ಹೊಸ ವರ್ಷದ ಸಂಕಲ್ಪಗಳು: ಉದಯವಾಣಿ ಓದುಗರ ಪ್ರತಿಕ್ರಿಯೆಗಳು ಹೀಗಿವೆ…

ಹಳೆ ವರ್ಷ ಹೊಸ ವರ್ಷ ಹಿನ್ನೋಟ-ಮುನ್ನೋಟ : ಯೂತ್ ಹೇಳುವುದೇನು..?

Team Udayavani, Jan 2, 2020, 1:02 PM IST

new-teyear

ಹೊಸ ವರ್ಷ ಬಂದಿದೆ. ಹೊಸ ಹರುಷ ತಂದಿದೆ. ಹೊಸ ಚಿಂತೆ, ಯೋಚನೆ- ಯೋಜನೆ ಎಲ್ಲವೂ ಹೊಸತಾಗಿ ರೂಢಿಸಿಕೊಳ್ಳುವ ಸಮಯ ಮತ್ತೆ ಬಂದಿದೆ. ಹಳೆಯ ಗೋಡೆಗೆ ಹೊಸ ಕ್ಯಾಲೆಂಡರ್ ಬಂದಿದೆ. ಆದರೆ ಜೀವನ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ, ನೋವಿನ ದಿನಗಳನ್ನು, ಸೋಲಿನ ಹತಾಶೆಯನ್ನು ನೆನೆಯುತ್ತಾ ಕೂರುವ ನಿಂತ ನೀರಲ್ಲ. ಜೀ’ವನ’  ದಲ್ಲಿ ಸಿಗುವ ಆತ್ಮೀಯರ ಹೆಜ್ಜೆ, ಬಿಟ್ಟು ಹೋದವರ ನೆರಳು ಹಾಗೂ ಏನೋ ಒಂದನ್ನು ಮಾಡಬೇಕೆಂದು ದಿನದೂಡುತ್ತಾ ವರ್ಷಗಳನ್ನು ಸವೆಯುವ ನಮಗೆ ಹೊಸತಾಗಿ ಮತ್ತೆ ಹಳೆಯದನ್ನು ಸ್ಮರಿಸಿಕೊಂಡು ಕಾಲದ ಸಂಘರ್ಷದೊಂದಿಗೆ ಸೆಣೆಸಾಟ ನಡೆಸುವ ಹೊತ್ತು ಮತ್ತೆ ಬಂದಿದೆ. ಈ ಸಂಘರ್ಷದಲ್ಲಿ ಸೋತರೂ ಪರವಾಗಿಲ್ಲ ಆದರೆ ತೀರ ಹಿಂದೆ ಬಿದ್ದು ಸೋಲುವುದು ಬೇಡ. ಕೂರಗುವುದು ಬೇಡ, ಕುಗ್ಗವುದು ಬೇಡ.

ಈ ಹಿನ್ನಲೆಯಲ್ಲಿ ಉದಯವಾಣಿ 2019ರ ವರ್ಷದಲ್ಲಿ ವೈಯಕ್ತಿಕ ಜೀವನದಲ್ಲಿ ಆದ (ಯಾವುದೇ ಕ್ಷೇತ್ರದಲ್ಲೂ ಆಗಿರಬಹುದು) ಎಡವಟ್ಟು/ತಪ್ಪೊಂದು 2020 ರಲ್ಲಿ ಮರುಕಳಿಸಲೇಬಾರದು..ಅದು ಯಾವುದು…? 2020 ರಲ್ಲಿ ನಾನು ಪಡೆದೆ ತೀರುತ್ತೇನೆ ಎಂಬ ಸಕರಾತ್ಮಕ ಸಂಗತಿ ಯಾವುದು..? ಎಂದು ಓದುಗರಲ್ಲಿ ಕೇಳಿತ್ತು, ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಂತಿವೆ.

ನನ್ನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ‌ ಅಮ್ಮನಿಗೆ ನೀಡಿದ ಇಂಜೆಕ್ಷನ್ ಅವರ ಪ್ರಾಣಕ್ಕೆ ಕುತ್ತು ತರುವ ‌ಹಂತಕ್ಕೆ ಬಂದಿತ್ತು. ಹೇಗೋ ನಮ್ಮ ‌ಪ್ರಾರ್ಥನೆಗೆ ದೇವರು ಓಗೊಟ್ಟು ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಎಲ್ಲ ಹುಡುಗಿಯರು ತಾಯಿ ಅಂದರೆ ತುಂಬಾ ಇಷ್ಟ ಪಡುತ್ತಾರೆ. ‌ಆದರೆ ನಾನು ಮೂರು ತಿಂಗಳ ಮಗುವಿನಿಂದಲೇ ಅಜ್ಜಿ ಮನೆಯಲ್ಲಿ ‌ಬೆಳೆದ ಕಾರಣ ಅಮ್ಮನ ಜತೆ ಅಷ್ಟೊಂದು ಸಾಮೀಪ್ಯ ಸಿಕ್ಕಿರಲಿಲ್ಲ. ಆದರೆ ಅಮ್ಮನಿಗೆ ನನ್ನ ಮೇಲೆ ತುಂಬಾ ‌ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ ಅದನ್ನು ಈಡೇರಿಸುವುದು ನನ್ನ ಪ್ರಥಮ ಗುರಿ.

-ದೀಪ್ತಿ ಮಡಿಕೇರಿ

ನಾನು 2019ರಲ್ಲಿ ನಿರ್ಧಾರ ಮಾಡಿದ್ದೆ. ಅದೇನೆಂದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಯಾರಿ ಮಾಡಿಕೊಳ್ಳಲೇಬೇಕು ಎಂದು. ಅದಕ್ಕಾಗಿ ಚೆನ್ನಾಗಿ ಓದಬೇಕು ಎಂದು ನಿರ್ಧರಿಸಿದ್ದೆ. ಆದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿಲ್ಲ. ವರ್ಷದ ಕೊನೆಯ ಹೊತ್ತಿಗೆ ಇದರ ಪಶ್ಚಾತ್ತಾಪ ಕೂಡ ಕಾಡುತ್ತಿದೆ.  ಆದರೆ 2020 ರಲ್ಲಿ ಈ ಅವಕಾಶ ಕಳೆದುಕೊಳ್ಳಲಾರೆ. ನನ್ನ ಭವಿಷ್ಯ ನನಗೆ ಮುಖ್ಯ. ಹಾಗಾಗಿ ಆಸಕ್ತಿ ವಹಿಸಿ ಓದುವೆ.

-ಲೋಲಾಕ್ಷಿ ಎಂ. ಆಲಂಕಾರು

ನಾನು ಪರೀಕ್ಷೆಯಲ್ಲಿ ಇನ್ನೊಬ್ಬರನ್ನು‌ ನೋಡಿ ಉತ್ತರ ಬರೆದಿದ್ದೆ. ಇದಕ್ಕೆ ಕಾರಣ ನಾನು‌ ಕೆಲವೊಂದು ಸಬ್ಜೆಕ್ಟ್  ಸರಿಯಾಗಿ ಓದಿರಲಿಲ್ಲ. ಸ್ಟಡಿ ಒತ್ತಡವು ಇತ್ತು. ಈ ಬಗ್ಗೆ ನನಗೆ ಅಸಹ್ಯ ಅನಿಸಿತ್ತು. ಈ ತಪ್ಪು ಮತ್ತೆ ಮರುಕಳಿಸದಂತೆ ಹೊಸ ವರ್ಷದಲ್ಲಿ ಎಚ್ಚರಿಕೆ ವಹಿಸಿ ಚೆನ್ನಾಗಿ ಅಭ್ಯಾಸ ಮಾಡುವೆ. ಉತ್ತಮ ಅಂಕ ಗಳಿಸುವೆ.

-ಸಿದಾರ್ಥ ಗೋಕಾಕ್

ನನಗೆ ಸಿಟ್ಟು ಮತ್ತು ಬೇಜಾರು ಆಗುವುದು ಹೆಚ್ಚು. ಯಾರನ್ನಾದರೂ ಹೆಚ್ಚು ಹಚ್ಚಿಕೊಂಡಿದ್ದು ಅವರಿಂದ ಸಣ್ಣ ತಪ್ಪುಆದರೂ ದೊಡ್ಡದಾಗಿ ಕಾಡುತ್ತದೆ. 2019 ರಲ್ಲಿ ಹಲವರಿಂದ ಬೇಜರಾಗಿ ಒಬ್ಬಳೇ ಅತ್ತಿದ್ದು ಉಂಟು. ಹಾಗಾಗಿ ಹೊಸ ವರ್ಷದಲ್ಲಿ ಯಾರನ್ನು ಹೆಚ್ಚು ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೂ ಅವರಿಂದ ಬೇಜರಾದರೂ ಮನಸ್ಸಿಗೆ ತೆಗೆದುಕೊಳ್ಳಬಾರದು. ನನ್ನ ಮನಸ್ಸು ನನ್ನ ಸೀಮಿತದಲ್ಲಿ‌ ಇರಬೇಕು. ನನ್ನ ಗಮನ ಏನಿದ್ದರೂ ನಾನು ಸಾಧಿಸುವ ಗುರಿಯೆಡೆಗೆ ಇರಬೇಕು.

-ಸುವರ್ಣ ಹೆಗ್ಡೆ ಉಜಿರೆ

ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ರಿಜಿಸ್ಟರ್ ನಂಬರನ್ನು ತಪ್ಪಾಗಿ ಬರೆದು ಸುಮಾರು ಹದಿನೈದು ನಿಮಿಷಗಳ ಕಾಲ ಅದನ್ನು ಯಾವುದೇ ಅಧ್ಯಾಪಕರಿಗೂ ತಿಳಿಸದೆ ಉತ್ತರ ಬರೆದೆ. ಮುಂದೆ ಒಂದು ಅಧ್ಯಾಪಕಿಗೆ ಅದನ್ನು ತಿಳಿಸಿದಾಗ ನನಗೆ ಪುನಃ ಆರಂಭದಿಂದ ಪರೀಕ್ಷೆ ಬರೆಯುವಂತೆ ಸೂಚಿಸಿದರು. ಕೊನೆಗೆ ಸಮಯದ ಅಭಾವ ತುಂಬಾ ಕಾಡಿತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಮುಂದೆ ಎಂದೂ‌‌‌ ಈ ತರದ  ಎಡವಟ್ಟು ಮರುಕಳಿಸದಂತೆ ಅಲ್ಲೇ ಸಂಕಲ್ಪ ತೆಗೆದುಕೊಂಡೆ.

-ಸ್ವಾತಿ ನಾಯಕ್ ಮೊಗೇರು

ನಾನು 2019ರಲ್ಲಿ ನನ್ನ ರಜೆಯ ದಿನಗಳನ್ನು ಹೆಚ್ಚಾಗಿ ಮೊಬೈಲ್ ಜೊತೆ ಕಳೆಯುತ್ತಿದ್ದೆ. ಹಾಗಂತ ಓದಿನಲ್ಲಿ ಏನೂ ಹಿಂದೆ ಉಳಿಯುತ್ತಿರಲಿಲ್ಲ. ಪರೀಕ್ಷೆ ಹತ್ತಿರ ಬರುವಾಗ ಓದಲು ಶುರು ಮಾಡುತ್ತಿದೆ. ಡಿಸ್ಟಿಂಕ್ಷನ್ ಮಾರ್ಕ್ಸ್ ಬರುತ್ತಿತ್ತು. ಮೊಬೈಲ್ ನ ಬಳಕೆ ಕಡಿಮೆ ಮಾಡುತ್ತಿದ್ದರೆ ಇನ್ನೂ ಹೆಚ್ಚು ಅಂಕಗಳನ್ನು ಪಡೆಯಬಹುದಿತ್ತು ಎಂದು ಅನಿಸಿತ್ತು.  ಆದ್ದರಿಂದ 2020ರಲ್ಲಿ ಈ ತಪ್ಪನ್ನು ಮರುಕಳಿಸಲೇಬಾರದು. ಅವತ್ತಿನ ಪಾಠ ಅವತ್ತೇ ಓದಿ ಮುಗಿಸಬೇಕು ಹಾಗೂ ನನ್ನ ರಜಾ ದಿನಗಳನ್ನು ಕುಟುಂಬದವರ ಜೊತೆ, ಒಳ್ಳೆಯ ವಿಚಾರಗಳನ್ನು ಕಲಿತುಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಸಂಕಲ್ಪ ಮಾಡಿದ್ದೇನೆ. 2020 ರಲ್ಲಿ  ನಾನು ಇನ್ನೂ  ಹೆಚ್ಚು ಶ್ರಮ ವಹಿಸಿ ನನ್ನ ಕೆಲಸಗಳನ್ನು ಮಾಡಬೇಕು ಮತ್ತು ಜೀವನದಲ್ಲಿ ಯಾವಾಗಲು ತಿಳಿದಿರದ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ  ಬ್ಯುಸಿ ಆಗಿರಬೇಕು. ಎಲ್ಲರ ಪ್ರೀತಿ ವಿಶ್ವಾಸ ಸಂಪಾದಿಸಬೇಕು. ಇದನ್ನು ನಾನು 2020ರಲ್ಲಿ  ಪಡೆದೆ ತೀರುತ್ತೇನೆ.

-ಲಾವಣ್ಯ. ಎಸ್

ಸಂತ  ಫಿಲೋಮಿನಾ  ಕಾಲೇಜು ದರ್ಬೆ ಪುತ್ತೂರು

ಪ್ರತಿಬಾರಿಯು ನಾನು ಬಸ್ಸಿನಲ್ಲಿ ಕೂತಾಗ ಅಥವಾ ಹೊರಗೆ ಯಾರೇ ಅಪರಿಚಿತರು ಮಾತನಾಡಿಸಿದಾಗ ಅವರಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಅವರು ಅಪರಿಚಿತರು, ಅವರಿಂದೇನಾದರು ಅಪಾಯವಾಗಬಹುದೆಂಬ ಅನುಮಾನದಿಂದಲೇ ವರ್ತಿಸುತ್ತಿದ್ದೆ. ಆದರೆ ಈ ವರ್ಷ ಅದೊಂದು ದಿನ ಬಸ್ಸಿನಲ್ಲಿ ನನ್ನ ಪಕ್ಕ ಕೂತವರೊಂದಿಗಿನ ಸಂಭಾಷಣೆ ನನಗೆ ಹಲವಾರು ಜೀವನಪಾಠಗಳನ್ನು ಕಲಿಸಿಕೊಟ್ಟಿತು. ಯಾರದ್ದೊ ಕಷ್ಟಗಳನ್ನು ಕೇಳಿ ಅವರಿಗೆ ನನ್ನಿಂದಾದಷ್ಟು ಸಂತೈಸಿದ್ದೆ. ನನ್ನ ಮಾತುಗಳಿಗೆ ಅವರೂ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದ್ದರು. ಆಗ, ನಾನು ಇಷ್ಟು ದಿನ ಯಾರೊಂದಿಗೂ ಕಿಂಚಿತ್ತೂ ಬೇರೆಯದೇ ಇದ್ದದ್ದಕ್ಕೆ ಬೇಸರಪಟ್ಟಿದ್ದೆ.

ಎಲ್ಲರ ಸಂಕಷ್ಟಗಳಿಗೂ ನಮ್ಮ ಬಳಿ ಪರಿಹಾರಗಳಿರುವುದಿಲ್ಲ, ಆದರೆ ನಾವು ಅವರ ಕಷ್ಟಗಳನ್ನು ಕೇಳುವ ತಾಳ್ಮೆ ಹೊಂದಿದ್ದರು ಸಾಕು, ಅಂತವರಿಗದೆಷ್ಟೋ ಪಾಲು ಸಾಂತ್ವನ ಸಿಕ್ಕಿರುತ್ತದೆ. ನಮ್ಮ ಕಷ್ಟಗಳನ್ನೂ ಕೇಳುವ ಕಿವಿಗಳಿವೆ ಎಂದು ಸಮಾಧಾನ ಪಡೆದುಕೊಂಡಿರುತ್ತಾರೆ. ಇದು ಈ ವರ್ಷ ನಾನು ಕಲಿತ ಬಹುದೊಡ್ಡ ಜೀವನ ಪಾಠ. ಅಂದಿನಿಂದ ಯಾರೇ ನನ್ನೆಡೆಗೆ ಆತ್ಮೀಯ ನಗೆ ಬೀರಿ ಮಾತನಾಡಿಸಿದಾಗ ನಾನೂ ಅವರೊಂದಿಗೆ ಮಾತನಾಡಿ ಬಾಂಧವ್ಯವನ್ನು ಬೆಸೆಯಲು ಯತ್ನಿಸುತ್ತೇನೆ. ಈ ಪರಿಪಾಠವನ್ನು ಎಂದಿಗೂ ಮುಂದುವರಿಸಲು ಇಚ್ಛಿಸಿದ್ದೇನೆ.

-ಇಂಚರಾ ಜಿ.ಜಿ ಉಜಿರೆ

ನಾನು MSW ವಿದ್ಯಾರ್ಥಿ. ನಮಗೆ ವಾರದಲ್ಲಿ ಎರಡು ದಿನ ಕ್ಷೇತ್ರ ಕಾರ್ಯ ಅಧ್ಯಯನ ಇರುತ್ತೆ ಮತ್ತು ಅದರ ಬಗ್ಗೆ ರಿಪೊರ್ಟ್ ಬರೆದು ವಾರದಲ್ಲಿ ಒಪ್ಪಿಸಬೇಕಾಗುತ್ತೆ ಆದರೆ ನಾನು ಸರಿಯಾದ ಸಮಯಕ್ಕೆ ರಿಪೊರ್ಟ್ ಬರೆಯದೆ,ಅದರ ಬಗ್ಗೆ ಬೆಜವಾಬ್ದಾರಿ  ತೋರಿ ಕೊನೆಗೆ ವೈವಾ ಸಮಯಕ್ಕೆ ತುಂಬಾನೇ ಕಷ್ಟ ಅನುಭವಿಸಿದ್ದೆ. ನಮ್ಮ 2nd sem 2020 ಹೊಸ ವರ್ಷದೊಂದಿಗೆ ಆರಂಭವಾಗುತ್ತಿದೆ, ಆದ್ದರಿಂದ ಇನ್ನೂ ಮುಂದ ಅಂತಹ ತಪ್ಪು ಮಾಡದೇ, ಸರಿಯಾದ ಸಮಯಕ್ಕೆ ರಿಪೊರ್ಟ್ ಬರೆದು ಒಪ್ಪಿಸಬೇಕು ಎಂದು ನಿರ್ಧಾರ ಮಾಡಿದ್ದೇನೆ.

-ಗಣೇಶ್.ಪಿದೋಳ್ಪಾಡಿ

ನಾನು ರಂಗಭೂಮಿಯಲ್ಲಿ ನನ್ನನು ನಾನು ತೊಡಗಿಸಿಕೊಂಡಿದ್ದೆ, 2019ರಲ್ಲಿ ನಮ್ಮ ತಂಡದ ನಾಟಕ National school of drama ,Delhi (Theater Olympic)ಗೆ ಆಯ್ಕೆ ಆಗಿತ್ತು. ಅದರಲ್ಲಿ ನಾನು ಮುಖ್ಯ ಪಾತ್ರವಾಗಿದ್ದೆ.  ಆ ಸಮಯದಲ್ಲಿ ನಾನು ಎಲ್ಲರಂತೆ ಪ್ರೀತಿಗೆ ಮಾರುಹೋಗಿದ್ದೆ, ಆ ಹುಡುಗ ದೆಹಲಿಗೆ ಹೋಗಬೇಡ ಅಂತ ಆರ್ಡರ್  ಮಾಡಿದ. ಪ್ರೀತಿ ಸತ್ಯ, ನನ್ನ ಮೇಲೆ ಆತನಿಗೆ ತುಂಬಾ ಪ್ರೀತಿ ಅಂತ ನಂಬಿ, ಸಿಕ್ಕ ದೊಡ್ಡ ಅವಕಾಶವನ್ನು ಕೈ ಬಿಟ್ಟೆ. ಆಗ ಅದರ ಮೌಲ್ಯ ನನಗೆ ಗೊತ್ತಾಗಲಿಲ್ಲ. ನಂತರ ತುಂಬಾ ಪಶ್ಚಾತ್ತಾಪ ಆಯ್ತು. ಮುಂದೆ ಯಾವತ್ತಿಗೂ ಸಿಕ್ಕ ಅವಕಾಶವನ್ನು ಕೈ ಬಿಡಬಾರದು ಎಂದು ಅಂದೇ ನಿರ್ಧರಿಸಿದ್ದೆ.  ಹಾಗೆ ನಮ್ಮ ಜೀವನದ ನಿರ್ಧಾರವನ್ನು ಬೇರೆಯವರ ಕೈಗೆ ನೀಡಬಾರದು.  ಓದುವ ಈ ಸಮಯದಲ್ಲಿ ಪ್ರೀತಿ ಎಂದು ಹೋಗುವುದು ತಪ್ಪು. ಇದರಿಂದ ನಮ್ಮ ಹೆತ್ತವರಿಗೆ ಬಹಳ ನೊಂದುಕೊಳ್ಳುತ್ತಾರೆ ಎಂದು ಅರಿವಾಗಿದೆ ನನಗೆ.

-ಚೈತ್ರ ಉಡುಪಿ

2019ರ ವರ್ಷ ತುಂಬಾ ನೆನಪುಗಳೊಂದಿಗೆ ಜೀವನದ ಪಾಠವನ್ನು ಕಲಿಸಿಕೊಟ್ಟಿದೆ. ಮನುಷ್ಯನಿಗೆ ನಂಬಿಕೆ ತುಂಬಾ ಮುಖ್ಯ ಆದರೆ ನನ್ನ ಜೀವನದಲ್ಲಿ ನಾನು ಅತಿಯಾಗಿ ನಂಬಿದವರಿಂದ ಮೋಸಹೋದೆ, ನಾವು ಕೆಲವೇ ಕೆಲವು ವ್ಯಕ್ತಿಗಳಿಗೆ ಪ್ರಾಮುಖ್ಯತೆಯನ್ನು  ನೀಡಲು ಹೋಗಿ ನಮ್ಮನ್ನು ಪ್ರೀತಿಸುವವರನ್ನು ನಿರ್ಲಕ್ಷಿಸಿಸುತ್ತೇವೆ ಎಷ್ಟೋ ಬಾರಿ ನಮಗೆ ತಿಳಿಯದೆ ನಾವು ನಂಬಿದವರಿಂದಲೇ ಸಮಸ್ಯೆಗೆ ತುತ್ತಾಗಿ ಜೀವನವನ್ನು ಹಾಳುಮಾಡಿಕೊಂಡು ಪಶ್ಚಾತ್ತಾಪ ಪಡುತ್ತೇವೆ. ನಾನು 2019 ರಲ್ಲಿ ಕಲಿತ ಜೀವನ ಪಾಠ ಇದುವೇ. ನಮ್ಮ ಜೀವನದಲ್ಲಿ ಯಾರು ಯಾರಿಗೂ ಶಾಶ್ವತವಲ್ಲ, ಅತಿಯಾದ ನಂಬಿಕೆ ಒಳ್ಳೆಯದಲ್ಲ ಅವರವರ ಅಗತ್ಯಗಳಿಗಾಗಿ ಪ್ರತಿಯೊಬ್ಬರು ಬದುಕುತ್ತಾರೆ.

ಕಳೆದ ವರ್ಷ ಜೀವನದಲ್ಲಿ ಹೋರಾಟವೇ ಹೆಚ್ಚಾಗಿತ್ತು. ಆದರೂ ಈ ಬಾರಿ ಬದುಕು ಹೊಸ ಅವಕಾಶವನ್ನು ನೀಡಿದೆ ಅದರಂತೆ ನನ್ನ  ಬದುಕಿನ ಎಲ್ಲಾ ಕ್ಷಣದಲ್ಲಿಯೂ ಜೊತೆಗಿದ್ದ ತಾಯಿಯ ಆಸೆಯಂತೆ ನಾನು ಶಿಕ್ಷಕಿ ಆಗಬೇಕೆಂದು ಓದುತ್ತಿದ್ದೇನೆ. ಗುರಿಯನ್ನು ಒಳ್ಳೆ ರೀತಿಯಾಗಿ ತಲುಪುತ್ತೇನೆ ಎಂಬ ಭರವಸೆ ನನಗಿದೆ.

-ಸುಶ್ರಾವ್ಯ.ಎನ್.ಎ

ನಡುಮುಟ್ಲು ಮನೆ ಸುಳ್ಯ

ನನಗೆ 2019 ವರ್ಷ ಬಹು ಬೇಗನೇ ಕಳೆದು ಹೋಯಿತು ಅನ್ನಿಸಿತ್ತು. ಉತ್ತಮ  ಅನುಭವಗಳು ಮಾತ್ರ ನೆನಪಾಗಿ ಉಳಿದಿದೆ. ಕುಂದಾಪುರ ಕಾರ್ಟೂನ್ ಹಬ್ಬ. ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆಯ 3 ದಿನದ ಪ್ರತಿಭಾ ಪ್ರದರ್ಶನದೊಂದಿಗೆ..ಹಲವು ಕಾರ್ಯಕ್ರಮ. ಈ  ವರ್ಷ ಸಿಕ್ಕಿರುವ ಅವಕಾಶಗಳು. ಹೊಸ ಗೆಳೆಯರು, ಉದಯವಾಣಿ ಸ್ಟೂಡೆಂಟ್ ಗ್ರೂಪ್. ಹೀಗೆ 2019ರ ವರ್ಷ ಚೆನ್ನಾಗಿತ್ತು. 2020ರ ವರ್ಷದಲ್ಲಿ ಇನ್ನಷ್ಟು ನನ್ನನ್ನು ನಾನು  ಉತ್ತಮ ರೀತಿಯಲ್ಲಿ ರೂಪಿಸಬೇಕಿದೆ. ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಈ ವರ್ಷ ರಾಜ್ಯದಲ್ಲಿ  ಯಾವುದೇ  ಸಮಸ್ಯೆಗಳು ಸಂಭವಿಸಬಾರದು. ಉತ್ತಮ  ಸಮಾಜದ ನಿರ್ಮಾಣವಾಗಲಿ ಸಾಮರಸ್ಯ ಜೀವನ ನಮ್ಮದಾಗಲಿ.

ಶರಣ್ಯ ಕೋಲ್ಚಾರ್

ನಾನು ಕಾಲೇಜಿನಲ್ಲಿ ಒಂದೆರಡು ದಿನಗಳು ಮಾತ್ರ ಬಹಳ ಉತ್ಸುಕತೆಯಿಂದ  ಕಂಪ್ಯೂಟರ್ ಲ್ಯಾಬ್ ಗೆ ಹೋಗಿ ಟೈಪಿಂಗ್ ಕಲಿತಿರುವೆ. ಮತ್ತೆ ಲ್ಯಾಬ್  ಕಡೆ ಸುಳಿದಿರಲಿಲ್ಲ. ಹೀಗಾಗಿ ಕಲಿತ ಅಲ್ಪ ಸ್ವಲ್ಪ ಟೈಪಿಂಗ್ ಜ್ಞಾನ ಕೂಡ  ಮರೆತು ಹೋಗಿತ್ತು. ಹೀಗಾಗಿ  ನಮಗೆ ಇಂಟರ್ನ್ ಶಿಪ್ ಮಾಡುವಾಗ  ಬಹಳ ಕಷ್ಟಪಡಬೇಕಾಗಿ ಬಂದಿತು.  ಪ್ರತಿಯೊಂದು ಭಾರೀ  ಮಾಧ್ಯಮದಲ್ಲಿ ದಲ್ಲಿ ಟೈಪಿಂಗ್ ವರ್ಕ್ ಕೊಟ್ಟಾಗ ಸಮೀಪವಿದ್ದವರ ಬಳಿ ಕೇಳಬೇಕಾದ ಅನಿವಾರ್ಯತೆಯಿತ್ತು. ದಿನಕಳೆದಂತೆ ಅವರ ಬಳಿ ಪ್ರತಿನಿತ್ಯ ಕೇಳುವುದು ಇರಿಸುಮುರಿಸಾಗತೊಡಗಿತು. ಹೀಗಾಗಿ 2020 ರಿಂದ  ಪ್ರತಿದಿನವು ಸಂಜೆ ಕಾಲೇಜಿನ ಕಂಪ್ಯೂಟರ್ ಲ್ಯಾಬ್ ಗೆ ಹೋಗಿ ಟೈಪಿಂಗ್ ಕಲಿಯಬೇಕೆಂದು ಕೊಂಡಿದ್ದೇನೆ.

ನೀತಾ ರವೀಂದ್ರ

 ಕರ್ಮಲ  ಪುತ್ತೂರು ವಿವೇಕಾನಂದ ಕಾಲೇಜು  ಪುತ್ತೂರು

ಅತಿಯಾಗಿ ಕೋಪಿಸಿಕೊಳ್ಳುವುದು, ಅತಿಯಾದ ಹಠ, ಕೆಲವೊಂದು ವಿಷಯದಲ್ಲಿ ಸ್ವಾರ್ಥಿಯಾಗಿರುವುದು, ಗೇಲಿ ಮಾಡಿ ನಗುವ ಹವ್ಯಾಸ ಇವು ನನ್ನಲ್ಲಿರುವ ಋಣಾತ್ಮಕ ಅಂಶಗಳು. ಇವುಗಳನ್ನೆಲ್ಲ ಈ ವರ್ಷ ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವುದು ನನ್ನ ಸಂಕಲ್ಪವಾಗಿದೆ ಹಾಗೂ ಈ  ವರ್ಷ ಪ್ರತಿಯೊಂದು ಕ್ಷಣವನ್ನು ಆನಂದಿಸಿ, ಜೀವನ ಸಾಗಿಸಬೇಕೆಂಬ ಆಸೆ ಇದೆ.

-ಪಲ್ಲವಿ.ಕೆ ಕಲ್ಮಡ್ಕ

ನಾನೊಬ್ಬ ಸಾಮಾನ್ಯ  ರಂಗಭೂಮಿ ಕಲಾವಿದ. ಡಿಗ್ರಿ ಕಲಿತಿದ್ರು ಬಿಡುವಿನ ಸಮಯ ಅಂದರೆ ರಜಾದಿನ ಮನೆಯವರ ಪ್ರೋತ್ಸಾಹದಿಂದ ಹಲವು ಶಾಲೆಗಳಿಗೆ ತೆರಳಿ ಯಾವುದೇ ಫಲಾಪೇಕ್ಷೆಗಳಿಲ್ಲದೆ  ನೃತ್ಯ, ಪ್ರಹಸನ, ಇತರೆ  ಕಲೆಗಳನ್ನು ಕಲಿಸುವ ಮೂಲಕ ಕಿರಿಯ ವಯಸ್ಸಿನಲ್ಲೇ ಹಲವಾರು ಶಿಷ್ಯರನ್ನು ಪಡೆದಿದ್ದೇನೆ ಎಂಬ ಹೆಮ್ಮೆ ನನಗಿದೆ. ಮತ್ತು ನನ್ನ ಶಿಕ್ಷಕರಿಂದ ಬಹುಮುಖ ಪ್ರತಿಭೆ ಎಂದು ಕರೆಸಿಕೊಂಡಿದ್ದೇನೆ.

ಆದರೆ ನನ್ನೊಳಗೆ ನಾ ನೋಡಿದರೆ ನನಗೆ ಈ ಸಾಧನೆ ಏನೂ ಅಲ್ಲ. ನಾನು ಇನ್ನು ಹೆಚ್ಚು ಕಲಿಬೇಕು ಎಲ್ಲದಕ್ಕೂ ಸೈ ಅನಿಸಿಕೊಳ್ಳಬೇಕು  ಅನ್ನೋದು ನನ್ನಾಸೆ.  ಆದರೆ ಈ ವಿಚಾರದಲ್ಲಿ  ತುಂಬಾ ನೋವು ಅನುಭವಿಸಿದ್ದೇನೆ. ಕಾರಣ ಏನೆಂದರೇ ಕಲೆಯನ್ನು ಕಲಿಯ ಹೊರಟರು ಅರ್ಧದಲ್ಲಿ ಬಿಡುವ, ಅವಕಾಶಗಳನ್ನು ಕೈ ಚೆಲ್ಲುವ ಪರಿಸ್ಥಿತಿ ಇತ್ತೀಚಿನವರೆಗೂ ಇತ್ತು. ಯಾಕೆಂದರೆ ನನ್ನ ಆರ್ಥಿಕ ಸ್ಥಿತಿ ಮತ್ತು ಕೆಲವರು ಎಲ್ಲಾ ವಿಚಾರದಲ್ಲೂ ನನ್ನನ್ನು ಹೀಯಾಳಿಸುತಿದ್ದರು. ಈಗ ನನ್ನ ಹೀಯಾಳಿಸುತ್ತಿದ್ದವರೂ ಸಹ ನನಗೆ ಸಹಕರಿಸುತ್ತಾರೆ. 2020 ವೇಳೆಗೆ ನಾನೊಬ್ಬ ಗುರುತಿಸಿಕೊಳ್ಳುವ ಕಲಾವಿದನಾಗಿ ಬೆಳೆಯಬೇಕು, ಇನ್ನೊಬ್ಬರನ್ನು ನನ್ನಂತೆ ಕಲಾವಿದನಾಗಿ ಮಾಡಬೇಕು ಅನ್ನೋದು ನನ್ನಾಸೆ ಆಸೆ.

-ರಾಕೇಶ್ ಆಚಾರ್ಯ ಬನಾರಿ

ಅಂತಿಮ ಪದವಿ ವಿದ್ಯಾರ್ಥಿ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು

ನಾನೊಬ್ಬ ಯಕ್ಷಗಾನ ಕಲಾವಿದ. 2019ರಲ್ಲಿ ಯಕ್ಷಗಾನದ ಮೇಲೆ ನನ್ನ ಆಸಕ್ತಿ ಅತಿಯಾಗಿತ್ತು. ಯಾಕೆಂದರೆ ಮನೆಯವರ ಮಾತನ್ನು ಕೇಳದೇ ಮಿತ್ರರ ಹಿತೈಷಿಗಳ ಮಾತನ್ನು ಕೇಳದೇ  ವೃತ್ತಿಪರ ಕಲಾವಿದನಾಗಿ ಸೇರಿಕೊಂಡಿದ್ದೆ. ಯಕ್ಷರಂಗದಲ್ಲಿ ಬೆಳೆಯಬೇಕು ಎಂಬ ನನ್ನ ಆಸೆಗೆ ಸರಿಯಾದ ವೇದಿಕೆ ಲಭಿಸಿದ್ದರೂ ಇನ್ನೊಂದು ಕಡೆ ನನ್ನ ಕಲಿಕಾ ಜೀವನಕ್ಕೆ ತೊಂದರೆ ಉಂಟಾಯಿತು. ನಿದ್ರೆ ಕೆಟ್ಟು ಕಷ್ಟ ಪಟ್ಟು ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಪರೀಕ್ಷೆಯ ಒಂದು ದಿನ ಮೊದಲು ಕೂಡ ಬಯಲಾಟಕ್ಕೆ ಹೋದ ಉದಾಹರಣೆರಗಳಿವೆ. ಉತ್ತಮ ಪತ್ರಕರ್ತನಾಗಬೇಕೆಂಬುವುದು ನನ್ನ ಗುರಿ. ಆದ್ದರಿಂದ ಈ ವರ್ಷ ಅಪ್ಪ ಅಮ್ಮ ಹೇಳಿದ ಎಲ್ಲ ಮಾತನ್ನು ಅನುಸರಿಸಬೇಕು. ಅದಕ್ಕೆ ನಾಂದಿಯಾಗಿ ಈ ವರ್ಷ ಪ್ರಾರಂಭವಾದ ಯಾವ ಮೇಳದಲ್ಲಿ ಸೇರ್ಪಡೆಗೊಳ್ಳಲಿಲ್ಲ.  ಕೆಲವೇ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಕ್ಷರಂಗಲ್ಲಿ ಬೆಳೆಯುದರ ಜೊತೆಗೆ ನನ್ನ ಗುರಿಯನ್ನು ಸಾಧಿಸುವಲ್ಲಿ  ಇನ್ನಷ್ಟು ಪ್ರಯತ್ನಪಡಬೇಕೆಂದು ದೃಢ ನಿರ್ಧಾರ ಕೈಗೊಂಡಿದ್ದೇನೆ.

 -ಪವನ್ ಆಚಾರ್ಯ ನೀರ್ಚಾಲ್

ಅಂದು ಬೆಳಿಗ್ಗೆ  ಬಸ್ ನಿರ್ವಾಹಕರೊಂದಿಗೆ   ಜಗಳವಾಡಿ  ನೇರವಾಗಿ ಬಂದು  ಕಾಲೇಜಿನ   ಗ್ರಂಥಾಲಯಕ್ಕೆ ಭೇಟಿ ನೀಡಿದೆ. ಅಲ್ಲಿ ಇದ್ದ ಪೇಪರ್ ರನ್ನು ಕೈಗೆತ್ತಿಗೊಂಡು ಕಿಟಕಿಯ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತು, ಪೇಪರ್ ಅನ್ನು  ಓದಲು ಶುರು ಮಾಡಿದೆನು.  ಅದೇ ಹೊತ್ತಿಗೆ ಪಕ್ಕದಲ್ಲಿ ಇದ್ದ ಗಾರ್ಡನ್ ನಿಂದ  ಒಂದೇ ಸಮನೆ ಬೀಸುತ್ತಿದ್ದ  ಗಾಳಿಗೆ  ನಿದ್ರಾದೇವಿ  ನನ್ನನ್ನು ಆವರಿಸಿಕೊಂಡು ಕನಸಿನ ಲೋಕಕ್ಕೆ ಕರೆದುಕೊಂಡು ಹೋದಳು.  ನಾನು ಹಾಯಾಗಿ ಕನಸು ಕಾಣುತ್ತ   ಇದ್ದಾಗ  ತಲೆಗೊಂದು  ಪಟರ್ ಎಂದು ಏಟು ಬಿದ್ದದ್ದೇ ತಡ  ಎದ್ದು ನೋಡಿದರೆ ಗ್ರಂಥ ಪಾಲಕರು ಗದರುತ್ತ “ಏನು ನಿದ್ದೆ ಮಾಡಲಿಕ್ಕೆ ಬಂದದ್ದಾ?  ಎಂದು ಕೇಳಿದರು. ಅಂದಿನಿಂದ ನನಗೆ ತಿಳಿಯಿತು ಗ್ರಂಥಾಲಯ ಎಂಬುದು ಜ್ಞಾನದ ಕಣ್ಣು ತೆರೆಯುವ ಜಾಗವಾಗಿದ್ದು ನಿದ್ದೆ ಮಾಡಲು ಇರುವ ಜಾಗವಲ್ಲ ಎಂದು ಅರಿವಾಯಿತು. ಇದು ನನಗೆ 2019  ಜೀವನಕ್ಕೆ  ಕಳಿಸಿದ ಪಾಠವಾಗಿದೆ.

-ದೀಪ್ತಿ ಎಚ್ ಕೋಡಪದವು

ನನ್ನ ಕೋಪವನ್ನು ಕಮ್ಮಿ ಮಾಡಬೇಕೆಂದು ನಿರ್ಧಾರ ಮಾಡಿರುವೆ. 2019 ನನ್ನ ಜೀವನದಲ್ಲಿ ಹೆಚ್ಚು ಕೋಪ ತರಿಸಿರುವಂತಹ ವರ್ಷ. 2020ರಿಂದ  ನಾನು ನನ್ನ ಜೀವನದಲ್ಲಿ  ನನ್ನನ್ನು ಇಷ್ಟ  ಪಡುವಂತಹ ಸ್ನೇಹಿತರೊಂದಿಗೆ,  ಹಾಗೂ ನನ್ನೊಂದಿಗೆ ಇರುವಂತಹ ಎಲ್ಲಾ ಜನರನ್ನು ನಗಿಸಿಕೊಂಡು,  ಏನೇ ನೋವು ಬೇಜಾರು ಇದ್ದರು ತಕ್ಷಣ ಮರೆತು ಖುಷಿಯಿಂದ  ಕಳೆಯುವೆ. ಅದರೊಂದಿಗೆ ನನ್ನ ಆಸಕ್ತಿಯ ಚಿತ್ರ ಕಲಾ ಕ್ಷೇತ್ರ,  ಕವನ,  ಲೇಖನಗಳಲ್ಲಿ  ಇನ್ನಷ್ಟು ಸಾಧಿಸಲು ಪ್ರಯತ್ನಿಸುತ್ತೇನೆ.

-ಇಂಚರ ಗೌಡ ಪುತ್ತೂರು

ನಾನು ಎಲ್ಲರ ಮೇಲೂ ಅತೀ ಬೇಗ ನಂಬಿಕೆ ಇಡುತ್ತೇನೆ ಹಾಗೂ ನಂಬಿದವರನ್ನು ಅನುಮಾನಿಸುವುದು ಅತೀ ಕಡಿಮೆ. ಆದರೆ ಎಲ್ಲರೂ ನಂಬಿಕೆಗೆ ಅರ್ಹತೆ ಉಳ್ಳವರಲ್ಲ ಎಂದು ನನ್ನ Roommate ತೋರಿಸಿ ಕೊಟ್ಟಳು. ಪಿಯು ನಿಂದ ಹಾಸ್ಟೆಲ್ ನಲ್ಲೆ ಇದ್ದ ಕಾರಣ ರೂಂ ಮೇಟ್ಸ್ ಗಳ ಮೇಲೆ ನಂಬಿಕೆ ಜಾಸ್ತಿ ಇತ್ತು. ಆದರೆ ಈ ಬಾರಿ ನನಗೆ ಸಿಕ್ಕವರಲ್ಲಿ ಒಬ್ಬರನ್ನು ನಂಬಿದ್ದಕ್ಕೆ ಸರಿಯಾಗಿ ಪಾಠ ಕಲಿಸಿದರು. ಒಮ್ಮೆಯೂ ಹಣವನ್ನು ಕಳೆದುಕೊಳ್ಳದ ನಾನು ಮೊದಲಬಾರಿ ಜೀವನದಲ್ಲಿ ಹಣವನ್ನು ಕಳೆದುಕೊಂಡೆ. ಅದರೆ ಅದನ್ನು ಕದ್ದಿದ್ದು ನನ್ನ ರೂಂ ಮೇಟ್ ಅಂತ ಗೊತ್ತಾದಾಗ ತುಂಬಾ ಬೇಜಾರು ಆಯಿತು ಮತ್ತು ನಂಬಿಕೆಯೂ ಹೋಯಿತು. ಅಂದಿನಿಂದ ಇನ್ನು ಮುಂದೆ ಯಾರನ್ನು ನಂಬಬಾರದು ಎಂದು ನಿರ್ಧರಿಸಿದೆ.

-ಮೇಘ ಸಾನಾಡಿ

2019  ನೇ ವರ್ಷದಲ್ಲಿ ಹಲವರ ಜೀವನದಲ್ಲಿ ಸಂತೋಷವು ತಂದಿದೆ, ದುಃಖವು ತಂದಿದೆ. ನನ್ನ ಜೀವನದಲ್ಲಿಯೂ ಹಲವಾರು ಘಟನೆಗಳು ನಡೆದಿವೆ. 2019 ವರ್ಷದ ಮೊದಲ ತಿಂಗಳಿನಲ್ಲಿ ನನ್ನ ಅಪ್ಪ ಅಮ್ಮನ ತುಂಬ ವರ್ಷಗಳಿಂದ  ಕಂಡ ಕನಸಿನ ಮನೆಯ ಗೃಹ ಪ್ರವೇಶವಾಯಿತು. ಹೀಗೆ ಪ್ರತಿಯೊಂದು ತಿಂಗಳಲ್ಲಿ ಒಂದೊಂದು ಘಟನೆ ನಡೆದುಕೊಂಡೇ ಬಂತು. ಕೆಲವೊಂದು ತಿಂಗಳಲ್ಲಿ ಪ್ರತಿ ದಿನವೂ ಅತ್ತಿರೊದು ಇದೆ, ಸಂತೋಷದಿಂದ ಕುಣಿದಾಡಿದ ದಿನವೂ ಇದೆ. ಜೀವನ  ಅಂದರೆ ಹೀಗೆ ನಮ್ಮ ಗೊತ್ತಾಗದ ಹಾಗೆ ಎಷ್ಟೋ ವಿಷಯಗಳು ನಡೆದು ಹೋಗುತ್ತದೆ.  2019 ರಲ್ಲಿ ನಡೆದು ಹೋದ ಘಟನೆಗಳನ್ನು  ಕೇವಲ ನೆನಪುಗಳಾಗಿ ಉಳಿದುಕೊಂಡಿವೆ. ಇನ್ನು ಮುಂದಿನ ವರ್ಷದಲ್ಲಿ ನಡೆಯುವ ಘಟನೆಗಳನ್ನು ಅನುಭವಿಸಲು ಸಿದ್ಧನಾಗಿದ್ದೇನೆ.

-ಹಿತ ಕಡೇಶಿವಾಲಯ

ನಾನು ಯಾವುದೇ ಕೆಲಸಕ್ಕೆ ಹೋದರು ಹಿಂಜರಿಯುವುದು ಜಾಸ್ತಿ. ನನ್ನಿಂದ ಏನೂ ಆಗಲ್ಲ ಸುಮ್ನೆ ಯಾಕ್ ಮಾಡ್ಬೇಕು ಅಂತ ನನಗೆ ನಾನೇ ಅಂದ್ಕೊಂಡು ಸುಮ್ಮನಿರುತ್ತೇನೆ. ಪ್ರಯತ್ನ ಪಡೋದು ತುಂಬಾ ಕಡಿಮೆ. ಓದಿನ ವಿಷಯದಲ್ಲೂ ಅಷ್ಟೇ ! ನಾಳೆ ಓದಿದರಾಯಿತು ಎಂದು ಮೊಬೈಲ್ ನೋಡೋದೇ ಜಾಸ್ತಿಯಾಗಿದೆ. ಆದರೆ 2020ರ ವರ್ಷದಿಂದ ಈ ತಪ್ಪನ್ನು ಮಾಡಲ್ಲ. ಯಾವುದಕ್ಕೂ  ಹಿಂಜರಿಯದೆ ಓದಿನ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತೆನೆ. ಮುಂದಿನ ವರ್ಷದಿಂದ ನನ್ನ ಗಮನ ನನ್ನ ಗುರಿಯ ಕಡೆಗೆ ಇರುವಂತೆ ನೋಡಿಕೊಳ್ಳುತ್ತೇನೆ.

– ಮೇಘನಾ ಹೆಗಡೆ, ಉಜಿರೆ

2019ನೇ ವರ್ಷವು ನನಗೆ ಖುಷಿ-ದುಃಖ ಎರಡರ ಅನುಭವ ಮಾಡಿತು. ಯಾರು ನನ್ನಲ್ಲಿ ಸಹಾಯ ಕೇಳುತ್ತಾರೊ ಅವರೀಗೆ  ಆದಷ್ಟು  ಕೈಲಾದ ಸಹಾಯ ಮಾಡುತ್ತೇನೆ. ನನಗೆ ಏನೇ ಕೆಲಸವಿದ್ದರೂ ಒತ್ತಡದ ನಡುವೆಯೂ ಸಹಾಯ ಮಾಡಲು ಮಂದಾಗುತ್ತೇನೆ. ಆದರೆ ಕೆಲ ಸ್ನೇಹಿತರು ನನ್ನ ಈ ಸ್ವಭಾವವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ತಮ್ಮ ಕೆಲಸ ಸಾಧಿಸಲು ನನ್ನ ಸಹಾಯ ಪಡೆದಿದ್ದು ನನಗೆ ಸಹಾಯದ ಅವಶ್ಯಕತೆ ಇದ್ದಾಗ ಯಾರೋ ಒಬ್ಬರು ಬಾರದಿದ್ದದ್ದು ತುಂಬಾ  ಬೇಸರವಾಯಿತು. ಇನ್ನು ಮುಂದೆಯಾದರೂ ತಮ್ಮ ಸ್ವಾರ್ಥ ಯೋಚಿಸುವ ಸ್ನೇಹಿತರಿಂದ ದೂರವಿರಲು ನಿರ್ಧರಿಸಿದ್ದೆನೆ.

-ಬೃಂದಾ. ಪಿ ಮುಕ್ಕೂರು ಪೆರುವಾಜೆ

ಜೀವನ ಎಂಬುದು ನೀರ ಮೇಲಿನ ಗುಳ್ಳೆಯಂತೆ. ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು ಅಥವಾ ತನ್ನ ಸ್ವಾದೀನ ಕಳೆದುಕೊಳ್ಳಬಹುದು. ಒಂದು ವರುಷದ ಆದಿಯಿಂದ ಅಂತ್ಯದ ವರೆಗೆ ಹಲವಾರು ರೀತಿಯ ಬದಲಾವಣೆಗಳು ನಮ್ಮನ್ನು ತಲ್ಲಣಗೊಳಿಸುತ್ತವೆ ಅಥವಾ ದುಃಖವನ್ನುಂಟುಮಾಡುತ್ತವೆ. ಅವೆಲ್ಲವನ್ನು ಎದುರಿಸಿ ಮೆಟ್ಟಿ ನಿಲ್ಲುವವನೇ ಮನುಜ. ನಾನು ಈ 2019 ನೇ ವರ್ಷದ ಬಗ್ಗೆ ಹೇಳುವುದಾದರೆ ನನಗೆ ಈ ವರ್ಷ ಹಲವಾರು ರೀತಿಯ ಅನುಭವ ಜೀವನದ ಪಾಠ ಕಲಿಸಿದೆ. ನನ್ನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ. ನಾನು ಎಲ್ಲರೊಡನೆ ಬೆರೆಯುವುದು ಸ್ವಲ್ಪ ಕಡಿಮೆ. ಅಂದರೆ ಮಾತು ಕಡಿಮೆ. ಈ ನನ್ನ ಸ್ವಭಾವ ನನ್ನನ್ನು ಕೊಂಚ ವಿಭಿನ್ನಗೊಳಿಸಿದೆ ಎನ್ನಬಹುದು.

ಇನ್ನು 2020 ಎಂಬುದು ಎ.ಪಿ.ಜೆ ಅಬ್ದುಲ್ ಕಲಾಂ ಅವರ ಕನಸು. ಅವರ ಕನಸು ನನಸಾಗಲಿ ಎಂಬುದು ನನ್ನ ಆಶಯ. ಇನ್ನು 2020 ರಲ್ಲಿ ನನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸುತ್ತಿದ್ದು ಮುಂದಿನ ಗುರಿಯನ್ನು ಮುಟ್ಟಬೇಕಿದೆ. ಅದನ್ನು ನಾನು ಮುಟ್ಟೆ ಮುಟ್ಟುತ್ತೇನೆ ಅನ್ನೋ ಆತ್ಮವಿಶ್ವಾಸ ನನ್ನಲ್ಲಿದೆ.

-ಕಿಶನ್ ಪಿ. ಎಂ ಸುಳ್ಯ

2019ಕ್ಕೆ ವಿದಾಯ ಹೇಳುತ್ತಲೇ, 2020ರ ನೂತನ ವರ್ಷಕ್ಕೆ  ಸ್ವಾಗತ ಕೋರುವ ಸಮಯ. ಹಳೆಯ ಸಿಹಿ- ಕಹಿಗಳ ನೆನಪಿನ ಬೆನ್ನಲ್ಲೇ, ಹೊಸ ವರ್ಷ ಹಲವು ನಿರೀಕ್ಷೆಗಳನ್ನು ಹೊತ್ತು ತಂದು ನಿಂತಿದೆ.  2019ರಲ್ಲಿ ಹೆ‍‍‍ಚ್ಚು ಪುಸ್ತಕಗಳನ್ನು ಓದಲು ಸಾಧ್ಯವಾಗಲಿಲ್ಲ. ಈ ವರ್ಷ ಪುಸ್ತಕಗಳನ್ನು ಹೆಚ್ಚು ಓದಬೇಕೆಂದಿದ್ದೇನೆ. ಯಾವುದೇ ಕೆಲಸಗಳನ್ನು ಬಾಕಿ ಇಡದೇ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕೆಂದಿದ್ದೇನೆ.

-ಶ್ವೇತಾ ಮುಂಡ್ರುಪ್ಪಾಡಿ

ಅನೇಕ ಬಾರಿ ಅನೇಕ ಅವಕಾಶವನ್ನು ಒಂದು ಸಣ್ಣ ಕಾರಣ ಮತ್ತು ಯಾರದೋ ಮಾತಿನಿಂದಾಗಿ, ಹಾಗೂ ಗಣನೆಗೆ ತೆಗೆದುಕೊಳ್ಳದೇ ಕಳೆದುಕೊಂಡದ್ದಿದೆ. ಅನಂತರ ಛೇ ಎಂತಹ ತಪ್ಪಾಯ್ತು ಅಂತ ವಿಲಪಿಸಿದ್ದು ಇದೆ. ಈ ವರ್ಷದಲ್ಲಿ ಇದೆಲ್ಲಾ ನಡೆದು ಉತ್ತಮ ಅವಕಾಶಗಳು ಕೈ ತಪ್ಪಿ ಹೋಗಲು ಹಾಗೂ ಅದರಿಂದ ನನ್ನ ಆತ್ಮೀಯರಿಗೆ ನೋವುಣ್ಣುವ ಪರಿಸ್ಥಿತಿ ನಿರ್ಮಾಣವಾಗಲು ನೇರವಾಗಿ ನಾನೇ ಕಾರಣಳಾಗಿದ್ದೆ. ಆದರೆ ಮುಂದಿನ ವರ್ಷ ಈ ಯಾವುದೇ ತಪ್ಪುಗಳು ನಡೆಯದಂತೆ  ಗಮನವಿಟ್ಟು ಕೆಲಸ ಮಾಡುವುದೇ ನನ್ನ ಉದ್ದೇಶ.

-ಅಪರ್ಣಾ ಎ ಎಸ್. ಪುತ್ತೂರು

ಹಳೆ ಎಲೆ ಒಣಗಿ ಹೋಗುವ ಹಾಗೆ ಹೊಸ ಚಿಗುರು ಬರುವ ಹಾಗೆ. ಹಳೆಯ ಸಿಹಿ ಕಹಿ ನೆನಪು, ಘಟನೆಗಳು ಮಾಸಿ. ಹೊಸ ತನದ ಕಡೆಗೆ ಮುಂದುವರಿಯುತ್ತೇವೆ. ಪ್ರತಿ ವರ್ಷ ನಾವು ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡುತ್ತೇವೆ. ಅದೆಲ್ಲಾ ಯಶಸ್ವಿಯಾಗುವುದು ಕಡಿಮೆ. ಮನಸ್ಸಿಗೆ ಬೇಜಾರು ಅಗುವ  ವಿಷಯ ಮರೆತು. ನಮ್ಮ ಜೀವನದಲ್ಲಿ ಮಾಡಿದ ಒಳ್ಳೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ. 2020 ಒಂದು ವಿಶೇಷ ವರುಷ. ಸಮಾಜ ಸೇವಾ ಚಟುವಟಿಕೆಯಲ್ಲಿ ಹೆಚ್ಚು ಭಾಗವಹಿಸಲು ಯೋಚನೆ ಮಾಡಿದ್ದೇನೆ. ನನ್ನಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ. ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ.

-ಸೌಮ್ಯ ಎನ್ ಎಲಿಮಲೆ

ಮೊದಲು ತುಳುರಂಗ ಭೂಮಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದಾಗ ಯಾವುದೇ ರೀತಿಯ ಭಾವನೆಗಳು  ನನ್ನ ಮೇಲೆ ಆಕ್ರಮಣ ಮಾಡಿರಲಿಲ್ಲ. ಆದರೆ ಈಗೆರಡು ವರ್ಷಗಳಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿಧ್ಯಾಥಿ೯ಯಾದ ಮೇಲೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವ ಸೂಕ್ಷ್ಮ ಮನಸ್ಥಿಯವಳಾಗಿರುವ ಕಾರಣವೋ ಏನೊ ಭಾವನೆಗಳಿಗೆ ಅತ್ಯಂತ ಹೆಚ್ಚಿನ ಸ್ಥಾನವನ್ನು ನೀಡಿ ಭಾವನೆಗಳಲ್ಲೆ ಜೀವನವನ್ನು ನಡೆಸಲು ಪ್ರಾರಂಭಿಸಿದೆ. ಹಾಗಾಗಿ ಸಣ್ಣ ಸಣ್ಣ ವಿಷಯಗಳಿಗೂ ಬೇಸರ,ದುಃಖ, ಮನಸ್ಥಾಪವಾಗುತ್ತಿತ್ತು. ಅಲ್ಲದೆ ತಂದೆಯಂತೆ ಪ್ರೀತಿಸುವ ರಂಗಗುರುಗಳು, ತಂಗಿಯರಂತೆ, ತಮ್ಮನಂತೆ, ಅಣ್ಣನಂತೆ ಕೆಲವೊಮ್ಮೆ ಗೆಳೆಯ ಗೆಳತಿಯರಂತೆ ನನ್ನ ಸುಖ, ದುಃಖವನ್ನು ಹಂಚಿಕೊಳ್ಳುವ ನನ್ನ ನಾಟಕ ಸಹಪಾಠಿಗಳಿರುವ ಕಾರಣದಿಂದಲೋ ಏನೋ ನನ್ನ ನಿಜ ಜೀವನದ ಹೊರತಾಗಿ ಪ್ರಸ್ತುತ ಇವರೇ ನನ್ನ ಸುಂದರ ಪ್ರಪಂಚ . ಕಲಾವಿದನಾದವನು ಭಾವನೆಗಳ ಸಾಗರದಲ್ಲಿ ಪ್ರತಿದಿನವೂ ಈಜುತ್ತಿರುತ್ತಾನೆ ಅನ್ನುವಂತೆ ನಾನು ಕೂಡ ಭಾವನೆಗಳ ಸಾಗರದಲ್ಲಿ attachment ಅನ್ನೊ ಕವಚಧರಿಸಿ ಮುಮ್ಮುಖವಾಗಿ ಈಜುತಿದ್ದೇನೆ. ಹಾಗಾಗಿ ಇನ್ನಿರುವ ಮೂರುತಿಂಗಳಲ್ಲಿ ಈ attachments ಅನ್ನೊ ಕವಚವನ್ನು ಕಳಚಿ detachement ಅನ್ನೊ ಕವಚಧರಿಸಿ ಭಾವನೆಗಳ ಸಾಗರದಲ್ಲಿ ಹಿಮ್ಮುಖವಾಗಿ ಚಲಿಸುವ ಧೈರ್ಯವನ್ನು ಮೈಗೂಡಿಸಿ ಕೊಳ್ಳಬೇಕು ಅನ್ನೊ  ನಿಧಾ೯ರ ಮಾಡಬೇಕೆಂದಿದ್ದೇನೆ. ಅಲ್ಲದೆ ಹೊಸವರ್ಷದಂದು attachments = conditional love ,detachment = unconditional love ಅನ್ನೊ ತತ್ವವನ್ನು ಅನುಸರಿಸಬೇಕು ಎಂದು  ನಿರ್ಧರಿಸಿದ್ದೇನೆ.

-ಶ್ರೀ ರಕ್ಷಾ ರಾವ್ ಪುನರೂರು

ಆಳ್ವಾಸ್ ಕಾಲೇಜು ಮೂಡುಬಿದಿರೆ

ಪ್ರತಿ ವರ್ಷಗಳಂತೆ 2019 ಕೂಡ  ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಅದೇ ನೆನಪುಗಳೊಂದಿಗೆ 2020ರತ್ತ ಸಾಗಬೇಕಿದೆ. ಸಾಧಾರಣವಾಗಿ ಹೊಸ ವರ್ಷಗಳೆಂದರೆ  ಕ್ಯಾಲೆಂಡರ್ ಹೊರತುಪಡಿಸಿ ಬೇರೇನೂ ಬದಲಾಗುತ್ತಿರಲಿಲ್ಲ. ಆದರೆ 2020ರಲ್ಲಿ ಮುಂಗೋಪವನ್ನು ಕಡಿಮೆಮಾಡಿ ಸ್ನೇಹಿತರೊಂದಿಗೆ ಹೆಚ್ಚು ಬೆರೆಯುವ, ಆರೋಗ್ಯಕರ ಚರ್ಚೆಗಳಲ್ಲಿ ಭಾಗವಹಿಸುವ ಕನಸಿದೆ.

-ಅಕ್ಷಯಕೃಷ್ಣ ಪಲ್ಲತ್ತಡ್ಕ ಬದಿಯಡ್ಕ

2019 ರಲ್ಲಿ ಒಟ್ಟು ಎಷ್ಟು ತಪ್ಪು ಮಾಡಿದ್ದೆ ಅಂತ ಪೂರ್ತಿ ನೆನಪಿಲ್ಲ. ಆದರೆ ಕೆಲವು ತಪ್ಪುಗಳು ಮಾಡಿದ ಬಳಿಕ ತುಂಬಾ ನೊಂದಿದ್ದೇನೆ. ಅದರಲ್ಲಿ ಮರೆಯಲಾರದ ತಪ್ಪು ಅಂದ್ರೆ ಅಮ್ಮನ ಮೇಲೆ ಕೋಪ ಮಾಡಿದ್ದು. ಅಮ್ಮ ನನ್ನ ಒಳ್ಳೆಯದಕ್ಕೆ ಏನೇ ಹೇಳಿದರೂ, ನನಗೆ ಮಾತ್ರ ಅದು ಇಷ್ಟ ಆಗುತ್ತಿರಲಿಲ್ಲ. ಉಪದೇಶ ನೀಡಬೇಡಿ ಎಂದು ಕೋಪಿಸುತ್ತಿದ್ದೆ. ಆದ್ರೆ ಹಾಸ್ಟೆಲ್ ಸೇರಿದ ಮೇಲೆ ಅಮ್ಮನನ್ನು ತುಂಬಾ ಮಿಸ್ ಮಾಡಿದ್ದೆ. ಅವರ ಬೈಗುಳ, ಉಪದೇಶ ಕೇಳದೆ ಏನೋ ಆಗುತ್ತಿತ್ತು. ಏನನ್ನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಆಗಲೇ ಅಮ್ಮನ ಉಪದೇಶ ಇಷ್ಟ ಆಗತೊಡಗಿತ್ತು. ಹೊಸ ಅಮ್ಮನ ಬಳಿ ಜಗಳ ಮಾಡಲೇಬಾರದು ಅಂತ ತೀರ್ಮಾನ ಮಾಡಿದ್ದೇನೆ. ಮಾತ್ರವಲ್ಲದೆ  ಅವರು ಏನೇ ಹೇಳಿದರೂ ಅದು ನನ್ನ ಒಳ್ಳೆದಕ್ಕೆ ಅಂತ ತಿಳಿದು ಸ್ವೀಕರಿಸುತ್ತೇನೆ.

-ತೇಜಸ್ವಿನಿ ಆರ್ ಕೆ

ಕಾಸರಗೋಡು

ನಾನೀಗ ಯಥೇಚ್ಛವಾಗಿ ಸಾಮಾಜಿಕ ಜಾಲತಾಣ ಬಳಸುವುದನ್ನು ನಿಲ್ಲಿಸಿದ್ದೇನೆ. ಯಾಕೆಂದರೆ ಅದು ನನಗೆ ಗೊತ್ತಿಲ್ಲದಂತೆ ನನ್ನ ಬದುಕನ್ನು ನುಂಗುತ್ತಿತ್ತು. ಆದರೆ ಅದೇ ಸೋಶಿಯಲ್ ನೆಟ್ವರ್ಕ್ ನನ್ನ ಬದುಕಿಗೆ ಹೊಸ ವ್ಯಕ್ತಿಯನ್ನು ಪರಿಚಯಿಸಿತು. ಆದರಿಂದ ನನ್ನ ಬದುಕು ಬಹಳಷ್ಟು ಬದಲಾಗಿದೆ. ನನಗೆ ಗೊತ್ತಿಲ್ಲದಂತೆ ನನ್ನ ತಪ್ಪುಗಳನ್ನು ಅವರು ಹೇಳಿದಾಗ ನಾನು ತಪ್ಪುತ್ತಿದ್ದ ದಾರಿಯ ಪರಿಚಯ ನನಗೆ ಮನವರಿಕೆ ಆಯಿತು. ಕೆಲವರ ಪಾಲಿಗೆ ಸೋಶಿಯಲ್ ನೆಟ್ವರ್ಕ್  ಒಮ್ಮೆಗೆ ಕಹಿನೆನಪು ಆದರೆ ನನ್ನಂತವಳ ಪಾಲಿಗೆ  ದಾರಿದೀಪ. ಹಾಗಂತ ಅತೀ ಹೆಚ್ಚು ಬಳಸಿದರೆ ಅಮೃತವೂ ವಿಷ ಎಂಬಂತೆ ನನಗೀಗಾ ಹೊಸ ಜೀವನ ಕೊಟ್ಟ ಸೋಶಿಯಲ್ ನೆಟ್ವರ್ಕ್ ಬದಿಗಿಟ್ಟಿದ್ದೇನೆ. 2020 ರಲ್ಲಿ ಓದಿನ ಕಡೆಗೆ, ಮನೆಯ ಕಡೆಗೆ ಕುಟುಂಬದ ಆಧಾರಕ್ಕಾಗಿ ಶಾಶ್ವತವಾದ ಉದ್ಯೋಗಕ್ಕಾಗಿ ಸತತ ಪ್ರಯತ್ನ ಪಡುತ್ತೆನೆ. ಮುಂದಿನ ದಿನಗಳಲ್ಲಿ ಜವಬ್ದಾರಿ ಹೆಜ್ಜೆಯಾಗಿ ಹೊಸ ಕನಸು ನನಸಾಗಿಸಲು ಪರಿಶ್ರಮ ಮಾಡಬೇಕೆಂದಿದ್ದೆನೆ.

-ಸುಮಲತಾ ಬಜಗೋಳಿ

ಆಳ್ವಾಸ್ ಕಾಲೇಜು ಮೂಡುಬಿದಿರೆ

ಕೋಲ್ಮಿಂಚು ಬಾನಿನಲ್ಲಿ ಮೋಡದೆಡೆ ಮರೆಯಾದಂತೆ. ಸಿಹಿ-ಕಹಿ ನೆನಪುಗಳ ಸರಮಾಲೆಯನ್ನು ಹೊತ್ತು ಮುಂದಿನ ವರ್ಷಕ್ಕೆ ಸಾಗೋಣ. ತಪ್ಪು ಎಲ್ಲರ ಜೀವನದಲ್ಲಿ ನಡೆಯುತ್ತದೆ ಆದರೆ ಅದನ್ನು ನಾವು ಮರುಕಳಿಸದೆ ಇರುವ ಹಾಗೇ ನೋಡಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಸುಮ್ಮನೆ ಕೂರುವ ಬದಲಿಗೆ ಧೃಡನಿರ್ಧಾರ ಮಾಡಿ  ದಿನಕ್ಕೊಂದು ಪುಸ್ತಕ ಓದುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿಸುವೆ.

-ಸುಶ್ಮಿತಾ. ಎಂ.ಸಾಮಾನಿ

ಮಾಲಾರಬೀಡು

ಹೊಸ ವರ್ಷ ಬಂದಾಗ ಕ್ಯಾಲೆಂಡರ್ ಬದಲಾವಣೆ ಮಾಡುವಂತೆ ನಮ್ಮ ಜೀವನದಲ್ಲಿ ನಡೆದು ಹೋದ ಕಹಿ ಘಟನೆಗಳನ್ನು ಮರೆತು ಹೊಸ ಬದಲಾವಣೆಗೆ ತೆರೆದುಕೊಳ್ಳಬೇಕು. ನನಗಂತೂ 2019, ಸಿಹಿ ಮತ್ತು ಕಹಿ ಎರಡರ ಸಮ್ಮಿಶ್ರಣವಾಗಿತ್ತು. ನಮ್ಮ ತರಗತಿಗೆ ನೋಟೀಸ್ ಬೋರ್ಡ್  ಸ್ಪರ್ಧೆಯನ್ನು ನಡೆಸಲಾಗಿತ್ತು. ಅದರಂತೆ ವಾರಕ್ಕೆ ಒಂದು ಗುಂಪಿನವರು ಚಾರ್ಟ್ ಮಾಡಿ ಸಂಬಂಧಪಟ್ಟ ನೋಟೀಸ್ ಬೋರ್ಡ್ ಗೆ ಹಾಕಬೇಕಿತ್ತು‌. ನನ್ನ ಗುಂಪಿನ ಸರದಿ ಬಂದಾಗ ನನ್ನ ತಂಡದ ಕೆಲವರು ಇದಕ್ಕೆ ಸ್ಪಂದಿಸಲಿಲ್ಲ. ಇದು  ನನಗೆ ಬಹಳ ನೋವು ತಂದಿತ್ತು. ಹೀಗಾಗಿ ಅವರನ್ನು ತಂಡದಿಂದ ತೆಗೆದು ಉಳಿದವರು ಸೇರಿ  ಚಾರ್ಟ್ ಮಾಡಿದೆವು. ಆ ಕ್ಷಣಕ್ಕೆ ಅವರನ್ನು ಗುಂಪಿನಿಂದ ತೆಗೆಯುವ ನಿರ್ಧಾರ ಮಾಡಿದ್ದು ನಾನು. ಚಾರ್ಟ್ ಏನೋ ಮಾಡಿದೆವು ಆದರೆ ನಮ್ಮ ಗುಂಪು ಒಡೆದು ಹೋಗಿತ್ತು. ಒಗ್ಗಟ್ಟು ಮುರಿದು ಹೋಗಿತ್ತು. ಇದರಿಂದ ಅಚಾನಕ್ಕಾಗಿ ತೀರ್ಮಾನ ತೆಗೆದುಕೊಳ್ಳುವುದು ತಪ್ಪು ಎಂದು ತಿಳಿಯಿತು. ಹೀಗಾಗಿ ಮುಂದಿನ ಬಾರಿ ಈ ರೀತಿಯ ತಪ್ಪಾಗದಂತೆ ಎಚ್ಚರವಹಿಸಿ ಒಳ್ಳೆಯ ಚಾರ್ಟ್ ಮಾಡಬೇಕು ಎಂಬುದು ನನ್ನಾಸೆ. 2020 ರಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಗಮನ ನೀಡಿ ಒಳ್ಳೆಯ ಫಲಿತಾಂಶ ಪಡೆಯಬೇಕು ಎಂಬ ಗುರಿಯನ್ನು ಹೊಂದಿದ್ದೇನೆ. ಹೊಸ ವರ್ಷ ಎಲ್ಲರಿಗೂ ಹೊಸ ಹುರುಪನ್ನೂ ಸಿಹಿ ಕ್ಷಣಗಳನ್ನು ನೀಡಲಿ ಎಂಬುದು ನನ್ನ ಹಾರೈಕೆ.

 ಸೌಜನ್ಯ. ಬಿ.ಎಂ. ಕೆಯ್ಯೂರು

 ದ್ವಿತೀಯ ಪತ್ರಿಕೋದ್ಯಮ

 ವಿವೇಕಾನಂದರ ಪದವಿ ಕಾಲೇಜು ಪುತ್ತೂರು

2019 ರ  ಕಾಲೇಜು ದಿನಗಳಲ್ಲಿ  ನನಗೆ ನಾನೇ ಮೋಸ ಮಾಡಿದ ಭಾವನೆ ಬಂದಿದೆ. ಪಾಠವನ್ನು ಸರಿಯಾಗಿ  ಅರ್ಥೈಸದೆ ಇರೋ ಬಾರೋ ಸಮಯ ವ್ಯರ್ಥವಾಗಿದೆ. ಕೇವಲ ಅಂಕಗಳನ್ನು ಪಡೆಯಲು ಮಾತ್ರ ಗೊತ್ತಿದ್ದೋ ಗೊತ್ತಿಲ್ಲದೆಯೋ ಕನ್ನಡ ಸಂಘಕ್ಕೆ ಸೇರಿದೆ.  ಅಲ್ಲಿ ಸ್ವರಚಿತ ಬರವಣಿಗೆಗೆ ಹೆಚ್ಚಿನ ಮಹತ್ವ ನೀಡಿದರು. ಆ ಅವಕಾಶವನ್ನು ನಾನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ 2020 ರಲ್ಲಿ ಸಮಯ ವ್ಯರ್ಥ ಮಾಡದೆ ಇಂತಹ ಅವಕಾಶಗಳನ್ನು ಉಪಯೋಗಿಸುತ್ತೇನೆ.

-ನಮ್ರತಾ ಬಿ            

ಮುಕ್ಕೂರು ಪೆರುವಾಜೆ

 

ಟಾಪ್ ನ್ಯೂಸ್

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

Social Media: In this country, people under the age of 16 cannot use Instagram, Facebook!

Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.