Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್ ಪ್ರಯಾಣ
ಹೊಸತನವನ್ನು ಬಿತ್ತಿದ ದೇಸಿ ಸೊಗಡಿನ ಕಥೆ
Team Udayavani, Sep 28, 2024, 2:48 PM IST
ಓ ಸಜಿನೆರೇ….. ಕೈಸೆ ಕಟೇ ದಿನ್ ರಾತ್
ಕೈಸೆ ಹೋ ತುಜಸೇ ಬಾತ್
ತೇರಿ ಯಾದ್ ಸತಾವೆರೇ
ಓ ಸಜಿನೆರೇ……….
ಹೀಗೆ ಗುನುಗುನುಗುತ್ತಾ ತೆರೆಕಂಡು, ಭಾರತೀಯರ ಮನಕ್ಕೆ ತಂಪು ತಂಗಾಳಿಯಂತೆ ಬಂದೆರೆಗಿದ ಸಿನೆಮಾ “ಲಾಪತಾ ಲೇಡಿಸ್’. ಅಪ್ಪಟ ದೇಸಿ ಸೊಗಡಿನ ಛಾಯೆಯುಳ್ಳ ಸಿನೆಮಾ ಊಹಿಸಿದ್ದಕ್ಕಿಂತಲೂ ಮೀರಿ ಮನಗಳನ್ನು ತಲುಪಿ ಇಂದು ಆಸ್ಕರ್ ಅಂಗಳದಲ್ಲಿ ಮಿನುಗಲು ಸಜ್ಜಾಗಿ ನಿಂತಿದೆ.
ಸೂಪರ್ ರೊಮ್ಯಾಂಟಿಕ್ ಸ್ಟೋರಿಗಳನ್ನು ಹೆಚ್ಚಾಗಿ ನೀಡುತ್ತಿದ್ದ ಬಾಲಿವುಡ್ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಆದರೆ ಒಂದು ಕಾಲದಲ್ಲಿ ಇನ್ನಿಲ್ಲದ ವಿವಾದಗಳು ಬಾಲಿವುಡ್‌ನಲ್ಲಿ ಸಿನೆಮಾ ಯಶಸ್ಸಿಗೆ ತೊಡಕಾಗತೊಡಗಿತ್ತು. ಹೊಸಮುಖಗಳು ಬಂದರೂ ಅಷ್ಟೇನು ಭರವಸೆ ಕಾಣಲಿಲ್ಲ, ಮುಖಗಳಿಗಿಂದ ಕಥೆಯೇ ಮುಖ್ಯ ಎಂಬ ವಿಶ್ಲೇಷಣೆಗಳು ಬಂದೆರಗತೊಡಗಿದವು. ರೊಮ್ಯಾಂಟಿಕ್ ಲವ್‌ಸ್ಟೋರಿಗಳ ಎಳೆಯನ್ನೇ ಹೊತ್ತ ಸಿನೆಮಾಗಳು ಪ್ರೇಕ್ಷಕರ ಮನದಲ್ಲಿ “ಮತ್ತೇ ಅದೇ ಟ್ರೈಯಾಂಗಲ್ ಸ್ಟೋರಿ’ ಎಂಬ ಭಾವನೆ ಮೂಡಿಸಿದವು. ಕೆಲವೊಂದು ನೈಜ ಜೀವನದ ಕಥೆಗಳು ತೆರೆಕಂಡರೂ ಜನರು ಅಷ್ಟೇನು ಒಪ್ಪಿಕೊಳ್ಳಲಿಲ್ಲ. ಇದೇ ಸಮಯಕ್ಕಾಗಲೇ ದಕ್ಷಿಣದ ಸಿನೆಮಾಗಳು ಅಲ್ಲಿನ ಪ್ರೇಕ್ಷಕರ ಮನಗಳಲ್ಲಿ ಮನೆಮಾಡಿದ್ದವು. ಈ ಸಂದರ್ಭದಲ್ಲಿ ಬಾಲಿವುಡ್‌ನ ಕಿಂಗ್‌ಕಾನ್ ಫುಲ್ ಆ್ಯಕ್ಷನ್ ಪ್ಯಾಕ್‌ನಲ್ಲಿ ಮತ್ತೆ ಬೆಳ್ಳಿತೆರೆ ಮೇಲೆ ಬಂದರು, ಅವರೊಂದಿಗೆ ಅವರ ಅಭಿಮಾನಿ ವರ್ಗವೂ ಬಂತು. ಹೊಸಹುರುಪಿನೊಂದಿಗೆ ಮತ್ತೆ ಹಳಿಗೆ ಬಂದ ಬಾಲಿವುಡ್ ದಕ್ಷಿಣ ಭಾರತದ ನಿರ್ದೇಶಕರ ನಿರ್ದೇಶನದಿಂದ, ಇಲ್ಲಿನ ಕಥೆಗಳನ್ನು ಅಳವಡಿಸಿಕೊಂಡು, ಮತ್ತೆ ಒಂದಿಷ್ಟು ವಿಭಿನ್ನ ಆಲೋಚನೆಗಳುಳ್ಳ ಹೊಸ ಯುವ ನಿರ್ದೇಶಕರ ಕಥೆಗಳ ಸಿನೆಮಾ, ವೆಬ್ ಸಿರೀಸ್‌ಗಳಿಂದ ಸಾಗತೊಡಗಿತು. ಆದರೂ ಅಲ್ಲಿ ಏನೋ “ಮಿಸ್ಸಿಂಗ್’ ಎಂಬ ಭಾವ ಹಾಗೇ ಉಳಿದಿತ್ತು. ಈ “ಮಿಸ್ಸಿಂಗ್’ ಜಾಗವನ್ನು ತುಂಬಿಸಿದ್ದು “ಲಾಪತಾ ಲೇಡಿಸ್’.
“ಲಾಪತಾ ಲೇಡಿಸ್’ ಅಂದರೆ ಕಾಣೆಯಾಗಿರುವ ಮಹಿಳೆಯರು ಎಂಬರ್ಥ. ಈಗೀಗ ಒಂದು ಚಿತ್ರ ತೆರೆಕಾಣುವ ಮುಂಚೆ ಅದರ ಪ್ರಚಾರ ಕಾರ್ಯಕ್ರಮಗಳಲ್ಲಿ ದೊಡ್ಡ ಸ್ಟಾರ್ ನಟರನ್ನು ಒಟ್ಟುಗೂಡಿಸಿ ಜೋರಾಗಿ ಕಾರ್ಯಕ್ರಮಗಳಾಗುತ್ತವೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಅದರ ಕುರಿತಾದ ವೀಡಿಯೋಗಳು, ರೀಲ್ಸ್‌ಗಳು ಹರಿದಾಡಿ ಇನ್ನಷ್ಟು ಪ್ರಚಾರ ಒದಗಿಸುತ್ತವೆ. ಆದರೆ ಒಂದು ಚಿತ್ರವನ್ನು ಪ್ರೇಕ್ಷಕ ವರ್ಗ ಮೆಚ್ಚಿ ಅವರೇ ಆ ಚಿತ್ರವನ್ನು ಪ್ರಚಾರ ಮಾಡಿದರೆ, ಅದು ಆ ಚಿತ್ರಕ್ಕೆ ದಕ್ಕಿದ ನಿಜವಾದ ಯಶಸ್ಸು. ಇಲ್ಲಿ ಆಗಿದ್ದು ಅದೇ. ಸಂಪೂರ್ಣ ಹೊಸ ಮುಖಗಳನ್ನು ಮುಖ್ಯ ಭೂಮಿಕೆಯಲ್ಲಿ ಹೊಂದಿದ್ದ ಈ ಚಿತ್ರದ ಬೆನ್ನಿಗೆ ಇದ್ದದ್ದು ಎರಡೇ ದೊಡ್ಡ ಹೆಸರು. ಒಂದು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದವರು, ಇನ್ನೊಂದು ಇವರ ಮಾಜಿ ಪತ್ನಿ ಕಿರಣ್ ರಾವ್, ಚಿತ್ರದ ನಿರ್ದೇಶಕಿ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ ಚಿತ್ರ ತೆರೆ ಕಂಡಿತ್ತು. ಆಗಲೇ ಹೇಳಿದ ಹಾಗೇ ಇದು ಪ್ರೇಕ್ಷಕರು ಮೆಚ್ಚಿ ಗಳಿಸಿದ ಚಿತ್ರ. ತೆರೆ ಕಾಣುತ್ತಿದ್ದಂತೆ ಸೀದಾ ಜನರ ಮನಸ್ಸಿನಲ್ಲಿ ತನ್ನ ಜಾಗವನ್ನು ಗಟ್ಟಿ ಮಾಡಿಕೊಂಡು ಬಿಟ್ಟಿತ್ತು. ಎಕ್ಸ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಚಿತ್ರದ ಕುರಿತಾದದ್ದೇ ಮಾತುಗಳು ಹರಿದಾಡತೊಡಗಿದ್ದವು. ಇವುಗಳನ್ನು ನೋಡಿ ಸಿನೆಮಾವನ್ನು ನೋಡಿದವರೂ ಹಲವರು. ಸಿನೆಮಾಗಳ ರೇಟಿಂಗ್ ನೀಡುವ ಐಎಂಡಿಬಿ 8.4ರಷ್ಟು ರೇಟಿಂಗನ್ನು ನೀಡಿತ್ತು. ಸಿನೆಮಾ ಅಂದರೆ ಹೀಗೆ ಇರಬೇಕು ಎನ್ನುವಷ್ಟು ಜನರು ಮೆಚ್ಚಿಕೊಂಡರು. ಮಾರ್ಚ್ 2024ರಲ್ಲಿ ಥಿಯೇಟರ್‌ಗಳಲ್ಲಿ ತೆರೆಕಂಡ ಚಿತ್ರ, ಒಂದೇ ತಿಂಗಳಿಗೆ ಒಟಿಟಿಗೆ ಲಗ್ಗೆಯಿಟ್ಟು, ತಂಪಾದ ಗಾಳಿಯಂತೆ ಇನ್ನಷ್ಟು ಮನಗಳಿಗೆ ತಲುಪಿ ಹತ್ತಿರವಾಯಿತು.
ಆರಂಭದಲ್ಲೇ ಹೇಳಿದ ಹಾಗೆ ಅಪ್ಪಟ ದೇಸಿ ಛಾಯೆಯನ್ನು ಹೊತ್ತ ಸಿನೆಮಾ. ಮಧ್ಯಪ್ರದೇಶದ ಹಳ್ಳಿಯಲ್ಲಿ ನಡೆಯುವ ಕಥೆ. ಮದುವೆಯಾಗಿ ರೈಲಿನಲ್ಲಿ ಗಂಡನ ಮನೆಗೆ ಬರುವಾಗ ಮದುಮಗಳು ಅದಲು ಬದಲಾಗಿ,ಅನಂತರ ಮನೆಗೆ ಬಂದ ಮೇಲೆ ಚಿತ್ರದ ಹಿರೋಗೆ, ಅವನ ಮನೆಯವರಿಗೆ ವಿಷಯ ತಿಳಿದು ಸಾಗುವ ಕಥೆ ಜೀವನದ, ಪಾತ್ರಗಳ ಅನಿವಾರ್ಯತೆ, ಮುಗ್ಧತೆ, ಪ್ರೀತಿಯ ರೂಪ ಹೀಗೆ ಒಂದೊಂದೆ ಮಜಲುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಚಿತ್ರವನ್ನು 2000 ಇಸವಿಯಲ್ಲಿ ನಡೆದಂತೆ ಚಿತ್ರೀಕರಿಸಲಾಗಿದೆಯಾದರೂ ಇಲ್ಲಿ ಹೇಳಲಾಗಿರುವ ಕೆಲವು ಸನ್ನಿವೇಶಗಳು 2024ಕ್ಕೂ ಪ್ರಸ್ತುತ ಎನ್ನಿಸುತ್ತದೆ. ಜನರ ಮನಸ್ಸನ್ನು ಚಿತ್ರ ಗೆಲ್ಲಲು ಇದು ಬಹುಮುಖ್ಯವಾದ ಕಾರಣ.
ಚಿತ್ರದಲ್ಲಿ ಬರುವ ಮಹಿಳಾ ಪಾತ್ರಗಳು ಮಹಿಳೆಯರ ಸಾಮಾಜಿಕ ಸ್ಥಿತಿಯನ್ನು ಕಣ್ಣಮುಂದಿಡುತ್ತವೆ. ಅದರಲ್ಲೂ, ಮುಗ್ಧ ಹುಡುಗಿಯಾಗಿ, ಸ್ವಾವಲಂಬನೆಯ ಯೋಚನೆಯೂ ಇಲ್ಲದೇ, ಗಂಡನ ಹೆಸರನ್ನು ಬಾಯಲ್ಲಿ ಹೇಳುವುದು ತಪ್ಪು ಎಂಬ ಭಾವನೆಗಳನ್ನು ಹೊತ್ತ ನಾಯಕಿ ಪೂಲ್, ಗಂಡನಿಂದ ತಪ್ಪಿ ಹೋಗಿದ್ದೇನೆ ಎಂದು ತಿಳಿದು ರೈಲ್ವೇ ನಿಲ್ದಾಣದಲ್ಲೇ ಚಹಾ ಮಾರುವ ಮಂಜುಮಾಯೀಯ ಬಳಿ ಆಸರೆ ಪಡೆದು, ಸ್ವಾವಲಂಬಿಯ ಬದುಕಿನ ಚಿತ್ರಣವನ್ನು ಕಾಣುತ್ತಾಳೆ. ಕೊನೆಗೆ ಅವಳನ್ನು ಅರಸಿ ಬರುವ ಗಂಡನಿಗೆ ತಾನಿಲ್ಲಿದ್ದೇನೆ ಎಂದು ತಿಳಿಯಲಿ ಎಂದು ಅವನ ಹೆಸರನ್ನು ಕೂಗಿ ಕರೆಯುತ್ತಾಳೆ. ಇದು ಆ ಪಾತ್ರ ಕಂಡುಕೊಂಡ ಹೊಸ ಆಲೋಚನೆಯನ್ನು ಬಿಂಬಿಸುತ್ತದೆ. ಮಂಜುಮಾಯೀಯ ಪಾತ್ರದ ಸಂಭಾಷಣೆಗಳ ಮೂಲಕ ನಿರ್ದೇಶಕಿ ಮಹಿಳಾ ಸ್ವಾತಂತ್ರ್ಯದ, ಮಹಿಳಾ ಇಚ್ಛಾಶಕ್ತಿಯ ಹೊನಲನ್ನು ತೋರಿಸಿದ್ದಾರೆ. ಹಾಗೇಯೇ ಅದಲುಬದಲಾಗಿ ನಾಯಕನೊಂದಿಗೆ ಹೋಗಿರುವ ಜಯಾ ಪಾತ್ರಧಾರಿ, ಆಧುನಿಕ ಹೆಣ್ಣಿನ ಆಲೋಚನೆಗಳನ್ನು ಹೊಂದಿದವಳು. ಓದಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ ಆಕೆ ಉಳಿದ ಪಾತ್ರಗಳ ಮನದಲ್ಲಿ ಹೊಸದೃಷ್ಟಿಕೋನವನ್ನು ಬಿತ್ತಲು ಸಹಕಾರಿಯಾಗುತ್ತಾಳೆ. ಈ ಪಾತ್ರಕ್ಕೆ ಪ್ರೋತ್ಸಾಹವಾಗಿ ನಿಲ್ಲುವ ಪೊಲೀಸ್ ಪಾತ್ರದ ನಿರೂಪಣೆಯೂ ಉತ್ತಮವಾಗಿ ಬಿಂಬಿತವಾಗಿದೆ. ಚಿತ್ರದುದ್ದಕ್ಕೂ ಕಥೆಗೆ ಸಾಥ್ ನೀಡಿದ್ದು ಸಂಗೀತ. ಹೀಗೆ ದೇಶದ ಸಾಮಾಜಿಕ, ಸಾಂಪ್ರಾದಾಯಿಕ ಸ್ಥಿತಿಗಳನ್ನು ತೆರೆಮೇಲೆ ತರುವಲ್ಲಿ, ನೋಡುಗರಿಗೆ ಹೊಸ ಆಲೋಚನೆಯನ್ನು ನೀಡುವಲ್ಲಿ ಚಿತ್ರ ಗೆದ್ದಿರುವುದು.
ಆಸ್ಕರ್ ನಾಮನಿರ್ದೇಶನದ ಪಟ್ಟಿಯಲ್ಲಿದ್ದ 28-30 ಸಿನೆಮಾಗಳನ್ನು ಹಿಂದಿಕ್ಕಿ “ಲಾಪತಾ ಲೇಡಿಸ್’ ಆಯ್ಕಯಾಗಲೂ ಕಾರಣವೂ ಇದೇ. ಭಾರತದ ದೇಸಿತನವನ್ನು ಹೊತ್ತ ಕಥೆ. ಚಿತ್ರ ಇಷ್ಟರ ಮಟ್ಟಿಗೆ ಯಶ ಕಾಣುತ್ತದೆ ಎಂದು ಬಹುಷಃ ಸಿನೆಮಾ ತಂಡವೂ ಊಹಿಸಿರಲಿಕ್ಕೆ ಇಲ್ಲ. ಕಥೆಗಳ ಸ್ಪರ್ಧೆಯಲ್ಲಿ ಸಿಕ್ಕ “ಟೂ ಬ್ರೈಡ್ಸ್’ (ಎರಡು ಮದುಮಗಳು) ಎನ್ನುವ ಎಳೆಯೇ ಸಿನೆಮಾ ಕಥೆಯಾಗಲು ಕಾರಣವಾಗಿದ್ದು. ಸುಮಾರು 14 ವರ್ಷಗಳ ಬಳಿಕ ನಿರ್ದೇಶನಕ್ಕೆ ಬಂದ ಕಿರಣ್ ರಾವ್ ಯಾವುದೇ ಸಂದೇಹವಿಲ್ಲದೇ ಇಲ್ಲಿ ಗೆದ್ದಿದ್ದಾರೆ. ಚಿತ್ರದ ಹೊಸಮುಖಗಳು ಹೊಸಭರವಸೆಯನ್ನು ಮೂಡಿಸಿವೆ. ಹೊಸ ಆಲೋಚನೆಯನ್ನು ಬಿತ್ತಿದ ಚಿತ್ರ ಆಸ್ಕರ್‌ನಲ್ಲಿ ಗೆದ್ದು, ಇನ್ನಷ್ಟು ಹೊಸ ಕಥೆಗಳು ತೆರೆಯಮೇಲೆ ಮೂಡಲು ಸ್ಫೂರ್ತಿಯಾಗಲಿ ಎನ್ನುವುದು ಈ ಹೊತ್ತಿನ ಆಶಯ.
ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.