ನುಡಿತೇರಿನ ಸಾರಥ್ಯ ಮಹಿಳೆ ವಹಿಸಲಿ
Team Udayavani, Mar 7, 2018, 2:30 AM IST
39 ವರ್ಷಗಳ ಇತಿಹಾಸವಿರುವ ಕರ್ನಾಟಕ ಲೇಖಕಿಯರ ಸಂಘಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ. ನಿರ್ಗಮಿತ ಅಧ್ಯಕ್ಷೆ ವಸುಂಧರಾ ಭೂಪತಿ ಅವರ ಸ್ಥಾನಕ್ಕೆ ಕುಂದಾಪುರ ಮೂಲದ ಲೇಖಕಿ, ವನಮಾಲಾ ಸಂಪನ್ನಕುಮಾರ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ವನಮಾಲಾ ಸಂಪನ್ನ ಕುಮಾರ್, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು ಸಾಹಿತ್ಯ ಕ್ಷೇತ್ರದ ಮುಂದಿನ ಕಾರ್ಯಯೋಜನೆ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದಾರೆ. ಈ ನಿಟ್ಟಿನಲ್ಲಿ “ಉದಯವಾಣಿ’ಯೊಂದಿಗೆ ಅವರು ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
– ಲೇಖಕಿಯರ ಸಂಘದ ಏಳಿಗೆಗಾಗಿ ನಿಮ್ಮ ಮುಂದಿರುವ ಹೊಸ ಕ್ರಿಯಾ ಯೋಜನೆಗಳೇನು?
ಲೇಖಕಿಯರ ಸಂಘಕ್ಕೆ 39 ವರ್ಷಗಳ ಇತಿಹಾಸ ಇದೆ. ಇನ್ನಷ್ಟು ಉನ್ನತಿಯನ್ನು ಸಾಧಿಸಬೇಕು ಎಂಬ ಕನಸು ಇದೆ. ಸಂಘದ ಅಧ್ಯಕ್ಷೆಯಾಗಿ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ. ಸಂಘಕ್ಕೆ ಹೊಸ ಕಟ್ಟಡದ ಅವಶ್ಯಕತೆ ಇದೆ. ಇದರ ಜತೆ ಸಂಘದ ಸದಸ್ಯರಾಗದವರು ಹಲವರು ಇದ್ದಾರೆ. ಇದರಲ್ಲಿ ಹಿರಿಯ ಲೇಖಕಿಯರ ಸಂಖ್ಯೆಯೇ ದೊಡ್ಡದಿದೆ. ಅವರೆನ್ನಲ್ಲ ಸಂಘದ ವ್ಯಾಪ್ತಿಗೆ ಮೊದಲು ಕರೆತರಬೇಕಾಗಿದೆ. ಇದರ ಜೊತೆಗೆ ಹೊರನಾಡಿನಲ್ಲೂ ಹೆಚ್ಚು ಲೇಖಕಿಯರಿದ್ದಾರೆ. ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕನ್ನಡ ಲೇಖಕಿ ಯರು, ಕಾದಂಬರಿಗಾರ್ತಿಯರು ಇದ್ದಾರೆ. ಅಲ್ಲಿ ಕನ್ನಡದ ಬಳಗ
ವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂಬೈನಲ್ಲಿರುವ ಲೇಖಕಿಯರನ್ನು ಬೆಂಗಳೂರಿನ ಕೇಂದ್ರ ಕಚೇರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಬೇಕು. ಅದೇ ರೀತಿ ಇಲ್ಲಿನ ಲೇಖಕಿಯರು ಅಲ್ಲಿಗೆ ಹೋಗಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಯೋಜನೆ ರೂಪಿಸಿಬೇಕಿದೆ. ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಸಂಘವನ್ನು ಕಟ್ಟಿಬೆಳೆಸುವ ಕನಸಿದೆ.
– ವಿಮರ್ಶಕಿಯರ ಮತ್ತು ಕಾದಂಬರಿಗಾರ್ತಿಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಈ ಬಗ್ಗೆ ಏನು ಹೇಳ್ತೀರಿ?
ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶಕಿಯರ ಸಂಖ್ಯೆ ಕಡಿಮೆ ಯಿದೆ. ಆದರೆ ಕಾದಂಬರಿಗಾರ್ತಿಯರ ಸಂಖ್ಯೆ ಕಡಿಮೆ ಇಲ್ಲ. ಕಾದಂಬರಿ ಬರೆಯಲು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ವಿರಳ ಎನಿಸುತ್ತದೆ. ಹಾಗೇ ವಿಮರ್ಶಕರ ಸಂಖ್ಯೆಯೂ
ವಿರಳ. ಕೆಲವರು ವಿಮರ್ಶೆ ಮಾಡಲು ಇಷ್ಟಪಡುವುದಿಲ್ಲ. ಇನ್ನು ಕೆಲವರು ಇದು ಸೂಕ್ಷ್ಮವಿಷಯ ಅಂತ ಬರೆಯಲು ಹೋಗುವುದಿಲ್ಲ.
– ಚುನಾವಣೆ ನಡೆದಾಗ ಎರಡು, ಮೂರು ಗುಂಪು ಆಗುತ್ತೆ. ನಿಮ್ಮ ಎದುರಾಳಿಗಳಿಗೆ ಮತ ಹಾಕಿದವರು ವಿಮುಖರಾಗುವ ಸಾಧ್ಯತೆಗಳು ಇರುತ್ತವೆ. ಇಂತಹವರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ?
ಇಲ್ಲಿ ದ್ವೇಷದ ಭಾವನೆ ಬರುವುದಿಲ್ಲ. ವಿರೋಧಿಸುವರರಿಗೆ ಅವರದ್ದೇ ಆದ ಭಾವನೆಗಳು ಇರುತ್ತವೆ. ಅವರು ವಿರೋಧಿ ಸಿದರೂ ಕೂಡ, ಆಯ್ಕೆಯಾಗಿ ಬಂದಮೇಲೆ ನನ್ನಲ್ಲಿ ಆ ರೀತಿಯ ಭಾವನೆ ಇರುವುದಿಲ್ಲ. ಅದು ಅವರ ಹಕ್ಕು, ಅದನ್ನು ನಾವು ಗೌರವಿಸಬೇಕೆ ಹೊರತು ದ್ವೇಷ ಸಾಧಿಸಬಾರದು. ಇಲ್ಲಿ ಎಲ್ಲ ಲೇಖಕಿಯರಿಗೂ ಸಮಾನ ಆದ್ಯತೆ ನೀಡಲಾಗುತ್ತದೆ. ಸಂಘದ ಚುಕ್ಕಾಣಿ ಹಿಡಿದ ನಂತರ ಎಲ್ಲರನ್ನೂ ಒಂದೇ ರೀತಿ ನೋಡಬೇಕಿರುವುದು ನಮ್ಮ ಕರ್ತವ್ಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಲೇಖಕಿಯರ ಸಂಘವನ್ನು ಶಕ್ತಿಯುತವಾಗಿ ಬೆಳಸುವ ದೃಢ ಸಂಕಲ್ಪ ಮಾಡಿದ್ದೇನೆ.
– ವಿಜಯಾ ದಬ್ಬೆ ಅವರು ಸಂಘದ ಅಧ್ಯಕ್ಷರಾಗಿದ್ದ ವೇಳೆ “ಲೇಖ-ಲೋಕ’ ಎಂಬ ವಿಶಿಷ್ಟ ಸಂಕಲನ ಬರೆಸುವ ಯೋಜನೆ ಕೈಗೊಂಡರು. ಅಷ್ಟು ಚೆಂದದ, ಮಹತ್ವದ ಇನ್ನೊಂದು ಯೋಜನೆ ಜಾರಿಗೆ ಬಂದಿಲ್ಲ ಏಕೆ?
ಆರಂಭದಲ್ಲಿ ವಿಜಯಾ ದಬ್ಬೆ ಅವರು ಇದನ್ನು ಹುಟ್ಟು ಹಾಕಿದರು. ಇದು ಲೇಖಕಿಯರ ಆತ್ಮಕಥಾನಕಗಳ ಗುತ್ಛ ವಾಗಿತ್ತು. ಅವರ ಸಂಪಾದಕತ್ವದಲ್ಲಿ ಮೂಡಿಬಂತು. ಈಗಲೂ ಮುಂದು ವರಿದಿದೆ. ನಮ್ಮ ಬದುಕು ನಮ್ಮ ಬರಹ, ಲೇಖಕಿಯರ ಅನುಭವ ಕಥಾನಕ ಬಂದಿವೆ. ಉಷಾ ರೈ, ನಾಗಮಣಿ, ಸಂಧ್ಯಾ ರೆಡ್ಡಿ, ವಸುಂಧರಾ ಭೂಪತಿ ಅವರ ಕಾಲದಲ್ಲೂ ಅತ್ಯುತ್ತಮ ಲೇಖನ ಮಾಲೆಗಳು ಹೊರಬಂದವು. ಲೇಖಕಿಯರ ಆತ್ಮಕಥೆ ಯನ್ನು ಹೇಳುವ ಈ ಸರಣಿ ಮಾಲೆ ಮುಂದುವರಿಯಲಿದೆ.
– ಲೇಖಕಿಯರ ಸಂಘ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ ಎಂಬ ದೊಡ್ಡ ಆರೋಪ ಇದೆ. ಈ ಬಗ್ಗೆ ಏನು ಹೇಳ್ತೀರಿ?
ಹೌದು. ಬಹಳ ವರ್ಷಗಳಿಂದಲೂ ಲೇಖಕಿಯರ ವಲಯದಲ್ಲಿ ಈ ಆರೋಪ ಕೇಳಿ ಬರುತ್ತಲೇ ಇದೆ. ಇದನ್ನು ಲೇಖಕಿಯರ ಸಂಘ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಮುನ್ನಡೆಯಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಲೇಖಕಿಯರ ಸಂಘ, ಸಮರ್ಪಕ ಕ್ರಿಯಾ ಯೋಜನೆ ರೂಪಿಸಲಿದೆ. ಮುಂಬೈ ಸೇರಿದಂತೆ ಹೊರನಾಡು ರಾಜ್ಯಗಳಲ್ಲಿರುವ ಲೇಖಕಿಯರು ಎಲೆಮರೆ ಕಾಯಂತಿದ್ದಾರೆ. ಅವರನ್ನು ಕೂಡ ಗುರುತಿಸುವ, ಪ್ರತಿಭೆಗಳನ್ನು ಅನಾವರಣಗೊಳಿಸುವ, ಗ್ರಾಮಾಂತರ ಮಟ್ಟದಲ್ಲಿನ ಪ್ರತಿಭಾನ್ವಿತ ಲೇಖಕಿಯರನ್ನು ಪ್ರೋತ್ಸಾಹಿಸುವ ಕೆಲಸವೂ ನಡೆಯಲಿದೆ.
– ಲೇಖಕಿಯರಿಗೆ ಅವಕಾಶದ ಕೊರತೆ ಇದೆ ಎಂಬ ಆರೋಪವೂ ಇದೆಯಲ್ಲ…
ಲೇಖಕಿಯರಿಗೆ ಕೊರತೆ ಇಲ್ಲ,ವೇದಿಕೆಯ ಕೊರತೆ ಇದೆ. ಕೆಲವು ಲೇಖಕಿಯರನ್ನು ಒಂದು ಹಂತದಲ್ಲಿ ಗುರುತಿಸಿ ಗೌರವಿಸುತ್ತಾರೆ. ಕೃತಿಗಳಿಗೆ ಮಾನ್ಯತೆ ಕೊಡುತ್ತಾರೆ. ಆ ಹಂತಕ್ಕೆ ಬರುವವರೆಗೆ ಅವರನ್ನು ಪ್ರೋತ್ಸಾಹಿಸಬೇಕಾದದ್ದು, ಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಸಂಘ, ಸಂಸ್ಥೆಗಳ ಜವಾಬ್ದಾರಿ. ಗ್ರಾಮೀಣ ಪ್ರದೇಶದಲ್ಲಿನ ಬಹಳಷ್ಟು ಯುವತಿಯರಿಗೆ ಸಾಹಿತ್ಯ ತುಡಿತ ಇರುತ್ತದೆ.ಆದರೆ ಇದನ್ನು ಹೇಗೆ ಹೊರತರಬೇಕು ಎನ್ನುವುದು ಗೊತ್ತಿಲ್ಲ. ಆ ಅರಿವಿನ ಕೊರತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾನ್ವಿತ ಬರಹಗಾರರ ಶೋಧನೆಗಾಗಿ ಕಾವ್ಯ-ಕಮ್ಮಟ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
– ಈವರೆಗೆ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿಲ್ಲ ಯಾಕೆ?
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪುರುಷ ಪ್ರಾಬಲ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯರಿಗೆ ತಮ್ಮನ್ನು ಗುರುತಿಸಿ
ಕೊಳ್ಳಲು ಆಗಲಿಲ್ಲ. ಮುಂದಾದರೂ ಮಹಿಳೆಯರಿಗೆ ಅವಕಾಶಗಳು ಸಿಗಬೇಕು. ಈ ಬಗ್ಗೆ ಆಲೋಚಿಸಿ, ಮಹಿಳೆಯರಿಗೆ ಕನ್ನಡ ನುಡಿ ತೇರಿನ ಸಾರಥ್ಯ ವಹಿಸಲು ಅವಕಾಶ ಕಲ್ಪಿಸಬೇಕು.
– ಮನೆಯಲ್ಲಿ ಸಾಹಿತ್ಯದ ವಾತಾವರಣ ಹೇಗಿತ್ತು?
ನಮ್ಮದು ಉಡುಪಿ ಜಿಲ್ಲೆಯ ಕುಂದಾಪುರದ ಬೇಳೂರು ಗ್ರಾಮ.ಇಲ್ಲಿಯೇ ಬಾಲ್ಯ ಶಿಕ್ಷಣ ನಡೆಯಿತು. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪೂರೈಸಿದೆ. ನನ್ನ ಅಜ್ಜಂದಿರು ಸಾಹಿತ್ಯ ಪ್ರೇಮಿಗಳಾಗಿದ್ದರು. ಕಥೆ, ಕವನ, ಕಾದಂಬರಿಗಳನ್ನು ಓದ್ತಾ ಇದ್ದರು. ಹೀಗಾಗಿ ಓದಿಗೆ ಯಾವುದೇ ಕೊರತೆ ಇರಲಿಲ್ಲ. ಮಂದಾರ್ತಿ ಸಮೀಪದ ಹೆಗ್ಗುಂಜೆ ಹಳ್ಳಿಯವರಾದ ಸಂಪನ್ನಕುಮಾರ್ ಅವರೊಂದಿಗೆ ಸಪ್ತಪದಿ ತುಳಿದೆ. ಮದುವೆಯಾದ ನಂತರವೂ ನನ್ನ ಬರವಣಿಗೆಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಸಿವಿಲ್ ಇಂಜಿನಿಯರ್ ಆಗಿರುವ ನನ್ನ ಪತಿ 26 ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ ಬೆನ್ನುತಟ್ಟುತ್ತಾರೆ. ಅವರೇ ನನ್ನ ಕವಿತೆಯ ಮೊದಲ ಓದುಗರು. ಹೀಗಾಗಿ ನಾನು ತುಂಬಾ ಸುಖೀ. “ವಾಸಂತಿ ಪಡುಕೋಣೆ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ದ್ದೇನೆ. “ಗರಿಕೆ’ ಕವನ ಸಂಕಲನ ಸೇರಿದಂತೆ ಕೆಲವು ಕೃತಿಗಳನ್ನು ಹೊರ ತಂದಿದ್ದೇನೆ.
– ಲೇಖಕಿಯರ ಸಂಘಕ್ಕೆ ಸರ್ಕಾರದಿಂದ ಯಾವ ರೀತಿಯ ನೆರವು ನಿರೀಕ್ಷಿಸುವಿರಿ?
ಹಳೆಯ ಕಟ್ಟಡದಲ್ಲಿ ಲೇಖಕಿಯರ ಸಂಘ ಕೆಲಸ ಮಾಡುತ್ತಿದೆ. ಸುಸಜ್ಜಿತ ಕಟ್ಟಡ ಮತ್ತು ಗ್ರಂಥಾಲಯ ಸೌಲಭ್ಯ, ಸಂಘದ ಕೇಂದ್ರ ಕಚೇರಿಗೆ ಅವಶ್ಯವಿದೆ. ಹೀಗಾಗಿ ಸರಕಾರದ ನೆರವು ಅಗತ್ಯವಾಗಿದೆ. ಸರಕಾರ ಈ ಬಗ್ಗೆ ಮನಸ್ಸು ಮಾಡಿ ಸಂಘದ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಬೇಕು.
ಉದಯವಾಣಿ ಒಡನಾಟ
ಚಿಕ್ಕವಳಿದ್ದಾಗಲೇ ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದೆ. ಮನೆಗೆ ಪ್ರತಿನಿತ್ಯ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು ಬರುತ್ತಿದ್ದವು. ಹೀಗಾಗಿ ಬಾಲ್ಯದಲ್ಲಿಯೇ ಸಾಹಿತ್ಯದ ಬಗ್ಗೆ ಗೀಳು ಹಚ್ಚಿಕೊಂಡೆ. ಯಕ್ಷಗಾನ, ನಾಟಕಗಳು ಮತ್ತಷ್ಟು ಪ್ರಭಾವ ಬೀರಿದವು. ಶಾಲಾ ಕಾಲೇಜು ದಿನಗಳಲ್ಲಿ ಉದಯವಾಣಿ ಪತ್ರಿಕೆ ಓದುತ್ತಿದ್ದೆ. ಸಾಪ್ತಾಹಿಕ ಪುರವಣಿಗಳಲ್ಲಿನ ಲೇಖನ, ಕವಿತೆಗಳು ನನ್ನಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿದವು. ಪತ್ರಿಕೆಗಳಿಗೆ ಲೇಖನ ಮತ್ತು ಕವಿತೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ. ಒಂದೆರಡು ಸಂಕಲನಗಳನ್ನು ಬರೆದಿದ್ದೇನೆ. ಆದರೆ ಕೃತಿಯಾಗಿ ಪ್ರಕಟಿಸಿದ್ದು ಕಡಿಮೆ.
– ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.