ಕಷ್ಟ ಆಗುತ್ತೆ ಮಗೂ, ಒಳ್ಳೇ ಫ್ಯಾನ್ ಹಾಕ್ಸು
Team Udayavani, Jul 24, 2018, 12:30 AM IST
“ಬದುಕು ನಮ್ಮನ್ನು ವಿಪರೀತ ಆಟ ಆಡಿಸಿಬಿಡ್ತು. ಅಪ್ಪನ ಪ್ರೀತಿಯೇ ಸಿಗಲಿಲ್ಲ ನನ್ಗೆ. ತಾತನ ಕಾಲದ ಮಣ್ಣಿನ ಮನೆಯನ್ನೇ ಅರಮನೆ ಅಂದ್ಕೊಂಡು ಬದುಕಿದ್ದಾಯ್ತು. ಗೌರ್ನಮೆಂಟ್ ಹಾಸ್ಟೆಲಿನಲ್ಲಿ ಇದ್ಕೊಂಡು, ಸೀನಿಯರ್‌ಗಳ ನೋಟ್ಸ್-ಬುಕ್ಸ್ ಇಟ್ಕೊಂಡೇ ಡಿಗ್ರಿ ಮುಗಿಸಿದ್ದಾಯ್ತು. ಸ್ಟೂಡೆಂಟ್ ಲೈಫು ಯಾವ ಸಂದರ್ಭದಲ್ಲೂ ಗೋಲ್ಡನ್ ಲೈಫ್ ಅನ್ನಿಸಲೇ ಇಲ್ಲ. ಸಾಕು, ಬಡತನದಲ್ಲಿ ನರಳಿದ್ದು ಸಾಕು; ಏನಾದ್ರೂ ಆಗ್ಲಿ, ಈ ಸರ್ತಿ ಇಂಟರ್‌ವ್ಯೂನಲ್ಲಿ ಸಕ್ಸಸ್ ಆಗಲೇಬೇಕು…’ ಸೋಮು, ಈ ಮಾತನ್ನು ತನಗೆ ತಾನೇ ಹೇಳಿಕೊಂಡ. ಡಿಗ್ರೀಲಿ ಫಸ್ಟ್ ಕ್ಲಾಸ್ ಇದೆ. ಅಕೌಂಟ್ಸ್, ಹಿಸ್ಟರಿ, ಸೋಶಿಯಾಲಜಿ, ಇಂಗ್ಲಿಷ್, ಸೈನ್ಸ್ -ಎಲ್ಲದರಲ್ಲೂ ಸಾಕಷ್ಟು ನಾಲೆಡ್ಜ್ ಇದೆ. ಹಾಗಾಗಿ, ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗ್ತೀನೆ ಅನ್ನೋದ್ರಲ್ಲಿ ಅನುಮಾನವಿಲ್ಲ…
ಹೀಗೆಲ್ಲಾ ಅಂದಾಜು ಮಾಡಿಕೊಂಡೇ ಸೋಮು ಇಂಟರ್‌ವ್ಯೂ ಹಾಲ್‌ಗೆ ಬಂದ. ಎದುರಿಗಿದ್ದ ಸಂದರ್ಶಕರು- ಯಾವ ಊರು? ಯಾವ ಕಾಲೇಜಲ್ಲಿ ಓದಿದ್ದು, ನಿಮ್ಮ ಪೇರೆಂಟ್ಸ್ ಏನ್ಮಾಡ್ತಾರೆ? ಎಂದಷ್ಟೇ ಕೇಳಿದರು. ನಂತರ ಮೆತ್ತಗಿನ ದನಿಯಲ್ಲಿ- “ನೋಡ್ರಿ ಸೋಮಶೇಖರ್, ಕ್ಲಾಸ್ ಒನ್ ಆಫೀಸರ್ ಪೋಸ್ಟ್‌ಗೆ 25 ಲಕ್ಷ ಅಂತ ಫಿಕ್ಸ್ ಆಗಿದೆ. ಹೇಳಿ, ಅಷ್ಟು ಹಣ ಕೊಡಲು ರೆಡಿ ಇದ್ದೀರಾ?’ ಎಂದು ಕೇಳಿಬಿಟ್ಟರು.
ಉಹುಂ, ಇಂಥದೊಂದು ಪ್ರಶ್ನೆಯನ್ನು ಸೋಮು ಖಂಡಿತ ನಿರೀಕ್ಷಿಸಿರಲಿಲ್ಲ. ಅವತ್ತಿನ ಸಂದರ್ಭದಲ್ಲಿ ಅವನ ಬಳಿ ಇಪ್ಪತ್ತು ಸಾವಿರವೂ ಇರಲಿಲ್ಲ. ಹೀಗಿರುವಾಗ ಲಕ್ಷವನ್ನು, ಅದೂ 25 ಲಕ್ಷವನ್ನು ಅವನಾದರೂ ಎಲ್ಲಿಂದ ತಂದಾನು? ಓಹ್, ಸರ್ಕಾರಿ ನೌಕರಿ ಸೇರುವುದು ನನ್ನ ಹಣೇಲಿ ಬರೆದಿಲ್ಲ ಅಂದುಕೊಂಡು, ಸಂದರ್ಶನದ ಹಾಲ್‌ನಿಂದ ಮೌನವಾಗಿ ಹೊರಗೆ ಬಂದಿದ್ದ.
ಅವತ್ತು ರಾತ್ರಿ ಅನಿರೀಕ್ಷಿತವೊಂದು ನಡೆದುಹೋಯಿತು. ಅಪರಿ ಚಿತ ನಂಬರಿನಿಂದ ಸೋಮು ವಾಸವಿದ್ದ ಹಾಸ್ಟೆಲ್‌ಗೆ ಫೋನ್ ಬಂತು. ವಿಐಪಿಯೊಬ್ಬರು, ಮರುದಿನ ಹೋಟೆಲಿಗೆ ತಿಂಡಿಗೆ ಬರಬೇಕೆಂದೂ, ಅತಿಮುಖ್ಯ ವಿಷಯವೊಂದನ್ನು ಮಾತಾಡ ಲಿಕ್ಕಿದೆ ಎಂದೂ ತಿಳಿಸಿದರು. ಸೋಮು, ಅನುಮಾನ ಮತ್ತು ಕುತೂಹಲದಿಂದಲೇ ತಿಂಡಿಗೆ ಹೋದ. ಅಲ್ಲಿ ಭೇಟಿಯಾದ ವಿಐಪಿ ನೇರವಾಗಿ ಹೇಳಿಬಿಟ್ಟರು: ನೋಡ್ರಿ ಸೋಮಶೇಖರ್, ನೀವು ಇಂಟರ್‌ವ್ಯೂಗೆ ಹೋಗಿಬಂದ ವಿಚಾರ ಗೊತ್ತಾಯ್ತು. ನಿಮಗೆ ಕೆಲಸ ಕೊಡಿಸುವ ಜವಾಬ್ದಾರಿ ನನಗಿರಲಿ. ಒಬ್ರು ಸಾಹುಕಾರರು ನಿಮ್ಮನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳಲು ಯೋಚಿಸಿದ್ದಾರೆ. ಅವರಿಗೆ ಒಬ್ಬಳೇ ಮಗಳು. ಮುದ್ದಾಗಿದ್ದಾಳೆ. ಅವರೇ ಗ್ರ್ಯಾಂಡಾಗಿ ಮದುವೆ ಮಾಡಿಕೊಡ್ತಾರೆ. ಈ ಪ್ರಪೋಸಲ್‌ಗೆ ಒಪ್ಪಿಕೊಂಡ್ರೆ ಇಂಟರ್‌ವ್ಯೂನಲ್ಲಿ ಪಾಸ್ ಮಾಡಿಸಿ ಕೆಲ್ಸವನ್ನೂ ಕೊಡಿಸ್ತಾರೆ. ಮುಂದಿನ ಭಾನುವಾರ ನಿಮಗೆ ಫ್ರೀ ಇದ್ರೆ ಹುಡುಗಿ ನೋಡಲು ಹೋಗೋಣ…
ಹಾಸ್ಟೆಲಿಗೆ ಬಂದ ಸೋಮು, ನಡೆದುದನ್ನೆಲ್ಲ ಅಲ್ಲಿದ್ದ ಆಪ್ತರಲ್ಲಿ ಹೇಳಿಕೊಂಡ. ಅವರು “ನೋಡ್ ಗುರೂ, ಒಂದ್ಕೆಲ್ಸ ಮಾಡು. ಈಗ ಹೋಗಿ ಹುಡುಗೀನ ನೋಡು. ಅವಳು ಒಪ್ಪಿಗೆಯಾದ್ರೆ, ಗ್ಯಾರಂಟಿ ಕೆಲ್ಸ ಕೊಡಿಸ್ತಾರಾ ಅಂತ ಪಕ್ಕಾ ಮಾಡ್ಕೊ. ಆಮೇಲೆ ಐದಾರು ಕಡೆ ವಿಚಾರಿಸಿ ನೋಡು; ಆ ಸಾಹುಕಾರರು, ಅವರ ಮಗಳು ಹೇಗೆ ಅಂತ ಗೊತ್ತಾಗುತ್ತೆ. ಆಮೇಲೆ ನಿನ್ನ ಅಭಿಪ್ರಾಯ ಹೇಳಿದ್ರಾಯ್ತು. ತುಂಬಾ ಸುಲಭದಲ್ಲಿ ಕ್ಲಾಸ್ ಒನ್ ಆಫೀಸರ್ ಕೆಲಸ ಸಿಗುತ್ತೆ. ಲೈಫಲ್ಲಿ ಸೆಟ್ಲ ಆಗುವ ಯೋಗವೂ ಜೊತೆಯಾಗುತ್ತೆ ಅಂದಮೇಲೆ ಸುಮ್ನಿರೋದ್ಯಾಕೆ?’ ಅಂದರು.
ಆ ಸಾಹುಕಾರರಿಗೆ ಒಳ್ಳೆಯ ಹೆಸರಿತ್ತು. ಅವರ ಮಗಳೂ ಮುದ್ದಾಗಿದ್ದಳು. ಕೆಲಸ ಗ್ಯಾರಂಟಿ ಎಂಬ ಭರವಸೆಯೂ ಸಿಕ್ಕಿತು. ಸೋಮು, ಖುಷಿಯಿಂದಲೇ ಮದುವೆಗೆ ಒಪ್ಪಿಕೊಂಡ. ಆರೇ ತಿಂಗಳಲ್ಲಿ ಮದುವೆಯಾಯಿತು. ಸರ್ಕಾರಿ ನೌಕರಿಯೂ ಸಿಕ್ಕಿತು. ಸೋಮುವಿನ ಬದುಕು, ಬಾಡಿಗೆ ಮನೆಯಿಂದ ಬಂಗಲೆಗೆ ಶಿಫ್ಟ್ ಆಯಿತು. ಅಮ್ಮ ನನಗಾಗಿ ತುಂಬಾ ಕಷ್ಟಪಟ್ಟಿದ್ದಾಳೆ. ಅವಳನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅವಳೂ ನನ್ನೊಂದಿಗೆ ಇರುತ್ತಾಳೆ ಎಂದು ಸೋಮು ಮೊದಲೇ ತಿಳಿಸಿದ್ದ. ಅದಕ್ಕೆ ಮಾವನ ಮನೆಯವರೂ ಒಪ್ಪಿಕೊಂಡಿದ್ದರು.
ಹೆಂಡತಿಗೆ ಸಿಟ್ಟು ಜಾಸ್ತಿ. ಆಕೆ ಬುದ್ಧಿಮಾತುಗಳಿಗೆ ಕಿವಿಗೊಡು ವುದಿಲ್ಲ; ಮಾವನಿಗೆ ಎಲ್ಲಾ ಪಕ್ಷಗಳಲ್ಲೂ ಗೆಳೆಯರಿದ್ದಾರೆ ಎಂಬ ಸತ್ಯಗಳೂ ಸೋಮುವಿಗೆ ಬಹುಬೇಗನೆ ಅರ್ಥವಾದವು. ಮಾವನ ಪ್ರಭಾವದಿಂದಲೇ, ಸೋಮುಗೆ ದೂರದ ಊರುಗಳಿಗೆ ವರ್ಗವಾಗುತ್ತಿರಲಿಲ್ಲ. ಒಂದು ವೇಳೆ ವರ್ಗವಾದರೂ, ನಾಲ್ಕೇ ತಿಂಗಳಲ್ಲಿ ಮಾವನಿದ್ದ ಸ್ಥಳಕ್ಕೇ ವರ್ಗವಾಗುತ್ತಿತ್ತು.
ಬದುಕು, ನಮ್ಮ ಲೆಕ್ಕಾಚಾರದಂತೆಯೇ ನಡೆಯುವುದಿಲ್ಲ ಅಲ್ಲವೆ? ಸೋಮು ವಿಷಯದಲ್ಲೂ ಹೀಗೇ ಆಯಿತು. ಶ್ರೀಮಂತಿಕೆಯ ಮಧ್ಯೆ, ಕಾನ್ವೆಂಟ್ ಪರಿಸರದಲ್ಲಿ ಬೆಳೆದಿದ್ದ ಸಾಹುಕಾರರ ಮಗಳು ಸೋಮುವಿನ ತಾಯಿಗೆ ಅಡ್ಜಸ್ಟ್ ಆಗಲೇ ಇಲ್ಲ. ಸೋಮು ಆಫೀಸಿಗೆ ಹೋಗುತ್ತಿದ್ದಂತೆಯೇ ಫ್ರೆಂಡ್ಸ್ ಮನೆ ಗೆಂದೋ, ಯಾವುದೋ ಕ್ಲಬ್-ಸಿನಿಮಾ-ಶಾಪಿಂಗ್ ಎಂದೋ ಅವಳೂ ಹೊರಗೆ ಹೋಗಿಬಿಡುತ್ತಿದ್ದಳು. ರಾಜಕಾರಣಿಗಳು, ಪುಡಾರಿ ಗಳು ಮುಂತಾದವರಿಂದ ಸಾಹುಕಾರರ ಮನೆ ಗಿಜಿ ಗುಡುತ್ತಿತ್ತು. ಸಾಹುಕಾರನ ಹೆಂಡತಿ, ಸದಾ ಗಂಡನಿಗೆ ಅಂಟಿಕೊಂಡೇ ಇರುತ್ತಿದ್ದಳು. ಹಾಗಾಗಿ, ಅರಮನೆಯಂಥ ಬಂಗಲೆಯೊಳಗೆ ಸೋಮುವಿನ ತಾಯಿ ಏಕಾಂಗಿಯಾಗಿ, ಅಪರಿಚಿತಳಂತೆ ಬದುಕಬೇಕಾಯಿತು.
ಬಾಲ್ಯದಿಂದಲೂ ಬಡತನವನ್ನೇ ಉಸಿರಾಡಿದ್ದ ಸೋಮು, ದಿಢೀರ್ ಜೊತೆಯಾದ ಶ್ರೀಮಂತಿಕೆ, ಮಾವನ ಮನೆಯವರಿಂದ ಸಿಕ್ಕ ಮರ್ಯಾದೆ, ಹೆಂಡತಿಯ ಚೆಲುವಿನ ನಡುವೆ ಕಳೆದುಹೋದ. ಎಷ್ಟೋ ಬಾರಿ, ಅಮ್ಮನ ಜೊತೆ ತುಂಬಾ ಹೊತ್ತು ಕಳೆಯಬೇಕು ಎಂದುಕೊಂಡೇ ಮನೆಗೆ ಬರುತ್ತಿದ್ದ. ಅವನು ಮಾತಿಗೆ ಕೂತು ಹತ್ತಿಪ್ಪತ್ತು ನಿಮಿಷ ಆಗುವಷ್ಟರಲ್ಲಿ- ರೀ ಒಂದ್ನಿಮಿಷ ಬರ್ತೀರಾ? ಎಂಬ ಮಾದಕ ಸ್ವರ ಕರೆಯುತ್ತಿತ್ತು. ಅಷ್ಟೆ: ಯಾವುದೋ ಮೋಡಿಗೆ ಒಳಗಾದವನಂತೆ ಸೋಮು ಎದ್ದುಹೋಗುತ್ತಿದ್ದ. ಹೆಂಡತಿಯನ್ನು ವಿರೋಧಿಸುವ ಮನಸ್ಸಾಗಲಿ, ಧೈರ್ಯವಾಗಲಿ ಅವನಿಗೆ ಇರಲಿಲ್ಲ. ಈ ನಡುವೆಯೇ ಅವನಿಗೆ ಇಬ್ಬರು ಮಕ್ಕಳಾದರು. ಆಮೇಲಂತೂ, ಸೋಮುವಿನ ಹೆಂಡತಿ ಮತ್ತು ಆಕೆಯ ಹೆತ್ತವರು ಮಕ್ಕಳ ಜೊತೆಗೇ ಕಳೆದುಹೋದರು. ಸದಾ ಚಾಕೊಲೇಟ್, ಗಿಫ್ಟ್ ಕೊಟ್ಟು ಮುದ್ದು ಮಾಡುವ ಶ್ರೀಮಂತ ತಾತ-ಅಜ್ಜಿಯನ್ನೇ ಮಕ್ಕಳೂ ಹಚ್ಚಿಕೊಂಡವು. ಹೆಚ್ಚಾಗಿ
ಮಹಡಿಯ ಮೇಲಿನ ರೂಮಿನಲ್ಲೇ ಇರುತ್ತಿದ್ದ ಸೋಮುವಿನ ತಾಯಿಯ ಬಳಿಗೆ ಅವು ಹೋಗುತ್ತಲೇ ಇರಲಿಲ್ಲ. ಹೀಗಿದ್ದಾಗಲೇ ಅನಾಹುತವೊಂದು ನಡೆದುಹೋಯಿತು. ಸೋಮುವಿನ ತಾಯಿ, ಅದೊಂದು ದಿನ ಬಚ್ಚಲು ಮನೆಯಲ್ಲಿ ಜಾರಿಬಿದ್ದು ಪೆಟ್ಟು ಮಾಡಿಕೊಂಡಳು. ಆಸ್ಪತ್ರೆಗೆ ಸೇರಿಸಿದರೆ ನೋಡಿಕೊಳ್ಳಲು ಆಗಾಗ್ಗೆ ಎಲ್ಲರೂ ಹೋಗಬೇಕಾಗುತ್ತೆ, ಯಾರಿಗೂ ಅಷ್ಟೊಂದು ಸಮಯವಿಲ್ಲ ಎಂದು ಚರ್ಚಿಸಿ, ಮನೆಗೇ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರು. ನಂತರದ ಎರಡು ತಿಂಗಳು- ಸೋಮುವಿನ ತಾಯಿ ಉಳಿಯುತ್ತಿದ್ದ ರೂಂ, ಆಸ್ಪತ್ರೆಯ ವಾರ್ಡ್ ಆಗಿ ಬದಲಾಯಿತು. ಕಡೆಗೊಂದು ದಿನ ಅಮ್ಮ ಪೂರ್ತಿ ಹುಷಾರಾದಳು ಎಂದು ತಿಳಿದು ಸೋಮು ಖುಷಿಯಾದ. ಸದ್ಯ, ಕಷ್ಟ ಕಳೀತು ಕಣಮ್ಮ ಎಂದು ತಾಯಿಯ ಎದುರೂ ಹೇಳಿಕೊಂಡ. ಅಮ್ಮನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಕ್ಕೆ ಅತ್ತೆ-ಮಾವನಿಗೂ ಕೃತಜ್ಞತೆ ಅರ್ಪಿಸಿದ.
ಒಂದು ವಾರದ ನಂತರ-ರ್ರೀ… “ಅಪ್ಪ ನಿಮೊತೆ ಮಾತಾಡ್ಬೇಕು ಅಂತಿದಾರೆ…’ ಎಂದಳು ಸೋಮುವಿನ ಪತ್ನಿ. ಅಳಿಯ ಎದುರು ಕುಳಿತಿದ್ದನ್ನು ನೋಡಿ ಸಾಹುಕಾರರು ಹೇಳಿದರು: “ಹನ್ನೆರಡು ವರ್ಷದಿಂದ ನಿಮ್ಮ ತಾಯಿಯವರು ನಮ್ಮ ಮನೆಯವರೇ ಆಗಿದಾರೆ. ಮುಂದೆಯೂ ಹಾಗೇ ಇರ್ತಾರೆ. ಆಕೆ ನಮಗೂ ಅಮ್ಮಾನೇ. ನೀವೇ ನೋಡ್ತಿದೀರ. ಈ ಮನೆಗೆ ದಿನಾಲೂ ನೂರಾರು ಜನ ವಿಐಪಿಗಳು ಬಂದು ಹೋಗ್ತಾರೆ. ಅಕಸ್ಮಾತ್ ಮೊನ್ನೆಯ ಥರಾ ಮತ್ತೆ ಜಾರಿಬಿದ್ದರೆ ಮನೇಲಿ ಎಲ್ಲರಿಗೂ ಕಿರಿಕಿರಿ ಆಗುತ್ತೆ. ಮುಖ್ಯವಾಗಿ, ಪೇಷಂಟ್ ಕಂಡ್ರೆ, ಮಕ್ಳು ಹೆದರಿಬಿಡ್ತವೆ. ಮಕ್ಕಳ ಭವಿಷ್ಯ ಮುಖ್ಯ. ನಮ್ಮ ಊರಲ್ಲೇ 30 ವರ್ಷ ಹಳೆಯದಾದ, ಹೋಟೆಲಿನಲ್ಲಿರುವ ಎಲ್ಲಾ ಅನುಕೂಲ ಹೊಂದಿರುವ ಆಶ್ರಮ ಇದೆ. ಅಮ್ಮನನ್ನು ಅಲ್ಲಿ ಉಳಿಸೋಣ. 24 ಗಂಟೆಯೂ ಅವರನ್ನು ನೋಡಿಕೊಳ್ಳಲು ನರ್ಸ್‌ಗಳನ್ನು ನೇಮಿಸೋಣ. ಪ್ರತಿ ಭಾನುವಾರ, ನಾವು ಮನೆಮಂದಿಯೆಲ್ಲ ಆಶ್ರಮಕ್ಕೆ ಹೋಗಿ ಅಮ್ಮನ ಜೊತೆ ಇದ್ದು ಬರೋಣ. ಹತ್ತು ಜನರ ಮುಂದೆ ನಮಗೆ ಮುಜುಗರ ಆಗದಿರಲಿ, ಏಕಾಂಗಿ ಅನ್ನುವ ಭಾವನೆ ಅಮ್ಮನಿಗೂ ಬಾರದಿರಲಿ ಎಂದೆಲ್ಲಾ ಯೋಚಿಸಿ ಹೀಗೆ ತೀರ್ಮಾನ ಮಾಡಿದೀವಿ… ‘
ಅಮ್ಮನನ್ನು ಆಶ್ರಮಕ್ಕೆ ಸೇರಿಸಿ ಐದು ವರ್ಷ ಆಗೋಯ್ತಲ್ಲ… ಛೆ, ನಾನು ಮಾವನ ಮಾತು ಕೇಳಬಾರದಿತ್ತು. ಹೆಂಡತಿಯ ಮೋಹದಲ್ಲಿ ಮೈಮರೆಯಬಾರದಿತ್ತು. ಆಶ್ರಮದಲ್ಲಿ ಎಲ್ಲಾ ಅನುಕೂಲವಿದೆ ನಿಜ. ಅಮ್ಮನ ಸೇವೆಗೆ ಇಪ್ಪತ್ನಾಲ್ಕು ಗಂಟೆಯೂ ನರ್ಸ್‌ಗಳು ಇರ್ತಾರೆ ಎಂಬುದೂ ನಿಜ. ಆದರೆ ಅಮ್ಮ ಖುಷಿಯಾಗಿದ್ದಾಳೆ ಅನ್ನಿಸ್ತಾ ಇಲ್ಲ. ಮೊದಲ ಆರು ತಿಂಗಳಷ್ಟೇ ಹೆಂಡ್ತಿ-ಮಕ್ಕಳು, ಅತ್ತೆ-ಮಾವ ಒಂದು ವಾರವೂ ತಪ್ಪದೆ ಅಮ್ಮನನ್ನು ನೋಡಲು ಬಂದ್ರು. ಆಮೇಲೆ ಏನೇನೋ ಕಾರಣ ಹೇಳಿ ತಪ್ಪಿಸಿಕೊಂಡ್ರು. ಇದನ್ನೆಲ್ಲ ಅಮ್ಮ ಮನಸ್ಸಿಗೆ ಹಚ್ಚಿಕೊಂಡಳ್ಳೋ ಏನೋ… ಅದೊಂದು ಸಂಜೆ, ಸೋಮು ಛೇಂಬರಿನಲ್ಲಿ ಕುಳಿತೇ ಹೀಗೆಲ್ಲಾ ಯೋಚಿಸಿ ಯೋಚಿಸಿ ಸುಸ್ತಾದ. ಅವತ್ತು ಇಡೀ ರಾತ್ರಿ ಅಮ್ಮನ ಬಗ್ಗೆ ಏನೇನೋ ಕನಸುಗಳು ಬಿದ್ದವು.
“ನಿಮ್ಮ ತಾಯಿಯವರಿಗೆ ಉಸಿರಾಟದ ತೊಂದರೆ ಕಾಣಿಸಿ ಕೊಂಡಿದೆ. ದಯವಿಟ್ಟು ಬೇಗ ಬನ್ನಿ. ಆಸ್ಪತ್ರೆಗೆ ಸೇರಿಸಬೇಕು…’ ಆಶ್ರಮದಿಂದ ಹೀಗೊಂದು ಸಂದೇಶ ಬಂದಾಕ್ಷಣ ಸೋಮು ದಡಬಡಿಸಿ ಓಡಿಹೋದ. ಅವನ ತಾಯಿ ಶೂನ್ಯವನ್ನು ದಿಟ್ಟಿಸುತ್ತಾ ಮಲಗಿದ್ದಳು. ಮಗನನ್ನು ಕಂಡದ್ದೇ ಆಕೆಯ ಮುಖ ಅರಳಿತು. ತಡವರಿಸುತ್ತಲೇ ಸೋಮುವಿನ ಕೈ ಹಿಡಿದುಕೊಂಡಳು.
ಅಮ್ಮನನ್ನು ಆ ಸ್ಥಿತಿಯಲ್ಲಿ ಕಂಡು ಸೋಮುವಿಗೆ ಎದೆಯೊಡೆ ದಂತಾಯಿತು. ಅಕಸ್ಮಾತ್ ಅಮ್ಮನ ಜೀವಕ್ಕೆ ಏನಾದರೂ ಅಪಾಯ ವಾದರೆ ಅನ್ನಿಸಿತು. ತಕ್ಷಣವೇ ಅಮ್ಮನನ್ನೇ ನೋಡುತ್ತಾ ಹೇಳಿದ: ಆಸ್ಪತ್ರೆಗೆ ಹೋಗೋಣ. ಗಾಬರಿ ಆಗಬೇಡ. ಎಲ್ಲಾ ಸರಿ ಹೋಗುತ್ತೆ. ಹೇಳಮ್ಮಾ, ನಿಂಗೆ ಏನಾದ್ರೂ ಬೇಕಾ? ನನ್ನಿಂದ ಏನಾಗ್ಬೇಕು ಹೇಳಮ್ಮಾ, ಅಮ್ಮಾ, ಅಮ್ಮಾ…
ಆ ತಾಯಿ, ಸೋಮುವಿನ ಕೈಗಳನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡು ಕೇಳಿದಳು: ಮಗಾ, ಈ ಆಶ್ರಮದಲ್ಲಿ ಯಾವ ರೂಂನಲ್ಲೂ ಫ್ಯಾನ್‌ಗಳು ಚೆನ್ನಾಗಿಲ್ಲ. ಎಲ್ಲಾ ಕೆಟ್ಟುಹೋಗಿವೆ. ಎಲ್ಲಾ ರೂಂಗೂ ಹೊಸಾ ಫ್ಯಾನ್ ಹಾಕಿಸಿಬಿಡು. ಹಾಗೇ ಕಿಟಕಿಗಳೆಲ್ಲಾ ಹಳೆಯವು. ಅವನ್ನೂ ಛೇಂಜ್ ಮಾಡ್ಸು
ತಾಯಿಯ ಈ ವಿಚಿತ್ರ ಕೋರಿಕೆ ಕೇಳಿ ಸೋಮುವಿಗೆ ಅಚ್ಚರಿಯಾಯಿತು. “ಅಮ್ಮಾ, ಇಷ್ಟು ದಿನ ಏನೂ ಹೇಳದೇ ಇದ್ದವಳು, ಈಗ ಆಸ್ಪತ್ರೆಗೆ ಹೋಗುವಾಗ ಹೀಗೆ ಕೇಳ್ತಾ ಇದೀಯಲ್ಲ ಯಾಕೆ?’ -ಅವನು ಕುತೂಹಲ ಹತ್ತಿಕ್ಕಲಾಗದೆ ಕೇಳಿಯೇಬಿಟ್ಟ.
ಆ ತಾಯಿ, ನಿಧಾನಕ್ಕೆ ಕೈ ಮೇಲೆತ್ತಿ, ಮಗನ ಕೆನ್ನೆ ನೇವರಿಸುತ್ತಾ ಹೇಳಿದಳು: “ಬಡತನ, ಬಿಸಿಲು ಮತ್ತು ಗದ್ದಲದ ನಡುವೆ ಬದುಕಿ ನನಗೆ ಅಭ್ಯಾಸವಾಗಿತ್ತು ಕಣೋ. ಬೇಸಿಗೆಯಲ್ಲಿ ಫ್ಯಾನ್ ಇಲ್ಲ ಅಂದ್ರೆ ಬೆಂಕಿಯ ಮಧ್ಯೆ ನಿಂತಂಗೆ ಆಗುತ್ತೆ. ರಾತ್ರಿಯ ವೇಳೆ ಇದ್ದಕ್ಕಿದ್ದಂತೆಯೇ ಕಿಟಕಿಗಳು ಓಪನ್ ಆದಾಗ ತುಂಬಾ ಛಳಿಯಾಗಿ ಮೈನಡುಕ ಶುರುವಾಗುತ್ತೆ. ಇಂಥದನ್ನೆಲ್ಲ ತಡ್ಕೊಂಡು ನಿನಗೆ ಅಭ್ಯಾಸ ಇಲ್ಲ ಮಗನೇ. ನಾಳೆಯ ದಿನ ನಿನ್ನ ಮಕ್ಕಳು ನಿನ್ನನ್ನು ಇಲ್ಲಿಗೆ ಕಳಿಸ್ತಾರೆ ನೋಡು, ಆಗಲೂ ಈ ಆಶ್ರಮ ಹೀಗೇ ಇದ್ರೆ, ಆ ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಂಗೆ ತುಂಬಾ ಕಷ್ಟ ಆಗುತ್ತೆ. ಈ ಅವ್ಯವಸ್ಥೆಯನ್ನೆಲ್ಲ ಬೇಗ ಸರಿಪಡಿಸಿಬಿಡು ಮಗನೇ. ಟೈಮು ಯಾವಾಗ, ಯಾರ ಬದುಕಿನ ಜೊತೆ ಸರಸ ಆಡುತ್ತೋ ಗೊತ್ತಾಗೋದಿಲ್ಲ…’
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.