Kite; ಬದುಕಿಗೊಂದು ಪಥವಿರಲಿ, ಗಾಳಿಗೂ ಒಂದು ಸೂತ್ರ !
Team Udayavani, Feb 11, 2024, 6:40 AM IST
ಗಾಳಿಪಟ ಮತ್ತು ಉತ್ಸವ.ಎರಡಕ್ಕೂ ಇರುವ ಸಾಧ್ಯತೆ ಅಗಾಧ. ಎರಡೂ ಭಾವನೆಗಳಿಗೆ ಸಂಬಂಧಪಟ್ಟದ್ದೇ. ಉತ್ಸವಗಳೂ ರೂಪುಗೊಂಡಿದ್ದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿಕ್ಕಾಗಿಯೇ. ಗಾಳಿಪಟವೂ ಅಷ್ಟೇ. ಆದರೆ ನಗರಗಳು ಮತ್ತು ನಗರ ಸಂಸ್ಕೃತಿ ಬೆಳೆಯುತ್ತಿದ್ದಂತೆಯೇ ನಮ್ಮ ಹಳೆಯ ಸಂಗತಿಗಳಿಗೆಲ್ಲ ಬೆಲೆ ಬರಲು ಆರಂಭವಾದವಲ್ಲ. ಹಾಗೆಯೇ ಇದೂ ಸಹ. ಇಂದು ಗಾಳಿಪಟ ಉತ್ಸವ ಎಂಬುದು ಒಂದು ಉದ್ಯಮವೂ ಹೌದು, ಆರ್ಥಿಕತೆಯ ಭಾಗವೂ ಹೌದು. ಪ್ರವಾಸೋದ್ಯಮದ ಸೆರಗಿನಲ್ಲಿ ಮೆಲ್ಲಗೆ ಬೆಳೆಯುತ್ತಾ ಬೆಳೆಯುತ್ತಾ ತನ್ನದೇ ವಿಶ್ವರೂಪವನ್ನು ತೋರ್ಪಡಿಸುತ್ತಿರುವುದು ಈ ಗಾಳಿ ಪಟ ಉತ್ಸವ.
ಗುಜರಾತಿನ ಗಾಳಿಪಟ ಉತ್ಸವ ವಿಶ್ವವಿಖ್ಯಾತ. ಇತ್ತೀಚೆಗೆ ಕರಾವಳಿಯ ಮಂಗಳೂರಿನ ಕಡಲತೀರದ ತಟದಲ್ಲೂ ಗಾಳಿಪಟ ಉತ್ಸವ ನಡೆಯುತ್ತಿದೆ. ದೇಶದ ವಿವಿಧ ರಾಜ್ಯಗಳು, ಹೊರ ದೇಶಗಳಿಂದಲೂ ಬಂದು ಗಾಳಿಪಟ ಹಾರಿಸುತ್ತಾರೆ. ಗುಜರಾತಿನ ಸಾಬರಮತಿ ನದಿ ತೀರದಲ್ಲಿ ತಿಂಗಳ ಹಿಂದಷ್ಟೇ ನಡೆದ ಅಂತಾರಾಷ್ಟ್ರೀಯ ಉತ್ಸವದಲ್ಲಿ 55 ದೇಶಗಳಿಂದ 153 ಮಂದಿ ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಭಾಗ ವಹಿಸಿದ್ದರು. ಅಷ್ಟೇ ಅಲ್ಲ. 12 ರಾಜ್ಯಗಳಿಂದ 68 ಮಂದಿ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು. ಇಷ್ಟಕ್ಕೇ ಇದು ಮುಗಿಯಲಿಲ್ಲ. ಗುಜ ರಾತಿನ 23 ನಗರಗಳ 865 ಮಂದಿ ಗಾಳಿಪಟ ಹಾರಿಸಿದರು. ಇದನ್ನು ನೋಡಲು, ಉತ್ಸಾಹ ತುಂಬಿಕೊಳ್ಳಲು ಬಂದ ಮಂದಿಗೆ ಲೆಕ್ಕವಿಲ್ಲ. ಇಡೀ ಒಂದು ವಾರದ ಉತ್ಸವವಿದು.
ಗಾಳಿಪಟವೆಂದರೆ ಬದುಕು. ನಾವೂ ಚಿಕ್ಕಂದಿನಲ್ಲಿದ್ದಾಗ, ಅದರಲ್ಲೂ ಬೇಸಗೆ ರಜೆ ಬಂದಾಗ ಮೊದಲು ಕೆಲಸವೆಂದರೆ ಗಾಳಿಪಟ ಮಾಡಿ ಹಾರಿಸುವುದು. ಮೂರ್‍ನಾಲ್ಕು ಮಂದಿ ಸೇರಿ ಮಾಡಬೇಕಾದ ಕೆಲಸವಿದು. ಒಬ್ಬರಿಂದ ಕಷ್ಟ (ನಾವು ಚಿಕ್ಕವರಾಗಿದ್ದೆವಲ್ಲ). ಜತೆಗೆ ಸರಿಯಾದ ದೊಡ್ಡವರೋ, ಅನುಭವಿ ಗಾಳಿಪಟ ರಚನಾಕಾರನೋ ಸೂತ್ರವನ್ನು ಸರಿಯಾಗಿ ಬಂಧಿಸಿ ಕೊಡಬೇಕು. ಇಲ್ಲವಾದರೆ ನೆಲದಿಂದ ಒಂದು ಅಡಿ ಹಾರುವುದರಲ್ಲೇ ಗಾಳಿಪಟ ಗೋತಾ ಹೊಡೆಯುತ್ತಿತ್ತು. ಆಗ ಮತ್ತೆ ಹೊಸದಾಗಿ ರಚಿಸುವ ಕೆಲಸ. ಮನೆಯಿಂದಲೇ ಗೋಧಿ, ಮೈದಾ ಸೇರಿಸಿ ಗೋಂದು (ಅಂಟು) ಮಾಡಿ, ದಿನಪತ್ರಿಕೆಗಳನ್ನು ನೆರೆಮನೆಯಿಂದ ಕಾಡಿ ಬೇಡಿ ತಂದು, ತೆಂಗಿನಕಡ್ಡಿ ಪರಕೆಯ ಕಡ್ಡಿಗಳನ್ನು ಸೂತ್ರಕ್ಕೆ ಬಳಸಿ, ದಾರಕ್ಕೆ ಮನೆಗಳನ್ನು ಅಲೆದಾಡಿದ್ದು ಇದೆ. ಎಲ್ಲರ ಮನೆಯ ದಾರಿಗಳನ್ನು ಒಟ್ಟು ಮಾಡಿ. ಗಾಳಿಪಟ ಸಿದ್ಧಪಡಿಸಿದರಾಯಿತು. ಆಗ ಈಗ ಇದ್ದಂತೆ ಬಣ್ಣದ ಕಾಗದವೂ ಇರಲಿಲ್ಲ, ಬಣ್ಣಗಳೂ ಇರಲಿಲ್ಲ. ದಿನಪತ್ರಿಕೆಯ ಕಪ್ಪು-ಬಿಳುಪಿನ ಗಾಳಿಪಟ ಸಿದ್ಧವಾಗುತ್ತಿತ್ತು. ಮಾಡಿಸಿಕೊಂಡವ (ಅದರ ಮಾಲಕ) ಮುಂದೆ ಎಡಗೈಯಲ್ಲಿ ಅದನ್ನು ಹಿಡಿದುಕೊಂಡರೆ, ಅವನ ಗಳಸ್ಯ ಕಂಠಸ್ಯ ಸ್ನೇಹಿತ ಹಿಂದೆ ದಾರ ಹಿಡಿದುಕೊಳ್ಳುತ್ತಿದ್ದ. ಅದನ್ನು ಹಿಡಿದುಕೊಂಡು ಸಂಜೆ ಹೊತ್ತಿಗೆ ಮೈದಾನಕ್ಕೆ ಹೋಗಬೇಕಿತ್ತು. ಮೆಲ್ಲಗೆ ತೂರಿ ಬಿಡುತ್ತಾ ಸಂಭ್ರಮಿಸುತ್ತಾ ಇದ್ದರೆ, ಹಿಂದಿನವ ಮೆಲ್ಲಗೆ ದಾರವನ್ನು ಬಿಡುತ್ತಿದ್ದ. ಗಾಳಿಪಟ ಮೇಲಕ್ಕೇರುತ್ತಿತ್ತು. ಬಿಟ್ಟ ಕಂಗಳಲ್ಲೆ ನೋಡುತ್ತಿದ್ದವು. ಒಂದಷ್ಟು ಎತ್ತರಕ್ಕೆ ಹೋಗುವಾಗ ಚೂರು ಗಾಳಿ ಜೋರಾದರೆ ಗಾಳಿಪಟ ಪಲ್ಟಿ ಹೊಡೆಯಲು ಶುರು ಮಾಡುತ್ತಿತ್ತು. ಆಗ ವಾಪಸು ಎಳೆಯುವ ಸರ್ಕಸ್. ಇನ್ನು ಕೆಲವು ಬಾರಿ ಯಾವುದೋ ಮರಕ್ಕೋ, ಮರದ ಗೆಲ್ಲಿಗೋ ಗಾಳಿಪಟ ಸಿಕ್ಕಿ ಬಿಡುತ್ತಿತ್ತು. ಅದರ ಸೂತ್ರ ಹರಿದು ಹೋಗದೇ ಕೆಳಗೆ ಬಂದರೆ ಅದೃಷ್ಟ. ಇಲ್ಲದಿದ್ದರೆ ಮತ್ತೂಂದನ್ನು ಸಿದ್ಧಪಡಿಸಲು ವಸ್ತುಗಳನ್ನೆಲ್ಲ ಹೊಂಚುಹಾಕುವಷ್ಟರಲ್ಲಿ ಮತ್ತೂಂದು ರವಿವಾರ ಬರುತ್ತಿತ್ತು. ಆದರೆ ಅದರಿಂದ ಪಡೆಯುತ್ತಿದ್ದ ಸಂಭ್ರಮಕ್ಕೆ, ಉತ್ಸಾಹಕ್ಕೆ ಪಾರವೇ ಇರಲಿಲ್ಲ. ವಾರ ಪೂರ್ತಿ ನಮ್ಮ ತಲೆಯೊಳಗೆ ನಡೆಯುತ್ತಿದ್ದ ಲೆಕ್ಕಾಚಾರ ಒಂದೇ. ಮುಂದಿನ ವಾರದ ಗಾಳಿಪಟಕ್ಕೆ ವಸ್ತುಗಳನ್ನು ಎಲ್ಲಿ ಹೊಂದಿಸುವುದು?
ಇಡೀ ಬಾಲ್ಯದ ವಯಸ್ಸಿನಲ್ಲಿ ಅಬ್ಬಬ್ಟಾ ಎಂದರೆ ಮೂರು ಗಾಳಿಪಟವನ್ನು ಸರಿಯಾಗಿ ಮಾಡಿ, ಎತ್ತರಕ್ಕೆ ಹಾರಿಸಿದ್ದರೆ ಅದು ದೊಡ್ಡ ಸಾಧನೆ. ಅವನು ಗಾಳಿಪಟ ಹಾರಿಸುವುದರಲ್ಲಿ ಮತ್ತು ರೂಪಿಸುವುದರಲ್ಲಿ ಮಾಸ್ಟರ್ ಇದ್ದಂತೆ. ಅವನ ಹಿಂದೆ ಮಕ್ಕಳ, ಪೋಷಕರ ಕ್ಯೂ ಇರುತ್ತಿತ್ತು. “ನನಗೂ ಒಂದು ಗಾಳಿಪಟ ಮಾಡಣ್ಣಾ’ ಎಂದು ಕೆಲವರು ಕೇಳುತ್ತಿದ್ದರೆ, ಇನ್ನು ಕೆಲವು ಪೋಷಕರು “ಇವನಿಗೂ ಅದನ್ನು ಹೇಳಿಕೊಡಪ್ಪ’ ಎಂದು ಕೋರುತ್ತಿದ್ದರು. ಆಯಿತೆನ್ನುತ್ತಾ ಆತ ಕಲಿಸುತ್ತಲೂ ಇದ್ದ, ಮಾಡಿಕೊಡುತ್ತಲೂ ಇದ್ದ.
ಇಂದು ಆ ನಮ್ಮ ಭಾವಗಳೆಲ್ಲ ಮೌಲ್ಯವರ್ಧನೆಗೊಂಡಿದೆ. ಆದಕ್ಕೇ ಗಾಳಿಪಟ ಮಾಡುವವರು ಸೃಷ್ಟಿಯಾಗಿದ್ದಾರೆ. ಸಣ್ಣ ಪುಟ್ಟ ಗಾಳಿಪುಟದ ಪುಟಗಳನ್ನೆಲ್ಲ ಬದಿಗೆ ಸರಿಸಿ, ಈಗ ಏನಿದ್ದರೂ ದೈತ್ಯಾಕಾರದ ಗಾಳಿಪಟದ ಅಧ್ಯಾಯಗಳು. ಅದಕ್ಕಾಗಿ ಕಂಪೆನಿಗಳೂ ಹುಟ್ಟಿಕೊಂಡಿವೆ, ಅದಕ್ಕೊಂದು ಕಾರ್ಪೋರೇಟ್ ಸೌಂದರ್ಯವೂ ಬಂದಿದೆ. ಲಕ್ಷಾಂತರ ಮಂದಿ ಈ ಗಾಳಿಪಟ ನಿರ್ಮಾಣದಲ್ಲಿ ತೊಡಗಿದ್ದಾರೆ. ನಾವೆಲ್ಲ ಆಟಕ್ಕೆಂದು ಆಡುತ್ತಿದ್ದ ಗಾಳಿಪಟ ಹಲವಾರು ಜನರ ಬದುಕನ್ನು ಮೇಲಕ್ಕೆ ಹಾರಿಸುತ್ತಿದೆ. ರಾಜ್ಯಗಳು, ರಾಷ್ಟ್ರಗಳೂ ಸಹ ಪ್ರವಾಸೋದ್ಯಮವೆಂಬ ಗೂಟಕ್ಕೆ ಗಾಳಿಪಟ ಉತ್ಸವವೆಂಬ ಅಂಗಿ ತೂಗು ಹಾಕಿದ್ದಾರೆ. ಮಾರಾಟ, ಸ್ಪರ್ಧೆ, ಪೈಪೋಟಿ ಎಲ್ಲವೂ ಸೃಷ್ಟಿಯಾಗಿ ಉದ್ಯಮದ ಸ್ವರೂಪ ಪಡೆದಿದೆ. ಇಂದು ಅದೊಂದು ಬೃಹತ್ ಉದ್ಯಮ.
ಗಾಳಿಪಟದ ಬಣ್ಣವಷ್ಟೇ ಬದಲಾಗಿಲ್ಲ. ಉತ್ಸವದ ಬಣ್ಣಗಳೂ ಬದಲಾಗುತ್ತಿವೆ. ಈಗಿನ ಗಾಳಿಪಟಗಳಿಗೆ ನಾನಾ ಸ್ವರೂಪ. ಇವುಗಳನ್ನೆಲ್ಲ ಕಾಣುವಾಗ ನಾವು ಮಾಡುತ್ತಿದ್ದುದು ಪುಟಪಟಗಳಷ್ಟೇ. ಅವುಗಳು ಗಾಳಿಗೆ ಹಾರುತ್ತಿದ್ದವು ಎನ್ನುವುದಷ್ಟೇ ನೈಜ. ಉಳಿದಂತೆ ಇಂದಿನ ಗಾಳಿಪಟಕ್ಕೂ ಅಂದಿನದಕ್ಕೂ ಅಜಗಜಾಂತರ, ಬದುಕಿಗೂ ಸಹ. ಹಾಗಾಗಿ ಭಾವಕ್ಕಿಂತ ಬಣ್ಣಕ್ಕೇ ಹೆಚ್ಚು ಆದ್ಯತೆ.
ಇಂದಿನ ಬದುಕೂ ಸಹ ಹಾಗೆಯೇ. ಭಾವಗಳಿಗಿಂತ ಬಣ್ಣಕ್ಕೇ ಹೆಚ್ಚು ಪ್ರಾಶಸ್ತ್ಯ. ಬಣ್ಣವಿದ್ದರೆ ಮಾತ್ರ ಬದುಕು ವಿಜೃಂಭಿಸುವುದು. ಕಪ್ಪು ಬಿಳುಪು ಎಂಬುದೇ ಮಸುಕಾಗಿ ಬದಿಗೆ ಸರಿದು ನಿಂತಿದೆ ನಮ್ಮ ಹಳೆಯ ಗಾಳಿಪಟಗಳ ಹಾಗೆಯೇ. ಮಕ್ಕಳೂ ಅಷ್ಟೇ. ಮನೆಯ ಪಂಜರದಿಂದ ಶಾಲೆಯೆಂಬ ಮತ್ತೂಂದು ಪಂಜರಕ್ಕೆ ವರ್ಗಾವಣೆಗೊಂಡು, ಮತ್ತೆ ಮನೆಗೆ ವಾಪಸಾಗುವುದಷ್ಟೇ. ಉಳಿದಂತೆ ಹೀಗೆ ಗಾಳಿಪಟ ಮಾಡುವುದು, ಹಾರಿಸುವುದು, ಸಂಭ್ರಮಿಸುವುದು ಕೊಂಚ ದೂರದ ಮಾತೆಂಬಂತೆ ತೋರುತ್ತಿದೆ. ಈ ಮಾತಿಗೆ ಕೆಲವು ಊರುಗಳು, ಕೆಲವು ಮಕ್ಕಳು, ಪೋಷಕರು ಅಪವಾದವೆಂಬಂತೆ ಬದುಕುವುದೂ ಇದೆ, ಇಲ್ಲವೆಂದಲ್ಲ. ಅಂಥವರು ಹೆಚ್ಚಾದರೆ ಬಣ್ಣಗಳ ಅಬ್ಬರದಲ್ಲಿ ಗಾಳಿಪಟ ಕರಗಿ ಹೋಗುವುದಿಲ್ಲ, ಬದುಕೂ ಕಳೆದು ಹೋಗುವುದಿಲ್ಲ. ಇಲ್ಲವಾದರೆ ನಭಕ್ಕೆ ಹಾರಿದಷ್ಟೂ ದೂರ ನಮಗೆ ಕಾಣುವುದು ಬಣ್ಣಗಳಷ್ಟೇ, ಭಾವಗಳಲ್ಲ !
ಪ್ರತಿಯೊಂದಕ್ಕೂ ಉದ್ಯಮದ ಬಾಗಿಲನ್ನು ತೆರೆಯುತ್ತಿದ್ದೇವೆ. ಅದರೊಳಗೆ ತಂದು ಒಂದು ಶಿಸ್ತಿನ ಚೌಕಟ್ಟು ಹಾಕಿ, ಅದ ರೊಳಗೇ ಹಾದು ಹೋಗಬೇಕೆಂಬ ಕಟ್ಟುನಿಟ್ಟಿನ ನಿಯಮ ಹಾಕಿ, ಪಟ್ಟಿ ಪಟ್ಟಿಗೆ ಇಂತಿಷ್ಟು ಎಂದು ಹಣ ನಿಗದಿಮಾಡಿ, ಸಂಭ್ರ ಮಿಸಿ ಎಂದು ಮಕ್ಕಳನ್ನೂ ಬಿಟ್ಟವೆಂದುಕೊಳ್ಳಿ. ಆ ಮಕ್ಕಳು ನಾವು ಹಾಕಿದ ಚೌಕಟ್ಟು, ನಿಯಮ, ಅಪ್ಪ ಪಟ್ಟಿ ಹಾಕಿದಲ್ಲೆಲ್ಲ ಕೊಟ್ಟ ಹಣದ ಬಣ್ಣವನ್ನೇ ನೋಡುತ್ತಾ ಬರುತ್ತವೆಯೇ ಹೊರತು, ಗಾಳಿಪಟವನ್ನೂ ಅಲ್ಲ, ಉತ್ಸವದ ಸಂಭ್ರಮನ್ನೂ ಅಲ್ಲ. ಆಗ ಮತ್ತೂಂದು ಪಂಜರದ ಕಥೆಯಂತೆಯೇ ಬದುಕು ಆಗಿಬಿಡುವ ಅಪಾಯವಿದೆ. ಲಾಭದ ನಕಾಶೆಯಲ್ಲಿ ಕಾಣದ ಸಂಗತಿಯೇ ಇಲ್ಲ ಎಂದಾಗಿಬಿಟ್ಟರೂ ಬದುಕಿಗೇ ನಷ್ಟ, ಗಾಳಿ ಪಟಕ್ಕಲ್ಲ!
ಆಗ ನಭಕ್ಕೆ ಹೊರಟ ಗಾಳಿಪಟಗಳೆಲ್ಲ ನಮ್ಮ ಚಿಕ್ಕಂದಿನ ಸೂತ್ರ ಹರಿದ ಗಾಳಿಪಟದಂತೆ ಗೋತಾ ಹೊಡೆಯಬಲ್ಲವೇನೋ? ಸಂಭ್ರಮದ ಬಣ್ಣವೂ ವಿವರ್ಣವಾಗಿ ಬಿಡಬಹುದೇನೋ? ಅದಕ್ಕೇ ಉತ್ಸವಕ್ಕೂ ಉದ್ಯಮಕ್ಕೂ ಮಧ್ಯೆ ಒಂದು ಗೆರೆ ಇದ್ದರೆ ಚೆಂದ. ಆಗ ಬಣ್ಣಗಳಿಗೂ ಅರ್ಥ, ಕಪ್ಪು ಬಿಳುಪಿಗೂ ಅರ್ಥ.
ಉತ್ಸವದ ನೆಪದಲ್ಲೋ, ಉದ್ಯಮದ ಲೆಕ್ಕದಲ್ಲೋ ಗಾಳಿಪಟಗಳನ್ನು ನಮ್ಮ ಮಕ್ಕಳು ನೋಡುವಂತಾಗುತ್ತಿದೆಯಲ್ಲ ಎಂಬ ಸಮಾಧಾನವೂ ಇದೆ. ಕನಿಷ್ಠ ಆ ಸಮಾಧಾನವಾದರೂ ಮುಂದಿನ ತಲೆಮಾರುಗಳಿಗೂ ಉಳಿಯಲಿ. ಬದುಕು ಮತ್ತು ಭಾವಗಳ ಬಣ್ಣದಿಂದ ಕೂಡಿದ ಗಾಳಿಪಟ ಮತ್ತಷ್ಟು ಎತ್ತರಕ್ಕೆ ಏರಲಿ..ಏರಲಿ..ಏರುತ್ತಿರಲಿ. ಬದುಕಿಗೊಂದು ಪಟವಿರಲಿ, ಪಥವಿರಲಿ, ಗಾಳಿಗೂ ಒಂದು ಸೂತ್ರ.
ಅರವಿಂದ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.