ವಿಜಯಶಿಲ್ಪಿ , ಉದ್ಯೋಗದಾತ ಮೂಲ್ಕಿ ಸುಂದರರಾಮ ಶೆಟ್ಟಿ
Team Udayavani, Apr 30, 2021, 6:00 AM IST
ಬ್ಯಾಂಕಿಂಗ್ ಉದ್ಯಮದ ಉಗಮ ಸ್ಥಾನ, ತೊಟ್ಟಿಲು, ತವರೂರು ಎಂದೇ ಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ದಿಗ್ಗಜರುಗಳಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಅವಿಸ್ಮರಣೀಯ. ಒಬ್ಬ ವ್ಯಕ್ತಿ ಸಮಾಜಕ್ಕೆ ಸಲ್ಲಿಸಿದ ಮಹತ್ವದ ಸೇವೆಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿಯೂ ಇದೊಂದು ಪ್ರಬುದ್ಧ ಸಿದ್ಧಾಂತ ವೆಂದರೂ ತಪ್ಪಾಗಲಾರದು. ಅವರ ಜನ್ಮದಿನವಾದ ಇಂದು (ಎಪ್ರಿಲ್ 30) ಅವರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ. 1962 ರಿಂದ 1979ರ ವರೆಗೆ ವಿಜಯ ಬ್ಯಾಂಕ್‌ನ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿ ಬ್ಯಾಂಕ್‌ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್ ಚೇತನ. ಇಂದು ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನವಾದರೂ ಸುಂದರಾಮ ಶೆಟ್ಟಿ ಹೆಸರು ಬ್ಯಾಂಕ್‌ನೊಂದಿಗೆ ಅಚ್ಚಳಿಯದೇ ಉಳಿದಿದೆ.
ರಾಜಮರ್ಜಿಯ ಸಮೃದ್ಧ ಮನೆತನದಲ್ಲಿ ಹುಟ್ಟಿದರೂ ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯ ಸುಂದರರಾಮ ಶೆಟ್ಟಿ ಅವರಿಗಿತ್ತು. ಅವರಿಗೆ ಬ್ಯಾಂಕ್‌ನ ಲಾಭವನ್ನು ಹೆಚ್ಚಿಸುವುದೊಂದೇ ಉದ್ಯಮದ ಉದ್ದೇಶವಾಗಿರಲಿಲ್ಲ. ಉದ್ಯಮವು ಸಮಾಜದ ಅನೇಕರಿಗೆ ಉದ್ಯೋಗಾವಕಾಶಗಳನ್ನು ನೀಡುವು ದರೊಂದಿಗೆ ಸಾಮಾಜಿಕ ಹಿತಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಸ್ಥಾಪಿಸಲ್ಪಡಬೇಕು ಎಂಬ ಆಶಯ ಅವರದಾಗಿತ್ತು. ಸುಂದರರಾಮ ಶೆಟ್ಟರು ಯಾರಿಗಾದರೂ ಉದ್ಯೋಗ ಕೊಡುವುದರ ಹಿಂದೆ ಬ್ಯಾಂಕ್‌ನ ಅಭಿವೃದ್ಧಿಯ ದೃಷ್ಟಿ ಇತ್ತೇ ವಿನಾ ಅವರ ಸ್ವಾರ್ಥದ ಲವಲೇಶವೂ ಇರಲಿಲ್ಲ. ಈ ವಿಚಾರದಲ್ಲಿ ಅವರ ಮಾನವೀಯ ಅಂತಃಕರಣವನ್ನು ಪ್ರಶಂಸಿಸಲೇಬೇಕು. ಒಂದು ಸಂಸಾರದ ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಿ ಆದಾಯವಿಲ್ಲದ ಕುಟುಂಬಗಳ ಯುವಕರಿಗೆ ಉದ್ಯೋಗ ಕೊಡುವ ಕೆಲಸವನ್ನು ಸುಂದರರಾಮ ಶೆಟ್ಟರು ನಿರಂತರವಾಗಿ ಮಾಡಿದ್ದರು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಯುವಕ- ಯುವತಿಯರಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದರು. ಉದ್ಯೋಗ ನೀಡುವಾಗ ಅಭ್ಯರ್ಥಿಯ ಅರ್ಹತೆ ಯೊಂದಿಗೆ ಅನಿವಾರ್ಯತೆಯೂ ಅವರಿಗೆ ಮಾನದಂಡವಾಗಿತ್ತು.
ಸುಂದರರಾಮ ಶೆಟ್ಟರು ವಿಜಯ ಬ್ಯಾಂಕ್‌ನ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಸಂದರ್ಭದಲ್ಲಿ ಕಠಿನವಾದ ಸವಾಲುಗಳು ಎದುರಾಗಿದ್ದವು. ಆದರೆ ತನ್ನ ಅವಿರತ ಪರಿಶ್ರಮದಿಂದ ಬ್ಯಾಂಕ್‌ನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಹಿರಿಮೆ ಸುಂದರರಾಮ ಶೆಟ್ಟರದ್ದು. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಸಣ್ಣ ಸಣ್ಣ 9 ಬ್ಯಾಂಕ್‌ಗಳನ್ನು ವಿಜಯ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಮೂಲಕ ವಿಜಯ ಬ್ಯಾಂಕ್ ಅನ್ನು ಮತ್ತಷ್ಟು ಸದೃಢಗೊಳಿಸಿದರು. ಇದರಿಂದಾಗಿ ಬ್ಯಾಂಕ್‌ನ ಬಂಡವಾಳ, ವ್ಯವಹಾರ ಮತ್ತು ಭೌಗೋಳಿಕ ವ್ಯಾಪ್ತಿ ವೃದ್ಧಿಯಾಗಿ ಬ್ಯಾಂಕ್‌ನ ಪಾಲಿಗೆ ವಿಜಯಶಿಲ್ಪಿ ಎನಿಸಿಕೊಂಡರು.
ವಿಜಯ ಬ್ಯಾಂಕ್‌ನ ಶಾಖೆಗಳನ್ನು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ತೆರೆಯುವ ಮೂಲಕ ಬ್ಯಾಂಕ್‌ನ ವ್ಯವಹಾರದ ವ್ಯಾಪ್ತಿಯನ್ನು ವಿಸ್ತರಿಸಿದರು. ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ಅಲ್ಲಿನ ಜನರಿಗೆ ಬ್ಯಾಂಕಿಂಗ್ ಸೇವೆ ಲಭಿಸುವಂತೆ ಮಾಡಿದುದಲ್ಲದೆ ದೂರದ ಈಶಾನ್ಯ ಭಾರತದ ಎಲ್ಲ ಏಳು ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದುದು ಅಂದಿನ ಕಾಲಕ್ಕೆ ಕಷ್ಟಸಾಧ್ಯವಾದ ಕಾರ್ಯ ಸಾಧನೆಯಾಗಿತ್ತು. 1975ರಲ್ಲಿ ಒಂದೇ ವರ್ಷದಲ್ಲಿ 105 ಶಾಖೆಗಳನ್ನು ತೆರೆದು 1,875 ಮಂದಿಗೆ ಉದ್ಯೋಗ ನೀಡಿದ್ದರು. ಇಷ್ಟಾಗಿಯೂ ಬ್ಯಾಂಕ್ ಲಾಭ ಗಳಿಸಿತ್ತು. “ಇದು ನಮ್ಮ ಬ್ಯಾಂಕ್, ನಾವೆಲ್ಲರೂ ಸೇರಿ ಬ್ಯಾಂಕ್ ಅನ್ನು ಮೇಲಕ್ಕೆತ್ತಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು’ ಎಂದವರು ಉದ್ಯೋಗಿಗಳಿಗೆ ಸದಾ ಕಿವಿಮಾತು ಹೇಳುತ್ತಿದ್ದರು. ಅವರಿಗೆ ತನ್ನ ಕ್ರಿಯಾಶಕ್ತಿಯ ಕುರಿತು ತುಂಬು ವಿಶ್ವಾಸವಿತ್ತು. ರಾಷ್ಟ್ರಪತಿ, ಪ್ರಧಾನಿ, ಹಣಕಾಸು ಸಚಿವರು..ಹೀಗೆ ಎಷ್ಟೇ ಉನ್ನತ ನಾಯಕರಾಗಲೀ, ಅಧಿಕಾರಿಗಳನ್ನಾಗಲೀ ಭೇಟಿಯಾಗಿ ಅವರೊಡನೆ ಯೋಚನೆ ಮತ್ತು ಯೋಜನೆಗಳನ್ನು ಮುಕ್ತವಾಗಿ ಚರ್ಚಿಸುವ ಚಾಕಚಕ್ಯತೆ ಮತ್ತು ಯಾವುದೇ ವಿಷಯವನ್ನು ಮನದಟ್ಟು ಮಾಡಿ ಒಪ್ಪಿಸುವ ವೈಚಾರಿಕ ಗಟ್ಟಿತನ ಅವರಿಗಿತ್ತು.
ಸದಾ ಜ್ಞಾನದಾಹಿಯಾದ ಸುಂದರರಾಮ ಶೆಟ್ಟರಿಗೆ ಆರ್ಥಿಕ ವಿಚಾರಗಳ ಆಗುಹೋಗುಗಳ ಬಗೆಗಿನ ಮಾಹಿತಿಯ ಬಗ್ಗೆ ಖಚಿತ ಅಭಿಪ್ರಾಯವಿರುತ್ತಿತ್ತು. ಇಂಗ್ಲಿಷ್ ಭಾಷೆಯ ಮೇಲೆ ಅವರಿಗಿದ್ದ ಹಿಡಿತ, ಸಂಭಾಷಣೆಯ ನೈಪುಣ್ಯ ಹಾಗೂ ಅಪಾರ ನೆನಪಿನ ಶಕ್ತಿ ಅವರನ್ನು ವ್ಯವಹಾರಗಳಲ್ಲಿ ಮಿಂಚುವಂತೆ ಮಾಡಿದವು. ಸ್ಪುರದ್ರೂಪಿ, ಅಜಾನುಬಾಹು ಶೆಟ್ಟರದ್ದು ಕಂಚಿನ ಕಂಠ, ಮಿಂಚಿನ ಮಾತು. ಒಮ್ಮೆ ನೋಡಿದರೆ ಮರೆಯಲಾಗದ ಮತ್ತು ನೆನಪಿಸಿಕೊಂಡಾಗ ಸ್ಮತಿಪಟಲದಲ್ಲಿ ಹಾದು ಹೋಗುವ ವ್ಯಕ್ತಿತ್ವ.
ಸುಂದರರಾಮ ಶೆಟ್ಟರು ಮೂಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬಪ್ಪನಾಡು ಜ್ಞಾನ ಮಂದಿರ ಮತ್ತು ಅನೇಕ ವಿದ್ಯಾ ಸಂಸ್ಥೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ಸಹಾಯವನ್ನು ಒದಗಿಸಿದ್ದರು.
1978ರ ವರೆಗೆ ಪೂರ್ಣಕಾಲಿಕ ಅಧ್ಯಕ್ಷರಾಗಿ ವಿಜಯಾ ಬ್ಯಾಂಕ್ ಅನ್ನು ಮುನ್ನಡೆಸಿದ್ದ ಅವರು 1981ರಲ್ಲಿ ನಿಧನ ಹೊಂದಿದರು. ಸುಂದರಾಮ ಶೆಟ್ಟರು ನಮ್ಮನ್ನಗಲಿ ನಾಲ್ಕು ದಶಕಗಳು ಸಂದರೂ ಅವರ ಹೆಸರು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ. ಇದಕ್ಕೆ ಕಾರಣ ಅವರಲ್ಲಿನ ದೂರದೃಷ್ಟಿ, ಕತೃìತ್ವ ಶಕ್ತಿ ಮತ್ತು ಸಮಾಜಮುಖೀ ಮನೋಭಾವ.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.