Australia ವನಿತಾ ಕ್ರಿಕೆಟ್‌ನ ಮಹಾನ್ ಸಾಧಕಿ ಮೆಗ್ ಲ್ಯಾನ್ನಿಂಗ್
ವೈಯಕ್ತಿಕ ಹಾಗೂ ತಂಡದ ಪರ ಹಲವು ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟ್ ವಿಶ್ವವನ್ನು ಬೆರಗುಗೊಳಿಸಿದ್ದಾರೆ
Team Udayavani, Nov 12, 2023, 5:47 AM IST
ಆಸ್ಟ್ರೇಲಿಯ ವನಿತಾ ಕ್ರಿಕೆಟ್ ತಂಡದ ಅಪ್ರತಿಮ ನಾಯಕಿ ಮೆಗ್ ಲ್ಯಾನ್ನಿಂಗ್ ಮಹಾನ್ ಸಾಧಕಿಯಾಗಿ ಗುರುತಿಸಿಕೊಂಡ ಆಟಗಾರ್ತಿಯಾಗಿದ್ದಾರೆ. ಪುರುಷರ ವಿಶ್ವಕಪ್ ಕೂಟ ಸಾಗುತ್ತಿರುವ ನಡುವೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ.
ಹದಿಮೂರು ವರ್ಷಗಳ ಸುದೀರ್ಘ ಕ್ರಿಕೆಟ್ ಬಾಳ್ವೆ ವೇಳೆ ಲ್ಯಾನ್ನಿಂಗ್ ಅವರು ಆಸ್ಟ್ರೇಲಿಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅದ್ಭುತ ಆಟಗಾರ್ತಿಯೂ ಆಗಿರುವ ಅವರು ವೈಯಕ್ತಿಕ ಹಾಗೂ ತಂಡದ ಪರ ಹಲವು ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟ್ ವಿಶ್ವವನ್ನು ಬೆರಗುಗೊಳಿಸಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದಾಗಿ ಕಳೆದ ಆರು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ಹಠಾತ್ ನಿವೃತ್ತಿ ಹೊಂದಿದ್ದರಿಂದ ಆಸ್ಟ್ರೇಲಿಯ ಕ್ರಿಕೆಟ್ ಬಡವಾಗಿದೆ. ಆದರೂ ಟಿ20 ಲೀಗ್‌ನಲ್ಲಿ ಆಡುವುದನ್ನು ಮುಂದು ವರಿಸುವುದಾಗಿ ಹೇಳಿದ್ದಾರೆ.
18ರ ಹರೆಯದಲ್ಲಿ ಪದಾರ್ಪಣೆ
ಸಿಂಗಾಪುರ ಮೂಲದ ಮೆಗ್ ಲ್ಯಾನ್ನಿಂಗ್ 18ರ ಹರೆಯದಲ್ಲಿ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ತನ್ನ ದ್ವಿತೀಯ ಪಂದ್ಯದಲ್ಲಿಯೇ ಶತಕ ಸಿಡಿಸಿ ಅಬ್ಬರಿಸಿದ ಅವರು ತಾನೋರ್ವ ಶ್ರೇಷ್ಠ ಆಟಗಾರ್ತಿ ಎಂಬುದನ್ನು ನಿರೂಪಿಸಿದರು. ವೈಯಕ್ತಿಕವಾಗಿ ಅತೀ ಕಿರಿಯವಳಾಗಿ ಶತಕ, ಅತೀ ವೇಗದ ಶತಕ ಬಾರಿಸಿ ಮೆರೆದಾಡಿದ ಅವರು ತಂಡಕ್ಕೆ ಏಳು ವಿಶ್ವಕಪ್ ಪ್ರಶಸ್ತಿ ಗೆಲ್ಲಿಸಿಕೊಟ್ಟು ಆಸ್ಟ್ರೇಲಿಯ ವನಿತಾ ಕ್ರಿಕೆಟ್‌ನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದರು. 21ರ ಹರೆಯದಲ್ಲಿ ತಂಡದ ನಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದರೂ 2014ರಲ್ಲಿ ಪೂರ್ಣಪ್ರಮಾಣದಲ್ಲಿ ಜವಾಬ್ದಾರಿ ವಹಿಸಿಕೊಂಡರು. ಆ ಬಳಿಕ ಆಸ್ಟ್ರೇಲಿಯ ಕ್ರಿಕೆಟ್‌ನ ಚಿತ್ರಣವೇ ಬದಲಾಯಿತು.
ಲ್ಯಾನ್ನಿಂಗ್ ಅವರ ಅಪ್ರತಿಮ ಬ್ಯಾಟಿಂಗ್ ಜತೆ ಸಮರ್ಥ, ಸ್ಫೂರ್ತಿದಾಯಕ ನಾಯಕತ್ವದಿಂದಾಗಿ ಆಸ್ಟ್ರೇಲಿಯ ವನಿತಾ ತಂಡ ಕ್ರಿಕೆಟ್ ವಿಶ್ವವನ್ನು ಆಳತೊಡಗಿ ಮೆರೆದಾಡಿತು. ಅವರ ನಾಯಕತ್ವದಡಿ ತಂಡ ನಾಲ್ಕು ಬಾರಿ ಟಿ20 ವಿಶ್ವಕಪ್ ಜಯಿಸಿ ಸಂಭ್ರಮಿಸಿದೆ. ಅವರನ್ನು ಒಳಗೊಂಡ ತಂಡ 5 ಬಾರಿ ಟಿ20 ಮತ್ತು ಎರಡು ಬಾರಿ ಏಕದಿನ ವಿಶ್ವಕಪ್ ಜಯಿಸಿದ ಸಾಧನೆ ಮಾಡಿದೆ. ಇಷ್ಟು ಮಾತ್ರವಲ್ಲದೇ ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್‌ನ ಚಿನ್ನ ಗೆಲ್ಲುವಲ್ಲಿ ಲ್ಯಾನ್ನಿಂಗ್ ಅವರ ಕೊಡುಗೆ ಮಹತ್ತರವಾಗಿತ್ತು.
ವೈಯಕ್ತಿಕ ಸಾಧನೆ
13 ವರ್ಷಗಳ ದೀರ್ಘ ಕ್ರಿಕೆಟ್ ಬಾಳ್ವೆ ವೇಳೆ ಒಟ್ಟಾರೆ 241 ಪಂದ್ಯಗಳನ್ನಾಡಿದ ಲ್ಯಾನ್ನಿಂಗ್ 8,352 ರನ್ ಪೇರಿಸಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಗರಿಷ್ಠ ಸಂಖ್ಯೆಯ ಪಂದ್ಯ ಆಡಿದ ಅವರು ಬ್ಯಾಟಿಂಗ್ ವೈಭವದೊಂದಿಗೆ ಮೆರೆ ದಿದ್ದಾರೆ. ಅವರು ಟೆಸ್ಟ್ ಆಡಿರುವುದು ಆರು ಮಾತ್ರ. 103 ಏಕದಿನ ಪಂದ್ಯಗಳಿಂದ ಅವರು 4,602 ರನ್ ಗಳಿಸಿದ್ದಾರೆ. ಅಜೇಯ 152 ಅವರ ಶ್ರೇಷ್ಠ ನಿರ್ವಹಣೆ. ಟಿ20ಯಲ್ಲಿ 132 ಪಂದ್ಯ ಆಡಿದ್ದು 3,405 ರನ್ ಗಳಿಸಿದ್ದಾರೆ. ಅಜೇಯ 133 ರನ್ ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.
ಅಸಾಮಾನ್ಯ ದಾಖಲೆಗಳ ಸಾಧಕಿ
ಶತಕ ಬಾರಿಸಿದ ಅತೀ ಕಿರಿಯೆ: ಪರ್ತ್‌ನಲ್ಲಿ 2011ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಜೇಯ 104 ರನ್ ಬಾರಿಸಿದಾಗ ಅವರ ವಯಸ್ಸು 18 ವರ್ಷ 288 ದಿನ ಆಗಿತ್ತು.
ಅತೀ ವೇಗದ ಶತಕ
ವನಿತಾ ಏಕದಿನ ಪಂದ್ಯದಲ್ಲಿ ಅತೀ ವೇಗದ ಶತಕ ಸಿಡಿಸಿದ ಕೀರ್ತಿ ಲ್ಯಾನ್ನಿಂಗ್ ಅವರಿಗೆ ಸಲ್ಲುತ್ತದೆ. 2012ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದ್ದರು.
ಗರಿಷ್ಠ ಶತಕ
ಒಟ್ಟಾರೆ 103 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ ಲ್ಯಾನ್ನಿಂಗ್ ಗರಿಷ್ಠ 15 ಶತಕ ಸಿಡಿಸಿದ್ದಾರೆ. ಚೇಸಿಂಗ್ ವೇಳೆಯೇ ಅವರ ಹೆಚ್ಚಿನ ಶತಕ ದಾಖಲಾಗಿದೆ.
ಗರಿಷ್ಠ ಸತತ ಗೆಲುವು
ಲ್ಯಾನ್ನಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯ ತಂಡವು ವನಿತಾ ಏಕದಿನ ಕ್ರಿಕೆಟ್‌ನಲ್ಲಿ ಸತತ 24 ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡ ಸಾಧನೆ ಮಾಡಿದೆ. 2018ರ ಮಾರ್ಚ್‌ನಿಂದ 2021ರ ಸಪ್ಟೆಂಬರ್ ವರೆಗೆ ಅದು ಅಜೇಯ ಎಂಬ ಗೌರವಕ್ಕೆ ಪಾತ್ರವಾಗಿತ್ತು.
ನಾಯಕಿಯಾಗಿ ಗರಿಷ್ಠ ಗೆಲುವು
ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ನಾಯಕಿಯಾಗಿ ಲ್ಯಾನ್ನಿಂಗ್ 146 ಪಂದ್ಯಗಳಲ್ಲಿ ಗೆಲುವಿನ ಗಂಟೆ ಬಾರಿಸಿದ್ದಾರೆ. ಅದರಲ್ಲಿ 76 ಗೆಲುವು ಟಿ20ಯಲ್ಲಿಯೇ ಬಂದಿರುವುದು ಗಮನಾರ್ಹ.
ಶಂಕರನಾರಾಯಣ ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.