ನೆರಳಿನಾಸರೆಯಲ್ಲಿ….
Team Udayavani, Mar 22, 2023, 12:00 PM IST
ನಿಹಾಲ್ ಒಬ್ಬ ಸುಂದರ ತರುಣ. ಕಾಲೇಜು ವಿದ್ಯಾರ್ಥಿಯಾಗಿದ್ದ ತನ್ನ ಬದುಕಿನಲ್ಲಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೆ, ಯಾರನ್ನೂ ದ್ವೇಷಿಸದ ವ್ಯಕ್ತಿ. ಕಾಲೇಜಿನಲ್ಲೂ ಕೂಡ ಸಹಪಾಠಿಗಳಿಂದ ಒಂದು ಅಂತರ ಕಾಯ್ದುಕೊಂಡಿದ್ದ. ಓದಿನಲ್ಲಿ ಮೊದಲಿಗನಾಗಿರದಿದ್ದರೂ ಉತ್ತಮ ಶ್ರೇಣಿಯನ್ನೇ ಪಡೆಯುತ್ತಿದ್ದ. ಆಗಾಗ ಕಥೆ, ಕವನಗಳನ್ನು ಬರೆಯುವ ಹವ್ಯಾಸವೂ ಇತ್ತು. ಆದರೆ ತನ್ನ ಸಂಕೋಚದ ಸ್ವಭಾವದಿಂದ ಜಾಸ್ತಿ ಪ್ರಸಿದ್ಧನಾಗಿರಲಿಲ್ಲ. ಹುಡುಗಿಯರಿಂದ ತುಸು ದೂರವೇ ಇರುತ್ತಿದ್ದ. ಅವರೆಂದರೆ ಏನೋ ಆಕರ್ಷಣೆಯಂತೂ ಇತ್ತು. ಆದರೆ ಆಮೆಯ ಚಿಪ್ಪಿನಂತೆ ತನ್ನ ಸುತ್ತಲೂ ಒಂದು ರೀತಿಯ ಗೋಡೆ ನಿರ್ಮಿಸಿಕೊಂಡಿದ್ದ. ಮನುಷ್ಯರ ಮನಸ್ಸು ತುಂಬಾ ಸಂಕೀರ್ಣ. ಒಂದೇ ವಿಷಯವನ್ನು ಆಯಾಯ ಮನಸ್ಥಿತಿಯಂತೆ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತದೆ. ಒಬ್ಬರಿಗೆ ತೀರಾ ಸಾಧರಣವಾಗಿ ಕಾಣುವ ಸಂದರ್ಭ ಇನ್ನೊಬ್ಬರಿಗೆ ಅತಿ ಕ್ಲಿಷ್ಟ ಪರಿಸ್ಥಿತಿಯಂತೆ ಭಾಸವಾಗಬಹುದು. ಮನಸ್ಸು ತನಗೆ ಬೇಕಾದಂತೆ ಆಲೋಚಿಸಬಹುದು. ಕಡಿವಾಣವಿಲ್ಲದ ಕುದುರೆಯಂತೆ ನೆಗೆಯಬಹುದು ಅಥವಾ ಸೆರೆ ಕುಡಿದ ಕರಡಿಯಂತೆ ಎಚ್ಚರ ತಪ್ಪಿ ನಿದ್ರಿಸಬಹುದು. ಸುಪ್ತ ಮನಸ್ಸು ಬೇಕಾದನ್ನು ಸೃಷ್ಟಿಸಲೂಬಹುದು, ಬೇಡವಾದುದನ್ನು ಅಳಿಸಲೂಬಹುದು.
ಕಾಲಚಕ್ರ ಉರುಳುತ್ತಿರುವಂತೆ ನಿಹಾಲ್ ವಿದ್ಯಾಭ್ಯಾಸ ಮುಗಿಸಿ ಪದವೀಧರನಾದ. ಉದ್ಯೋಗದ ಅನ್ವೇಷಣೆ ಶುರುವಾಯಿತು. ನಿಹಾಲ್ ತಂದೆ ತಾಯಿ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ವರ್ಗಾವಣೆಯ ಕಿರಿಕಿರಿ ಇಲ್ಲದ ನೌಕರಿ. ಆದ್ದರಿಂದ ನಿಹಾಲ್ ಒಂದೇ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿ ತನಕ ಪೂರೈಸಿದ್ದ. ಈಗ ಉದ್ಯೋಗ ಹುಡುಕಲು ಬೇರೆ ಊರಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ತನ್ನದೇ ಮನೆ, ಹೆತ್ತವರು ಮತ್ತು ಊರನ್ನು ಬಿಟ್ಟು ಹೋಗುವ ಕಲ್ಪನೆಯೇ ಅವನಿಗೆ ಬೇಡವಾಗಿತ್ತು. ದಿನ ಕಳೆದಂತೆ ನಿಹಾಲ್ ಮೊಗದಲ್ಲಿ ಗಡ್ಡದ ಕಳೆ ಬೆಳೆಯುತಿತ್ತು, ಮುಖದ ಕಳೆ ಇಳಿಯುತಿತ್ತು. ಕೆಲಸ ಹುಡುಕಲು ಬೇರೆ ಊರಿಗೆ ಹೋದರೆ ಮರುದಿನವೇ ಹಿಂದಿರುಗುತ್ತಿದ್ದ. ಇದು ಹೆತ್ತವರಿಗೆ ಬಿಸಿ ತುಪ್ಪದಂತಾಗಿತ್ತು.
ಕೆಲಸ ಹುಡುಕಲು ಒತ್ತಡ ಹೆಚ್ಚಾದಂತೆ, ದೂರದ ಊರಲ್ಲಿ ಉದ್ಯೋಗ ದೊರಕಿತು. ನಿಹಾಲ್ ಅನಿವಾರ್ಯವಾಗಿ ತನ್ನ ಆರಾಮ ವಲಯದಿಂದ ಹೊರಗೆ ಹೋಗಲೇಬೇಕಾಯಿತು. ಛಿದ್ರ ಮನಸ್ಥಿತಿಯೊಂದಿಗೆ ಆತನ ಉದ್ಯೋಗ ಪರ್ವ ಶುರುವಾಯಿತು. ವಸತಿ ಸಮುತ್ಛಯವೊಂದರಲ್ಲಿ ಬಾಡಿಗೆಗೆ ಮನೆಯೂ ಹಿಡಿದಾಯಿತು. ಹೊಸ ಜಾಗ, ಹೊಸ ಜನರ ಒಡನಾಟ. ಚಿತ್ತದಲ್ಲಿ ಚಿತ್ರ ವಿಚಿತ್ರ ಯೋಚನೆಗಳು. ಹೊರಗೆ ನಗುಮುಖ; ಒಳಗೊಳಗೆ ಬೆಟ್ಟದಷ್ಟು ಆತಂಕ. ಕೆಲಸವೇನೋ ಸಸೂತ್ರವಾಗಿ ನಡೆಯುತಿತ್ತು. ಆದರೆ ಮನ ತುಂಬಾ ಗೊಂದಲದ ಗೂಡಾಗಿತ್ತು. ನಿದ್ರೆಯಿಲ್ಲದೆ ರಾತ್ರಿ ಆಸಕ್ತಿಯಿಲ್ಲದೆ ಹಗಲು ಕಳೆಯುತಿತ್ತು. ಹೀಗಿರುವಾಗ ಒಂದು ದಿನ ವಸತಿ ಸಮುತ್ಛಯದ ಹೂದೋಟದಲ್ಲಿ ಒಬ್ಬ ಯುವತಿ ನಿಹಾಲ್ ನೋಡಿ ನಸು ನಕ್ಕಳು. ಹುಡುಗಿಯರೆಂದರೆ ತುಸು ದೂರವಿರುತ್ತಿದ್ದ ನಿಹಾಲನ ಮನ ಇವತ್ತು ಬೇರೆಯೇ ಲಹರಿಯಲ್ಲಿತ್ತು. ಅನುದ್ದಿಷ್ಟವಾಗಿ ಅವನ ತುಟಿಯರಳಿತು. ಕೈ ಬೀಸಿತು. ಹೃದಯ ಬಡಿತ ಕಿವಿಗೆ ಕೇಳಲಾರಂಭಿಸಿತು. ಕುಡಿನೋಟ ಬೀರಿ ಆ ಸುಂದರ ಬೆಡಗಿ ಮುಂದೆ ಸಾಗಿದಳು. ನಿಹಾಲ್ ಕಣ್ಣುಗಳು ಅವಳು ಮರೆಯಾಗುವ ತನಕ ಅವಳನ್ನೇ ಹಿಂಬಾಲಿಸಿದವು. ಏರಿದ್ದ ಹೃದಯ ಬಡಿತ ಕ್ರಮೇಣ ತಹಬಂದಿಗೆ ಬಂತು. ಹೂದೋಟದಲ್ಲಿ ಏನೋ ಹೊಸತನ ನಳನಳಿಸಲಾರಂಭಿಸಿತು.
ಮರುದಿನದಿಂದ ನಿಹಾಲನ ಕಣ್ಣುಗಳು ಅವಳನ್ನು ಅರಸಲಾರಂಭಿಸಿದವು. ಆದರೆ ಆ ಯುವತಿಯ ಸುಳಿವೇ ಇರಲಿಲ್ಲ. ಹೀಗೆಯೇ ಮೂರು ದಿನಗಳು ಕಳೆದವು. ನಿಹಾಲನಿಗೆ ಅವಳನ್ನು ನೋಡದೇ ಇರುವುದು ಕಷ್ಟವಾಗತೊಡಗಿತು. ಅದರೆ ಯಾರನ್ನು ವಿಚಾರಿಸುವುದು? ಎಲ್ಲಿ ಹುಡುಕುವುದು? ಆ ದಿನ ಸಂಜೆ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಹಿಂತಿರುಗುವಾಗ ಗೇಟಿನ ಬಳಿಯಲ್ಲಿ ಅವಳ ದರ್ಶನವಾಯಿತು. ಪುನಃ ಕಾಣೆಯಾಗುವಳೆಂಬ ಭಯದಿಂದ ಧೈರ್ಯ ಮಾಡಿ ಕಂಪಿಸುವ ಸ್ವರದಿಂದ ಅವಳಿಗೆ ಹಲೋ ಹೇಳಿದ ಅಥವಾ ಪಿಸುಗುಟ್ಟಿದ. ಅವಳೂ ನಕ್ಕು ಹಲೋ ಅಂದಳು. ಅಳಿದುಳಿದ ಆತ್ಮವಿಶ್ವಾಸ ಒಟ್ಟುಗೂಡಿಸಿ ಮಾತಿಗಾರಂಭಿಸಿದ. ಅವಳೂ ಪ್ರೋತ್ಸಾಹಿಸುವ ಧಾಟಿಯಲ್ಲಿ ಉತ್ತರಿಸತೊಡಗಿದಳು. ಪೂರ್ವಾಪರ ವಿಚಾರಣೆಯಲ್ಲಿ ಅವಳು ಅದೇ ಊರಿನವಳು, ಉಪನ್ಯಾಸಕಿ ಮುಂತಾದ ವಿವರಗಳು ದೊರಕಿದವು. ಸ್ವಲ್ಪ ಹೊತ್ತು ಮಾತನಾಡಿದ ಬಳಿಕ ತನಗೆ ಕೆಲಸವಿದೆ ಎಂದು ಅವಳು ಸರಿದು ಹೋದಳು. ಮನಸ್ಸಿಲ್ಲದ ಮನಸ್ಸಿನಿಂದ ಬೀಳೊYಟ್ಟು ನಿಹಾಲ್ ಮನೆ ಕಡೆಗೆ ಕಾಲೆಳೆದ.
ಹೀಗೆ ಶುರುವಾದ ಮಾತುಕತೆ ಕಾಲಕ್ರಮೇಣ ನಿಹಾಲನಿಗೆ ನಿತ್ಯ ಪಾರಾಯಣವಾಯಿತು. ಮೊದಮೊದಲು ವಸತಿ ಸಮುತ್ಛಯದ ಬಳಿ ಮಾತ್ರ ಕಾಣಸಿಗುತ್ತಿದ್ದವಳು ಬಳಿಕ ಆಫೀಸ್‌ನ ಹತ್ತಿರವೂ ಸಿಗಲಾರಂಭಿಸಿದಳು. ಇವನು ಬರೆದ ಕಥೆ, ಕವನಗಳಿಗೆ ಅವಳೇ ಕಿವಿಯಾದಳು; ಸ್ಫೂರ್ತಿಯಾದಳು. ಶಾಪಿಂಗ್ ಮಾಲುಗಳು, ಹೊಟೇಲುಗಳಿಗೂ ಹೋಗತೊಡಗಿದರು. ಇವರು ಹೋದ ಕಡೆಯಲೆಲ್ಲ ಸುತ್ತಲಿನ ಜನ ಕುತೂಹಲದಿಂದ ನೋಡುತಿದ್ದರು. ಇವರು ಮಾತನಾಡುತ್ತಿದ್ದರೆ ಮಂದಿ ಸೋಜಿಗದ ನೋಟ ಬೀರುತ್ತಿದ್ದರು. ಅವಳು ಆಫೀಸಿಗೂ ಬಂದು ಪಕ್ಕದಲ್ಲೇ ಕುಳಿತುಕೊಂಡರೂ ಬೇರೆಯವರು ಏನೂ ಆಕ್ಷೇಪ ಮಾಡುತ್ತಿರಲಿಲ್ಲ. ಇದು ನಿಹಾಲನಿಗೆ ಒಂದು ರೀತಿಯ ಹೆಮ್ಮೆ ಎನಿಸುತ್ತಿತ್ತು. ಹೀಗೆಯೇ ಸಾಗುತ್ತಾ ಅವಳನ್ನು ಕ್ಷಣವೂ ಬಿಟ್ಟಿರಲು ಅವನಿಗೆ ಕಷ್ಟವಾಗತೊಡಗಿತು. ಮನೆಯಲ್ಲೂ ಒಟ್ಟಿಗೇ ಇರಲಾರಂಭಿಸಿದರು.
ಹೀಗಿರುವಾಗ ಊರಲ್ಲಿ ನಿಹಾಲನ ಹೆತ್ತವರಿಗೆ ಯಾರೋ ಪರಿಚಯದವರು ಈ ವಿಚಾರ ತಲುಪಿಸಿದರು. ಲಗುಬಗೆಯಿಂದ ಹೊರಟು ಬಂದವರಿಗೆ ಮಗನನ್ನು ನೋಡಿ ಕಣ್ಣೀರು ತಡೆಯದಾಯಿತು. ಅನಿರೀಕ್ಷಿತವಾಗಿ ಬಂದ ಅಪ್ಪ ಅಮ್ಮನನ್ನು ನೋಡಿ ನಿಹಾಲನಿಗೆ ತುಂಬಾ ಸಂತೋಷವಾಯಿತು. ಪಕ್ಕದಲ್ಲಿಯೇ ಇದ್ದ ಗೆಳತಿಯನ್ನು ಪರಿಚಯಿಸತೊಡಗಿದ. ಅದಕ್ಕೇ ಏನೂ ಪ್ರತಿಕ್ರಯಿಸದೇ ಮಗನನ್ನೇ ನೋಡುತ್ತಿದ್ದವರನ್ನು ಪರಿಗಣಿಸದೇ ಪರಿಚಯವನ್ನು ಮುಂದುವರಿಸಿದ. ಹೆತ್ತ ಕರುಳು ತಡೆಯಲಾಗದೇ ತಾಯಿ ಮಗನನ್ನು ಗಟ್ಟಿಯಾಗಿ ಆಲಂಗಿಸಿ ಅಳಲಾರಂಭಿಸಿದರು. ದಿಗ್ಭ್ರಮೆಗೊಂಡ ನಿಹಾಲನಿಗೆ ಎಲ್ಲ ಅಯೋಮಯವಾಯಿತು. ಇವರು ಹೀಗೇಕೆ ಆಡುತ್ತಿದ್ದಾರೆ ಎಂದು ತಿಳಿಯದಾಯಿತು. ಅವನಿಗೆ ಈ ಗೆಳತಿ ತನ್ನ ಮನ ಸೃಷ್ಟಿಸಿದ ಬರೀ ನೆರಳೆಂದು ತಿಳಿಯದೆ ಅವಳ ಆಸರೆಯಲ್ಲಿ ತನ್ನಿರುವ ಮರೆತು ಕಾಲ ಕಳೆಯಲಾರಂಭಿಸಿದ.
– ಡಾ| ವೆಂಕಟಕೃಷ್ಣ ಕೆ., ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.