ಕಳೆದು ಹೋಯ್ತು ಕ್ರೋಮ್‌ಕಾಸ್ಟ್!
Team Udayavani, Oct 15, 2018, 2:50 AM IST
ಸ್ಮಾರ್ಟ್ ಟಿವಿ ನೋಡುವವರು ಯುವಕರು, ಅವರು ಮೊಬೈಲ್‌ನ ಒಂದು ಎಕ್ಸ್‌ಟೆಂಡೆಡ್ ಸ್ಕ್ರೀನ್ ಆಗಿ ಟಿವಿಯನ್ನು ಪರಿಗಣಿಸಿದ್ದಾರೆ ಎಂದು ಗೂಗಲ್ ಭಾವಿಸಿದಂತಿದೆ. ಆದರೆ ಟಿವಿ ನೋಡುವ ಮನಸ್ಥಿತಿಯೇ ಬೇರೆ. ಮೊಬೈಲ್ ನೋಡುವ ಮನಸ್ಥಿತಿಯೇ ಬೇರೆ. ಅಷ್ಟೇ ಅಲ್ಲ, ಟಿವಿಯನ್ನು ಇಡೀ ಕುಟುಂಬ ಕುಳಿತು ನೋಡುತ್ತದೆ. ಜೊತೆಗೆ ಮೊಬೈಲ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಯಾವ ಆಪ್ಷನ್ ಅನ್ನಾದರೂ ಸುಲಭವಾಗಿ ಬಳಸಬಹುದು. ಟಿವಿಯಲ್ಲಿ ಇದು ಸಾಧ್ಯವಿಲ್ಲ.
ಜಗತ್ತಿನಲ್ಲಿ ಮಾರಾಟವಾಗುವ ಶೇ. 90ಕ್ಕೂ ಮೊಬೈಲ್‌ಗಳಲ್ಲಿ ಗೂಗಲ್‌ನ ಒಂದಲ್ಲ ಒಂದು ಸೌಲಭ್ಯ ಇದ್ದೇ ಇರುತ್ತದೆ. ಆಂಡ್ರಾಯ್ಡ ಮೊಬೈಲ್‌ಗಳಲ್ಲಂತೂ ಗೂಗಲ್ ಅಸಿಸ್ಟೆಂಟ್‌ನಿಂದ ಆರಂಭಿಸಿ, ಜಿಮೇಲ್, ಕ್ಯಾಲೆಂಡರ್‌ನಂತಹ ಎಲ್ಲ ಬೇಸಿಕ್ ಗೂಗಲ್ ಸೇವೆಗಳು ಲಭ್ಯ. ನಗರದ ಯುವಕರಿಗಂತೂ ಕೈಯಲ್ಲಿ ಮೊಬೈಲ್ ಇಲ್ಲದೇ ದಿನಕ್ಕೆ ಮೂರು ಬಾರಿಯಾದರೂ ಗೂಗಲ್‌ನಲ್ಲಿ ಏನಾದರೂ ಹುಡುಕದೇ ಸಮಾಧಾನವಿಲ್ಲ. ಗೂಗಲ್ ಮತ್ತು ಮೊಬೈಲ್ ಎಂಬುದು ಹದಿಹರೆಯದ ಹಾಗೂ ಮಧ್ಯವಯಸ್ಸಿನ ಜನರ ಜೀವನದ ಅವಿಭಾಜ್ಯ ಅಂಗ. ಆ್ಯಪಲ್ ಫೋನ್ ಕೊಂಡವರೂ ಗೂಗಲ್ ಸೇವೆಗಳ ಬಳಕೆಯನ್ನು ಮಿಸ್ ಮಾಡಿಕೊಳ್ಳುವಷ್ಟು ವ್ಯಾಪಕ.
ಆದರೆ, ಮೊಬೈಲ್ ಮೂಲಕ ಜನರ ಮನಸ್ಸಿನ ಒಳಹೊಕ್ಕ ಗೂಗಲ್ ಟಿವಿಗೆ ಬರಲೇ ಇಲ್ಲ. ಬಂದಿದ್ದರೂ ಆ ಮಟ್ಟಿಗೆ ಅದು ಆವರಿಸಿಕೊಳ್ಳಲಿಲ್ಲ. ಕ್ರೋಮ್‌ಕಾಸ್ಟ್ ಎಂಬ ಸ್ಟ್ರೀಮಿಂಗ್ ಸಾಧನವನ್ನು ಕೆಲವು ವರ್ಷಗಳ ಹಿಂದೆ ಗೂಗಲ್ ಬಿಡುಗಡೆ ಮಾಡಿತ್ತು. ಆರಂಭದಲ್ಲೇನೋ ಇತರ ಕಂಪನಿಗಳ ಸ್ಟ್ರೀಮಿಂಗ್ ಸಾಧನಗಳಿಗೆ ಉತ್ತಮ ಪೈಪೋಟಿ ನೀಡುತ್ತಿತ್ತು. ಆದರೆ ಕಾಲ ಕಳೆದಂತೆ ತೆರೆಮರೆಗೆ ಸರಿದು ಹೋಗಿದೆ. ಈಗಂತೂ ಕ್ರೋಮ್‌ಕಾಸ್ಟ್ ಹೆಸರೇ ಕಳೆದುಹೋಗಿದೆ. ಬಹುಶಃ ಗೂಗಲ್ ಕೂಡ ಈ ವಿಚಾರದಲ್ಲಿ ಸೋಲೊಪ್ಪಿಕೊಂಡಂತಿದೆ. ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವಾಗಲೇ ಕ್ರೋಮ್‌ಕಾಸ್ಟ್‌ನ ಹೊಸ ಆವೃತ್ತಿಯನ್ನೂ ಬಿಡುಗಡೆ ಮಾಡಲಾಯಿತು. ಅಚ್ಚರಿಯ ಸಂಗತಿಯೆಂದರೆ ವೇದಿಕೆಯ ಮೇಲೆ ಕ್ರೋಮ್‌ಕಾಸ್ಟ್ ಬಗ್ಗೆ ಒಂದೇ ಒಂದು ಮಾತೂ ಹೇಳಲಿಲ್ಲ. ಬದಲಿಗೆ ಅದೊಂದು ನಿರ್ಲಕ್ಷಿತ ಉತ್ಪನ್ನದಂತೆ ಸುಮ್ಮನೆ ಮಾರುಕಟ್ಟೆಗೆ ಬಂತು.
ಸ್ಟ್ರೀಮಿಂಗ್ ಡಿವೈಸ್‌ಗಳು ನಮಗೆ ಇಂಟರ್‌ನೆಟ್‌ನಲ್ಲಿರುವ ಕಂಟೆಂಟ್ ಅನ್ನು ಟಿವಿಯಲ್ಲಿ ವೀಕ್ಷಿಸುವ ಸೌಲಭ್ಯ ಒದಗಿಸುತ್ತವೆ. ಇದೇ ರೀತಿ ಅಮೇಜಾನ್‌ನ ಫೈರ್ ಸ್ಟಿಕ್ ಹಾಗೂ ರೊಕು ಸಾಧನಗಳೂ ಮಾರುಕಟ್ಟೆಯಲ್ಲಿವೆ. ಈ ಪೈಕಿ ಅಮೇಜಾನ್ ಫೈರ್ ಸ್ಟಿಕ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಹೊಂದಿದೆ. ಟಿವಿ ವಿಷಯದಲ್ಲಿ ಗೂಗಲ್ ಮೊದಲಿನಿಂದಲೂ ಎಡವುತ್ತಲೇ ಇದೆ. ಈ ವಿಚಾರದಲ್ಲಿ ಗೂಗಲ್‌ನ ಎಲ್ಲ ಲೆಕ್ಕಾಚಾರಗಳೂ ತಪ್ಪಾದವು. ಯಾಕೆಂದರೆ ಮನೆಯಲ್ಲಿರುವ ಟಿವಿಯನ್ನು ಸ್ಮಾರ್ಟ್‌ಫೋನ್ ಇಟ್ಟುಕೊಂಡು ಕಂಟ್ರೋಲ್ ಮಾಡಲು ಯಾರೂ ಬಯಸುವುದಿಲ್ಲ. ಜನರು ಸಾಮಾನ್ಯವಾಗಿ ಮೊಬೈಲ್ ಬಳಸಿದ್ದು ಸಾಕಾಗಿಯೇ ಟಿವಿ ಕಡೆಗೆ ಮುಖ ಹೊರಳಿಸುತ್ತಾರೆ. ಅಂಥವರಿಗೆ ಮೊಬೈಲನ್ನೇ ಬಳಸಿ ಟಿವಿ ಕಂಟ್ರೋಲ್ ಮಾಡಿ ಎಂದರೆ ಟಿವಿ ಆಫ್ ಮಾಡಿ ಕಣ್ಣು ಮುಚ್ಚಿ ಕುಳಿತುಬಿಡಬಹುದು! ಕ್ರೋಮ್‌ಕಾಸ್ಟ್‌ನಲ್ಲಿ ಆಗಿದ್ದೂ ಹೀಗೇ…ಕ್ರೋಮ್‌ಕಾಸ್ಟ್ ಕೊಂಡರೆ ನಮಗೆ ಅದರ ಜೊತೆಗೆ ರಿಮೋಟ್ ಕೊಡುವುದಿಲ್ಲ. ಬದಲಿಗೆ ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಿಂದ ಟಿವಿ ಕಂಟ್ರೋಲ್ ಮಾಡಬೇಕಾಗುತ್ತದೆ. ಇದು ಕಿರಿಕಿರಿಯ ಕೆಲಸ.
ಜನ ಟಿವಿಗೆ ರಿಮೋಟನ್ನೇ ಲಿಂಕ್ ಮಾಡುತ್ತಾರೆಯೇ ಹೊರತು ಮೊಬೈಲನ್ನಲ್ಲ. ರಿಮೋಟ್ ಹಿಡಿದು ಸೋಫಾ ಮೇಲೆ ಕುಳಿತು ಟಿವಿ ನೋಡುವುದು ಈಗಲೂ ಜನರಿಗೆ ಪ್ರಿಯ. ಆದರೆ ಸಮಸ್ಯೆ ಎಲ್ಲಿದೆ ಎಂದರೆ ಕೀಬೋರ್ಡ್ ಇಲ್ಲದೆ ಇಂಟರ್‌ನೆಟ್‌ನಲ್ಲಿ ಬ್ರೌಸ್ ಮಾಡುವುದೋ, ಯೂಟ್ಯೂಬ್‌ನಲ್ಲಿ ಯಾವುದಾದರೂ ಹಾಡು ಹುಡುಕಿ ಪ್ಲೇ ಮಾಡುವುದೋ ಸಾಧ್ಯವಿಲ್ಲ. ಆನ್‌ಸ್ಕ್ರೀನ್ ಕೀಬೋರ್ಡ್‌ಗಳಲ್ಲಿ ಒಂದೊಂದು ಅಕ್ಷರವನ್ನೂ ಹುಡುಕಿ ಹುಡುಕಿ ಹೋಗಿ ಕ್ಲಿಕ್ ಮಾಡುವ ತಾಳ್ಮೆ ಜನರಿಗಂತೂ ಇಲ್ಲ. ಇದಕ್ಕಾಗಿ ವಾಯ್ಸ ಕಂಟ್ರೋಲ್ ಬಂತು. ಸ್ಟ್ರೀಮಿಂಗ್ ಡಿವೈಸ್‌ನ ರಿಮೋಟ್ ಕಂಟ್ರೋಲ್‌ನಲ್ಲಿ ಒಂದು ಮೈಕ್ ಚಿಹ್ನೆಯ ಬಟನ್ ನೀಡಿ, ಅದನ್ನು ಒತ್ತಿ ಕಮಾಂಡ್ ನೀಡಿದರೆ ಸರ್ಚ್ ಮಾಡುವ ಸೌಲಭ್ಯ ಒದಗಿಸಲಾಯಿತು. ಈ ವಾಯ್ಸ ಕಂಟ್ರೋಲ್ ವ್ಯವಸ್ಥೆಯನ್ನು ಅಮೇಜಾನ್‌ನ ಫೈರ್ ಸ್ಟಿಕ್ ಹಾಗೂ ರೊಕು ಮೊದಲೇ ಪರಿಚಯಿಸಿವು. ಕೊನೆಗೆ ಚೀನಾದ ಶಿಯೋಮಿ ಕೂಡ ಆಂಡ್ರಾಯ್ಡ ಆಧರಿಸಿದ ತನ್ನ ಎಂಐ ಬಾಕ್ಸ್ ಎಂಬ ಸ್ಟ್ರೀಮಿಂಗ್ ಸಾಧನದಲ್ಲಿ ಅಳವಡಿಸಿತು. ಜನ ಈಗಲೂ ಇದನ್ನು ಇಷ್ಟಪಡುತ್ತಿದ್ದಾರೆ. ಆದರೆ ಗೂಗಲ್ ಎಚ್ಚೆತ್ತುಕೊಳ್ಳಲಿಲ್ಲ.
ಸ್ಮಾರ್ಟ್ ಟಿವಿ ನೋಡುವವರು ಯುವಕರು, ಅವರು ಮೊಬೈಲ್‌ನ ಒಂದು ಎಕ್ಸ್‌ಟೆಂಡೆಡ್ ಸ್ಕ್ರೀನ್ ಆಗಿ ಟಿವಿಯನ್ನು ಪರಿಗಣಿಸಿದ್ದಾರೆ ಎಂದು ಗೂಗಲ್ ಭಾವಿಸಿದಂತಿದೆ. ಆದರೆ ಟಿವಿ ನೋಡುವ ಮನಸ್ಥಿತಿಯೇ ಬೇರೆ. ಮೊಬೈಲ್ ನೋಡುವ ಮನಸ್ಥಿತಿಯೇ ಬೇರೆ. ಅಷ್ಟೇ ಅಲ್ಲ, ಟಿವಿಯನ್ನು ಇಡೀ ಕುಟುಂಬ ಕುಳಿತು ನೋಡುತ್ತದೆ. ಜೊತೆಗೆ ಮೊಬೈಲ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಯಾವ ಆಪ್ಷನ್ ಅನ್ನಾದರೂ ಸುಲಭವಾಗಿ ಬಳಸಬಹುದು. ಟಿವಿಯಲ್ಲಿ ಇದು ಸಾಧ್ಯವಿಲ್ಲ. ರಿಮೋಟ್‌ನ ಬಟನ್ ಒತ್ತಿ, ಸ್ಕ್ರೀನ್ ಮೇಲಿರುವ ಐಕಾನ್‌ಗಳನ್ನು ಕ್ಲಿಕ್ ಮಾಡಲು ಟಿವಿಯಲ್ಲಿ ಪರದಾಡಬೇಕಾಗುತ್ತದೆ. ಹೀಗಾಗಿ ಇದನ್ನು ಮೊದಲೇ ಗುರುತಿಸಿಕೊಂಡ ಇತರ ಕಂಪನಿಗಳು ಸ್ಟ್ರೀಮಿಂಗ್ ಸಾಧನದ ಜೊತೆಗೆ ರಿಮೋಟ್ ಕೂಡ ನೀಡಿದವು. ಅಷ್ಟೇ ಅಲ್ಲ, ಅವುಗಳ ಜೊತೆಗೆ ವಾಯ್ಸ ಕಂಟ್ರೋಲ್ ವ್ಯವಸ್ಥೆಯನ್ನೂ ಅಳವಡಿಸಿದವು. ಹೀಗಾಗಿ ಈಗಲೂ ಈ ಸ್ಟ್ರೀಮಿಂಗ್ ಸಾಧನಗಳು ಮಾರುಕಟ್ಟೆಯಲ್ಲಿವೆ. ಆದರೆ ಗೂಗಲ್ ಈಗಾಗಲೇ ಶಸ್ತ್ರಾಸ್ತ್ರ ಕೆಳಗಿಟ್ಟ ಸನ್ಯಾಸಿಯಂತಾಗಿದೆ.
ಮೊಬೈಲ್ ಬರುತ್ತಿದ್ದಂತೆ ಟಿವಿ ಮೂಲೆಗೆ ಬಿತ್ತು ಅಂದುಕೊಂಡಿದ್ದೆವು. ಆದರೆ ಟಿವಿಯ ಪ್ರಾಮುಖ್ಯತೆ ಮನೆಯಲ್ಲಿ ಇಂದಿಗೂ ಇದೆ. ಆದರೆ ಅದರ ರೀತಿ ಸ್ವಲ್ಪ ಬದಲಾಗಿದೆ. ಈಗ ಖರೀದಿಯಾಗುತ್ತಿರುವ ಬಹುತೇಕ ಟಿವಿಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸ್ಮಾರ್ಟ್ ಫೀಚರುಗಳಿವೆ. ಸಾಂಪ್ರದಾಯಿಕ ಟಿವಿಗಳಂತೂ ಮೂಲೆಗೆ ಸರಿಯುತ್ತಿವೆ. ಸ್ಟ್ರೀಮಿಂಗ್ ಡಿವೈಸ್‌ಗಳು ಹಳೆಯ ಟಿವಿಗಳನ್ನಾದರೂ ಸೆಳೆಯಬೇಕಿತ್ತು. ಆದರೆ ಆ ಕೆಲಸ ಆಗುತ್ತಿಲ್ಲ. ಬಹುಶಃ ಟಿವಿ ಬಗ್ಗೆ ಗೂಗಲ್‌ಗೆ ಆಸಕ್ತಿ ಇದ್ದಂತಿಲ್ಲ. ಇಂತಹ ಕಂಪನಿಗಳಿಗೆ ಡೇಟಾ ಸಂಗ್ರಹವೇ ಮುಖ್ಯ ಸಂಗತಿ. ಟಿವಿಯಲ್ಲಿ ಸಂಗ್ರಹಿಸಬಹುದಾದ ಡೇಟಾಗೆ ಹೋಲಿಸಿದರೆ ಅದಕ್ಕೆ ಪ್ಲಾಟ್‌ಫಾರಂ ಹಾಗೂ ಇತರ ಫೀಚರುಗಳನ್ನು ರೂಪಿಸುವುದು ಗೂಗಲ್‌ಗೆ ಲಾಭದಾಯಕ ಎಂದೆನಿಸಿರಲಿಕ್ಕಿಲ್ಲ. ಅಷ್ಟಾಗಿಯೂ, ಗೂಗಲ್ ರೂಪಿಸಿದ ಆಂಡ್ರಾಯ್ಡ ಟಿವಿ ಪ್ಲಾಟ್‌ಫಾರಂ ಇಂದಿಗೂ ಬಳಸುವುದಕ್ಕೆ ಕಷ್ಟಕರವೇ. ಅದರ ಬದಲಿಗೆ ಸ್ಯಾಮ್‌ಸಂಗ್, ಎಲ್‌ಜಿ ಹಾಗೂ ಟಿಸಿಎಲ್ ಅಭಿವೃದ್ಧಿಪಡಿಸಿದ ಇಂಟರ್‌ಫೇಸ್‌ಗಳು ಹಾಗೂ ಪ್ಲಾಟ್‌ಫಾರಂ ಹೆಚ್ಚು ಅನುಕೂಲಕರ ಮತ್ತು ಬಳಕೆಗೆ ಸುಲಭ. ಇವತ್ತಿಗೂ ಸ್ಮಾರ್ಟ್ ಟಿವಿ ವಿಷಯದಲ್ಲಿ ಗೂಗಲ್ ಹಿಂದೆಯೇ ಇದೆ. ಯೂಟ್ಯೂಬ್‌ನಂತಹ ಅಪಾರ ವೀಡಿಯೋಗಳ ಸಂಗ್ರಹವನ್ನು ಇಟ್ಟುಕೊಂಡೂ ಗೂಗಲ್ ಟಿವಿ ಕ್ಷೇತ್ರಕ್ಕೆ ದೈತ್ಯ ಸಂಸ್ಥೆಯ ಗತ್ತಿನಲ್ಲಿ ಕಾಲಿಡದೇ ಇದ್ದಿದ್ದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲ, ಅದು ಕಾಲಿಟ್ಟ ನಂತರವೂ ಮಹತ್ವದ ಬದಲಾವಣೆ ಮಾಡಲು ಸಾಧ್ಯವಾಗದೇ ಇರುವುದು ಗೂಗಲ್‌ನ ಮಿತಿಯೂ ಇದ್ದೀತು. ಈ ಹಿಂದೆ ಸ್ಮಾರ್ಟ್ ಹೋಮ್ ವಿಷಯದಲ್ಲೂ ಗೂಗಲ್ ಅನ್ನು ಅಮೇಜಾನ್ ಮೀರಿಸಿತ್ತು. ಸದ್ಯಕ್ಕಂತೂ ಗೂಗಲ್‌ನ ಆಂಡ್ರಾಯ್ಡ ಟಿವಿ ಪ್ಲಾಟ್‌ಫಾರಂಗೆ ಸ್ಪರ್ಧೆ ಒಡ್ಡುವಂತೆ ಎಲ್‌ಜಿ ಅಭಿವೃದ್ಧಿಪಡಿಸಿದ ವೆಬ್‌ಒಎಸ್, ಪ್ಯಾನಾಸೋನಿಕ್‌ನ ಮೈ ಹೋಮ್ ಸ್ಕ್ರೀನ್, ರೋಕು ಟಿವಿ, ಸ್ಯಾಮ್‌ಸಂಗ್‌ನ ಟಿಜೆನ್ ಒಎಸ್ ಹೆಚ್ಚು ಆಕರ್ಷಕ ಹಾಗೂ ಚೆನ್ನಾಗಿವೆ. ಆದರೆ ಮಧ್ಯಮ ಶ್ರೇಣಿಯ ಟಿವಿಗಳಲ್ಲಿ ಆಂಡ್ರಾಯ್ಡ ಟಿವಿ ಪ್ಲಾಟ್‌ಫಾರಂ ಬಳಕೆಯಲ್ಲಿದೆ. ಆಂಡ್ರಾಯ್ಡ ಟಿವಿ ಪ್ಲಾಟ್‌ಫಾರಂಗೆ ಅಗತ್ಯ ಬದಲಾವಣೆಯನ್ನು ಮಾಡಿಕೊಂಡು ಅಳವಡಿಸಿಕೊಂಡಿವೆ. ಈ ಪೈಕಿ ಸದ್ಯ ಶಿಯೋಮಿ, ಥಾಮ್ಸನ್ ಹಾಗೂ ವು ಟಿವಿ ಹೆಚ್ಚು ಜನಪ್ರಿಯವಾಗಿವೆ.
ಹೊಸದಾಗಿ ಬಿಡುಗಡೆಯಾಗಿರುವ ಕ್ರೋಮ್‌ಕಾಸ್ಟ್ ಆದರೂ ಈ ಎಲ್ಲ ಸಮಸ್ಯೆಯನ್ನು ನೀಗಿಸುತ್ತದೆಯೇ ಎಂದು ಊಹಿಸಿದರೆ ಇಲ್ಲ ಎಂಬ ಉತ್ತರವೇ ಬರುತ್ತದೆ. ಅಲ್ಲದೆ 4ಕೆ ವೀಡಿಯೋವನ್ನು ಈಗಲೂ ಇದು ಸಪೋರ್ಟ್ ಮಾಡುವುದಿಲ್ಲ. 4ಕೆ ವೀಡಿಯೋಗಳನ್ನು ಬಹುತೇಕ ಈಗ ಮಾರುಕಟ್ಟೆಯಲ್ಲಿರುವ ಎಲ್ಲ ಸ್ಟ್ರೀಮಿಂಗ್ ಸಾಧನಗಳು ಬೆಂಬಲಿಸುತ್ತವೆ. ಹಳೆಯ ಕ್ರೋಮ್‌ಕಾಸ್ಟ್‌ಗಿಂತ ಹೊಸ ಡಿವೈಸ್ ಸ್ವಲ್ಪ ವೇಗವಾಗಿ ಕೆಲಸ ಮಾಡುತ್ತದೆ. ಗೂಗಲ್ ಹೋಮ್ ಜೊತೆಗೆ ಇನ್ನಷ್ಟು ಚೆನ್ನಾಗಿ ಸಿಂಕ್ ಆಗುತ್ತದೆ. ಹೀಗಾಗಿ ಧ್ವನಿಯ ಮೂಲಕ ಟಿವಿ ಕಂಟ್ರೋಲ್ ಮಾಡಬಹುದು. ಆದರೆ ರಿಮೋಟ್ ಇಲ್ಲದೆ ಮೊಬೈಲ್‌ನಲ್ಲೇ ಕಮಾಂಡ್ ಕೊಡಬೇಕಿರುವುದರಿಂದ ವಾಯ್ಸ ಕಂಟ್ರೋಲ್ ಅಷ್ಟೇನೂ ಕೆಲಸಕ್ಕೆ ಬಾರದು. ಇನ್ನೊಂದು ಹಳೆಯ ಸೌಲಭ್ಯವನ್ನು ಹೊಸ ಕ್ರೋಮ್‌ಕಾಸ್ಟ್ ಅಳವಡಿಸಿಕೊಂಡಿದೆ. ತುಂಬ ಹೊತ್ತು ಕ್ರೋಮ್‌ಕಾಸ್ಟ್ ಬಳಸದೇ ಬಿಟ್ಟಾಗ ನಿಮ್ಮ ಗೂಗಲ್ ಫೋಟೋಸ್ ಖಾತೆಯಲ್ಲಿರುವ ಫೋಟೋಗಳನ್ನೇ ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ. ಇಲ್ಲವಾದರೆ ಸ್ಟಾಕ್ ಫೋಟೋಗಳು ಕಾಣಿಸುವಂತೆಯೂ ಸೆಟ್ ಮಾಡಬಹುದು. ಉಳಿದೆಲ್ಲವೂ ಹಳೆಯ ವ್ಯವಸ್ಥೆಯೇ ಮುಂದುವರಿದಿದೆ. ವಿನ್ಯಾಸವೊಂದೇ ಆಕರ್ಷಕವಾಗಿದೆ. ಈ ಹಿಂದೆ 2015ರಲ್ಲಿ ಬಿಡುಗಡೆಯಾದ ಕ್ರೋಮ್‌ಕಾಸ್ಟ್ ಎಲ್ಲ ರೀತಿಯಿಂದಲೂ ಉತ್ತಮ ಸ್ಟ್ರೀಮಿಂಗ್ ಡಿವೈಸ್ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಆ ಹೊಗಳಿಕೆಯನ್ನು ಉಳಿಸಿಕೊಳ್ಳಲು ಕಂಪನಿಗೆ ಸಾಧ್ಯವಾದಂತಿಲ್ಲ.
ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.