ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು


Team Udayavani, Dec 1, 2022, 9:45 AM IST

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬಳೆ ಸುಂದರ ರಾವ್‌ ನಮ್ಮನ್ನಗಲಿದರೂ ಅವರು ಕಲೆಯ ಮೂಲಕ ಜೀವಂತವಾಗಿಯೇ ಇದ್ದಾರೆ. ಅವರು ಸಾಧನೆ, ಏರಿದ ಎತ್ತರ ಶಬ್ದಗಳಿಗೆ ನಿಲುಕದ್ದು. ಆಟ- ಕೂಟದ ವೇದಿಕೆಯಲ್ಲಿ ಮಾತಿನ ಚಕ್ರವರ್ತಿಯಾಗಿ ಮಿಂಚಿದ್ದ ಅವರಿಗೆ ಇದೊಂದು ನುಡಿನಮನ.

ಯಕ್ಷಗಾನದ ಕಳೆದ 100 ವರ್ಷಗಳ ಇತಿಹಾಸದಲ್ಲಿ ನನ್ನ ಕೇಳ್ಮೆಯಲ್ಲಿ, ಅನುಭವದಲ್ಲಿ ಸ್ವತಃ ಕಂಡು ಕೇಳಿ ನೋಡಿದ ಅನೇಕ ಕಲಾವಿದರಲ್ಲಿ ಕುಂಬಳೆ ಸುಂದರರಾಯರ ಜೀವನ ಸಾಧನೆ ತುಂಬಾ ವೈಶಿಷ್ಟéಗಳಿಂದ ಕೂಡಿದ್ದು.

ಭಾರತೀಯ ರಂಗಭೂಮಿ ವಿಭಾಗದ ಮಾತುಗಾರಿಕೆ ವಿಭಾಗದಲ್ಲಿನ ದೊಡ್ಡ ನಟ, ಕಲಾವಿದ. 40 ವರ್ಷ ರಂಗವನ್ನು ಆಳಿದವರು. ಸ್ವಂತ ಬಲದಿಂದಲೇ ಪ್ರದರ್ಶನಕ್ಕೆ ಜನ ತರಬಲ್ಲವರು, ಆ ಕಾಲದಲ್ಲಿದ್ದ ಯಕ್ಷರಂಗದ ಪ್ರಭಾವಿಗಳ-ಶ್ರೇಷ್ಠರ ಮಧ್ಯೆ ಮೆರೆಯಬಲ್ಲ ಅಸಾಧಾರಣ ಯೋಗ್ಯತೆ ಉಳ್ಳವರು.

ನೇಕಾರರ ಕುಟುಂಬ
ಕೈಮಗ್ಗದ ನೇಕಾರರ ಪರಂಪರೆಯಲ್ಲಿ ಹುಟ್ಟಿದವರು, ಕುಂಬಳೆಯ ನಾಯ್ಕಪು ಶೆಟ್ಟಿಗಾರ್‌ ಆಗಿದ್ದವರು ಕುಂಬಳೆ ಸುಂದರ ರಾವ್‌ ಆದರು. ನಿಮಗೆ “ರಾವ್‌’ ಇರಲಿ ಅಂತ ಇರಾ ಕುಂಡಾವು ಮೇಳದ ಕೊರಗ ಶೆಟ್ಟರು ಹೆಸರು ಇಟ್ಟದ್ದು ಎಂಬ ವಿಚಾರವೂ ಇದೆ.

ರಂಗಸ್ಥಳವೇರಿದ ಮೊದಲ ದಿನ ಬಣ್ಣ ಹಚ್ಚಿದ್ದನ್ನು ತೆಗೆಯಲಾಗದೆ ಇದ್ದರು. ಕಲಾವಿದನಾಗಲಾರೆ ಎಂದು ಬಣ್ಣ ಸಹಿತ ಹಿಂದೆ ಹೋದವರು. ಕೈಕಾಲು ಆಡುವುದಿಲ್ಲ, ಅಭಿನಯ ಬರುವುದಿಲ್ಲ ಎಂದು ತಮಾಷೆ ಮಾಡಿದ್ದವರು ಕೊನೆಗೆ ತಲೆದೂಗಿದರು.

ಪ್ರಾರಂಭದಲ್ಲಿ ಅವರ ಕಪಿ ವೇಷವನ್ನು ಅಜ್ಜ ಬಲಿಪರು ನೋಡಿ ಖುಷಿಯಾಗಿ 10 ಪದ್ಯ ಕೊಟ್ಟರು. ಅದನ್ನು ತೆಗೆದುಕೊಂಡು ಕುಂಬಳೆ ಮಾತನಾಡಿದರು. ಬಲಿಪರು ಹಾಗೆಯೇ. ಪ್ರವಾಹಕ್ಕೆ ತಳ್ಳಿ ಈಜು ಕಲಿಸುವವರು. ಅದುವೇ ಕುಂಬಳೆಯವರ ಉತ್ಕರ್ಷಕ್ಕೆ ಕಾರಣವಾಯಿತು.

ಅವರು ಕುಣಿಯದ ವೇಷಧಾರಿ ಎಂಬ ಮಾತುಗಳು ಇವೆ. ಆದರೆ ಹಾಗೆ ಹೇಳುವುದು ಚಾರಿತ್ರಿಕ ತಪ್ಪು. ಅವರು ಕುಣಿಯದವರಲ್ಲ, ಒಳ್ಳೆಯ ಕುಣಿತವಿರಲಿಲ್ಲ ಅಷ್ಟೇ. ಪ್ರವೇಶಕ್ಕೆ ಧೀಂಗಿಣ ಕುಣಿದೇ ಬರುತ್ತಿದ್ದರು, ಪದ್ಯಗಳಿಗೆ ನರ್ತಿಸುತ್ತಿದ್ದರು. ಕಡತೋಕ ಭಾಗವತರು “ಬಾಯಿತಾಳ’ಕ್ಕೆ ಕುಣಿಸಿದ್ದೂ ಹೊಸಪ್ರಯೋಗ
ವೆನೆಸಿದ್ದು ಮರೆಯುವಂತಿಲ್ಲ.

ಓದುವ ಹಂಬಲ
ಅವರ ಅಜ್ಜ ಕೋಮರರು ಎಂದರೆ ದೇವರನ್ನು ಹೊರು ವವರು. ಚಿಕ್ಕಂದಿನಲ್ಲಿ ಕುಂಬಳೆಯಲ್ಲಿ ಮಲಯಾಳ, ಕನ್ನಡ ವಾತಾವರಣ, ಕನ್ನಡ ಸಾಹಿತ್ಯ, ಹೋರಾಟದ ಕಾಲ. ಸಾಹಿತ್ಯ ಪ್ರೇಮದ ಸಮಯ. ಕುಂಬಳೆಯವರು ಕಂಡದ್ದೆಲ್ಲಾ ಓದುವವರು, ಪೇಪರಲ್ಲಿ ಪ್ರಕಾಶಕರ ಹೆಸರಿನ ವರೆಗೆ ಕೂಡ, ಪುಸ್ತಕದ ಕೊನೆಯವರೆಗೆ ಕೂಡ ಬಿಡದೆ ಓದುವವರು. ಬಿದ್ದಿರುವ ಚೀಟಿಯನ್ನೂ ಎತ್ತಿ ಓದಿದ್ದು ನಾನು ನೋಡಿದ್ದೇನೆ.

ನೇಕಾರ ಮನೆತನದಿಂದ ಬಂದು ಕಲಾವಿದನಾಗಿದ್ದು, ವಿಧಾನಸಭೆ ಪ್ರವೇಶಿಸಿದ್ದು ಇತಿಹಾಸ ನಿರ್ಮಾಣವೆನ್ನ ಬಹುದು. ಸಂಘ ಪರಿವಾರದ ಬೌದ್ಧಿಕ್‌ಗಳ ಅಚ್ಚು ಅವರ ಮಾತುಗಾರಿಕೆಯಲ್ಲಿ ಇತ್ತು. ತಮಿಳು ಕನ್ನಡ ಸಿನೆಮಾಗಳ ಪ್ರಭಾವ ಇತ್ತು. ಸ್ವಂತ ಸೃಜನಶೀಲತೆ ಇತ್ತು. ಅವರ ಮೇಲೆ ವೆಂಕಪ್ಪ ಶೆಟ್ಟಿ, ಪೊಳಲಿ ಶಾಸಿŒ, ಶೇಣಿ, ಸಾಮಗರ ಪ್ರಭಾವ ಇತ್ತು. ಆದರೆ ಯಾರನ್ನೂ ನಕಲು ಮಾಡಲಿಲ್ಲ.

ಮಾತೇ ಬಂಡವಾಳ
ಮಾತುಗಾರಿಕೆಯಿಂದಲೇ ಮುಂದೆ ಬಂದವರು ಅವರು. ಶೇಣಿ ಸಾಮಗರ ಮುಂದುವರಿಕೆ ಎನ್ನ ಬಹುದು. ಸುರತ್ಕಲ್‌ ಮೇಳದಲ್ಲಿ ಅದ್ಭುತ ಅವಕಾಶ ಸಿಕ್ಕಿತು. ಕೋಳ್ಯೂರು ರಾಮಚಂದ್ರ ರಾಯರು ಅಲ್ಲಿ ದ್ದರು, ಅಗರಿ ರಘುರಾಮ ಭಾಗವತರಿದ್ದರು, ಅವರು ವೇಷಧಾರಿಯನ್ನು ರೂಪಿಸಬಲ್ಲ ಭಾಗವತರು. ದೊಡ್ಡ ಸಾಮಗರಿದ್ದರು, ಪುತ್ತೂರು ನಾರಾಯಣ ಹೆಗ್ಡೆ ಇದ್ದರು. ತಿರುಪತಿ ಕ್ಷೇತ್ರ ಮಹಾತೆ¾ಯ ಮೂರು ಪದ್ಯದಲ್ಲಿ ಕುಂಬಳೆ ಮಿಂಚಿದರು, ಅವರು ತಮ್ಮ ನಟ ನನ್ನು ಸ್ಥಾಪಿಸಿದ್ದು ಅದರಲ್ಲಿ. ಅವರ ಭರತ, ಕರ್ಣ ಸ್ಥಾಪನೆ ಆದ್ದು ಆ ಮೇಲೆ. ಮರೆಯ ಲಾರದ ಪಾತ್ರ ಚಂದ್ರಗುಪ್ತ. ದೇಶ, ಹೋರಾಟ, ರಾಷ್ಟ್ರೀಯತೆ ಬಗ್ಗೆ ಅವರಿಗೆ ಹೇಳುವುದಕ್ಕೂ ಅದು ಸೂಕ್ತವಾಗುತ್ತಿತ್ತು.

ಧರ್ಮಸ್ಥಳ ಮೇಳದ
ಪ್ರಧಾನ ವೇಷಧಾರಿ
ಧರ್ಮಸ್ಥಳ ಮೇಳದಲ್ಲಿ ಪ್ರಧಾನ ವೇಷಧಾರಿಯಾದರು, ಸ್ವರ್ಣಯುಗದ ಮೇಳ ವದು. ಎಲ್ಲ ಬಗೆಯ ಪಾತ್ರ ಮಾಡಿದರೂ ಭರತ, ಕರ್ಣ ಮೆರೆದದ್ದು ಹೆಚ್ಚು. 1960-90ರ ದಶಕದಲ್ಲಿ ಕಡತೋಕ ಮಂಜುನಾಥ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ನೆಡ್ಲೆ ನರಸಿಂಹ ಭಟ್‌, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌, ಚಂದ್ರಗಿರಿ ಅಂಬು, ಪುತ್ತೂರು ನಾರಾಯಣ ಹೆಗ್ಡೆ, ಸೂರಿಕುಮೇರು ಗೋವಿಂದ ಭಟ್‌, ಪಾತಾಳರು, ಕುಂಬ್ಳೆ ಶ್ರೀಧರ ರಾವ್‌, ಶ್ರೀಧರ ಭಂಡಾರಿ, ಧರಣಪ್ಪ, ವಿಟ್ಲ ಜೋಯಿಸರು, ಕೊಡಕ್ಕಲ್‌ ಹಾಸ್ಯಗಾರರು ಇವರೆಲ್ಲ ಇದ್ದ ಸಮೃದ್ಧ ಮೇಳ. ಅದರಲ್ಲಿ ಇರುವುದು ಭಾಗ್ಯ, ಆದರೆ ಮೆರೆಯುವುದು ಸವಾಲು. ಅದರಲ್ಲಿ ಕೂಡ ಕುಂಬಳೆ ಮುಖ್ಯರಾದರು.

ಮೇಳದಲ್ಲಿ ಅಷ್ಟೇ ಅಲ್ಲ ಯಕ್ಷಗಾನದಲ್ಲಿ ಕೂಡ. ಒಂದು ಕಡೆ ಅಳಕೆ ರಾಮಯ್ಯ, ಬೋಳಾರ ನಾರಾಯಣ ಶೆಟ್ಟಿಯವರು, ಶೇಣಿ -ಸಾಮಗರು, ಬಡಗಿನಲ್ಲಿ ಕೆರೆಮನೆಯವರಂತಹ ಅನೇಕ ಶ್ರೇಷ್ಠರು ಇದ್ದಾಗಲೂ ತಮ್ಮ ವ್ಯಕ್ತಿತ್ವ ಉಳಿಸಿ, ಪ್ರತ್ಯೇಕ ಹಾದಿ ಕಂಡುಕೊಂಡರು.

ಅವರ ಮಾತುಗಾರಿಕೆ ಹಿತಮಿತ. ಹೊಸ ಪಾತ್ರ ವಾದರೂ ಅದನ್ನು ತುಂಬಿಕೊಡುವ ತಾಕತ್ತು ಇತ್ತು. ಅಧ್ಯಯನ, ಕಲ್ಪನೆ ಎರಡರಲ್ಲೂ ಅವರು ಮುಂದು. ಕಲೆಯನ್ನು ಜನರಿಗೆ ಮುಟ್ಟಿಸುವ ಕಲಾವಿದ, ಎದುರಾಳಿಯನ್ನು ಮಾತನಾಡಿಸುವುದು, ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು, ಭಾಗವತ ರೊಂದಿಗೆ ಸಂವಹನ, ಹಾಸ್ಯ, ಸಭಾರಂಜನೆ ಎಲ್ಲದರಲ್ಲೂ ಎತ್ತಿದ ಕೈ. ಸಂವಹನದ ಬಗ್ಗೆ ಕೋರ್ಸ್‌ ಇಟ್ಟರೆ ಅದರಲ್ಲಿ ಅವರ ಯಕ್ಷಗಾನ ಅರ್ಥಗಾರಿಕೆಯೇ ಒಂದು ಮಾದರಿ.

ಸಣ್ಣ ಸಣ್ಣ ವಾಕ್ಯ, ಒಳ್ಳೆಯ ಕನ್ನಡ, ಭಾರವಾದ ವಿಷಯಗಳಲ್ಲದ ಮಾತುಗಾರಿಕೆ. ತಾಳಮದ್ದಳೆಯನ್ನು ಶ್ರೇಷ್ಠ ಸಂವಹನದ, ಮೌಖೀಕ ಕಲೆ ಎನ್ನುವುದಾದರೆ ಅವರು ಭಾರತದ ಶ್ರೇಷ್ಠ ವಾಗ್ಮಿಗಳಲ್ಲೊಬ್ಬರು. ಕನ್ನಡದ ಶ್ರೇಷ್ಠ ಕವಿಗಳು, ಕಲಾವಿದರೊಂದಿಗೆ ಹೋಲಿಸಬಹು ದಾದವರು. ಸಾಮಗ ಹಾಗೂ ಶೇಣಿಯವರೊಂದಿಗೆ ಯಕ್ಷಗಾನದ ನುಡಿಗಟ್ಟು ವಾಗ್ರೀತಿಯನ್ನು ಶಾಶ್ವತವಾಗಿ ಬದಲಾಯಿಸಿದ ಕೀರ್ತಿಯೂ ಅವರದು.

ಪತ್ರಿಕೆಗಳಿಂದ ಆಯ್ದ ವಿಷಯವನ್ನು ಜೀರ್ಣಿಸಿ ಕೊಂಡು ಕಾಣದ ಹಾಗೆ ಮಾತುಗಾರಿಕೆಯಲ್ಲಿ ಕೊಡು ತ್ತಿದ್ದರು. ಜನರಿಗೆ ಮುಟ್ಟುತ್ತಿದ್ದರು. ಮಾತುಗಾರಿಕೆಗೆ ಬಂದರೆ ಶ್ರೇಷ್ಠರೂ ಒದ್ದಾಡುವ ಹಾಗೆ ಮಾಡುತ್ತಿದ್ದರು. ಅವರು ವೇದಿಕೆಯಲ್ಲಿ ದೊಡ್ಡ ಸವಾಲು. ನಾನು ಅವರೊಂದಿಗೆ ಅರ್ಥ ಹೇಳಿದ್ದೇನೆ, ಘರ್ಷಣೆ ಎಂದೂ ಆಗಿಲ್ಲ, ಆದರೆ ಮೆರೆದು ಮಾತನಾಡಲು ಕಷ್ಟ ಪಡಬೇಕಿತ್ತು. ಸಭೆ ಶುರುವಿನ ಕಾಲುಗಂಟೆ ಅವರ ಕಡೆಗೇ ಇರುತ್ತಿತ್ತು. ಒಳ್ಳೆಯ ಸ್ವರವಿತ್ತು, ಪುರಾಣಪಾತ್ರವನ್ನು ನಿರಾಯಾಸವಾಗಿ ನಿರ್ವಹಣೆ ಮಾಡುತ್ತಿದ್ದರು, ಜನರನ್ನು ಸೆಳೆಯುವ ನಾಟಕೀಯತೆ ಇದ್ದ ಕಂಠ ಕೂಡ ಇತ್ತು.

ಅವರ ಪ್ರಾಸ ಭಾರೀ ಪ್ರಸಿದ್ಧ. ಅದನ್ನು ಯಾರಿಗೂ ಅನುಕರಿಸಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ, ಹಾಗೆಂದು ಪ್ರಾಸವಿಲ್ಲದೆ ಕೂಡಾ ನಾನು ಮಾತನಾಡಿ ಯಶಸ್ವಿಯಾಗಬಲ್ಲೆ ಎಂದು ತೋರಿಸಿ ಕೊಟ್ಟರು. ಅದು ಅಚ್ಚರಿ. ಧರ್ಮಸ್ಥಳ ಮೇಳದಲ್ಲಿ ಕೊನೆ ಕೊನೆಯ ಹಂತದಲ್ಲಿ ಈ ಪ್ರಯೋಗದಲ್ಲಿ ಅವರು ಯಶಸ್ವಿಯಾದರು. ಎಲ್ಲಾ ರೀತಿಯ ಪಾತ್ರ ಮಾಡುತ್ತಿದ್ದರು, ದುರಂತ, ಸೌಮ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದರು.

ತಾಳಮದ್ದಳೆಯಲ್ಲಿ ಅವರ ಮಾತು ಕೇಳಲು ಜನ ಬರುತ್ತಿದ್ದರು. ಸ್ಟಾರ್‌ ಮೌಲ್ಯ ಅವರಿಗಿತ್ತು. ಅವರು ಮಾತುಗಾರಿಕೆಯನ್ನು ಶ್ರೀಮಂತಗೊಳಿಸಿದವರು ಹಾಗೂ ಅದಕ್ಕೆ ಮರುವ್ಯಾಖ್ಯಾನ ನೀಡಿದವರು.
ಕುಂಬಳೆ ಜತೆಯಲ್ಲಿ ಸೂರಿಕುಮೇರು ಗೋವಿಂದ ಭಟ್‌ ಸ್ಪರ್ಧೆಯ ಜೋಡಿ. ರಾಮದಾಸ ಸಾಮಗ, ಪುತ್ತೂರು ನಾರಾಯಣ ಹೆಗಡೆ, ಬಹಳ ದೀರ್ಘ‌ಕಾಲ ಪಾತಾಳ ವೆಂಕಟ್ರಮಣ ಭಟ್‌ ಜೊತೆ ಸ್ತ್ರೀ ಪುರುಷ ಪ್ರಣಯದ ಪ್ರಸಂಗಗಳು ಅಪಾರ ಮೆಚ್ಚುಗೆ ಗಳಿಸಿದವು. ತಾಳಮದ್ದಳೆಯಲ್ಲಿ ಶೇಣಿ ಸಾಮಗ ರದ್ದು ಜೋಡಿ ಯಶಸ್ವಿ. ಅವರ ಒಡನಾಡಿಗಳಲ್ಲಿ ನಾನೂ ಒಬ್ಬ, 1970ರಿಂದ ಸುಮಾರು 2009ರ ವರೆಗೂ ಅವರೊಂದಿಗೆ ಅರ್ಥ ಹೇಳಿದ್ದೇನೆ. ಅರ್ಜುನ ಹನುಮಂತ, ರಾವಣ ರಾಮ, ರಾಮ ಭರತ, ಕೃಷ್ಣ ಕೌರವ, ಕೃಷ್ಣ ವಿಧುರ, ಧರ್ಮರಾಯ ಕೃಷ್ಣ ಹೀಗೆ ಬೇರೆ ಬೇರೆ ಅರ್ಥ ಹೇಳಿದ್ದೇವೆ. ಜೊತೆಯಲ್ಲಿ ಹಲವೆಡೆಗೆ ಅಲೆದಾಡಿದ್ದೇವೆ. ನಾನು ನಿರ್ದೇಶಿಸಿದ ತಂಡದೊಂದಿಗೆ ದುಬೈ ಪ್ರವಾಸದಲ್ಲಿ ಮುಖ್ಯ ಅಕರ್ಷಣೆಯಾಗಿದ್ದರು ಕುಂಬಳೆ. ಅವರೊಬ್ಬ ಸುಖಸಂಗತಾ ವಿನೋದದ ಸಂತೋಷ ಕೊಡತಕ್ಕವರು.

ಅವರಿಗೆ ಯಕ್ಷರಂಗದಲ್ಲಿ ಇಬ್ಬರೂ ಸೇರಿ ಕಲಾಕೃತಿ ನಿರ್ಮಾಣ ಮಾಡಬೇಕು ಎಂಬ ಪ್ರಜ್ಞೆ ಇತ್ತು. ಅವರು ಭರತ ಮಾಡಿದಾಗ ಶೇಣಿಯವರ ರಾಮ ಬೇರೆ, ಮೂಡಂಬೈಲು ಶಾಸ್ತ್ರಿಗಳ ರಾಮನ ಶೈಲಿ ಬೇರೆ ಇತ್ತು, ಆದರೆ ಕುಂಬಳೆ ಎಲ್ಲದಕ್ಕೂ ಟ್ಯೂನ್‌ ಆಗುತ್ತಿದ್ದರು, ಇಬ್ಬರೂ ಸೇರಿ ರಸ ನಿರ್ಮಾಣ ಮಾಡುವುದಕ್ಕೆ ಅವರು ಸಿದ್ಧ.
ಅವರ ಮಿತಿಯ ಅರಿವೂ ಅವರಿಗೆ ಇತ್ತು, ಕೆಲವು ಪಾತ್ರ ಒಪ್ಪಿಕೊಳ್ಳುತ್ತಿ ಇರಲಿಲ್ಲ. ಭೀಷ್ಮಾರ್ಜುನದಲ್ಲಿ ಕರ್ಮಬಂಧನದ ಭಾಗದ ಭೀಷ್ಮ, ಭಗವದ್ಗೀತೆಯ ಕೃಷ್ಣ, ಏರುಗತಿಯ ರಾವಣವಧೆಯ ರಾವಣ, ಸಂಧಾನದ ಕೌರವ ಇತ್ಯಾದಿ ಪಾತ್ರಗಳನ್ನು ವಿನಯದಿಂದಲೇ ನಿರಾಕರಿಸುತ್ತಿದ್ದರು.ಅವರು ಕೂಟಕ್ಕೆ ಬೇಕಾದವರು, ಮೇಳದಲ್ಲಿ ಅವರ ಸುತ್ತಲೂ ಕಲಾವಿದರು ಇದ್ದಾಗ ಅವರು ಅದಕ್ಕೆ ಶೋಭೆ ತರಬಲ್ಲಂಥವರು. ಯಕ್ಷಗಾನದ ಮಾತಿನ ಸೌಂದರ್ಯದ ಸುಂದರ ರಾಯರು. ಅವರು ಆಕರ್ಷಕ ಭಾವಪೂರ್ಣ ಮಾತಿನ ಮಾಣಿಕ್ಯ.

ಇನ್ನೊಬ್ಬರು ಸುಂದರ ರಾಯರನ್ನು ಪಡೆಯುವುದು ಕಷ್ಟ, ಆದರೆ ಪಡೆಯ ಲೇಬೇಕು. ಅವರ ಅಗಲುವಿಕೆ ಬೇಸರದ ವಿಷಯ ಹೌದು. ಯಕ್ಷಗಾನದಲ್ಲಿ “ಸುಂದರ ರಾವ್‌ ಪ್ರಜ್ಞೆ’ ಎಂಬುದು ಸದಾ ಜೀವಂತವಾಗಿರುತ್ತದೆ. ಅದು ರಂಗದಲ್ಲಿ ಅಭಿವ್ಯಕ್ತಿಯ ಮೂಲಕ ಮರುಹುಟ್ಟು ಪಡೆಯಲಿ ಎಂದು ಹಾರೈಸುತ್ತೇನೆ.

ಪ್ರಶಸ್ತಿಗಳು
2009ರಿಂದ 2012ರ ಅವಧಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ವಿಜಯ ವಿಠಲ ಪ್ರಶಸ್ತಿ ಮುಳಿಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಸಂದಿವೆ. 2007ರಲ್ಲಿ ಚೌಟ ಪ್ರತಿಷ್ಠಾನದಿಂದ ಅವರಿಗೆ ಸಾರ್ವಜನಿಕ ಸಮ್ಮಾನ ಹಾಗೂ “ಸುಂದರಕಾಂಡ’ ಅಭಿನಂದನ ಗ್ರಂಥಾರ್ಪಣೆ ನಡೆದಿತ್ತು.

ಅಸಾಮಾನ್ಯ ಸಾಧಕ
ಸುಮಾರು 5 ದಶಕಗಳ ಕಾಲ ರಂಗಸ್ಥಳವನ್ನಾವರಿಸಿ ಕಲಾಪ್ರಕಾರವೊಂದನ್ನು ಇನ್ನಷ್ಟು ಎತ್ತರಕ್ಕೇರಿಸಿದ ಮಹಾನ್‌ ಕಲಾವಿದ ಸುಂದರ ರಾಯರು ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡ ಸಾಧಕ. ಅಪಾರ ಅಭಿಮಾನಿ ಬಳಗ, ದೊಡ್ಡ ಸ್ನೇಹಿತ ವರ್ಗ, ಸಂಘ ಪರಿವಾರದ ಸಾಂಗತ್ಯ, ಅದರಿಂದ ರಾಜಕೀಯದ ನಂಟು ಮೂಲಕ ತನ್ನದೇ ಪ್ರಭಾವಲಯನ್ನು ಹೊಂದಿದ್ದರು. ಪ್ರತೀ ಪಾತ್ರದಲ್ಲೂ ತನ್ನದೇ ಆದ ಛಾಪೊತ್ತುತ್ತಿದ್ದ ಅವರ ಸುಧನ್ವ, ಶ್ರೀಕೃಷ್ಣ, ಭರತ, ಶ್ರೀರಾಮ, ವಿಷ್ಣು, ವಿಶ್ವಾಮಿತ್ರ, ಚಾರ್ವಾಕ, ಮಹಾರಥಿ ಕರ್ಣ ಪ್ರಸಂಗದ ಕರ್ಣ, ಧರ್ಮಸ್ಥಳ ಕ್ಷೇತ್ರ ಮಹಾತೆ¾ಯ ಹೆಗ್ಗಡೆ ಪಾತ್ರಗಳು ಪ್ರಸಿದ್ಧವಾಗಿದ್ದವು.

ಕೃಷ್ಣ ವೇಷ ಪ್ರಸಿದ್ಧ
ಅವರ ಯಾವುದೇ ಪ್ರಸಂಗದ ಕೃಷ್ಣ ಬಹಳ ಒಳ್ಳೆಯದಿರುತ್ತಿತ್ತು. 60 ವರ್ಷದ ನನಗೆ ಬಾಲಲೀಲೆಯ ಕೃಷ್ಣ ಯಾಕೆ ಎಂದು ಅವರು ಬೊಬ್ಬೆ ಹಾಕಿದರೂ ಜನ ಅದು ಬೇಕು ಎಂದು ಕೇಳುತ್ತಿದ್ದರು. ಅದರಲ್ಲಿ ಅವರು ಗೋಪಿಕೆಯರು, ಕಂಸನೊಂದಿಗೆ ಮಾತನಾಡುವುದು, ರಜಕನ ಜತೆ ಸಂಭಾಷಣೆ ರಂಜನೀಯವಾಗಿರುತ್ತಿತ್ತು. ಇನ್ನು ಕೆಲವು ಪಾತ್ರ ಹೇಳುವುದಾದರೆ ರಾಮ, ಚಂದ್ರಗುಪ್ತ, ಶುಕ್ರಾಚಾರ್ಯ, “ವಿಶ್ವಾಮಿತ್ರ-ಮೇನಕೆ’ಯ ವಿಶ್ವಾಮಿತ್ರ, “ಭರತಾಗಮನ’ದ ಭರತ, “ಕರ್ಣಭೇದನ’ದ ಕರ್ಣ, “ಕಚ ದೇವಯಾನಿ’ಯ ಕಚ, ಕೆಲವು ಪ್ರಸಂಗಗಳ ಹನುಮಂತ ಜನಪ್ರಿಯ.

15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು
15ನೇ ವರ್ಷದಲ್ಲೇ ತಾಳಮದ್ದಳೆ ಕೂಟದಲ್ಲಿ ಅರ್ಥ ಹೇಳಿದ್ದ ಕುಂಬಳೆ ಸುಂದರ ರಾಯರು 1953ರಲ್ಲಿ ಕುಂಬಳೆ ಕುಟ್ಯಪ್ಪು ಅವರ ಮುಜುಂಗಾವು ಮೇಳದ ಮೂಲಕ ವೃತ್ತಿ ಕಲಾವಿದರಾಗಿ ಯಕ್ಷಗಾನ ರಂಗಸ್ಥಳವನ್ನು ಪ್ರವೇಶಿಸಿದರು. ಮುಂದೆ ಇರಾ ಸೋಮನಾಥೇಶ್ವರ ಮೇಳ, ಸುರತ್ಕಲ್‌ ಮೇಳಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಧರ್ಮಸ್ಥಳ ಮೇಳ ಸೇರಿದರು. ಶಾಸಕನಾಗಿ ಆಯ್ಕೆಯಾಗುವ ವರೆಗೂ ಸುಮಾರು 25 ವರ್ಷಗಳ ವರೆಗೆ ಧರ್ಮಸ್ಥಳ ಮೇಳದಲ್ಲಿ
ಕಲಾಸೇವೆ ಮಾಡಿದ್ದರು.

ಸುಂದರ ರಾಯರಿಂದ ಪಾತ್ರಕ್ಕೆ ಜೀವಕಳೆ
ಸಮಕಾಲೀನ ಯಕ್ಷಗಾನ ಕಲಾವಿದರಲ್ಲಿ ತಮ್ಮ ವಿಶಿಷ್ಟ ವಾಕ್‌ ಚಾತುರ್ಯದಿಂದ ಶ್ರೇಷ್ಠ ಕಲಾವಿದರಾಗಿ ಮೆರೆದ ಕುಂಬಳೆ ಸುಂದರ ರಾವ್‌ ನಮ್ಮ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಅನೇಕ ವರ್ಷಗಳ ಕಾಲ ಸೇವೆ ಮಾಡಿದ್ದು ಅವರ ಪಾತ್ರವನ್ನು ಯಕ್ಷಗಾನ ಕ್ಷೇತ್ರ ಮರೆಯುವಂತಿಲ್ಲ. ಅವರ ಮಾತಿನ ಶೈಲಿ ಮತ್ತು ಪಾತ್ರಗಳಿಗೆ ಜೀವಕಳೆ ತುಂಬುವ ರೀತಿ ಅದ್ಭುತವಾಗಿತ್ತು. ಸುರತ್ಕಲ್‌ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ನನ್ನಲ್ಲಿ ಪ್ರಾಸಬದ್ಧವಾಗಿ ಹೇಳಿದ ಮಾತು ನನಗೆ ಇಂದಿಗೂ ನೆನಪಿದೆ. ಆಗ ಅವರು “ಗೆದ್ದರೆ ಎಮ್ಮೆಲ್ಲೆ, ಸೋತರೆ ನಿಮ್ಮಲ್ಲೆ’ ಎಂದು ಹೇಳಿದ್ದರು. ಅವರನ್ನು ಕಳೆದುಕೊಂಡು ಯಕ್ಷಗಾನ ರಂಗ ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
-ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಯಕ್ಷಗಾನದ ಅಮೂಲ್ಯ ರತ್ನ
ಕುಂಬಳೆ ಸುಂದರ ರಾಯರು ಯಕ್ಷಗಾನದ ಅಮೂಲ್ಯ ರತ್ನವಾಗಿದ್ದರು. ರಾಮಾಯಣ, ಮಹಾಭಾರತ ಪುರಾಣಗಳ ಬಗ್ಗೆ ಅಧ್ಯಯನಾತ್ಮಕ ವಿದ್ವತ್ತನ್ನು ಸಂಪಾದಿಸಿದ್ದ ಅವರು ಅದನ್ನು ಕಲೆಯ ಮೂಲಕ ಜನರಿಗೆ ತಲುಪಿಸಿದ್ದರು. ಅವರ ನಿಧನದಿಂದ ಕಲಾಕ್ಷೇತ್ರದ ಅಮೂಲ್ಯ ಕೊಂಡಿಯೊಂದು ಕಳಚಿದಂತಾಗಿದೆ. ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಲವಾರು ಬಾರಿ ಕಲಾಪ್ರದರ್ಶನ ನೀಡಿದ್ದರು. ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ.
– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು,
ಶ್ರೀ ಪೇಜಾವರ ಮಠ, ಉಡುಪಿ

ಭಟ್ಟಾರಕ ಶ್ರೀ
ಸದ್ಗತಿ ಪ್ರಾರ್ಥನೆ
ಸುಂದರ ರಾವ್‌ ಅವರು ಯಕ್ಷಗಾನದ ಅನುಭವಿ ಅರ್ಥದಾರಿಯಾಗಿ ಯಕ್ಷಗಾನ ಲೋಕಕ್ಕೆ ಗೌರವ ತಂದುಕೊಟ್ಟ ಧೀಮಂತ ಕಲಾವಿದ. ಶ್ರೀ ಜೈನಮಠದ ಕೂಟಗಳಲ್ಲಿ ನಿರಂತರವಾಗಿ ಅವರು ಪಾಲ್ಗೊಳ್ಳುತ್ತಿದ್ದರು.
– ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಜೈನ ಮಠ

ಬಿಜೆಪಿಯ ಬಲವರ್ಧನೆಗೆ ಮಾರ್ಗದರ್ಶಿ
ಐದು ದಶಕಗಳ ಕಾಲ ಯಕ್ಷಗಾನ ಕ್ಷೇತ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ್ದ ಸುಂದರ ರಾಯರು ಬಿಜೆಪಿಯಿಂದ ಸುರತ್ಕಲ್‌ ಶಾಸಕರಾಗಿ ಆಯ್ಕೆಯಾಗಿ 5 ವರ್ಷ ಕಾಲ ಜನಪರ ಕಾರ್ಯಗಳ ಮೂಲಕ ಜನ ಮನ್ನಣೆ ಪಡೆದಿದ್ದರು. ಕರಾವಳಿಯಲ್ಲಿ ಬಿಜೆಪಿಯ ಬಲವರ್ಧನೆಗೆ ಮಾರ್ಗದರ್ಶನ ನೀಡಿ ದವರು. ಸ್ಫೂರ್ತಿಯುತ ಭಾಷಣದಿಂದ ಪಕ್ಷದ ಕಾರ್ಯ ಕರ್ತರಿಗೆ ಶಕ್ತಿ ತುಂಬಿದವರು. ವಿಧಾನ ಸೌಧದಲ್ಲಿಯೂ ಯಕ್ಷಗಾನ ಆಯೋಜಿಸಿದ ಕೀರ್ತಿ ಅವರದಾಗಿತ್ತು.
– ನಳಿನ್‌ ಕುಮಾರ್‌ ಕಟೀಲು,
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ

ಕುಟುಂಬಿಕರಿಗೆ ಸಾಂತ್ವನ
ಹಂಪಿ ಹೇಮಕೂಟ ಗಾಯತ್ರಿ ಪೀಠದ ಜಗದ್ಗುರು ದಯಾನಂದ ಪುರಿ ಮಹಾ ಸ್ವಾಮೀಜಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲುºರ್ಗಿ, ಸಚಿವ ರಾದ ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು ಪಂಪ್‌ವೆಲ್‌ನಲ್ಲಿರುವ ಕುಂಬಳೆ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಸುಂದರ ರಾವ್‌ ನಿಧನಕ್ಕೆ ಗಣ್ಯರ ಸಂತಾಪ
ಉಡುಪಿ: ಕುಂಬಳೆ ಸುಂದರ ರಾವ್‌ ನಿಧನಕ್ಕೆ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸಚಿವ ಎಸ್‌. ಅಂಗಾರ, ಶಾಸಕರಾದ ಕೆ. ರಘುಪತಿ ಭಟ್‌, ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್‌, ಆಳ್ವಾಸ್‌ ಪ್ರವರ್ತಕ ಡಾ| ಎಂ. ಮೋಹನ ಆಳ್ವ, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಭಾಗವತ ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಶ್ರೀನಾಥ್‌, ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ಕಾರ್ಯಾಧ್ಯಕ್ಷ ಎಂ. ದೇವಾನಂದ ಭಟ್‌, ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್‌, ಕಾಂತಾವರ ಯಕ್ಷದೇಗುಲದ ಸಂಚಾಲಕ ಮಹಾವೀರ ಪಾಂಡಿ, ಕಲಾ ಪೋಷಕ ಕೆ. ಶ್ರೀಪತಿ ಭಟ್‌
ಮೂಡುಬಿದಿರೆ ಯಕ್ಷ ಮೇನಕಾದ ಸಂಚಾಲಕ ಸದಾಶಿವ ನೆಲ್ಲಿಮಾರು, ಯಕ್ಷ ಸಂಗಮದ ಸಂಚಾಲಕ ಶಾಂತಾರಾಮ ಕುಡ್ವ, ಪಟ್ಲ ಫೌಂಡೇಶನ್‌ ಪ್ರಧಾನ ಸಂಚಾಲಕ ಪ್ರೇಮನಾಥ ಮಾರ್ಲ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್‌, ಕಾಳಿಕಾಂಬಾ ಯಕ್ಷಗಾನ ಸಂಘದ ಪರವಾಗಿ ಜಗದೀಶ ಬೇಲಾಡಿ, ಮೂ.ವೆ. ಚಂದ್ರಹಾಸ್‌ “ಯಕ್ಷನಿಧಿ’ ಸಂಸ್ಥೆಯ ಗುರು ಶಿವಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

– ಡಾ. ಎಂ. ಪ್ರಭಾಕರ ಜೋಶಿ

ಹಿರಿಯ ಅರ್ಥದಾರಿ, ನಿವೃತ ಪ್ರಾಧ್ಯಾಪಕರು

ಟಾಪ್ ನ್ಯೂಸ್

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

MP: Flies helped the police to arrest the murder accused!

MP: ಕೊಲೆ ಆರೋಪಿ ಬಂಧನಕ್ಕೆ ಪೊಲೀಸರಿಗೆ ನೆರವಾದ ನೊಣಗಳು!

VIjayendra

Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.