ಸದಾಶಯ: ಮಾಧ್ಯಮ ಸಾಕ್ಷರತೆ ಇಂದಿನ ತುರ್ತು ಅವಶ್ಯ
ಆನ್‌ಲೈನ್ ಅಕ್ಷರಸ್ಥರಾದರೆ ಸಾಕೇ? ಸುಶಿಕ್ಷಿತರಾಗೋದು ಬೇಡವೇ?
Team Udayavani, Sep 6, 2020, 6:10 AM IST
ಸಾಂದರ್ಭಿಕ ಚಿತ್ರ
ದಿನಕ್ಕೊಂದರಂತೆ ಜನ್ಮತಾಳುತ್ತಿರುವ ಸುದ್ದಿತಾಣಗಳು, ರಾಶಿಗಟ್ಟಲೆ ಮಾಹಿತಿಯನ್ನು ಹರಿಯಬಿಡುತ್ತಿರುವ ಸಾಮಾಜಿಕ ಜಾಲತಾಣಗಳ ಮಧ್ಯೆ ಜನಸಾಮಾನ್ಯರು ಯಾವ ಮಾಹಿತಿ ಸರಿ? ಯಾವುದು ತಪ್ಪು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಸವಾಲೇ ಸರಿ. ಈ ಹಿನ್ನೆಲೆಯಲ್ಲಿ ಜನರನ್ನು ಓದಲು ಬರೆಯಲು ಶಕ್ತವಾಗಿಸುವ ಸಾಕ್ಷರತಾ ಆಂದೋಲನದಷ್ಟೇ ಇಂದು ತುರ್ತಾಗಿ ಬೇಕಾಗಿರುವುದು ಮಾಧ್ಯಮ ಸಾಕ್ಷರತೆ.
“ಅಕ್ಷರಸ್ಥರೆಲ್ಲರೂ ವಿದ್ಯಾವಂತರಲ್ಲ, ವಿದ್ಯಾವಂತ ರೆಲ್ಲರೂ ಸುಶಿಕ್ಷಿತರಲ್ಲ’-ಇದು ಓದಲು ಬರೆಯಲು ತಿಳಿದ ಆದರೆ ನಾಗರಿಕ ಮೌಲ್ಯಗಳನ್ನು, ಸಜ್ಜನಿಕೆ ಯನ್ನು ತಿಳಿಯದ ವ್ಯಕ್ತಿಗಳು ಮತ್ತು ವಿದ್ಯಾವಂತ ರಾಗಿದ್ದೂ ಮೂರ್ಖರಾಗಿರುವವರ ಕುರಿತ ವ್ಯಾಖ್ಯಾನ. ಇದನ್ನೇ ಅಂತರ್ಜಾಲ ಮತ್ತು ತಂತ್ರ ಜ್ಞಾನದ ಬಳಕೆ ಕುರಿತಾಗಿ ಹೇಳುವುದಾದರೆ ವೇಗ ವಾಗಿ ಟೈಪ್ ಮಾಡುವವರು, ಎಲ್ಲ ಸಾಮಾಜಿಕ ಜಾಲತಾಣಗಳಿಗೂ ಸೈ ಎನ್ನುವವರು, ಅದ್ಯಾವುದೇ ಸಾಫ್ಟ್ವೇರ್, ಆ್ಯಪ್ ಆದರೂ ಕ್ಷಣಮಾತ್ರದಲ್ಲಿ ತಮ್ಮ ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್ ಫೋನ್‌ನಲ್ಲಿ ಅದಕ್ಕೊಂದು ಜಾಗಕೊಟ್ಟು ಅದರ ಜಾಲಾಟ ಬಲ್ಲವರೆಲ್ಲರನ್ನೂ ತಂತ್ರಜ್ಞಾನದ ಶಿಕ್ಷಿತರು ಎಂದು ಕರೆಯಬೇಕಿಲ್ಲ.
ಮೇಲೆ ಹೇಳಿದ ಹಾಗೆ ಕಂಪ್ಯೂಟರ್ ಬಳಕೆ ಗೊತ್ತಿರುವವರು, ಮೊಬೈಲ್ ಅನ್ನು ಲೀಲಾ ಜಾಲವಾಗಿ ಬಳಸಬಲ್ಲವರೆಲ್ಲರೂ ಆನ್‌ಲೈನ್ ವಿದ್ಯಾವಂತರಲ್ಲ. ಸಾಮಾನ್ಯವಾಗಿ ವ್ಯಕ್ತಿಯೊಬ್ಬ ವಿದ್ಯಾವಂತ ಎನಿಸಿ ಕೊಳ್ಳಬೇಕಾದರೆ ಆತ ತಾನು ಕಲಿತ ಶಿಕ್ಷಣವನ್ನು ಬದುಕಿನ ಮೌಲ್ಯಗಳೊಂದಿಗೆ ಮಿಳಿತಗೊಳಿಸಬೇಕು, ಅನಾಗರಿಕವೆನಿಸಿಕೊಂಡ ವರ್ತನೆಗಳಿಂದ ದೂರವಿರಬೇಕು, ಮಿಗಿಲಾಗಿ ಯಾವುದೇ ಸನ್ನಿವೇಶವಾದರೂ ಏನು? ಹೇಗೆ? ಯಾವಾಗ? ಮತ್ತು ಎಲ್ಲಿ? ಎಂಬುದನ್ನು ಚೆನ್ನಾಗಿ ಅರಿತಿರಬೇಕು. ಹೀಗಿರುವಾಗ ನಮ್ಮ ಮುಂದಿರುವ ಪ್ರಶ್ನೆ; ಅಂತರ್ಜಾಲಕ್ಕೆ ಸಂಬಂಧಿಸಿದಂತೆ ಮೇಲಿನ ನಾಲ್ಕು ಪ್ರಶ್ನೆಗಳಲ್ಲಿ ಎಲ್ಲದಕ್ಕೂ ಉತ್ತರ ಗೊತ್ತಿರು ವವರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದು. ಬಹುಶಃ ಬಹುತೇಕರಿಗೆ ಮೊದಲ ಒಂದು ಪ್ರಶ್ನೆಗೆ ಮಾತ್ರ ಖಚಿತ ಉತ್ತರ ಗೊತ್ತು, ಎರಡನೇ ಪ್ರಶೆೆ°ಗೆ ಅಧì ಉತ್ತರ. ಅಂದರೆ ಯಾವ ತಂತ್ರಜ್ಞಾನ ಮತ್ತು ಅದರಲ್ಲಿ ಏನು ಮಾಡಬಹುದು ಎನ್ನುವುದನ್ನು ಅರಿತವರು, ಅದನ್ನು ಯಾವಾಗ ಉಪಯೋಗಿಸಬೇಕು, ಎಲ್ಲಿ ಮತ್ತು ಎಷ್ಟರಮಟ್ಟಿಗೆ ಉಪಯೋಗಿಸಬೇಕು ಎಂಬುದರಲ್ಲಿ ಎಡವುತ್ತಾರೆ. ನಾನು ಫೇಸ್‌ಬುಕ್‌ನಲ್ಲಿದ್ದೇನೆ, ವಾಟ್ಸ್‌ಆ್ಯಪ್ ಇದೆ, ಇನ್‌ಸ್ಟಾ ಅಕೌಂಟ್ ಇದೆ, ಅದರಲ್ಲಿ ನಾನು ಆ್ಯಕ್ಟಿವ್ ಎನ್ನುವವವರಿಗೆ ತಾನು ಹಂಚಿಕೊಂಡಿರುವ ಖಾಸಗಿ ಮಾಹಿತಿಗಳೆಲ್ಲವೂ ನನ್ನ ನಿಯಂತ್ರಣದಲ್ಲಿಲ್ಲ, ಅದು ಪರರ ಸ್ವತ್ತಾಗಿದೆ, ಇಂದಲ್ಲ ನಾಳೆ ಯಾವುದೋ ಅಪರಾಧ ಚಟುವಟಿಕೆಯ ಬಲಿಪಶು ನಾನಾಗ ಬಹುದು ಎಂಬುದರ ಅರಿವೇ ಇರುವುದಿಲ್ಲ.
ಆಂತರ್ಜಾಲದಲ್ಲಿ ದಕ್ಕುತ್ತಿರುವುದೆಲ್ಲ ಮಾಧ್ಯಮ ನೀಡುತ್ತಿರುವ ಮಾಹಿತಿಯಲ್ಲ
ಅಂತರ್ಜಾಲದಲ್ಲಿ ಹರಿಯಬಿಟ್ಟ ಖಾಸಗಿ ಮಾಹಿ ತಿಯ ಗೌಪ್ಯತೆಯ ಪ್ರಶ್ನೆಯ ಜತೆಗೆ ಇನ್ನೊಂದು ವಿಚಾರವನ್ನು ಗಮನಿಸಲೇಬೇಕು, ಸಾಮಾಜಿಕ ಜಾಲತಾಣಗಳನ್ನು ಪತ್ರಿಕೋದ್ಯಮದ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲ್ಪಡುವ ಮಾಧ್ಯಮಗಳ ಪಟ್ಟಿಗೆ ಸೇರಿಸುವುದು ಎಷ್ಟು ಸರಿ? ಎಂಬ ಬರವಣಿಗೆಯ ತುಣುಕೊಂದನ್ನು ಇತ್ತೀಚೆಗೆ ಓದಿದಾಗ ನನ್ನ ಮನಸ್ಸಿನಲ್ಲಿ ಹೊಳೆದದ್ದು, ಹೆಚ್ಚಿನ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ತಾವು ಎಲ್ಲಿಂದ ಮತ್ತು ಹೇಗೆ ಮಾಹಿತಿಯನ್ನು ಪಡೆದಿದ್ದೇವೆ ಎಂಬ ಅರಿವೇ ಇರುವುದಿಲ್ಲ. ತಮಗಿಷ್ಟವಾಗದ ಮಾಹಿತಿ, ಚಿತ್ರ ಅಥವಾ ದೃಶ್ಯಾವಳಿಯನ್ನು ನೋಡಿದ ಕೂಡಲೇ “ಇಂದಿನ ಮಾಧ್ಯಮಕ್ಕೆ ಏನಾಗಿದೆ?, ಯಾವುದೇ ಕಡಿವಾಣವೇ ಇಲ್ಲವೇ?’ ಎಂಬ ಕಮೆಂಟ್ ಅಥವಾ ಸಾರ್ವಜನಿಕ ಟೀಕೆಯನ್ನು ಕೂಡಲೇ ಹರಿಯಬಿಡುವವರು ಕೆಲವರಾದರೆ ಇನ್ನು ಕೆಲವರು ತಾವು ನೋಡುವ ಅಥವಾ ಓದುವ ಮಾಹಿತಿಯೆಲ್ಲವೂ ವಿಶ್ವಾಸಾರ್ಹ ಎನಿಸಿಕೊಂಡ ಮಾಧ್ಯಮಗಳೇ ನೀಡುತ್ತಿವೆ ಎಂದು ಸಲೀಸಾಗಿ ನಂಬಿಬಿಡುವುದು. ಆದರೆ ತತ್‌ಕ್ಷಣದ ಟೀಕೆ ಅಥವಾ ನಂಬಿಕೆಗೂ ಮುನ್ನ ಸಾಮಾಜಿಕ ಜಾಲತಾಣಗಳಿಗೂ ತಾವು ಉಲ್ಲೇಖೀಸುತ್ತಿರುವ ಮಾಧ್ಯಮಕ್ಕೂ ವ್ಯತ್ಯಾಸವಿದೆ ಎಂಬುದನ್ನೂ ಅರಿಯಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ್ಯವಲ್ಲದ ಮಾಹಿತಿಯನ್ನು ಯಾರು ಹಂಚಿಕೊಳ್ಳುತ್ತಾರೆ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ವಾಸ್ತವಾಂಶವಲ್ಲದ ಮಾಹಿತಿಗಳು, ನೈತಿಕ ಚೌಕಟ್ಟು ಇಲ್ಲದ ದೃಶ್ಯಗಳನ್ನು ಹರಿಯಬಿಡುವುದು ಜಾಲತಾಣಗಳ ಬಳಕೆಯ ಕುರಿತು ಕನಿಷ್ಠ ಸೌಜನ್ಯವೂ ಇಲ್ಲದ ಅವಿವೇಕಿಗಳು ಮತ್ತು ಜನಸಾಮಾನ್ಯರನ್ನು ತಮ್ಮ ಯೋಜಿತ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಗುಂಪುಗಳು. ಬಹುಶಃ ಸಾಮಾಜಿಕ ಜಾಲತಾಣಗಳನ್ನು ಮತ್ತು ಅದರಲ್ಲಿ ಬರುವ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿ ಕೊಂಡರೆ ಜನರು ತಮಗೆ ಬೇಕಾದ ಸುದ್ದಿಯನ್ನು, ಮಾಹಿತಿಯನ್ನು ಎಲ್ಲಿಂದ ಪಡೆದುಕೊಳ್ಳಬೇಕು, ತಮ್ಮ ಮಾಧ್ಯಮ ಅಭ್ಯಾಸ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ.
ಜಾಲತಾಣಗಳಲ್ಲಿ ನಾವೇನು ಹರಿಯಬಿಡುತ್ತಿದ್ದೇವೆ ಎನ್ನುವ ಅರಿವಿರಲಿ
ಅಂತರ್ಜಾಲದಲ್ಲಿ ಪಡೆದುಕೊಳ್ಳುತ್ತಿರುವ ಮಾಹಿ ತಿಯ ವಿಶ್ವಾಸಾರ್ಹತೆ ಏನು? ಅದರಲ್ಲಿ ವಾಸ್ತ ವಾಂಶದೆಯೇ? ನಂಬಲರ್ಹ ಮಾಧ್ಯಮದಿಂದ ಅದನ್ನು ಪಡೆದುಕೊಳ್ಳುತ್ತಿದ್ದೇವೆಯೇ ಅಥವಾ ಕೇವಲ ಜಾಲತಾಣದ ಪೋಸ್ಟ್‌ಗಳನ್ನೇ ನಿಜ ವೆಂದು ತಿಳಿದುಕೊಳ್ಳುತ್ತಿದ್ದೇವೆಯೇ ಎನ್ನುವ ಅರಿವಿ ನೊಂದಿಗೆ, ಪಡೆದುಕೊಂಡ ಮಾಹಿತಿಯನ್ನು ಹೇಗೆ ರವಾನೆ ಮಾಡುತ್ತಿದ್ದೇವೆ ಎನ್ನುವುದನ್ನೂ ಮನಗಾಣಬೇಕಿದೆ. ಯಾವುದೋ ಫೋಟೋ, ವೀಡಿಯೋ ಅಥವಾ ಮಾಹಿತಿಯನ್ನು ಸಿಕ್ಕಿದ ತತ್‌ಕ್ಷಣ ತನ್ನ ಸಂಪರ್ಕದಲ್ಲಿರುವವರಿಗೆಲ್ಲ ಕಳುಹಿಸಿ, ಅದರಲ್ಲಿರುವ ಸತ್ಯಾಸತ್ಯತೆಯನ್ನೂ ಅರಿಯುವ ಪ್ರಯತ್ನ ಮಾಡದಿರುವುದು. ಯಾವುದೋ ಹುರುಳಿಲ್ಲದ ಚಿತ್ರ ಅಥವಾ ದೃಶ್ಯವನ್ನೇ ಗಂಭೀರವಾಗಿ ತೆಗೆದುಕೊಂಡು ಅಥವಾ ಅದು ನನ್ನ ಸಿದ್ಧಾಂತಕ್ಕೆ ಪೂರಕವಾಗಿದೆ ಅಂದುಕೊಂಡು ಅದಕ್ಕೆ ನಾವು ನೀಡುವ ಪ್ರತಿಕ್ರಿಯೆಗಳೂ ಡಿಜಿಟಲ್ ನಾಗರಿಕತೆಗೆ ತದ್ವಿರುದ್ಧವಾದುದು. ವಿದ್ಯಾವಂತರೆನಿಕೊಂಡ ನಾವೆಲ್ಲರೂ ಎಡವುತ್ತಿರುವುದು ಇಲ್ಲೇ. ಯಾವುದೋ ಯೋಜಿತ ಪ್ರಚಾರದ ಅಸ್ತ್ರವಾಗಿ ನಾವೇ ಬಳಕೆಯಾಗುತ್ತಿದ್ದೇವೆ ಎಂಬ ಅರಿವೂ ನಮಗಿರುವುದಿಲ್ಲ. ವಿಶ್ವಾಸಾರ್ಹ ಮಾಧ್ಯಮದಲ್ಲಿ ಪ್ರಸಾರ ಅಥವಾ ಪ್ರಕಟವಾಗಿದೆ ಎಂಬ ಅಡಿಬರಹದೊಂದಿಗೆ ಸಿಗುವ ಸುಳ್ಳು ಮಾಹಿತಿಯ ತುಣುಕನ್ನು ಪರಿಶೀಲಿಸದೆ ಗುಂಪಿನಲ್ಲಿ ಹರಿಯಬಿಟ್ಟು ನಗೆಪಾಟಲಿಗೀಡಾಗುವ ಸಂದರ್ಭಗಳೇ ಹೆಚ್ಚು. ಅದ್ದರಿಂದ ಮಾಹಿತಿಯನ್ನು ರವಾನೆ ಮಾಡುವಾಗಲೂ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ನಾವು ಹರಿಯಬಿಟ್ಟ ಮಾಹಿತಿ ಸಾರ್ವಜನಿಕವಾಗಿ ಪ್ರಸಾರವಾಗುತ್ತಿದೆ ಎಂಬ ಸಣ್ಣ ಎಚ್ಚರವೂ ನಮಗಿರಬೇಕಾಗುತ್ತದೆ. ನಮ್ಮ ಆನ್‌ಲೈನ್ ಚಟುವಟಿಕೆಗಳ ಮೂಲಕವೇ ನಮ್ಮ ವ್ಯಕ್ತಿತ್ವವನ್ನು ಅಳೆಯುವ ಕಾಲದಲ್ಲಿ ನಾವಿರುವ ಕಾರಣ ನಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲೇ ಅಂತರ್ಜಾಲದ ಬಳಕೆಯೂ ಇರಬೇಕಾಗುತ್ತದೆ.
ಆದರೆ ದಿನಕ್ಕೊಂದರಂತೆ ಜನ್ಮತಾಳುತ್ತಿರುವ ಸುದ್ದಿತಾಣಗಳು, ರಾಶಿಗಟ್ಟಲೆ ಮಾಹಿತಿಯನ್ನು ಹರಿಯಬಿಡುತ್ತಿರುವ ಸಾಮಾಜಿಕ ಜಾಲತಾಣಗಳ ಮಧ್ಯೆ ಜನಸಾಮಾನ್ಯರು ಯಾವ ಮಾಹಿತಿ ಸರಿ? ಯಾವುದು ತಪ್ಪು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಸವಾಲೇ ಸರಿ. ಈ ಸವಾಲನ್ನು ಮಾಧ್ಯಮ ಸಾಕ್ಷರರೆನಿಸಿಕೊಂಡಿರುವ ಪತ್ರಕರ್ತರೂ, ಮಾಧ್ಯಮ ಶಿಕ್ಷಣದಲ್ಲಿರುವವರೂ ಎದುರಿಸುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಪಾಡೇನು? ಎಂದು ಯೋಚಿಸ ಬೇಕಾದ ಅಗತ್ಯದೆ. ಈ ಹಿನ್ನೆಲೆಯಲ್ಲಿ ಜನರನ್ನು ಓದಲು ಬರೆಯಲು ಶಕ್ತವಾಗಿಸುವ ಸಾಕ್ಷ ರತಾ ಆಂದೋಲನದಷ್ಟೇ ಇಂದು ತುರ್ತಾಗಿ ಬೇಕಾಗಿರುವುದು ಮಾಧ್ಯಮ ಸಾಕ್ಷರತೆ. ವಿಶ್ವಾ ಸಾರ್ಹ ಮಾಧ್ಯಮಗಳಿಂದಲೇ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಅಥವಾ ವಾಸ್ತವಾಂಶವಿರುವ ಪೋಸ್ಟ್‌ಗಳನ್ನು ಮಾತ್ರ ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬ ಕನಿಷ್ಠ ಅರಿವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಅಂತರ್ಜಾಲದಲ್ಲಿ ಇರುವ ಮಿತಿಮೀರಿದ ಮಾಹಿತಿ, ಮಾಹಿತಿ ಮಾಲಿನ್ಯ ಎಂಬ ಚರ್ಚೆಗಳು ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗದೆ ಜನಸಾಮಾನ್ಯರಿಗೂ ತಲುಪಬೇಕಾಗಿದೆ. ಪರಿಸರ ಮಾಲಿನ್ಯ ಹೇಗೆ ಜೀವಸಂಕುಲದ ನಾಶಕ್ಕೆ ಕಾರಣವಾಗುತ್ತದೆಯೋ ಹಾಗೆಯೇ ಈಗ ಆಗುತ್ತಿರುವ ಮಾಹಿತಿ ಮಾಲಿನ್ಯವೂ ಮಾನವನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಹಾನಿಕಾರಕ. ಆದ್ದರಿಂದ ಮಾಧ್ಯಮ ಸಾಕ್ಷರತೆಯ ಅಗತ್ಯವನ್ನು ಅತಿಯಾದ ಮಾಹಿತಿಯ ನಡುವೆಯೂ ಡಿಜಿಟಲ್ ನೈರ್ಮಲ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಅರಿತುಕೊಳ್ಳಬೇಕಾಗಿದೆ.
ಗೀತಾ ವಸಂತ್ ಇಜಿಮಾನ್, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.