ಗುಣಮಟ್ಟದ ಆರೋಗ್ಯ ಸೇವೆ ಜನರ ಹಕ್ಕಾಗಲಿ
Team Udayavani, Aug 27, 2021, 6:10 AM IST
ನಮ್ಮ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜಾಲವು ಪ್ರಪಂಚದಲ್ಲಿಯೇ ಉತ್ತಮ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಇದೆ. ದೇಶಾದ್ಯಂತ ಪ್ರತೀ ಐದು ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯ ಉಪಕೇಂದ್ರ, ಮೂವತ್ತು ಸಾವಿರ ಜನಸಂಖ್ಯೆಗೆ ವೈದ್ಯರಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಲಕ್ಷ ಜನಸಂಖ್ಯೆಗೆ ತಜ್ಞ ವೈದ್ಯರಿರುವ, ಒಳರೋಗಿ ಚಿಕಿತ್ಸೆ ವ್ಯವಸ್ಥೆಗಳಿರುವ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಅಲ್ಲಲ್ಲಿ ಅಗತ್ಯಗಳಿಗೆ ಅನುಸಾರವಾಗಿ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಒಳಗೊಂಡಿದೆ. ಇದರೊಂದಿಗೆ ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್ ಹೋಮ್‌ಗಳು, ಆಸ್ಪತ್ರೆಗಳು ಕೂಡ ಆರೋಗ್ಯ ಸೇವೆ ನೀಡುತ್ತಿವೆ.
ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಅದರ ಅಲೆಗಳಿಂದಾಗಿ ರಾಜ್ಯದ, ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ರೋಗಿಗಳಿಗೆ ಸೇವೆ ನೀಡುವಲ್ಲಿ ಹರಸಾಹಸ ಪಡುವಂತಾಗಿದೆ. ಕಳೆದ ದಶಕಗಳಲ್ಲಿ ಆರೋಗ್ಯ ವ್ಯವಸ್ಥೆಗೆ ಮೂಲ ಸೌಕರ್ಯ ಒದಗಿಸುವ ಗಂಭೀರ ಪ್ರಯತ್ನಗಳು ನಡೆದಿಲ್ಲ. ಈಗಿನ ಪರಿಸ್ಥಿತಿ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಗಂಭೀರ ಚಿಂತನೆ ನಡೆಸುವಂತೆ ಮಾಡಿದೆ. ಆಸ್ಪತ್ರೆಗಳ ಜಾಲ ಒಂದೇ ಸಾಲದು; ಅಲ್ಲಿ ಮೂಲ ಸೌಕರ್ಯಗಳಾದ ಪರಿಕರಗಳು, ಔಷಧಗಳು ಮತ್ತು ಪರಿಣತ ಸಿಬಂದಿಯ ವ್ಯವಸ್ಥೆ ಆಗಬೇಕಾಗಿದೆ. ಆಗ ಮಾತ್ರ ಅಲ್ಲಿನ ಸಿಬಂದಿಯ ಕಾರ್ಯದಕ್ಷತೆ ಹೆಚ್ಚಿ ಉತ್ತಮ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುವುದು. ಸ್ವಾತಂತ್ರ್ಯದ ಅನಂತರ ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ದೇಶದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ತೆಗೆದುಕೊಂಡ ಕ್ರಮಗಳೇನು? ಮತ್ತು ದೇಶದಲ್ಲಿರುವ ವೈದ್ಯಕೀಯ ಮೂಲಸೌಕರ್ಯಗಳ ಆಯವ್ಯಯ ಹಾಗೂ ತುರ್ತು ಸಂದರ್ಭಗಳಲ್ಲಿ ಅವುಗಳ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಯಬೇಕಾಗಿದೆ.
ಹೆಲ್ತ್ ಟೂರಿಸಂಗೆ ಉತ್ತೇಜನ ಸಿಗಲಿ:
ಸ್ವಾತಂತ್ರಾéನಂತರ ದೇಶದ ಆರೋಗ್ಯ ಸೂಚ್ಯಂಕಗಳಾದ ತಾಯಿ, ಶಿಶುಮರಣ ಪ್ರಮಾಣ, ಕರಡು ಮರಣ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಆದರೂ ಮುಂದುವರಿದ ಪಾಶ್ಚಾತ್ಯ ದೇಶಗಳ ಸೂಚ್ಯಂಕಗಳಿಗೆ ಸರಿಸಮವಾಗಲು ಹಾಗೂ ಗುಣಮಟ್ಟದ ತುರ್ತು ಚಿಕಿತ್ಸಾ ಲಭ್ಯತೆಗೆ ಪ್ರಸ್ತುತ ಗತಿಯಲ್ಲಿ ಸಾಗಿದರೆ ದಶಕಗಳೇ ಬೇಕಾಗಬಹುದು. ದೇಶದಲ್ಲಿ ಖಾಸಗಿ ವೈದ್ಯರು, ನರ್ಸಿಂಗ್ ಹೋಮ್‌ಗಳು, ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಆರೋಗ್ಯ ಸೇವೆಯಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿವೆ. ದೇಶದ ಹಲವು ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಆಸ್ಪತ್ರೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುತ್ತಿವೆ. ಸರಕಾರಗಳು ಖಾಸಗಿ ಆಸ್ಪತ್ರೆಗಳ ಬೆಳವಣಿಗೆಗೆ ಸಹಕಾರ ಉತ್ತೇಜನ ನೀಡಿ ವಿದೇಶಿಯರನ್ನೂ ಕೂಡ ಆರೋಗ್ಯ ಸೇವೆಗಾಗಿ ಸೆಳೆಯುವ ಕೇಂದ್ರಗಳಾಗಿ ಮಾರ್ಪಡಿಸಬೇಕಾಗಿದೆ. ವಿಶ್ವ ಭೂಪಟದಲ್ಲಿ ಭಾರತವು ಹೆಲ್ತ್ ಟೂರಿಸಂನ ಕೇಂದ್ರವಾಗಿ ಪರಿವರ್ತನೆ ಹೊಂದಲು ಎಲ್ಲ ಕ್ರಮಗಳ(ತ್ವರಿತ, ಸರಳೀಕೃತ ವೀಸಾ ನೀಡುವಿಕೆ ಮತ್ತಿತರ)ನ್ನು ಸರಕಾರ ಕೈಗೊಳ್ಳಬೇಕು. ದೇಶೀಯ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳಿಗೆ ಕೂಡ ಅದರಲ್ಲಿ ಆದ್ಯತೆ ನೀಡಬೇಕು.
ಆರೋಗ್ಯ ಕಾಯ್ದೆ ಜಾರಿ ಅಗತ್ಯ:
ಸರಕಾರಿ ಆರೋಗ್ಯ ವ್ಯವಸ್ಥೆಗಳನ್ನು ಅತ್ಯಂತ ಶೀಘ್ರವಾಗಿ ಹಾಗೂ ವ್ಯಾಪಕವಾಗಿ, ಸ್ಪರ್ಧಾತ್ಮಕವಾಗಿ ಬೆಳೆಸಲು ಸರಕಾರವು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಜನರಿಗೆ ಅತೀ ಸಮೀಪವಾಗಿರುವ ತಜ್ಞ ವೈದ್ಯರು, ಒಳರೋಗಿ ಚಿಕಿತ್ಸಾ ವ್ಯವಸ್ಥೆಯಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕಾಗಿದೆ. ಇಲ್ಲಿ ತುರ್ತು ಚಿಕಿತ್ಸೆ, ಒಳರೋಗಿ ಚಿಕಿತ್ಸೆ, ಹೆರಿಗೆ ವ್ಯವಸ್ಥೆಗಳ ಗುಣಮಟ್ಟ ವೃದ್ಧಿಯಾದರೆ ದೇಶಾದ್ಯಂತ ಆರೋಗ್ಯ ಸೂಚ್ಯಂಕಗಳು ತನ್ನಿಂದ ತಾನೇ ಉತ್ತಮಗೊಳ್ಳಲಿವೆ. ಪ್ರಸ್ತುತ ದೇಶದಲ್ಲಿ ಇರುವ 5,624 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ. 81ರಷ್ಟು ತಜ್ಞ ವೈದ್ಯರ ಕೊರತೆಯಿದೆ. ಇದೇ ತೆರನಾದ ಸಂಪನ್ಮೂಲ ಕೊರತೆಗಳನ್ನು ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಸರಿಪಡಿಸಬೇಕಾಗಿದೆ. ಆರೋಗ್ಯ ಸೇವೆಯನ್ನು ದೇಶದಲ್ಲಿ ಮೂಲಭೂತ ಹಕ್ಕಾಗಿ ಮಾರ್ಪಡಿಸಬೇಕು. ಎಲ್ಲ ಜನಸಾಮಾನ್ಯರಿಗೂ ಗುಣಮಟ್ಟದ ಆರೋಗ್ಯ ಸೇವೆಗಾಗಿ ಹೊಸ ಆರೋಗ್ಯ ಸೇವೆ ಕಾಯ್ದೆ ತರಬೇಕಾಗಿದೆ. ದೇಶದ ರಕ್ಷಣೆಗೆ ಇರುವಷ್ಟು ಮಹತ್ವವನ್ನು ದೇಶವಾಸಿಗಳ ಆರೋಗ್ಯ ರಕ್ಷಣೆಗೆ ಕೂಡ ನೀಡಬೇಕಾಗಿದೆ.
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಪಟ್ಟ ಪ್ರಭಾವಿ ಅಂಶಗಳು ಆರೋಗ್ಯ ಕ್ಷೇತ್ರದಿಂದ ಹೊರಗೆ ಕೂಡ ಇವೆ. ಕೇವಲ ಆಸ್ಪತ್ರೆಗಳು ಸಿಬಂದಿ, ಪರಿಕರಗಳಿಂದ ಮಾತ್ರ ಜನರ ಆರೋಗ್ಯ ಸುಧಾರಣೆ ಸಂಪೂರ್ಣವಾಗಿ ಸಾಧ್ಯವಿಲ್ಲ. ಅದರೊಂದಿಗೆ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಜನರು ವಾಸಿಸುವ ಮನೆ, ಪರಿಸರ (ಕುಡಿಯುವ ನೀರು, ಸೇವಿಸುವ ಗಾಳಿ)ದ ಗುಣಮಟ್ಟ ಉತ್ತಮಗೊಂಡರೆ ಜನಸಾಮಾನ್ಯರು ಆರೋಗ್ಯ ಸೇವೆಯನ್ನು ಖರೀದಿಸಲು ಕೂಡ ಶಕ್ತರಾಗುತ್ತಾರೆ. ತನ್ಮೂಲಕ ಆರೋಗ್ಯ ಸೂಚ್ಯಂಕಗಳು ಶೀಘ್ರವಾಗಿ ಅಂತಾರಾಷ್ಟ್ರೀಯ ಸೂಚ್ಯಂಕಗಳಿಗೆ ಸರಿಸಮವಾಗುವುದಲ್ಲದೆ ಹಳ್ಳಿಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಆರೋಗ್ಯದ ಗುಣಮಟ್ಟ ಬದಲಾಗುವುದನ್ನು ನೋಡಬಹುದು. ಈ ನಿಟ್ಟಿನಲ್ಲಿ ಮೆಟ್ರಿಕ್ ವರೆಗೆ ಕಡ್ಡಾಯ/ಉಚಿತ ವಿದ್ಯಾಭ್ಯಾಸ, ಅನಂತರ ಉನ್ನತ ವ್ಯಾಸಂಗಕ್ಕೆ ಹೋಗಲು ಅನಾನುಕೂಲ ಇರುವವರಿಗೆ ಜಿಲ್ಲಾಮಟ್ಟದಲ್ಲಿ ಉಚಿತ ಕೌಶಲ ತರಬೇತಿ ನೀಡಿ ಎಲ್ಲರಿಗೂ ಉದ್ಯೋಗ ಖಾತರಿಯಾಗಬೇಕು. ಆಗ ಜನರು ಉತ್ತಮ ಗುಣಮಟ್ಟದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುವುದು.
ಇನ್ನು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ಮಹತ್ತರ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದಲ್ಲಿ ಸದ್ಯ ದೇಶದ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಅಷ್ಟು ಮಾತ್ರವಲ್ಲದೆ ವಿದೇಶಗಳಲ್ಲಿ ಈಗಾಗಲೇ ಸಂಪೂರ್ಣ ತಂತ್ರಜ್ಞಾನಾಧಾರಿತ ಚಿಕಿತ್ಸಾ ವ್ಯವಸ್ಥೆ ಜಾರಿಗೆ ಬಂದಿದ್ದು ಇವುಗಳ ಸಾಧಕ-ಬಾಧಕಗಳ ಅಧ್ಯಯನ ನಡೆಸಿ ದೇಶದಲ್ಲೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಲಭಿಸಲು ಸಾಧ್ಯ.
ಡಾ| ಅಶ್ವಿನಿ ಕುಮಾರ್ ಗೋಪಾಡಿ
ಅಡಿಶನಲ್ ಪ್ರೊಫೆಸರ್,
ಸಮುದಾಯ ಆರೋಗ್ಯ ವಿಭಾಗ,
ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.