ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಸೀಮಿತವಾಗದಿರಲಿ
Team Udayavani, Sep 10, 2022, 4:36 PM IST
ಶ್ರೀ ನಾರಾಯಣಗುರುಗಳ ಜನನವಾದುದು 19ನೇ ಶತಮಾನದ ಮಧ್ಯಭಾಗದಲ್ಲಿ. ಆ ಸಮಯದಲ್ಲಿ ಅವರ ಮಾತೃಭೂಮಿ ಕೇರಳ ಜಾತೀಯತೆಯ ತವರು ಮನೆಯಾಗಿತ್ತು. ಮಲಬಾರು ಮತ್ತದರ ಸುತ್ತಮುತ್ತಲ ಪ್ರದೇಶಗಳೆಲ್ಲ ವೈಷಮ್ಯದ ಕೊಂಪೆಗಳಾಗಿದ್ದವು. ಹಿಂದೂ ಸಮಾಜದ ಅವಿಚ್ಛಿನ್ನ ಅಂಗಗಳಾದ ಜಾತಿ ಜಾತಿಗಳ ಅಂತರವು ಅಡಿ ಅಡಿಗಳಿಂದ ಅಳೆಯಲ್ಪಡುವ ಸಂಪ್ರದಾಯದ ಹುಚ್ಚು ಹೊಳೆಯಲ್ಲಿ ಸಮಾಜ ತೇಲುತ್ತಿತ್ತು. ಒಂದೇ ಭೂಮಿಯಲ್ಲಿ ವಾಸಿಸುತ್ತಿದ್ದರೂ ಕುಡಿಯುವ ನೀರು ಒಂದೇ ಆದರೂ ಉಸಿರಾಡುವ ಗಾಳಿ ಅದೇ ಆದರೂ ರಕ್ತ ಘಟಕಗಳಲ್ಲಿ ವಿಭಿನ್ನತೆ ಇಲ್ಲದೇ ಇದ್ದರೂ ಆ ಜಾತಿ ಈ ಜಾತಿ ಎಂದು ಜೀವನದ ನೆಮ್ಮದಿಯನ್ನು ಜನ ಕಲುಕಿದ್ದರು.
ಸವರ್ಣೀಯರ ಹಾದಿಯಲ್ಲಿ ಅವರ್ಣೀಯರು ಹಾದು ಹೋಗುವಂತಿಲ್ಲ. ಉಚ್ಚ ಕುಲದವರ ದೇವಾಲಯಕ್ಕೆ ದಲಿತರ ಪ್ರವೇಶ ಸಾಧ್ಯವಿಲ್ಲ. ಹಾಗೆಂದು ದಲಿತರೇ ಒಂದು ದೇವಾಲಯವನ್ನು ಕಟ್ಟಿಕೊಂಡರೂ ಉಚ್ಚ ಕುಲದವರು
ಪ್ರತಿಷ್ಠಾಪಿಸುವ ಮೂರ್ತಿಯನ್ನು ಪ್ರತಿಷ್ಠಾಪಿಸುವುದಕ್ಕೆ ನಿಷೇಧ-ಹೀಗೆಂದು ಉದ್ದಕ್ಕೂ ಪಟ್ಟೀ ಕರಿಸಬಹುದಾದ ವರ್ಗ ವೈಷಮ್ಯದ ವಿಶೇಷತೆಗಳು ಆ ಕಾಲದಲ್ಲಿದ್ದವು. ಧರ್ಮದ ಅಪವ್ಯಾಖ್ಯೆಗಳು, ಪುರೋಹಿತಶಾಹಿ ಶೋಷಣೆಗಳು,
ಅಂಧಶ್ರದ್ಧೆಯ ಅರ್ಥಹೀನ ಆಚರಣೆಗಳು ಸಾಮಾಜಿಕ ಅಸಮಾನತೆಗಳು ಮೊದಲಾದ ಪಿಡುಗುಗಳಿಂದ ಸಮಾಜವನ್ನು ಬಿಡುಗಡೆ ಮಾಡಿದವರು ಶ್ರೀ ನಾರಾಯಣಗುರುಗಳು. ಶಸ್ತ್ರವನ್ನು ಬಳಸದೆ ಎದುರಾಳಿಗಳನ್ನು
ನಿಶ್ಶಸ್ತ್ರಗೊಳಿಸಿದವರು ಅವರು. ರಕ್ತರಹಿತ ಕ್ರಾಂತಿಗೆ ಮುನ್ನುಡಿ ಬರೆದವರು ಅವರು.
ಮಹಾತ್ಮರ ಚಿಂತನೆಗಳು ಸಮಾಜ ಸುಧಾರಣೆಗೆ ಹೇತುವಾಗಲಿ
ಹಿಂದೂ ಸಮಾಜದ ಸುಧಾರಕರಲ್ಲಿ ದಲಿತರ ಬಗ್ಗೆ ಹೃದಯದಲ್ಲಿ ಎಷ್ಟೇ ಅನುಕಂಪ ಕಳಕಳಿ ಇದ್ದರೂ ಅದರ ನಿಜವಾದ ಯಾತನೆಯನ್ನು ಅನುಭವಿಸದವರ ಹೃದಯದಲ್ಲಿ ಅವರ ಬಗ್ಗೆ ತೀಕ್ಷ್ಣವಾದ ಮೂಲಭೂತ ಪ್ರಚೋದನೆ ಇರುವುದಿಲ್ಲ. ಎಂಬ ಡಾ| ಅಂಬೇಡ್ಕರರ ಅನಿಸಿಕೆಯಂತೆ ಶ್ರೀ ನಾರಾಯಣಗುರುಗಳ ಕಳಕಳಿ ಬಾಳಿನ ಅನುಭವದಿಂದ ಬಂದಿರುವಂಥದ್ದು. ಅವರ ಚಿಂತನೆ ನಮ್ಮ ದಾರಿದೀಪವಾಗಿ ನಮ್ಮನ್ನು ಮುನ್ನಡೆಸಬೇಕಿತ್ತು. ಮಹಾತ್ಮರ ಚಿಂತನೆಗಳು ಸಮಾಜ ಸುಧಾರಣೆಗೆ ಹೇತುವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ ಎನ್ನುವುದು ಖೇದಕರ.
ಮಹಾತ್ಮರ ಹೆಸರಿನ ದುರುಪಯೋಗ
ಮದ್ಯವನ್ನು ಬಳಸಬೇಡಿ, ಉತ್ಪಾದಿಸಬೇಡಿ ಎಂದು ಸಾರಿದ ನಾರಾಯಣಗುರು ಹೆಸರಲ್ಲಿ ನಾರಾಯಣಗುರು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ತಲೆ ಎತ್ತುತ್ತವೆ. ಗೋವುಗಳನ್ನು ಪರಿಪಾಲಿಸಿ ಮಮತೆಯನ್ನು ತೋರಿ ಎಂದ ಶ್ರೀಕೃಷ್ಣನ ಹೆಸರಿನಲ್ಲಿ ಶ್ರೀ ಕೃಷ್ಣ ಮಟನ್ ಸ್ಟಾಲ್‌ಗಳನ್ನು ತೆರೆಯುತ್ತಿದ್ದೇವೆ. ಏಕಪತ್ನಿ ವ್ರತಸ್ಥರಾಗಿ ನೈತಿಕತೆಯನ್ನು ರೂಢಿಸಿಕೊಳ್ಳಿ ಎಂದ ಶ್ರೀರಾಮನ ಹೆಸರಲ್ಲಿ ಶ್ರೀರಾಮ ಏಡ್ಸ್ ಆ್ಯಂಡ್ ಕೌನ್ಸಿಲಿಂಗ್ ಸೆಂಟರ್‌ನ್ನು ಆರಂಭಿಸುತ್ತಿದ್ದೇವೆ. ಜೀವನ ಸಾರ್ಥಕವಾಗುವುದು ಬಾಹ್ಯ ಸೌಂದರ್ಯದಿಂದಲ್ಲ, ಭಕ್ತಿಯ ಪಾರಮ್ಯದಿಂದ
ಎಂದು ಹೇಳಿದ ಅಕ್ಕಮಹಾದೇವಿಯ ಹೆಸರಲ್ಲಿ ಬ್ಯೂಟಿ ಪಾರ್ಲರ್‌ಗಳನ್ನು ತೆರೆದು ಅಷ್ಟು ಸಾಲದು ಎಂಬಂತೆ ಅವರೆಲ್ಲರಿಗೂ ಗುಡಿ ಕಟ್ಟಿ ಆರತಿ ಬೆಳಗಿ ಪ್ರಸಾದ ಹಂಚಿ, ವಿಭೂತಿ ಹಚ್ಚಿಕೊಂಡು ಅವರ ಚಿಂತನೆಗಳಿಗೆ ತಿಲಾಂಜಲಿ ಇಡುತ್ತಿದ್ದೇವೆ.
ಸರಳತೆಗೆ ಒತ್ತು ಕೊಟ್ಟವರು ನಾರಾಯಣಗುರುಗಳು
ಶ್ರೀ ನಾರಾಯಣಗುರುಗಳು ಸ್ವಯಂಘೋಷಿತ ಸನ್ಯಾಸ ಸ್ವೀಕರಣೆ ಮುನ್ನ ಶಾಕಲವಿರಜಾದಿ ಹೋಮವನ್ನು ಮಾಡಿರಲಿಲ್ಲ. ಪಿತೃಗಳಿಗೆ ತನಗೆ ಶ್ರಾದ್ಧ ಮಾಡಿ ಪಿತೃಕುಲ ಸಂಬಂಧದಿಂದ ಬಿಡುಗಡೆ ಹೊಂದಲಿಲ್ಲ. ನನಗೆ ವಿರಕ್ತಿ ಇದೆ. ಕಾಷಾಯ ವಸ್ತ್ರ ಉಟ್ಟು ಸನ್ಯಾಸ ಸ್ವೀಕರಿಸಿದ್ದೇನೆ ಎಂದು ಮನೆಯಿಂದ ಹೊರಟು ಅಧ್ಯಾತ್ಮದ ಸೋಪಾನವನ್ನು ಏರಿದವರು. ಅರವಿಪುರದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗಲೂ ನದಿಯಲ್ಲಿ ಮುಳುಗಿ ಒಂದು ಕಲ್ಲನ್ನು ತಂದು ಇರಿಸಿ ಕಾಳಾವರ ಶಿವನನ್ನು ಪ್ರತಿಷ್ಠಾಪಿಸಿದ್ದೇನೆ ಎಂದು ಹೇಳಿದರೆ ಹೊರತೂ ಅರ್ಚಕ ವೃಂದದಿಂದ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಿಲ್ಲ. ಆದರೆ ಇಂದು ನಾವು ಶ್ರೀನಾರಾಯಣಗುರುಗಳ ಮೂರ್ತಿ ಪ್ರತಿಷ್ಠಾಪಿಸುವಾಗಲೂ ಪೌರೋಹಿತ್ಯ ವರ್ಗದವರನ್ನು ಕರೆಸಿ ಬ್ರಹ್ಮಕಲಶೋತ್ಸವದಿಂದ ವಿಜೃಂಭಿಸುತ್ತಿದ್ದೇವೆ.
ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ,ಸಂಘಟನೆಯಿಂದ ಬಲಯುತರಾಗಿ
ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಅವರು ಬೋಧಿಸಬಹುದಿತ್ತು. ಆದರೆ ಅವರು ಅದರಲ್ಲಿ ಸಂತೃಪ್ತರಾಗಲಿಲ್ಲ.ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂದು ಹೇಳಿದರು. ವ್ಯಕ್ತಿಯೊಬ್ಬ ಉಣ್ಣುವ ಅನ್ನವನ್ನು, ಉಡುವ ಬಟ್ಟೆಯನ್ನು ತಲೆಗೊಂದು ಸೂರನ್ನು ಕಟ್ಟಿಕೊಳ್ಳಲು ಅರ್ಥಾತ್ ಬದುಕಿನ ಮೂಲ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಸಮರ್ಥನಾದರೆ ಅವನು ಕಲಿತ ವಿದ್ಯೆಯೂ ನಿರರ್ಥಕ. ವಿದ್ಯೆ ಅವನು ಸ್ವತಂತ್ರ ಜೀವನವನ್ನು ಸಾಗಿಸಲು ಶಕ್ತಿ ತುಂಬಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ಸಾವಿರ ಸಂಘಟನೆಗಳನ್ನು ಕಟ್ಟಿಕೊಂಡರೂ ಸಂಘಟನೆಯಿಂದ ಬಲವರ್ಧನೆಯಾಗದಿದ್ದರೆ ಅದು ವ್ಯರ್ಥ ಎನ್ನುವ ಕಲ್ಪನೆ ಅವರಲ್ಲಿತ್ತು.
ಒಬ್ಬನೇ ಸೃಷ್ಟಿಕರ್ತ ಎಂದು ಸಾರಿದರು
ಶ್ರೀ ನಾರಾಯಣಗುರುಗಳಲ್ಲಿ ಆದರ್ಶ ಮತ್ತು ಅನುಷ್ಠಾನಕ್ಕೆ ವ್ಯತ್ಯಾಸವಿಲ್ಲ. ಇಂದಿನ ಮಠಾಧಿಪತಿಗಳಲ್ಲಿ ಆದರ್ಶ ಬೇರೆ ಅನುಷ್ಠಾನ ಬೇರೆಯಾಗಿರುವುದರಿಂದಲೇ ನೈತಿಕ ಅಧಃಪತನವನ್ನು ಕಾಣುತ್ತಿದ್ದೇವೆ. ಬೋಧನೆಯ ಅತಿಸಾರ ಆಚಾರದ ಮಲಬದ್ಧತೆಯನ್ನು ಗಮನಿಸುತ್ತೇವೆ. ಮನುಷ್ಯತ್ವವೇ ಒಂದು ಧರ್ಮವಾಗಿ ಮಾನವ ಕುಲವೇ ಒಂದು ಜಾತಿಯಾಗಿ ಒಂದೇ ದೈವವನ್ನು ಆರಾಧಿಸುವ ಪರಂಪರೆ ರೂಢಿಸಿಗೊಳ್ಳಬೇಕೆಂದು ಅವರು ಬಯಸಿದ್ದರು. ಈ ಪರಿಕಲ್ಪನೆಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ನಟರಾಜಗುರು ಒನ್ ಕೈಂಡ್, ಒನ್ ಫೈಥ್, ಒನ್ ಗೋಲ್ ಎಂದು ಮಾರ್ಪಡಿಸಿದರು. ಇಲ್ಲಿ ಗಾಡ್ ಈಸ್ ಅಲ್ಟಿಮೇಟ್ ಗೋಲ್ ಎಂದು ಅರ್ಥ ಮಾಡಿಕೊಳ್ಳಬೇಕು. ಮನೆಯ
ಯಜಮಾನನನ್ನು ಮನೆಯ ಸದಸ್ಯರು ಸಂಬಂಧಗಳಿಗೆ ಅನುಗುಣವಾಗಿ ಅಪ್ಪ, ದೊಡ್ಡಪ್ಪ, ಮಾವ, ಅಣ್ಣ, ತಮ್ಮ ಎನ್ನುವಂತೆ ಈ ಜಗತ್ತಿನ ಸೃಷ್ಟಿಕರ್ತನನ್ನು ಬ್ರಹ್ಮ, ವಿಷ್ಣು, ಯೇಸು, ಅಲ್ಲಾ ಎಂದು ವಿವಿಧ ಧರ್ಮೀಯರು ಕರೆದರೂ ಅವರೆಲ್ಲ ಸಂಬೋಧಿಸುವುದು ಒಬ್ಬನೇ ಸೃಷ್ಟಿಕರ್ತನನ್ನು.
ಪ್ರಭಾವಿತ ಚಿಂತನೆಗಳ ಹರಿಕಾರರು
ಆಧುನಿಕ ಪದ್ಧತಿಯ ಬೇಸಾಯದಿಂದ ಇಳುವರಿ ಹೆಚ್ಚಿಸಿಕೊಳ್ಳಿ. ದುಂದು ವೆಚ್ಚದ ವಿವಾಹಗಳನ್ನು ಪ್ರೋತ್ಸಾಹಿಸಬೇಡಿ. ಪ್ರಾಣಿ ಹಿಂಸೆಯನ್ನು ತ್ಯಜಿಸಿ, ಸಾತ್ವಿಕ ಪೂಜೆಯನ್ನು ಅನುಷ್ಠಾನಿಸಿ, ಭಿನ್ನಾಭಿಪ್ರಾಯಗಳನ್ನು ತಮ್ಮೊಳಗೆ ಪರಿಹರಿಸಿಕೊಳ್ಳಿ. ಕೋರ್ಟು ಕಟ್ಟೆ ಹತ್ತಬೇಡಿ. ಆರಾಧನ ಕೇಂದ್ರಗಳನ್ನು ಉತ್ಪಾದನ ಕೇಂದ್ರಗಳಾಗಿ
ಪರಿವರ್ತಿಸಿಕೊಳ್ಳಿ. ವೈಜ್ಞಾನಿಕ ತಳಹದಿಯಲ್ಲಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಶ್ರೀ ನಾರಾಯಣ ಗುರುಗಳ ಚಿಂತನೆಗಳಿಂದ ಪ್ರೇರಿತರಾದ ರವೀಂದ್ರನಾಥ ಠಾಗೋರ್, ಗಾಂಧೀಜಿಯವರು ಅವರನ್ನು ಭೇಟಿಯಾಗಿ ಚರ್ಚಿಸಿದರೆಂದರೆ ಆ ಚಿಂತನೆಗಳು ಎಷ್ಟು ಪ್ರಭಾವಿತ ಎನ್ನುವುದನ್ನು ಪರಿಕಲ್ಪಿಸಬಹುದು.
ಪ್ರಸ್ತುತ ಕೇರಳ ತೆಂಗಿನನಾಡಿನ ಉತ್ಪಾದನೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನವನ್ನು ಅಲಂಕರಿಸುವಲ್ಲಿ ಶ್ರೀ ನಾರಾಯಣಗುರುಗಳ ದೂರದೃಷ್ಟಿತ್ವವನ್ನು ನಾವು ಸ್ಮರಿಸಿಕೊಳ್ಳಬೇಕು. ಶ್ರೀ ನಾರಾಯಣಗುರುಗಳ ಒಂದೊಂದೇ
ಜನ್ಮದಿನಾಚರಣೆಯನ್ನು ಆಚರಿಸುತ್ತಲೂ ನಾವು ಅವರ ಜನ್ಮದಿನದಿಂದ ದೂರವಾಗುತ್ತೇವೆ. ಆದರೆ ಹಾಗೆ ದೂರವಾಗುವ ನಾವು ಅವರ ತತ್ವ ಚಿಂತನೆಗಳಿಗೆ ಹತ್ತಿರವಾಗಬೇಕು. ಅವರ ಮೂರ್ತಿ ಆರಾಧನೆಯಿಂದಲೇ ತೃಪ್ತರಾಗದೆ ತತ್ವದ, ಚಿಂತನೆಯ ಆರಾಧನೆಯೂ ಆಗಬೇಕು. ಹಾಗಾದಾಗ ಮಾತ್ರ ಈ ಆಚರಣೆಗೆ ಅರ್ಥ ಬರುತ್ತದೆ.
ಜನಾರ್ದನ ತೋನ್ಸೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.