ಲಾಕ್‌ಡೌನ್‌ನಲ್ಲಿ ಲಂಡನ್ ಲೈಫ್
Team Udayavani, Apr 14, 2021, 3:30 PM IST
ಕಾಣದಾ ಕಡಲಿಗೆ ಹಂಬಲಿಸಿದೆ ಮನ, ಕಾಣಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ… ಸಂಗೀತ ಮಾಂತ್ರಿಕ ಸಿ. ಅಶ್ವತ್ಥ್ ಅವರು ಹಾಡನ್ನು ಸಣ್ಣಗೆ ಹಿನ್ನೆಲೆಯಲ್ಲಿ “ಅಲೆಕ್ಸಾ’ ಬಿತ್ತರಿಸುತ್ತಿದ್ದಳು. ಹಾಗೆ ಕಣ್ಣುಮುಚ್ಚಿ ಅದರ ಸಾಹಿತ್ಯದ ಬಗ್ಗೆ ಯೋಚಿಸುತ್ತಾ, ಹಾಡನ್ನು ಆನಂದಿಸುತ್ತಿರುವಾಗಲೇ ಮೆಲ್ಲಗೆ ನಿದ್ರೆಗೆ ಜಾರಿ ನೆನಪಿನ ಆಳಕ್ಕೆ ಸರಿದದ್ದು ಗೊತ್ತೇ ಆಗಲಿಲ್ಲ.
ಕಡಲಾಚೆಗೆ ಸಾವಿರಾರು ಮೈಲು ದೂರದವರೆಗೆ ಬಂದು ತಲುಪಿದ್ದರ ಜಾಡು ಹಿಡಿದು ಮೆಲ್ಲಗೆ ಹಿಂದಕ್ಕೆ ಹೋಗುತ್ತಾ ಕನಸಿನಲ್ಲಿ ಮೆಲಕು ಹಾಕಲಾರಂಭಿಸಿದೆ. ಮೊದಲಿಗೆ ಕಣ್ಣು ಮುಂದೆ ಬಂದದ್ದು ನಾನು ಹುಟ್ಟಿ ಬೆಳೆದ ಊರು “ದೇವದುರ್ಗ’. ಅಷ್ಟೊಂದು ಪ್ರಚಲಿತವಲ್ಲದ ಆದರೂ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ, ಯಾವುದನ್ನು ವಿಶೇಷವಾಗಿ ಕಾಯ್ದಿರಿಸಿಕೊಳ್ಳುತ್ತಿದ್ದಂತ ಊರು.
ಅಂತಹ ಒಂದು ವಾತಾವರಣದಲ್ಲಿ ಕಳೆದ ನನ್ನ ಬಾಲ್ಯದ ದಿನಗಳು. ಶಾಲಾ ದಿನಗಳು, ನಿರ್ಭಯವಾಗಿ ಕಿ.ಮೀ. ದೂರ ನಡೆದೇ ಶಾಲೆಗೆ ಹೋಗುತ್ತಿದ್ದದ್ದು, ಶಾಲಾ ಮಹಡಿಯಿಂದ ಕೆಳಗೆ ಧುಮುಕುವುದು, ಕಿತಾಪತಿಗಳನ್ನು ಮಾಡಿ ಏಟು ತಿನ್ನುವುದು, ಸೈಕಲು ಕಲಿಯಲು ಹೋಗಿ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದವರ ಮೇಲೆರೆಗಿ ಎಚ್ಚರತಪ್ಪಿ ಬಿದ್ದವನಂತೆ ನಾಟಕ ಮಾಡಿದ್ದು, ಊರಿಗೆ ಬಂದ ಆನೆಯ ಹಿಂದೆ ದಿನವಿಡಿ ತಿರುಗಿ ಮನೆಯಲ್ಲಿ ಒದೆ ತಿಂದದ್ದು, ಹೇಳದೆ ಕೇಳದೆ ಈಜು ಕಲಿಯಲು ಬಾವಿಗೆ ಹೋಗಿ “ಮಾಟಿ’ ಯ ಮೇಲಿನಿಂದ ವಿವಿಧ ಭಂಗಿಯಲ್ಲಿ ಹಾರುತ್ತಿದ್ದದ್ದು, ಅದು ಮನೆಯಲ್ಲಿ ಗೊತ್ತಾಗಿ ಬೈಸಿಕೊಳ್ಳುತ್ತಿದ್ದದ್ದು, ಟಿವಿ ನೋಡುವುದಕ್ಕಾಗಿಯೇ ನೆರೆಹೊರೆಯವರ ಮನೆಯ ಕೆಲಸಗಳನ್ನು ಮಾಡುತ್ತಿದ್ದದ್ದು, ರಾತ್ರಿ ಹೊತ್ತು ತಡವಾಗುತ್ತಿದ್ದರಿಂದ ಕಟ್ಟೆಯ ಮೇಲೆಯೇ ಮಲಗಿಕೊಳ್ಳುತ್ತಿದ್ದದ್ದು… ಒಂದೇ ಎರಡೇ ಹೇಳುತ್ತಾ ಹೋದರೆ ಒಂದೊಂದು ಘಟನೆಯನ್ನು ಕತೆಯಾಗಿಸಬಹುದೇನೊ.
ಇವೆಲ್ಲವು ಕನಸಿನೊಳಗೆ ಸರಿದು ಹೋಗಿದ್ದಕ್ಕೆ ಬಹುಶ ಎರಡು ಕಾರಣಗಳಿರಬಹುದು. ಒಂದು ಕೊರೊನಾ ಕಾರಣದಿಂದ ಈ ಬಾರಿ ರಜಾ ದಿನಗಳಲ್ಲಿ ಎಲ್ಲಿಗೂ ಹೋಗಲು ಆಗದೇ ಇರುವುದು, ಇನ್ನೊಂದು ನಮ್ಮ ಮಕ್ಕಳು ಅಂತಹ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಭಾವನೆ.
ಎಚ್ಚರವಾದಾಗ ಮಗ ಮತ್ತು ಮಗಳು ಎಂದಿನಂತೆ ಟಿವಿ ರಿಮೋಟ್‌ಗಾಗಿ ಜಗಳವಾಡುತ್ತಿದ್ದದ್ದು ನೋಡಿ ಒಮೊಮ್ಮೆ ಪಂಜರದೊಳಗೆ ಬಂಧಿಸಿಟ್ಟ ಮುದ್ದಾದ ಗಿಳಿಗಳಂತೆ, ಮಗದೊಮ್ಮೆ ಬೋನಿನೊಳಗೆ ಹಿಡಿದು ಹಾಕಿದ ಕಾಡು ಪ್ರಾಣಿಗಳಂತೆ ಎಂದೆನಿಸಿದ್ದು ಮಾತ್ರ ಸುಳ್ಳಲ್ಲ.
ಕಾರಣಾಂತರಗಳಿಂದ ಮಕ್ಕಳಿಗೆ ಒದಗಿಸಿಕೊಡಬೇಕಾದ ಎಲ್ಲ ಸೌಲಭ್ಯಗಳನ್ನು ನನ್ನಿಂದ ಒದಗಿಸಲಾಗುತ್ತಿಲ್ಲವೆನ್ನುವ ಅಳು ಮನದಲ್ಲಿ ಜಾರಿಹೋಗುವುದು. ಒಂದೊಮ್ಮೆ ಇಂದು ಭಾರತದಲ್ಲಿ ಇದ್ದಿದ್ದರೆ ಪರಿಸ್ಥಿತಿ ಮತ್ತು ಅದರ ಚಿತ್ರಣ ಹೇಗಿರುತ್ತಿತ್ತು ಎಂದು ಊಹಿಸುತ್ತಾ ಹೋದರೆ, ಕೆಲವು ಆಯ್ಕೆಗಳು ನಮ್ಮ ಮುಂದಿರುತ್ತಿದವು.
ಅವುಗಳಲ್ಲಿ ಬೆಂಗಳೂರಿನ ರಾಜಾಜಿನಗರದ ಮನೆಯಲ್ಲಿ ಇದ್ದುಕೊಂಡು ಇನ್ನುಳಿದ ಮಹಡಿಗಳಲ್ಲಿರುವ ಕುಟುಂಬದವರೊಂದಿಗೆ ಕೊನೆ ಪಕ್ಷ ಹಾಯ್, ಹಲೋ ಎನ್ನಬಹುದಿತ್ತು ಮತ್ತು ಸುತ್ತಮುತ್ತಲಿನ ದೇವಸ್ಥಾನ, ಉದ್ಯಾನಗಳಿಗೆ ಮಡದಿ ಮಕ್ಕಳನ್ನು ಕರೆದುಕೊಂಡು ಹೋಗಬಹುದಿತ್ತು. ಇಲ್ಲ ನಡುನಡುವೆ ಒಂದೆರಡು ದಿನದ ಪ್ರವಾಸಕ್ಕಾದರೂ ಸ್ವಲ್ಪ ದೂರ ಹೋಗಿಬರಬಹುದಿತ್ತು. ಆದರೆ ಇಲ್ಲಿ ಅಂತಹ ಅವಕಾಶ ತುಂಬಾ ಕ್ಷೀಣ. ಚಳಿಯ ಕಾರಣದಿಂದ ಹೊರ ಹೋಗಲು ಒಪ್ಪಿಕೊಳ್ಳದ ಮನಸ್ಸು, ಹೊರ ಹೋಗಬೇಕು ಎಂದು ನಿರ್ಧರಿಸಿದರೂ ಎಲ್ಲಿಗೆ ಹೋಗಬೇಕೆಂದು ಕಾಡುವ ಪ್ರಶ್ನೆ, ಹೋದರು ಮಕ್ಕಳೊಂದಿಗೆ ಪಾಲಿಸಬೇಕಾದ ನಿಯಮ ನಿಬಂಧನೆಗಳು ಒಟ್ಟಾರೆಯಾಗಿ ಮನೆಯಲ್ಲಿರುವುದು ಸೂಕ್ತವೆಂದೆನಿಸಿ ಒಂದು ರೀತಿಯಲ್ಲಿ ಸ್ವಯಂಪ್ರೇರಿತ ಗೃಹಬಂಧನ.
ಇಂತಹ ಸನ್ನಿವೇಶಗಳನ್ನೇ ಗಮನಿಸಿ ಅನುಭವಿಸಿಯೇ ಇರಬೇಕು ಹಿರಿಯರು ಹೇಳಿದ್ದು, “ಕೋತಿ ತಾನು ಕೆಡುವುದಲ್ಲದೆ ವನವೆಲ್ಲ ಕೆಡಸಿತು’ ಚೀನವನ್ನು ಗಮನದಲ್ಲಿಟ್ಟುಕೂಂಡು, “ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ’ ಎನ್ನುವುದು ಉಳಿದವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು, “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಅನ್ನುವುದು ಮಾಸ್ಕನ್ನು ಗಮನದಲ್ಲಿಟ್ಟುಕೊಂಡು, “ಮಾಡಿದ್ದು ಉಣ್ಣೋ ಮಹಾರಾಯ’ ಈಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉದಾಹರಿಸಬಹುದು ಎಂದೆನಿಸುತ್ತಿದೆ.
ಬೆಂಗಳೂರು ಅಲ್ಲದೆ ಹೋಗಿದ್ದರೆ ಇನ್ನುಳಿದ ಆಯ್ಕೆ ಹುಟ್ಟೂರು, ಇಲ್ಲವೆಂದರೆ ಮಡದಿಯ ತವರೂರು. ಅಲ್ಲಿಗೆ ಹೋದರೆ ಅಪ್ಪ, ಅಮ್ಮಾ ಅಥವಾ ಅತ್ತೆ, ಮಾವ, ಬಾಲ್ಯ ಸ್ನೇಹಿತರೊಂದಿಗೆ ನಾವು ಕೆಲವು ದಿನಗಳು ಕಳೆದರೆ ಮಕ್ಕಳು ಅಜ್ಜ ಅಜ್ಜಿಯರೊಂದಿಗೆ ಖುಷಿ ಖುಷಿಯಾಗಿ ಇರುತ್ತಿದ್ದರೇನೊ ಎಂದೆನಿಸುತ್ತಿದೆ.
ಅಜ್ಜ ಅಜ್ಜಿಯರು ಸಡಗರ, ಮೊಮ್ಮಕ್ಕಳು ವಯೋಸಹಜ ಆಸೆಗಳು, ಆಕಾಂಕ್ಷೆಗಳು, ಕೇಳಬಹುದಾದ ತಲೆ ಬುಡವಿಲ್ಲದ ತರ್ಲೆ ಪ್ರಶ್ನೆಗಳು, ಅವುಗಳಿಗೆ ಉತ್ತರಿಸಬಹುದಾದ ಹಾಸ್ಯ ಮಿಶ್ರಿತ ಉತ್ತರಗಳು, ಹಬ್ಬ- ಹರಿದಿನಗಳು ಆಚರಿಸುತ್ತಾ ಹೀಗೆ ಇಷ್ಟು ತೀಕ್ಷ¡ವಾಗಿ ಗೃಹಬಂಧನ ಅನುಭವಕ್ಕೆ ಬರುತ್ತಿರಲಿಲ್ಲವೇನೋ ಮತ್ತು ಇದಕ್ಕೆ ಇರಬೇಕು “ಹಣೆಬರಹಕ್ಕೆ ಹೊಣೆಯಾರು…?’ ಎಂದು ಹೇಳಿರುವುದು.
ಒಟ್ಟಾರೆಯಾಗಿ “ಕೊರೊನಾ’ ದಿಂದಾಗಿ ನಮ್ಮ “ಲಂಡನ್ ಲೈಫ್’ ನ ಪ್ರಹಸನ ಒಂದೇ ವಾಕ್ಯದಲ್ಲಿ ಗಾದೆ ಮಾತನ್ನು ಬೆಸೆದುಕೊಂಡು ಹೇಳುವುದಾದರೆ “ದಿನಾ ಸಾಯುವವರಿಗೆ ಅಳುವವರಾರು…?’ ಎಂದು ಉದಾರಹರಿಸಬಹುದೇನೊ ಎಂದೆನಿಸುತ್ತದೆ.
-ಗೋವರ್ಧನ ಗಿರಿ ಜೋಷಿ, ಲಂಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.