ಉದ್ಯೋಗ ಖಾತರಿಯಲ್ಲಿ ಗ್ರಾ.ಪಂ.ಗಳ ಕ್ರಾಂತಿಕಾರಿ ಹೆಜ್ಜೆ
ಕರಾವಳಿ ಭಾಗದಲ್ಲಿಯೂ ಬೇಡಿಕೆ ಪಡೆದುಕೊಂಡ "ನರೇಗಾ'
Team Udayavani, Apr 24, 2022, 6:10 AM IST
ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ “ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (MGNREGS- ನರೇಗಾ) ಕರಾವಳಿ ಜಿಲ್ಲೆಗಳಲ್ಲಿಯೂ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದ್ದು ಗ್ರಾಮ ಪಂಚಾಯತ್‌ಗಳು ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟಿವೆ.
ಕೇಂದ್ರ ಸರಕಾರ ಈ ಯೋಜನೆಯನ್ನು ಆರಂಭಿಸಿದಾಗ “ನರೇಗಾದಲ್ಲಿ ಕೂಲಿ ಕಡಿಮೆ’; “ನರೇಗಾದಿಂದ ಇಲ್ಲಿ ಮಾಡುವ ಕೆಲಸ ಏನಿದೆ?’ ಎಂಬಿತ್ಯಾದಿ ಪ್ರಶ್ನೆಗಳು ಇತ್ತೀಚಿನ ವರ್ಷಗಳಲ್ಲಿ ಬದಿಗೆ ಸರಿದು “ನರೇಗಾ ಮೂಲಕ ಮಾಡಲು ನಮ್ಮಲ್ಲಿಯೂ ತುಂಬಾ ಕೆಲಸಗಳಿವೆ’ ಎಂಬ ಹಂತ ತಲುಪಿದೆ. ಗ್ರಾ. ಪಂ.ಗಳು “ನರೇಗಾ’ದಡಿ ಗರಿಷ್ಠ ಮಂದಿಗೆ ಕೂಲಿ ಒದಗಿಸುವುದು ಕೂಡ ತಮ್ಮ ಪ್ರಮುಖ ಸಾಧನೆ ಎಂದು ಹೆಮ್ಮೆ ಪಡುತ್ತಿವೆ.
ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋ ಗಾವಕಾಶಗಳನ್ನು ಸ್ಥಳೀಯವಾಗಿ ಒದಗಿಸಿ ಬಡಜನರ ಬದುಕಿಗೆ ಆಸರೆಯಾಗುವುದು “ನರೇಗಾ’ದ ಮುಖ್ಯ ಉದ್ದೇಶ. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ “ನರೇಗಾ’ಕ್ಕೆ ಬೇಡಿಕೆ ಹೆಚ್ಚುತ್ತಿದೆ.
2021-22ನೇ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 16 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದ್ದು ಹೆಚ್ಚುವರಿಯಾಗಿ 17,49,215 ಮಾನವ ದಿನ ಗಳನ್ನು ಸೃಜಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಶೇ.100ಕ್ಕಿಂತ ಹೆಚ್ಚು ಸಾಧನೆ ದಾಖಲಾಗಿದೆ. ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿಗೆ ಹೆಚ್ಚು ಬೇಡಿಕೆ ಇದೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾ.ಪಂ. ಶೇ.191ರಷ್ಟು ಸಾಧನೆ ಮಾಡಿದೆ. ತಾಲೂಕಿನ 30 ಗ್ರಾ.ಪಂ.ಗಳು ಶೇ.100ರ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ಶೇ. 177ರಷ್ಟು ಸಾಧನೆ ದಾಖಲಿಸಿವೆ. ತಾಲೂಕಿನ 23 ಗ್ರಾ.ಪಂ.ಗಳು ಶೇ.100ರಷ್ಟು ಮಾನವ ದಿನಗಳನ್ನು ಸೃಜನೆ ಮಾಡಿವೆ. ಕಡಬ ತಾಲೂಕಿನ ಗೋಳಿತ್ತೂಟ್ಟು ಗ್ರಾ.ಪಂ. ಶೇ.188ರಷ್ಟು, ಇದೇ ತಾಲೂಕಿನ 18 ಗ್ರಾ.ಪಂ.ಗಳು ಶೇ.100ರಷ್ಟು ಪ್ರಗತಿ ಸಾಧಿಸಿದೆ. ಮಂಗಳೂರು ತಾಲೂಕಿನ ಸೂರಿಂಜೆ ಗ್ರಾ.ಪಂ. ಶೇ. 370 ರಷ್ಟು ಸಾಧನೆ ಮಾಡಿದ್ದರೆ ತಾಲೂಕಿನ 15 ಗ್ರಾ.ಪಂ.ಗಳು ಶೇ.100ರಷ್ಟು ಮಾನವ ದಿನಗಳನ್ನು ಸೃಜನೆ ಮಾಡಿವೆ. ಮೂಡುಬಿದಿರೆ ತಾಲೂ ಕಿನ ಇರುವೈಲು ಗ್ರಾ.ಪಂ. ಶೇ. 290 ರಷ್ಟು ಸಾಧನೆ ಮಾಡಿದ್ದು ತಾಲೂಕಿನ 8 ಗ್ರಾ.ಪಂ.ಗಳು ಶೇ.100ರಷ್ಟು ಮಾನವ ದಿನಗಳನ್ನು ಸೃಜಿಸಿವೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾ.ಪಂ. ಶೇ. 222 ರಷ್ಟು ಮತ್ತು ತಾಲೂಕಿನ 18 ಗ್ರಾ.ಪಂ.ಗಳು ಶೇ.100ರಷ್ಟು ಮಾನವ ದಿನಗಳನ್ನು ಸೃಜನೆ ಮಾಡಿದೆ. ಸುಳ್ಯ ತಾಲೂಕಿನ ಪೆರುವಾಜೆ ಗ್ರಾ.ಪಂ. ಶೇ.144 ರಷ್ಟು ಮತ್ತು ತಾಲೂಕಿನ 15 ಗ್ರಾ.ಪಂ.ಗಳು ಶೇ.100 ರಷ್ಟು ಮಾನವ ದಿನಗಳನ್ನು ಸೃಜನೆ ಮಾಡಿವೆ.
ಉಡುಪಿ ಜಿಲ್ಲೆಯಲ್ಲೂ
ಗಣನೀಯ ಪ್ರಗತಿ
ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಗ್ರಾ.ಪಂ.ಗಳು ಕೂಡ ನರೇಗಾ ಅನುಷ್ಠಾನಕ್ಕೆ ಉತ್ಸಾಹ ತೋರುತ್ತಿದ್ದು ಗುರಿ ಮೀರಿದ ಸಾಧನೆ ದಾಖಲಾಗುತ್ತಿದೆ. ಮಹಿಳಾ ಪಾಲ್ಗೊಳ್ಳುವಿಕೆ ಕೂಡ ಹೆಚ್ಚಿದೆ. 3,000ಕ್ಕೂ ಅಧಿಕ ಬಚ್ಚಲು ಗುಂಡಿ ನರೇಗಾದ ಮೂಲಕ ರಚನೆಯಾಗಿದೆ. ತೋಟಗಾರಿಕೆ ಕಾಮಗಾರಿ, ಮುಖ್ಯವಾಗಿ ಅಡಿಕೆ ತೋಟಕ್ಕೆ ಸಂಬಂಧಿಸಿದ ಕೆಲಸಗಳಿಗೂ ಆದ್ಯತೆ ನೀಡಲಾಗುತ್ತಿದೆ.
ಅಡಿಕೆ ಕೆಲಸಗಳಿಗೆ
ಭಾರೀ ಬೇಡಿಕೆ
ದ.ಕ ಜಿಲ್ಲೆಯಲ್ಲಿ ಅಡಿಕೆ ತೋಟಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು ಈ ಆರ್ಥಿಕ ವರ್ಷದಲ್ಲಿ 6,066 ಕ್ಕೂ ಹೆಚ್ಚಿನ ತೋಟಗಾರಿಕ ಕಾಮಗಾರಿಗಳನ್ನುನಡೆಸಲಾಗಿದೆ. 600ಕ್ಕೂ ಹೆಚ್ಚಿನ ದನದ ಹಟ್ಟಿ, 95ಕ್ಕೂ ಹೆಚ್ಚು ಕೋಳಿ ಶೆಡ್, 350ಕ್ಕೂ ಹೆಚ್ಚು ಬಸಿ ಕಾಲುವೆ (ಅಡಿಕೆ ತೋಟಗಳ ನಡುವೆ ನೀರು ಸರಾಗವಾಗಿ ಹರಿದು ಹೋಗಲು ಮಾಡುವ ಕಣಿ), 290ಕ್ಕೂ ಹೆಚ್ಚು ಎರೆಹುಳು ಗೊಬ್ಬರ ತೊಟ್ಟಿ ಮೊದಲಾದವುಗಳನ್ನು ಮಾಡಲಾಗಿದೆ. ಅಂತರ್ಜಲ ವೃದ್ಧಿಗೆ ಪೂರಕವಾದ ಕಾಮಗಾರಿಗಳು, ತೆರೆದ ಬಾವಿ ರಚನೆ, ಕೃಷಿ ಹೊಂಡ ರಚನೆ, ತೋಡುಗಳ ಹೂಳೆತ್ತುವುದು, ಕೆರೆಗಳ ಹೂಳೆತ್ತುವುದು ಮೊದಲಾದ ಕೆಲಸಗಳನ್ನು ಮಾಡಲಾಗುತ್ತಿದೆ.
ಕೂಲಿ ಹೆಚ್ಚಳದಿಂದ ಅನುಕೂಲ
ನರೇಗಾ ಯೋಜನೆಯಡಿ ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸದ ಭರವಸೆಯಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ 289 ರೂ. ಇದ್ದ ಕೂಲಿಯನ್ನು 309ಕ್ಕೆ ಏರಿಸಲಾಗಿದೆ. ಜತೆಗೆ 10 ರೂ. ಸಲಕರಣೆ ವೆಚ್ಚ ಕೂಡ ದೊರೆಯುತ್ತದೆ.
ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಳ
ನರೇಗಾ ಯೋಜನೆಯಡಿ ಕೂಲಿಗೆ ದ.ಕ. ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆಯಾಗುತ್ತಿದೆ. ಈ ಸಾಲಿನಲ್ಲಿ 2 ಲಕ್ಷ ಹೆಚ್ಚುವರಿ ಮಾನವ ದಿನಗಳ ಕೋರಿಕೆ ಸಲ್ಲಿಸಲಾಗಿದ್ದು ಅದನ್ನು ಪೂರೈಸಲಾಗಿದೆ. ಒಂದೇ ವರ್ಷದಲ್ಲಿ 11,000 ಜಾಬ್‌ಕಾರ್ಡ್ ವಿತರಿಸಲಾಗಿದೆ. ಗ್ರಾ.ಪಂ.ಗಳು ನರೇಗಾ ಅನುಷ್ಠಾನದಲ್ಲಿ ಸಕ್ರಿಯರಾಗಿದ್ದು ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.6ರಷ್ಟು ಹೆಚ್ಚಾಗಿದೆ. ಇದನ್ನು ಮತ್ತಷ್ಟು ಹೆಚ್ಚಿಸಲು ಮಹಿಳಾ ಕಾಯಕೋತ್ಸವ ನಡೆಸಲಾಗಿದೆ. ಇನ್ನೂ ಕೂಡ ಜಾಗೃತಿ ಮೂಡಿಸಲಾಗುವುದು.
-ಡಾ| ಕುಮಾರ್, ಸಿಇಒ, ದ.ಕ. ಜಿ.ಪಂ.
ಗ್ರಾ.ಪಂ.ಗಳ ಆಸಕ್ತಿ ಹೆಚ್ಚಿದೆ
ಹಿಂದೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರಲ್ಲಿ ನರೇಗಾ ಬಗ್ಗೆ ಅರಿವು, ಆಸಕ್ತಿ ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆಸಕ್ತಿ ತೋರಿಸುತ್ತಿದ್ದಾರೆ. ಸಂಜೀವಿನಿ ಸಂಘದ ಮೂಲಕ ಮನೆ ಮನೆಗೆ “ನರೇಗಾ’ ತಲುಪಿಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ನರೇಗಾದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಹಿಳಾ ಪಾಲ್ಗೊಳ್ಳುವಿಕೆ(ಶೇ.61) ಇದೆ. ಜಿಲ್ಲೆಯಲ್ಲಿ ಕಳೆದ ಬಾರಿ 6 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆ ಗುರಿಯನ್ನು ಮೀರಿ 9.30 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಬಾರಿ 15 ಲಕ್ಷ ಮಾನವ ದಿನಗಳ ಗುರಿ ಇಟ್ಟುಕೊಳ್ಳಲಾಗಿದೆ.
-ಡಾ| ವೈ. ನವೀನ್ ಭಟ್, ಸಿಇಒ, ಉಡುಪಿ ಜಿ.ಪಂ.
-ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.