Lok Sabha, Assembly ಕ್ಷೇತ್ರಗಳ ಪುನರ್ವಿಂಗಡಣೆ: ದಕ್ಷಿಣ ತಕರಾರು ಏನು?ಮಾಹಿತಿ ಇಲ್ಲಿದೆ
2026ರ ಲೋಕಸಭಾ, ವಿಧಾನಸಭಾ ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ರಾಜ್ಯ ನಿರ್ಣಯ
Team Udayavani, Jul 27, 2024, 3:59 PM IST
ಕಾಲ ಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡುವುದು
ಸಾಂವಿಧಾನಿಕ ಕರ್ತವ್ಯವಾಗಿದೆ. ಹಾಗಾಗಿ 2026ರಲ್ಲಿ ಕೇಂದ್ರ ಸರಕಾರ ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯಕೈಗೊಳ್ಳಲಿದೆ. ಆದರೆ ಕರ್ನಾಟಕ ಸೇರಿ ಕೆಲವು ರಾಜ್ಯಗಳು ಪುನರ್ವಿಂಗಡಣೆಯನ್ನು ವಿರೋಧಿಸುತ್ತಿವೆ. ದಕ್ಷಿಣ ರಾಜ್ಯಗಳಿಂದ ಆಕ್ಷೇಪ ಏಕೆ, ಅವು ಎದುರಿಸುತ್ತಿರುವ ಆತಂಕಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.
ಉತ್ತರ- ದಕ್ಷಿಣ ಭಾರತದ ನಡುವೆ ಹೆಚ್ಚಲಿದೆ ಅಂತರ
ಗುರುವಾರವಷ್ಟೇ ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ 2026ರ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿದೆ. ತಮಿಳುನಾಡು ಸರಕಾರವು ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ನಿರ್ಣಯ ಅಂಗೀಕರಿಸಿತ್ತು. ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಈ ಬಗ್ಗೆ ವಿರೋಧವಿದೆ. ಈ ವಿರೋಧಕ್ಕೆ ಕಾರಣವೂ ಇದೆ.
ಈಗಿರುವ ಜನಸಂಖ್ಯೆಯನ್ನು ಆಧರಿಸಿ 2026ರಲ್ಲಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ರಾಜ್ಯಗಳ ಕ್ಷೇತ್ರಗಳಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಒಂದು ಅಂದಾಜಿನ ಪ್ರಕಾರ, ಸದ್ಯ 28 ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದ ಕ್ಷೇತ್ರಗಳ ಸಂಖ್ಯೆ 36ಕ್ಕೆ ಹೆಚ್ಚಾದರೆ, ತೆಲಂಗಾಣದಲ್ಲಿ 17ರಿಂದ 20, ಆಂಧ್ರ ಪ್ರದೇಶದಲ್ಲಿ 25ರಿಂದ 28 ಮತ್ತು ತಮಿಳುನಾಡಿನಲ್ಲಿ ಕೇವಲ ಎರಡೇ ಕ್ಷೇತ್ರ ಹೆಚ್ಚಾಗಲಿವೆ! ಅಂದರೆ 39ರಿಂದ 41ಕ್ಕೇರಿಕೆಯಾಗಲಿದೆ. ಇನ್ನು ಜನಸಂಖ್ಯೆ ನಿಯಂತ್ರಣವನ್ನು ದಕ್ಷವಾಗಿ ನಿರ್ವಹಿಸಿರುವ ಕೇರಳದಲ್ಲಿ ಕೇವಲ ಒಂದೇ ಕ್ಷೇತ್ರ ಹೆಚ್ಚಲಿದೆ. 19 ಕ್ಷೇತ್ರಗಳು 20 ಆಗಲಿವೆ!
ಆದರೆ ಜನಸಂಖ್ಯೆಯ ನಿಯಂತ್ರಣವನ್ನು ಪಾಲಿಸದ ಉತ್ತರ ಭಾರತದ ಕೆಲವು ರಾಜ್ಯಗಳ ಲೋಕಸಭೆ ಕ್ಷೇತ್ರಗಳು ಗಣನೀಯವಾಗಿ ಏರಿಕೆಯಾಗಲಿವೆ. ಸದ್ಯ 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕ್ಷೇತ್ರಗಳ ಸಂಖ್ಯೆ 128ಕ್ಕೆ ಏರಿಕೆಯಾಗಲಿದೆ! ಬಿಹಾರದಲ್ಲಿ ಸದ್ಯ 40 ಕ್ಷೇತ್ರಗಳಿದ್ದು, 70ಕ್ಕೆ ಏರಿಕೆಯಾದರೆ, 29 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ 47 ಕ್ಷೇತ್ರಗಳು ಇರಲಿವೆ! ಅದೇ ರೀತಿ, ಮಹಾರಾಷ್ಟ್ರದಲ್ಲಿ 20 ಹೊಸ ಕ್ಷೇತ್ರಗಳು ಸೃಷ್ಟಿಯಾಗಲಿವೆ. ಈಗಿರುವ 48 ಕ್ಷೇತ್ರಗಳಿಂದ 68ಕ್ಕೆ ಏರಿಕೆಯಾಗಲಿದೆ. ಇನ್ನು ರಾಜಸ್ಥಾನದಲ್ಲಿ ಸದ್ಯ 25 ಕ್ಷೇತ್ರಗಳಿದ್ದು ಅವು 44 ಏರಿಕೆಯಾಗಲಿವೆ. ಒಟ್ಟಾರೆ 543 ಲೋಕಸಭಾ ಕ್ಷೇತ್ರಗಳು 840ಕ್ಕೂ ಅಧಿಕವಾಗುವ ಸಾಧ್ಯತೆಗಳಿವೆ.
ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಆತಂಕವೇನು?
ವಾಸ್ತವದಲ್ಲಿ 2021ರಲ್ಲಿ ಜನಗಣತಿ ನಡೆಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜನಗಣತಿ ನಡೆಸಿಲ್ಲ. ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಹೊಸ ಜನಗಣತಿಯನ್ನಾಧರಿಸಿ ನಡೆಸಲಾಗುತ್ತದೆ. ಇಲ್ಲಿ ಏನಾಗಿದೆಯೆಂದರೆ, ಹೆಚ್ಚುತ್ತಿರುವ ಜನಸಂಖ್ಯೆ ತಡೆಯುವುದಕ್ಕಾಗಿ ಕೇಂದ್ರ ಸರಕಾರ 5 ದಶಕ ಗಳಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. ಉತ್ತರದ ರಾಜ್ಯಗಳು ಈ ವಿಷಯದಲ್ಲಿ ಸಾಕಷ್ಟು ಹಿಂದಿವೆ. ನೂತನ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ನಡೆದರೆ, ದಕ್ಷಿಣದ ರಾಜ್ಯಗಳ ರಾಜ ಕೀಯ ಪ್ರಾತಿನಿಧ್ಯ ಕುಸಿಯಲಿದೆ. ಇದು ಸಹಜವಾಗಿಯೇ ನೀತಿ ನಿರೂಪಣೆ, ಅಭಿವೃ ದ್ಧಿಯಲ್ಲಿ, ಧನ ಸಹಾಯ ಸೇರಿ ಎಲ್ಲ ವಿಷಯದಲ್ಲಿ ದಕ್ಷಿಣ ರಾಜ್ಯಗಳ ದನಿ ಕ್ಷೀಣಿಸಲು ಕಾರಣ ವಾಗುತ್ತದೆ. ಉತ್ತರ ಭಾರತದ ರಾಜ್ಯಗಳು ಮೇಲುಗೈ ಸಾಧಿಸ ಲಿವೆ. ಆಗ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಇದೇ ಕಾರಣಕ್ಕೆ ದಕ್ಷಿಣ ರಾಜ್ಯಗಳು 1971ರ ಜನಗಣತಿ ಆಧರಿಸಿಯೇ ಕ್ಷೇತ್ರ ಪುನರ್ವಿಂಗಡಣೆ ಮಾಡಬೇಕೆಂದು ಪಟ್ಟು ಹಿಡಿದಿವೆ.
ಮಧ್ಯಮ ಮಾರ್ಗದ ಮೂಲಕ ಪರಿಹಾರ!
ಉತ್ತರ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಒಪ್ಪಿಗೆಯಾಗುವ ದಾರಿಯನ್ನು ಹುಡುಕುವುದು ಅಗತ್ಯ. ಕೇಂದ್ರ ಸರಕಾರವು ಪುನರ್ವಿಂಗಡಣೆ ಮಾಡುವ ಮುನ್ನ ದಕ್ಷಿಣ ರಾಜ್ಯಗಳ ಅಹವಾಲು ಪರಿಗಣಿಸಬೇಕು. ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಬೇಕು. ಅಗತ್ಯಬಿದ್ದರೆ ತಜ್ಞರ ಸಮಿತಿಯನ್ನು ರಚಿಸಿ, ಅವರ ಪಡೆದುಕೊಂಡು ಮಧ್ಯಮ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನಿಸಬೇಕೆನ್ನುವುದು ತಜ್ಞರು ಸೂಚಿಸುವ ಪರಿಹಾರವಾಗಿದೆ. ರಕ್ಷಣೆ, ವಿದೇಶಾಂಗ ವ್ಯವಹಾರ, ರೈಲ್ವೇ, ಸಂವಹನ ಮತ್ತು ತೆರಿಗೆ ಸಂಪೂರ್ಣ ಕೇಂದ್ರಕ್ಕೆ ಸಂಬಂಧಿಸಿದೆ. ಕೇಂದ್ರದ ಇನ್ನುಳಿದ ಎಲ್ಲ ಕಾರ್ಯಕ್ರಮಗಳನ್ನು ರಾಜ್ಯ ಸರಕಾರಗಳ ಮೂಲಕವೇ ಅನುಷ್ಠಾನ ಮಾಡಬೇಕು. ಹಾಗಾಗಿ ಈಗಿರುವ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಇದರಿಂದ ರಾಜ್ಯಗಳ ಪ್ರತಿನಿಧಿತ್ವದಲ್ಲಿ ಯಾವುದೇ ಧಕ್ಕೆಯಾಗುವುದಿಲ್ಲ. ಜತೆಗೆ ಇದರಿಂದ ಒಕ್ಕೂಟ ವ್ಯವಸ್ಥೆಯ ತಣ್ತೀಗಳಿಗೂ ಯಾವುದೇ ಧಕ್ಕೆಯಾಗುವುದಿಲ್ಲ. ಸದ್ಯದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳನ್ನು ಹೆಚ್ಚಿಸಬಹುದು. ದೇಶ ದಲ್ಲಿ ಪ್ರಜಾಪ್ರಭುತ್ವವವನ್ನು ಗಟ್ಟಿಗೊಳಿಸಬೇಕಿದ್ದರೆ, ಸ್ಥಳೀಯ ಸಂಸ್ಥೆಗಳನ್ನು ಬಲವರ್ಧನೆ ಮಾಡುವುದು ಅತ್ಯಗತ್ಯವಾಗಿದೆ.
ಏನಿದು ಕ್ಷೇತ್ರಗಳ ಪುನರ್ವಿಂಗಡಣೆ?
ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು ಖಚಿತಪಡಿಸುವುದು ಮತ್ತು ಆ ಕ್ಷೇತ್ರಗಳ ಗಡಿಯನ್ನು ನಿರ್ಧರಿಸುವುದನ್ನು ಕ್ಷೇತ್ರ ಪುನರ್ವಿಂಗಡಣೆ ಎನ್ನುತ್ತೇವೆ. ಕ್ಷೇತ್ರ ಪುನರ್ವಿಂಗಡಣೆ ವೇಳೆ ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲು ಕ್ಷೇತ್ರಗಳನ್ನು ಗುರುತಿಸಲಾಗುತ್ತದೆ. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲು ಕಾಯ್ದೆ ಜಾರಿಗೆ ತಂದಿರುವುದರಿಂದ 2026ರಲ್ಲಿ ನಡೆಯಲಿರುವ ಕ್ಷೇತ್ರ ಪುನರ್ವಿಂಗಣೆ ವೇಳೆ ಮಹಿಳಾ ಕ್ಷೇತ್ರಗಳನ್ನು ಗುರುತಿಸಬೇಕಾಗುತ್ತದೆ. ಈ ಕ್ಷೇತ್ರ ಪುನರ್ವಿಂಗಡ ಣೆಯ ಕಾರ್ಯವನ್ನು ಭಾರತೀಯ ಪುನರ್ವಿ ಂಗಡಣೆ ಆಯೋಗವು ನಡೆಸಿಕೊಡುತ್ತದೆ. ಜನ ಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಪುನರ್ವಿಂಗಡಣೆಯನ್ನು ಮಾಡಲು ಸಂವಿಧಾನದ ಆರ್ಟಿಕಲ್ 82 ಅಧಿಕಾರವನ್ನು ನೀಡುತ್ತದೆ.
ಈವರೆಗೆ 4 ಬಾರಿ ನಡೆದಿದೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ
1952
ಸ್ವಾತಂತ್ರ್ಯ ಅನಂತರ ಮೊದಲ ಬಾರಿಗೆ 1952ರಲ್ಲಿ ಲೋಕಸಭೆ ಕ್ಷೇತ್ರಗಳನ್ನು ಗುರುತಿಸಲಾಯಿತು. ಆಗ ದ್ವಿಸದಸ್ಯ ಕ್ಷೇತ್ರಗಳೂ ಸೇರಿ ದಂತೆ ಒಟ್ಟು 494 ಲೋಕಸಭಾ ಕ್ಷೇತ್ರಗಳಿದ್ದವು. 1951 ಜನ
ಗಣತಿ ಆಧರಿಸಿ ಪ್ರಕ್ರಿಯೆ ನಡೆಸಲಾಯಿತು. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು.
1963
ಎರಡನೇ ಕ್ಷೇತ್ರ ಪುನರ್ವಿಂಗಡಣೆ ವೇಳೆ ದ್ವಿಸದಸ್ಯ ಲೋಕಸಭಾ ಕ್ಷೇತ್ರಗಳನ್ನು ರದ್ದು ಮಾಡಲಾಯಿತು. 1961ರ ಜನಗಣತಿ ಆಧರಿಸಿ, ಲೋಕಸಭಾ ಕ್ಷೇತ್ರಗಳನ್ನು 494ರಿಂದ 522ಕ್ಕೆ ಹೆಚ್ಚಿಸಲಾಯಿತು. ಅದೇ ರೀತಿ, 3771 ವಿಧಾನಸಭೆ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಲಾಯಿತು.
1973
1971ರಲ್ಲಿ ಕೇಂದ್ರ ಸರಕಾರವು ಜನಗಣತಿ ನಡೆಸಿತು. ಬಳಿಕ 1973ರಲ್ಲಿ ಕೇಂದ್ರ ಸರಕಾರ 2ನೇ ಬಾರಿಗೆ ಕ್ಷೇತ್ರಗಳ ಪುನರ್ವಿಂಗಡಣೆ ಕೈಗೊಂಡಿತು. ಆದರೆ ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ವಿಧಾನಸಭಾ ಕ್ಷೇತ್ರಗಳನ್ನು 3771ರಿಂದ 3997ಕ್ಕೆ ಹೆಚ್ಚಿಸಲಾಯಿತು.
2002
ಈ ಬಾರಿಯೂ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಮೀಸಲು ಕ್ಷೇತ್ರಗಳು, ಕ್ಷೇತ್ರಗಳ ಗಡಿಗಳು ಬದಲಾವಣೆಯಾದವು. ರಾಜ್ಯ ವಿಧಾನಸಭೆ ಕ್ಷೇತ್ರಗಳನ್ನು 3997ರಿಂದ 4123ಕ್ಕೆ ಹೆಚ್ಚಿಸಲಾಯಿತು. 2001ರ ಜನಗಣತಿ ಆಧರಿಸಿ ಪ್ರಕ್ರಿಯೆ ನಡೆಸಲಾಯಿತು.
ಈಗಿರುವ ಒಟ್ಟು ಲೋಕಸಭಾ ಕ್ಷೇತ್ರಗಳು 543
ಈಗಿರುವ ಒಟ್ಟು ರಾಜ್ಯಸಭಾ ಕ್ಷೇತ್ರಗಳು 250
ಈಗಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು 4123
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.