ತಮಿಳರ ಜೀವನಾಧಾರ ಕೇರಳೀಗರಿಗೆ ದುಃಸ್ವಪ್ನ
Team Udayavani, Dec 13, 2021, 6:10 AM IST
ಮುಲ್ಲಪೆರಿಯಾರ್ ಅಣೆಕಟ್ಟು-ಬಹುಶಃ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಅತೀ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಷಯ. ಇದು ಕೇರಳ ಮತ್ತು ತಮಿಳುನಾಡಿನ ನಡುವೆ ಪ್ರತೀ ವರ್ಷ ಮಳೆಗಾಲದಲ್ಲೂ ಭಾರೀ ವಿವಾದ ಕ್ಕೀಡಾಗುತ್ತಿದೆ. ಕೆಲವು ದಶಕಗಳಿಂದೀಚೆಗೆ ಈ ಅಣೆಕಟ್ಟಿನ ಸುರಕ್ಷತೆ, ಜಲ ಸಂಗ್ರಹದ ಮಟ್ಟ, ಡಿ-ಕಮಿಷನ್ ಮತ್ತಿತರ ವಿಷಯಗಳು ಪ್ರಸ್ತಾವಗೊಳ್ಳುತ್ತಲೇ ಬಂದಿವೆ ಮಾತ್ರವಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ಎರಡೂ ರಾಜ್ಯಗಳ ನಡುವೆ ಕಾನೂನು ಹೋರಾಟ ನಡೆಯುತ್ತಲೇ ಬಂದಿದೆ. ತಿಂಗಳ ಹಿಂದೆ ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ಅಣೆಕಟ್ಟು ಒಡೆದು ನೀರು ಏಕಾಏಕಿ ನುಗ್ಗಿ ಸಾವಿರಾರು ಮಂದಿ ನಿರಾಶ್ರಿತರಾಗ ಬಹುದೆಂಬ ಆತಂಕ ಕೇರಳದ ಜನತೆಯಲ್ಲಿ ಮನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ “ಸೇವ್ ಕೇರಳ’ ಸಹಿತ ಕೆಲವಷ್ಟು ಅಭಿಯಾನಗಳು ಹುಟ್ಟಿಕೊಂಡವು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಣೆ ಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿರುವುದು, ಶತಮಾನ ಕ್ಕಿಂತಲೂ ಹಳೆಯ ಅಣೆಕಟ್ಟು ಇದಾಗಿರುವುದರಿಂದ ಸಹಜವಾಗಿ ಈ ಅಣೆಕಟ್ಟಿನ ಸುರಕ್ಷತೆಯ ಭೀತಿ ಇಲ್ಲಿನ ಜನರನ್ನು ಕಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈ ಪುರಾತನ ಅಣೆಕಟ್ಟಿನ ಬದಲಾಗಿ ಹೊಸ ಅಣೆಕಟ್ಟು ನಿರ್ಮಿಸಿ ಕಾಲಕ್ರಮೇಣ ಹಳೆಯ ಅಣೆಕಟ್ಟನ್ನು ತೆರವುಗೊಳಿಸುವ ಕುರಿತಾಗಿನ ಚರ್ಚೆಗಳೂ ನಡೆಯುತ್ತಿವೆ.
ಯಾವ ನದಿ?
ಕೇರಳ-ತಮಿಳುನಾಡು ಗಡಿ ಭಾಗದ ಶಿವಗಿರಿ ಬೆಟ್ಟದ ಚೊಕ್ಕಾಂಪೆಟ್ಟಿಯಲ್ಲಿ ಉಗಮವಾಗುವ ಪೆರಿಯಾರ್ ನದಿ 48 ಕಿ.ಮೀ. ಕ್ರಮಿಸಿ ಮನ್ನಲಾರ್ ಸಮೀಪದ ಕೊಟ್ಟಮಲಕ್ಕೆ ತಲುಪುತ್ತದೆ. ಇಲ್ಲಿ ಪ್ರವಹಿಸುವ ಮುಲ್ಲಯಾರ್ ನದಿಯೊಂದಿಗೆ ಸೇರಿ ಮುಂದಕ್ಕೆ ಮುಲ್ಲಪೆರಿಯಾರ್ ಎಂಬ ಹೆಸರಿನೊಂದಿಗೆ ಹರಿಯುತ್ತದೆ. ಈ ನದಿಗೆ ಇಡುಕ್ಕಿ ಜಿಲ್ಲೆಯ ತೆಕ್ಕಡಿಯಲ್ಲಿ ಈ ವಿವಾದಿತ ಅಣೆಕಟ್ಟು ನಿರ್ಮಿಸಲಾಗಿದೆ.
ಏನಿದು ಒಪ್ಪಂದ?
ಮುಲ್ಲಪೆರಿಯಾರ್ ಅಣೆಕಟ್ಟು ನಿರ್ಮಾಣದ ಸಂಬಂಧ ಎರಡೂ ಪ್ರಾಂತ್ಯಗಳ ನಡುವೆ ಹಗ್ಗಜಗ್ಗಾಟ ನಡೆದು ಕೊನೆಗೆ 1886ರಲ್ಲಿ ಒಪ್ಪಂದವೊಂದು ಏರ್ಪಟ್ಟಿತ್ತು. ಅಂದಿನ ತಿರುವಾಂಕೂರ್ ಮಹಾರಾಜ ವಿಶಾಖಂ ತಿರುನಾಳ್ ರಾಮವರ್ಮ ಮತ್ತು ಬ್ರಿಟಿಷ್ ಇಂಡಿ ಯಾದ ಸೆಕ್ರೆಟರಿ ಈ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಣೆಕಟ್ಟು ಇರುವ ಜಾಗವನ್ನು ಕೇರಳ 999 ವರ್ಷಗಳಿಗೆ ತಮಿಳುನಾಡಿಗೆ ಲೀಸ್‌ಗೆ ನೀಡಿದೆ. ವಾರ್ಷಿಕವಾಗಿ 40,000 ರೂ.ಗಳನ್ನು ತಿರುವಾಂಕೂರಿಗೆ ತಮಿಳುನಾಡು ನೀಡುವ ಒಪ್ಪಂದ ಇದಾಗಿತ್ತು. ಅದರಂತೆ ತಮಿಳುನಾಡು ಈ ಅಣೆಕಟ್ಟನ್ನು ನಿರ್ಮಿಸಿದೆಯಲ್ಲದೆ ಇದರ ನಿರ್ವಹಣೆಯ ಹೊಣೆಗಾರಿಕೆಯೂ ಆ ರಾಜ್ಯದ್ದಾಗಿದೆ.
ಮುಲ್ಲಪೆರಿಯಾರ್ ಅಣೆಕಟ್ಟಿನ ರಚನೆ
ಗುರುತ್ವಾಕರ್ಷಣೆಯ ಆಧಾರದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಣೆಕಟ್ಟಿನ ಭಾರದ ಮೇಲೆ ಇದರ ಸುರಕ್ಷತೆ ನಿಂತಿದೆ. ಕಾಂಕ್ರೀಟ್‌ನ ಬದಲು ಲೈಮ್ ಮಿಶ್ರಣದಿಂದ ಇದನ್ನು ನಿರ್ಮಿಸಲಾಗಿದೆ. ಮೊದಲ ಬಾರಿ ಅಣೆಕಟ್ಟು ಬಿರುಕು ಬಿಟ್ಟಾಗ ಕಾಂಕ್ರೀಟ್ ಬಳಸಿ ಹೊರ ಭಾಗವನ್ನು ಬಲಿಷ್ಠಗೊಳಿಸಲಾಗಿತ್ತು. ಅಣೆಕಟ್ಟಿನ ತಳಭಾಗದಿಂದ ನೀರು ಸೋರಿಕೆಯಾಗುತ್ತಿದೆ. ಈ ನೀರಿನೊಂದಿಗೆ ಲೈಮ್ ಮಿಶ್ರಣದಲ್ಲಿರುವ ಕುಮ್ಮಾಯ ಅಪಾರ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದೆ ಎನ್ನುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಪ್ರತೀ ವರ್ಷ ಸುಮಾರು 35 ಟನ್‌ಗಳಷ್ಟು ಕುಮ್ಮಾಯ ನೀರಿನೊಂದಿಗೆ ಹೊರ ಹೋಗುತ್ತಿದೆ ಎನ್ನುವುದನ್ನು ತಮಿಳುನಾಡು ಕುಡಾ ಒಪ್ಪಿಕೊಂಡಿದೆ.
ವೈರುಧ್ಯ
ಮುಲ್ಲಪೆರಿಯಾರ್ ಅಣೆಕಟ್ಟು ಇರುವುದು ಕೇರಳದಲ್ಲಾದರೂ ಇದರ ಸಂಪೂರ್ಣ ಫಲಾನುಭವಿ ಮಾತ್ರ ತಮಿಳು ನಾಡು! ಕೃಷಿ, ವಿದ್ಯುತ್, ಕೈಗಾರಿಕೆ ಸೇರಿದಂತೆ ತಮಿಳುನಾಡಿನ ಸುಮಾರು 5 ಜಿಲ್ಲೆಗಳ ನೂರಾರು ಹೆಕ್ಟೇರ್ ಪ್ರದೇಶ ಇದರ ಪ್ರಯೋಜನ ಪಡೆಯುತ್ತಿದೆ. ಅಂದಾಜಿನ ಪ್ರಕಾರ ಈ ಅಣೆಕಟ್ಟನ್ನು ಅವಲಂಬಿಸಿ ವಾರ್ಷಿಕ 50 ಸಾವಿರ ಕೋಟಿ ರೂ. ವ್ಯವಹಾರ ನಡೆಸಲಾಗುತ್ತಿದ್ದು ಇದೆಲ್ಲವೂ ತಮಿಳುನಾಡಿನ ಪಾಲಾಗುತ್ತಿದೆ!
ಕಡಿಮೆಯಾಗುತ್ತಿದೆ ಭಾರ!
ಕೆಲವು ವರ್ಷಗಳಿಂದ ಕುಮ್ಮಾಯ ಕೊಚ್ಚಿ ಹೋಗುತ್ತಿರುವ ಪರಿಣಾಮ ಅಣೆಕಟ್ಟಿನ ಭಾರ ಕಡಿಮೆಯಾಗುತ್ತಿದೆ. ಹೀಗಾಗಿ ಧಾರಣ ಸಾಮರ್ಥ್ಯವೂ ಕುಂದುತ್ತಿದೆ ಎನ್ನುತ್ತವೆ ಅಧ್ಯಯನ ವರದಿಗಳು. ಇನ್ನೊಂದು ಅತಂಕ ಎಂದರೆ ಭೂಕಂಪದ್ದು. ಈ ಅಣೆಕಟ್ಟನ್ನು ನಿರ್ಮಿಸುವಾಗ ಭೂಕಂಪವನ್ನು ಪ್ರತಿರೋಧಿಸುವ ತಂತ್ರಜ್ಞಾನ ಚಾಲ್ತಿಯಲ್ಲಿ ಇರದ ಕಾರಣ ಈ ಸವಾಲನ್ನು ಎದುರಿಸಲು ಇದು ಶಕ್ತವಾಗಿಲ್ಲ. ಪ್ರಳಯ, ಭೂಕಂಪ ಮುಂತಾದ ಕಾರಣಗಳಿಂದ ಉಂಟಾಗುವ ಒತ್ತಡವನ್ನು ಈ ಅಣೆಕಟ್ಟು ತಡೆದುಕೊಳ್ಳಲಾರದು.
ಭೂಚಲನೆ
ತಂದಿತ್ತ ಆತಂಕ
ಅಧ್ಯಯನವೊಂದರ ಪ್ರಕಾರ 1900ರಲ್ಲಿ ಕೊಯಮತ್ತೂರಿನಲ್ಲಿ ರಿಕ್ಟರ್ ಮಾಪಕದಲ್ಲಿ 6 ತೀವ್ರತೆ ದಾಖಲಿಸಿದ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೇವಲ 16 ಕಿ.ಮೀ. ದೂರದಲ್ಲಿತ್ತು. ಅಣೆಕಟ್ಟಿರುವ ಪ್ರದೇಶ ಭೂಕಂಪ ಸಂಭಾವ್ಯ ಸ್ಥಳವಾಗಿರುವುದರಿಂದ ಇನ್ನೊಂದು ಭೂಕಂಪ ಸಂಭವಿಸಿದ್ದೇ ಆದಲ್ಲಿ ಈ ಅಣೆಕಟ್ಟಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತದೆ ಅಧ್ಯಯನ ವರದಿ.
ಇಡುಕ್ಕಿ ಅಣೆಕಟ್ಟಿಗೂ ಆತಂಕ
ಮುಲ್ಲಪೆರಿಯಾರ್ ಅಣೆಕಟ್ಟಿನಿಂದ 47 ಕಿ.ಮೀ. ಕೆಳಗೆ ಇಡುಕ್ಕಿ ಡ್ಯಾಂ ಇದೆ. ಒಂದು ವೇಳೆ ಮುಲ್ಲಪೆರಿಯಾರ್ ಏನಾದರೂ ಒಡೆದರೆ ಭಾರೀ ಪ್ರಮಾ ಣದ ನೀರು ನೇರ ಇಡುಕ್ಕಿ ಡ್ಯಾಂಗೆ ಹರಿದು ಬರಲಿದೆ. ಇಷ್ಟೊಂದು ಪ್ರಮಾ ಣದ ನೀರನ್ನು ಇಡುಕ್ಕಿ ಡ್ಯಾಂ ಸಹಿಸಿ ಕೊಳ್ಳಲಾರದು. ಮಾತ್ರವಲ್ಲ ಈ ಅಣೆ ಕಟ್ಟಿಗೆ ಸ್ಪಿಲ್‌ವೇ ಇಲ್ಲ. ಈ ಪೈಕಿ ಚೆರು ತೋಣಿ ಡ್ಯಾಂನಲ್ಲಿ ಮಾತ್ರ ಸ್ಪಿಲ್‌ವೇ ಇದ್ದು, ಇದೊಂದ ರಿಂದಲೇ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಹಾಕಲು ಸಾಧ್ಯವಿಲ್ಲ.
ಏನಿದು ಲೈಮ್ ಮಿಶ್ರಣ?
ಕಾಂಕ್ರೀಟ್ ತಂತ್ರಜ್ಞಾನ ಆವಿಷ್ಕಾರದ ಮುನ್ನ ಲೈಂ ಮಿಶ್ರಣವನ್ನು ಬಳಸಿ ಅಣೆಕಟ್ಟು ನಿರ್ಮಿಸಲಾಗುತ್ತಿತ್ತು. ಲೈಮ್ (ಸುಣ್ಣ, ಕುಮ್ಮಾಯ), ಇಟ್ಟಿಗೆ ಹುಡಿ, ಬಂಡೆ ಚೂರು, ನೀರು ಇವುಗಳನ್ನು ಸೇರಿಸಿ ಮಿಶ್ರಣವನ್ನು ತಯಾರಿಸಲಾಗುತ್ತದೆ.
ಡ್ಯಾಂ ಡಿಕಮಿಷನ್‌ಗೆ ಒತ್ತಾಯ
ಒಂದು ಅಣೆಕಟ್ಟಿನ ಸರಾಸರಿ ಜೀವಿತಾವಧಿ 50 ವರ್ಷ. ವಿಶ್ವಸಂಸ್ಥೆಯ ವರದಿ ಪ್ರಕಾರ 2050ರ ವೇಳೆಗೆ ಭಾರತದ 4,250ರಷ್ಟು ಅಣೆಕಟ್ಟುಗಳಿಗೆ 50 ಮತ್ತು ಸುಮಾರು 64ರಷ್ಟು ಅಣೆಕಟ್ಟುಗಳಿಗೆ 150 ವರ್ಷಗಳಾಗಲಿವೆ. ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿಗೆ ಈಗಾಗಲೇ 126 ವರ್ಷ. ಅಪಾರ ಜಲರಾಶಿ ಹೊಂದಿರುವ ಈ ಡ್ಯಾಂ ಒಡೆಯುವ ಭೀತಿ ಇದೆ. ಇಂತಹ ದುರಂತ ಸಂಭವಿಸಿದರೆ ಸುಮಾರು 40 ಲಕ್ಷ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದಲೇ ಮುಲ್ಲಪೆರಿಯಾರ್ ಅಣೆಕಟ್ಟನ್ನು ಡಿಕಮಿಷನ್ ಮಾಡಬೇಕು ಎಂದು ಸೆಲೆಬ್ರಿಟಿಗಳು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.
ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ ಜಿಲ್ಲೆಗಳು ಈ ಅಣೆಕಟ್ಟಿನಿಂದ ಆತಂಕ ಎದುರಿಸುತ್ತಿವೆ. ಪ್ರವಾಹ ಪೆರಿಯಾರ್ ನದಿ ಮೂಲಕ ಪ್ರವಹಿಸಲಿದೆ. ಮುಲ್ಲಪೆರಿಯಾರ್‌ನಿಂದ ತಗ್ಗಿನ ಪ್ರದೇಶಗಳಲ್ಲಿರುವ ಇಡುಕ್ಕಿ, ಚೆರುತೋಣಿ, ಕುಳಮಾವ್, ಲೋವರ್ ಪೆರಿಯಾರ್, ಭೂತತಾಲ್‌ಕೆಟ್ಟ್ ಮುಂತಾದ ಅಣೆಕಟ್ಟುಗಳು ನಾಶವಾಗುವ ಭೀತಿ ಇದೆ. ವರಾಪ್ಪುರ ಭಾಗದಲ್ಲಿ ನೀರಿನ ಮಟ್ಟ 5 ಮೀಟರ್‌ವರೆಗೆ ಹೆಚ್ಚಾಗಬಹುದು ಎನ್ನುತ್ತದೆ ಅಧ್ಯಯನ.
-ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.