ವಿನಾಕಾರಣ ಪ್ರೀತಿ ತೋರುವ ತುಂಬು ಮನಸಿನವರು…


Team Udayavani, Apr 10, 2021, 6:13 PM IST

ವಿನಾಕಾರಣ ಪ್ರೀತಿ ತೋರುವ ತುಂಬು ಮನಸಿನವರು…

ನಡುಗುವ ಕೈಗಳಿಂದ ಅಜ್ಜಿ  ತನ್ನ ಡಬ್ಬಿಗೆ ನನ್ನ ಪೈಂಟ್‌ ಬಾಟಲಿಯಿಂದ ಮೆತ್ತಗೆ ಪೈಂಟ್‌ ತುಂಬಿಸಿಕೊಳ್ಳುತ್ತಿದ್ದಳು. ನನ್ನಲ್ಲಿದ್ದದ್ದು ಬರೀ ಎರಡೇ ಡಬ್ಬಿ ಪೈಂಟ್‌. ಛೆ! ಇದನ್ನು ಪೂರ್ತಿ ಸುರಿದುಕೊಳ್ತಿದ್ದಾಳಲ್ಲ ಎಂದು ಮನಸು ಹೇಳುತ್ತಲೇ ಇತ್ತು. ನನಗೆ ಇಷ್ಟವಾಗದೇ  ಇದ್ದರೂ ಹೇಳುವ ಹಾಗಿರಲಿಲ್ಲ. ಅದೊಂದು ಆರ್ಟ್‌ ವರ್ಕಶಾಪ್‌. 6 ಜನ ಕಲಾವಿದರು ಬೇರೆ ಬೇರೆ ಗುಂಪುಗಳೊಂದಿಗೆ ವಿವಿಧ ಕಲಾ ಪ್ರಕಾರಗಳ ಮೇಲೆ 6 ವಾರಗಳ ಕಾಲ ಶಿಬಿರಗಳನ್ನೂ ನಡೆಸಬೇಕಿತ್ತು . ಹಾಗೆ ನನಗೆ ಸಿಕ್ಕಿದ್ದು ಈ ಅಜ್ಜಿಯರ ಗುಂಪು. ಶಿಬಿರದ 2ನೇ ದಿನ ಎಲಿಸ್‌ ಎನ್ನುವ ಅಜ್ಜಿ ನಾನು ಮನೆಗೆ ಹೋಗಿ ಪೈಂಟ್‌ ಮಾಡುವೆ ಎಂದು ಹೇಳಿ ನನ್ನ ಬಣ್ಣದ ಡಬ್ಬಿಯಿಂದ ಬಣ್ಣ ಸುರಿದುಕೊಂಡು ಹೋಗಿದ್ದಳು.

ಆಕೆ ನಡುಗುವ ಕೈಯಿಂದ ಬ್ರಷ್‌ ಹಿಡಿದು ಪೇಂಟಿಂಗ್‌ ಮಾಡುವುದಾಗಲಿ, ಸೂಜಿ ಹಿಡಿದು ಕಸೂತಿ ಮಾಡುವುದಾಗಲಿ ಸಾಧ್ಯವಿರಲಿಲ್ಲ. ಆದರೂ ಆಕೆ ಶಿಬಿರಕ್ಕೆ ಬಂದಿದ್ದಳು. ಹೀಗಾಗಿ ಆಕೆಯಿಂದ ಏನಾದರೂ ಮಾಡಿಸಬೇಕಿತ್ತು. ಎಲಿಸ್‌ಗೆ ನನ್ನಲ್ಲಿದ್ದ wooden block stamps ಕೊಟ್ಟೆ. ಪೈಂಟ್‌ ಅಲ್ಲಿ ಅದ್ದಿ ಬಟ್ಟೆ ಮೇಲೆ ಒತ್ತಿದರಾಯಿತು ಎಂದು ಆಕೆಯನ್ನು ಹುರಿದುಂಬಿಸಿದೆ. ಆದರೆ ಆಕೆ ಅಲ್ಲಿ ಎಲ್ಲರ ಮುಂದೆ ಅದನ್ನು ಪ್ರಯತ್ನ ಮಾಡುವ ಧೈರ್ಯ ಮಾಡಲಿಲ್ಲ. ಮತ್ತೆ ಆ ಚಿತ್ತಾರದ ಅಚ್ಚು  ನೋಡಿ ನನ್ನ ಹತ್ತಿರವೂ ಈ ಥರದ ಬ್ಲಾಕ್ಸ್ ಇವೆ. ಮನೆಯಲ್ಲೇ ಮಾಡುತ್ತೇನೆ ಎಂದು ಪೈಂಟ್‌ ತೆಗೆದು ಕೊಂಡು ಹೋದವಳು 2 ವಾರ ವಾಪಸ್‌ ಶಿಬಿರಕ್ಕೆ ಬರಲೇ ಇಲ್ಲ. ಈಗ ನನಗೆ ನಿಜಕ್ಕೂ ಕಿರಿ ಕಿರಿ ಆಗಿತ್ತು.

ಸುಮ್ನೆ ಪೈಂಟ್‌ ತೆಗೆದುಕೊಂಡು ಹೋಗಿ ಹಾಳು ಮಾಡಿರಬಹುದು ಎನ್ನುವ ಅಸಮಾಧಾನ ಕಾಡುತ್ತಿತ್ತು. ಕ್ಲಾಸ್‌ನ ಕೊನೆಯ ದಿನ. ಅಜ್ಜಿ ತಾನು ಮಾಡಿದ ಬ್ಲಾಕ್‌ ಪೇಂಟಿಂಗ್‌ ತೋರಿಸಿ, ಎರಡು ವಾರಗಳಿಂದ ಬರಲಾಗದ್ದಕ್ಕೆ ಕ್ಷಮೆ ಕೇಳುತ್ತಿದ್ದಳು.  ನಾನು ಆಕೆಗೆ ಪರ್ವಾಗಿಲ್ಲ ಎಂದು ಹೇಳುವ ಮೊದಲೇ ನನ್ನ ಕೈಗೆ ಪುಟ್ಟ ಕೈಚೀಲ ಕೊಟ್ಟು, ನೀನು  ನನಗೆ ತುಂಬಾ ಇಷ್ಟವಾದೆ. ನಿನ್ನ ಪ್ರೋತ್ಸಾಹದ ಮಾತುಗಳು ತುಂಬಾ ಹಿತವೆನಿಸಿತು. ಈ ಕಟ್ಟಿಗೆ ಅಚ್ಚುಗಳನ್ನು ನಾನು ತುಂಬಾ ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ಕೊಟ್ಟಾಗ ಕೋಲ್ಕತ್ತಾದಲ್ಲಿ ಖರೀದಿಸಿದ್ದೆ. ಇನ್ನು ನಾ ಎಷ್ಟು ದಿನ ಇತೇìನೋ ಯಾರಿಗೆ ಗೊತ್ತು.  ನೀನು ಇವುಗಳನ್ನು ಬಳಸಿದರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ ನನಗೆ ಎಂದು ಹೇಳಿ ಮುಗುಳ್ನಕ್ಕಳು. ನಾ ಎಷ್ಟೇ ಬೇಡ ಎಂದರೂ ಆಕೆ ಕೇಳಲಿಲ್ಲ. ಈಗ ನನಗೆ ಒಂದು ರೀತಿಯ ಅಪರಾಧಿ ಪ್ರಜ್ಞೆ ಕಾಡತೊಡಗಿತು. ಒಂದಷ್ಟು  ಪೈಂಟ್‌ಗೊàಸ್ಕರ ಎರಡು ವಾರ ಅಸಮಾಧಾನ ಮಾಡಿಕೊಂಡಿದ್ದೆ. ಅದ್ಹೇಗೆ ಅದೆಷ್ಟೋ ವರ್ಷಗಳಿಂದ ಕಾದಿಟ್ಟುಕೊಂಡ ಅಮೂಲ್ಯ ವಸ್ತುವನ್ನು ಬರೀ 6 ವಾರಗಳ ಹಿಂದೆ ಪರಿಚಯವಾದ ಒಬ್ಬರಿಗೆ ಕೊಡಲು ಸಾಧ್ಯ. ನಾನೇ ಆಕೆಯ  ಸ್ಥಾನದಲ್ಲಿ ಇದ್ದಿದ್ದರೆ ಹೀಗೆ ಕೊಡಲಾಗುತ್ತಿತ್ತೇ? ಈ ರೀತಿಯ ನಿಸ್ವಾರ್ಥ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಹೇಗೆ ? ಹೀಗೆಲ್ಲ ಆಲೋಚನೆ ಪದೆಪದೇ ಕಾಡಲಾರಂಭಿಸಿತು. ಆ ಶಿಬಿರದ ಅನಂತರ ಮತ್ತೆ  ಆಕೆಯನ್ನು ನಾನು ಭೇಟಿಯಾಗಲಿಲ್ಲ. ಆದರೆ ಆಕೆ ಕೊಟ್ಟ ಉಡುಗೊರೆ ನೋಡಿದಾಗ ಆ ಘಟನೆ ನೆನಪಾಗಿ ಭಾವುಕಳಾಗುತ್ತೇನೆ.

ಅಜ್ಜಿ ಎಂಬ ಪದವೇ ಹಾಗೆ. ವಾತ್ಸಲ್ಯ ಅಕ್ಕರೆ, ಅಚ್ಚರಿ ತುಂಬಿದ ಪೆಟ್ಟಿಗೆಯ ಒಡತಿಯರು. ಅಪ್ಪನ ಅಮ್ಮ ಮತ್ತು ಅಮ್ಮನ ಅಮ್ಮ, ಇಬ್ಬರಿಂದಲೂ ಮುದ್ದು ಅಕ್ಕರೆ ಗಿಟ್ಟಿಸಿಕೊಂಡ ಭಾಗ್ಯಶಾಲಿ ನಾನು. ಅವರು ಅಕ್ಕಿ ಆರಿಸುತ್ತಲೋ, ಕೌದಿ ಹೊಲಿಯುತ್ತಲೋ, ಹೊಸ ಹುಣಸೆ ಹಣ್ಣಿನ ಬೀಜ ತೆಗೆಯುತ್ತಲೋ, ತಮ್ಮ ಕಾಲದ ಕಥೆಗಳನ್ನು ಹೇಳುತ್ತಿದ್ದರೆ ನಾನು ಅದೊಂದು ಅದ್ಭುತ ಜಗತ್ತಿನಲ್ಲಿ ಕಳೆದು ಹೋಗುತ್ತಿದ್ದೆ.

ಬೆಲ್ ಫಾಸ್ಟ್  ನ ಅಂಗಡಿ, ರಸ್ತೆಗಳಲ್ಲಿ ನಡೆಯುವಾಗ ಈ ಹಿರಿಯ ಜೀವಗಳು ಹಮ್ಮುಬಿಮ್ಮಿಲ್ಲದೆ ಮಾತಿಗಿಳಿದು ಬಿಡುತ್ತಾರೆ. ಅವರಿಗೆ ನಮ್ಮ ಪರಿಚಯ ಇರಬೇಕೆಂದೇನೂ ಇಲ್ಲ.

ನನ್ನ ಮಗಳು ಹುಟ್ಟಿದ ಸಮಯವದು. ನನ್ನ ಅಮ್ಮ ಬೆಲ್ಫಾಸ್ಟ್ ಗೆ ಬಂದಿದ್ದರು. ಮಗುವನ್ನು ಪ್ರಾಮಿನಲ್ಲಿ ಹಾಕಿಕೊಂಡು ಅಮ್ಮ, ಮಗಳು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದೆವು. ಆ ಮಧ್ಯೆ ಶಾಪಿಂಗ್‌ ಮಾಲ್, ಬಸ್‌ ಸ್ಟಾಪ್‌, ಅಂಗಡಿಗಳಲ್ಲಿ ಎದುರಾಗುತ್ತಿದ್ದ ಅಜ್ಜಿಯರು ಪ್ರಾಮಿನೊಳಗೆ ಬಗ್ಗಿ ಮಗುವನ್ನು ನೋಡಿ. ಹೊಗಳಲು ಶುರು ಮಾಡುತ್ತಿದ್ದರು. ಅಮ್ಮನಿಗೆ ಇದು ವಿಚಿತ್ರ ಅನಿಸುತ್ತಿತ್ತು. “ಅಲ್ವೇ ಅವರ ಮಕ್ಕಳು ಅಷ್ಟು ಚಂದ ಇರ್ತಾವೆ. ಕೆಂಚು ಕೂದಲು, ಹಾಲು ಬಿಳುಪಿನ ಬಣ್ಣ. ಗುಲಾಬಿ ತುಟಿ. ತಿಂಗಳ ಮಗು ಎಂದರೆ ನಂಬಲಾರದಷ್ಟು ಬೆಳವಣಿಗೆ. ಅಷ್ಟೆಲ್ಲ ಇದ್ದು ನಮ್ಮ ಮಕ್ಕಳನ್ನು ಯಾಕೆ ಹೊಗಳ್ಳೋದು?’ ಎಂದು ಅವರು ಹೇಳುವಾಗ ನಾನು, “ನಿನ್ನ ಮೊಮ್ಮಗಳು ಜಗದೇಕ ಸುಂದರಿ, ನಿನಗೆ ಮಾತ್ರ ಅರ್ಥ ಆಗಿಲ್ಲ’ ಎಂದು ತಮಾಷೆಯ ಉತ್ತರ ಕೊಡುತ್ತಿದ್ದೆ. ಆದರೆ, ಹಿಂದೆಯೇ ಪ್ರಶ್ನೆಯು ಹುಟ್ಟುತ್ತಿತ್ತು. ಹೌದಲ್ವಾ ಯಾಕೆ? ಉತ್ತರವೂ ನನ್ನ ಮನದಲ್ಲೇಈ ಅಜ್ಜಿ ಎಂದರೆ ಹಾಗೇ ಅಲ್ಲವೇ? ವಿನಾಕಾರಣ ಪ್ರೀತಿ ತೋರುವ ತುಂಬು ಮನಸಿನವರು.

ಇಲ್ಲಿನ ಅಜ್ಜಿಯರ ಕುರಿತು ಇಷ್ಟವಾಗುವ ಇನ್ನೊಂದು ಗುಣ ವೆಂದರೆ  ಅವರ ಧಿರಿಸು, ಅಲಂಕಾರ, ತಮಗೆ ತಾವು ಕೊಟ್ಟುಕೊಳ್ಳುವ ಆ ಸಮಯ. ಕಾಫಿ ಶಾಪ್‌ನಲ್ಲಿ ಗೆಳತಿಯರೊಂದಿಗೆ ಕುಳಿತು ಹರಟೆ ಹೊಡೆಯುತ್ತ ಕ್ರೋಷೆ, ನಿಟ್ಟಿಂಗ್‌ ಮಾಡುತ್ತಾ ಟೀ ಡ್ಯಾನ್ಸಿಂಗ್‌ ಬಗ್ಗೆ, ಕೈದೋಟದ ಬಗ್ಗೆ ಮಾತಾಡುತ್ತಿರುವ ಇವರನ್ನು ಕಂಡರೆ  90ರ ವಯಸ್ಸಿನಲ್ಲೂ ತನ್ನ ಅಡುಗೆ ತಾನೇ ಮಾಡಿಕೊಂಡು, ಬೇಸಗೆ ಬಂದರೆ ಹಪ್ಪಳ ಸಂಡಿಗೆ, ಮಳೆಗಾಲ ಬಂದರೆ ಪತ್ರೊಡೆ, ಚಿಗುರಿನ ತಂಬಳಿ ಬಗ್ಗೆ ಆಲೋಚಿಸುತ್ತಾ, ಕೊಟ್ಟಿಗೆಯಲ್ಲಿರುವ ಆಕಳು ಕರುವನ್ನು ನೋಡಿಕೊಂಡು, ಪಕ್ಕದ ಮನೆಯವರು ತಕರಾರಿನಲ್ಲಿರುವ ಬೇಲಿಯ  ಅಕ್ಕ ಪಕ್ಕ ಸರಿದರೂ ಮೈಯೆಲ್ಲ ಕಿವಿಯಾಗುವ, ಫೋನ್‌ನಲ್ಲಿ ಗುಟ್ಟು ಹೇಳುತ್ತೇನೆ ಎಂದು ಪಿಸು ಮಾತಾಡುವ, ನನ್ನ  ಸ್ವಾವಲಂಬಿ ಅಜ್ಜಿ ನೆನಪಾಗುತ್ತಾರೆ.

ಒಮ್ಮೆ ಬಸ್‌ ಸ್ಟಾಪ್‌ನಲ್ಲಿ ನಿಂತಿದ್ದೆ.  ನಿಗದಿತ ಸಮಯಕ್ಕೆ ಬರುವ ಬಸ್‌ ಆ ದಿನ ಬಂದಿರಲಿಲ್ಲ. ಪಕ್ಕದಲ್ಲಿ ನಿಂತಿದ್ದ ಅಜ್ಜಿ ತುಂಬಾ ಸುಂದರವಾಗಿದ್ದರು. ತಡೆಯಲಾಗದೆ  “ಯು ಅರ್‌ ಸೋ ಬ್ಯೂಟಿಫ‌ುಲ್‌.. ಅಂದೇ’. ಒಹ್‌ ತುಂಬಾ  ವರ್ಷಗಳ ಅನಂತರ ಈ ಮಾತನ್ನು ಕೇಳಿದ್ದು ಭಾಳ ಖುಷಿಯಾಯಿತು ಎಂದರು. ಬಳಿಕ ತಮ್ಮನ್ನು ಎಥನಾ ಎಂದು ಪರಿಚಯಿಸಿಕೊಂಡು ಮಾತು ಮುಂದುವರಿಯಿತು. ಈ ನಡುವೆ ಎರಡು ಸಲ ಬಸ್‌ ಬರದಿದ್ದನ್ನು ಅಸಮಾಧಾನದಿಂದ ಹೇಳಿದೆ. ನಾನು ಪದೆಪದೇ ವಾಚ್‌ ನೋಡಿಕೊಳ್ಳುತ್ತಿದ್ದುದನ್ನು ಗಮನಿಸಿದ ಆಕೆ “ಮಗು ಕಾಯುವಿಕೆ ಎಷ್ಟು ಹಿತವಲ್ವಾ? ನೋಡು ಬಸ್‌ ಸಮಯಕ್ಕೆ ಬಂದಿದ್ದರೆ ನನ್ನ, ನಿನ್ನ  ಭೇಟಿಯೇ ಆಗ್ತಿರಲಿಲ್ಲ. ಬದುಕಿನ ಇಳಿ ವಯಸ್ಸಿನಲ್ಲಿ ಇಂಥದ್ದೊಂದು ಮಾತು ಕೇಳುವುದು ಎಷ್ಟು ಖುಷಿ ಗೊತ್ತಾ? ಕಾಯುವಿಕೆಯನ್ನು ಯಾವುದೇ ಬೇಸರ ಇಲ್ಲದೆ ಖುಷಿಯಿಂದ ಕಳೆದು ಬಿಡು’ ಎನ್ನುವಷ್ಟರಲ್ಲಿ  ಮೂರು ಬಸ್‌ಗಳು ಒಂದರ ಹಿಂದೆ ಒಂದು ಬಂದವು.

ಆ ಬಸ್‌ನಲ್ಲಿ  ಟ್ರಾವೆಲ್‌ ಕಾರ್ಡ್‌ ಸ್ಕ್ಯಾನ್‌ ಆಗಲೇ ಇಲ್ಲ. ಬ್ಯಾಗ್‌ ಎಲ್ಲ ತಡಕಾಡಿದರೂ ಟಿಕೆಟ್‌ಗೆ  ಆಗುವಷ್ಟು ಚಿಲ್ಲರೆ ಸಿಗಲಿಲ್ಲ. ಅಜ್ಜಿಯೇ ಮುಂದೆ ಬಂದು ನನ್ನ ಟಿಕೆಟ್‌ ಹಣ ಕೊಟ್ಟರು. ಸೀಟ್‌ ಮೇಲೆ ಕೂತು ಹಣ ಹುಡುಕಿ ಆಕೆಗೆ ವಾಪಸ್‌ ಕೊಡಲು ಹೋದರೆ, ತೆಗೆದುಕೊಳ್ಳಲೇ ಇಲ್ಲ.

ಹೀಗೆ ತುಂಬಾ ವರ್ಷಗಳ ಹಿಂದೆ ಉಡುಪಿ- ಬೆಳಗಾವಿ ಬಸ್‌ನಲ್ಲಿ ಬೇಸಗೆ ರಜೆಗೆ ಅಜ್ಜಿ ಮನೆಗೆ ಹೋಗುವಾಗ ದಾರಿಯಲ್ಲಿ ತಿನ್ನಲು ಅಮ್ಮ ಮಾಡಿಕೊಟ್ಟ ಸಿಹಿ ಪಡ್ಡು ತಂದಿದ್ದ ಡಬ್ಬಿ ತೆರೆದ ಗಳಿಗೆಯಲ್ಲೇ ಡ್ರೈವರ್‌ ಬ್ರೇಕ್‌ ಹಾಕಿದ ಭರಕ್ಕೆ ಪಡ್ಡುಗಳೆಲ್ಲ ಹಾರಿ ಸುತ್ತಮುತ್ತಲಿನ ಸೀಟಿನಡಿ ಸೇರಿದವು. ನನ್ನ ಪಕ್ಕ ಕುಳಿತಿದ್ದ ವಯಸ್ಸಾದ ಸಿಸ್ಟರ್‌ ಒಬ್ಬರು ತಮ್ಮ ಬುತ್ತಿ ಹಂಚಿಕೊಂಡಿದ್ದು, ಆ ಸ್ಪಂಜಿನಂಥ ದೋಸೆಗಳ ರುಚಿ ಈಗಲೂ ನೆನಪಾಗುತ್ತದೆ. ಹೀಗೆ ಆಗೀಗ ಸಿಕ್ಕಿ ಮುದ್ದುಗರೆಯುವ, ಮಾತು, ನಡೆಯಲ್ಲೇ  ಪಾಠ ಹೇಳಿಕೊಡುವ ಈ ಹಿರಿಜೀವಗಳಿಗೆ ನಾನು ಚಿರಋಣಿ.

 

ಅಮಿತಾ ರವಿಕಿರಣ್‌, 

ಬೆಲ್‌ಫಾಸ್ಟ್‌,

ನಾರ್ದನ್‌ ಐರೆಲಂಡ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.