ಬದಲಾವಣೆ ಬಾಗಿಲಲ್ಲಿ ಲಡಾಖ್, ಜಮ್ಮು-ಕಾಶ್ಮೀರ
Team Udayavani, Oct 31, 2019, 5:00 AM IST
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸ ಲಾದ ಕಾರಣ ಈಗ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯಗಳ ಸಂಖ್ಯೆಯೂ ಇಳಿಕೆಯಾಗಿದ್ದು, ಇನ್ಮುಂದೆ ದೇಶದಲ್ಲಿ 28 ರಾಜ್ಯಗಳಿರಲಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕಿರೀಟವನ್ನು ಕೆಡವಿದ ಕೇಂದ್ರ ಸರ್ಕಾರ, ಆ ರಾಜ್ಯವನ್ನು ವಿಂಗಡಿಸಿ ಈಗ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದೆ. ವಿಶೇಷ ಸ್ಥಾನಮಾನದ ಸವಲತ್ತುಗಳಿಂದ ಕಾಶ್ಮೀರದ ರಾಜಕಾರಣಿಗಳು, ಪ್ರತ್ಯೇಕತಾವಾದಿಗಳು ಅಭಿವೃದ್ಧಿಯಾಗಿದ್ದರೇ ಹೊರತು, ಆ ರಾಜ್ಯವಂತೂ ತೀರಾ ಹಿಂದುಳಿದಿತ್ತು. ಭಾರತದ ಇತರೆ ರಾಜ್ಯದವರನ್ನು ತಮ್ಮ ನೆಲದಿಂದ ದೂರ ಇಡುವಂಥ ಕಾನೂನುಗಳನ್ನು ಹೊಂದಿದ್ದ ಜಮ್ಮು-ಕಾಶ್ಮೀರವೀಗ ಬದಲಾವಣೆಯ ಹೊಸ್ತಿಲಲ್ಲಿ ನಿಂತಿದೆ. ಇದರೊಟ್ಟಿಗೆ, ಶ್ರೀನಗರ ಕೇಂದ್ರಿತ ರಾಜಕಾರಣದಿಂದಾಗಿ ದಶಕಗಳಿಂದ ಸಂತ್ರಸ್ತವಾಗುತ್ತಾ ಬಂದಿದ್ದ ಲಡಾಖ್‌ನ ದೇಖರೇಖೀಯನ್ನು ಇನ್ಮುಂದೆ ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿದೆೆ. ದೇಶದ ಏಕತೆಗಾಗಿ ಬದುಕು ಸವೆಸಿದ ಸರ್ದಾರ್ ಪಟೇಲರ ಜನ್ಮದಿನದಂದೇ ಅಸ್ತಿತ್ವಕ್ಕೆ ಬರಲಿರುವ ಈ ನೂತನ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಇನ್ಮುಂದೆ ಜನವನ ಹೇಗೆ ಬದಲಾಗಲಿದೆೆ? ಹೇಗೆ ಈ ಭಾಗಗಳಲ್ಲಿನ ಆಡಳಿತ ವೈಖರಿ ಸಂಪೂರ್ಣವಾಗಿ ರೂಪಾಂತರಗೊಳ್ಳಲಿದೆ ಎನ್ನುವ ಮಾಹಿತಿ ನಿಮ್ಮ ಮುಂದೆ…
ಎರಡೂ ಒಂದೇ ಅಲ್ಲ!
ಆದಾಗ್ಯೂ ಲಡಾಖ್ ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾದರೂ, ಇವೆರಡೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಜಮ್ಮು-ಕಾಶ್ಮೀರ “ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶ’. ಅಂದರೆ, ಇದು ಭಾಗಶಃ ರಾಜ್ಯದ ಸ್ಥಾನಮಾನ ಹೊಂದಿರಲಿದ್ದು, ವಿಧಾನಸಭೆ ಹಾಗೂ ಲೆಫ್ಟಿನೆಂಟ್ ಗವರ್‌ನರ್ ಅನ್ನು ಹೊಂದಿರುತ್ತದೆ. ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಜಮ್ಮು-ಕಾಶ್ಮೀರಕ್ಕೆ ಶಾಸನ ಸಭೆಯ ಸ್ಥಾನ ಕಲ್ಪಿಸಿದೆ. ಆದರೆ ಅಲ್ಲಿ ವಿಧಾನಪರಿಷತ್ ಅಥವಾ ಮೇಲ್ಮನೆ ಇರುವುದಿಲ್ಲ. ಈ ರೀತಿಯ ಕೇಂದ್ರಾಡಳಿತ ಪ್ರದೇಶಕ್ಕೆ ಚುನಾಯಿತ ಮುಖ್ಯಮಂತ್ರಿ ಮತ್ತು ಸಚಿವರ ಮಂಡಳಿ ಇರುತ್ತದೆ. ಆದರೆ ಸಚಿವರ ಮಂಡಳಿಯ ಶಿಫಾರಸುಗಳನ್ನು ಒಪ್ಪುವ-ಬಿಡುವ ಅಧಿಕಾರ ಕೇಂದ್ರ ಸರ್ಕಾರದಿಂದ ನೇಮಕವಾಗುವ ಲೆ.ಗವರ್‌ನರ್ ಜಿಸಿ ಮುರ್ಮು ಅವರಿಗೆ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಮ್ಮು-ಕಾಶ್ಮೀರದ ಸರ್ಕಾರಕ್ಕೆ ಇನ್ನು ಮುಂದೆ ಕಾನೂನು ಮತ್ತು ಪೊಲೀಸರ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ! ಈ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಲೆ. ಗವನರ್‌ಗೆ ಮಾತ್ರ ಇರಲಿದೆೆ. ಇನ್ನು ಅಕ್ಟೋಬರ್ 31ರಿಂದ, ಜಮ್ಮು-ಕಾಶ್ಮೀರಕ್ಕೆ 106 ಕೇಂದ್ರೀಯ ಕಾನೂನುಗಳು ಅನ್ವಯವಾಗಲಿವೆ! ಈ ಭಾಗದಲ್ಲಿ ಇದುವರೆಗೂ ಇದ್ದ 153 ಕಾನೂನುಗಳನ್ನೂ ಹಿಂಪಡೆಯಲಾಗುತ್ತದೆ. ಆರ್ಟಿಕಲ್ 370 ರದ್ದತಿಯ ನಂತರದಿಂದ ಹೊರಗಿನ ರಾಜ್ಯದವರಿಗೂ ಜಮ್ಮು-
ಕಾಶ್ಮೀರದಲ್ಲಿ ಜಾಗ ಖರೀದಿಸುವ, ಹೂಡಿಕೆ ಮಾಡುವ, ಸರ್ಕಾರಿ ನೌಕರಿ ಪಡೆಯುವ ಅವಕಾಶ ದೊರೆತಿರುವುದು ಮತ್ತೂಂದು ಐತಿಹಾಸಿಕ ಬದಲಾವಣೆ.
ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು: ಪುದುಚೇರಿ, ದಿಲ್ಲಿ , ಜಮ್ಮು ಮತ್ತು ಕಾಶ್ಮೀರ
ಜಮ್ಮು-ಕಾಶ್ಮೀರದ ಚಹರೆ ಹೇಗೆ ಬದಲಾಗಲಿದೆ?
ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದ್ದೇ ಅಲ್ಲಿನ ಪ್ರಮುಖ ರಾಜಕೀಯ ಕುಟುಂಬಗಳಾದ ಮುಫ್ತಿ ಮತ್ತು ಅಬ್ದುಲ್ಲಾಗಳಿಗೆ ಬಹುದೊಡ್ಡ ಹೊಡೆತ ಬೀಳಲಿದೆ, ಇನ್ಮುಂದೆ ಈ ಪ್ರದೇಶದಲ್ಲಿನ ಐಎಎಸ್, ಐಪಿಎಸ್ ಅಧಿಕಾರಿಗಳು ಈ ರಾಜಕೀಯ ಕುಟುಂಬಕ್ಕೆ ಮಣೆ ಹಾಕುವುದಿಲ್ಲ. ಈಗ ಜಮ್ಮು-ಕಾಶ್ಮೀರದ ಪೊಲೀಸ್ ಇಲಾಖೆಯೂ ಕೇಂದ್ರದ ಹಿಡಿತಕ್ಕೆ ಬರಲಿದೆ, ಅಲ್ಲದೇ ಪೊಲೀಸ್ ಇಲಾಖೆಗೆ ಹೊರ ರಾಜ್ಯದವರನ್ನೂ ನೇಮಿಸಬಹುದಾಗಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರಗಳು ಪ್ರತ್ಯೇಕತಾವಾದಿಗಳಿಗೆ ವಿಶೇಷ ಸವಲತ್ತು ಒದಗಿಸುತ್ತಾ ಬಂದಿದ್ದವು. ಈಗ ಪ್ರತ್ಯೇಕತಾವಾದಿಗಳಿಗೆ ಇನ್ನಷ್ಟು ಕಷ್ಟ ಎದುರಾಗಲಿದೆ. ಇನ್ನು ಕಾಶ್ಮೀರದಲ್ಲಿ ಎಲ್ಲರಿಗೂ ಹೂಡಿಕೆ ಮಾಡುವ ಅವಕಾಶ ಸಿಕ್ಕಿರುವುದರಿಂದ, ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಉದ್ಯಮಗಳು, ಹೋಟೆಲ್‌ಗಳು ಕೆಲವೇ ವರ್ಷಗಳಲ್ಲಿ ಕಣಿವೆಯಲ್ಲಿ ಕದ ತೆರೆಯಲಿರುವುದಂತೂ ನಿಶ್ಚಿತ (ಇಲ್ಲಿಯವರೆಗೂ, ಕಾಶ್ಮೀರದ ಅನೇಕ ಉದ್ಯಮಗಳು, ವ್ಯವಹಾರಗಳು ರಾಜಕೀಯ ಕುಟುಂಬಗಳ ಹಿಡಿತದಲ್ಲೇ ಇದ್ದವು). ಅಲ್ಲದೇ ಶಿಕ್ಷಣದಲ್ಲೂ ಮಹತ್ತರ ಬದಲಾವಣೆ ತರಲು ಕೇಂದ್ರ ನಿರ್ಧರಿಸಿದ್ದು, ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿಯಮಿತವಾಗಿ ಭಾರತದ ಇತರ ಪ್ರಾಂತ್ಯಗಳಿಗೆ ಕರೆತಂದು, ಇತರೆ ಪ್ರಾಂತ್ಯಗಳ ವಿದ್ಯಾರ್ಥಿಗಳಿಗೆ ಕಾಶ್ಮೀರದಲ್ಲಿ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸುವ ಮೂಲಕ ಶೈಕ್ಷಣಿಕ ವಿನಿಮಯಕ್ಕೆ ನಾಂದಿ ಹಾಡುವ ಗುರಿಯೂ ಅದಕ್ಕಿದೆ. ಈಗಾಗಲೇ, ಕೇಂದ್ರ ಸರ್ಕಾರವು ಅಗಾಧ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಅಹ್ವಾನಿಸಿದ್ದು, ಕಾಶ್ಮೀರಿ ಯುವಕರು ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಬಹುಮುಖ್ಯವಾಗಿ, ಇದುವರೆಗೂ ಜಮ್ಮು-ಕಾಶ್ಮೀರದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿದಂತೆ, ಯಾವ ಸೌಲಭ್ಯವೂ ಇರಲಿಲ್ಲ. ಈಗ ಸ್ವಾತಂತ್ರಾé ನಂತರ ಮೊದಲ ಬಾರಿ ಅಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಭಾರತದ ಇತರೆ ರಾಜ್ಯಗಳಲ್ಲಿ ಇರುವಂಥದ್ದೇ ಸೌಲಭ್ಯಗಳು ಲಭ್ಯವಾಗಲಿವೆ.
ಇರಲೇ ಇಲ್ಲ ತಾಳಮೇಳ
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯಗಳು ಧರ್ಮ ಮತ್ತು ಆಚರಣೆಗಳಲ್ಲಿ ಒಂದಕ್ಕೊಂದು ತದ್ವಿರುದ್ಧ ದಿಕ್ಕಿನಲ್ಲಿವೆ. ಕಾಶ್ಮೀರದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಿದ್ದರೆ, ಜಮ್ಮುವಿನಲ್ಲಿ ಹಿಂದೂಗಳು ಮತ್ತು ಲಡಾಖ್‌ನಲ್ಲಿ ಬೌದ್ಧ ಧರ್ಮೀಯರ ಬಾಹುಳ್ಯವಿದೆ. ಕಾಶ್ಮೀರಿ ಕೇಂದ್ರಿತ ನಾಯಕರಿಂದ ತಾರತಮ್ಯಕ್ಕೆ ಒಳಗಾಗಿದ್ದ, ಬೌದ್ಧ ಬಾಹುಳ್ಯವಿರುವ ಲಡಾಖ್ ಅಂತೂ 1948ರಿಂದಲೇ ತನ್ನನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸುತ್ತಿತ್ತು. ಮುಫ್ತಿ ಮತ್ತು ಅಬ್ದುಲ್ಲಾ ಸರ್ಕಾರಗಳು ಬಹುತೇಕ ಅನುದಾನಗಳನ್ನು ಕಾಶ್ಮೀರಕ್ಕೇ ಮೀಸಲುಗೊಳಿಸುತ್ತಾ ಬಂದಿದ್ದವು. ಕಾಶ್ಮೀರದ ಈ ಮಲತಾಯಿ ಧೋರಣೆಯಿಂದ ಲಡಾಖ್ ಅಷ್ಟೇ ಅಲ್ಲದೇ, ಹಿಂದೂ ಬಾಹುಳ್ಯವಿರುವ ಜಮ್ಮೂ ಕೂಡ ಸಂತ್ರಸ್ತವಾಗಿತ್ತು.
ಅಭಿವೃದ್ಧಿ ಪಥದಲ್ಲಿ ಲಡಾಖ್?
ಪರ್ವತ ಪ್ರದೇಶವಾಗಿರುವ ಲಡಾಖ್ ನೋಡಲೇನೋ ರಮಣೀಯವಾಗಿದೆ. ಆದರೆ ಅದರ ಪರಿಸ್ಥಿತಿ ತೀರ ಶೋಚನೀಯಮಟ್ಟಕ್ಕೆ ತಲುಪಿದೆ. ಬಡತನ, ಕಳಪೆ ರಸ್ತೆಗಳು, ಲೆಕ್ಕಕ್ಕಿಲ್ಲದಂತಿರುವ ಟೆಲಿಕಾಂ-ಇಂಟರ್ನೆಟ್ ಸಂಪರ್ಕ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ. ಲಡಾಖ್‌ನ ಜನಸಂಖ್ಯೆಯಲ್ಲಿ 90 ಪ್ರತಿಶತದಷ್ಟು ಜನ ಬುಡಕಟ್ಟು ಸಮುದಾಯದವರು. ವರ್ಷಗಳಿಂದ ಜಮ್ಮು-ಕಾಶ್ಮೀರದ ಆಡಳಿತ ಇವರನ್ನೆಲ್ಲ ಕಡೆಗಣಿಸುತ್ತಲೇ ಬಂದಿತ್ತು. ಲಡಾಖ್‌ಗೆ ಅನುದಾನವಂತೂ ಸರಿಯಾಗಿ-ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಅಭಿವೃದ್ಧಿಯೆನ್ನುವುದು ಕೇವಲ ಕಾಶ್ಮೀರಕ್ಕೆ ಸೀಮಿತವಾಗಿತ್ತು. ಬುಡಕಟ್ಟು ಸಮುದಾಯಗಳಿಗೆ ದೇಶದ ಇತರೆ ರಾಜ್ಯಗಳಲ್ಲಿ ಸಿಗುವಂಥ ಸವಲತ್ತುಗಳು ಲಡಾಖ್‌ವಾಸಿಗಳಿಗೆ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಲಿದೆ. ಇನ್ನೊಂದೆಡೆ ಸ್ಥಳೀಯರಿಗೆ ಹೊಸ ದರ್ಜೆಯಿಂದಾಗಿ ಆತಂಕವೂ ಇದೆ. ಕೃಷಿಗೆ ಯೋಗ್ಯವಲ್ಲದ ಭೂಭಾಗವನ್ನು ಹೊಂದಿರುವ ಲಡಾಖ್‌ಗೆ ಇಂದಿಗೂ ಪ್ರವಾಸೋದ್ಯಮವೇ ಬಹುದೊಡ್ಡ ಆಸರೆ. ಈಗ ಈ ಪ್ರದೇಶ ಕೇಂದ್ರಾಡಳಿತಕ್ಕೆ ಬರುವುದರಿಂದ, ಭಾರತದ ಖಾಸಗಿ ಪ್ರವಾಸೋದ್ಯಮ ಸಂಸ್ಥೆಗಳಿಗೆ ಲಡಾಖ್‌ನಲ್ಲಿ ನೆಲೆ ಊರಲು ಬಹುದೊಡ್ಡ ಅವಕಾಶ ಸೃಷ್ಟಿಯಾಗಿದೆ. ಚಿಕ್ಕ ಪುಟ್ಟ ಕೆಫೆಗಳನ್ನು ಹಾಕಿಕೊಂಡು ಬದುಕು ನಡೆಸುತ್ತಿರುವ ಲಡಾಖ್ ನಿವಾಸಿಗಳಿಗೆ ಭಾರತದ ಬೃಹತ್ ಹೋಟೆಲ್-ರೆಸಾರ್ಟ್ ಕುಳಗಳು ತಮ್ಮ ನೆಲೆಗೆ ಬಂದರೆ, ಅವರನ್ನು ಹೇಗೆ ಎದುರಿಸಬೇಕೆಂಬ ಚಿಂತೆಯೂ ಇದೆ. ಆದರೆ ಇದಕ್ಕಿಂತ ಮುಖ್ಯವಾಗಿ, ಲೆ. ಗವರ್ನರ್ ಅಡಿಯಲ್ಲಿ ತಮ್ಮ ಭಾಗದ ಮೂಲಸೌಕರ್ಯಾಭಿವೃದ್ಧಿಯಾಗಲಿ, ಸರ್ಕಾರಿ ಉದ್ಯೋಗಗÙರಿ, ಸವಲತ್ತುಗಳು ಸೃಷ್ಟಿಯಾಗಲಿ ಎಂಬ ಆಶಯ ಲಡಾಖ್ ವಾಸಿಗಳದ್ದು.
ಮೋದಿ ಆಪ್ತ ಮುರ್ಮು-ಮಾಥುರ್
1985 ಬ್ಯಾಚ್ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಜಿಸಿ ಮುರ್ಮು ಗುಜರಾತ್‌ನಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದ ವೇಳೆ ಅವರ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಒಡಿಶಾ ಮೂಲದವ ರಾದ ಇವರು ಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾಲಯ ದಲ್ಲಿ ಪದವಿ ಪಡೆದಿ¨ªಾರೆ.
ಇನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಲಿರುವ ರಾಧಾಕೃಷ್ಣ ಮಾಥುರ್ ಮೇಲೂ ಮೋದಿ ಬಹಳ ಭರವಸೆ ಇರಿಸಿಕೊಂಡಿದ್ದಾರೆ. ತ್ರಿಪುರಾ ಕೇಡರ್‌ನ 1977ರ ಬ್ಯಾಚ್‌ನ ಐಎಎಸ್ ಅಧಿಕಾರಿ ಯಾಗಿರುವ ಮಾಥುರ್ ಎರಡು ವರ್ಷ ಭಾರತೀಯ ರಕ್ಷಣಾ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿದ್ದರು. ಐಐಟಿ ಕಾನ್ಪುರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್, ಐಐಟಿ ದೆಹಲಿಯಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಜತೆಗೆ ಸ್ಲೊವೇನಿಯಾದಲ್ಲಿ ಎಂಬಿಎ ಪದವಿ ಪಡೆದಿ ರುವ ಮಾಥೂರ್ ತಮ್ಮ ಶಿಸ್ತಿನ ಆಡಳಿತ ವೈಖರಿಯಿಂದ ಹೆಸರು ಮಾಡಿದ್ದಾರೆ.
ಎಸಿಬಿ, ಐಪಿಎಸ್, ಐಎಎಸ್ ಯಾರ ಕೈಯ್ಯಲ್ಲಿ?
– ಇನ್ಮುಂದೆ ಜಮ್ಮು-ಕಾಶ್ಮೀರದಲ್ಲಿ ಲೆ. ಗವರ್ನರ್ ನಿಯಂತ್ರಣದಲ್ಲಿ ಕೇವಲ ಐಎಎಸ್, ಐಪಿಎಸ್ ಅಷ್ಟೇ ಅಲ್ಲದೇ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವೂ ಇರಲಿದೆ. ಇವುಗಳ ಮೇಲೆ ಜಮ್ಮು-ಕಾಶ್ಮೀರದ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಜಮ್ಮು-ಕಾಶ್ಮೀರದ ರಾಜಕಾರಣಿಗಳಿಂದ ತೀವ್ರ ವಿರೋಧವಂತೂ ಎದುರಾಗುತ್ತಿದೆ.
– ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೂ ಒಂದೇ ಹೈಕೋರ್ಟ್ ಇರಲಿದ್ದು, ಬೇಸಿಗೆಯಲ್ಲಿ ಶ್ರೀನಗರದಿಂದ, ಚಳಿಗಾಲದಲ್ಲಿ ಜಮ್ಮುವಿನಿಂದ ಹೈಕೋರ್ಟ್ ಕಾರ್ಯನಿರ್ವಹಿಸಲಿದೆ.
– ಜಮ್ಮು-ಕಾಶ್ಮೀರ ಮರುವಿಂಗಡಣಾ ಕಾಯ್ದೆ, 2019ರ ಪ್ರಕಾರ, ಜಮ್ಮು-ಕಾಶ್ಮೀರದ ಕೇಡರ್‌ನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಈಗ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಸೇವೆ ಮುಂದುವರಿಸಲಿದ್ದಾರೆ. ಇವರ ಸೇವೆಯ ಮುಂದುವರಿಕೆ ಹಾಗೂ ಹೊಸ ಅಧಿಕಾರಿಗಳ ನೇಮಕಾತಿಯ ಬಗ್ಗೆ ಲೆ. ಗವರ್ನರ್‌ಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಅವಕಾಶ
ಸರ್ಕಾರಿ ಉದ್ಯೋಗಿಗಳಿಗೆ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮಿಷ್ಟದ ಒಂದನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾ ಗುತ್ತದೆ. ಉದ್ಯೋಗಿಗಳು ತಮಗೆ ಯಾವ ಪ್ರದೇಶ ಬೇಕು ಅದನ್ನು ಆರಿಸಿ ವರ್ಗದ ಅರ್ಜಿ ಸಲ್ಲಿಸಬೇಕು. ಇವರ ವರ್ಗಾವಣೆ ಜವಾಬ್ದಾರಿಯನ್ನು ಲೆಫ್ಟಿನೆಂಟ್ ಗವರ್ನರ್‌ಗಳು ಹೊರಲಿದ್ದಾರೆ.
ಲಡಾಖ್ ಹೇಗೆ ಭಿನ್ನ?
ಲಡಾಖ್ “ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶ’ವಾಗಲಿದೆ. ಅಂದರೆ, ಅಲ್ಲಿ ಮುಖ್ಯಮಂತ್ರಿ ಇರುವುದಿಲ್ಲ. ಈ ಪ್ರದೇಶದ ಆಡಳಿತವನ್ನು ಲೆ. ಗವರ್‌ನರ ಮೂಲಕ ನೇರವಾಗಿ ಕೇಂದ್ರ ಸರಕಾರವೇ ನೋಡಿಕೊಳ್ಳುತ್ತದೆ. ರಾಧಾ ಕೃಷ್ಣ ಮಾಥುರ್ ಅವರು ತಮ್ಮದೇ ಸಲಹೆಗಾರರ ತಂಡದ ಮೂಲಕವಾಗಿ ಆಡಳಿತ ನಡೆಸಲಿದ್ದಾರೆ. ಲಡಾಖ್‌ನಲ್ಲಿನ ಮೂಲಸೌಕರ್ಯಾಭಿವೃದ್ಧಿ ಯಿಂದ ಹಿಡಿದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ಇನ್ಮುಂದೆ ಕೇಂದ್ರ
ಸರ್ಕಾರವೇ ನೋಡಿಕೊಳ್ಳಲಿದೆ. ಅನುದಾನ ಬಿಡುಗಡೆಗಾಗಿ ಲಡಾಖ್ ಇನ್ಮುಂದೆ ಶ್ರೀನಗರದತ್ತ ನೋಡುತ್ತಾ ಕೂಡುವ ಅಗತ್ಯವಿಲ್ಲ.
ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳು
1. ಚಂಡೀಗಢ
2. ದಾದ್ರಾ ಮತ್ತು ನಗರ ಹವೇಲಿ
3. ದಾಮನ್ ಮತ್ತು ದಿಯು
4. ಲಕ್ಷದ್ವೀಪ
5. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
6. ಲಡಾಖ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.