ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…
ಸಂಗೀತ ಕಛೇರಿಗಳಲ್ಲಿ ಕನ್ನಡ ಕವಿ, ದಾಸರು, ವಚನ ಶ್ರೇಷ್ಠರ ಕೃತಿ ವಿಜೃಂಭಿಸಲಿ ; ಪ್ರಾಥಮಿಕ ಶಾಲೆಗಳಲ್ಲಿ ಸಂಗೀತ ಕಲಿಯುವ ಪ್ರಯತ್ನ ಅಗತ್ಯ
Team Udayavani, Nov 13, 2024, 6:10 AM IST
ಕಳೆದ 50 ವರ್ಷಗಳಿಂದ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಲೇ ಇದ್ದೇವೆ. ಈ ಹಿನ್ನೆಲೆಯಲ್ಲೇ, ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಕನ್ನಡದ ಬಳಕೆ ಆಗ ಹೇಗಿತ್ತು, ಈಗ ಹೇಗಿದೆ, ಕನ್ನಡ ಕೃತಿಗಳನ್ನು ದೊಡ್ಡ ವೇದಿಕೆಗಳಲ್ಲಿ ಹಾಡುವುದಕ್ಕೆ ಇತಿಮಿತಿಗಳು ಇವೆಯೋ, ಇದೆ ಅನ್ನುವುದಾದರೆ ಅದನ್ನು ಮೀರುವ ದಾರಿ ಏನು, ಎಂತು? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕನ್ನಡದ ಹಾಡುಗಳು ಹೆಚ್ಚಾಗಿ ಕೇಳಿಬರಬೇಕೆಂದರೆ ಏನು ಮಾಡಬೇಕು? – ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ…
ಒಂದು ಕಾಲವಿತ್ತು, ಬೇರೆಡೆಯಿಂದ ಬಂದ ಕಲಾವಿದರು ಒಂದೂ ಕನ್ನಡ ಕೃತಿಯನ್ನು ಹಾಡದೇ ಕಛೇರಿ ಮುಗಿಸುತ್ತಿದ್ದರು. ಅಬ್ಬಬ್ಟಾ ಎಂದರೆ, ಯಾರ ಬಲವಂತಕ್ಕೋ, ಯಾರೋ ಚೀಟಿ ಕಳಿಸಿ ಕೇಳಿದ್ದಕ್ಕೋ ಕೊನೆಯಲ್ಲಿ ಒಂದು ತುಣುಕು ಹಾಡಿ “ಸೈ’ ಎನಿಸಿಕೊಳ್ಳುತ್ತಿದ್ದರು. ಇಂಥವು ಹೆಚ್ಚಾಗಿ ನಡೆಯುತ್ತಿದ್ದುದೇ ರಾಮೋತ್ಸವ ಸಂದರ್ಭಗಳಲ್ಲಿ. ಶೇಷಾದ್ರಿಪುರಂ ಕಾಲೇಜಿನ ಆವರಣ, ಕೋಟೆ ಪ್ರೌಢಶಾಲೆ ಆವರಣ ಅಲ್ಲದೆ ಬೇರೆಡೆಗಳಲ್ಲೂ ಸಂಗೀತ ಉತ್ಸವಗಳು ಆಯೋಜನೆ ಆಗುತ್ತಿದ್ದರೂ ಬೆಂಗಳೂರಿನ ಇವೆರಡು ಸ್ಥಳಗಳು ರಾಜ್ಯಕ್ಕಷ್ಟೇ ಅಲ್ಲ, ರಾಷ್ಟ್ರಕ್ಕೂ ಚಿರಪರಿಚಿತ. ನಮ್ಮ ಸ್ಥಳೀಯ ಕಲಾವಿದರನ್ನು ಬಿಟ್ಟರೆ ಉಳಿದವರೆಲ್ಲ ಮದ್ರಾಸಿನವರೇ! ಅಲ್ಪಸ್ವಲ್ಪ ಆಂಧ್ರ ದವರು. ಆದರೆ ಅವರೆಲ್ಲ ಪ್ರಸಿದ್ಧ ವಿದ್ವಾಂಸರೇ. ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ನಡೆಯುತ್ತಿದ್ದ ರಾಮೋತ್ಸವ, ವಿ.ವಿ. ಮೊಹಲ್ಲಾ 8ನೇ ಅಡ್ಡ ರಸ್ತೆಯಲ್ಲಿ ನಡೆಯುವ ಗಣೇಶೋತ್ಸವ, ಬೆಂಗಳೂರು ಗಣೇಶೋತ್ಸವ, ಗಾಯನ ಸಮಾಜ, ಗಾನ ಕಲಾ ಪರಿಷತ್ತು ಮತ್ತಿತರ ಕಡೆಗಳಲ್ಲಿ ಅಸಂಖ್ಯ ಸಂಗೀತ ವೇದಿಕೆಗಳು ಕಲಾವಿದರ ವಿದ್ವತ್ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದ್ದವು.
ಸೊಗಸಾದ ಗಾಯನ, ತಪ್ಪು ಉಚ್ಚಾರಣೆ
ಶ್ರೋತೃಗಳನ್ನು ಅಪಾರ ಸಂಖ್ಯೆಯಲ್ಲಿ ಸೆಳೆಯಲು ಆಯೋಜಕರಿಗಿದ್ದ ಒಂದೇ ದಾರಿ- ಅದು ಬೇರೆ ರಾಜ್ಯದ ಖ್ಯಾತರನ್ನು ಆಹ್ವಾನಿಸುವುದು. ಕರ್ನಾಟಕದವರಿಗಿಂತ ಮದ್ರಾಸಿನವರು ಮೊದಲಿನಿಂದಲೂ ಮೇಲು. ಅಲ್ಲಿನವರ ಸಾಧನೆ ಅಸಾಮಾನ್ಯವಾದುದು. ತಮ್ಮ ಸ್ವರ ಪ್ರಸ್ತಾರ, ರಾಗ ವಿನ್ಯಾಸ, ಲಯ ಬಿಕ್ಕಟ್ಟಿನಿಂದ ಅವರು ಎಂಥವರನ್ನೂ ಆಕರ್ಷಿಸಬಲ್ಲರು ಎಂಬ ಬಲವಾದ ನಂಬಿಕೆ. ಅವರೆಲ್ಲ ಅದ್ಭುತವಾಗಿ ಹಾಡುತ್ತಿದ್ದರೆಂಬುದು ನಿಜ. ಆದರೂ, ನಮ್ಮ ರಾಜ್ಯಕ್ಕೆ ಬಂದು ಇಲ್ಲಿನ ಭಾಷೆಯಲ್ಲಿ ರಚನೆಗೊಂಡಿರುವ ಅನೇಕಾನೇಕ ಕೃತಿ ರತ್ನಗಳನ್ನು ಹಾಡುತ್ತಲೇ ಇರಲಿಲ್ಲ. ಹಾಡಿದರೂ ಒಂದೋ ಎರಡೋ- ಅವು ಸಹ ತಪ್ಪು ತಪ್ಪು ಉಚ್ಚಾರಣೆ ಬೇರೆ.
ಹಿಂಸೆಯಾಗುವಷ್ಟು ಸಾಹಿತ್ಯದ ಕೊಲೆ. ಆದರೆ ದೊಡ್ಡ ವಿದ್ವಾಂಸರು! ಯಾರಿಗೂ ಹೇಳಲಿಕ್ಕೆ ಧೈರ್ಯ ಸಾಲದು! ಇವೆಲ್ಲ ಒಂದು ಕಾಲದ್ದು.
ಕಲಾವಿದರಿಗೆ ಇತಿಮಿತಿಗಳಿಲ್ಲ
ಬಹಳ ಹಿಂದೆ ಕೋಟೆ ಆವರಣದಲ್ಲಿ ನಡೆದ ರಾಮೋತ್ಸವಕ್ಕೆ ಜಾಕ್ ಬಿ. ಹಿನ್ನಿಗ್ಸ್ ಅವರು ಬಂದಿದ್ದರು. ಆಗ ನಾನೂ ಅಲ್ಲಿದ್ದೆ. ಆ ಪಾಶ್ಚಾತ್ಯ ಕಲಾವಿದರ ಬಾಯಿಂದ ಹೊರಹೊಮ್ಮಿದ ವ್ಯಾಸರಾಯರ ರಚನೆ “ಕೃಷ್ಣಾ ನೀ ಬೇಗನೆ ಬಾರೋ’ ಎಂದೂ ಮರೆಯುವಂತಿಲ್ಲ. ಆಮೇಲೆ ಅವರು ಹಾಡಿದ್ದು “ಶಿವ ಶಿವ ಶಿವ ಎನಬಾರದೆ’ ಎಂಬ ತ್ಯಾಗರಾಜರ ಕೃತಿಯನ್ನು. ಈಗ ಆ ಹಾಡು ಪ್ರಪಂಚದಾದ್ಯಂತ ಹಬ್ಬಿದೆ. ಇದನ್ನು ಹಾಡದ ಕಲಾವಿದರೇ ಇಲ್ಲ. ಅಂತೆಯೇ ಎಂ.ಎಲ್. ವಸಂತ ಕುಮಾರಿ ಅವರ ಕಂಠದಲ್ಲಿ ಮೂಡಿಬಂದ “ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ’, ಬಿ.ಎಸ್. ರಾಜಯ್ಯಂಗಾರ್ ಹಾಡಿದ “ಆಡಿಸಿದಳೆಶೋಧೆ ಜಗದೋದ್ಧಾರನ’, ಟಿ.ಆರ್. ಸುಬ್ರಹ್ಮಣ್ಯ ಹಾಡಿದ “ತಂಬೂರಿ ಮೀಟಿದವ ಭವಾಬ್ದಿ ದಾಟಿದವ’, ಬಾಲಮುರಳಿ ಕೃಷ್ಣ ಅವರು ಹಾಡಿದ ಅಸಂಖ್ಯ ಕನ್ನಡ ಕೃತಿಗಳು ಇಂದಿಗೂ ಸಂಗೀತ ವೇದಿಕೆಗಳಲ್ಲಿ ಕೇಳಿಬರುತ್ತಿವೆ.
ಕಲಾವಿದರಿಗೆ ಇತಿಮಿತಿಗಳೇನೂ ಇಲ್ಲ. ಸಂಗೀತ ಅಂದರೆ, ತ್ಯಾಗರಾಜ ದೀಕ್ಷಿತರು, ಸ್ವಾತಿ ತಿರುನಾಳ, ಆನಂತರ ವಾಸುದೇವಾಚಾರ್ (ಇವರು ಕನ್ನಡದವರಾದರೂ ತೆಲುಗಿನಲ್ಲೇ ಹೆಚ್ಚು ಕೀರ್ತನೆಗಳನ್ನು ರಚಿಸಿದ ವಾಗ್ಗೇಯಕಾರರು), ಮುತ್ತಯ್ಯ ಭಾಗವತರು, ಇವರೆಲ್ಲ ವಿಜೃಂಭಿಸಿದ ಮೇಲೆಯೇ ಕನಕ-ಪುರಂದರ-ವಿಜಯದಾಸರಿಗೆ ಅವಕಾಶ. ಈ ಪದ್ಧತಿಯಿಂದ ನಾವಿನ್ನೂ ಹೊರಬಂದಿಲ್ಲವೆನ್ನಿ.
ಕನ್ನಡ ಸಂಗೀತಕ್ಕೆ ಮೈಲಿಗೆಯೇ?
ಹಿಂದೂಸ್ಥಾನಿ ಸಂಗೀತದಲ್ಲಿ ಇಂಥ ಸಂದಿಗ್ಧವೇ ಇಲ್ಲ. ನಮ್ಮ ಕನ್ನಡ ಕಲಾವಿದರು ವಚನಗಳನ್ನು, ದಾಸರ ಪದಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಅವು ಹಿಂದೂಸ್ಥಾನಿ ಶೈಲಿಗೆ ಸೊಗಸಾಗಿ ಹೊಂದುತ್ತವೆ. ಅವನ್ನು ಕೇಳಿಯೇ ಆನಂದಿಸಬೇಕು. ಪಂ. ಭೀಮಸೇನ್ ಜೋಶಿ ಅವರ ಗಾಯನದಲ್ಲಿ “ಕೈಲಾಸವಾಸ ಗೌರೀಶ ಈಶ’, “ಭಾಗ್ಯದಾ ಲಕ್ಷ್ಮೀ ಬಾರಮ್ಮ’, “ತುಂಗಾತೀರದಿ ನಿಂತ ಸುಯತಿವರ’, ಪಂ. ವೆಂಕಟೇಶ ಕುಮಾರ್ ಅವರ ಗಾಯನದಲ್ಲಿ ಕನಕದಾಸರ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’ ಹೀಗೆ ಇಂಥಾ ನೂರಾರು ಉದಾಹರಣೆಗಳನ್ನು ಕೊಡಬಹುದು. ನಮ್ಮ ತಾಯಿ ಭಾಷೆಯ ಮೇಲೆ ಅಭಿಮಾನ ಇರಬೇಕು. ಹೋದೆಡೆಯಲ್ಲಿ ಕನ್ನಡದ ಕಂಪನ್ನು ಹೊರ ಸೂಸಬೇಕು. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು. ಕನ್ನಡ ಸಂಗೀತಕ್ಕೆ ಮೈಲಿಗೆಯೇ! ಕಛೇರಿಗಳಲ್ಲಿ ಕನ್ನಡ ಕವಿಗಳು, ದಾಸರು, ವಚನ ಶ್ರೇಷ್ಠರು ವಿಜೃಂಭಿಸಬೇಕಲ್ಲವೆ? ಕನ್ನಡ ಭಾಷೆಯ ಪ್ರಸ್ತುತಿಯಲ್ಲಾಗುವ ದೋಷಗಳು ಬೇರಾವ ಭಾಷೆಗಳಲ್ಲೂ ಆಗದೆಂದೇ ನನ್ನ ಕೇಳ್ಮೆ, ಅನುಭವದ ಮಾತು. ಅದೆಷ್ಟು ಅಪಭ್ರಂಶಗಳು, ತಪ್ಪು ಉಚ್ಚಾರಣೆಗಳು ಬೇರೆ ಭಾಷೆಯವರ್ಯಾಕೆ, ನಮ್ಮವರೇ ಮಾಡುತ್ತಾರೆ.
ಕನ್ನಡದ ಹಾಡುಗಳು ಕೇಳಿಬರಲಿ
ವಿಪರ್ಯಾಸವೆಂದರೆ, ಪೂರ್ಣ ಪ್ರಮಾಣದ ಅಂದರೆ, ಸುಮಾರು ಮೂರು ಗಂಟೆಗಳ ಕಾಲದ ಕಛೇರಿಯಲ್ಲಿ ಎಷ್ಟೋ ಬಾರಿ ನಮ್ಮವರೇ ಕನ್ನಡ ಕೃತಿಗಳನ್ನು ಹಾಡದಿರುವುದು, ಹಾಡಿದರೂ ಮೊಸರಿಗೆ ಕೊಸರು ಎನ್ನುವಂತೆ ಒಂದೋ ಎರಡೋ ದೇವರನಾಮ ಅದರಲ್ಲೂ ಪಲ್ಲವಿ, ಅನುಪಲ್ಲವಿ, ಚರಣ! ಅದರಲ್ಲೂ ಜುಗ್ಗುತನ. ಒಂದೇ ನುಡಿ ಹಾಡಿ ಮುಗಿಸುವುದು! ಸಂಗೀತ ಕಛೇರಿಗಳೆಂದ ಮೇಲೆ ನಾವು ನೆನೆಯಬೇಕಾದ ವಿದ್ವಾಂಸರು ಎ. ಸುಬ್ಬರಾವ್. ಅವರ ಕಛೇರಿಯಲ್ಲಿ ಕನ್ನಡ ಕೃತಿಗಳದ್ದೇ ಕಾರುಬಾರು. ಅದೆಷ್ಟು ದಾಸರ ಪದ, ಉಗಾಭೋಗಗಳನ್ನು ಹಾಡುತ್ತಿದ್ದರು. ಸಾಹಿತ್ಯ ಶುದ್ಧಿ, ರಾಗ ಲಯ ಖಚಿತ. ನೂರಾರು ದಾಸರು, ಸಾವಿರಾರು ಕೀರ್ತನೆಗಳು, ನೂರಾರು ವಚನಕಾರರು, ಸಾವಿರಾರು ವಚನಗಳು ಹೀಗಿರುವಾಗ ಕನ್ನಡ ತನವನ್ನೇ ಮೆರೆಯುವ ಹಾಗೆ ಕನ್ನಡಮಯ ವಾತಾವರಣ ಸೃಷ್ಟಿಸಬಹುದು. ಆದರೆ, ಇಲ್ಲಿ ದೊಡ್ಡ ತೊಡಕಿದೆ. ಏನೆಂದರೆ, ತ್ಯಾಗರಾಜ ದೀಕ್ಷಿತರು, ಸ್ವಾತಿ ತಿರುನಾಳ್, ಮೈಸೂರು ವಾಸುದೇವಾಚಾರ್ಯ ಹಾಗೂ ಮುತ್ತಯ್ಯ ಭಾಗವತರೇ ಮೊದಲಾದ ವಾಗ್ಗೇಯಕಾರರ ಕೃತಿಗಳಿಗೆ ರಾಗ-ತಾಳ ಸಿದ್ಧಪಡಿಸಿದ ಸ್ವರ ಪ್ರಸ್ತಾರವಿದೆ. ಯಾವ ಕಲಾವಿದರೂ ಕೂಡ ವಾಗ್ಗೇಯಕಾರರ ರಚನೆಗಳನ್ನು ತನಗಿಷ್ಟ ಬಂದ ರಾಗ- ತಾಳದಲ್ಲಿ ಹಾಡುವುದಿಲ್ಲ. ಏಕೆಂದರೆ ಅಷ್ಟು ಬಿಗಿಯಾಗಿದೆ ಬುನಾದಿ. ತುಂಬಾ ಪ್ರಸಿದ್ಧವಾಗಿರುವ ಕೃತಿಗಳ ಹಾಡುವಿಕೆಯನ್ನು ಬದಲಿಸುವ ಗೋಜಿಗೆ ಹೋಗುವುದಿಲ್ಲ. ಉದಾಹರಣೆಗೆ: ಭಾಗ್ಯದ ಲಕ್ಷ್ಮೀ ಬಾರಮ್ಮ, ಕೃಷ್ಣ ನೀ ಬೇಗನೆ ಬಾರೊ, ಆಡಿಸಿದಳೆಶೋಧೆ, ತೊರೆದು ಜೀವಿಸಬಹುದೆ, ಅಂಥವು. ಅಕಸ್ಮಾತ್ ಯಾವೊಬ್ಬ ಕಲಾವಿದನಾದರೂ ರಾಗ, ತಾಳ ಬದಲಿಸಿ ಹಾಡುವ ಪ್ರಯತ್ನ ಮಾಡಿದರೆ ಜನರಂತೂ ಆಕ್ಷೇಪಿಸದೆ ಇರುವುದಿಲ್ಲ. ಕನ್ನಡದಲ್ಲಿ ಲಭ್ಯವಿರುವ ಕಾವ್ಯಗಳು, ಹಾಡುಗಳು, ಹಾಡು ಹಬ್ಬಗಳು, ಕವಿತೆಗಳು, ಪದಗಳು, ವಚನಗಳು, ಅಸಂಖ್ಯ. ನಮ್ಮ ಭಾಷೆಯ ಸಾಹಿತ್ಯ ಕೃತಿಗಳು ಮೌಲಿಕವಾದವುಗಳು. ಸಂಸ್ಕೃತದಲ್ಲಿ ಇದ್ದ ಎಲ್ಲವನ್ನೂ ಕನ್ನಡ ಕವಿಗಳು ಜನ ಸಾಮಾನ್ಯರಿಗೆಂದೇ ಕನ್ನಡಗೊಳಿಸಿದ್ದಾರೆ. ಸಂದರ್ಭ ಹೀಗಿರುವಾಗ ಸಂಗೀತ ವೇದಿಕೆಗಳಲ್ಲಿ ಕನ್ನಡ ಹಾಡುಗಳೇ ಏಕೆ ವಿಜೃಂಭಿಸಬಾರದು?
ಆಗಬೇಕಾದ್ದೇನು?
1.ಸಂಗೀತ ಪರಂಪರೆಯಲ್ಲಿ ಹಿಂದೆ ಇದ್ದ ಗುರು ಪರಂಪರೆಯನ್ನು ಈಗಲೂ ಮುಂದುವರೆಸಬೇಕು.
2.ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಸಂಗೀತ ಕಲಿಸುವ ಏರ್ಪಾಡು ಸರಕಾರದಿಂದ ಆಗಬೇಕು.
3.ಶಾಲಾ ಪಠ್ಯಗಳಲ್ಲಿ ಕೀರ್ತನೆ, ಸಂಗೀತದ ಕೃತಿ ಸೇರಿಸಬೇಕು. ಇದನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವನ್ನಾಗಿ ಮಾಡಬಹುದು
4.ಸಂಗೀತವನ್ನು ಪ್ರಚಾರ ಮಾಡುವ, ಕಲಾವಿದರಿಗೆ ಪೂರಕವಾಗಿರುವ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ, ಸಮ್ಮಾನ ದೊರೆಯಬೇಕು.
5.ಸಾಹಿತ್ಯದ ಪಾಠವನ್ನು, ಸಂಗೀತದಲ್ಲೂ ಅಳ ವಡಿಸಬೇಕು. ಅದಕ್ಕಾಗಿ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ಅಕಾಡೆಮಿಗಳು ನಡೆಸಬೇಕು.
-ಎಂ. ಆರ್. ಸತ್ಯನಾರಾಯಣ,
ಗಮಕ ವಿದ್ವಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.