ಪ್ರೀತಿ ಅಂದ್ರೇನೆ ಹಾಗೇ… ಅದೊಂದು ಸುಂದರ ಅನುಭವ
Team Udayavani, Feb 14, 2021, 11:57 AM IST
ಸ್ನೇಹದಿಂದ ಆರಂಭವಾದ ಗೆಳೆತನ ಹೇಗೆ ಪ್ರೀತಿಯಾಗಿ ಬದಲಾಯಿತು ಎಂದು ಅವಳಿಗೆ ತಿಳಿಯಲೇ ಇಲ್ಲ. ಯಾವಾಗ ಹೇಗಾಯ್ತು ಗೊತ್ತಿಲ್ಲ. ಆದರೆ ಪ್ರೀತಿ ಆಗಿದ್ದಂತೂ ನಿಜ ಅಂತಾಳೆ ಆಕೆ.
ಪ್ರೀತಿಯಲ್ಲಿ ಸಿಗುವಷ್ಟು ಖುಷಿ ಇನ್ನೊಂದಿಲ್ಲ ಏನೇ ಆಗಲಿ ಯಾವಾಗಲೂ ಜೊತೆಯಲ್ಲೇ ಇರಬೇಕು ಎಂದು ಹೇಳಿಕೊಂಡು, ಪ್ರೀತಿಯಲ್ಲಿ ಇರೋ ಖುಷಿ ಗೊತ್ತೇ ಇರಲಿಲ್ಲ ಅಂತ ಹಾಡು ಹಾಡಿಕೊಂಡು ಕಾಲೇಜಿಗೆ ಬರುತ್ತಿದ್ದಳು ನನ್ನ ಗೆಳತಿ.
ನಾನಾಗ ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೆ. ನನ್ನ ಗೆಳತಿ ಮತ್ತು ನಾನು ಒಂದೇ ಜೀವ ಎರಡು ದೇಹವಿದ್ದಂತೆ. ಹತ್ತಿರ ಹತ್ತಿರದಲ್ಲಿ ಮನೆ ಇದ್ದದ್ದರಿಂದ ಜೊತೆಯಾಗಿ ಕಾಲೇಜಿಗೆ ತೆರಳಿ ಜೊತೆಯಾಗಿ ಹಿಂತಿರುಗುತ್ತಿದ್ದೆವು. ಪ್ರತಿಯೊಂದು ವಿಚಾರಗಳನ್ನು ಪರಸ್ಪರ ಹಂಚಿಕೊಂಡು, ಹರಟೆ ಹೊಡೆಯೋದೆ ನಮ್ಮಿಬ್ಬರ ಕೆಲಸವಾಗಿತ್ತು. ನಮಗೆ ಇನ್ನೊಬ್ಬ ಗೆಳೆಯನು ಇದ್ದ. ನನ್ನ ಗೆಳತಿ ಮತ್ತು ಅವನು ತುಂಬಾ ಆತ್ಮೀಯತೆಯಿಂದಿದ್ದರು. ಅವರನ್ನು ನೋಡಿ ಕಾಲೇಜಿನಲ್ಲಿ ಎಲ್ಲರೂ ಇವರಿಬ್ಬರೂ ಲವ್ವರ್ಸ್ ಗಳು ಎಂದು ಗೇಲಿ ಮಾಡುತ್ತಿದ್ದರು. ಅವರು ಗೇಲಿ ಮಾಡಿದ್ದಕ್ಕೋ ಏನೋ ಗೊತ್ತಿಲ್ಲ ದಿನಗಳು ಕಳೆದ ಹಾಗೆ ಅವರಿಬ್ಬರ ಸ್ನೇಹ ಪ್ರೀತಿಗೆ ಬದಲಿತ್ತು. ಇಬ್ಬರು ಖುಷಿ ಖುಷಿ ಇಂದ ಒಬ್ಬರನ್ನೊಬ್ಬರು ಗೇಲಿ ಮಾಡುತ್ತಾ, ವಿದ್ಯಾಭ್ಯಾಸದಲ್ಲಿ ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತ ಅನ್ಯೋನ್ಯತೆಯಿಂದ ಜೊತೆಗಿದ್ದರು.
ಪ್ರೀತಿಯಲ್ಲಿ ಬರೀ ಖುಷಿ ಮಾತ್ರ ಅಲ್ಲ ಜೊತೆಗೆ ಜಗಳ ಮನಸ್ತಾಪಗಳು ಇರುತ್ತವೆ ಎಂದು ಗೊತಾಗಿದ್ದು ಆವಾಗಲೇ. ಒಂದು ದಿನ ಖುಷಿಯಿಂದ ಹಾರುತ್ತಾ ಬಂದರೆ, ಇನ್ನೊಂದು ದಿನ ಸಪ್ಪೆ ಮುಖ ಮಾಡಿಕೊಂಡು ಬರುತ್ತಿದ್ದಳು ನನ್ನ ಗೆಳತಿ. ಏನಾಯ್ತು ಎಂದು ಕೇಳಿದರೆ ಏನೇನೋ ಸಣ್ಣ ಪುಟ್ಟ ಜಗಳ ಅವರಿಬ್ಬರ ನಡುವೆ ಆದಂಥ ಮನಸ್ತಾಪಗಳ ಬಗ್ಗೆ ಹೇಳುತ್ತಿದ್ದಳು.
ಎಷ್ಟೇ ಜಗಳ ಆದರೂ, ದುಃಖವಾದರೂ ಎಲ್ಲೂ ಯಾವತ್ತು ಆಕೆ ಆತನನ್ನು ಬಿಟ್ಟುಕೊಡುತ್ತಿರಲಿಲ್ಲ. ಎಲ್ಲ ವಿಷಯದಲ್ಲೂ ಆತನಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಅವನ ಗೆಲುವಿನಲ್ಲಿ ತನ್ನ ಗೆಲುವನ್ನು ಕಾಣುತ್ತಿದ್ದಳು. ಅದೇ ರೀತಿ ಅವನೂ ಕೂಡ ಆಕೆಯ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುತ್ತಿದ್ದ. ಈಗ ಜಗಳವಾಡಿದ ಇಬ್ಬರು, ಮರುಕ್ಷಣದಲ್ಲಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದರು.
ಯಾವಾಗ ಜೊತೆಯಲ್ಲಿರುತ್ತೀರಿ, ಯಾವಾಗ ಜಗಳ ಮಾಡಿಕೊಳ್ಳುತ್ತೀರಿ ಅಂತ ಗೊತಾಗಲ್ಲ ಎಂದಾಗ ಪ್ರೀತಿ ಅಂದ್ರೇನೆ ಹಾಗೆ ನೀನು ಪ್ರೀತಿಲಿ ಬಿದ್ರೆ ಗೊತಾಗುತ್ತೆ, ಈ ಪ್ರೀತಿ ಯಾವಾಗ ಎಲ್ಲಿ ಹೇಗೆ ಹುಟ್ಟಿಕೊಳ್ಳುತ್ತೆ ಅಂತಾನೆ ಗೊತಾಗಲ್ಲ ನಿಂಗೂ ಪ್ರೀತಿ ಆದಾಗ ಇದೆಲ್ಲ ಅರ್ಥ ಆಗುತ್ತೆ ಎಂದು ಆಕೆ ಹೇಳುತ್ತಿದ್ದಳು. ಇದನ್ನೆಲ್ಲ ನೋಡಿ, ಪ್ರೀತಿಯಲ್ಲಿ ಬರೀ ಖುಷಿ ತುಂಬಿಕೊಂಡಿರುತ್ತೆ ಎಂದು ಅಂದುಕೊಂಡಿದ್ದ ನನಗೆ ಪ್ರೀತಿಲಿ ಜಗಳ, ಮನಸ್ತಾಪಗಳು, ನೋವು, ನಲಿವು ಎಲ್ಲವೂ ತುಂಬಿರುತ್ತದೆ, ಅದನ್ನೆಲ್ಲವನ್ನೂ ಅನುಸರಿಸಿಕೊಂಡು ಹೋದರೆ ಮಾತ್ರ ಪ್ರೀತಿ ಯಲ್ಲಿ ಖುಷಿಯಾಗಿ ಇರೋದಕ್ಕೆ ಸಾಧ್ಯ ಎಂದು ಅರಿವಾಯಿತು.
ಸಣ್ಣ ಪುಟ್ಟ ಜಗಳಗಳು ಪ್ರೀತಿಯಲ್ಲಿ ಸರ್ವೇ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು, ವಿಷಯವನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಮುಂದುವರಿಬೇಕು. ಇಬ್ಬರು ಪರಸ್ಪರ ಮಾತುಗಳನ್ನು ತಾಳ್ಮೆಯಿಂದ ಕೇಳಿ, ತಪ್ಪನ್ನು ತಿದ್ದಿಕೊಂಡು ಮುಂದುವರೆದರೆ ಅಲ್ಲಿ ಯಾವುದೇ ರೀತಿಯ ವಿರಹಗಳು ಇರುವುದಿಲ್ಲ ಎನ್ನುತ್ತಾಳೆ ಆಕೆ.
ಪ್ರೀತಿ ಪ್ರೇಮ ಎಲ್ಲವೂ ಸಹಜ ಆದರೆ ಎಲ್ಲಿ ಅನ್ಯೋನ್ಯತೆ ಮತ್ತು ನಂಬಿಕೆಯ ಕೊರತೆ ಇರುತ್ತದೆಯೋ ಅಲ್ಲಿ ಮನಸ್ತಾಪಗಳು ಎದುರಾಗುತ್ತವೆ. ಪ್ರೀತಿ ಒಂದು ಸುಂದರ ಅನುಭವ, ಅದನ್ನು ಖುಷಿಯಿಂದ ಅನುಭವಿಸಬೇಕು. ಕಷ್ಟದಲ್ಲಾದರೂ, ಸುಖದಲ್ಲಾದರೂ ಒಬ್ಬರಿಗೊಬ್ಬರು ಜೊತೆಯಾಗಿ ನಂಬಿಕೆಯಿಂದ ಇದ್ದರೆ ಮಾತ್ರ ಪ್ರೇಮದಾನಂದವನ್ನು ಸವಿಯಲು ಸಾಧ್ಯ.
ಪಲ್ಲವಿ ಕೋಂಬ್ರಾಜೆ
ದ್ವಿತೀಯ ಎಂ. ಸಿ. ಜೆ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.