
ಲ್ಯಾಪ್‌ಟಾಪ್ ಆಲ್ವೇಸ್ ಕನೆಕ್ಟೆಡ್
Team Udayavani, Feb 26, 2018, 2:45 AM IST

ಮನೆಯ ವೈಫೈ ನೆಟ್‌ವರ್ಕ್‌ನಿಂದ ಹೊರಗೆ ಹೊರಟರೆ ಲ್ಯಾಪ್‌ಟಾಪ್ ಒಂದು ದ್ವೀಪದಂತಾಗುತ್ತದೆ. ಅದಕ್ಕೂ ಹೊರಜಗತ್ತಿಗೂ ಪೆನ್‌ಡ್ರೈವ್ ಅಥವಾ ಮೊಬೈಲ್ ಹಾಟ್‌ಸ್ಪಾಟ್ ಮಾತ್ರ ಸೇತುವೆ ಯಾದೀತು. ಹಾಗಾದರೆ ಲ್ಯಾಪ್‌ಟಾಪ್‌ಗೆà ಒಂದು ಸಿಮ್ ಸೇರಿಸಿದರೆ ಸಮಸ್ಯೆ ಪರಿಹಾರವಾಯಿತಲ್ಲ!
ಎರಡೂ ಕಿವಿಗಳಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಕಂಪ್ಯೂಟ ರಿನಲ್ಲಿ ಕ್ರೋಮ್ ಬ್ರೌಸರ್ ತೆರೆದು ಯಾವುದಾದರೂ ವೆಬ್‌ಸೈಟ್‌ನಲ್ಲಿ ಹಾಡು ಕೇಳುತ್ತಾ ಕೆಲಸ ಮಾಡುವುದು ನಮಗೆಲ್ಲರಿಗೂ ಖುಷಿ ಕೊಡುವ ಹವ್ಯಾಸ. ಇಯರ್‌ಫೋನ್‌ನಲ್ಲಿ ಗುಣುಗುಣಿಸುವ ಹಾಡು ಸುತ್ತಲಿನ ಧ್ವನಿಗಳೆಲ್ಲವನ್ನೂ ಮ್ಯೂಟ್ ಮಾಡುತ್ತದೆ. ಆದರೆ ಇದರ ಸಮಸ್ಯೆಯೇನೆಂದರೆ, ಯಾರಾದರೂ ತುರ್ತಾಗಿ ಕರೆ ಮಾಡಿದರೆ ಮೊಬೈಲ್ ರಿಂಗಾದ ಸದ್ದು ಕೇಳಿಸುವುದಿಲ್ಲ. ಹತ್ತಿರದಲ್ಲೇ ಇರುವ ಯಾರಾದರೂ ಬಂದು ಫೋನ್ ಬಡ್ಕೊಳ್ತಿದೆ ನೋಡು ಅಂತ ಕೈಸನ್ನೆ, ಬಾಯಿ ಸನ್ನೆ ಮಾಡಬೇಕು. ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವಂತೆ ಫೋನ್ ಬಂದಾಗ ಮ್ಯೂಸಿಕ್ ನಿಲ್ಲಿಸಿ ಫೋನ್ ರಿಂಗ್ ಕೇಳಿಸುವ ವಿಧಾನ ನಮ್ಮ ಲ್ಯಾಪ್‌ಟಾಪ್‌ಗ್ಳಲ್ಲಿ ಇಲ್ಲವೇ ಇಲ್ಲ. ಲ್ಯಾಪ್‌ಟಾಪ್‌ಗ್ಳಿಗೂ ಟೆಲಿಕಾಂ ನೆಟ್‌ವರ್ಕ್‌ಗಳಿಗೂ ಸದ್ಯಕ್ಕೆ ಸಂಬಂಧವೇ ಇಲ್ಲ. ಡೆಸ್ಕ್ ಟಾಪ್ ಎಂಬ ಜ್ಞಾನಕೋಶವನ್ನು ಅಜ್ಜನನ್ನಾಗಿಸಿ ಲ್ಯಾಪ್‌ಟಾಪ್ ಈಗ ಸ್ಮಾರ್ಟ್‌ಫೋನ್ ಯುವಕನ ಎದುರು ವಯಸ್ಕನಂತೆ ಕುಳಿತಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಸ್ಮಾರ್ಟ್ ಎಂಬ ಅಂಶ ಈಗ ಲ್ಯಾಪ್‌ನಲ್ಲಿಲ್ಲ.
ಕಂಪ್ಯೂಟರನ್ನು ಬೇಕಾದಲ್ಲಿ ಹೊತ್ತೂಯ್ಯಬಹುದು ಎಂಬ ಕಾರಣಕ್ಕೇ ಲ್ಯಾಪ್‌ಟಾಪ್ ಹುಟ್ಟಿದ್ದು. ಆದರೆ ಈಗ ಸ್ಮಾರ್ಟ್ ಫೋನ್‌ಗಳು ಲ್ಯಾಪ್‌ಟಾಪ್‌ನ ಕೆಲಸವನ್ನು ಇನ್ನೂ ಚೆನ್ನಾಗಿ ಕಾರ್ಯ ನಿರ್ವಹಿಸಲು ಹೊರಟಿದ್ದರಿಂದ ಲ್ಯಾಪ್‌ಟಾಪ್ ಮಂಕಾಗಿವೆ. ಈಗ ಲ್ಯಾಪ್‌ಟಾಪ್‌ನಲ್ಲಿ ಸಿಗುವ ಬಹುತೇಕ ಸೌಲಭ್ಯಗಳು ಸ್ಮಾರ್ಟ್ ಫೋನ್‌ಗಳಲ್ಲಿವೆ. ಆದರೆ ಲ್ಯಾಪ್‌ಟಾಪ್ ದ್ವೀಪವಾಗಿದೆ. ಮನೆಯ ವೈಫೈ ನೆಟ್‌ವರ್ಕ್‌ನಿಂದ ಹೊರಗೆ ಹೊರಟರೆ ಲ್ಯಾಪ್‌ಟಾಪ್ ಒಂದು ದ್ವೀಪದಂತಾಗುತ್ತದೆ. ಅದಕ್ಕೂ ಹೊರಜಗತ್ತಿಗೂ ಪೆನ್‌ಡ್ರೈವ್ ಅಥವಾ ಮೊಬೈಲ್ ಹಾಟ್‌ಸ್ಪಾಟ್ ಮಾತ್ರ ಸೇತುವೆ ಯಾದೀತು. ಹಾಗಾದರೆ ಲ್ಯಾಪ್‌ಟಾಪ್‌ಗೆà ಒಂದು ಸಿಮ್ ಸೇರಿಸಿದರೆ ಸಮಸ್ಯೆ ಪರಿಹಾರವಾಯಿತಲ್ಲ, ಎಂಬಲ್ಲಿಗೆ ಆಲ್ವೇಸ್ ಕನೆಕ್ಟೆಡ್ ಕಲ್ಪನೆ ಹುಟ್ಟಿಕೊಂಡಿದೆ!
ಈಗಾಗಲೇ ಇಂಥದ್ದೊಂದು ಕಲ್ಪನೆ ಚಿಗುರೊಡೆದು ಒಂದೊಂದೇ ಎಲೆ ಹೊರಹಾಕುತ್ತಿದೆ. ಇದರ ಕಾಂಡ ಬಲಿಯ ಬೇಕೆಂದರೆ ಒಂದೆರಡು ವರ್ಷಗಳು ಉರುಳಬಹುದು. ಆದರೆ ಬೇರು ಆಗಲೇ ಗಟ್ಟಿಯಾದಂತಿದೆ. ಕ್ವಾಲ್‌ಕಾಂ ಎಂಬ ಚಿಪ್ ತಯಾರಿಕೆ ಕಂಪನಿ ಈ ಕಲ್ಪನೆಯನ್ನು ಹುಟ್ಟುಹಾಕಿ, ಇತರ ಚಿಪ್ ತಯಾರಿಕೆ ಕಂಪನಿಗಳ ಮಿದುಳಿಗೂ ಕೆಲಸ ಹಚ್ಚಿದೆ. ಸ್ಮಾರ್ಟ್ ಫೋನ್‌ಗಳಿಗೆಂದೇ ಚಿಪ್ ತಯಾರಿಕೆ ಮಾಡುತ್ತಿರುವ ಕ್ವಾಲ್‌ಕಾಂ ಸಂಸ್ಥೆ ಈಗಾಗಲೇ ಈ ಕಲ್ಪನೆಯಡಿಯಲ್ಲಿ ಚಿಪ್ ತಯಾರಿಕೆ ಮಾಡಿದ್ದು, ಆಸಸ್ ಮತ್ತು ಎಚ್‌ಪಿಯನ್ನೂ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಗಳು ಈಗಾಗಲೇ ಆಲ್ವೇಸ್ ಕನೆಕ್ಟೆಡ್ ಮಾದರಿಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿವೆ. ಒಂದೊಂದು ಮಾಡೆಲ್ ಹೆಸರುಗಳನ್ನೂ ಇವು ಬಿಡುಗಡೆ ಮಾಡಿದ್ದು, ಲೆನೊವೊ ಕೂಡ ಆಲ್ವೇಸ್ ಕನೆಕ್ಟೆಡ್ ಆಗಿದ್ದೇವೆ ಎಂದಿದೆ. ಇನ್ನು ಮೈಕ್ರೋಸಾಫ್ಟ್, ಇಂಟೆಲ್ ಕೂಡ ಒಂದೊಂದು ಹೆಜ್ಜೆ ಮುಂದಿಟ್ಟಿವೆ.
ಈ ಕಲ್ಪನೆಯ ಲ್ಯಾಪ್‌ಟಾಪ್‌ಗ್ಳು ಸದ್ಯ ನಾವು ಬಳಸುತ್ತಿರುವ ಲ್ಯಾಪ್‌ಟಾಪ್‌ನ ಸಂಪೂರ್ಣ ರೂಪುರೇಷೆಯನ್ನೇ ಬದಲಿಸಲು ಹೊರಟಿವೆ. ಸದ್ಯ ಅಂಬೆಗಾಲಿಡುತ್ತಿರುವ ಈ ಕಲ್ಪನೆಯು ಬರಿ ನೆಟ್‌ವರ್ಕ್‌ಗೆ ಸಂಪರ್ಕವಷ್ಟೇ ಅಲ್ಲ, ಬ್ಯಾಟರಿ ಬಾಳಿಕೆಯ ವಿಚಾರದಲ್ಲೂ ಮಹತ್ವದ್ದು. ಸ್ಮಾರ್ಟ್‌ಫೋನ್ ರೀತಿ ಇಡೀ ದಿನದವರೆಗೆ ಲ್ಯಾಪ್‌ಟಾಪ್ ಬ್ಯಾಟರಿ ಬಾಳಿಕೆ ಬರದು. ಒಂದೂ ವರೆ ಗಂಟೆ ಉರಿಯಬಹುದು. ಆಮೇಲೆ ಡಿಸ್‌ಕನೆಕ್ಟೆಡ್. ಹೀಗಾಗಿ ವಿದ್ಯುತ್ ಮೂಲವನ್ನು ಹುಡುಕಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಆದರೆ ಆಲ್ವೇಸ್ ಕನೆಕ್ಟೆಡ್ ಪಿಸಿ ಒಂದಿಡೀ ದಿನ ಉರಿಯಬಲ್ಲವು.
ಶಟ್‌ಡೌನ್ ಬಟನ್ನೇ ಇಲ್ಲದ ಲ್ಯಾಪ್‌ಟಾಪ್!
ಇಡೀ ದಿನ ಕಣ್ತೆರೆದು ಕೂತರೂ ಶಕ್ತಿಗುಂದದ ಈ ಲ್ಯಾಪ್‌ಟಾಪ್‌ಗ್ಳನ್ನು ಯಾರು ಶಟ್‌ಡೌನ್ ಮಾಡುತ್ತಾರೆ ಹೇಳಿ? ಒಂದೆರಡು ಗಂಟೆ ಕಂಪ್ಯೂಟರ್ ಮುಚ್ಚಿಟ್ಟು ಇನ್ಯಾವುದೋ ಕೆಲಸ ಮಾಡಿ ಮುಗಿಸುವವರಿಗೆ ಬ್ಯಾಟರಿಯ ಚಿಂತೆ ಇಲ್ಲದಿರುವು ದರಿಂದ, ಶಟ್‌ಡೌನ್ ಬಟನ್ನೇ ನಿಷ್ಪ್ರಯೋಜಕ. ಎದುರು ಕುಳಿತು ಓಪನ್ ಮಾಡಿದ ತಕ್ಷಣ ಇವು ಸ್ಮಾರ್ಟ್‌ಫೋನ್ ರೀತಿ ಕರೆ ಮಾಡು ವುದಕ್ಕೋ, ಅಪ್ಲಿಕೇಶನ್ ತೆರೆಯುವುದಕ್ಕೋ ಸಿದ್ಧವಾಗಲಿವೆ. ಸಾಮಾನ್ಯವಾಗಿ ಆ್ಯಪಲ್ ಕಂಪ್ಯೂಟರುಗಳಲ್ಲಿ ಚಾಲ್ತಿಯಲ್ಲಿರುವ ಈ ಸೌಲಭ್ಯ ಆಲ್ವೇಸ್ ಕನೆಕ್ಟೆಡ್ ಪಿಸಿಯಲ್ಲೂ ಇರಲಿದೆ.
ಹಾಗಾದರೆ ಇದು ಟ್ಯಾಬ್ಲೆಟ್ ಅಲ್ಲವೇ ಎಂದು ನೀವು ಕೇಳಬ ಹುದು. ನಿಜ ಟ್ಯಾಬ್ಲೆಟ್‌ಗೂ ಇದಕ್ಕೂ ಸಾಮ್ಯತೆಯಿದೆ. ಆಲ್ವೇಸ್ ಕನೆಕ್ಟೆಡ್‌ಗೂ, ಟ್ಯಾಬ್ಲೆಟ್‌ಗೂ ಮೂಲದಲ್ಲೇ ವ್ಯತ್ಯಾಸವಿದೆ. ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬಂದಾಗ ಲ್ಯಾಪ್‌ಟಾಪ್‌ಗ್ಳು ಮೂಲೆಗೆ ಸೇರಿತು ಅಂತಲೇ ಎಲ್ಲರೂ ಲೆಕ್ಕ ಹಾಕಿದ್ದರು. ಆದರೆ ಟ್ಯಾಬ್ಲೆಟ್ ಮಿತಿಗಳು ಒಂದೊಂದಾಗಿ ಹೊರಬಂತು. ವಿಂಡೋಸ್‌ನ ಆಪರೇಟಿಂಗ್ ಸಿಸ್ಟಂನ ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಲ್ ಮಾಡ ಬಹುದಾದ ಯಾವ ಅಪ್ಲಿಕೇಶನ್‌ಗಳು ಟ್ಯಾಬ್ಲೆಟ್ ಸೂಕ್ತ ವಾಗಿ ರಲಿಲ್ಲ. ಹೀಗಾಗಿ ವಿಂಡೋಸ್‌ಗಾಗಿ ರೂಪಿಸಿದ ಕೋಟ್ಯಂತರ ಅಪ್ಲಿಕೇಶನ್‌ಗಳು ಹಾಗೂ ಸಾಫ್ಟ್ವೇರ್‌ಗಳನ್ನು ಟ್ಯಾಬ್ಲೆಟ್‌ಗೆಂದೇ ಪುನಃ ಕೋಡ್ ಮಾಡಿ ಎಂದು ಹೇಳಿದರೆ ಜನರು ಇಂಥ ಕಂಪನಿಗಳನ್ನು ಮಂಗನಂತೆ ನೋಡಿಯಾರು. ಹೀಗಾಗಿ ಟ್ಯಾಬ್ಲೆಟ್ ಕೇವಲ ಮಕ್ಕಳಿಗೆ, ಗೇಮ್ ಪ್ರಿಯರಿಗಷ್ಟೇ ಸೀಮಿತವಾಯಿತು. ಈ ಹಿಂದೆ ಯುಎಸ್‌ಬಿ ಮೋಡೆಮ್ ಎಂಬ ಸಾಧನವೊಂದು ಟೆಲಿಕಾಂ ನೆಟ್‌ವರ್ಕ್ ಮೂಲಕ ಲ್ಯಾಪ್‌ಟಾಪ್‌ಗೆ ಇಂಟರ್‌ನೆಟ್ ಸಂಪರ್ಕಿ ಸುವ ಸೌಲಭ್ಯ ಕಲ್ಪಿಸಿತ್ತು. ಆಗಿನ 2ಜಿ ಕಾಲಕ್ಕೆ ಇದು ಅಷ್ಟೇನೂ ಯಶಸ್ವಿಯಾಗಲಿಲ್ಲ. ಇದರ ಸ್ಥಾನವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ರುವ ಹಾಟ್‌ಸ್ಪಾಟ್‌ಗಳು ಆಕ್ರಮಿಸಿಕೊಂಡ ನಂತರ ಈಗ ಇವು ಕೆಲಸವಿಲ್ಲದೇ ಬಿದ್ದಿವೆ. ಈ ಮೋಡೆಮ್‌ಗೆ ಸಿಮ್ ಹಾಕಿ, ಲ್ಯಾಪ್‌ಟಾಪ್‌ಗೆ ಸಿಕ್ಕಿಸಿದರೆ ಸಾಕು. ಅದರ ಜೊತೆಗೆ ನೀಡಿರುವ ಸಾಫ್ಟ್ ವೇರನ್ನು ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಡೇಟಾ ಬಳಸಬಹುದು. ಈ ಸಾಫ್ಟ್ವೇರ್ ಮೂಲಕ ಕರೆಯನ್ನೂ ಸ್ವೀಕರಿಸಬಹುದು. ಆದರೆ ಇದರ ಸಮಸ್ಯೆಯೇನೆಂದರೆ ಮೋಡೆ ಮ್‌ಗಳು ಎಲ್ಲ ಲ್ಯಾಪ್‌ಟಾಪ್‌ಗ್ಳಿಗೂ ಹೊಂದಿಕೆಯಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಇದರ ಮೂಲಕ ನೆಟ್‌ವರ್ಕ್ ಕನೆಕ್ಟ್ ಮಾಡು ವುದು ಸಾಹಸವೇ ಆಗಿರುತ್ತಿತ್ತು. ಹಾಟ್‌ಸ್ಪಾಟ್‌ನಿಂದ ವೈಫೈ ರೀತಿ ತಕ್ಷಣ ಕನೆಕ್ಟ್ ಮಾಡಿ ಡೇಟಾ ಬಳಸಬಹುದಾಗಿದ್ದರಿಂದ, ಸ್ಮಾರ್ಟ್ ಫೋನ್ ಜನಪ್ರಿಯವಾದ ವೇಗಕ್ಕೆ ಸಮಾನ ಅನುಪಾತದ ವೇಗದಲ್ಲಿ ಮೋಡೆಮ್‌ಗಳ ಜನಪ್ರಿಯತೆ ಮತ್ತು ಬಳಕೆ ಕುಗ್ಗಿತು.
ಪುನಃ ಆಲ್ವೇಸ್ ಕನೆಕ್ಟೆಡ್ ವಿಚಾರಕ್ಕೆ ಬರೋಣ. ಇದರ ಅತ್ಯಂತ ಆಕರ್ಷಕ ಸಂಗತಿಯೇ ಟೆಲಿಕಾಂ ನೆಟ್‌ವರ್ಕ್‌ಗೆ ನಾವು ಕನೆಕ್ಟ್ ಮಾಡುವುದು. ಆದರೆ ಟೆಲಿಕಾಂ ನೆಟ್‌ವರ್ಕ್‌ಗಳು ಇದಕ್ಕೆ ಸಿದ್ಧವಾಗಿವೆಯೇ ಎಂಬುದೂ ಹೊಸ ಸವಾಲು. ಸದ್ಯ ಕೆಲವೇ ದೇಶಗಳಲ್ಲಿ ಈಗಾಗಲೇ ಸಾಧನಗಳಲ್ಲಿ ಫಿಕ್ಸ್ ಮಾಡಿದ ಸಿಮ್ ಕಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಜಾರಿಯಲ್ಲಿದೆ.
ಅಂದರೆ ಏರ್‌ಟೆಲ್‌ನಿಂದ ವೊಡಾಫೋನ್‌ಗೆ ನೀವು ನಿಮ್ಮ ಟೆಲಿಕಾಂ ನೆಟ್‌ವರ್ಕ್ ಬದಲಿಸುತ್ತೀರಿ ಎಂದರೆ ಏರ್‌ಟೆಲ್ ಸಿಮ್ ಅನ್ನು ಮೊಬೈಲ್‌ನಿಂದ ತೆಗೆದು ಬಿಸಾಕಿ, ವೊಡಾಫೋನ್ ಶೋರೂಂಗೆ ಹೋಗಿ ಸಿಮ್ ತೆಗೆದುಕೊಂಡು ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಪಿಸಿಗೆಂದೇ ನಿಗದಿ ಮಾಡಿರುವ ಸಂಖ್ಯೆ ಕೊಟ್ಟರೆ, ಟೆಲಿಕಾಂ ಕಂಪನಿಗಳೇ ಪ್ರೊಫೈಲ್ ಕಳುಹಿಸುತ್ತವೆ. ಅವುಗಳನ್ನು ಇನ್‌ಸ್ಟಾಲ್ ಮಾಡಿ ಕೊಂಡರೆ ಸಾಕು. ಟೆಲಿಕಾಂ ನೆಟ್‌ವರ್ಕ್‌ಗಳು ನಿಮಗೆ ಸೇವೆ ಒದಗಿಸುತ್ತವೆ. ಇಂತಹ ವ್ಯವಸ್ಥೆಯನ್ನು ಭಾರತದಲ್ಲೂ ಜಾರಿಗೊಳಿಸ ಬೇಕು ಎಂಬ ಕೂಗು ಆಗಾಗ್ಗೆ ಟೆಲಿಕಾಂ ವಲಯದಲ್ಲಿ ಕೇಳಿಬರುತ್ತಿರುತ್ತದೆ. ಆದರೆ ಈ ವ್ಯವಸ್ಥೆ ಸ್ಮಾರ್ಟ್‌ಫೋನ್ ಬದಲಿಗೆ ಆಲ್ವೇಸ್ ಕನೆಕ್ಟೆಡ್ ಪಿಸಿಯಲ್ಲಿರುತ್ತವೆ. ಇದಕ್ಕೆ ಭಾರತದ ಟೆಲಿಕಾಂ ಕಂಪನಿಗಳು ಸಿದ್ಧವಾಗಬೇಕು. ಸದ್ಯಕ್ಕಂತೂ ಎಲ್‌ಟಿಇ ಟೆಕ್ನಾಲಜಿಯನ್ನು ಟೆಲಿಕಾಂ ಕಂಪನಿಗಳು ಅಳವಡಿಸಿಕೊಂಡಿದ್ದು, ಇದರಿಂದ 4ಜಿ ವೇಗದಲ್ಲಿ ಡೇಟಾ ಬಳಸಬಹುದು. ಸದ್ಯಕ್ಕೆ ಅಮೆರಿಕದ ಟಿ-ಮೊಬೈಲ್ ಆಲ್ವೇಸ್ ಕನೆಕ್ಟೆಡ್ ಪಿಸಿಗಳಿಗಾಗಿ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಿದೆ. ಇತರ ಕಂಪನಿಗಳು ಇನ್ನಷ್ಟೇ ಈ ವ್ಯವಸ್ಥೆಗೆ ತಮ್ಮ ಸೇವೆಯ ವಿಧಾನವನ್ನು ರೂಪಿಸಿಕೊಳ್ಳಬೇಕು.
ಡೇಟಾ ದರದ್ದೇ ಸವಾಲು
ಇಂತಹ ಲ್ಯಾಪ್‌ಟಾಪ್‌ಗ್ಳಿಗೆ ಟೆಲಿಕಾಂ ಕಂಪನಿಗಳು ಯಾವ ರೀತಿ ಡೇಟಾ ದರ ನಿಗದಿಪಡಿಸುತ್ತವೆ. ಸಾಮಾನ್ಯ ಸ್ಮಾರ್ಟ್‌ಫೋನ್‌ಳಿಗೆ ಇರುವ ಪ್ಲಾನನ್ನೇ ಇದಕ್ಕೂ ಬಳಸುತ್ತವೆಯೇ ಅಥವಾ ಬೇರೆ ಟ್ಯಾರಿಫ್ ಪ್ರಕಟಿಸುತ್ತವೆಯೇ ಎಂಬುದು ಸದ್ಯ ಇರುವ ಗೊಂದಲ. ಅಷ್ಟೇ ಅಲ್ಲ, ಆಲ್ವೇಸ್ ಕನೆಕ್ಟೆಡ್ ಪಿಸಿ ಎಂದಾಕ್ಷಣ ಇದು ಸಾಮಾನ್ಯ ಲ್ಯಾಪ್‌ಟಾಪ್ ರೀತಿಯಲ್ಲೇ ಕೆಲಸ ಮಾಡುತ್ತದೆಯೇ ಎಂಬ ಗುಮಾನಿ ಏಳುತ್ತದೆ. ಸದ್ಯ ಸಾಮಾನ್ಯ ಲ್ಯಾಪ್‌ಟಾಪ್‌ಗ್ಳನ್ನೇನೂ ಪಿಸಿಗಳ ರೀತಿ ಭಾರಿ ಕೆಲಸಕ್ಕೆ ಬಳಸುತ್ತಿಲ್ಲ. ಇಷ್ಟನ್ನಾದರೂ ಆಲ್ವೇಸ್ ಕನೆಕ್ಟೆಡ್ ಮಾಡುತ್ತದೆಯೇ? ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಟೆಕ್‌ಪ್ರಿಯರಲ್ಲೂ ಸಂಶಯ ಇದ್ದೇ ಇದೆ. ಇನ್ನು ಬೆಲೆಯ ವಿಷಯದಲ್ಲೂ ಇದು ಕೈಗೆಟಕುವಂತೆ ಇರುತ್ತದೆಯೇ ಎಂಬುದು ಪ್ರತಿಯೊಬ್ಬರೂ ಕೇಳುವ ಪ್ರಶ್ನೆ. ಇಂಥದ್ದೊಂದು ಕ್ರಾಂತಿಕಾರಕ ತಂತ್ರಜ್ಞಾನ ಆರಂಭದಲ್ಲಂತೂ ಕಡಿಮೆ ಬೆಲೆಗೆ ಸಿಗುವುದು ಸಾಧ್ಯವಿಲ್ಲದ ಮಾತು. ಈಗಿರುವ ಲ್ಯಾಪ್‌ಟಾಪ್‌ಗ್ಳಿಗಿಂತ ಹೆಚ್ಚು ಬೆಲೆ ಇರುತ್ತದೆಯಾದರೂ, ಯಾವ ವರ್ಗದವರ ಕೈಗೆಟಕುವಂತಿ ರುತ್ತದೆ ಎಂಬುದು ಸದ್ಯಕ್ಕಂತೂ ಉತ್ತರ ದೊರೆಯದ ಪ್ರಶ್ನೆ.
ಲ್ಯಾಪ್‌ಟಾಪ್ ಮಾರುಕಟ್ಟೆ ಕುಸಿಯುತ್ತಿದ್ದಂತೆ ಮೇಲೆತ್ತಲು ಹಲವು ಸರ್ಕಸ್‌ಗಳು ನಡೆದಿವೆ. ಟ್ಯಾಬ್ಲೆಟ್, ಕನ್ವರ್ಟಿಬಲ್‌ಗಳು, ಮಿಕ್ಸೆಡ್ ರಿಯಾಲಿಟಿ, ಇ-ನ್ಪೋಟ್ಸ್ ಎಲ್ಲವೂ ಒಂದೆರಡು ದಿನಗಳ ಆಟ ಆಡಿ ಹೋಗಿವೆ. ಪೈಕಿ ಟ್ಯಾಬ್ಲೆಟ್ ಈಗಲೂ ಚಾಲ್ತಿಯಲ್ಲಿದ್ದರೆ, ಉಳಿದವುಗಳ ಹೆಸರೂ ಮರೆಯಾಗಿವೆ. ಆರಂಭದಲ್ಲಿ ಇದೇ ಸಾಲಿನಲ್ಲಿ ಆಲ್ವೇಸ್ ಕನೆಕ್ಟೆಡ್ ಕೂಡ ಇದೆ ಎನಿಸುತ್ತದೆ. ಆದರೆ ಸದ್ಯ ಇದರಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಆತ್ಮವಿಶ್ವಾಸದ ಕಥೆ ಹೇಳುತ್ತಿವೆ. ಲ್ಯಾಪ್‌ಟಾಪ್‌ನಲ್ಲಿ ಮಾಡಬಲ್ಲಷ್ಟೇ ಸಾಮರ್ಥ್ಯ ಕೆಲಸವನ್ನು ಆಲ್ವೇಸ್ ಕನೆಕ್ಟೆಡ್ ಪಿಸಿಯಲ್ಲೂ ಮಾಡಬಹುದಾದರೆ ಸ್ಮಾರ್ಟ್‌ಫೋನ್‌ಗೊಂದು ಸವತಿ ಬರುವುದು ಖಚಿತ!
– ಕೃಷ್ಣ ಭಟ್
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.