ತೋಟದಲ್ಲಿ ಕೂತರೆ ಆಹಾ,ಮನಸ್ಸು ಗಾಂಧಿಬಜಾರ್!
Team Udayavani, Jul 30, 2017, 12:35 AM IST
ತುಂಬ ಎತ್ತರಕ್ಕೆ ಬೆಳೆದ ಮೇಲೆ ಸಮಾಜಕ್ಕೆ ಅಭಿಮುಖವಾಗಬೇಕು. ಇಲ್ಲದಿದ್ದರೆ ಎಲ್ಲವೂ ಇದ್ದು ಸಂತೆಯಲ್ಲೂ ಒಂಟಿಯೇ ಅನಿಸಿಬಿಡುತ್ತದೆ
ವ್ಯಕ್ತಿಯನ್ನು ಅವನು ಏರಿದ ಎತ್ತರದಿಂದಲ್ಲ, ಬದಲಾಗಿ ಅವನನ್ನು ಅಳತೆ ಮಾಡಬೇಕಾಗಿರೋದು. ಅವನು ಎತ್ತರಕ್ಕೆ ಏರಿ, ಎಷ್ಟು ಜನರನ್ನು ತನ್ನ ಜೊತೆಗೆ ಕರೆದುಕೊಂಡು ಹೋದ, ಎಷ್ಟು ಜನರ ಮೇಲೆ ಪ್ರಭಾವ ಬೀರಿದ್ದಾನೆ ಅನ್ನೋದರ ಮೇಲೆ ಲೆಕ್ಕ ಹಾಕಬೇಕು. ಇವನ್ನೆಲ್ಲ ಕಲಿಸಿದ್ದು ಭೂಮಿ; ಅದರೊಟ್ಟಿಗಿನ ಕೊರಳ ಗೆಳೆತನ!
ಕೃಷಿ ಅನ್ನುತ್ತಲೇ ಜ್ಞಾಪಕಕ್ಕೆ ಬರೋದು ನಮ್ಮ ಪೂರ್ಣಚಂದ್ರ ತೇಜಸ್ವಿ. ತೇಜಸ್ವಿ ಹೆಸರು ಕೇಳುತ್ತಿದಾØಗೆ ಹೊಟ್ಟೆಯ ದೊಡ್ಡ ಕರುಳಿನ ಪಕ್ಕ ತಳಮಳ ಶುರುವಾಗಿಬಿಡುತ್ತದೆ. ಇದೊಂಥರ ಸಾತ್ವಿಕ ತಳಮಳ. ಇಡೀ ಜಗತ್ತನ್ನು, ಜಗತ್ತಲ್ಲಿರುವ ಎಲ್ಲವನ್ನು ತಿರಸ್ಕಾರ ಮಾಡಿ ಬದುಕೋಕೆ ಹೇಗೆ ಆಗುತ್ತೆ? ತೇಜಸ್ವಿ ಅದನ್ನು ಮಾಡಿದರು. ತೇಜಸ್ವಿಗೆ ಸಾಧ್ಯವಾದದ್ದು ನಮಗೇಕೆ ಆಗೊಲ್ಲ?
ಇವತ್ತು ನನ್ನ ಎಲ್ಲಾ ಮನೆಗಳು ನಗರಗಳ ಹೊರವಲಯದಲ್ಲಿರುವುದಕ್ಕೆ ತೇಜಸ್ವಿಯೇ ಸ್ಫೂರ್ತಿ. ಅವರ ಸಿಟ್ಟು, ಅವರ ತೀರ್ಮಾನ, ಅವರ ಬದುಕು ಎಲ್ಲವೂ ಒಂಥರ ನಮ್ಮ ಜೀವನ ಹಾದಿಯ ಲೈಟು ಗಂಬಗಳಂತೆ. ಅವರ ಬೆಳಕಲ್ಲಿ ನಡೆಯಬಹುದು. ನಮಗೆಲ್ಲಾ ಇವರೊಬ್ಬ ರೋಲ್‌ಮಾಡಲ್ ಅಂತಲೇ ಹೇಳಬೇಕು. ಈಗಲೂ ತೇಜಸ್ವಿ ಅವರ ಯೋಚನೆಗಳನ್ನೂ, ಬದುಕನ್ನೂ ಇಣುಕಿ ನೋಡಿದರೆ ಬೆರಗಾಗು ತ್ತೇನೆ. ಹಾಗಂತ, ನಮ್ಮದೇನು ಕೃಷಿ ಕುಟುಂಬವಲ್ಲ. ಪೂರ್ವಿಕರಲ್ಲಿ ನಮ್ಮ ದೊಡ್ಡಪ್ಪನವರದ್ದು 8 ಎಕರೆ ಜಮೀನಿತ್ತು. ಅಮ್ಮನದು ಬೆಟಗೇರಿ, ಅಪ್ಪನದು ಮಂಗಳೂರು. ರಜೆ ಇದ್ದಾಗ ಮಂಗಳೂರಿಗೆ ಹೋಗ್ತಾ ಇದ್ವಿ. ಅಲ್ಲಿ ಮಳೆ ಸೊಬಗನ್ನು ಸವಿಯುತ್ತಿದ್ವಿ. ಬೆಟಗೇರಿಗೆ ಹೋದಾಗ ಮಿಷನ್‌ಕಾಂಪೌಂಡ್‌ನಲ್ಲಿ ಮನೆ; ಕೃಷಿ ಇರಲಿಲ್ಲ. ಚಿಕ್ಕಮ್ಮ ಕೂಡ ಅಲ್ಲೇ ಇದ್ದುದರಿಂದ ಆಗಾಗ ಹೋಗ್ತಾ ಇದ್ವಿ. ಇವಿಷ್ಟು ಬಿಟ್ಟರೆ ಕೃಷಿಗೂ ನನಗೂ ಯಾವುದೇ ನಂಟು ಇರಲಿಲ್ಲ. ಆದರೆ ಪ್ರೀತಿ ಇತ್ತು. ಗಿಡ, ಮರ, ಪರಿಸರ ಅಂದರೆ ಬೆರಗು ಇತ್ತು.
ನಟನಾದ ಮೇಲಂತೂ, ಶೂಟಿಂಗ್ ಅಂತ ದಿನದ ಇಪ್ಪತ್ನಾಲ್ಕು ಗಂಟೆ ಬ್ಯುಸಿಯಾದೆ. ಭೂಮಿ, ಆಕಾಶ ನೋಡಿ ಬದುಕೋದು ಬಿಟ್ಟು, ವಾಚ್ ನೋಡ್ತಾ ಬದುಕುವ ಪರಿಸ್ಥಿತಿ ಬಂತು. ದೇಶ, ವಿದೇಶ, ಊರು, ಕೇರಿಗಳೆಲ್ಲಾ ಸುತ್ತಿದೆ. ಹೆಸರು ಬಂತು, ಹಣ ಬಂತು, ಎಲ್ಲವೂ ಆಯ್ತು, “ಪ್ರಕಾಶ ಮುಂದೇನೋ’ ಮನಸ್ಸು ಹೀಗೆ ಕೇಳಿದಾಗ ಉತ್ತರವಿರಲಿಲ್ಲ. ಬದುಕು ಏಕೋ ಡೆಡ್‌ಎಂಡ್‌ನಲ್ಲಿ ನಿಂತಂತೆ ಅನಿಸತೊಡಗಿತು.
ಅಷ್ಟರಲ್ಲಿ, ಮಗಳು ಕೊಡೈಕೆನಾಲ್‌ನಲ್ಲಿ ಓದುತ್ತಿದ್ದಳು. ಅವಳನ್ನು ಬಿಟ್ಟು ಬರೋಕೆ ನಾನೇ ಡ್ರೈವ್ ಶುರುಮಾಡಿದೆ. ಅಲ್ಲೆಲ್ಲೋ ಬಿರಿಯಾನಿ ಚೆನ್ನಾಗಿದೆ ಅಂತ ತಿನ್ನೋದು, ರಸ್ತೆಯ ಬದಿಯ ಬೇರೆಯವರ ಹೊಲದಲ್ಲಿ ಬುತ್ತಿ ಕಟ್ಟಿಕೊಂಡು ಕೂತು ಊಟ ಮಾಡೋದು ಶುರುವಾಯಿತು. ಯಾಕೋ ನಾನು ಹಳ್ಳಿಗಳನ್ನು ನೋಡ್ತಾ ಇಲ್ಲ ಅನಿಸಲು ಶುರುವಾಗಿದ್ದೇ ಆವಾಗ. ಏಕೆಂದರೆ, ನೀವು ಮೈಸೂರಿಗೆ ಹೋಗ್ತಾ ಇದ್ದೀನಿ ಅಂತ ಹೇಳಿ. ಸ್ನೇಹಿತರು- ಲೋ ಬಿಡದಿಯಲ್ಲಿ ಇಡ್ಲಿ ಮರೀಬೇಡ. ರಾಮನಗರದಲ್ಲಿ ಮುರುಕು, ಮದ್ದೂರಲ್ಲಿ ವಡೆ ತಿನ್ನು, ಮಂಡ್ಯದಲ್ಲಿ ಕಾಫಿ ಚೆನ್ನಾಗಿ ರುತ್ತೆ ಹೀಗೆ ಹೇಳುತ್ತಾರೆ. ಜರ್ನಿಯಲ್ಲಿ ಒಂಥರ ಅಟ್ಯಾಚ್‌ಮೆಂಟ್. ಸ್ಟ್ರೈಟ್ ಹೈವೇ ಆದ ಮೇಲೆ ಊರುಗಳು ಹತ್ತಿರವಾದವು; ಸಂಬಂಧಗಳು ಖಾಲಿ ಯಾದವು. ಬೈಪಾಸ್‌ಗಳು ಊರಿಗೆ ಹೋಗ್ತಿಲ್ಲ. ಹಳ್ಳಿಗಳು ನೆನಪಾಗ್ತಿಲ್ಲ. ಕೊನೆಗೆ ವೃದ್ಧಾಶ್ರಮಗಳಾದ ಮೇಲಂತೂ ಆ ಕಡೆ ಯಾರೂ ತಿರುಗಿ ನೋಡ್ತಿಲ್ಲ. ಅರೆ, ನನ್ನ ಜೀವನದ ಮೇಲೂ ಇಂಥ ಹೈವೆ ಹಾದು ಹೋಗಿದೆಯಲ್ಲಾ ಅನಿಸತೊಡಗಿತು. ಆವತ್ತೇ ತೀರ್ಮಾನ ಮಾಡಿದೆ. ಶೂಟಿಂಗ್ ಇರಲಿ, ಏನೇ ಇರಲಿ, ಟ್ರಾವಲ್ ಅಂದರೆ ಕಾರು, ಬಸ್, ಟ್ರೈನ್‌ನಲ್ಲೇ ಮಾಡಬೇಕು ಅಂತ. ಹೈದ್ರಾಬಾದ್‌ನಲ್ಲಿ ಚಿಕ್ಕ ತೋಟ ತಗೊಂಡೆ, ಆಮೇಲೆ ಏನು ಮಾಡೋದು?
ಗಿಡಗಳ ಜೊತೆ ಮಾತಾಡೋದು. ಅದು ಹೇಗೆ ಗೊತ್ತಿರಲಿಲ್ಲ. ಒಂದು ಸಲ ಮೈಸೂರಿನ ಜನ್ನಿ, “ಪಾಳೇಕಾರ್ ಬಂದಿದ್ದಾರೆ. ಬೆಳಗ್ಗೆ ಹೊರಡ್ತಾರೆ’ ಅಂದ. ಅವರ ಮನೆ ಮುಂದೆ ಹೋಗಿ ನಿಂತೆ. “ದೇವನೂರರ ಬನವಾಸಿ ತೋಟ ನೋಡೋಕೆ ಹೋಗ್ತಾ ಇದ್ದೀನಿ ಬರ್ತೀರಾ’ ಅಂದರು ಪಾಳೇಕಾರ್. ಅಲ್ಲಿ ನೋಡಿದರೆ ಪಾಳೇಕಾರ್, ದೇವನೂರು ಇಬ್ಬರೂ ಭೂಮಿ ಜೊತೆ, ಗಿಡಗಳ ಜೊತೆ ಮಾತಾಡ್ತಾ ಇದ್ದಾರೆ; ಸಂತರಂತೆ. ಇವರ ವಿಧಾನ ಇಷ್ಟವಾಯ್ತು. ನಾನು ಫುಕವೊಕ ಓದಿಕೊಂಡಿದ್ದೆ. ಇವ್ರು ಬೇರೆ ಏನೋ ಹೇಳ್ತಾ ಇದ್ದಾರಲ್ಲಾ ಅನಿಸಿತು. ದೇಸಿ ಹಸು, ಅದನ್ನು ಸಾಕೋ ವಿಧಾನ, ಬೆಳೆ ಬೆಳೆಯೋ ತಂತ್ರ, ಸಮಸ್ಯೆಗೆ ಪರಿಹಾರ ಬೇರೇನೆ ಇದೆಯಲ್ಲಾ ಅನಿಸಿ ಅಳವಡಿಸಿಕೊಂಡೆ.
ಇವತ್ತು…
ನನ್ನ ತೋಟಗಳಲ್ಲಿ 42 ಹಸು, ಗೋಶಾಲೆ ಇದೆ. ಸಗಣಿ, ಗಂಜಲ ತಗೊಂಡು, ಯಾವುದೇ ರಾಸಾಯ
ನಿಕ ಬಳಸದ ಕೃಷಿಯ ಖುಷಿ ಬದುಕು ಶುರುವಾ ಗಿದೆ. ಹಸುಗಳು ಸಗಣಿ ಹಾಕಿದಾಗ, ಮೆಲ್ಲಗೆ ತೆಗೆದು ನೋಡಿದರೆ ಭೂಮಿಗೆ ಕಣ್ಣು ಬಂದು ಬಿಡೋದಾ? ಎಂಥ ಪ್ರಪಂಚ ಗೊತ್ತಾ, ಎಷ್ಟೊಂದು ಜೀವಿಗಳಿರುತ್ತವೆ ಗೊತ್ತಾ? ಚೆನ್ನೈ ತೋಟದಲ್ಲಿ ಮಾವಿದೆ, ಹಲಸಿದೆ, ದಾಳಿಂಬೆ, ಪಪ್ಪಾಯ, ಹೊಂಗೆ, ಹೊನ್ನೆ ಇದೆ. ನಾನಾಥರ ಹೂಗಳು ಇವೆ. ಎಂಟುಥರ ಹಸಿ ಮೆಣಿಸಿನಕಾಯಿ ಕೂಡ. ನಾನು ಅಡುಗೆ ಮಾಡ್ತಾ, ಮಾಡ್ತಾನೇ ತೋಟದಲ್ಲಿರೋ ಕರಿಬೇವನ್ನು ಕಿತ್ತು ಸಾರಿಗೆ ಹಾಕ್ತೀನಿ. ಫ್ರೆಶ್ ಕೊತ್ತಂಬರಿ ನನ್ನ ಹತ್ತಿರವೇ ಇದೆ. ಕ್ಯಾರೆಟ್, ಬದನೆ, ನುಗ್ಗೆಗೆ ಬರವಿಲ್ಲ. ಹೀಗೆ ಎಲ್ಲಾ ತರಕಾರಿಗಳು ನನ್ನ ಕಣ್ಣಮುಂದೆಯೇ ಇವೆ. ಮನೇಲಿ ಕರೆಂಟ್ ಇಲ್ಲ; ಸೋಲಾರ್ ಹಾಕಿದ್ದೇನೆ. ಮೇಲೆ ಟ್ಯಾಂಕ್ ಕಟ್ಟಿದ್ದೇನೆ. ಗ್ರಾವಿಟೇಷನ್ ಪವರ್‌ನಿಂದ ನೀರು ಬರುತ್ತದೆ. ದೊಡ್ಡ ಹೊಂಡ ಮಾಡಿದೆ. ಭೂಮಿ ಮಳೆ ನೀರು ಕುಡಿಯೋಕೆ ಶುರುಮಾಡಿತು. ಒಂದು ಎಲೆಗೆ ಒಂದು ರೂ. ಎನ್ನುವಂತೆ ತೋಟದ ತರಗೆಲೆ ಹೊರಗೆ ಹೋಗದ ಹಾಗೆ ಮಾಡಿದ್ದರಿಂದ ಗೊಬ್ಬರ ಸಿಕ್ಕಿತು. ನೋಡ ನೋಡುತ್ತಿದ್ದಂತೆ ಗಿಡಗಳು ಮರಗಳಾದವು. ಪಕ್ಷಿಗಳು ಗೂಡುಕಟ್ಟಿ ಬೆಳಗ್ಗೆ ಸಂಜೆ ಸಂಗೀತ ಕಛೇರಿ ಶುರುವಾದವು. ಗೀಜಗ ಬಂದು “ನಿನ್ನ ಮೇಲೆ ನಂಬಿಕೆ ಇದೆ, ಅದಕ್ಕೆ ನಿನ್ನ ತೋಟದಲ್ಲಿ ಮನೆ ಮಾಡ್ತಾ ಇದ್ದೀನಿ’ ಅನ್ನೋ ರೀತಿ ಗೂಡು ಕಟ್ಟಿ ನಂಬಿಕೆ ಹುಟ್ಟಿಸಿಬಿಟ್ಟಿದೆ. ತೋಟದಲ್ಲಿದ್ದರೆ ಮನಸ್ಸು ಗಾಂಧಿಬಜಾರ್!
ಹೂವು ಕಾಯಾಗುವ, ಕಾಯಿ ಹಣ್ಣಾಗುವ ಗತಿ ಇದೆಯಲ್ಲ ಇದು ಅರ್ಥಮಾಡಿಸೋದು ನಿಸರ್ಗ. ಪರಿಸರ ಅನ್ನೋದು ಬಹಳ ಕಿಲಾಡಿ. ಅದು ನಿಮಗೆ ಎಷ್ಟು ಬೇಕೋ ಅಷ್ಟು ಕೊಡುತ್ತದೆ. ಇರಲಿ ಅಂತ ನಿಮ್ಮ ಆಸೆಗೂ ಇನ್ನೊಂದಷ್ಟು ಕೊಡುತ್ತದೆ. ಆದರೆ ದುರಾಸೆಗೆ ಕೊಡೋದಿಲ್ಲ.
ಇವಿಷ್ಟೆ ಅಲ್ಲ, ಶಿರಸಿಯಿಂದ, ಕಳವೆಯಿಂದ, ಬಂಡೀ ಪುರದಿಂದ, ನಾಗರಹೊಳೆಯಿಂದ ಗಿಡಗಳು ತಂದಿಟ್ಟಿದ್ದೀನಿ. ಇನ್ನು 3 ವರ್ಷಕ್ಕೆ ಕಾಡಾಗುತ್ತದೆ; ಪಕ್ಷಿಗಳು ಬರುತ್ತವೆ. ಆ ನೆಂಟರನ್ನು ಎದುರುಗೊಳ್ಳುವುದೇ ಹಬ್ಬ.
***
ವಿದೇಶದಲ್ಲಿ ಓದುತ್ತಿರುವ ದೊಡ್ಡ ಮಗಳ ವರ್ಷದ ಫೀಸಲ್ಲಿ ಇಲ್ಲಿನ 200 ಮಕ್ಕಳು ಓದಬಹು ದಲ್ಲಾ ಅನಿಸಿತು. ಹಳ್ಳಿ ದತ್ತು ತಗೊಂಡೆ. ಶಾಲೆಗೆ ಟೀಚರ್ ಇಲ್ಲ ಅಂತ ಗೊತ್ತಾಯ್ತು. ಅದನ್ನು ಸರಿ ಮಾಡೋದರಲ್ಲೇ ಹಳ್ಳಿ ಕೆಲ್ಸ ಶುರುವಾಯ್ತು.
ಹಳ್ಳಿಲಿ ಗರ್ಭಿಣಿಯರಿಗೆ ಪ್ರತಿದಿನ 200 ಎಂ.ಎಲ್ ಹಾಲು ಕೊಡುವುದು ಸರ್ಕಾರದ ಸವಲತ್ತು. ಆದರೆ ಹಾಲು ಸರಬರಾಜು ಮಾಡುವ ಸಂಸ್ಥೆಯೊಂದು ವಾರಕ್ಕೆ ಒಂದೇ ಸಲ ಒಬ್ಬರಿಗೆ ಎರಡು ಲೀಟರ್‌ನಂತೆ ಕೊಟ್ಟು ಹೋಗುತ್ತಿತ್ತು. ಹೆಂಗಸರು ಆವತ್ತು ಮಾತ್ರ 200 ಎಂ.ಎಲ್. ಹಾಲು ಕುಡಿಯುತ್ತಿದ್ದರು. ಹೀಗಾಗಿ ಉಳಿಕೆ ಹಾಲು ಇಡಲು ಜಾಗವಿಲ್ಲದೆ ವೇಸ್ಟ್ ಆಗುತ್ತಿತ್ತು. ನೋಡಿದರೆ ಹಳ್ಳಿಯಲ್ಲೇ ದಿನಕ್ಕೆ 1000ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅರೆ, ಇದೇ ಹಾಲನ್ನು ನೇರವಾಗಿ ಏಕೆ ಕೊಡಬಾರದು ಅಂತ ಕಲೆಕ್ಟರ್ ಜೊತೆ ಮಾತನಾಡಿದೆ. ಒಪ್ಪಿಕೊಂಡರು. ಫ್ರೆಶ್ ಹಾಲು ಪ್ರತಿದಿನ ನೇರ ಗರ್ಭಿಣಿಯರ ಮನೆ ಸೇರುವಂತಾಯಿತು. ಹಳ್ಳಿಲಿ 8 -10ಜನ ಅನಾಥ ವೃದ್ಧರು ಕಂಡರು. ಕೆಲವರಿಗೆ ಮಕ್ಕಳಿಲ್ಲ, ಇದ್ದ ಮಕ್ಕಳು ಹಳ್ಳಿàನೇ ಬಿಟ್ಟು ಹೋಗಿದ್ದಾರೆ. ಏನು ಮಾಡೋದು? ಸ್ಕೂಲಿಗೆ ಬಿಸಿಯೂಟ ಬರುತ್ತಿತ್ತು. ಹಳ್ಳಿ ಜನಕ್ಕೆ ತಾವು ತಿನ್ನುವುದರಲ್ಲಿ ಒಂದು ಮುಷ್ಠಿ ಅಕ್ಕಿಯನ್ನು ಬಿಸಿಯೂಟಕ್ಕೆ ಕೊಡಲು ಕೇಳಿಕೊಂಡೆ. ಇನ್ನೊಂದಷ್ಟು ಜನ ಎಣ್ಣೆ, ತರಕಾರಿ ಕೊಡಲು ಮುಂದಾದರು. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಅನಾಥರ ಹೊಟ್ಟೆ ಭರ್ತಿಯಾಯಿತು. ಹಳ್ಳಿ ಸಣ್ಣ ಜಾಗದಲ್ಲಿ ಶೀಟು ಹಾಸಿ, ಚೇರು ಹಾಕಿಸಿಕೊಟ್ಟೆ. ಒಂದಷ್ಟು ಪೇಪರ್‌ಗಳು ಬಂದು ಕೂತವು. ವೃದ್ಧರ ಬದುಕು ಬೆಳಕಾಯಿತು. ಇವೆಲ್ಲ ಮಾಡುತ್ತಾ ಹೋದಂತೆ ಭೂಮಿಯ ಮೇಲೆ ಬದುಕುತ್ತಿದ್ದೇನೆ ಅನಿಸೋಕೆ ಶುರುವಾಗಿದೆ.
***
ತುಂಬ ಎತ್ತರಕ್ಕೆ ಬೆಳೆದ ಮೇಲೆ ಸಮಾಜಕ್ಕೆ ಅಭಿಮುಖವಾಗಬೇಕು. ಇಲ್ಲದಿದ್ದರೆ ಎಲ್ಲವೂ ಇದ್ದು, ಎಲ್ಲರೂ ಇದ್ದು, ಸಂತೆಯಲ್ಲೂ ಒಂಟಿನೇ ಅನಿಸಿಬಿಡು ತ್ತದೆ. ಇದಕ್ಕೆ ಒಂದು ಉದಾಹರಣೆ ಕೊಡ್ತೀನಿ.
ಒಂದು ಸಲ ಮೈಸೂರಿನ ಬಳಿಯ ನದಿ ತೀರದಲ್ಲಿ ನಾನು, ಜಯಂತ್ ಕಾಯ್ಕಿಣಿ ಕೂತ್ಕೊಂಡು ಮಾತಾಡ್ತಾ ಇದ್ವಿ. ಅಲ್ಲಿಗೆ ಶಶಿಧರ ಅಡಪ ಬಂದ.
“ಏನೋ ಹೇಗಿದೆಯೋ?’ ಅಂದೆ.
“ಏನೋ ನಡೀತಿದೆಯಮ್ಮಾ’ ಅಂದ.
ಅವನ ಧ್ವನಿಯಲ್ಲಿ ಇಂಥದೇ ಒಂಟಿತನ ಆಕಳಿಸುತ್ತಿತ್ತು.
“ನೋಡು ಆರ್ಟ್ ಡೈರೆಕ್ಟರಾಗಿ, ಕಲಾವಿದನಾಗಿ ಎತ್ತರಕ್ಕೆ ಬೆಳೆದಿದ್ದಿಯಾ. ಖುಷಿಯಾಗಿದೆ. ಆದರೆ ಹೇಗಿದೆ ಜೀವನ ಅಂದರೆ ಏನೋ ನಡೀತಿದೆ ಅಂತೀಯಾ. ಅಂದರೆ, ನಿನಗೆ ನಿನ್ನ ಬದುಕೇ ಬೋರ್ ಆಗ್ತಿದೆ, ಏನೋ ಕಳ್ಕೊಂಡಿದ್ದೀಯ ಅಂತ ಅರ್ಥ. ನಮ್ಮನ್ನು ಬೆಳೆಸಿದ ಸಿಜಿಕೆ ಅವರಂಥೋರು ನಿರಂತರವಾಗಿ ರಂಗಭೂಮಿ ಮಾಡಿದರು. ಅವರಿಗೆ ಬದುಕೇ ಎನರ್ಜಿಯಾಗಿತ್ತು. ಬೋರಾಗಿರಲಿಲ್ಲ. ಅವರು ಬಿಟ್ಟು ಹೋದ ಮೇಲೆ ಕಂಟಿನ್ಯೂ ಮಾಡಬೇಕಾಗಿತ್ತು. ಮಾಡದೇ ವೈಯಕ್ತಿಕವಾಗಿ ಬೆಳೆದಿದ್ದರಿಂದ ಹೀಗಾಗ್ತಿದೆ. ಮನುಷ್ಯ ವೈಯಕ್ತಿಕವಾಗಿ ಬೆಳೆಯುತ್ತಿದ್ದಾನೆ ಅಂದರೆ ದ್ವೀಪ ಆಗ್ತಿದ್ದಾನೆ ಅಂತ. ದ್ವೀಪ ಆಗುವುದರಲ್ಲಿ ಯಾವುದೇ ಅರ್ಥವಿಲ್ಲ. ಸಮಾಜಕ್ಕಾಗಿ ನಿನ್ನ ಗ್ರಹಿಕೆ, ಅನುಭವ, ಶಕ್ತಿಯನ್ನು ಮತ್ತೆ ಹಾಕದೇ ಇದ್ದರೆ ಈ ಥರ ಹತಾಶೆ, ಒಂಟಿತನ ಕಾಡುತ್ತದೆ’ ಅಂದೆ.
“ಏನು ಮಾಡಬೇಕು’ ಅಂದ.
ಸಿಜಿಕೆ ಅವರ ನ್ಯಾಷನಲ್ ಫೆಸ್ಟಿವಲ್ ಶುರು ಮಾಡು. ಎಷ್ಟು ದುಡ್ಡಾಗುತ್ತೆ, ಹೊರಗಡೆಯಿಂದ ಎಷ್ಟು ಬೇಕಾಗುತ್ತದೆ ನೋಡು, ಮಿಕ್ಕದ್ದು ನನಗಿರಲಿ ಅಂದೆ. ಮೊನ್ನೆ ನಾಲ್ಕನೇ ವರ್ಷದ ಗೆಸ್ಟಾಗಿ ಹೋಗಿದ್ದೆ. ನೋಡಿದರೆ ಫೆಸ್ಟಿವಲ್ ತಾನೇ ದುಡಿಯೋಕೆ ಶುರುಮಾಡಿದೆ. ಒಂಥರ ಇಡೀ ರಂಗಭೂಮಿಯ ಚಲನೆಗೆ ಅರ್ಥ ಸಿಕ್ಕಿ ಬಿಟ್ಟಿತು.
ಮತ್ತೆ ಅಡಪನ್ನ- “ಹೇಗಿದೆಯೋ’ ಅಂದೆ. ಮುಗುಳು ನಕ್ಕ, ಮುಖದಲ್ಲಿ ಶೂನ್ಯದ ಗೆರೆಗಳೇನು ಹುಟ್ಟಿ ಮುಳಗಲಿಲ್ಲ.
ವ್ಯಕ್ತಿಯನ್ನು ಅವನು ಏರಿದ ಎತ್ತರದಿಂದಲ್ಲ ಅಳತೆ ಮಾಡಬೇಕಾಗಿರೋದು. ಅವನು ಎತ್ತರಕ್ಕೆ ಏರಿ, ಎಷ್ಟು ಜನರನ್ನು ಜೊತೆಗೆ ಕರೆದುಕೊಂಡು ಹೋದ, ಎಷ್ಟು ಜನರ ಮೇಲೆ ಪ್ರಭಾವ ಬೀರಿದ್ದಾನೆ, ಎಷ್ಟರ ಮಟ್ಟಿಗೆ ಪಡೆದದ್ದರಲ್ಲಿ ಸಮಾಜದ ಮೇಲೆ ಹೂಡಿದ್ದಾನೆ ಅನ್ನೋದರ ಮೇಲೆ ಲೆಕ್ಕ ಹಾಕಬೇಕು.
ಇವೆಲ್ಲ ಕಲಿಸಿದ್ದು ಭೂಮಿ; ಅದರೊಟ್ಟಿಗಿನ ಕೊರಳ ಗೆಳೆತನ!
– ಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.