ನಳ ಮಹಾರಾಜನ ಕಥೆ ಕೇಳಿ…
Team Udayavani, Aug 6, 2023, 12:41 PM IST
ಅದು ಋತುಪರ್ಣ ರಾಜ ನನ್ನನ್ನು ಕರೆದ, “ಬಾಹುಕಾ… ನಾನು ವಿದರ್ಭದೇಶಕ್ಕೆ ದಮಯಂತಿಯ ಸ್ವಯಂವರಕ್ಕೆ ಹೋಗಬೇಕೆಂದಿದ್ದೇನೆ. ನೀನು ಅಶ್ವಹೃದಯ ವಿದ್ಯೆಯನ್ನು ಬಲ್ಲವನಲ್ಲವೇ? ನನ್ನನ್ನು ಒಂದೇ ಹಗಲಿನಲ್ಲಿ ಅಯೋಧ್ಯೆಯಿಂದ ವಿದರ್ಭಕ್ಕೆ ಕರೆದೊಯ್ಯಬಲ್ಲೆಯಾ?’ ಎಂದ. ನನಗೆ ಕಾದ ಸೀಸವನ್ನು ಕಿವಿಯೊಳಗೆ ಹೊಯ್ದಂತಾಯಿತು.
ನನಗೆ ಆಯ್ಕೆಯೇನೂ ಇರಲಿಲ್ಲ. ಒಡೆಯ ಹೇಳಿದ ಮೇಲೆ ಆ ಕೆಲಸ ಮಾಡುವುದು ನನ್ನ ಕರ್ತವ್ಯವೇ ಸರಿ. ಕೇವಲ ನಾಲ್ಕು ವರ್ಷದ ಹಿಂದೆ ನಿಷಧ ದೇಶದ ಅರಸನಾಗಿದ್ದ ಈ ನಳ ಇಂದು ಕುರೂಪಿಯಾದ ಬಾಹುಕ!
ಪುಷ್ಕರನೊಡನೆ ಪಗಡೆಯಾಟವಾಡಿ ರಾಜ್ಯ ಕೋಶಗಳನ್ನು ಕಳೆದುಕೊಂಡು ಕಾಡುಪಾಲಾಗಿದ್ದ ನಾನು ಉದ್ದೇಶ ಪೂರ್ವಕವಾಗಿ ದಮಯಂತಿಯನ್ನು ವಿದರ್ಭ ದೇಶದ ಕಾಡಿನಲ್ಲಿ ಒಬ್ಬಂಟಿಯಾಗಿ ಬಿಟ್ಟು ಬಂದಿದ್ದೆ. ಅವಳು ನೆಲೆಯಿಲ್ಲದ ನನ್ನೊಂದಿಗೆ ಬಂದು ಸಂಕಟಪಡುವುದಕ್ಕಿಂತ ಅವಳ ತವರಾದ ವಿದರ್ಭ ದೇಶವನ್ನು ಸೇರಲಿ ಎಂಬುದು ನನ್ನ ಉದ್ದೇಶವಾಗಿತ್ತು. ಅಲ್ಲಿಂದ ಹೊರಟವನಿಗೆ ವಿಚಿತ್ರ ಅನುಭವಗಳಾಗಿದ್ದವು. ಕಾಡ್ಗಿಚ್ಚಿನಲ್ಲಿ ಸಿಕ್ಕಿಬಿದ್ದಿದ್ದ ಸರ್ಪವೊಂದನ್ನು ರಕ್ಷಿಸಲು ಹೋಗಿ ನಾನಾಗಿ ಸಮಸ್ಯೆಯಲ್ಲಿ ಸಿಕ್ಕಿಬಿದ್ದಿದ್ದೆ. ನನ್ನಿಂದ ರಕ್ಷಿಸಲ್ಪಟ್ಟ ಆ ಕಾರ್ಕೋಟಕನೆಂಬ ಸರ್ಪ ನನ್ನನ್ನು ಕಚ್ಚಿದ ಪರಿಣಾಮ, ನನ್ನ ದೇಹಾಕೃತಿ ವಿರೂಪಗೊಂಡಿತ್ತು. ಆ ಸರ್ಪವು ಕಚ್ಚಿದ ನಂತರ – “ನಿನ್ನ ಒಳ್ಳೆಯದಕ್ಕಾಗಿಯೇ ಕಚ್ಚಿದೆ. ನಿನ್ನ ಮೊದಲ ರೂಪ ಬೇಕೆಂದಾಗ ನನ್ನನ್ನು ನೆನೆದು ಈ ವಸ್ತ್ರಗಳನ್ನು ಹೊದೆದುಕೋ’ ಎಂದು ಒಂದು ಜೊತೆ ವಸ್ತ್ರ ಕೊಟ್ಟು ಮಾಯವಾಗಿತ್ತು. ನಂತರ ಕಾಲೆಳೆದುಕೊಂಡು ಆಯೋಧ್ಯೆಗೆ ತೆರಳಿ, ಋತುಪರ್ಣನಲ್ಲಿ ಊಳಿಗದವನಾಗಿ ಸೇರಿಕೊಂಡೆ. ಹಾಗೆಯೇ ಮೂರ್ನಾಲ್ಕು ವರ್ಷ ಕಳೆದುಹೋಯಿತು!
ಅದೇನು ಹೇಳಿದ ಋತುಪರ್ಣ? ದಮಯಂತಿಗೆ ಮತ್ತೆ ಸ್ವಯಂವರವೇ? ಹೃದಯವು ಸೀಳಿ ಎರಡು ಪಾಲಾದ ಹಾಗಾಯಿತು! ಮೆಚ್ಚಿ ಕೈ ಹಿಡಿದು, 12 ವರ್ಷ ದಮಯಂತಿಯೊಡನೆ ಸುಖ ಸಂಸಾರ ನಡೆಸಿದವನಲ್ಲವೇ ನಾನು? ದಮಯಂತಿ ದುಃಖಾತಿರೇಕದಿಂದ ಬುದ್ಧಿ ತೋರದೆ ಹಾಗೆ ಮಾಡುತ್ತಿದ್ದಾಳೆಯೇ? ಅಥವಾ ಇದೆಲ್ಲಾ ನನಗೋಸ್ಕರವಾಗಿ ಯೋಜಿಸಿರುವ ತಂತ್ರವೋ?
ಯಾವುದಕ್ಕೂ ಇರಲಿ… ನಾಳೆ ಋತುಪರ್ಣ ರಾಜನೊಡಗೂಡಿ ವಿದರ್ಭದೇಶಕ್ಕೆ ಹೋಗುತ್ತೇನೆ. ಕಾರ್ಕೋಟಕನೆಂಬ ಸರ್ಪವು ಕಚ್ಚಿದ ಪರಿಣಾಮವಾಗಿ, ವಿರೂಪಗೊಂಡಿರುವ ನನ್ನನ್ನು ಯಾರೂ ಗುರುತು ಹಿಡಿಯಲಾರರು. ದಮಯಂತಿಯೂ ನನ್ನ ಗುರುತು ಹಿಡಿಯುವುದು ಅಸಂಭವ. ಅವಳ ಮನದಲ್ಲಿ ಏನಿದೆಯೆಂದು ಮೊದಲು ತಿಳಿದುಕೊಳ್ಳಬೇಕು. ನಂತರವಷ್ಟೇ ಮುಂದಿನ ಹೆಜ್ಜೆ.
ಆಯೋಧ್ಯೆಯಿಂದ ಹೊರಟ ನಮ್ಮ ರಥ ವಿದರ್ಭ ದೇಶದತ್ತ ಓಡುತ್ತಿತ್ತು. ಇದ್ದಕ್ಕಿದ್ದಂತೆ “ಬಾಹುಕಾ.., ರಥವನ್ನು ಒಮ್ಮೆ ನಿಲ್ಲಿಸು. ನನ್ನ ಉತ್ತರೀಯ ಗಾಳಿಗೆ ಹಾರಿ ಹೋಯಿತು’ ಎಂದ ಋತುಪರ್ಣ. ಓಹೋ ತನ್ನ ರಥದ ವೇಗ ಆತನ ಗಮನದಲ್ಲಿ ಇದ್ದಂತಿಲ್ಲ. “ರಾಜಾ… ಆ ಉತ್ತರೀಯ ನಿನಗೆ ಮತ್ತೆ ಸಿಕ್ಕಲಾರದು. ನಾವಾಗಲೇ ಆ ಸ್ಥಳದಿಂದ ಒಂದು ಯೋಜನ ದೂರ ಮುಂದೆ ಬಂದಾಯಿತು’ ಎಂದೆ! ಋತುಪರ್ಣನಿಗೆ ಅನುಮಾನ ಹುಟ್ಟಿಬಿಟ್ಟಿತು. “ಬಾಹುಕ… ಸತ್ಯ ಹೇಳು. ನೀನು ಯಾರು? ನೀನು ಸಾಮಾನ್ಯನಲ್ಲ ಎಂಬ ವಿಷಯ ನನಗೆ ಮನದಟ್ಟಾಗಿದೆ. ನಿನ್ನ ರಥವನ್ನೋಡಿಸುವ ಪರಿಯೇ ಅದ್ಭುತವಾಗಿದೆ. ನೀನೇನು ಇಂದ್ರಸಾರಥಿಯಾದ ಮಾತಲಿಯೋ? ಅಥವಾ ನಳಮಹಾರಾಜನೋ?’ ಎಂದ. ನಾನು ಅಶ್ವವಿದ್ಯೆಯನ್ನು ಋತುಪರ್ಣನಿಗೆ ಧಾರೆ ಎರೆದೆ. ಅವನು ಆತನಲ್ಲಿದ್ದ ಅಕ್ಷವಿದ್ಯೆಯನ್ನು ನನಗೆ ಧಾರೆ ಎರೆದ. ಆಗೊಂದು ವಿಚಿತ್ರ ನಡೆಯಿತು.
ಮಂತ್ರಗಳನ್ನು ಪಠಿಸುತ್ತಿದ್ದಂತೆ ನನ್ನೊಳಗೆ ಆಶ್ರಯ ಪಡೆದಿದ್ದ ಕಲಿ ನನ್ನ ದೇಹವನ್ನು ತೊರೆದು ಅಲ್ಲೇ ಇದ್ದ ತಾರೇಮರದಲ್ಲಿ ಆಶ್ರಯ ಪಡೆದ. ಹಾಗಾದರೆ ನನ್ನ ಈ ಸ್ಥಿತಿಗೆ ನನ್ನೊಳಗಿದ್ದ ಕಲಿಯೇ ಕಾರಣನೇ? ಈಗ ನನಗೆ ದೇಹ ಹಗುರವೆನ್ನಿಸಿತು!
ಅಂತೂ ಅಂದುಕೊಂಡ ಸಮಯಕ್ಕೆ ವಿದರ್ಭ ದೇಶದ ರಾಜಧಾನಿಯಾದ ಕುಂಡಿನಪುರಕ್ಕೆ ಋತುಪರ್ಣನನ್ನು ತಲುಪಿಸಿದೆ. ಒಂದೇ ಹಗಲಿನಲ್ಲಿ ನೂರು ಯೋಜನ ದಾರಿಯನ್ನು ರಥದಲ್ಲಿ ಕ್ರಮಿಸಿದ್ದೆವು. ಮನದ ತುಂಬ ದಮಯಂತಿ ಮತ್ತು ಮಕ್ಕಳೇ ತುಂಬಿದ್ದರು. ಒಂದೇ ಭವನದಲ್ಲಿ ನಾವು ತಂಗಿದ್ದರೂ ಪರಸ್ಪರ ಭೇಟಿ ಕೈಗೂಡಿರಲಿಲ್ಲ. ಕಾರ್ಕೋಟಕ ಸರ್ಪವು ಕೊಟ್ಟಿದ್ದ ವಸ್ತ್ರವೇನೋ ನನ್ನಲ್ಲಿ ಜೋಪಾನವಾಗಿತ್ತು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ.
ದಮಯಂತಿಯ ದಾಸಿಯಾದ ಕೇಶಿನಿ ಹಲವು ಪ್ರಶ್ನೆಗಳನ್ನು ಹೊತ್ತು ಬಂದಿದ್ದಳು. ಸಾಧ್ಯವಾದಷ್ಟು ನನ್ನ ಗುಟ್ಟು ಬಿಟ್ಟುಕೊಡದಂತೆ ಉತ್ತರ ಕೊಟ್ಟು ಸಾಗಹಾಕಿದ್ದೆ. ಆದರೆ ಅವಳೊಡನೆ ನನ್ನ ಮುದ್ದು ಮಕ್ಕಳು ಇಂದ್ರಸೇನ ಮತ್ತು ಇಂದ್ರಸೇನೆಯರನ್ನು ನಾನಿರುವ ಜಾಗಕ್ಕೆ ಕಳಿಸಿಬಿಟ್ಟಳಲ್ಲ ದಮಯಂತಿ! ನನ್ನ ಪ್ರೀತಿ ಉಕ್ಕಿ ಹರಿಯಿತು! ಮಕ್ಕಳನ್ನು ಬಾಚಿ ತಬ್ಬಿಕೊಂಡು ಅತ್ತುಬಿಟ್ಟೆ! ಮಕ್ಕಳು ತಬ್ಬಿಬ್ಟಾದವು! ನನ್ನ ವಿಕಾರ ರೂಪದಿಂದಲಾಗಿ ಅವು ನನ್ನನ್ನು ತಂದೆಯೆಂದು ಗುರುತಿಸಲಾಗದೆ ಹೋದವು; ಗಲಿಬಿಲಿಗೊಂಡವು. ಆದರೆ ದಮಯಂತಿಗೆ ನನ್ನ ಗುರುತು ಹತ್ತಿತು!
ದಮಯಂತಿ ನನ್ನನ್ನು ಅಂತಃಪುರಕ್ಕೆ ಕರೆಸಿಕೊಂಡಳು. ಅವಳೇ ಮುಂದಾಗಿ ಮಾತನಾಡಿಸಿದಳು, “ಬಾಹುಕಾ, ನಿರಪರಾಧಿಯಾದ ಪ್ರಿಯಪತ್ನಿ ಆಯಾಸದಿಂದ ಮೈಮರೆತು ಮಲಗಿದ್ದಾಗ, ನಿರ್ಜನವಾದ ಕಾಡಿನಲ್ಲಿ ಬಿಟ್ಟು ಹೋದ ಒಬ್ಬ ಧರ್ಮಾತ್ಮನನ್ನು ನೀನು ಈ ಹಿಂದೆ ನೋಡಿದ್ದೆಯಾ? ಪುಣ್ಯಶ್ಲೋಕನಾದ ನಳನಲ್ಲದೆ ಮತ್ತಾರು ಆ ಕೆಲಸ ಮಾಡಿಯಾರು? ಹಾಗೆ ಬಿಟ್ಟು ಹೋಗಲು ನಾನು ಏನು ತಪ್ಪು ಮಾಡಿದ್ದೆ? ನನ್ನ ಸ್ವಯಂವರದಲ್ಲಿ ದೇವತೆಗಳು ಪ್ರತ್ಯಕ್ಷವಾಗಿ ಬಂದು ಕುಳಿತಿದ್ದಾಗ ಅವರನ್ನು ಬಿಟ್ಟು ನಳನನ್ನು ವರಿಸಿದ್ದೆ. ಅಗ್ನಿಸಾಕ್ಷಿಯಾಗಿ ಮದುವೆಯಾದ ಹೆಂಡತಿಯನ್ನು, ಮಕ್ಕಳ ತಾಯಿಯನ್ನು ಕೈಬಿಟ್ಟು ನಳ ಎಲ್ಲಿ ಹೋದ?’
“ವಿಧಿ ಬರಹದಂತೆ ಇದೆಲ್ಲವೂ ಘಟಿಸಿಹೋಯಿತು ದಮಯಂತೀ… ಕಲಿಯಿಂದಾಗಿ ನಮಗೆ ಈ ಪರಿಸ್ಥಿತಿ ಒದಗಿಬಂದಿತ್ತು. ನಿನಗೆ ಬಹಳ ಕಷ್ಟ ಕೊಟ್ಟುಬಿಟ್ಟೆ. ಬೇಸರಿಸಬೇಡ. ಇನ್ನು ನಮ್ಮ ಕಷ್ಟ ಕೊನೆಗೊಂಡಿತೆಂದು ಕಾಣುತ್ತದೆ. ಆದರೆ ಇದೇನಿದು ನಿನ್ನ ಎರಡನೆಯ ಸ್ವಯಂವರದ ಸುದ್ದಿ? ಅದನ್ನು ತಿಳಿಯಲೆಂದೇ ಇಲ್ಲಿಗೆ ಬಂದೆ. ಋತುಪರ್ಣನೂ ಇದೇ ಕುತೂಹಲದಿಂದ ಇಲ್ಲಿಗೆ ಬಂದವನು’ ಎಂದೆ.
“ನನ್ನಲ್ಲಿ ದೋಷವನ್ನು ಶಂಕಿಸಬೇಡ ಮಹಾರಾಜ. ಸತ್ಯವಾಗಿಯೂ ನಿನ್ನನ್ನು ಬರಮಾಡಿಕೊಳ್ಳಲೆಂದೇ ಈ ಉಪಾಯ ಹೂಡಿದೆ. ನಮ್ಮ ಕಡೆಯ ಬ್ರಾಹ್ಮಣರು ನೀನು ಅಯೋಧ್ಯೆಯಲ್ಲಿರುವ ವಿಷಯವನ್ನು ಪತ್ತೆ ಹಚ್ಚಿದ್ದರು. ನಿನ್ನಂತೆ ಹಗಲೊಂದಕ್ಕೆ ನೂರು ಯೋಜನ ರಥವನ್ನೋಡಿಸುವವರು ಈ ಭೂಮಂಡಲದಲ್ಲಿ ಇನ್ನೊಬ್ಬರಿಲ್ಲ. ಇದನ್ನು ಮನದಲ್ಲಿ ಇಟ್ಟುಕೊಂಡೇ, ಅಯೋಧ್ಯೆಗಷ್ಟೇ “ನನ್ನ ಮರುಸ್ವಯಂವರ’ ಎಂಬ ಸುದ್ದಿಯನ್ನು ಮುಟ್ಟಿಸಿ, ಅತಿ ಶೀಘ್ರದಲ್ಲಿ ನೀವು ವಿದರ್ಭ ದೇಶವನ್ನು ಸೇರಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದೆ. ಮನಸ್ಸಿನಲ್ಲಿಯೂ ನಾನು ಬೇರೆ ಯೋಚಿಸಿದವಳಲ್ಲ. ಇದಕ್ಕೆ ಚಂದ್ರ-ಸೂರ್ಯರು ಸಾಕ್ಷಿ, ವಾಯುದೇವನೇ ಸಾಕ್ಷಿ. ನನ್ನಲ್ಲಿ ಕಳಂಕವಿದ್ದರೆ ಅವರು ಈಗಲೇ ನನ್ನ ಪ್ರಾಣ ತೆಗೆಯಲಿ’ ಎಂದಳು ದಮಯಂತಿ.
ನಮ್ಮ ಸಂಕಟಗಳ ಸರಮಾಲೆ ಒಂದು ಹಂತಕ್ಕೆ ಮುಗಿಯಿತು. ನನ್ನ ಮನಸ್ಸಿಗೆ ಮುಸುಕಿದ್ದ ಕಾರ್ಮೋಡ ಸರಿಯಿತು. ನಾನು ಕಾರ್ಕೋಟಕ ಸರ್ಪ ಕೊಟ್ಟಿದ್ದ ವಸ್ತ್ರಗಳನ್ನು ಹೊದೆದುಕೊಂಡೆ. ಮೊದಲಿನ ನಳನಾದೆ. ಕೋಣೆಯಲ್ಲಿ ನಾನು, ದಮಯಂತಿ ಮತ್ತು ಮಕ್ಕಳು. ನನಗೆ ಮತ್ತೆ ಬದುಕು ಬೇಕೆನ್ನಿಸಿತು!
-ಸುರೇಖಾ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.