ಹೊಸ ತಾಲೂಕು ಹೆಸರಿಗೆ ಮಾತ್ರ !


Team Udayavani, Sep 28, 2019, 5:00 AM IST

w-28

ಹೊಸ ತಾಲೂಕುಗಳ ರಚನೆಯಾಗಿ ವರ್ಷಗಳೇ ಕಳೆದರೂ, ನಿರೀಕ್ಷಿತ ಫ‌ಲ ಸಿಗುತ್ತಿಲ್ಲ. ಕೆಲವು ತಾಲೂಕುಗಳು ನಾಮ ಫ‌ಲಕಕ್ಕೆ ಮಾತ್ರ ಸೀಮಿತವಾಗಿವೆ. ಬಹುತೇಕ ಕೇಂದ್ರಗಳಲ್ಲಿ ಕಚೇರಿ, ಸಿಬ್ಬಂದಿ, ಅನುದಾನದ ಕೊರತೆ ಕಾಡುತ್ತಿದೆ…

ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ರಚಿಸಲು, ದಶಕಗಳಿಂದ ಇದ್ದ ಬೇಡಿಕೆ ಈಡೇ ರಿಸಲು ರಾಜ್ಯ ಸರ್ಕಾರ 50 ಹೊಸ ತಾಲೂಕುಗಳನ್ನು ರಚನೆ ಮಾಡಿದ್ದು, ಈಗಾಗಲೇ ಹೊಸ ತಾಲೂಕುಗಳಲ್ಲಿ ಕಾರ್ಯ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿ ರುವ ತಾಲೂಕುಗಳು ಅಧಿಕೃತ ಕಾರ್ಯಾರಂಭ ಮಾಡಿಲ್ಲ.

ಆಡಳಿತಾತ್ಮಕ ದೃಷ್ಟಿಯಿಂದ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ತಾಲೂಕುಗಳನ್ನು ಪುನರ್‌ ರಚನೆ ಮಾಡುವ ಸಂಬಂಧ 1973ರಲ್ಲಿ ವಾಸುದೇವ್‌ ರಾವ್‌ ಆಯೋಗ, 1984 ರಲ್ಲಿ ಟಿ.ಎಂ. ಹುಂಡೇಕರ್‌ ಸಮಿತಿ, 1986 ರಲ್ಲಿ ಪಿ.ಸಿ. ಗದ್ದಿಗೌಡರ ಸಮಿತಿ, 2007 ರಲ್ಲಿ ಎಂ.ಬಿ.ಪ್ರಕಾಶ್‌ ಅಧ್ಯಕ್ಷತೆಯಲ್ಲಿ ತಾಲೂಕು ಪುನರ್‌ ರಚನಾ ಸಮಿತಿ ರಚಿಸಲಾಗಿತ್ತು. ನಾಲ್ಕೂ ಸಮಿತಿಗಳ ವರದಿಗಳನ್ನು ಪರಿಗಣಿಸಿ 2013 ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ತಮ್ಮ ಕೊನೆಯ ಬಜೆಟ್‌ನಲ್ಲಿ 43 ನೂತನ ತಾಲೂಕುಗಳ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಅವರು ಮತ್ತೆ ಅಧಿಕಾರಕ್ಕೆ ಬಾರದ ಹಿನ್ನೆಲೆಯಲ್ಲಿ ಅವರ ಘೋಷಣೆ ಹಾಗೆಯೇ ಉಳಿಯಿತು. ನಂತರ 2013 ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಹೊಸ ತಾಲೂಕುಗಳ ರಚನೆ ಮಾಡುವುದಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದರು. ಭೌಗೋಳಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ 49 ಹೊಸ ತಾಲೂಕುಗಳನ್ನು ರಚಿಸಲು ರಾಜ್ಯ ಸರ್ಕಾರ ಘೋಷಣೆ ಮಾಡಿತು. ನಂತರ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಮೂಡಲಗಿ ಪಟ್ಟಣವನ್ನು ತಾಲೂಕು ಎಂದು ಘೋಷಣೆ ಮಾಡಲಾಯಿತು.

2018ರ ಜನವರಿಯಿಂದಲೇ ನೂತನ ತಾಲೂಕು ಕೇಂದ್ರಗಳಲ್ಲಿ ತಾಲೂಕು ಕಚೇರಿಗಳನ್ನು ತೆರೆದು ಕಾರ್ಯಾರಂಭ ಮಾಡಲು ಆದೇಶ ಹೊರಡಿಸಲಾಗಿದೆ. ಆದರೆ, ಎಲ್ಲ ಹೊಸ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಅಧಿಕೃತ ಆರಂಭವಾಗಿಲ್ಲ. ಹೀಗಾಗಿ ಕಂದಾಯ ಇಲಾಖೆಯ ವ್ಯವಹಾರಗಳು ಮಾತ್ರ ಹೊಸ ತಾಲೂಕುಗಳಲ್ಲಿ ನಡೆಯುತ್ತಿದ್ದು, ಇತರ ಇಲಾಖೆಗಳ ಕಾರ್ಯ ಚಟುವಟಿಕೆಗಳಿಗೆ ಸಾರ್ವಜನಿಕರೂ ಇನ್ನೂ ಹಳೆ ತಾಲೂಕುಗಳಿಗೆ ಅಲೆದಾಡುವ ಸ್ಥಿತಿ ಇದೆ. ಅಲ್ಲದೇ ಪೊಲೀಸ್‌ ಠಾಣಾ ವ್ಯಾಪ್ತಿ, ಗಡಿ ಗುರುತಿಸುವ ಪ್ರಕ್ರಿಯೆ ಇನ್ನೂ ಕೆಲವು ತಾಲೂಕುಗಳಲ್ಲಿ ಮುಂದುವರೆದಿದ್ದು, ಸರಿಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಮುಂದುವರೆಸಿವೆ.

ಪ್ರತಿಯೊಂದು ನೂತನ ತಾಲೂಕು ಕಚೇರಿಗಳಿಗೂ ವೃಂದ ಮತ್ತು ನೇಮಕಾತಿ ಪ್ರಕಾರ ಗ್ರೇಡ್‌ 1 ತಹಸೀಲ್ದಾರ್‌-1, ಗ್ರೇಡ್‌-2 ತಹಸೀಲ್ದಾರ್‌-1, ಶಿರಸ್ತೆದಾರ್‌-2, ಪ್ರಥಮ ದರ್ಜೆ ಸಹಾಯಕ- 3, ಆಹಾರ ನಿರೀಕ್ಷಕ-1, ಬೆರಳಚ್ಚು/ಡಾಟಾ ಎಂಟ್ರಿ ಆಪರೇಟರ್‌-1 ಗ್ರೂಪ್‌ ಡಿ-3, ವಾಹನ ಚಾಲಕ-1 ಹುದ್ದೆಗಳನ್ನು ಸೃಜಿಸಲಾಗಿದ್ದು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೊಸ ತಾಲೂಕುಗಳಲ್ಲಿ ಕಂದಾಯ ಇಲಾಖೆಯಿಂದ ತಾಲೂಕು ಕಚೇರಿಗಳು ಮಾತ್ರ ಆರಂಭವಾಗಿದ್ದು, ಇನ್ನುಳಿದ ಇಲಾಖೆಗಳ ಕಚೇರಿಗಳನ್ನು ಆರಂಭಿಸಲು ಸರ್ಕಾರ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದೆ. ಆದರೆ, ಬಹುತೇಕ ತಾಲೂಕುಗಳಲ್ಲಿ ಉಳಿದ ಇಲಾಖೆಗಳ ಕಚೇರಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಹೊಸ ತಾಲೂಕುಗಳಿಗೆ ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕಿದ್ದು, ಪ್ರತಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕನಿಷ್ಠ 10 ಕೋಟಿ ಅಂದಾಜು ಮಾಡಲಾಗಿದೆ. ಈ ಪ್ರಕ್ರಿಯೆಗೆ ಇನ್ನೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಹಂತ ಹಂತವಾಗಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನ ಮಾಡಿದೆ.

ಮೈತ್ರಿ ಸರಕಾರ ಘೋಷಣೆ ಈಡೇರಿಲ್ಲ
ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಣೆ ಮಾಡಿದ್ದ ತಾಲೂಕುಗಳು ಕಾರ್ಯಾರಂಭ ಮಾಡಿವೆ. ಆದರೆ, ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿರುವ ಹನ್ನೆರಡು ತಾಲೂಕುಗಳಿಗೆ ಇನ್ನೂ ಅಧಿಕೃತ ಆದೇಶ ಹೊರಡಿಸದೇ ಇರುವುದರಿಂದ ಅದು ಬಜೆಟ್‌ ಘೋಷಣೆಯಾಗಿ ಮಾತ್ರ ಉಳಿದುಕೊಂಡಿದೆ. ಈಗ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮೈತ್ರಿ ಸರ್ಕಾರದ ಬಜೆಟ್‌ ಘೋಷಣೆ ಯನ್ನು ಅನುಷ್ಠಾನಕ್ಕೆ ತರುವುದು ಅನುಮಾನವಿದೆ.

ಹಳೇ ತಾಲೂಕುಗಳಿಗೆ ತಪ್ಪದ ಅಲೆದಾಟ
ಎರಡು ವರ್ಷಗಳ ಹಿಂದೆ ಸರ್ಕಾರ ರಾಯಚೂರಿನ ಮಸ್ಕಿಯನ್ನು ತಾಲೂಕಾಗಿ ಘೋಷಿಸಿತ್ತು. ಆದರೆ ನೂತನ ತಾಲೂಕಿಗೆ ಅಗತ್ಯ ಅನುದಾನ ನೀಡದ್ದರಿಂದ ನಾನಾ ಸಂಕಷ್ಟಗಳ ಮಧ್ಯೆ ಆಡಳಿತ ನಡೆಯುತ್ತಿದೆ. ತಹಸೀಲ್ದಾರ್‌ ಒಬ್ಬರನ್ನು ಬಿಟ್ಟರೆ ಮತ್ಯಾವುದೇ ಇಲಾಖೆಗಳಿಗೆ ಕಾಯಂ ಅಧಿಕಾರಿಗಳಿಲ್ಲ. ಸಣ್ಣ-ಪುಟ್ಟ ದಾಖಲೆಯಿಂದ ಹಿಡಿದು ಯಾವುದೇ ಕೆಲಸಕ್ಕೂ ಹಳೆಯ ತಾಲೂಕಿಗೆಅಲೆಯುವ ಸ್ಥಿತಿ ಇದೆ. ಇದರಿಂದ ಹೊಸ ತಾಲೂಕು ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಜನರದ್ದು.

ಇಲ್ಲಗಳ ಮಧ್ಯೆ ನಿಲ್ಲದ ಪರದಾಟ
ಹೊಸ ತಾಲೂಕು ಆಗಿ ಅಸ್ತಿತ್ವಕ್ಕೆ ಬಂದಿರುವ ಗಜೇಂದ್ರಗಢದಲ್ಲಿ ಇಲ್ಲಗಳ ಮಧ್ಯೆಯೇ ಅಧಿಕಾರಿಗಳ ಪರದಾಟ ನಡೆ ದಿದೆ. ಹೊಸ ತಾಲೂಕು ರಚನೆಗೊಂಡು 2 ವರ್ಷ ಕಳೆದರೂ, ತಹಸೀಲ್ದಾರ್‌ ಕಚೇರಿಗೆ ಅಗತ್ಯ ಸಿಬ್ಬಂದಿ ಇಲ್ಲ. ವಿವಿಧ ಇಲಾಖೆಗಳ ಸುಳಿವಿಲ್ಲದೇ, ಜನರು ಹೈರಾಣಾಗುತ್ತಿದ್ದಾರೆ. ಕೇವಲ ತಹಸೀಲ್ದಾರ್‌, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಮಾತ್ರ ಬಾಗಿಲು ತೆರೆದಿವೆ. ವಾರದಲ್ಲಿ 3 ದಿನ ಕೋರ್ಟ್‌ ಕಲಾಪ ನಡೆಯು ತ್ತಿದೆ. ಇನ್ನುಳಿದ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳ ಸುಳಿವಿಲ್ಲ.

ಲೆಕ್ಕಕ್ಕಿಲ್ಲದಂತಿವೆ
2017ರಲ್ಲಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಇಳಕಲ್ಲ ಹಾಗೂ ರಬಕವಿ-ಬನಹಟ್ಟಿ ಹೊಸ ತಾಲೂಕುಗಳಾಗಿ ಘೋಷಣೆಯಾಗಿದ್ದವು. ಇವು ಹೆಸರಿಗುಂಟು, ಲೆಕ್ಕಕ್ಕಿಲ್ಲ ಎಂಬಂತಿವೆ. ಆಡಳಿತಾತ್ಮಕ ಕೆಲಸ ಜಾರಿಗೊಳಿಸಲು, ಕಚೇರಿ, ಪೀಠೊಪಕರಣಕ್ಕಾಗಿ ತಲಾ 10 ಲಕ್ಷ ಅನುದಾ ನವೂ ಬಿಡುಗಡೆ ಮಾಡಲಾಗಿತ್ತು. ಆ ಅನುದಾನದಲ್ಲಿ ತಹಸೀಲ್ದಾರ್‌ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆದರೆ, ವಾಸ್ತವದಲ್ಲಿ ತಾಲೂಕು ವ್ಯವಸ್ಥೆ ಇನ್ನೂ ಪೂರ್ಣ ಅನುಷ್ಠಾನಗೊಂಡಿಲ್ಲ.

ಕೇವಲ 18 ಗ್ರಾಮಗಳು
ಬಿಜೆಪಿ ಸರ್ಕಾರ ಅಧಿ ಕಾರದಲ್ಲಿದ್ದಾಗ ನೂತನ ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿದ್ದ ಬೀದ ರ್‌ನ ಹುಲಸೂರಿನ ಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. “ಏಳು ಗ್ರಾಪಂ ಒಳಗೊಂಡಂತೆ ಕೇವಲ 18 ಹಳ್ಳಿಗಳು ಮಾತ್ರ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ, ವಿಕೇಂದ್ರಿಕರಣ ದೃಷ್ಟಿಯಿಂದ ಇದು ಸೂಕ್ತವಲ್ಲ. ಎಂ.ಪಿ.ಪ್ರಕಾಶ ಆಯೋಗದ ವರದಿಯಂತೆ ಪರಿಪೂರ್ಣ ತಾಲೂಕು ರಚನೆ ಮಾಡಬೇಕು’ ಎಂಬ ಕೂಗು ಈಗಲೂ ಇದೆ.

ಅನುದಾನ ಸಿಗುತ್ತಿಲ್ಲ
ಎರಡು ದಶಕಗಳ ಹೋರಾಟ ಫಲವಾಗಿ ಎರಡು ವರ್ಷಗಳ ಹಿಂದಷ್ಟೇ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ ರಾಜ್ಯ ಸರ್ಕಾರ. ಅದಕ್ಕೆ ಮೂಲಸೌಲಭ್ಯ ಕಲ್ಪಿಸುವಲ್ಲಿ, ಅಗತ್ಯ ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಕೊಟ್ಟೂರು ತಾಲೂಕು ಅಭಿವೃದ್ಧಿಗೆ ಸಂಬಂಧಿ ಸಿದಂತೆ ಈವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕಂದಾಯ ಇಲಾಖೆಗಂತೂ ಸರ್ಕಾರ ಯಾವುದೇ ಅನುದಾನವನ್ನೂ ನೀಡಿಲ್ಲ.

ಕಟ್ಟಡದ್ದೇ ಚಿಂತೆ, ಬಾರದ ಅನುದಾನ
ಕಳೆದೆರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ಹೊಸ ತಾಲೂಕು ಗಳ ಸಾಲಿನಲ್ಲಿ ಸಿರವಾರ ಕೂಡಾ ಇದೆ. ತಾಲೂಕು ರಚನೆಯಾದಾಗ ಆ ಭಾಗದ ಜನರಲ್ಲಿ ಎಷ್ಟು ಖುಷಿಯಾಗಿತ್ತೋ ಈಗ ಅಷ್ಟೇ ಬೇಸರವೂ ಆವರಿಸಿದೆ. ನೂತನ ತಾಲೂಕಿಗೆ ಅಗತ್ಯ ಹಣಕಾಸಿನ ನೆರವು ಸಿಕ್ಕಿ ಲ್ಲ. ತಹಶೀಲ್ದಾರ್‌ ಒಬ್ಬರನ್ನು ಬಿಟ್ಟರೆ ಮತ್ಯಾವುದೇ ಇಲಾಖೆಗಳಿಗೆ ಕಾಯಂ ಅಧಿಕಾರಿಗಳಿಲ್ಲ. ಆಡಳಿತಾತ್ಮಕವಾಗಿ ಈ ಹಿಂದೆ ಹೇಗೆ ಜನ ದೂರದ ತಾಲೂಕಿಗೆ ಹೋಗಬೇಕಿತ್ತೋ ಅದೇ ಸನ್ನಿವೇಶ ಮುಂದುವರಿದಿದೆ. ತಹಸೀಲ್‌ ಕಚೇರಿಗೆ ಇಂದಿಗೂ ಸ್ಥಳಾಭಾವ ನೀಗಿಲ್ಲ.

ಕರಾವಳಿಯಲ್ಲಿ ಎಂಟು ತಾಲೂಕುಗಳ ನಿಜ ಸ್ಥಿತಿ
ಕರಾವಳಿಯಲ್ಲಿ ಎಂಟು ಹೊಸ ತಾಲೂಕುಗಳನ್ನು ಘೋಷಿಸಿ ಉದ್ಘಾಟಿಸಲಾಗಿದೆ. ಆದರೆ ಅನುದಾನ, ಸಿಬ್ಬಂದಿ ನೇಮಕ, ಅಗತ್ಯ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದಕ್ಕೆ ಸರಕಾರ ನಿರಾಸಕ್ತಿ ತೋರಿರುವು ದರಿಂದ ಹೊಸ ತಾಲೂಕುಗಳು ನಾಮಫಲಕಕ್ಕಷ್ಟೇ ಸೀಮಿತವಾಗಿದೆ. ಮೂಡುಬಿದಿರೆ, ಕಡಬ ಮತ್ತು ಮೂಲ್ಕಿ ತಾಲೂಕಿಗೆ ತಹಸೀಲ್ದಾರ್‌ ನೇಮಕವಾಗಿದೆ. ಮೂಡುಬಿದಿರೆ, ಕಡಬ ಮಿನಿವಿಧಾನಸೌಧಗಳಿಗೆ ಹಣ ಮಂಜೂರಾಗಿದ್ದರೆ, ಮೂಲ್ಕಿಗೆ ಜಾಗ ಗುರುತಿಸಲಾಗಿದೆ. ಉಳ್ಳಾಲ ತಾಲೂಕು ಘೋಷಣೆಯಾಗಿರುವುದು ಹೆಸರಿಗೆ ಮಾತ್ರ.ಉಡುಪಿ ಜಿಲ್ಲೆಯ ಹೊಸ ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಿಗೂ ತಹಸೀಲ್ದಾರ್‌ ನೇಮಕವಾಗಿ ಅಲ್ಪಸ್ವಲ್ಪ ಕೆಲಸ ನಡೆದದ್ದು ಬಿಟ್ಟರೆ ಬೇರೇನೂ ಆಗಿಲ್ಲ.

ತಹಸೀಲ್ದಾರರಿಗೂ ಶೌಚಾಲಯವಿಲ್ಲ!
ಧಾರವಾಡ ಜಿಲ್ಲೆಯಲ್ಲಿ ರಚನೆಯಾದ ಮೂರು ಹೊಸ ತಾಲೂಕುಗಳು ತ್ರಿಶಂಕು ಸ್ಥಿತಿಯಲ್ಲಿದ್ದು, ದುಃಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಳ್ನಾವರ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿಗೆ ಎರಡು ವರ್ಷ ತುಂಬಿದವು. ಇವು ಹೆಸರಿಗೆ ಮಾತ್ರ ತಾಲೂಕು ಎನಿಸಿಕೊಂಡಿದ್ದು, ಸಮರ್ಥವಾಗಿ ಆಡಳಿತ ಕೊಡುವಲ್ಲಿ ವಿಫಲವಾಗುತ್ತಿವೆ. ಸ್ವಂತ ಕಟ್ಟಡವಾಗುವುದು ದೂರದ ಮಾತು, ಕೊಟ್ಟಿರುವ ಬಾಡಿಗೆ ಕಟ್ಟಡಗಳಲ್ಲಿ ತಹಸೀಲ್ದಾರ್‌ಗಳು ಕುಳಿತು ಕೆಲಸ ಮಾಡಲಾರದಂತಹ ಸ್ಥಿತಿ ಇದೆ. ಅಣ್ಣಿಗೇರಿ ತಾಲೂಕಿನ ಕಚೇರಿ ಇರುವುದು ಅಣ್ಣಿಗೇರಿ ಪಟ್ಟಣದಿಂದ 4 ಕಿಮೀ ದೂರದ ವೆಂಕಟೇಶ್ವರ ಮಿಲ್‌ನಲ್ಲಿ. ಇದನ್ನೆ ದುರಸ್ಥಿ ಮಾಡಿಕೊಂಡು ಸದ್ಯಕ್ಕೆ ತಾಲೂಕು ಕೇಂದ್ರ ನಡೆಯುತ್ತಿದ್ದು, ಕಚೇರಿಯಲ್ಲಿ ಸ್ವತಃ ತಹಸೀಲ್ದಾರ್‌ಗೆ ಶೌಚಾಲಯವಿಲ್ಲ. ನೌಕರರು ಬಯಲು ಶೌಚಕ್ಕೆ ಹೋಗಬೇಕು. ಇದಕ್ಕೆ ಹೋಲಿಸಿದರೆ ಹುಬ್ಬಳ್ಳಿ ನಗರ ತಾಲೂಕು ಮಾತ್ರ ತುಸು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.

ನಿಲ್ಲದ ತಿರುಗಾಟ
ಎರಡು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕಂಪ್ಲಿ, ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ತಾಲೂಕು ಆಡಳಿತದ ಕಟ್ಟಡ ಆರಂಭಿಸಿ ತಹಶೀಲ್ದಾರ್‌ ಮತ್ತು ಸಿಬ್ಬಂದಿ ನಿಯೋಜಿಸಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಇಲಾಖೆಗಳು ಆರಂಭವಾಗದೆ ಅಗತ್ಯ ಕೆಲಸ ಕಾರ್ಯಗಳಿಗೆ ಹೊಸಪೇಟೆಗೆ ಅಲೆಯುವುದಕ್ಕೆ ಮಾತ್ರ ಬ್ರೇಕ್‌ ಬಿದ್ದಿಲ್ಲ.  20ಕ್ಕೂ ಹೆಚ್ಚು ತಾಲೂಕುಮಟ್ಟದ ಕಚೇರಿಗಳನ್ನು ಆರಂಭಿಸಬೇಕಿದೆ.

15 ಪ್ರಭಾರಿ ತಹಸೀಲ್ದಾರರು
ಕಾಯಂ ಸಿಬ್ಬಂದಿಗಳಿಲ್ಲ. ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇದು ಹಾವೇರಿ ಜಿಲ್ಲೆಯ ಹೊಸ ತಾಲೂಕು ರಟ್ಟಿಹಳ್ಳಿಯ ಸ್ಥಿತಿ. ಕಂದಾಯ ಇಲಾಖೆ ಕೆಲಸ ಹೊರತು ಪಡಿಸಿಉಳಿದೆಲ್ಲ ಕಾರ್ಯಗಳಿಗೆ ಜನರು ಹಿರೇಕೆರೂರನ್ನೇ ಅವಲಂಬಿಸಿದ್ದಾರೆ. ಒಂದೂವರೆ ವರ್ಷದಲ್ಲಿ 15 ಪ್ರಭಾರಿ ತಹಸೀಲ್ದಾರರು ಕಾರ್ಯನಿರ್ವಹಿಸಿದ್ದಾರೆ. 10 ತಹಸೀಲ್ದಾರರು ಪ್ರಭಾರಿಗಳಾಗಿದ್ದರೆ, ಇನ್ನುಳಿದ ಐವರು ಪರೀಕ್ಷಾರ್ಥವಾಗಿ ಬಂದ ಉಪವಿಭಾಗಾ ಕಾರಿ/ತಹಸೀಲ್ದಾರರು.

ಬೇಕಿದೆ ಕಾಯಕಲ್ಪ
ಐತಿಹಾಸಿಕ ಕಿತ್ತೂರು, ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಏಳು ವರ್ಷ ಗತಿಸಿದರೂ ಅಂದುಕೊಂಡಷ್ಟು ಕಾಯಕಲ್ಪ ಸಿಕ್ಕಿಲ್ಲ. ಇನ್ನೂ ಏಳೆಂಟು ಕಚೇರಿಗಳು ಕಿತ್ತೂರಿಗೆ ಸೇರ್ಪಡೆ ಆಗಿಲ್ಲ. ಹೀಗಾಗಿ ಸಾರ್ವಜನಿಕರು ಮೂಲ ತಾಲೂಕು ಬೈಲಹೊಂಗಲಕ್ಕೆ ಅಲೆದಾಡು ತ್ತಿದ್ದಾರೆ. ಈ ಭಾಗದಲ್ಲಿ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕೃಷಿ ಇಲಾಖೆ ಕಚೇರಿ ಅಗತ್ಯವಾಗಿ ಬೇಕಿದೆ.

ಗುಂಡು ಪಿನ್‌ ಕೊಡಿ!
ನಮ್ಮ ಕಚೇರಿಗೆ ಒಂದು ಬಂಡಲ್‌ ಬಿಳಿ ಹಾಳೆ, ಒಂದು ಗುಂಡು ಪಿನ್‌ ಬಾಕ್ಸ್‌ ಹಾಗೂ ಕಚೇರಿ ನಿರ್ವಹಣೆಗೆ ಒಂದಷ್ಟು ಅನುದಾನ ಕೊಡಿ! ಇದು 2017ರಲ್ಲಿ ಘೋಷಣೆಯಾದ ರಾಜ್ಯದ ಹೊಸ ತಾಲೂಕುಗಳಲ್ಲಿ ಒಂದಾದ ಲಕ್ಷ್ಮೇಶ್ವರ ತಾಲೂಕಿನ ತಹಸೀಲ್ದಾರ್‌ ಕಚೇರಿಯ ವ್ಯಥೆ. ಅಸ್ತಿತ್ವಕ್ಕೆ ಬಂದು ಎರಡು ವರ್ಷ ವಾ ದರೂ ಇಂದಿಗೂ ಎಲ್ಲದಕ್ಕೂ ಶಿರಹಟ್ಟಿ ತಾಲೂಕು ಬಳಿ ಕೈಯೊಡ್ಡುವ ಪರಿಸ್ಥಿತಿ ಇಲ್ಲಿಯದ್ದು.

ನೂರೆಂಟು ಕೆಲಸ ಬಾಕಿ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ರಚನೆಯಾಗಿ 2 ವರ್ಷವಾದರೂ, ಈವರೆಗೂ ತಾಪಂ ಕಚೇರಿಯನ್ನು ತೆರೆದಿಲ್ಲ. ತಾಪಂ ಸದಸ್ಯರ ಸಮಿತಿಯೂ ರಚನೆಯಾಗಿಲ್ಲ. ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳೇ ಹೆಚ್ಚುವರಿ ಜವಾಬ್ದಾರಿ ನಿಭಾಯಿ ಸುತ್ತಿದ್ದಾರೆ. ಮುಖ್ಯವಾಗಿ ತಾಪಂ ಕಚೇರಿ ಆರಂಭವಾದರೆ, ಉಳಿದ ಎಲ್ಲ ಇಲಾಖೆಗಳು ತಾವಾಗೇ ಚಾಲನೆ ಪಡೆದುಕೊಳ್ಳುತ್ತವೆ.

ಕಾಯಕಲ್ಪ ಯಾವಾಗ?
ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ನಾಡ ಕಚೇರಿಯನ್ನೇ ತಾಲೂಕು ಕಚೇರಿಯಾಗಿ ಮಾರ್ಪ ಡಿ ಸಲಾಗಿದೆ. ತಹಸೀಲ್ದಾರರು, ಶಿರಸ್ತೇದಾರ್‌, ರೆವಿನ್ಯೂ ಇನ್ಸ್‌ ಪೆಕ್ಟರ್‌, ಗ್ರಾಮ ಲೆಕ್ಕಿಗರನ್ನು ನೇಮಿಸಲಾಗಿದೆ. ಕಂದಾಯ ಇಲಾಖೆ ಹೊರತುಪಡಿಸಿದರೆ ಉಳಿದ ಯಾವುದೇ ಇಲಾಖೆಗಳ ಕಚೇರಿಗಳನ್ನು ಈವರೆಗೂ ತೆರೆಯಲಾಗಿಲ್ಲ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಅವರು, ಈವರೆಗೂ ಅಧಿಕಾರ ವಹಿಸಿಕೊಂಡಿಲ್ಲ.

ತಹಸೀಲ್ದಾರರಿಗೆ ಬೈಕೇ ಗತಿ
ವಿಜಯಪುರ ಜಿಲ್ಲೆಯ ಮೂಲ ಐದು ತಾಲೂಕುಗಳನ್ನು ವಿಭಜಿಸಿ, ಸರ್ಕಾರ ಹೊಸದಾಗಿ 7 ತಾಲೂಕು ಘೋಷಿತ್ತು. ಅಗತ್ಯ ಸಿಬ್ಬಂದಿ ನೇಮಕವಿಲ್ಲ, ಸೌಲಭ್ಯಗಳಿಲ್ಲ ಎಂಬ ಅಪಸ್ವರಗಳ ಮಧ್ಯೆಯೇ ಕೆಲವೆಡೆ, ಕಳೆದ ಒಂದು ವರ್ಷದಿಂದ ಅಧಿಕಾರ ವಹಿಸಿಕೊಂಡಿರುವ ತಹಸೀಲ್ದಾರ್‌ಗಳಿಗೆ ಕರ್ತವ್ಯ ನಿರ್ವಹಿಸಲು ವಾಹನಗಳೇ ಇಲ್ಲ. ಹೀಗಾಗಿ ಕೆಳ ಹಂತದ ಸಿಬ್ಬಂದಿ ಬೈಕ್‌ಗಳ ಮೇಲೆ ತಾಲೂಕು ಸುತ್ತುವ ಪರಿಸ್ಥಿತಿ ಇದೆ.

ನಾಮಕೆವಾಸ್ತೆ ತಾಲೂಕು
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ದೊರೆಯಿತು ಎಂಬಂತೆ ದಾವಣಗೆರೆ ಜಿಲ್ಲೆಯಲ್ಲಿ ನ್ಯಾಮತಿ, ತಾಲೂಕು ಕೇಂದ್ರವೇನೋ ಆಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ತಹಶೀಲ್ದಾರ್‌, ತಾಪಂ ಇಓ ಹಾಗೂ ಬೆಸ್ಕಾಂ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹೊರತು ಪಡಿಸಿದರೆ ಇತರೆ ಯಾವುದೇ ಇಲಾಖೆಯ ಅಧಿಕಾರಿ ತಾಲೂಕು ಕೇಂದ್ರದಲ್ಲಿಲ್ಲ. ಎಲ್ಲಾ ಇಲಾಖೆಯ ಕೆಲಸ ಕಾರ್ಯಗಳಿಗೆ ಜನರು ಈಗಲೂ ಹೊನ್ನಾಳಿಗೇ ಹೋಗಬೇಕಿದೆ.

ನಮ್ಮದ್ಯಾವ ತಾಲೂಕು?
ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹೊಸ ತಾಲೂಕು ರಚನೆಗೆ ರಾಜ್ಯ ಸರ್ಕಾರ ಜೀವ ತುಂಬಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿಗೂ ತಾಲೂಕು ಪಟ್ಟ ಸಿಕ್ಕಿದೆ. ಕಂದಾಯ ಇಲಾಖೆ ದಾಖಲೆಗಳು ಗೋಕಾಕದಿಂದ ಬಹುತೇಕ ವರ್ಗಾವಣೆಗೊಂಡರೂ ಇನ್ನೂ ಹಳೆಯ ದಾಖಲೆಗಳಿಗಾಗಿ ಗೋಕಾಕಕ್ಕೆ ಅಲೆದಾಡುವುದು ತಪ್ಪಿಲ್ಲ. ನಮ್ಮ ತಾಲೂಕು ಮೂಡಲಗಿಯೋ ಅಥವಾ ಗೋಕಾಕೋ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.

ಕಚೇರಿಗಳೇ ಇಲ್ಲ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ, ಜಿಪಂ ಉಪವಿಭಾಗ ಸೇರಿದಂತೆ ಅನೇಕ ಕಚೇರಿಗಳು ನಿರ್ಮಾಣ ಗೊಂಡಿಲ್ಲ. ಹಳೆಯ ದಾಖಲಾತಿಗಳಿಗಾಗಿ ಅಥಣಿಗೆ ಅಲೆದಾಡುವುದಂತೂ ಇಲ್ಲಿಯ ಜನರಿಗೆ ತಪ್ಪಿಲ್ಲ.

ಕಾಟಾಚಾರಕ್ಕಾಗಿ…
ಕಲಬುರಗಿ ಜಿಲ್ಲೆಯಲ್ಲಿ ರೂಪುಗೊಂಡ ನಾಲ್ಕು ನೂತನ ತಾಲೂಕುಗಳು ಕಾಟಾಚಾರಕ್ಕೆ ಅಸ್ತಿ ತ್ವಕ್ಕೆ ಬಂದಂತಾಗಿದೆ. ಸರ್ಕಾರಿ ಸೌಲಭ್ಯ ಪಡೆಯಲು ಹಳೆ ತಾಲೂಕುಗಳಿಗೆ ಅಲೆದಾ ಡುವಂತಾಗಿದೆ. ಹೊಸ ನಾಲ್ಕು ತಾಲೂಕು ಗಳಲ್ಲಿ ಕಚೇರಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ನಾಡ ಕಚೇರಿಗಳ ನಾಮಫಲಕ ಬದಲಾಯಿಸಿ ಅಲ್ಲೇ ತಹಶೀಲ್ದಾರ್‌ ಕಚೇರಿಗಳನ್ನು ಪ್ರಾರಂಭಿಸಲಾಗಿದೆ.

ಸಿಬ್ಬಂದಿ ನೇಮಕ ಮುಖ್ಯ
ಉತ್ತರ ಕನ್ನಡದ ದಾಂಡೇಲಿಯಲ್ಲಿ ತಹಶೀ ಲ್ದಾರ್‌ ಕಚೇರಿ ಕಟ್ಟಡಕ್ಕೆ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಹತ್ತು ಕೋಟಿ ರೂ.ಗಳನ್ನು ಹಿಂದಿನ ಸರ್ಕಾರ ಮಂಜೂರು ಮಾಡಿದೆ. ಇದರ ಶ್ರೇಯಸ್ಸು ಆರ್‌.ವಿ. ದೇಶಪಾಂಡೆ ಅವರಿಗೆ ಸಲ್ಲಬೇಕಿದೆ. ಇನ್ನು ಸರ್ಕಾರ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೀಡಬೇಕಿದೆ. ಆಗ ತಾಲೂಕು ಅಸ್ತಿತ್ವಕ್ಕೆ ಬಂದಿದ್ದಕ್ಕೆ ಅರ್ಥ ಬರುತ್ತದೆ.

ಎಲ್ಲಿವೆ ಕಚೇರಿಗಳು?
ತಾಲೂಕು ಎಂದು ಘೋಷಣೆಯಾದ 5 ವರ್ಷಗಳ ನಂತರ ಬೀದರ್‌ನ ಚಿಟಗುಪ್ಪದಲ್ಲಿ ವಿವಿಧ ಇಲಾಖೆ ಕಚೇರಿಗಳು ಕೇವಲ ನಾಮಫಲಕಕ್ಕೆ ಸೀಮಿತಗೊಂಡಿವೆ. ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ತೋಟಗಾರಿಕೆ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌, ಖಜಾನೆ, ಉಪನೋಂದಣಿ, ಎಪಿಎಂಸಿ, ಸರ್ಕಾರಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಆರ್‌ಸಿ ಸೇರಿದಂತೆ ಅನಕ ಕಚೇರಿಗಳು ಹಳೆಯ ಕಟ್ಟಡಗಳಲ್ಲಿ ಕೇವಲ ನಾಮಫಲಕಕ್ಕೆ ಸೀಮಿತಗೊಂಡಿವೆ.

ನಾಮಫಲಕಕ್ಕೆ ಸೀಮಿತ
ಕಮಲನಗರ ತಾಲೂಕು ಕೇಂದ್ರ ಅಧಿಕೃತ ಘೋಷಣೆಯಾಗಿ ಎರಡು ವರ್ಷಗಳು ಕಳೆದರೂ ಇಂದಿಗೂ ವಿವಿಧ ಇಲಾಖೆಗಳು ನೂತನ ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಉದ್ದೇಶಿತ ನೂತನ ತಾಲೂಕು ಎಂದು ಘೋಷಣೆಯಾದ ಮೇಲೆ ಆಮೆಗತಿಯಲ್ಲಿ ಕಚೇರಿಗಳು ಆರಂಭವಾಗುತ್ತಿವೆ. ಅನುದಾನದ ಕೊರತೆಯಿಂದ ಕಚೇರಿಗಳು, ಅಧಿಕಾರಿಗಳು, ಸಿಬ್ಬಂದಿಗಳ ನೇಮಕಾತಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಇರುವ ಕಚೇರಿಗಳಲ್ಲೂ ಮೂಲಭೂತ ಸೌಲಭ್ಯಗಳಿಲ್ಲ.

ತಪ್ಪದ  ಪರದಾಟ
ಅಭಿವೃದ್ಧಿ ಹಾಗೂ ಆಡಳಿತ ಜನರಿಗೆ ಸುಲಭವಾಗಲಿ ಕೈಗೆ ಸಿಗಲಿ ಎಂಬ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ರಚನೆಯಾದರೂ, ಇನ್ನೂ ಪರಿಪೂರ್ಣ ತಾಲೂಕಾಗಿಲ್ಲ. ಕಚೇರಿಗಳಿದ್ದರೂ ಸ್ವಂತ ಜಾಗ ಇಲ್ಲದೇ ಬಾಡಿಗೆ ಜಾಗಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಆಡಳಿತಾತ್ಮಕ ಕೆಲಸಗಳಿಗಾಗಿ ಜನರು ಚಿಕ್ಕೋಡಿಯನ್ನೇ ನೆಚ್ಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.