ಶ್ರೀನಿವಾಸ ರಾಮಾನುಜನ್ ನೆನಪಿನಲ್ಲಿ ರಾಷ್ಟ್ರೀಯ ಗಣಿತ ದಿನ
Team Udayavani, Dec 22, 2020, 6:15 AM IST
ಇಂದು ರಾಷ್ಟ್ರೀಯ ಗಣಿತ ದಿನ. ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನಾಚರಣೆ. ಗಣಿತ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ಪ್ರತೀ ವರ್ಷ ಡಿ. 22ರಂದು “ರಾಷ್ಟ್ರೀಯ ಗಣಿತ ದಿನ’ವನ್ನು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ ಸಹಿತ ವಿವಿಧ ವಿದ್ವಾಂಸರು ಗಣಿತ ಶಾಸ್ತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಶ್ರೀನಿವಾಸ ರಾಮಾನುಜನ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಚಿಹ್ನೆ ಮತ್ತು ಭಿನ್ನರಾಶಿಗಳಿಗೆ ಸಂಬಂಧಿಸಿದಂತೆ ಕೆಲವು ಕೊಡುಗೆ ನೀಡಿದ್ದು, ಅನಂತ ಸರಣಿ, ಸಂಖ್ಯೆ ಸಿದ್ಧಾಂತ, ಗಣಿತ ವಿಶ್ಲೇಷಣೆ ಅವುಗಳಲ್ಲಿ ಪ್ರಮುಖವಾದವು.
2012ರಿಂದ ಆರಂಭ
ಗಣಿತ ಪ್ರಪಂಚದಲ್ಲಿ ಜಗತ್ತನ್ನೇ ಬೆರಗಾಗಿಸಿದ ಸರ್ವಶ್ರೇಷ್ಠ ಗಣಿತ ತಜ್ಞ ರಾಮಾನುಜನ್ ಅತ್ಯಂತ ಬಡ ಕುಟುಂಬದಲ್ಲಿ 1887ರ ಡಿ. 22ರಂದು ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದರು. ಚೆನ್ನೈಯಲ್ಲಿ 2012 ಡಿ. 22ರಂದು ನಡೆದ ಇವರ 125ನೇ ಜನ್ಮದಿನಾಚರಣೆಯಂದು ಅಂದಿನ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ರಾಮಾನುಜನ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ “ರಾಷ್ಟ್ರೀಯ ಗಣಿತ ದಿನ’ ಎಂದು ಘೋಷಿಸಿದರು. ಮುಖ್ಯವಾಗಿ ದೇಶದ ಅಭಿವೃದ್ಧಿಗೆ ಗಣಿತದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಶಯವಾಗಿದೆ.
ಟ್ರಿನಿಟಿ ಕಾಲೇಜಿಗೆ ಸೇರ್ಪಡೆ
1916ರಲ್ಲಿ ಬಿಎಸ್ಸಿ ಪದವಿ ಪಡೆದ ಅವರು ಪ್ರಥಮ ಮಹಾಯುದ್ಧ ಪ್ರಾರಂಭವಾಗುವ ಕೆಲವು ತಿಂಗಳ ಮೊದಲು ರಾಮಾನುಜನ್ ಟ್ರಿನಿಟಿ ಕಾಲೇಜಿಗೆ ಸೇರಿದರು. 1917ರಲ್ಲಿ ಲಂಡನ್ ಮ್ಯಾಥಮ್ಯಾಟಿಕಲ್ ಸೊಸೈಟಿಗೆ ಆಯ್ಕೆಯಾದರು.1918ರಲ್ಲಿ ಎಲಿಪ್ಟಿಕ್ ಕಾರ್ಯಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಸಂಶೋಧನೆಗಾಗಿ ರಾಯಲ್ ಸೊಸೈಟಿ ಮತ್ತು ಬಳಿಕ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯರಾದರು. ಬಳಿಕ ದೇಶಕ್ಕೆ ವಾಪಸಾದರು.
ಬದುಕಿದ್ದು ಕೇವಲ 32 ವರ್ಷ
ರಾಮಾನುಜನ್ ಅವರು 1920ರ ಎಪ್ರಿಲ್ 2ರಂದು ನಿಧನ ಹೊಂದಿದರು. ಆಗ ಅವರಿಗೆ 32 ವರ್ಷ ವಯಸ್ಸಾಗಿತ್ತು. ಆದರೆ ಅವರ ಸಾಧನೆ ಈ ಜಗತ್ತಿನಲ್ಲಿ ಮನುಕುಲವಿರುವವರೆಗೂ ಶಾಶ್ವತವಾಗಿರುತ್ತದೆ. ಇಂದಿನ ಡಿಜಿಟಲ್ ತಂತ್ರಜ್ಞಾನಕ್ಕೆ ಅವರ ಕೊಡುಗೆ ಅಪಾರ. ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಗೆ ಅವರು ರೂಪಿಸಿದ ಗಣಿತದ ಸೂತ್ರಗಳೇ ದಾರಿದೀಪ. The Man Who Knew Infinity ಸಿನೆಮಾದಲ್ಲಿ ಇವರ ಜೀವನದ ಕತೆ ಇದೆ.
ಪರೀಕ್ಷೆಗಳಲ್ಲಿ ಫೇಲ್ ಆಗುತ್ತಿದ್ದರು!
ರಾಮಾನುಜನ್ 1903ರಲ್ಲಿ ಕುಂಬಕೋಣಂನ ಸರಕಾರಿ ಕಾಲೇಜಿಗೆ ಸೇರಿದರು. ಕಾಲೇಜಿನಲ್ಲಿ ಗಣಿತೇತರ ವಿಷಯಗಳ ಬಗ್ಗೆ ನಿರ್ಲಕ್ಷ್ಯದಿಂದಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. 1912ರಲ್ಲಿ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿ ದರು. ಅಲ್ಲಿ ಅವರ ಗಣಿತ ಜ್ಞಾನವನ್ನು ಗಣಿತ ತಜ್ಞರೂ ಆಗಿದ್ದ ಸಹೋದ್ಯೋಗಿ ಗುರುತಿಸಿ, ಅವರು ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲ ಯದ ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಜಿ.ಎಚ್. ಹಾರ್ಡಿ ಅವರಿಗೆ ಪರಿಚಯಿಸಿದರು.
ಜಿ.ಎಚ್. ಹಾರ್ಡಿ ಅವರಿಂದ ಮೆಚ್ಚುಗೆ
ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಶುದ್ಧ ಗಣಿತದಲ್ಲಿ ಮಹಾನ್ ಖ್ಯಾತಿಯನ್ನು ಗಳಿಸಿದ್ದ ಪ್ರೊ| ಹಾರ್ಡಿಯವರು ರಾಮಾನುಜನ್‌ರ ಪತ್ರದ ಲ್ಲಿದ್ದ ಪ್ರಮೇಯ ಹಾಗೂ ಸೂತ್ರಗಳ ಪಟ್ಟಿಯನ್ನು ನೋಡಿ ಆಶ್ಚರ್ಯಚಕಿತರಾದರು. ಇಂತಹ ಗಣಿತ ಸೂತ್ರಗಳನ್ನು ತಾನು ನೋಡಿಯೇ ಇರಲಿಲ್ಲ. ಇಂತಹ ಅದ್ಭುತವಾದ ಸೂತ್ರಗಳನ್ನು ರಚಿಸಿರುವ ವ್ಯಕ್ತಿ ಪ್ರಥಮ ದರ್ಜೆಯ ಗಣಿತ ತಜ್ಞನೇ ಆಗಿರಬೇಕು ಎಂದಿದ್ದರು. ಹಾರ್ಡಿಯಂತಹ ಮಹಾನ್ ಗಣಿತ ತಜ್ಞನೇ ಪ್ರಶಂಸಿಸಿರುವುದನ್ನು ನೋಡಿದಾಗ ರಾಮಾನುಜನ್‌ರಲ್ಲಿದ್ದ ಗಣಿತದ ಪ್ರತಿಭೆ ಎಂಥದ್ದು ಎಂಬುದು ಅರ್ಥವಾಗುತ್ತದೆ.
ರಾಮಾನುಜನ್ ಅವರ ಮುಖ್ಯ ಸಂಶೋಧನೆಗಳು
ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
ರಾಮಾನುಜನ್ ಊಹೆ
ರಾಮಾನುಜನ್-ಪೀಟರ್ಸನ್ ಊಹೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.