಿಯಿದು ಎಂದು ಪತ್ರ ಬರೆದಿದ್ದ. ಅದು ಯಥಾವತ್ತಾಗಿ ಪ್ರಕಟವಾಯಿತು.
ಮುಂದೆ ಅವನು ಕುಂದಾಪುರದಲ್ಲಿದ್ದಾಗ ವೆಂಕಟರಮಣ ಹೆಬ್ಟಾರ್ ಎನ್ನುವವರ ಬಳಿ ತಾನು ಬರೆಯುತ್ತಿದ್ದ ಇನ್ನೊಂದು ಕಾವ್ಯದ ಕುರಿತು ಚರ್ಚಿಸಿ ಶ್ರೀರಾಮ ಪಟ್ಟಾಭಿಷೇಕ ಎನ್ನುವ ಕೃತಿ ರಚನೆ ಮಾಡುತ್ತಾ ಅದನ್ನು ಸುಬ್ಬರಾಯರಿಗೂ ವೆಂಕಟರಮಣ ಹೆಬ್ಟಾರರಿಗೂ ತೋರಿಸಿದನು. ಅನಂತರ ಸುಬ್ಬರಾಯರು ಇದನ್ನಾದರೂ ನೀವು ಬರೆದಿದ್ದು ಎಂದು ತಿಳಿಸಿ ಎಂದು ಹೇಳಿದರೂ ಅದಕ್ಕೆ ಒಪ್ಪದೇ ಕಡೆಗೆ ತನ್ನ ತಾಯಿಯ ಹೆಸರು ಮಹಾಲಕ್ಷ್ಮಿ ಪ್ರಣೀತಂ ಎಂದು ಹೇಳಿ ಕಳುಹಿಸಿಕೊಟ್ಟನು. ಅದೂ ಕಾವ್ಯಮಂಜರಿಯಲ್ಲಿ ಪ್ರಕಟವಾಗಿ ಸಾಹಿತ್ಯಾಸಕ್ತರ ಗಮನ ಸೆಳೆಯಿತು.
ಈಗಲಾದರೂ ಆ ಎರಡೂ ಕೃತಿಗಳು ನಿಮ್ಮವು ಎಂದು ಹೇಳಿ ಅದರಿಂದ ಬರುವ ಪ್ರಶಂಸೆ ಮತ್ತು ಹಣ ನಿಮಗೆ ಸೇರಲಿ ಎಂದು ಸುಬ್ಬರಾಯರು ಸಲಹೆ ಕೊಟ್ಟಾಗ ಮೊದಲು ನನ್ನವಲ್ಲ ಎಂದು ಹೇಳಿ ಅವು ಯಶಸ್ವಿಯಾದ ಮೇಲೆ ನನ್ನವು ಅಂತ ಹೇಳಿಕೊಂಡರೆ ಚೆನ್ನಾಗಿರುವುದಿಲ್ಲ ಎಂದು ತನ್ನ ಮೊದಲಿನ ಸಿದ್ಧಾಂತಕ್ಕೇ ಅಂಟಿಕೊಂಡನು. ಆ ಎರಡೂ ಕೃತಿಗಳು ಮದರಾಸು ವಿಶ್ವವಿದ್ಯಾನಿಲಯದ ಎಫ್.ಎ. ಪರೀಕ್ಷೆಗೆ ಪಠ್ಯವಾಗಿ ನಿಯುಕ್ತವಾದವು. ಗ್ರಂಥಕತೃì ಯಾರೆಂದು ನಿಖರವಾಗಿ ತಿಳಿಯದೇ ಇದ್ದುದರಿಂದ ಸಂಭಾವನೆ ಯಾರಿಗೂ ಹೋಗಲಿಲ್ಲ. ಲಕ್ಷ್ಮೀನಾರಾಯಣ ಇದರಿಂದಲೂ ವಂಚಿತನಾದ.
ಲಕ್ಷ್ಮೀನಾರಾಯಣದ ಮನೆ ಮತ್ತು ಮನವನ್ನು ಬೆಳಗಿದವಳು ಕಮಲಮ್ಮ. ಶಿವಮೊಗ್ಗದ ಬಳಿಯ ಕಾಗೆಕೋಡಮಗ್ಗಿ ಎನ್ನುವ ಗ್ರಾಮದ ಹೆಣ್ಣು. ಇವಳೇ ಮುಂದೆ ಮನೋರಮೆಯಾಗಿ ಶ್ರೀರಾಮೇಶ್ವಮೇಧ ಕಾವ್ಯದ ಜತೆಜತೆಗೆ ಕಾಣಿಸಿಕೊಂಡಿದ್ದಾಳೆ.
ಆ ಸಂದರ್ಭದಲ್ಲಿ ಬಿ. ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದ ಬಂಗಾಲಿ ಕಾದಂಬರಿ “ವಿಷವೃಕ್ಷ’ ಎನ್ನುವ ಕಾದಂಬರಿಯಲ್ಲಿ ಕಮಲಮುಖೀ ಮತ್ತು ಅವಳ ಗಂಡನ ನಡುವೆ ನಡೆಯುವ ಸಂಭಾಷಣೆಯೇ ಪ್ರಧಾನವಾಗಿದೆ. ಇದನ್ನೇ ಆಧಾರ ವಾಗಿಟ್ಟುಕೊಂಡು ಲಕ್ಷ್ಮೀನಾರಾಯಣ ತನ್ನ ಮನದನ್ನೆಯನ್ನು ಮನೋರಮೆ ಎಂದು ಕರೆದು ತನ್ನನ್ನು ಮುದ್ದಣ ಎಂದು ಕರೆದುಕೊಂಡು ಶ್ರೀ ರಾಮೇಶ್ವಮೇಧ ರಚಿಸಿದನು.
ಶ್ರೀ ರಾಮೇಶ್ವಮೇಧವನ್ನು 1897ರಲ್ಲಿ ಬರೆದು ಮುಗಿಸಿ ಮುದ್ದಣ ಎನ್ನುವವನು ಬರೆದ ಪ್ರಾಚೀನ ಕೃತಿ ಎಂದು ಕಾವ್ಯ ಕಲಾನಿಧಿ ಎನ್ನುವ ಪತ್ರಿಕೆಗೆ ಕಳುಹಿಸಿಕೊಟ್ಟನು. ಅದರಲ್ಲಿ ಶ್ರೀರಾಮೇಶ್ವಮೇಧವು ನಿರಂತರವಾಗಿ ಪ್ರಕಟವಾಗಿ 1901 ಆಗಸ್ಟ್ ಮಾಹೆಯಲ್ಲಿ ಮುಕ್ತಾಯವಾಯಿತು. ಅದಕ್ಕಿಂತ ಮೊದಲೇ ಲಕ್ಷ್ಮೀನಾರಾಯಣ ನಿಧನ ಹೊಂದಿದ್ದನು.
ಮೂರೂ ಕೃತಿಗಳ ಕೈಬರಹಗಳು ಒಂದೇ ರೀತಿಯಾಗಿದ್ದುದನ್ನು ಕಂಡ ಪ್ರಕಾಶಕರು ಈ ಮೂರೂ ಕೃತಿಗಳನ್ನು ಬರೆದವರು ನೀವೇ ಅಲ್ಲವೇ ಎಂದು ಕೇಳಿದರೂ ಲಕ್ಷ್ಮೀನಾರಾಯಣ ಉತ್ತರ ಕೊಡಲಿಲ್ಲ. ಆದರೆ ಮುಂದೆ ಬೆನಗಲ್ ರಾಮರಾಯರು ಕೇಳಿದ್ದಕ್ಕೆ ಹೌದು ನಾನೇ ಎಂದಿದ್ದ. ಬಡತನ ಒಂದು ಕಾರಣವಾದರೆ ಅವಿರತ ಮತ್ತು ವಿಶ್ರಾಂತಿರಹಿತ ಓದು ಬರಹಗಳಿಂದಾಗಿ ಅವನಿಗೆ ಕ್ಷಯರೋಗವು ಅಂಟಿಕೊಂಡಿತು. ಆಗಿನ ಕಾಲದಲ್ಲಿ ಇದಕ್ಕೆ ಸರಿಯಾದ ಔಷಧೋಪಚಾರಗಳು ಇರಲಿಲ್ಲ. ಹೀಗಾಗಿ ನಂದಳಿಕೆ ಲಕ್ಷ್ಮೀನಾರಾಯಣ ಆಲಿಯಾಸ್ ಮುದ್ದಣ 1901ರ ಫೆಬ್ರವರಿ 15ರಂದು ಇಹಲೋಕ ತ್ಯಜಿಸಿದ.
ಒಬ್ಬ ಕವಿಯ ಗಟ್ಟಿ ಕಾವ್ಯಗಳು ಅವನು ಅಸ್ತಂಗತನಾದ ಅನೇಕಾನೇಕ ವರ್ಷಗಳವರೆಗೂ ಶಾಶ್ವತವಾಗಿ ಸಾರಸ್ವತ ಲೋಕದಲ್ಲಿ ಸ್ಥಿರವಾಗಿದ್ದು ಕವಿಯ ಹೆಸರನ್ನು ಅಜರಾಮರವಾಗಿಸುತ್ತವೆ ಎನ್ನುವುದಕ್ಕೆ ಮುದ್ದಣನೇ ನಮಗೊಂದು ಉದಾಹರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.