ದಲಿತ ಬಂಧುವನ್ನು ಕಳೆದುಕೊಂಡೆವು…
Team Udayavani, Dec 30, 2019, 4:00 AM IST
ಅದು ಸುಮಾರು 70ರ ದಶಕದ ಆಸುಪಾಸು ನಡೆದ ಘಟನೆ. ಉಡುಪಿಯಲ್ಲಿ ಏರ್ಪಡಿಸಿದ್ದ ಸಂವಾದವೊಂದರಲ್ಲಿ ಭಾಗವಹಿಸಲು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗಮಿಸುತ್ತಾರೆ. ಆಗ, ಅತಿಥಿಗಳು ಸೇರಿದಂತೆ ಎಲ್ಲರೂ ಎದ್ದುನಿಂತು ಅವರಿಗೆ ಗೌರವ ಸೂಚಿಸುತ್ತಾರೆ. ಆದರೆ, ಅದೇ ವೇದಿಕೆಯಲ್ಲಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಮಾತ್ರ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾನೆ. ಅಷ್ಟೇ ಅಲ್ಲ, ಆ ವಿದ್ಯಾರ್ಥಿ ಸ್ವಾಮೀಜಿ ಮನಸ್ಸಿಗೆ ನಾಟುವಂತೆ ಕಟುವಾಗಿ ಟೀಕೆ ಮಾಡುತ್ತಾನೆ.
ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಯ ಬೆನ್ನು ಸವರಿ ಮುಗುಳ್ನಕ್ಕು ಸ್ವಾಮೀಜಿ ನಿರ್ಗಮಿಸುತ್ತಾರೆ. ಮುಂದೆ ಅದೇ ವಿದ್ಯಾರ್ಥಿ ಅವರ ಪ್ರೀತಿಯ ಶಿಷ್ಯನಾಗುತ್ತಾನೆ. ಆ ವಿದ್ಯಾರ್ಥಿ ಬಂಡಾಯ ಕವಿ ಪ್ರೊ. ಸಿದ್ದಲಿಂಗಯ್ಯ ಇದನ್ನು ಸ್ವತಃ ಪ್ರೊ.ಸಿದ್ದಲಿಂಗಯ್ಯ ತಮ್ಮ “ಊರು-ಕೇರಿ’ಯಲ್ಲಿ ದಾಖಲಿಸಿದ್ದಾರೆ. “ಅಸ್ಪೃಶ್ಯರ ಬಗ್ಗೆ ಪೇಜಾವರ ಶ್ರೀಗಳ ಕಾಳಜಿ ಅನುಮಾನಿಸಿದ್ದು ತಪ್ಪು’ ಎಂದೂ ಹೇಳಿಕೊಂಡಿದ್ದಾರೆ. ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪ್ರೀತಿಯ ಶಿಷ್ಯ ಪ್ರೊ. ಸಿದ್ದಲಿಂಗಯ್ಯ, “ಉದಯವಾಣಿ’ ಜತೆ ಶ್ರೀಗಳೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದು ಹೀಗೆ…
ದಶಕಗಳ ಹಿಂದೆ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ತು ಹಮ್ಮಿಕೊಂಡಿದ್ದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪೇಜಾವರ ಶ್ರೀಗಳು ದಲಿತ ಸಮುದಾಯದ ಐಎಎಸ್ ಅಧಿಕಾರಿಯಾಗಿದ್ದ ಆರ್. ಭರಣಯ್ಯ ಅವರನ್ನು ನೇಮಕ ಮಾಡುತ್ತಾರೆ. ಆ ಸಮ್ಮೇಳನದಲ್ಲಿ ದೇಶದ ವಿವಿಧ ಮಠಾಧೀಶರೂ ಭಾಗವಹಿಸಿರುತ್ತಾರೆ. ಅಲ್ಲಿ ಅಸ್ಪೃಶ್ಯತೆ ವಿರೋಧಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಈ ಮೂಲಕ ಅಸ್ಪೃಶ್ಯತೆ ನಿವಾರಣೆ ಅಗತ್ಯತೆ ಬಗ್ಗೆ ಎಲ್ಲ ಮಠಾಧಿಪತಿಗಳಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಈ ಘಟನೆಗೆ ಸಾಕ್ಷಿಯಾಗಿದ್ದ ಭರಣಯ್ಯ ಭಾವುಕರಾಗುತ್ತಾರೆ.
ಇವು ಪೇಜಾವರ ಶ್ರೀಗಳ “ಪ್ರಜಾಪ್ರಭುತ್ವದ ವ್ಯಕ್ತಿತ್ವ’ಕ್ಕೆ ಉದಾಹರಣೆಗಳು. ಪ್ರಜಾಪ್ರಭುತ್ವದ ಮೂಲ ಗುಣಗಳಾದ ಸಂವಾದ, ವಾಗ್ವಾದ, ಚರ್ಚೆಗಳ ಮೂಲಕ ಸತ್ಯವನ್ನು ತಲುಪಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಈ ಗುಣದಿಂದಾಗಿಯೇ ಮಾಧ್ವ ಬ್ರಾಹ್ಮಣ ಸಮುದಾಯದ ಹೊರತಾಗಿಯೂ ಬೇರೆ ಬೇರೆ ಸಮುದಾಯದಲ್ಲಿ ಅಷ್ಟೊಂದು ಶಿಷ್ಯವೃಂದವನ್ನು ಹೊಂದಲು ಅವರಿಗೆ ಸಾಧ್ಯವಾಯಿತು. ಅಲ್ಲದೆ ಕನ್ನಡಿಗರಲ್ಲಿ ರಾಷ್ಟ್ರಮಟ್ಟದಲ್ಲಿ ಈ ಪ್ರಮಾಣದ ಜನಮನ್ನಣೆ ಗಳಿಸಲಿಕ್ಕೂ ಸಾಧ್ಯವಾಯಿತು.
ಮಡೆ ಸ್ನಾನ, ದಲಿತ ಕೇರಿಗಳಿಗೆ ಭೇಟಿಯಂತಹ ಹಲವಾರು ಪಂಥಾಹ್ವಾನಗಳು ಬಂದಾಗ ಅದನ್ನು ಸ್ವೀಕರಿಸಿ, ನಿಲುವುಗಳನ್ನು ಪ್ರತಿಪಾದಿಸಿದ್ದುಂಟು. ಸಂವಾದದಲ್ಲಿ ತಮ್ಮ ಗ್ರಹಿಕೆ ತಪ್ಪು ಎಂದು ಕಂಡುಬಂದಾಗ, ಅದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದೂ ಉಂಟು. ಅಷ್ಟೇ ಯಾಕೆ, ತಮ್ಮ ಸಮುದಾಯದ ಆಚರಣೆಗಳ ಬಗ್ಗೆ ಯಾವುದಾದರೂ ಪತ್ರಿಕೆಗಳಲ್ಲಿ ಟೀಕೆ-ಟಿಪ್ಪಣಿಗಳು ವ್ಯಕ್ತವಾದಾಗ, ಆ ಬಗ್ಗೆ ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡುವುದರ ಜತೆಗೆ ಹಾಗೆ ಬರೆದವರಿಗೆ ಖುದ್ದು ಬಂದು ನೋಡುವಂತೆ ಆಹ್ವಾನವನ್ನೂ ನೀಡುತ್ತಿದ್ದರು. ಈ ಗುಣಗಳಿಂದಾಗಿ ಅವರದ್ದು ಅಷ್ಟಮಠದ ಪರಂಪರೆಯಲ್ಲಿ ಇದೊಂದು ಅಪರೂಪದ ವ್ಯಕ್ತಿತ್ವ.
ಬದಲಾವಣೆಯ ಸ್ಫೂರ್ತಿ ಕೇಂದ್ರ: ಅವರೊಬ್ಬ ಸಾಮಾಜಿಕ ಬದಲಾವಣೆಯ ಸ್ಫೂರ್ತಿಯ ಕೇಂದ್ರವಾಗಿದ್ದರು. ಅವರು ದಯೆ, ಪ್ರೀತಿ, ಕರುಣೆ, ಕಾಳಜಿಗಳ ಸಂಗಮ. ಅವರ ಅಗಲಿಕೆಯಿಂದ “ದಲಿತ ಬಂಧು’ವನ್ನು ಕಳೆದುಕೊಂಡಂತಾಗಿದೆ. ಪೇಜಾವರ ಶ್ರೀಗಳ ಧೋರಣೆಗಳನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಅಸ್ಪೃಶ್ಯತೆ ವಿರುದ್ಧ ದನಿ ಎತ್ತಿದ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಮೊದಲಿಗರು ಹಾಗೂ ಪ್ರಮುಖರು. 1974ರಲ್ಲಿ ಅವರ ಮನಸ್ಸಿಗೆ ನೋವುಂಟಾಗುವಂತೆ ಟೀಕಿಸಿದ್ದೆ.
ಆದರೆ, 2006-07ರಲ್ಲಿ ಆದಿಚುಂಚನಗಿರಿ ಸಮಾರಂಭವೊಂದರಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ನನ್ನನ್ನು ಪೇಜಾವರ ಶ್ರೀಗಳಿಗೆ ಪರಿಚಯಿಸಿದಾಗ, “ಇವರು ನಮ್ಮ ಸಿದ್ದಲಿಂಗಯ್ಯ. ನನಗೆ 1974ರಿಂದಲೂ ಅವರು ಗೊತ್ತು’ ಎಂದಿದ್ದರು. ಆಗ ನಾನು ಘಟನೆ ಬಗ್ಗೆ ಊರು-ಕೇರಿಯಲ್ಲಿ ದಾಖಲಿಸಿರುವುದನ್ನು ಸ್ವಾಮೀಜಿ ಗಮನಕ್ಕೆ ತಂದಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, “ನಾನು ಆಗಲೇ ಊರು-ಕೇರಿ ತರಿಸಿಕೊಂಡು ಓದಿದ್ದೇನೆ’ ಎಂದು ಹೇಳಿದರು.
ಇದು ಅವರ ತೀಕ್ಷ್ಣಮತಿಗೆ ಹಿಡಿದ ಕನ್ನಡಿ. ಅಸ್ಪೃಶ್ಯತೆ ವಿರುದ್ಧ ಕೆಲವು ಲಿಂಗಾಯತ ಮಠಗಳು ಕ್ರಾಂತಿಕಾರಿ ಧೋರಣೆ ಹೊಂದಿದ್ದರೂ, ಉಳಿದ ಸ್ವಾಮೀಜಿಗಳು ಚಕಾರ ಎತ್ತದಿದ್ದಾಗ, ಪೇಜಾವರರು ನಿರ್ಭೀತಿಯಿಂದ ಮುಕ್ತವಾಗಿ ಮಾತನಾಡಿದ್ದರು. ನಿಡುಮಾಮಿಡಿ ಸ್ವಾಮೀಜಿಗಳು ಪೇಜಾವರ ಸ್ವಾಮೀಜಿಗೆ ಕೆಲವು ಕಠಿಣ ಪ್ರಶ್ನೆಗಳನ್ನೂ ಕೇಳಿದ್ದು ನಿಜ. ಆದರೆ, ಪೇಜಾವರ ಶ್ರೀಗಳು ತಮ್ಮ ಇತಿಮಿತಿಗಳಲ್ಲಿ ಮಾಡಿದ ಸಾಧನೆ ಕಡಿಮೆ ಇಲ್ಲ. ಸಾಮಾಜಿಕ ಸುಧಾರಣೆಗೆ ಮಾಡಿರುವ ಕೆಲಸ ಕಡಿಮೆ ಅಲ್ಲ. ನಮ್ಮ ಕೆಲವು ಪ್ರಗತಿಪರ ಗೆಳೆಯರು ತಿಳಿಯದೆ ಮಾತನಾಡಿದ್ದೇ ಹೆಚ್ಚೆನಿಸುತ್ತದೆ
ನಿರೂಪಣೆ: ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.