ಬಹು ಆಯಾಮಗಳ ಸಂದೇಶ ಹೊತ್ತ ನಾಗರ ಪಂಚಮಿ

ನಿಸರ್ಗದಲ್ಲಿ ಪ್ರತೀ ಪ್ರಾಣಿಯೂ ಪ್ರಮುಖ ವಾದುದು ಮತ್ತು ಆಹಾರ ಸರಪಣಿ ಕ್ರಮವಿದೆ.

Team Udayavani, Aug 13, 2021, 10:00 AM IST

ಬಹು ಆಯಾಮಗಳ ಸಂದೇಶ ಹೊತ್ತ ನಾಗರ ಪಂಚಮಿ

ಪ್ರತೀ ವರ್ಷದಂತೆ ವಾರ್ಷಿಕ ಹಬ್ಬಗಳಲ್ಲಿ ಮೊದಲನೆಯದಾದ ನಾಗರಪಂಚಮಿ (ಆ. 13) ಬಂದಿದೆ. ಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣ (ಅನಂತಪದ್ಮನಾಭ), ಶಿವನ ಕೊರಳಲ್ಲಿ ರಾರಾಜಿಸುವ ಸರ್ಪ ಇತ್ಯಾದಿ ಪುರಾಣಗಳಲ್ಲಿ ಬರುವ ಚಿತ್ರಣಗಳು ಬಹಳ ಪ್ರಸಿದ್ಧ. ಪಾಂಡವರ ಮೊಮ್ಮಗ ಪರೀಕ್ಷಿತ ರಾಜ ಅಹಂಕಾರವನ್ನು ತೋರಿದಾಗ ಆತನನ್ನು ಕಚ್ಚಿದವ ತಕ್ಷಕ. ಈತನೂ ಒಂದು ಬಗೆಯ ಸರ್ಪ. ಅಹಂಕಾರ ನಿರ್ಮೂಲನ ಇಲ್ಲಿರುವ ಸಂದೇಶ. ಸಮುದ್ರಮಥನ ಕಾಲದಲ್ಲಿ ಮಂದರ ಪರ್ವತವನ್ನು ಕಡೆಯುವಾಗ ಹಗ್ಗವಾಗಿ ಬಳಕೆಯಾದವ ವಾಸುಕಿ. ನಳನಿಗೆ ನೆರವಾಗಲು ಕಚ್ಚಿದವ ಕಾರ್ಕೋಟಕ. ಔಷಧ ಕಹಿಯಾದರೂ ಅದು ಉಪಕಾರಿ ಎಂಬಂತೆ ಕೆಲವೊಮ್ಮೆ ನಿಸರ್ಗ ಕೊಡುವ ಸಂದೇಶವೂ ಒಳ್ಳೆಯ ರೀತಿಯಲ್ಲಿ ಪರ್ಯಾವಸಾನವಾಗುತ್ತದೆ ಎಂಬ ಸಂದೇಶ ಇಲ್ಲಿದೆ.

ಪ್ರಾಚೀನ ಹಬ್ಬ: ರಾಮಾವತಾರ ಕಾಲದಲ್ಲಿ ರಾಮನಿಗೆ ತಮ್ಮನಾಗಿ ಲಕ್ಷ್ಮಣ, ಕೃಷ್ಣಾವತಾರ ಕಾಲದಲ್ಲಿ ಕೃಷ್ಣನಿಗೆ ಅಣ್ಣನಾಗಿ ಬಂದ ಬಲರಾಮ ಇದೇ ದೇವತಾಶಕ್ತಿ. ವಿಶ್ವವನ್ನು ಹೊತ್ತವ ಸಂಕರ್ಷಣ ರೂಪಿ ಎಂದು ಪ್ರಸಿದ್ಧಿ. ಸರೀಸೃಪಗಳಲ್ಲಿ ಮುಖ್ಯ ವಾಸುಕಿಯಾದರೆ, ಹೆಡೆ ಇರುವ ನಾಗಗಳಲ್ಲಿ ಮುಖ್ಯ ಅನಂತ ಅಥವಾ ಶೇಷ. ನಾಗ ಪಂಚಮಿ ವೇದ ಪುರಾಣಗಳಲ್ಲಿಯೂ ಉಲ್ಲೇಖಗೊಂಡ ಹಿರಿಯ ಹಬ್ಬ ಎಂದು ಹಿರಿಯ ವಿದ್ವಾಂಸ ಡಾ| ರಾಮನಾಥಾಚಾರ್ಯ ಉಲ್ಲೇಖೀಸುತ್ತಾರೆ. ಇಂತಹ ಹಬ್ಬ ಇಂದಿನವರೆಗೂ ಬೇರೆ ಬೇರೆ ವಿಧಾನಗಳಲ್ಲಿ ಮುಂದುವರಿದು ಬಂದಿದೆ.

ವಿದೇಶಗಳಲ್ಲಿ: ನಾಗಾರಾಧನೆ ಭಾರತದಲ್ಲಿ ಮಾತ್ರ ಇದ್ದದ್ದಲ್ಲ. ಚೀನ, ಇರಾನ್‌, ಶ್ರೀಲಂಕಾ, ಬಲೂಚಿಸ್ಥಾನ, ಸುಮೇರಿಯಾ, ಬೆಬಿಲೋನಿಯಾ ಮೊದಲಾದೆಡೆ ನಾಗ ಪೂಜೆ ನಡೆಯುತ್ತಿದ್ದವು. ಗ್ರೀಕರ ರಾಷ್ಟ್ರ ಚಿಹ್ನೆ ಸರ್ಪವಾಗಿತ್ತು. ಬ್ರಿಟನ್‌ನಲ್ಲಿ ಕೆಲ್ಟ್ ಜನಾಂಗಕ್ಕಿಂತ ಹಿಂದೆ ಡ್ರೂಯಿಕ್‌ ಜನರು ನಾಗಾರಾಧಕರಾಗಿದ್ದರು. ಸ್ಕಾಟ್ಲೆಂಡ್‌, ಮೆಸೆಪೊಟೇಮಿಯಾದ ಶಿಲ್ಪ ಕಲಾಕೃತಿಗಳಲ್ಲಿ ಸರ್ಪದ ಚಿಹ್ನೆ ಇದೆ ಎಂಬ ಉಲ್ಲೇಖಗಳಿವೆ. ಮೂಲ ಸಂಸ್ಕೃತಿಯ ನಾಶದಿಂದ ಇವುಗಳು ಕಣ್ಮರೆಯಾಗಿವೆ.

ಕೇದಗೆಯ ಇನ್ನೊಂದು ಮುಖ: ನಾಗರ ಪಂಚಮಿಯಲ್ಲಿ ನಾನಾ ಬಗೆಯ ಹೂವುಗಳು, ಎಳನೀರು, ಅರಶಿನ ಮೊದಲಾದ ದ್ರವ್ಯಗಳ ಬಳಕೆ ಇದೆ. ಹೂವುಗಳಲ್ಲಿ ಕೇದಗೆ ಬಹಳ ಪ್ರಸಿದ್ಧ. ಕೇದಗೆ ಹೂವು ಆಗುವುದು ಗಂಡು ಮರದಿಂದ. ಕೇದಗೆ ಮರದ ಬುಡದಲ್ಲಿ ಹಾವಿನ ಹುತ್ತ ಇರುವುದು ಕಂಡುಬರುವುದಕ್ಕೂ ನಾಗನಿಗೆ ಅದರ ಹೂವು ಪ್ರಿಯವೆಂಬ ನಂಬಿಕೆ ಬೆಳೆದಿರುವುದಕ್ಕೂ ಸಂಬಂಧವಿರಬಹುದು. ಕೇದಗೆಯ ಸಮೂಹ ಕಡಲಕೊರೆತ ತಡೆಯುವುದರಲ್ಲಿ ಎತ್ತಿದಕೈ. ಇದು ಇತ್ತೀಚೆಗೆ ಬಂದ ತೌಖ್ತೆ ಚಂಡಮಾರುತದ ಸಂದರ್ಭ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಸಾಬೀತಾಗಿದೆ.

ಹಲವು ತಲೆಮಾರು ಕಂಡ ಬೀಳಲು: ನೋಕಟೆ ಕಾಯಿ, ಮುಳ್ಳಿನ ಬಳ್ಳಿ, ಹಂದಿ ಬಳ್ಳಿ ಮೊದಲಾದ ಬೀಳಲುಗಳಿಂದ ಕೂಡಿದ ಸಸ್ಯಗಳು ಉಳಿದದ್ದು ಬನಗಳಿಂದ ಮಾತ್ರ ಎಂದು ಸಸ್ಯಶಾಸ್ತ್ರಜ್ಞ ಪ್ರೊ| ಅರವಿಂದ ಹೆಬ್ಟಾರ್‌ ಬೆಟ್ಟು ಮಾಡುತ್ತಾರೆ. ನೋಕಟೆ ಕಾಯಿ ದೊಡ್ಡ ಹೆಬ್ಟಾವಿನ ಗಾತ್ರದ ಬೀಳನ್ನು ಹೊಂದಿರುತ್ತದೆ. ಇದು ಅಷ್ಟು ವೇಗದಲ್ಲಿ ಬೆಳೆಯುವ ಬೀಳಲು ಅಲ್ಲ. ಹೀಗಾಗಿ ಇದನ್ನು ಕಾಣಬೇಕಾದರೆ ಹಲವು ತಲೆಮಾರುಗಳು ಬೆಳೆದಿರಬೇಕು. ಅಂದರೆ ಇಂತಹ ಬೀಳುಗಳು ನಮ್ಮ ಹಲವು ಪೂರ್ವಜರನ್ನು ಕಂಡಿವೆ. ನಾವು ಮೂರು ತಲೆಮಾರು ಹಿಂದಿನ ಪೂರ್ವಜರನ್ನು ಕಂಡಿಲ್ಲ. ಆದರೆ ಅದಕ್ಕೂ ಹಿಂದಿನ ಪೂರ್ವಜರನ್ನು ಕಂಡ ಬೀಳಲನ್ನು ನೋಡುವುದು ಎಂಥ ಭಾಗ್ಯ! ಪೂರ್ವಜರು ಇವುಗಳನ್ನು ಕಡಿಯದೆ ಬಿಟ್ಟ ಕಾರಣ ಇವುಗಳನ್ನು ಕಾಣುವ ಮಹಾಭಾಗ್ಯ ನಮ್ಮದಾಗಿದೆ. ಪರಂಪರಾಗತ ನಾಗಬನಗಳಲ್ಲಿ, ವಿಶೇಷವಾಗಿ ದಲಿತರು ಪೂಜಿಸುವ ನಾಗಬನಗಳಲ್ಲಿ ಇಂತಹ ಬೀಳುಗಳನ್ನು ನೋಡಬಹುದು.

ಸಮುದ್ರರಾಜನಿಗೆ ನಾಗಪ್ರಸಾದ: ನಾಗ ಪಂಚಮಿಯಲ್ಲಿ ಉಪಯೋಗಿಸುವ ಅರಿಶಿನ, ಹಿಂಗಾರ, ಸಂಪಿಗೆ ಹೂವುಗಳು ವಿವಿಧ ಬಗೆಯ ರೋಗಗಳಿಗೆ ರಾಮಬಾಣ. ಇದರ ಕುರಿತು ಬೇಕಾದಷ್ಟು ಸಂಶೋಧನೆಗಳು ನಡೆಯಲು ಅವಕಾಶಗಳಿವೆ. ಪುನ್ನಾಗ, ನಾಗಚಂಪಕ, ನಾಗಲಿಂಗ ಮೊದಲಾದ ಅಪರೂಪದ ತಳಿಗಳೂ ಕಾಣಸಿಗದ ಸ್ಥಿತಿಗೆ ತಲುಪಿವೆ. ಅರಿಶಿನ, ಎಳನೀರು ಅಭಿಷೇಕದ ನೀರು ಸಮುದ್ರಕ್ಕೆ ಸೇರಬೇಕು ಎಂಬ ಮಾತು ಇತ್ತು. ಅಂದರೆ ನಾಗಪಂಚಮಿಯಂದು ಭಾರೀ ಮಳೆಯಾಗುತ್ತದೆ ಎಂಬ ಪ್ರತೀತಿ. ಆದರೆ ಇತ್ತೀಚಿಗೆ ಪ್ರಾಕೃತಿಕ ವಿದ್ಯಮಾನಗಳ ಬದಲಾವಣೆಗಳಿಂದ ಇಂತಹ ನಂಬಿಕೆಗಳು ಏರುಪೇರಾಗಿವೆ. ಇಂತಹ ನೈಸರ್ಗಿಕ ವಸ್ತುಗಳು ಭೂಮಿಯ ಒಡಲನ್ನು ಸೇರಿದರೆ ಪರಿಸರದಲ್ಲಿ ಆಗುವ ಪರಿಣಾಮಗಳನ್ನು ಅರಿಯುವುದು ತುಸು ಕಷ್ಟವೆನ್ನಬಹುದು.

ವಿಷದಿಂದಲೇ ವಿಷನಾಶ: ನಾಗನ ಕುರಿತು ಇರುವ ಭಯಕ್ಕೆ ಮುಖ್ಯ ಕಾರಣ ಅದರಲ್ಲಿರುವ ವಿಷ. ಆದರೆ ಸರ್ಪ ಕಚ್ಚಿದರೆ ಕೊಡುವ ಔಷಧವನ್ನು ನಾಗನ ವಿಷದಿಂದಲೇ ತಯಾರಿಸುವ ಕ್ರಮ ಹೋಮಿಯೋಪತಿ ಪದ್ಧತಿ ಯಲ್ಲಿದೆ. ಸರ್ಪದ ವಿಷವನ್ನು ಶುದ್ಧೀಕರಿಸಿ ಒಂದು ಹನಿಗೆ 99 ಅಂಶದಷ್ಟು ಕಬ್ಬಿನ ರಸದಿಂದ ಉಂಟಾಗುವ ಮೊಲಾಸೆಸ್‌ (ಮದ್ಯಸಾರ) ಮಿಶ್ರಣ ಮಾಡುವುದೇ ಈ ಪ್ರಕ್ರಿಯೆ. ಇವುಗಳನ್ನು ರಭಸದಿಂದ ಕುಲುಕಿಸಿದರೆ ಆಟಮ್‌ಗಳು ಒಡೆದು ಅದರ ಶಕ್ತಿ ಅಪಾರ ಪ್ರಮಾಣದಲ್ಲಿ ಹೆಚ್ಚುವುದು ಇದರ ವೈಶಿಷ್ಟé. ಕೋಲ್ಕತ್ತದಲ್ಲಿ ವಿಶೇಷವಾಗಿ ಇದರ ಔಷಧ ತಯಾರಿಸುವ ಸಂಸ್ಥೆ ಗಳಿವೆ. ಹೋಮಿಯೋಪತಿಯಲ್ಲಿ ಕಾಯಿಲೆಗೆ ಔಷಧ ಕೊಡುವುದಲ್ಲ, ಲಕ್ಷಣಾಧಾರಿತವಾಗಿ ಔಷಧ ಕೊಡುವುದು ಮತ್ತು ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿಯಲ್ಲ, ಮನುಷ್ಯರ ಮೇಲೆಯೇ ಪ್ರಯೋಗ ಮಾಡಿ. ಒಬ್ಬನಿಗೆ ಕೊಟ್ಟ ಔಷಧ ಇನ್ನೊಬ್ಬ ಅದೇ ತರಹದ ರೋಗಿಗೆ ಅನ್ವಯವಾಗುವುದಿಲ್ಲ. ಸರ್ಪದ ವಿಷದಿಂದ ತಯಾರಿಸುವ ಔಷಧ ಕೇವಲ ಹಾವು ಕಚ್ಚಿದವರಿಗೆ ಮಾತ್ರವಲ್ಲ, ಹೃದ್ರೋಗಿಗಳಿಗೂ, ಚರ್ಮವ್ಯಾಧಿಗೂ ಬಳಕೆಯಾಗುತ್ತದೆ ಎಂಬ ಅಭಿಮತ ಉಡುಪಿಯ ಹಿರಿಯ ಹೋಮಿಯೋಪತಿ ವೈದ್ಯ ಡಾ| ನಾರಾಯಣ ರಾವ್‌ ಅವರದು.

ಆಹಾರ ಸರಪಣಿ ಅಗತ್ಯ: ನಿಸರ್ಗದಲ್ಲಿ ಪ್ರತೀ ಪ್ರಾಣಿಯೂ ಪ್ರಮುಖ ವಾದುದು ಮತ್ತು ಆಹಾರ ಸರಪಣಿ ಕ್ರಮವಿದೆ. ಈ ಸರಪಣಿ ತಪ್ಪಿದರೆ ಘೋರ ಅಪಾಯ ಕಾದಿರುತ್ತದೆ. ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಆಹಾರ ವಾಗಿ ಬಳಸಿ ನಿಸರ್ಗದ ಸಮತೋಲನವನ್ನು ಕಾಪಾಡುತ್ತದೆ. ಅದೇ ರೀತಿ ಇಲಿ ಸಂತತಿ ನಾಶಕ್ಕೂ ನಾಗರಹಾವಿಗೂ ನೈಸರ್ಗಿಕ ಮಹತ್ವವಿದೆ ಎನ್ನುತ್ತಾರೆ ಹಿರಿಯ ಪ್ರಾಣಿಶಾಸ್ತ್ರಜ್ಞ ಡಾ| ಎನ್‌.ಎ. ಮಧ್ಯಸ್ಥರು.

ಶುದ್ಧ ವಸ್ತುಗಳ ಬಳಕೆ: ನಾಗನೇ ಪರಿಸರಸ್ನೇಹಿ ಯಾಗಿರುವಾಗ ನಾಗರ ಪಂಚಮಿಗೆ ಸಂಬಂಧಿಸಿದ ಆಚರಣೆಗಳೂ ಪರಿಸರ ಸ್ನೇಹಿಯಾಗಿರಬೇಕೆಂಬ ಹಂಬಲ ಯಥೋಚಿತ. ನಾಗರಪಂಚಮಿ ದಿನ ಉಂಟಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಅತೀ ಮುಖ್ಯ. ಬಳಸುವ ವಸ್ತುಗಳಲ್ಲಿಯೂ ಶುದ್ಧತೆ ಕಾಪಾಡುವ ಅಗತ್ಯವಿದೆ. ಉದಾಹರಣೆಗೆ, ಕಡಿಮೆ ಕ್ರಯಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ಅಗ್ಗದ ಎಣ್ಣೆ ಯನ್ನು ಕೊಂಡೊಯ್ಯುವುದು. ಎಷ್ಟೋ ಕಡೆಗಳಲ್ಲಿ ಇವು ಒಂದೇ ದಿನ ಬರುವುದರಿಂದ ಸಮರ್ಪಕ ಬಳಕೆಯೂ ಅಸಾಧ್ಯ. ಹಾಲಿನ ಪರಿಶುದ್ಧತೆಯನ್ನು ಕಾಪಾಡುವುದು ಕೇವಲ ದೇವರ ದೃಷ್ಟಿಯಲ್ಲಲ್ಲ, ನಮ್ಮ ದೃಷ್ಟಿಯಿಂದಲೂ ಮುಖ್ಯ. ಇಂತಹ ವಸ್ತುಗಳನ್ನು ಆದಷ್ಟು ಕಡಿಮೆ ಮಾಡುವುದು ಅಗತ್ಯವಾಗಿದೆ. ಇದನ್ನು ಕೇವಲ ನಾಗರಪಂಚಮಿಗೆ ಮಾತ್ವ ಅನ್ವಯಿಸದೆ ನಿತ್ಯದ ಆಚರಣೆಗೂ ಅನ್ವಯ ವಾಗಬೇಕು. ಸಾಮೂಹಿಕ ಆಚರಣೆಗಳು ಇರುವಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಅರಿಶಿನ, ಬತ್ತಿ, ಎಣ್ಣೆಯ ಪ್ಯಾಕೇಟುಗಳನ್ನು ಕೊಂಡೊಯ್ಯುವ ಬದಲು ಒಬ್ಬರು ರಖಂ ಆಗಿ ವ್ಯವಸ್ಥೆಗೊಳಿಸಿದರೆ ತ್ಯಾಜ್ಯಗಳ ಸಂಗ್ರಹ ಕಡಿಮೆಯಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರಿಗೆ ಅನುಕೂಲವಾಗುತ್ತದೆ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.