ನಲುಗುತ್ತಲೇ ಅರಳಬೇಕಾದ ಜೀವ ಚಿತ್ರಗಳು
Team Udayavani, Mar 8, 2018, 2:50 AM IST
ಅಹಿಂಸೆಯ ಸತ್ಯಾಗ್ರಹವೇ ಗಾಂಧಿ ಸೌಂದರ್ಯ ಇಮ್ಮಡಿಸಿತು. ಕೃಷ್ಣನ, ಮಹಾವೀರನ, ಬುದ್ಧನ, ಕಬೀರನ, ಕ್ರಿಸ್ತನ, ಸಾಕ್ರಟೀಸನ ಯಾವ ಪ್ರತಿಪಾದನೆಗಳೂ ಪೌರುಷವನ್ನು ನಮ್ಮ ಮುಂದಿಡಲಾರವು. ಅವರೆಲ್ಲರ ಪ್ರತಿ ನಡೆಯಲ್ಲಿಯೂ ಸ್ತ್ರೀ ಭಾವವೇ ತುಳುಕಿದೆ.
And I was blamed for it. I was told not to talk about it. I was told that it wasn’t that bad. I was told to get over it.
# Metoo ಅಭಿಯಾನವೆಂಬ ಪ್ರವಾಹ ಹಲವು ಭಾವ ಕವಲುಗಳನ್ನು ಒಳಗೊಂಡು ಜಗದ ಮನಸ್ಸಿನ ಮೂಲೆಗಳಲ್ಲಿ ಆದ್ರìತೆಯ ರಿಂಗಣವನ್ನು ತುಂಬಿದ ಸಂದರ್ಭದಲ್ಲಿಯೇ ನಜ್ವಾ ಜಬೀನ್ ಎಂಬಾಕೆಯ ಈ ಒಳಮನಸ್ಸಿನ ಬೇಗುದಿಯ ನುಡಿಗಳು ಕೂಡಾ ಮುಕ್ತಗೊಂಡವು. ಅಂಧಕಾರದಲ್ಲಿ ಅಂಗ ಶೋಷಣೆಗೊಳಗಾದ ಲೆಕ್ಕವಿಲ್ಲದ ಒಪ್ಪಿಗೆಗಳ ನಡುವೆ, ಹರಿದ ತಂತಿಯ ಶೃತಿಯ ಅಸಹಾಯಕತೆಯಾಗಿ ಆಕೆಯ ಸಾಲುಗಳು ಒಂದಷ್ಟು ಹೊತ್ತು ಕಾಡಿದವು. ಪುರುಷನೊಂದಿಗೆ ಸಮಾನತೆ ಬಯಸಿ ಮುನ್ನಡೆ ಯುತ್ತಿರುವ ಹೆಣ್ಣಿನ ಅನಿವಾರ್ಯ ಸಂಕೀರ್ಣತೆಯನ್ನು ವಿಷದವಾಗದ ಆದರೂ ತೊಡಕಿಲ್ಲದ ರೀತಿಯಲ್ಲಿ ನಮ್ಮೊಳಗೆ ಸೋಕಿದವು. ತಾನು ಗಂಡಿಗೇನೂ ಕಡಿಮೆಯಿಲ್ಲ ಎನ್ನುವ ಹಠದ ಹಾದಿಯಲ್ಲಿ ಹೆಣ್ಣು ಅದೆಷ್ಟು ಸಾಧನೆ ಮಾಡಿದಳು? ದೇಶದ ಪ್ರಧಾನ ಮಂತ್ರಿಯಾದಳು. ರಾಷ್ಟ್ರಪತಿ, ಬಾಹ್ಯಾಕಾಶ ವಿಜಾnನಿ, ಬಹು ರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥೆ, ಕ್ರೀಡಾಪಟು, ಸಿನಿಮಾ ತಾರೆ ಇನ್ನೂ ಏನೇನೋ ಆದಳು. ಸಾಮಾಜಿಕವಾದ ಯಶಸ್ಸು ಆಕೆಯನ್ನು ಮತ್ತಷ್ಟು ಬೆರಗಿನ ನಶೆಯೆಡೆಗೆ ಪ್ರೇರೇಪಿಸಿದ್ದೂ ಆಯಿತು. ಆ ಬೆರಗು ಆಕೆಗೊಂದಿಷ್ಟು ಸಹಜ ಅಹಂಭಾವವನ್ನು ದಯ ಪಾಲಿಸಿದ್ದೂ ಆಯಿತು. ಆದರೆ ನಿಜಕ್ಕೂ ಆ ಯಶಸ್ಸು ಆಕೆಗೆ ಸಬಲ ತೆಯ, ಸಫಲತೆಯ ಸಂಭ್ರಮವನ್ನು ದಕ್ಕಿಸಿತಾ? ಆಕೆಯ ಜೀವ ತಂತುಗಳಲ್ಲಿ ಸಾರ್ಥಕತೆಯ ಚೈತನ್ಯವನ್ನು ಹರಿಸಿತಾ? ಪುರುಷನೊಂದಿಗಿನ ಸಮಾನತೆಯ ಕಾದಾಟ ಆಕೆಗೆ ಬೇಕೆನಿಸಿದ್ದನ್ನು ಅನಾವರಣಗೊಳಿಸಿತಾ? ಸಂಚಲನ ಹುಟ್ಟಿಸುವ ಸಮಾನತೆಯ ಪರಿಕಲ್ಪನೆಗೆ ಮಹಿಳೆಯನ್ನು ನಮ್ಮ ಸಮಾಜ ಸಜ್ಜುಗೊಳಿಸುತ್ತಿರುವ ರೀತಿ ಹಾಗೂ ಗತಿಗಳನ್ನು ನೋಡುತ್ತಾ ನಿಂತಾಗ ಯಾತನೆಯ ತೆರೆಗಳು ಮನಸ್ಸನ್ನು ಮೆಲ್ಲಗೆ ಆವರಿಸಿಕೊಳ್ಳುತ್ತವೆ.
ಅವನ ಪೌರುಷಕ್ಕೆ ಯುದ್ಧವೇ ಪರ್ಯಾಯವೆಂದು ಈಗಾಗಲೇ ಪುರುಷ ಸಾಧಿಸಿ ತೋರಿಸಿಬಿಟ್ಟಿದ್ದಾನೆ. ಅಂತರಿಕ್ಷವಿರಲಿ, ಅಂತರಂಗ ವಿರಲಿ ಆಕ್ರೋಶ, ದ್ವೇಷ, ಹತ್ಯೆ, ಬಲಾತ್ಕಾರಗಳ ಭಾವಗಳೇ ಅವನನ್ನು ಆಳಿವೆ. ಏಕೆಂದರೆ ಬೌದ್ಧಿಕ, ದೈಹಿಕ ಗೆಲುವುಗಳಷ್ಟೇ ತನಗೆ ಅಸಾಧಾರಣತೆಯನ್ನು ಕಲ್ಪಿಸಬಲ್ಲುದೆಂಬ ಸತ್ಯ ಅವನಿಗೆ ಗೋಚರ ವಾಗಿಬಿಟ್ಟಿದೆ.
ಯುದ್ಧಭೂಮಿಯಲ್ಲಿಯೇ ಅಸಾಮಾನ್ಯರು ಹುಟ್ಟು ವುದೆಂಬ ನಂಬಿಕೆಗೆ ಅವನು ಮೋಹಿತನಾಗಿದ್ದಾನೆ. ತನ್ನ ಯೋಧ ರನ್ನು ಕೊಂದ ನೆರೆದೇಶದ ಮೇಲೆ ಆಕ್ರಮಣ ಮಾಡಿ ದುಪ್ಪಟ್ಟು ನಾಶ ಮಾಡಿದ ಮೇಲೆಯೇ ಅವನ ದೇಶದ ಜನರನ್ನು ಸಂತೈಸಲು ಸಾಧ್ಯ ಎಂಬುದು ಅವನನ್ನು ಪರವಶಗೊಳಿಸಿದೆ. ಪರಿಣಾಮ ಇತಿಹಾಸದ ಪುಟವೆಲ್ಲಾ ಅವನ ರಕ್ತಸಿಕ್ತ ಅಧ್ಯಾಯಗಳು.
ಹೆಣಗಳ ಮೂಳೆಯಲ್ಲಿ ವಿಜಯ ಗೋಪುರಗಳನ್ನು ನಿರ್ಮಿಸಿದ ತೈಮೂರ್, ಲಿಬಿಯಾ ದೇಶದ ಅಭಿವ್ಯಕ್ತಿಯ ಕೊರಳನ್ನೇ ಹಿಂಡಿ ಹಿಪ್ಪೆ ಮಾಡಿದ ಗದಾಫಿ, ಅಮ್ಮನನ್ನೇ ಕೊಂದು ಹೊಸ ನಗರ ಕಟ್ಟುತ್ತೇನೆಂದು ರೋಮ್ ನಗರಕ್ಕೆ ಬೆಂಕಿಯಿಡಲು ಹೊರಟ ನೀರೋ, ಅರ್ಧ ದಶಕಕ್ಕೂ ಮೀರಿದ ತನ್ನ ಆಡಳಿತದಲ್ಲಿ ಕ್ಯೂಬಾ ದೇಶದ ಆತ್ಮವನ್ನು ಗಲ್ಲಿಗೇರಿಸಿದ ಫೀಡೆಲ್ ಕ್ಯಾಸ್ಟ್ರೋ, ಲಕ್ಷ ಲಕ್ಷ ಜನರನ್ನು ಹತ್ಯೆಗೈದು ಸಾಧನೆ ಮಾಡಿದ ಉಗಾಂಡಾದ ಇದಿ ಅಮೀನ್, ಲೆನಿನ್, ಸ್ಟಾಲಿನ್, ಒಸಾಮಾ ಲಾಡೆನ್… ಇಂತಹ ಅದೆಷ್ಟೋ ಮಂದಿ ಪುರುಷರು ನಮ್ಮ ಅಂತರಂಗದ ಚಿಪ್ಪುಗಳಲ್ಲಿ ಹಿಂಸೆಯ ಅಲೆಗಳಾಗಿ ಇನ್ನೂ ಕದಲುತ್ತಲೇ ಇದ್ದಾರೆ. ಅವರ ಬರ್ಬರತೆಯು ಮನುಕುಲದ ಹಲವು ಪೀಳಿಗೆಗಳನ್ನು ನಲುಗಿಸಿವೆ. ಅಲೆಕ್ಸಾಂಡರ್ ರಣರಂಗದಲ್ಲಿ ಕನಸಿದ ಯಾವುದನ್ನೂ ಪಡೆಯದೇ ಉಳಿಯಲಿಲ್ಲ. ಕಡೆಗೆ ಅವನೊಂದಿಗೆ ಉಳಿದದ್ದು ಏನು? ದೇಶ, ಭಾಷೆ, ಭಾವ ಎಲ್ಲದಕ್ಕೂ ಪುರುಷನ ರಣೋತ್ಸಾಹದ ಪ್ರತಿಕ್ರಿಯೆಗಳು ಇಲ್ಲಿಯವರೆಗೆ ವಿಜೃಂಭಿಸಿವೆ.
ಹೆಣ್ಣು ಗಂಡು ಪರಸ್ಪರ ನಿತ್ಯಯಾತ್ರೆಯ ಸಂಗಾತಿಗಳಾದರೂ ಆಕೆ-ಅವನ ನಡುವಿನ ಅದೃಶ್ಯ ಅಂತರ್ಪಟ ಆಕೆಯ ಔನತ್ಯದ ಅಂತರವನ್ನೇ ತೆರೆದಿಡುತ್ತದೆ. ಆದರೆ ಅವನ ಆಕಾಂಕ್ಷೆಗೆ ಅದು ಅಪೇಕ್ಷಿತವಲ್ಲ ಮತ್ತು ಅವ್ಯಾವುವೂ ಅವನಿಗೆ ಬೇಡ. ಸಣ್ಣ ಉದಾಹರಣೆಗಳು. ನಿಸರ್ಗ ಹೆಣ್ಣಿಗೆ ಗಂಡಿಗಿಂತಲೂ ಸರಾಸರಿ 7-8 ವರ್ಷ ಹೆಚ್ಚಿನ ಆಯಸ್ಸು ಕೊಟ್ಟಿದೆ.
ಗಂಡನ್ನು ಕಾಡುವಷ್ಟು ದೈಹಿಕ ರೋಗಗಳು ಆಕೆಯನ್ನು ಕಾಡಲಾರವು. ದುಪ್ಪಟ್ಟು ಮಾನಸಿಕ ರೋಗಗಳು ಪುರುಷನನ್ನು ಆಕ್ರಮಿಸಿಕೊಳ್ಳುತ್ತವೆ. ಆಕೆಗಿಂತ ಎರಡು ಪಟ್ಟು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ನಪುಂಸಕತೆಯೂ ಗಂಡಿನಲ್ಲೇ ಹೆಚ್ಚು. ಇಂಥ ಎಲ್ಲಾ ಹೆಗ್ಗಳಿಕೆಗಳ ನಡುವೆಯೂ ಅವನು ಆಕೆಯನ್ನು ತನ್ನ ದಾರಿ ಹಿಡಿಯಲು ಪ್ರೇರೇಪಿಸುವಲ್ಲಿ ಯಶಸ್ವಿಯಾಗಬಲ್ಲ. ಆಕೆಯನ್ನು ನಿತ್ಯ ತಳಮಳಕ್ಕೀಡುಮಾಡಬಲ್ಲ. ತನ್ನ ಕಾಲುದಾರಿಯನ್ನೇ ಅವಳು ಸವೆಸಬೇಕಾದ ಹೆದ್ದಾರಿಯೆಂದು ನಂಬಿಸಬಲ್ಲ. ಸಾಮಾಜಿಕ ಗತಿಯೆನ್ನುವುದು ಪುರುಷ ಪ್ರಧಾನವಾಗುವ ಮೂಲಕ, ಪೌರುಷವನ್ನು ಸಾಮಾಜಿಕ ಸ್ವಾಸ್ಥದ ದಿಕ್ಸೂಚಿಯೆಂದು ನಂಬಿಸುವ ವ್ಯವಸ್ಥೆಯನ್ನು ಕಾಪಿಡುವ ಮೂಲಕ ಅದೆಷ್ಟೋ ವಿಷಯಗಳಲ್ಲಿ ಗಂಡಿಗಿಂತಾ ಹೆಚ್ಚು ಸಾಮರ್ಥ್ಯವುಳ್ಳ ಆಕೆಯನ್ನು ಅನಿಶ್ಚಿತಗೊಳಿ ಸಿರುವ ನಿಸರ್ಗವಿರೋಧಿಯ ರೀತಿ ಯಾವುದೋ ಸಂದೇಶವನ್ನು ನಮ್ಮ ಎದೆಗೆ ತಲುಪಿಸುತ್ತದೆ.
ತತ್ವಜಾnನಿ ನೀಶೆ “ಗೌತಮ ಬುದ್ಧ, ಜೀಸಸ್ ಇಬ್ಬರಲ್ಲೂ ಸ್ತ್ರೀ ಸಹಜವಾದ ಲಾಲಿತ್ಯವಿದೆ. ಹೀಗಾಗಿ ಅವರನ್ನು ನಾನು ಒಪ್ಪಲಾರೆ’ ಎಂದಿದ್ದ. ಬುದ್ಧನ, ಜೀಸಸ್‌ನ ಸ್ತ್ರೀ ಸಹಜವಾದ ತಾತ್ವಿಕ ಮನೋಧರ್ಮಗಳು ಯುದ್ಧ ಭಾವಗಳನ್ನು ಕಂಗೆಡಿಸಿದ್ದು ಸಹಜವೇ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ್ದು. ಸ್ತ್ರೀ ಸಹಜತೆಯನ್ನು ಒಪ್ಪಿಕೊಂಡ ಪ್ರತಿ ಪುರುಷನೂ ಅವನ ಕಾಲಘಟ್ಟಕ್ಕೆ ಭರವಸೆಯ ಬೆಳಕನ್ನು ಹಚ್ಚಿದ್ದಾನೆ ಎಂಬುದು. ವಿಲಕ್ಷಣ ಸೋಜಿಗವೆಂದರೆ ಮಾನವರಾಗಿ ಉಳಿಯಲು ಅವನೇ ನಮಗೆ ಅನಿವಾರ್ಯವೆಂಬುದು ನಮಗೆ ಅರ್ಥವಾಗುತ್ತಿಲ್ಲ. ಭರತನನ್ನು ಗೆದ್ದ ಬಾಹುಬಲಿ ಎಲ್ಲವನ್ನೂ ಬಿಟ್ಟುಕೊಟ್ಟ ಮೇಲೆಯೇ ಜಗದ ಭಾವತಂತಿಯನ್ನು ಮೀಟಿದ. ಅಹಿಂಸೆಯ ಸತ್ಯಾಗ್ರಹವೇ ಗಾಂಧಿಯ ಸೌಂದರ್ಯವನ್ನು ಇಮ್ಮಡಿಸಿತು. ಕೃಷ್ಣನ, ಮಹಾವೀರನ, ಬುದ್ಧನ, ಕಬೀರನ, ಕ್ರಿಸ್ತನ, ಸಾಕ್ರಟೀಸನ ಯಾವ ಪ್ರತಿಪಾದನೆಗಳೂ ಪೌರುಷವನ್ನು ನಮ್ಮ ಮುಂದಿಡಲಾರವು. ಅವರೆಲ್ಲರ ಪ್ರತಿ ನಡೆಯಲ್ಲಿಯೂ ಸ್ತ್ರೀ ಭಾವವೇ ತುಳುಕಿದೆ.
ಇನ್ನು ಆಕೆ. ಈಗಲೂ ಗಂಡಿನ ಪೌರುಷದ ಫಲಿತಾಂಶವಾಗಿ ಮಾತು ದಣಿದ ಮೌನಕ್ಕೆ ಜಾರುತ್ತಾಳೆ. ಆಕೆಯ ನಡುಗುವ ಬೆರಳು ಗಳು ಕತ್ತಲಿನತ್ತ ಕೈತೋರಿಸುತ್ತಾ ಹೇಳಬೇಕಾದ ಸತ್ಯವನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಸಹಕರಿಸುತ್ತವೆ. ಆಕ್ರಮಣ ಮಾಡಿದ ಪುರುಷ ಸಭ್ಯನಾಗಿ ಜಾರಿಕೊಳ್ಳುತ್ತಾನೆ. ವಿಪರ್ಯಾಸದ ಫಲಿ ತಾಂಶ ವೆಂದರೆ ಆಕೆ ನಲುಗುತ್ತಲೇ ಅವನ ಜಾಡಿನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲು ಮತ್ತೆ ಹೊರಡುತ್ತಾಳೆ. ತನ್ನ ಜೀವ ತನ್ಮಯವಾದ ಸ್ತ್ರೀ ಸಹಜ ಭಾವ ವನ್ನು ಮರೆತು ಮೇಲ್ನೋಟದ ಪೌರುಷವನ್ನು ಉಳಿಸಿಕೊಳ್ಳುವ ತಾಕಲಾಟಕ್ಕೆ ಸಿಲುಕುತ್ತಾಳೆ. ಎಡಬಿಡಂಗಿಯಾಗುತ್ತಾಳೆ.
ಯಾವ ಹೆಗ್ಗಳಿಕೆ ನಪಾಸಾದ ನರ ಪುರುಷನನ್ನು ಆಕೆಯೆಡೆಗೆ, ಆಕೆಯ ಸಮಗ್ರತೆಯೆಡೆಗೆ ಪ್ರೇರೇಪಿಸ ಬೇಕಿತ್ತೋ ಆಕೆಯೇ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುವ ಮೂಲಕ ಜಾಗತಿಕ ದ್ವಂದ್ವಕ್ಕೆ ಆಕೆ ಸಾಕ್ಷಿಯಾಗುತ್ತಾಳೆ. ಅವನ ಆರ್ಭಟದ ಮುಂದೆ ಪೇಲವವಾಗುತ್ತ ತನ್ನ ಆದ್ರìತೆ, ಮಾದಕತೆ, ಸೂಕ್ಷ್ಮತೆಗಳೆಲ್ಲವನ್ನೂ ಕಳೆದುಕೊಂಡು ಬೆತ್ತಲಾಗುತ್ತಾಳೆ. ಕಳೆದ ಎರಡು ಶತಮಾನಗಳ ಈಚೆಗಿನ ಮಹಿಳೆಯ ಲಯಹೀನವಾದ ದ್ವಂದ್ವ ಸ್ಥಿತಿಗಳ ಬಗ್ಗೆಯಂತೂ ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಇತ್ತೀಚೆಗೆ ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿದ ಜಾಗತಿಕ ಲಿಂಗಾಂತರ ವರದಿ ಲಿಂಗ ಸಮಾನತೆ ಇನ್ನು ಇನ್ನೂರು ವರ್ಷಗಳಲ್ಲಿ ಸಾಧ್ಯವಾಗುತ್ತದೆ ಎಂದಿರುವುದು ಹಾಗೂ ಈ ಸಮಾನತೆಯನ್ನು ಇನ್ನಷ್ಟು ಶೀಘ್ರವಾಗಿ, ಕನಿಷ್ಟ 150 ವರ್ಷದೊಳಗೆ ಸಾಧಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿರುವುದು, ಇಂದು ಸಮಾನತೆಗೆ ಮಹಿಳೆಯನ್ನು ಸಮಾಜ ಸಜ್ಜುಗೊಳಿಸುತ್ತಿರುವ ರೀತಿಗೆ ಹೋಲಿಸಿದಾಗ ಆತಂಕದ ಜೀವತೆರೆ ಮೊರೆಯುತ್ತದೆ.
ಶಾಪವಿದ್ದರೆ ಅದು ವಿಮೋಚನೆಯಾಗಲಿ. ಹೆಣ್ಣು ಹೆಣ್ಣಾಗಿಯೇ ಉಳಿಯಲಿ. ಪೌರುಷವನ್ನು ಅದೃಶ್ಯಗೊಳಿಸಲಿ. ಬದಲಿಗೆ ಅವಳು ಪುರುಷನನ್ನು ತನ್ನ ಸಹಜತೆಯಂತೆ ಮಹತ್ವಾಕಾಂಕ್ಷೆಗಳಿಲ್ಲದೆ ಬದುಕುವುದನ್ನು ಪ್ರೇರೇಪಿಸಲಿ. ಜಗತ್ತು ಕಾವ್ಯವಾಗುತ್ತದೆ. ಆಸುಪಾಸಿನಲ್ಲಿರುವ ಇನ್ನೊಂದು ಮಹಿಳೆಯ ದಿನಾಚರಣೆ ಯಂದು ಮಾಧ್ಯಮಗಳು, ನಾಯಕರು ಒಂದಷ್ಟು ಮಹಿಳೆಯರ ಸಾಮಾಜಿಕ ಸಾಧನೆಗಳನ್ನು ಬಿತ್ತರಿಸಿ ಮಹಿಳೆಗೆ ಸಮಾನ ಹಕ್ಕು, ಸಮಾನ ಅವಕಾಶ ಸಿಗಲೇಬೇಕೆಂದು ಘೋಷಿಸಿ ಮಹಿಳೆಯನ್ನು ಕಂಗಾಲು ಮಾಡುವ ಗಳಿಗೆಯಲ್ಲಿ, ಅಂತಾರಾಷ್ಟ್ರೀಯ ಸಂಸ್ಥೆಗಳು ಲಿಂಗಬೇಧ ನಿವಾರಣೆಗೆ ಪುನಃ ಹೊಸ ಶಪಥ ಮಾಡುವ ಕ್ಷಣದಲ್ಲಿ ಆಕೆಯ ಭಾವ ಸಾರಥ್ಯದ ಅರ್ಥಪೂರ್ಣ ಸ್ಫೂರ್ತಿಯೊಂದು ಜಗ ಬೆಳಗಲಿ ಎನ್ನುವ ಆಶಯ.
– ಫಣಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.