ಕುಸ್ವಾರ್ ತಯಾರಿಸುವುದು ಹೇಗೆ?ಕ್ರಿಸ್ಮಸ್ ಸಂಭ್ರಮಕ್ಕೆ ಹಲವು ಸಿಹಿ
Team Udayavani, Dec 24, 2019, 6:30 PM IST
ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ಮೆರುಗು ನೀಡುವುದು ಕುಸ್ವಾರ್ ತಯಾರಿ ಮತ್ತು ಹಂಚುವಿಕೆ. ಕುಟುಂಬ ಸದಸ್ಯರು, ನೆರಹೊರೆಯವರು, ಆಪ್ತರೆಲ್ಲ ಸೇರಿ ಒಟ್ಟಾಗಿ ತಯಾರಿಸುವ ಕುಸ್ವಾರ್ ಅನ್ನು ಎಲ್ಲರಿಗೂ ಹಂಚಿ ತಿನ್ನುವುದೇ ಸಂಭ್ರಮ. ಕುಸ್ವಾರ್ ಎಂದರೆ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ತಯಾರಿಸುವಂಥ ವಿಶೇಷ ತಿಂಡಿ ತಿನಸುಗಳು. ಇದರಲ್ಲಿ ಪ್ರಮುಖವಾಗಿರುವುದು ಕಿಡಿಯೊ, ಗುಳಿಯೊ, ನೆವ್ರ್ಯೊ, ಅಕ್ಕಿ ಲಡ್ಡು, ಕುಕ್ಕೀಸ್. ಇತ್ತೀಚಿನ ದಿನಗಳಲ್ಲಿ ಇವುಗಳೊಂದಿಗೆ ಕೇಕ್, ಚಕ್ಕುಲಿ, ಎಳ್ಳು ಉಂಡೆ, ತುಕಡಿ, ಕಾರ ಕಡ್ಡಿ, ಸೇಮಿಗೆ ಮೊದಲಾದವುಗಳನ್ನೂ ಸೇರಿಸಲಾಗಿದೆ. ಮನೆಗೆ ಬರುವ ಅತಿಥಿಗಳಿಗೆ ಇದನ್ನು ನೀಡುವುದು ಹಬ್ಬದ ವಿಶೇಷತೆ. ಆರೋಗ್ಯದಾಯಕವು, ಪೌಷ್ಟಿಕಾಂಶಗಳಿಂದ ಕೂಡಿರುವ ಕುಸ್ವಾರ್ ತಯಾರಿಸುವುದು ಬಲು ಸುಲಭ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕುಸ್ವಾರ್ ನೊಂದಿಗೆ ಓದುಗರು ಕಳುಹಿಸಿದ ಕೆಲವೊಂದು ರೆಸಿಪಿಗಳು ಇಲ್ಲಿವೆ. ಈ ಬಾರಿ ಕ್ರಿಸ್ಮಸ್ ಸಂಭ್ರಮ ಹೆಚ್ಚಿಸಲು ಇವು ಸಾಥ್ ನೀಡಲಿ.
ಗುಳಿಯೊ:
ಬೇಕಾಗುವ ಸಾಮಗ್ರಿಗಳು
· ಕುಚ್ಚಲಕ್ಕಿ- ಅರ್ಧ ಕೆ.ಜಿ.
· ಬೆಳ್ತಿಗೆ ಅಕ್ಕಿ- ಅರ್ಧ ಕೆ.ಜಿ.
· ತೆಂಗಿನ ಕಾಯಿ- 2
· ಉಪ್ಪು- ರುಚಿಗೆ
· ಬೆಲ್ಲ- ಅಗ ತ್ಯಕ್ಕೆ ತಕ್ಕಷ್ಟು
· ತೆಂಗಿನ ಎಣ್ಣೆ- 1 ಲೀಟರ್
ಮಾಡುವ ವಿಧಾನ: ಅರ್ಧ ಕೆ.ಜಿ. ಕುಚಲಕ್ಕಿ, ಅರ್ಧ ಕೆ.ಜಿ. ಅರೆ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, 2 ತೆಂಗಿನ ಕಾಯಿ ಹಾಲಿನಲ್ಲಿ ಅಕ್ಕಿಯನ್ನು ರೊಟ್ಟಿಯ ಹಿಟ್ಟಿನಷ್ಟು ಗಟ್ಟಿ ಇರುವಂತೆ ಕಡೆಯಬೇಕು. ಕಡೆಯುವಾಗ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಈ ಹಿಟ್ಟನ್ನು ಹಬೆಯಲ್ಲಿ ಇಟ್ಟು ಗಟ್ಟಿಯಾಗದಂತೆ ಸ್ವಲ್ಪ ಬೇಯಿಸಬೇಕು. ಹಬೆಯಿಂದ ಹೊರಗೆ ತೆಗೆದ ಹಿಟ್ಟನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಗಟ್ಟಿಯಾಗದಂತೆ ಮುಚ್ಚಿ ಇಡಬೇಕು. ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು, ಸಣ್ಣ ಸಣ್ಣ ಉರುಟು ಆಕಾರದಲ್ಲಿ ಮಾಡಿ. ಗುಳಿಯೊಗಳನ್ನು ಹೊರಗಡೆ ನಯವಾಗಿರುವಂತೆ ಹಾಗೂ ಬಿರುಕಿಲ್ಲದಂತೆ ತಯಾರಿಸಿ ಕುದಿಯುವ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಇರುವಾಗಲೇ ಸವಿಯಲು ಕೊಟ್ಟರೆ ರುಚಿಯಾಗಿರುತ್ತದೆ.
ಕುಕ್ಕೀಸ್
ಬೇಕಾಗುವ ಸಾಮಗ್ರಿಗಳು:
· ಬೆಳ್ತಿಗೆ- ಅರ್ಧ ಕೆ.ಜಿ.
· ಮೈದಾ ಹಿಟ್ಟು- ಬೆಳ್ತಿಗೆ ಅಕ್ಕಿ,
· ಮೈದಾ ಹಿಟ್ಟು- ಅರ್ಧ ಕೆ.ಜಿ.
· ಎರಡು ತೆಂಗಿನ ಕಾಯಿಯ ಹಾಲು
· ಉಪ್ಪು- ರುಚಿಗೆ ತಕ್ಕಷ್ಟು
· ಸಕ್ಕರೆ- ರುಚಿಗೆ
ಮಾಡುವ ವಿಧಾನ: ಅಕ್ಕಿ ಹಿಟ್ಟಿಗೆ ಮೊಟ್ಟೆ ಹಾಗೂ ಸಕ್ಕರೆಯನ್ನು ಬೆರೆಸಿ. ತೆಂಗಿನ ದಪ್ಪ ಹಾಲಿನಲ್ಲಿ ಹಿಟ್ಟನ್ನು ಕಲಸಬೇಕು. ಹಿಟ್ಟನ್ನು ತಯಾರಿಸಿದ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಬೇಕು. ಎಣ್ಣೆಗೆ ಕುದಿ ಬಂದ ಅನಂತರ ಶುಚಿಗೊಳಿಸಿದ ಕುಕ್ಕೀಸ್ ಅಚ್ಚೆಯನ್ನು ಬಿಸಿ ಎಣ್ಣೆಯಲ್ಲಿ ಇಟ್ಟು ಬಿಸಿ ಇರುವ ಅಚ್ಚನ್ನು ಹಿಟ್ಟಿನಲ್ಲಿ ನಾಲ್ಕನೇ ಮೂರು ಭಾಗ ಹಿಟ್ಟು ಹಿಡಿಯುವಂತೆ ಮುಳುಗಿಸಿ ಆ ಬಳಿಕ ಬಿಸಿ ಎಣ್ಣೆಯಲ್ಲಿ ಇಡಬೇಕು. ಅಚ್ಚಿಯ ಹಿಡಿಯನ್ನು ಮೆಲ್ಲ ಮೆಲ್ಲನೆ ಅಲ್ಲಾಡಿಸಿ ಕೊಕ್ಕಿಸ್ ಎಣ್ಣೆಯಲ್ಲಿ ಬಿಡಬೇಕು. ಎಣ್ಣೆಯಲ್ಲಿ ಹಿಡಿಯುವಷ್ಟು ಕುಕ್ಕೀ ಸ್‌ಗಳನ್ನು ಬಿಟ್ಟು ಮಗುಚುತ್ತಾ ಇರಬೇಕು. ಕಂದು ಬಣ್ಣಕ್ಕೆ ಬರುವಾಗ ಕರಿಯಿರಿ.
ಕ್ಯಾಂಡಿ
ಬೇಕಾಗುವ ಸಾಮಗ್ರಿಗಳು:
· ಸಕ್ಕರೆ- ನಾಲ್ಕು ಕಪ್
· ವೆನಿಲ್ಲಾ ಎಸೆನ್ಸ್ …- ಎರಡು ದೊಡ್ಡ ಚಮಚ
· ಕೆಂಪು ಬಣ್ಣ- 1 ದೊಡ್ಡ ಚಮಚ
· ಕಾರ್ನ್ ಸಿರಪ್- ಅರ್ಧ ಚಿಕ್ಕ ಚಮಚ
· ಪೆಪ್ಪರ್ ಮಿಂಟ್- ಒಂದು ದೊಡ್ಡ ಚಮಚ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೂರು ಕಪ್ ಸಕ್ಕರೆ, ಕಾರ್ನ್ ಸಿರಪ್ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಕಲಕಿ. ಸಕ್ಕರೆ ಪೂರ್ಣ ಕರಗಬೇಕು. ಈ ನೀರನ್ನು ಕುದಿಸಿ. ಕೊಂಚ ಗಾಢವಾಗುತ್ತಲೇ ಪೆಪ್ಪರ್ ಮಿಂಟ್ ಸೇರಿಸಿ ಚೆನ್ನಾಗಿ ಕಲಸಿ. ಇದರಲ್ಲಿ ಅರ್ಧ ಪ್ರಮಾಣವನ್ನು ಒಂದು ಸಿಲಿಕಾನ್ ಪದರದ ಮೇಲೆ ಹರಡಿ. ಉಳಿದ ಅರ್ಧಕ್ಕೆ ಕೆಂಪು ಬಣ್ಣವನ್ನು ಸೇರಿಸಿ ಕಲಸುವುದನ್ನು ಮುಂದುವರಿಸಿ. ಈಗ ಸಿಲಿಕಾನ್ ಪದರದ ಮೇಲೆ ಹರಡಿದ್ದ ಬಿಳಿ ಭಾಗವನ್ನು ಓವನ್‌ನಲ್ಲಿ ಐವತ್ತು ಡಿಗ್ರಿ ತಾಪಮಾನದಲ್ಲಿ ಹತ್ತು ನಿಮಿಷ ಇರಿಸಿ ಹೊರತೆಗೆಯಿರಿ. ಈ ಪದರವನ್ನು ಕೊಂಚ ತಣಿದ ಬಳಿಕ ಚಪಾತಿ ಹಿಟ್ಟಿನಂತೆ ಕಲಸಿ ಅನಂತರ ಒಂದು ಉರುಳೆಯಾಗಿಸಿ ಮತೊಮ್ಮೆ ಓವನ್‌ನಲ್ಲಿ ಕೊಂಚ ಹೊತ್ತು ಬಿಸಿಮಾಡಿ. ಇದೇ ರೀತಿ ಕೆಂಪು ಬಣ್ಣವನ್ನೂ ಓವನ್‌ನಲ್ಲಿ ಬಿಸಿಮಾಡಿ ಇನ್ನೊಂದು ಉರುಳೆ ತಯಾರಿಸಿ.ಎರಡೂ ಉರುಳೆಗಳನ್ನು ಪರೀಕ್ಷಿಸಿ. ಇದು ಗಟ್ಟಿ ಎನಿಸಿದರೆ ಇನ್ನೂ ಕೊಂಚ ಹೊತ್ತು ಓವನ್‌ನಲ್ಲಿರಿಸಬಹುದು. ಬಳಿಕ ಎರಡೂ ಉರುಳೆಗಳನ್ನು ಪಕ್ಕಪಕ್ಕದಲ್ಲಿಟ್ಟು ನಾಲ್ಕು ಸಮಭಾಗ ಮಾಡಿ. ನಿಮ್ಮ ಅಭಿರುಚಿಗೆ ತಕ್ಕಂತೆ ಬಿಳಿ ಮತ್ತು ಕೆಂಪು ಬಣ್ಣದ ವಿನ್ಯಾಸ ಬರುವಂತೆ ಎರಡೂ ಉರುಳೆಗಳನ್ನು ಒಂದರ ಮೇಲೊಂದಿಟ್ಟು ಲಟ್ಟಿಸಿ ಬಳಿಕ ಚಿಕ್ಕದಾಗಿ ಕತ್ತರಿಸಿ. ಪ್ರತಿ ಭಾಗವನ್ನು ತಿರುಚಿ ಬಳಿಕಜೆ ಅಕ್ಷರದ ರೂಪ ನೀಡಿ. ನಂತರ ಒಣಗಲು ಬಿಡಿ. ಗಟ್ಟಿಯಾದ ಬಳಿಕ ಈ ಸಕ್ಕರೆ ಕಡ್ಡಿ ನಿಮ್ಮ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಸಿಹಿ ನಿಮ್ಮ ಜೀವನವನ್ನು ಇನ್ನಷ್ಟು ಸಿಹಿಯಾಗಲು ಸಹಕರಿಸುತ್ತದೆ.
ಕಿಡಿಯೊ
ಬೇಕಾಗುವ ಸಾಮಗ್ರಿಗಳು
· ಮೈದಾ- 1 ಕೆ.ಜಿ.
· ತೆಂಗಿನ ಕಾಯಿ- 2
· ಸಕ್ಕರೆ- 1 ಕೆ.ಜಿ.
· ಮೊಟ್ಟೆ- 3
· ಉಪ್ಪು- ರುಚಿಗೆ
· ತೆಂಗಿನ ಎಣ್ಣೆ- 1 ಲೀಟರ್
ಮಾಡುವ ವಿಧಾನ: ಮೈದಾ ಹಿಟ್ಟನ್ನು ತೆಂಗಿನ ದಪ್ಪ ಹಾಲಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲ ಸ ಬೇಕು. ಮೂರು ಮೊಟ್ಟೆಗಳನ್ನು ಪ್ರತ್ಯೇಕವಾಗಿ ಕಲಸಿ ಹಿಟ್ಟಿಗೆ ಸೇರಿಸುವುದು. ಹಿಟ್ಟನ್ನು ಚಪಾತಿ ಹಿಟ್ಟಿನಷ್ಟು ಹದಕ್ಕೆ ಕಲಸುವುದು. ಕಿಡಿಯೊ ತಯಾರಿಸುವ ಅಚ್ಚಿಗೆ ಹಿಟ್ಟು ಹಾಕಿ ತಯಾರಿಸಿಟ್ಟುಕೊಳ್ಳಬೇಕು. ಕುದಿಯುವ ಎಣ್ಣೆಯಲ್ಲಿ ಕಿಡಿಯೊಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು. ಇದನ್ನು ಒಂದು ಪಾತ್ರೆಗೆ ಹಾಕಿಡಿ. ಬಳಿಕ ಒಂದು ಬಾಣಲೆಗೆ ಸಕ್ಕರೆಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಕುದಿಸಿ. ಈ ದ್ರಾವಣ ಕಾಲು ಲೀಟರ್‌ಗೆ ಬರುವವರೆಗೆ ಕಾಯಿಸಿದರೆ ಸಕ್ಕರೆಯ ಪಾಕ ತಯಾರಾಗುತ್ತದೆ. ಈಗ ಕಿಡಿಯೊಗಳನ್ನು ಸಕ್ಕರೆಯ ಪಾಕದಲ್ಲಿ ಹಾಕಿ. ಒಂದಕ್ಕೊಂದು ತಾಗದಂತೆ ಕದಡಿಸಿ ಪಾಕದಿಂದ ಹೊರತೆಗೆದು ಇನ್ನೊಂದು ಪಾತ್ರೆಗೆ ಹಾಕಿ. ಸಕ್ಕರೆಯ ಪಾಕ ಸರಿಯಾಗಿ ಹಿಡಿದರೆ ಕಿಡಿಯೊ ಬಿಳಿ ಬಣ್ಣ ಪಡೆಯುತ್ತದೆ. ಈ ಮಿಶ್ರಣದಲ್ಲಿ ಸುಮಾರು 2 ಕೆ.ಜಿ.ಯಷ್ಟು ಕಿಡಿಯೊಗಳನ್ನು ತಯಾರಿಸಬಹುದು.
ಅಕ್ಕಿ ಲಡ್ಡು
ಬೇಕಾಗುವ ಸಾಮಗ್ರಿಗಳು:
· ಕುಚ್ಚಲಕ್ಕಿ- 1 ಕೆ.ಜಿ.
· ತೆಂಗಿನಕಾಯಿ- 1
· ಬೆಲ್ಲ- ಅರ್ಧ ಕೆ.ಜಿ.
· ಉಪ್ಪು- ರುಚಿಗೆ
· ಎಳ್ಳು- 100 ಗ್ರಾಂ
· ಗೇರು ಬೀಜ ಹುಡಿ- 100
· ಏಲಕ್ಕಿ ಹುಡಿ- ಎರಡು ಚಿಟಿಕೆ.
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಣಗಿಸಿ. ಹುರಿದು ಮಿಕ್ಸಿಯಲ್ಲಿ ಹುಡಿ ತಯಾರಿಸಬೇಕು. ಬೆಲ್ಲದೊಂದಿಗೆ ಅಕ್ಕಿ ಹುಡಿಯನ್ನು ಬೆರೆಸಿ ಚೆನ್ನಾಗಿ ಗುದ್ದಿ ಹಿಟ್ಟನ್ನು ಹದಗೊಳಿಸಬೇಕು. ತೆಂಗಿನ ಕಾಯಿ, ಎಳ್ಳು ಹಾಗೂ ಗೇರು ಬೀಜ ಹುಡಿಯನ್ನು ಪ್ರತ್ಯೇಕವಾಗಿ ಹುರಿಯ ಬೇಕು. ಹದಗೊಳಿಸಿದ ಅಕ್ಕಿ ಹುಡಿಗೆ ರುಚಿಗೆ ತಕ್ಕಷ್ಟು ಉಪ್ಪು, ಹುರಿದ ತೆಂಗಿನ ಕಾಯಿ, ಎಳ್ಳು ಹಾಗೂ ಗೇರು ಬೀಜದ ಹುಡಿಯನ್ನು ಸೇರಿಸಿ ಚೆನ್ನಾಗಿ ಮತ್ತೊಮ್ಮೆ ಗುದ್ದಿ ಅಂಟು ಬರುವಂತೆ ಹಿಟ್ಟನ್ನು ಹದಗೊಳಿಸಬೇಕು. ಈಗ ಕೈಯಲ್ಲಿ ಹಿಟ್ಟನ್ನು ಹಿಡಿದು ಉರುಟಾಕಾರದ ಲಡ್ಡುಗಳನ್ನು ತಯಾರಿಸಬೇಕು. ಹಿಟ್ಟನ್ನು ಗುದ್ದುವ ವಿಧಾನದಲ್ಲಿ ಈ ರೀತಿ ಲಡ್ಡುಗಳನ್ನು ತಯಾರಿಸಬಹುದು.
ಚೀಸ್ ಬಿಸ್ಕೆಟ್
ಬೇಕಾಗುವ ಸಾಮಗ್ರಿಗಳು
· ಗೋಧಿ ಹಿಟ್ಟು- ಎರಡು ಕಪ್
· ಚೀಸ್ (ತುರಿದದ್ದು)- ಒಂದು ಕಪ್
· ಬಾದಾಮಿ- ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)
· ಸಕ್ಕರೆ ಪುಡಿ- ಕಾಲು ಕಪ್
· ಅಡುಗೆ ಸೋಡ- ಕಾಲು ಚಿಕ್ಕ ಚಮಚ
· ಬೆಣ್ಣೆ- ಅರ್ಧ ಕಪ್ (ಕರಗಿಸಿದ್ದು)
· ಹಾಲು- ಅರ್ಧ ಕಪ್
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಬೆಣ್ಣೆ, ಸಕ್ಕರೆ ಮತ್ತು ಅಡುಗೆ ಸೋಡ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ತುರಿದ ಚೀಸ್ ಮತ್ತು ಬಾದಾಮಿ ಹಾಕಿ ಎಲ್ಲವೂ ಚೆನ್ನಾಗಿ ಮಿಳಿತಗೊಳ್ಳುವಂತೆ ನಾದಿ. ಅಗತ್ಯವಿರುವಷ್ಟು ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣಗೊಳಿಸಿ. ಹಿಟ್ಟು ಗಟ್ಟಿಯಾಗದಷ್ಟು ಮತ್ತು ತೀರಾ ತೆಳುವಾಗದಷ್ಟು ಮಾತ್ರ ಹಾಲು ಬಳಸಿ. ಈ ಹಿಟ್ಟನ್ನು ಸುಮಾರು ಅರ್ಧದಿಂದ ಒಂದಿಂಚು ದಪ್ಪವಿರುವಂತೆ ಲಟ್ಟಿಸಿ ಬಿಸ್ಕತ್ ಆಕಾರದಲ್ಲಿ ಕತ್ತರಿಸುವ ಉಪಕರಣದಿಂದ ಬಿಸ್ಕತ್ತಿನ ಬಿಲ್ಲೆಗಳನ್ನಾಗಿಸಿ. ಈ ಬಿಲ್ಲೆಗಳನ್ನು ಬಿಸ್ಕತ್ ಬೇಯಿಸುವ ತಟ್ಟೆಯಲ್ಲಿ ಅಗಲವಾಗಿ ಹರಡಿ. ಈ ತಟ್ಟೆಯನ್ನು ಮೊದಲೇ ಬಿಸಿ ಮಾಡಿಟ್ಟಿದ್ದ ಓವನ್‌ನಲ್ಲಿ 180 ಡಿಗ್ರಿ ತಾಪಮಾನದಲ್ಲಿ ಸುಮಾರು ಹದಿನೈದರಿಂದ ಹದಿನೆಂಟು ನಿಮಿಷ ಬೇಯಿಸಿ. ಬಳಿಕ ತಟ್ಟೆಯನ್ನು ಹೊರ ತೆಗೆದು ಬಿಸ್ಕತ್ತುಗಳನ್ನು ಅದರಲ್ಲಿಯೇ ತಣಿಯಲು ಬಿಡಿ. ಕೊಂಚ ಬಿಸಿರುವಾಗಲೇ ಸವಿಯಿರಿ.
ನೆವ್ರ್ಯೊ
ಬೇಕಾಗುವ ಸಾಮಗ್ರಿಗಳು:
· ಬಿಳಿ ಎಳ್ಳು- 50 ಗ್ರಾಂ
· ಗೇರು ಬೀಜ- 50 ಗ್ರಾಂ
· ಗಸ ಗ ಸೆ- 2 ಚಮಚ
· ಒಣಗಿದ ಕೊಬ್ಬ ರಿ- ಅರ್ಧ
· ಒಣ ದ್ರಾಕ್ಷಿ- 40 ಗ್ರಾಂ
· ಸಕ್ಕರೆ ಹುಡಿ- 25 ಗ್ರಾಂ
· ಏಲಕ್ಕಿ ಹುಡಿ- 3 ಚಿಟಿಕೆ
· ಎಣ್ಣೆ- 1 ಲೀಟರ್
ಮಾಡುವ ವಿಧಾನ: ಕಾವಲಿಯಲ್ಲಿ ಎಳ್ಳು, ಗೇರು ಬೀಜದ ತುಂಡುಗಳು, ಒಣಕೊಬ್ಬರಿ ತುರಿ ಇವುಗಳನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಬೇಕು. ಹುರಿಯುವಾಗ ಹೆಚ್ಚು ಜಾಗ್ರತೆ ವಹಿ ಸ ಬೇಕು. ಹೆಚ್ಚು ಹುರಿದರೆ ಕಹಿ ರುಚಿ ಬರುವ ಸಾಧ್ಯತೆ ಇದೆ. ಹೀಗೆ ಹುರಿದ ಸಾಮಗ್ರಿಗಳಿಗೆ ಸಕ್ಕರೆ ಹುಡಿಯನ್ನು ಬೆರೆಸಿ ಮತ್ತೊಮ್ಮೆ ಕಾವಲಿಯಲ್ಲಿ ಸಣ್ಣ ಬೆಂಕಿಯಲ್ಲಿ ಹುರಿಯಬೇಕು. ಸಕ್ಕರೆ ಬಿಸಿಯಾಗಿ ಈ ವಸ್ತುಗಳೊಂದಿಗೆ ಸೇರಿ ಅಂಟು ಬರುತ್ತದೆ. ಈ ಮಿಶ್ರಣವನ್ನು ಬದಿಗಿಟ್ಟುಕೊಳ್ಳಿ. ಮೈದಾ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಚಪಾತಿಯ ಹಿಟ್ಟಿನಂತೆ ಹಿಟ್ಟನ್ನು ತಯಾರಿಸಬೇಕು. ಈಗ ಈ ಹಿಟ್ಟಿನಿಂದ ಸಣ್ಣ ಸಣ್ಣ ಚಪಾತಿಗಳನ್ನು ಮಾಡಿ. ಅದರೊಳಗೆ 1 ಚಮಚ ಹುರಿದು ತಯಾರಿಸಿದ ಪದಾರ್ಥಗಳ ಮಿಶ್ರಣವನ್ನು ಇಟ್ಟು ಅರ್ಧ ಚಂದ್ರಾಕಾರದಲ್ಲಿ ಮಡಚಿ, ಬೆರಳಿಗೆ ನೀರನ್ನು ತಾಗಿಸಿ ಚಪಾತಿಯ ಅಂಚುಗಳನ್ನು ಸೀಲ್ ಮಾಡುವುದು. ಅಂಚನ್ನು ಅಂದವಾಗುವಂತೆ ಕಟ್ಟರ್‌ನಿಂದ ಹೆಚ್ಚಿನ ಹಿಟ್ಟನ್ನು ತುಂಡರಿಸಿ ತೆಗೆಯುವುದು. ಹೀಗೆ ತಯಾರಿಸಿದ ನೆವ್ರ್ಯೊಗಳನ್ನು ಕುದಿಯು ಎಣ್ಣೆಯಲ್ಲಿ ಬಿಟ್ಟು ಕರಿಯುವುದು. ಕಂದು ಬಣ್ಣ ಬರುವವರೆಗೆ ಕರಿದು ಅಗಲವಾದ ಪಾತ್ರೆಯಲ್ಲಿ ಬಿಡಿಸಿ ಇಡಬೇಕು.
ಆ್ಯಪಲ್ ಕೇಕ್
ಬೇಕಾಗುವ ಸಾಮಗ್ರಿಗಳು
· ಸೇಬು: ಎರಡು ಕಪ್ (ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ್ದು)
· ಮೊಟ್ಟೆ- ಮೂರು
· ಬೆಣ್ಣೆ- ಒಂದು ಕಪ್
· ಸಕ್ಕರೆ- ಒಂದು ಕಪ್
· ಮೈದಾ ಹಿಟ್ಟು-
ಒಂದು ಕಪ್ (ಉಪ್ಪುರಹಿತ)
· ವೆನಿಲ್ಲಾ ಎಸೆನ್ಸ್ …- ಸುಮಾರು ನಾಲ್ಕು ಹನಿಗಳು
· ಜೇನು- ನಾಲ್ಕು ದೊಡ್ಡಚಮಚ
· ಅಡುಗೆ ಸೋಡಾ- ಅರ್ಧ ಚಿಕ್ಕ ಚಮಚ
· ಬಾದಾಮಿ ಪುಡಿ- ಒಂದು ಕಪ್
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸಕ್ಕರೆ, ಮೊಟ್ಟೆ, ಬೆಣ್ಣೆ, ವೆನಿಲ್ಲಾ ಎಸೆನ್ಸ್ … ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಮೈದಾ, ಬಾದಾಮಿ ಪುಡಿ, ಜೇನು ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ನಾದಿ. ಎಲ್ಲ ಪರಿಕರಗಳು ಮಿಶ್ರಣಗೊಂಡಿವೆ ಎಂದು ಖಚಿತಪಡಿಸಿಕೊಂಡ ಬಳಿಕ ಸೇಬಿನ ತುಂಡುಗಳನ್ನು ಸೇರಿಸಿ ಹೆಚ್ಚಿನ ಒತ್ತಡ ಹೇರದೇ ಮಿಶ್ರಣ ಮಾಡಿ. 9 ಇಂಚಿನ ಕೇಕ್ ಪಾತ್ರೆಯ ಒಳಭಾಗದಲ್ಲಿ ಕೊಂಚ ಬೆಣ್ಣೆಯನ್ನು ಸವರಿ ಮಿಶ್ರಣವನ್ನು ಒಳಭಾಗವನ್ನು ಆವರಿಸಿಕೊಳ್ಳುವಂತೆ ತುಂಬಿರಿ. ಹೆಚ್ಚು ಒತ್ತಡ ನೀಡಬೇಡಿ. ಕೇಕ್ ಬೇಯಿಸಲು ಕುಕ್ಕರ್ ಅಥವಾ ಓವನ್ ಬಳಸಬಹುದು. ಕುಕ್ಕರ್ ನಲ್ಲಾದರೆ ಉಪ್ಪು ಸೇರಿಸಿದ ಬಳಿಕ ಈ ಪಾತ್ರೆಯನ್ನು ಕುಕ್ಕರಿನ ಒಳಗೆ ಕೊಂಚವೇ ನೀರಿನಲ್ಲಿ ಮುಳುಗಿಸಿ ಪಾತ್ರೆಯನ್ನು ಒಂದು ತಟ್ಟೆಯಿಂದ ಮುಚ್ಚಿ. ಕುಕ್ಕರಿನ ಮುಚ್ಚಳ ಮುಚ್ಚಿ, ಆದರೆ ಸೀಟಿಯನ್ನು ಹಾಕದೇ ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ. ಓವನ್‌ನಲ್ಲಾದರೆ ಓವನ್ ಉಪಯೋಗಿಸುವುದಾದರೆ ಕೇಕ್ ಪಾತ್ರೆಯನ್ನು ಮೊದಲೇ 350 ಡಿಗ್ರಿ ತಾಪಮಾನದಲ್ಲಿ ಬಿಸಿ ಮಾಡಿಟ್ಟಿದ್ದ ಓವನ್ ಒಳಗೆ ಸುಮಾರು ನಲವತ್ತು ನಿಮಿಷ ಬೇಯಿಸಿ. ಬೆಂದ ಬಳಿಕ ಕೇಕ್ ಹೊರತೆಗೆದು ಕೊಂಚ ಕಾಲ ತಣಿಯಲು ಬಿಡಿ. ಅನಂತರ ಕತ್ತರಿಸಿ ಸವಿಯಬಹುದು.
ಐರಿನ್ ರೆಬೆಲ್ಲೊ (ಡಿಕುನ್ಹ),
ಕುಲಶೇಖರ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
Mandya: ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
Mandya:87ನೇ ಕನ್ನಡ ಸಾಹಿತ್ಯ ಸಮ್ಮೇಳನ:ಹಿಂದಿ ಹೇರಿಕೆಯ ವಿರುದ್ಧ ಕಹಳೆ-ಗೊ.ರು.ಚನ್ನ ಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.